ದೋಹ - ದೋಖಾ

ದೋಹ - ದೋಖಾ!
ಭಾರತದ ರೈತರ ಬಾಳ ಹರಿವಾಣದಲ್ಲಿಟ್ಟು ಕೊಡುತ್ತಿರುವ ಸರ್ಕಾರ

ಈ ಬಾರಿ ಯುಪಿಎ ಅಧಿಕಾರಕ್ಕೆ ಬಂದು ಮನಮೋಹನ ಸಿಂಗರು ತಮ್ಮ ಮಂತ್ರಿ ಮಂಡಲ ರಚಿಸಿದಾಗ ಕೆಲವು ಖಾತೆ ಹಂಚಿಕೆ ಬಹುಮಂದಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಅದರಲ್ಲಿ ಕಾಮರ್ಸ್ ಮಂತ್ರಿಯಾಗಿ ಅತ್ಯುತ್ತಮವಾಗಿ ಕೆಲಸ ಮಾಡಿ ಒಳ್ಳೆ ಚುನಾವಣೆ ಸಂದರ್ಭದಲ್ಲಿ ಡಬ್ಲ್ಯೂಟಿಒದ ದೋಹಾ ಸುತ್ತಿನ ಮಾತುಕತೆಗಳಲ್ಲಿ ರೈತರ ಪರ ಧ್ವನಿಯೆತ್ತಿ ಸರ್ಕಾರಕ್ಕೆ ರೈತಪರ ಎಂಬ ಸಕಾಲಿಕ ಹೆಸರು ತಂದುಕೊಟ್ಟ ಕಮಲ್ ನಾಥ್ರನ್ನು ಅಲ್ಲಿಂದ ಎತ್ತಂಗಡಿ ಮಾಡಿ ಸರ್ಫೇಸ್ ಟ್ರಾನ್ಸ್ಪೋರ್ಟ್ ಸಚಿವಾಲಯಕ್ಕೆ ವರ್ಗಾಯಿಸಿದ್ದು ಹಲವರ ಹುಬ್ಬೇರಿಸತ್ತು. ಏರಿದ್ದ ಆ ಹುಬ್ಬುಗಳು ಗಂಟಿಕ್ಕಿದ್ದು ಆ ಜಾಗಕ್ಕೆ ಮನಮೋಹನ ಸಿಂಗರು ಆನಂದ್ ಶರ್ಮ ಎಂಬ ಲೈಟ್ ವೇಯಿಟ್ ರಬ್ಬರ್ ಸ್ಟಾಂಪ್ನನ್ನು ತಂದು ಕೂರಿಸಿದಾಗ. ಮನಮೋಹನರು ಅತಿ ಮುಖ್ಯ ಕಾಮರ್ಸ್ ಸಚಿವಾಲಯವನ್ನು back seat ಡ್ರೈವಿಂಗ್ ಮಾಡಲು ನಿರ್ಧರಿಸಿದ್ದು ಸ್ಪಷ್ಟವಾಗಿತ್ತು. ಭಾರತ ಮತ್ತು ಇನ್ನಿತರ ಅಭಿವೃದ್ಧಿಶೀಲ ದೇಶಗಳ ನಾಯಕತ್ವ ವಹಿಸಿದವರಂತೆ 2008ರಲ್ಲಿ ರೈತಾಪಿಗರ ಪರ ನಿಂತು ಬಡಿದಾಡಿ, ಧರೆಯ ದೊಡ್ಡಣ್ಣರು ಮಣಿಯದಿದ್ದಾಗ ಮಾತುಕತೆಗಳು ಕುಸಿದು ಬೀಳುವಂತೆ ಮಾಡಿದ್ದ ಕಮಲ್ ನಾಥ್ ಬೆಲೆ ತೆತ್ತರು.
-----------

ನಿರೀಕ್ಷೆಯಂತೆಯೇ ನೂತನ ಕಾಮರ್ಸ್ಕಾ ಸಚಿವ ಆನಂದ್ ಶರ್ಮ ಡಬ್ಲ್ಯೂಟಿಒದ ಮುರಿದು ಬಿದ್ದಿರುವ ದೋಹಾ ಸುತ್ತಿನ ಮಾತುಕತೆಯನ್ನು ಪುನರುಜ್ಜೀವನಗೊಳಿಸಲು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ. ಮೊನ್ನೆ ಸೆಪ್ಟೆಂಬರ್ 3 ಮತ್ತು 4 ರಂದು ನಮ್ಮ ಸರ್ಕಾರ ದೆಹಲಿಯಲ್ಲಿ ಡಬ್ಲ್ಯೂಟಿಒಗೆ ಸಹಿ ಹಾಕಿರುವ 100 ದೇಶಗಳ ಕಾಮರ್ಸ್ ಮಿನಿಸ್ಟ್ರುಗಳನ್ನೆಲ್ಲಾ ಸೇರಿಸಿ ಒಂದು ಅನೌಪಚಾರಿಕ ಸಭೆಯೊಂದನ್ನು ನಡೆಸಿತು, ಅದೂ ಸದ್ದು ಗದ್ದಲಗಳಿಲ್ಲದೆ. ಇದರಲ್ಲಿ ಬಾರತದ ಸರ್ಕಾರ 2008ರ ಡಿಸೆಂಬರ್ನಲ್ಲಿ ನಡೆದ ಹಾಂಕಾಂಗ್ ಮಿನಿಸ್ಟೀರಿಯಲ್ನ ನಿರ್ಣಯಗಳ ಆಧಾರದ ಮೇಲೆಯೇ ಮುಂದಿನ ಮಾತುಕತೆಗಳು ಮುಂದುವರೆಸುವುದೊಳಿತು ಎಂದು ತಿಳಿಸಿದೆ. ಅದರಲ್ಲೇನಿದೆ ಅಂದಿರಾ? ಅಲ್ಲೇ ಇರೋದು ವ್ಯಂಗ್ಯ. ಇದೇ ಮನಮೋಹನರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕಮಲ್ ನಾಥ್ ಮೂಲಕ ವಿರೋಧಿಸಿದ್ದು ಇದೇ ನಿರ್ಣಯಗಳನ್ನು! ಈಗ ಕಮಲ್ನಾಥ್ರನ್ನು ಪಕ್ಕಕ್ಕೆ ಸರಿಸಿ ಯಥಾವತ್ ಅವೇ ನಿರ್ಣಯಗಳನ್ನು ಒಪ್ಪಿಕೊಂಡಿವೆ. ಇದರೊಂದಿಗೆ ರೈತಪರವೆಂದೆಣಿಸಿ ಈ ಸರ್ಕಾರಕ್ಕೆ ವೋಟು ಹಾಕಿದ ರೈತರಿಗೆ 100ಏ ದಿನಗಳಲ್ಲಿ ದೋಖಾ ಮಾಡಲಾಗಿದೆ. ದೇಶದ ಸುಮಾರು 65 ಕೋಟಿ ರೈತರ ಬಾಳನ್ನು ಸರ್ಕಾರ ವಿದೇಶೀ ಎಂಎನ್ಸಿಗಳಿಗೆ ಹರಿವಾಣದಲ್ಲಿಟ್ಟು ಕೊಡುತ್ತಿದೆ!
------------
ಏನಿದು ಡಬ್ಲ್ಯೂಟಿಒ, ದೋಹಾ ಸುತ್ತು, ಕಮಲ್ನಾಥ್ ಒಪ್ಪದ್ದೇನು, ಶರ್ಮ ಒಪ್ಪಿರುವುದೇನು? ಇದರಿಂದ ನಾಡಿನ ರೈತರ ಬದುಕಿನ ಮೇಲಾಗುವ ಅಡ್ಡ ಪರಿಣಾಮಗಳಾದರೂ ಏನು? ಈ ಮೇಲಿನ ಎರಡು ಪ್ಯಾರಾ ಓದಿದವರಿಗಾರಿಗಾದರೂ ಈ ಎಲ್ಲಾ ಪ್ರಶ್ನೆಗಳು ಮೂಡುವುದು ಸಹಜ.


ಡಬ್ಲ್ಯೂಟಿಒ ಎಂದರೆ world trade organisation - ವಿಶ್ವವ್ಯಾಪಾರ ಸಂಘಟನೆ. ವಿಶ್ವವ್ಯಾಪಾರಕ್ಕೊಂದು ಚೌಕಟ್ಟು ಹಾಕಿಕೊಡಲು, ನೀತಿ-ನಿಯಮಗಳನ್ನು ರೂಪಿಸಲು ಆವಿಶ್ಕಾರಗೊಂಡಿರುವ ಸಂಘಟನೆಯಿದು. ಈ ಸಂಘಟನೆಯಲ್ಲಿ ಸದಸ್ಯರಾಗಲು ಮೂಲಧಾತುವಿನಲ್ಲಿ ಮುಕ್ತ ಮಾರುಕಟ್ಟೆಯನ್ನು ಒಪ್ಪಿ-ಅಪ್ಪುವ ವಿಶ್ವವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬೇಕು. ಇದಾದ ಮೇಲೆ ಮುಗಿಯಿತು ವಿಶ್ವವ್ಯಾಪಾರ ಸಂಘಟನೆ ರೂಪಿಸುವ ರೀತಿ-ರಿವಾಜುಗಳಿಗೆ ಈ ದೇಶಗಳು ಕಟ್ಟು ಬಿದ್ದಿರಬೇಕಾಗುತ್ತದೆ. ಈ ನಿಯಮಗಳನ್ನು ರೂಪಿಸಲು ಎಲ್ಲ ಸದಸ್ಯ ರಾಷ್ಟ್ರಗಳದೊಂದು ಸದಸ್ಸು ನಡೆಯುತ್ತದೆ - ಅದು ಒಂದು ಸಂಧಾನ ಪ್ರಕ್ರಿಯೆ. ಹೀಗೆ 2001ರಲ್ಲಿ ಕತಾರ್ನ ರಾಜಧಾನಿ ದೋಹಾದಲ್ಲಿ ಶುರುವಾದ ಮಾತುಕತೆಗೆ ದೋಹಾ ಮಾತುಕತೆ ಎಂದು ಕರೆಯುತ್ತಾರೆ. ಈ ಸುತ್ತಿನ ಮಾತುಕತೆಗಳಲ್ಲಿ ಮುಖ್ಯವಾಗಿ ಕೃಷಿ ಉತ್ಪನ್ನಗಳು ಮತ್ತು ಉತ್ಪಾದಿತ ಸರಕುಗಳ ಮಾರುಕಟ್ಟೆಯನ್ನು ಜಗತ್ತಿನಾದ್ಯಂತ ಮುಕ್ತಗೊಳಿಸುವ ಕುರಿತು ಸಮಾಲೋಚಿಸಲಾಗುತ್ತಿದೆ. ಈ ಮಾತುಕತೆಗಳು ಜಗತ್ತಿನ ಫ್ರೀಟ್ರೇಡ್ನ ಮೂಲಕ್ಕೇ ಕೈಹಾಕಿ ಕೂತಿದೆ.

ಅದಕ್ಕೇ 2001ರಿಂದ ಆಗಾಗ ಮಾತುಕತೆಗಳು ನಡೆಯುತ್ತಲೇ ಇವೆ, ಮುರಿದು ಬೀಳುತ್ತಲೇ ಇವೆ. ವಿಶ್ವವ್ಯಾಪಾರ ಸಂಘಟನೆಯನ್ನು ಶಾಶಿಸುವುದು ಅಭಿವೃದ್ದಿ ಹೊಂದಿದ ಅಮೆರಿಕಾ, ಯೂರೋಪಿಯನ್ ಯೂನಿಯನ್ ಮತ್ತಿತರ ಶಕ್ತಿಗಳೇ. ಅವು ಈ ಸಂಘಟನೆಯನ್ನು ಅಭಿವೃದ್ಧಿ ಹೊಂದುತ್ತಿರುವ ಬಡ ರಾಷ್ಟ್ರಗಳ ಬೃಹತ್ ಮಾರುಕಟ್ಟೆಗಲನ್ನು ಕಬಳಿಸಲು, ತಮ್ಮ ನವ ವಸಾಹತುಶಾಹೀ ಆಡಳಿತವನ್ನು
ಸ್ಥಾಪಿಸಲು ಬಳಸುತ್ತಿವೆಯೆಂಬುದು ಬಹುಕಾಲದಿಂದಲೂ ಕೇಳಿಬರುತ್ತಿರುವ ಆರೋಪ. ಇದು ತಕ್ಕಮಟ್ಟಿಗೆ ನಿಜವೂ ಕೂಡ ಹೌದು. ಸದ್ಯ ದೋಹಾ ಸುತ್ತಿನ ಮಾತುಕತೆಗಳನ್ನೇ ತೆಗೆದುಕೊಳ್ಳಿ ಅಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವುದು ಈ ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿ ಬೃಹತ್ತಾದ untaped ಮರುಕಟ್ಟೆಯಿದೆ, ಅದನ್ನು ಕಬಳಿಸಬೇಕು, ಅದೂ ರಾಜಮಾರ್ಗದಲ್ಲಿ. ಅದಕ್ಕವರ ಆಯುಧ ಡಬ್ಲ್ಯೂಟಿಓ - ದೋಹಾ ಸುತ್ತಿನ ಮಾತುಕತೆಗಳು.

ಕಳೆದ 2008ರ ಜುಲೈನಲ್ಲಿ ಕಮಲ್ನಾಥ್ ಆ ಹಿಂದಿನ ಡಿಸೆಂಬರ್ ಟೆಕ್ಸ್ಟ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಮುಖ್ಯವಾಗಿ ಒಪ್ಪಂದದ special products ಮತ್ತು special safegaurd mechanism ಕ್ಲಾಸ್ಗಳನ್ನು ಭಾರತ ತಿರಸ್ಕರಿಸಿತ್ತು. ಡಿಸೆಂಬರ್ ಟೆಕ್ಸ್ಟ್ನ ಪ್ರಕಾರ ಯಾವುದೇ ದೇಶ ತನ್ನ ಕೃಷಿ ಉತ್ಪನ್ನಗಳ ಶೇ. 12ರಷ್ಟನ್ನು ಮಾತ್ರ special products ಅಂತ ಘೋಷಿಸಿ ಅದರ ಮೇಲೆ ಆಮದು ಸುಂಕ (ಟಾರಿಫ್) ವಿಧಿಸಬಹುದು. ಆದರೆ ಭಾರತ ಇದನ್ನು ತಿರಸ್ಕರಿಸಿತ್ತು. ಭಾರತ ಇದು ಕನಿಷ್ಠ ಶೇ.20 ರಷ್ಟಿರಬೇಕೆಂದು ವಾದಿಸಿತ್ತು. ಇದೇ ಮಾತುಕತೆ ಮುರಿದುಬೀಳಲು ಕಾರಣವಾಗಿತ್ತು. ಈ ಆಮದು ಸುಂಕ ಅಂದರೆ ದೇಶಗಳು ತಮ್ಮ ರೈತರು, ಉತ್ಪಾದಕರನ್ನು ರಕ್ಷಿಸಲು ಇತರ ದೇಶಗಳಿಂದ ಆಮದಾಗುವ ಆ ಸರಕುಗಳಿಗೆ ಹೆಚ್ಚಿನ ಸುಂಕ ವಿಧಿಸಿ, ಆಮದನ್ನು discourage ಮಾಡುವುದು. ಇದನ್ನು ಎಲ್ಲಾ ದೇಶಗಳೂ ಪಾಲಿಸಿಕೊಂಡು ಬಂದಿವೆ. ಭಾರತದಂತಹ ಬೆಳೆಯುತ್ತಿರುವ ಆರ್ಥಿಕತೆಗಳಿಗೆ, ನಮ್ಮ ದೇಶದಲ್ಲಿ ಸದ್ಯ ಇರುವ ರೈತರ ದುಸ್ಥಿತಿಗೆ ಇದು ಅತ್ಯಾವಶ್ಯಕ.

ಸದ್ಯ ಭಾರತದ ಕೃಷಿ ರಂಗದಲ್ಲಿ 715 ಟಾರಿಫ್ ಲೈನ್ಗಳಿವೆ. ಭಾರತದ ಬೇಡಿಕೆಯಿದ್ದದ್ದು ಅದರಲ್ಲಿ 215 ಟಾರಿಫ್ ಲೈನ್ಗಳನ್ನು ಉಳಿಸಿಕೊಳ್ಳಬೇಕೆಂದು. ಆದರೆ ಡಿಸೆಂಬರ್ ಟೆಕ್ಸ್ಟ್ನ ಪ್ರಕಾರ ಕೇವಲ 86 ಟಾರಿಫ್ ಲೈನ್ಗಳು ಮಾತ್ರ ಉಳಿದುಕೊಳ್ಳುತ್ತವೆ. ಇನ್ನು ಇದರಲ್ಲೂ ಒಂದು ತಿರಕಾಸಿದೆ. ಇಂತಿಪ್ಪ 86 ಟಾರಿಫ್ ಲೈನ್ಗಳಲ್ಲಿ ಶೇ.40ರಷ್ಟು ಅಂದರೆ ಕೇವಲ 36 ಲೈನ್ಗಲಲ್ಲಿ ಸುಂಕ ಅದೇ ಪ್ರಮಾಣದಲ್ಲಿರಬಹುದಾಗಿದೆ, ಇನ್ನುಳಿದ ಶೇ.60 ಅಂದರೆ 50 ಲೈನ್ಗಳಲ್ಲಿ ಆಮದು ಸುಂಕವನ್ನು ಶೇ.19ರಷ್ಟು ಕಡಿತಗೊಳಿಸಬೇಕಾಗುತ್ತದೆ. ಭಾರತದಲ್ಲಿ ಶೇ. 60ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕ ನಡೆಸುತ್ತಿದ್ದಾರೆ. ಇನ್ನು ಅವರ ಸ್ಥಿತಿಯೋ ಆ ದೇವರಿಗೇ ಪ್ರೀತಿ. ಈಗಿರುವ ವ್ಯವಸ್ಥೆಯಲ್ಲೇ ಜಾಗತೀಕರಣದ ಹೊಡೆತ ತಡೆದುಕೊಳ್ಳಲಾರದೆ ಕಂಗಾಲಾಗಿ ಕ್ರಿಮಿನಾಶಕಗಳನ್ನೇ ಭೋಜನವಾಗಿಸಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಡಿಸೆಂಬರ್ ಟೆಕ್ಸ್ಟ್ ಇಲ್ಲದ ರಗಳೆ ಸೃಷ್ಟಿಸಿ ನೇಗಿಲ ಯೋಗಿಯ ಬದುಕನ್ನು ಇನ್ನಷ್ಟು ದುರ್ಭರಗೊಳಿಸುವುದರಲ್ಲಿ ಅನುಮನವೇ ಇಲ್ಲ.

ಅಮೆರಿಕಾ ಮತ್ತು ಯೂರೋಪಿಯನ್ ಯೂನಿಯನ್ ದೇಶಗಳಲ್ಲಿ ಸರ್ಕಾರಗಳು ಅಲ್ಲಿನ ಕೃಷಿಗೆ ಭರ್ಜರಿ ಸಬ್ಸಿಡಿ ನೀಡುತ್ತಿವೆ. ಕೃಷಿಯಲ್ಲದೇ ಕೃಷಿ ಸಂಬಂಧಿತ ಚಟುವಟಿಕೆಗಳಾದ ಸಕ್ಕರೆ, ಹೈನುಗಾರಿಕೆ, ಸೆರಿಕಲ್ಚರ್ ಮತ್ತಿತರ ಉದ್ಯಮಗಳೂ ಬಹುಪ್ರಮಾಣದಲ್ಲಿ ಸಬ್ಸಿಡೈಸ್ಡ್ ಆಗಿವೆ. ಇದರಿಂದ ಅಲ್ಲಿನ ರೈತರು ಸ್ಪರ್ಧೆಗೂ ಮೀರಿದ ಅಗ್ಗದ ದರಗಳಲ್ಲಿ ತಮ್ಮ ಬೆಳೆಗಳನ್ನು ವಿಶ್ವ ಮಾರುಕಟ್ಟೆಗೆ ತುಂಬುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇನ್ನು ನಮ್ಮ ದೇಶಗಳಲ್ಲಿರುವ ಟಾರಿಫ್ಗಳನ್ನೂ ಸಡಿಲಿಸಿಬಿಟ್ಟರೆ ಈ ದೊಡ್ಡಣ್ಣರು ನಮ್ಮ ಮಾರುಕಟ್ಟೆಗಳನ್ನು `dump yard' ಗಳಂತೆ ಬಳಸಿಕೊಳ್ಳುವಲ್ಲಿ ಅನುಮಾನವಿಲ್ಲ. ಅವರು ರಿಸೆಷನ್ನಿಂದ ಹೊರಬರಲಿಕ್ಕೆ ನಮ್ಮನ್ನು ಬಲಿತೆಗೆದುಕೊಳ್ಳಲು ನೋಡುತ್ತಿರುವುದು ಸ್ಪಷ್ಟ. ಮುಕ್ತ ಮಾರುಕಟ್ಟೆ, ಫ್ರೀಟ್ರೇಡ್ ಕುರಿತು ಅಷ್ಟೆಲ್ಲಾ ಭಾಷಣ ಬಿಗಿಯುವ ಅಮೆರಿಕಾ ಅದರಲ್ಲಿ ನಿಜವಾಗಲೂ ನಂಬಿಕೆಯಿದ್ದರೆ ಮೊದಲು ತನ್ನ ದೇಶದಲ್ಲಿ ಕೃಷಿಗೆ ನೀಡುತ್ತಿರುವ ಆಗಾಧ ಪ್ರಮಾಣದ ಸಬ್ಸಿಡಿಯನ್ನು ಕಿತ್ತು ಹಾಕಲಿ. ಆಹಾ, ಅದ್ಹೇಗೆ ಆಗುತ್ತೆ, ಆಮೇಲೆ ನಮ್ಮ ರೈತರ ಜೀವನ ಕಷ್ಟ ಕಷ್ಟ! ಅಂತ ಉದ್ಗಾರವೆಳೆಯುತ್ತದೆ ಅಮೆರಿಕಾ.


ಇದು ಭಾರತವೊಂದರ ಭಾವನೆಯಲ್ಲ. ಬ್ರೆಜಿಲ್, ಚೈನಾ, ಆಫ್ರಿಕನ್ ದೇಶಗಳು, ಹೀಗೆ ಇನ್ನೂ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಭಾವನೆಯನ್ನು ಪ್ರತಿಬಿಂಬಿಸುವಂತೆ ಕಳೆದ ಸದಸ್ಸಿನಲ್ಲಿ ಭಾರತದ ಕಮಲ್ನಾಥ್ ಅಮೆರಿಕಾ ಮತ್ತಿತರ ಮುಂದುವರೆದ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತರೆ ಅಭಿವೃದ್ಧಿಶೀಲ ದೇಶಗಳೆಲ್ಲವೂ ಭಾರತದೊಂದಿಗೆ ದನಿಗೂಡಿಸಿದ್ದವು. ಭಾರತ ತನಗರಿವಿಲ್ಲದಂತೆಯೇ ಈ ಹೋರಾಟದಲ್ಲಿ ಅಭಿವೃದ್ಧಿಶೀಲ ದೇಶಗಳ ನಾಯಕನ ಪಟ್ಟ ಅಲಂಕರಿಸಿತ್ತು. ಫ್ರೀಟ್ರೇಡ್ನ ಬಗ್ಗೆ ಅಮೆರಿಕಾ ಸದಸ್ಸಿನಲ್ಲಿ ಲೆಕ್ಚರ್ ಹೊಡೆಯಲು ಪ್ರಾರಂಭಿಸಿದಾಗ ಎದ್ದು ನಿಂತ ಕಮಲ್ ನಾಥ್ -


"ನಾವು, ನೀವು ಏನು ಮಾಡಿ ಅಂತ ಹೇಳ್ತೀರೋ ಅದನ್ನು ಮಾಡುವುದಿಲ್ಲ, ನಾವಿಂದು ಇರುವ ಪರಿಸ್ಥಿತಿಯಲ್ಲಿ ನೀವಿದ್ದಾಗ ಏನು ಮಾಡಿದರೋ ಅದನ್ನೇ ನಾವೂ ಮಾಡುತ್ತಿದ್ದೇವೆ"
ಎಂದು ಹೇಳಿ ಹೀರೋ ಆಗಿದ್ದರು.


ಮನಮೋಹನರಿಗಿದು ಯಾಕೋ ಸರಿ ಬಂದ ಹಾಗೆ ಕಾಣಲಿಲ್ಲ. ಯುಪಿಎ-2ರಲ್ಲಿ ಆನಂದ್ ಶರ್ಮ ಕಾಮರ್ಸ್ ಮಿನಿಸ್ಟ್ರಾದರು. ಮೊನ್ನೆ ದೆಹಲಿಯಲ್ಲಿ ಎಲ್ಲ ದೇಶಗಳ ಕಾಮರ್ಸ್ ಮಿನಿಸ್ಟ್ರುಗಳ ಅನೌಪಚಾರಿಕ ಸಭೆ ಸೇರಿಸಿ ಸದ್ಯ ಜಗತ್ತು ಎದುರಿಸುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ದೋಹಾ ಸುತ್ತಿನ ಮಾತುಕತೆಗಳ ಅನುಷ್ಠಾನವೇ ಉತ್ತರ. ಈಗಾಗಲೇ ಇದು ಸಾಕಷ್ಟು ವಿಳಂಬವಾಗಿರುವುದರಿಂದ ಜಗತ್ತು ಒಂದು ಅಭಿವೃದ್ಧಿಯ ಶಕೆಯನ್ನೇ ಕಳೆದುಕೊಂಡಿದೆ. ಇನ್ನು ತಡ ಮಾಡಬಾರದು. ಈಗೆಲ್ಲಿವರೆಗೂ ಮಾತುಕತೆಗಳು ನಡೆದಿವೆಯೋ ಅಲ್ಲಿಂದ ಮುಂದಕ್ಕೆ ಮಾತುಕತೆ ಶುರುವಾಗಬೇಕು. ನಾವು ಸದಾ ಮುಂದೆ ನೋಡಬೇಕು, ಹಿಂದೆ ನೋಡಿ ಪ್ರಯೋಜನವಿಲ್ಲ ಎಂದೆಲ್ಲಾ ಬಡಬಡಿಸಿ, ಭಾರತ ಮಾತುಕತೆ ಮುರಿದು ಬೀಳಲು ಕಾರಣವಾದ ಅದೇ ಡಿಸೆಂಬರ್ ಟೆಕ್ಸ್ಟ್ ಅನ್ನು ಮುಂದಿನ ಮಾತುಕತೆಗೆ ಆಧಾರವಾಗಿಟ್ಟುಕೊಳ್ಳಲು ತಯಾರಿದೆ ಎಂದು ಸಿಗ್ನಲ್ ರವಾನಿಸಿದ್ದಾರೆ! ಹಿಂದಿನ ಮಾತುಕತೆಗಳು ಮುರಿದು ಬೀಳಲು ಕಾರಣರಾದ ನಾವೇ ಅತ್ಯುತ್ಸಾಹದಿಂದ ನಮ್ಮಷ್ಟಕ್ಕೆ ನಾವೇ ಸಭೆ ಸೇರಿಸಿ ಆ ಡೆಡ್ಲಾಕ್ ಅನ್ನು ಬಿಡಿಸಬಿಡುವುದೆಂದರೆ? ಇದು ನಾಡಿನ ರೈತರಿಗೆ ಮಾಡಿದ ದೋಖಾ ಅಷ್ಟೆ ಅಲ್ಲ. ಕಳೆದ ಸುತ್ತಿನ ಮಾತುಕತೆಗಳಲ್ಲಿ ಅಭಿವೃದ್ದಿಶೀಲ ರಾಷ್ಟ್ರಗಳ ನಾಯಕನಂತೆ ಬೀಗಿದ್ದ ಭಾರತ ಈಗ ಏಕಾಏಕಿ ಅದೆ ನಿರ್ಣಯಗಳಿಗೆ ತಲೆಬಾಗುತ್ತಿರುವುದು ಅಭಿವೃದ್ಧಿಶೀಲ ಜಗತ್ತಿಗೆ ಭಾರತದ ನಾಯಕತ್ವದಲ್ಲಿ ನಂಬಿಕೆಯಿರಿಸಿದ್ದ ಪ್ರತಿಯೊಂದು ದೇಶದ ಬೆನ್ನಿಗೂ ಈ ಸರ್ಕಾರ ಇರಿದ ಚೂರಿಯಾಗಿದೆ.


ವಿಷಯ ಹೊರಬರುತ್ತಿದ್ದಂತೆ ರಾಷ್ಟ್ರೀಯ ಮಟ್ಟದ ಎಲ್ಲ ರೈತ ಸಂಘಗಳೂ ಸರ್ಕಾರದ ವಿರುದ್ಧ ಹೂಂಕರಿಸಿವೆ, ಕಮ್ಯೂನಿಸ್ಟರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಇವು ಸರ್ಕಾರಕ್ಕೂ ಸಾಮಾನ್ಯವಾಗಿಬಿಟ್ಟಿವೆ, ಬಡಕೊಳ್ಳೋಷ್ಟೂ ಬಡಕೊಂಡು ಸುಮ್ಮನಾಗ್ತಾರೆ ಬಿಡು ಎನ್ನುವ ಧೋರಣೆಯಲ್ಲಿವೆ ಸರ್ಕಾರಗಳು. ರೈತ ಹಿಂದೆಂದಿಗಿಂತಲೂ ಇಂದು ಸಂಕಷ್ಟದಲ್ಲಿದ್ದಾನೆ. ಆತನ ನೆಲದ ಮೇಲೆಯೇ ಎಲ್ಲರ ಕಣ್ಣು, ಇನ್ನು ಬೀಜ ಗೊಬ್ಬರ ಎಲ್ಲವೂ ಎಂಎನ್ಸಿಗಳವು -ದುಬಾರಿ, ಹೋಗಲೀ ಅಂದರೆ ದುಡ್ಡು ಕೊಟ್ಟರೂ ಅವು ಸಿಗವು, ಸಿಕ್ಕರೂ ಸಕಾಲದಲ್ಲಿ ಮಳೆಯಿಲ್ಲ, ನೀರಾವರಿ ವ್ಯವಸ್ಥೆ ಮೊದಲೇ ಇಲ್ಲ, ಕೊಳವೆ ಭಾವಿ ಹೊಡಿಸೋಣ ಅಂದರೆ ನೀರು ಬೀಳಲ್ಲ, ಅದರಲ್ಲಿ ಬರೀ ಮಕ್ಕಳು ಬೀಳ್ತವೆ ಅಷ್ಟೆ, ಇದಕ್ಕೆಲ್ಲಾ ದುಡ್ಡು ಬೇಕು, ಸಾಲ-ಬಡ್ಡಿ-ಚಕ್ರಬಡ್ಡಿ, ನೇಗಿಲ ಹೊರಬೇಕಾದವನು ಸಾಲದ ನೊಗ ಹೊರಬೇಕು. ಹೆಂಗೋ ಉತ್ತಿ ಬಿತ್ತಿ ಬೆಳೆ ಏನೋ ಬಂತು ಅಂದರೆ, ಬೆಳೆದ ಬೆಲೆಗೆ ಸರಿಯಾದ ಮಾರುಕಟ್ಟೆಯೇ ಇಲ್ಲ. ಬೆಂಬಲ ಬೆಲೆ ಎಲ್ಲವೂ ಶುದ್ಧ ನಾಟಕ, ಹತಾಶೆಯಲ್ಲಿ ಬೆಳೆದ ಬೆಳೆಯನ್ನು ಬೀದೀಲಿ ಬಿಸುಡಿ ಹೋಗುವ ಪರಿಸ್ಥಿತಿ. ಉಳಿದ ದಾರಿಗಳೆರಡೇ ಒಂದೋ ನೇಣು ಬಿಗಿದುಕೊಂಡೋ, ಕ್ರಿಮಿನಾಶಕ ಸೇವಿಸೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲ ಹೋರಾಟ - ಸರ್ಕಾರಗಳದು ಒಂದೇ ಉತ್ತರ ಗೋಲೀಬಾರ್! ಯಾವುದನ್ನಾರಿಸಿಕೊಂಡರೂ ಕಡೆಗೆ ರಿಜಲ್ಟು ಒಂದೇ! ಇದು ಸದ್ಯ ರಾಷ್ಟ್ರದ ರೈತರ ಪರಿಸ್ಥಿತಿ. ಈ ಬದುಕಿಗೆ ವಿದೇಶೀ ಎಂಎನ್ಸಿಗಳಿಂದ ಕಾಂಪಿಟೇಷನ್ ಬೇರೆ ಏನು? ಮೊನ್ನೆಯ ಆಸಿಯಾನ್ ಒಪ್ಪಂದವೂ ಕಾಫಿ, ಟೀ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತದೆ. ಈಗ ದೋಹಾ ಸುತ್ತಿನಲ್ಲಿ ನಮ್ಮವರು ಕೃಷಿರಂಗದ ಕೇವಲ ಶೇ.5ರಷ್ಟನ್ನು ಮಾತ್ರ ರಕ್ಷಿತವಾಗಿರಿಸಬೇಕಾದ ಒಪ್ಪಂದವೊಂಕ್ಕೆ ತಲೆದೂಗುತ್ತಾರೆ. ಚಳುವಳಿಗಳೇ ಇಲ್ಲದ ನಾಡಲ್ಲಿ ಹೇಳೋರು, ಕೇಳೋರು ಯಾರೂ ಇಲ್ವ.....?


ಇಂದು ನಮ್ಮ ರಾಷ್ಟ್ರದಲ್ಲಿ alarming ಅನ್ನುವಂತಹ agrarian crisis ಇದೆ. ನಮ್ಮ ಕೃಷಿ ಸಚಿವರು ಕ್ರಿಕೆಟ್ಟಿನಂಗಳದಲ್ಲಿದ್ದಾರೆ. ನಮ್ಮಲ್ಲಿ ಎಲ್ಲರೂ ರೈತ ನಾಯಕರೇ, ರೈತರ ಸಾಲ ಮನ್ನಾ ಏನು, ಶೇ.3 ಬಡ್ಡಿಗೆ ಸಾಲ ಸೌಲಭ್ಯವೇನು, ಉಚಿತ ಕರೆಂಟೇನು, ಇನ್ನೇನಪ್ಪಾ ಬೇಕು ರೈತರಿಗೆ? ವೈಂಗ್ಯವೇ ಇದು. ಎಲ್ಲರವೂ ಕಣ್ಣೊರೆಸುವ ಗಿಮಿಕ್ಗಳೇ ಹೊರತು, ಸಮಸ್ಯೆಯ ಆಳಕ್ಕಿಳಿದು ಅದನ್ನು ಪರಿಹರಿಸಲು ಕಂಕಣ ತೊಟ್ಟ ಒಬ್ಬನೇ ಒಬ್ಬ ನಾಯಕ ಊಹೂಂ..ರೈತ ಸಂಘಗಳೂ ಕೂಡ ಈವತ್ತು ಅವಕಾಶವಾದಿಗಳ ಅಡ್ಡಾ ಆಗಿವೆ. ಅಸಲಿಗಿಂದು ರೈತ ಚಳುವಳಿಯೇ ಇಲ್ಲ. ರೈತರ ಸಮಸ್ಯೆ ಪರಿಹರಿಸಿ ಫಾರಿನ್ ಡಾಕ್ಟರೇಟ್ ಪಡೆದವರೊಬ್ಬರು, ಸಾಲ ಮನ್ನ ಮಾಡುವವರೊಬ್ಬರು, ಚುನಾವಣೆಗೆ ಮುಂಚೆ ರೈತಪರ ನಿಲುವು ತಾಳಿ ಪುನರಾಯ್ಕೆಯಾಗಿ ತಕ್ಷಣ ಊಸರವಳ್ಳಿಯಂತೆ ಬಣ್ಣ ಬದಲಿಸುವವರು ಮಗದೊಬ್ಬರು. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಅನ್ನುವ ಹಾಗೆ ನಾಡಿನ ರೈತ ಯಾವತ್ತಿಗೂ ಅನಾಥ.
(ಈ ವಾರದ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ )

2 thoughts on “ದೋಹ - ದೋಖಾ

ಬಿ.ಸುರೇಶ said...

ಓದಿದೆ.
ಮಾಹಿತಿಪೂರ್ಣ ಲೇಖನ.
ಇಂತಹ ಲೇಖನಗಳನ್ನು ಬಹುಸಂಖ್ಯಾತ ಭಾರತೀಯರಿಗೆ ತಲುಪಿಸಬೇಕು.
ನನ್ನ ಗೆಳೆಯರಿಗಂತೂ ಈ ಲೇಖನದ ಲಿಂಕ್ ಕಳಿಸುತ್ತೇನೆ.
ಒಳಿತಾಗಲಿ.
- ಬಿ.ಸುರೇಶ

ಗೌತಮ್ ಹೆಗಡೆ said...

olleya blog sir:)

Proudly powered by Blogger
Theme: Esquire by Matthew Buchanan.
Converted by LiteThemes.com.