ಇನ್ನೂ ಜಾಕ್ಸನ್ ಮೇನಿಯಾ!


ಮೈಖೇಲ್ ಜಾಕ್ಸನ್! ಆ ಹೆಸರಿನಲ್ಲೇ ಏನೋ ಒಂದು ರೀತಿಯ ಶಕ್ತಿಯಿತ್ತು, ಇನ್ನೂ ಇದೆ. ಅಮೆರಿಕಾದ ಬಡ ಕರಿಯರ ಕುಟುಂಬದಲ್ಲಿ ಜನಿಸಿದ ಜಾಕ್ಸನ್, ತನ್ನ ಐದನೇ ವಯಸ್ಸಿನಿಂದಲೇ ಪಾಪ್ ಗಾಯನದೆಡೆಗೆ ಆಕರ್ಷಿತನಾದ. ತನ್ನ ಹನ್ನೆರಡನೇ ವಯಸ್ಸಿಗೆ ತನ್ನ ಸೋದರರೊಡಗೂಡಿ ಒಂದು ಪಾಪ್ ಆಲ್ಬಮ್ ಅನ್ನು ಕೂಡ ಮಾಡಿದ. ನಂತರ ಈತ ಬೆಳೆದ ರೀತಿ ಅಗಾಧ. ಅಮೆರಿಕಾ ಅಷ್ಟೇ ಏಕೆ ಇಡೀ ಜಗತ್ತನ್ನು ತನ್ನ ಪಾಪ್ ಸಂಗೀತ ಮತ್ತು ಚಿತ್ರ ವಿಚಿತ್ರ ಡ್ಯಾನ್ಸ್ನಿಂದ ಹಿಡಿದಿಟ್ಟುಕೊಂಡಿದ್ದ, ಆಬಾಲವೃದ್ಧರನ್ನು ತನ್ನ ಕಲೆಯಿಂದ ಹುಚ್ಚೆದ್ದು ಕುಣಿಸಿದ. ಮೈಖೇಲ್ ಜಾಕ್ಸನ್ ಒಂದು ಜೀವಂತ ದಂತಕಥೆಯಾಗಿದ್ದ. ಯಾರೇ ಮಕ್ಕಳು ಹಂಗೂ ಹಿಂಗೂ ಕೈಕಾಲು ಅಲ್ಲಾಡಿಸಿದರೆ, ಏನೋ ಮೈಖೇಲ್ ಜಾಕ್ಸನ್ನ?
ಅಂತೀವಿ. ಇಡೀ ವಿಶ್ವವನ್ನು ಮೈಖೇಲ್ ಜಾಕ್ಸನ್ ಹಿಡಿದಿಟ್ಟುಕೊಂಡ ರೀತಿಯದು. ಸಮಾಜದ ಏಣಿಯೇರುತ್ತಾ ಹೋದ ಮೈಖೇಲ್ ಮೇಲೆ ಒಬ್ಬಂಟಿಯಾಗಿಬಿಟ್ಟ. ಆತನಿಗೆ ಸಿಕ್ಕಿದ್ದು ಏಕಾಂತವಲ್ಲ, ಒಬ್ಬಂಟಿತನ! ಆತನ ಬಾಲ್ಯದ ಎಲ್ಲ ಕಹಿ ಘಟನಾವಳಿಗಳೂ ಕಲಸುಮೇಲೋಗರವಾಗಿ ಆತನ ಜೀವನದ ಮೇಲೆ ಪ್ರಭಾವ ಬೀರಲಾರಂಭಿಸಿದವು. ಕೌಟಂಬಿಕ ಜೀವನ ಮೂರಾಬಟ್ಟೆಯಾಯಿತು. ಕರಿಯ ಜಾಕ್ಸನ್ ಬಿಳಿಯನಾದ. ಪ್ರೀತಿಯ ಮಕ್ಕಳನ್ನು ದೂರ ಮಾಡಿಕೊಂಡ. ಅನೇಕ ವಿವಾದಗಳು ಆತನ ಬೆನ್ನುಬಿಡದೆ ಕಾಡಿದವು. ಮನುಷ್ಯ ಜರ್ಜರಿತವಾಗಿ ಹೋಗಿದ್ದ. ಆತ ಡ್ಯಾನ್ಸ್ ಮಾಡಲು, ಆತನ ದೇಹವನ್ನು ಹುರಿಗೊಳಿಸಿಕೊಳ್ಳಲು ಅಪಾರ ಪ್ರಮಾಣದ ಮೆಡಿಕೇಶನ್ಗೆ ಒಳಗಾಗಿದ್ದ, ಅದೂ ದಶಕಗಳ ಕಾಲ. ಹಲವಾರು ಡ್ರಗ್ಸ್ಗೆ ಆತ ದಾಸನಾಗಿದ್ದ. ಇಂತಿಪ್ಪ ದೇಹವನ್ನು ಸತತ 50 ದಿನಗಳ concertಗಾಗಿ ಹುರಿಗೊಳಿಸಲು ಹೋಗಿ ವಿಫಲನಾದ. ಮೊನ್ನೆ ಜೂನ್ 25 2009ರಂದು ಆ ದೇಹ ಇನ್ನು ತಡೆಯದಾಯಿತು. ಜಾಕ್ಸನ್ ಸತ್ತುಹೋದ! ಇಡೀ ಜಗತ್ತು ಶೋಕ ಶಾಗರದಲ್ಲಿ ಮುಳುಗಿಹೋಯಿತು. ಆತನ ಅಭಿಮಾನಿಗಳು ಆತ ತೀರಿಕೊಂಡಿದ್ದಾನೆಂಬುದನ್ನು ಒಪ್ಪಲು ಇನ್ನೂ ತಯಾರಿಲ್ಲ. That is ಮೈಖೇಲ್ ಜಾಕ್ಸನ್!

ಜಾಕ್ಸನ್ ಈ ವರ್ಷದ ನವೆಂಬರ್ ನಿಂದ ಬರುವ marchವರೆಗೆ ಲಂಡನ್ ಮತ್ತು ಇಂಗ್ಲೆಂಡಿನ ಅನೇಕ ಕಡೆಗಳಲ್ಲಿ 50 ಕಾರ್ಯಕ್ರಮಗಳನ್ನು ನೀಡಬೇಕಿತ್ತು. ಎಲ್ಲಾ ತಯಾರಿಗಳೂ ಆಗಿತ್ತು. ಐವತ್ತೂ ಕಾರ್ಯಕ್ರಮಗಳ ಟಿಕೆಟ್ಗಳು ಕಡಲೆಪುರಿಯಂತೆ ಬಿಕರಿಯಾಗಿ ಹೋಗಿದ್ದವು. ಜನ ಆ ದಿನಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದರು. ಆದರೆ ಆತನ ಅಕಾಲ ಮರಣ ಅದೆಲ್ಲವನ್ನೂ ಸ್ಥಬ್ಧವಾಗಿಸಿಬಿಟ್ಟಿತು. ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಎಇಜಿ ಲೈವ್ ಮತ್ತು ಲಂಡನ್ನ ಒ2 ಅರೆನಾ ಕಂಪೆನಿಗಳು ಮುಳುಗಿ ಹೋಗುವ ಹಂತಕ್ಕೆ ಬಂದುಬಿಟ್ಟವು. ಈಗಲೂ ಎಇಜಿ ಲೈವ್ ಮೇಲೆ ಕೋರ್ಟಿನಲ್ಲಿ 300 ಮಿಲಿಯನ್ ಪೌಂಡ್ಗಳಿಗೆ ಲಯಾಬಿಲಿಟಿ ಸೂಟ್ ಇದೆ.
ಈಗ ಇವರು ಹಾಕಿದ ದುಡ್ಡನ್ನು ವಾಪಸು ಪಡೆಯಲೇ ಬೇಕು, ಬೇರೆ ಗತ್ಯಂತರವಿಲ್ಲ.ಆಗ ಅವರಿಗೆ ಹೊಳೆದಿದ್ದೇ ಈ ಸಿನಿಮಾ ಐಡಿಯಾ. ಲಂಡನ್ನ concertಗಳಿಗಾಗಿ ಮೈಖೇಲ್ ಜಾಕ್ಸನ್ ಕಾರ್ಯಕ್ರಮ ಆಯೋಜಕರೊಂದಿಗೆ ನಡೆಸಿದ ರಿಹರ್ಸಲ್ಗಳ ನೂರು ಘಂಟೆಗಳ ವೀಡಿಯೋ ರೆಕಾರ್ಡಿಂಗ್ ಇತ್ತು ಇವರ ಬಳಿ. ಸರಿ ಜಾಕ್ಸನ್ ಜೊತೆ ಕ್ರಿಯೇಟಿವ್ ಅಸೊಸಿಯೇಟ್ ಆಗಿ ಕೆಲಸ ಮಾಡಿದ ಕೆನ್ನಿ ಆರ್ಟೆಗ ಮತ್ತು ಜಾಕ್ಸನ್ ಎಸ್ಟೇಟ್ನೊಂದಿಗೆ ಒಪ್ಪಂದ ಮಾಡಿಕೊಂಡ ಎಇಜಿ ಲೈವ್ ಈ ನೂರು ಘಂಟೆಗಳ ಫುಟೇಜನ್ನು ಹಿಡಿದು ಜಾಕ್ಸನ್ ಕಡೆಯ ದಿನಗಳ ಬಗ್ಗೆ ಸಿನಿಮಾ, ಇಲ್ಲ ಸಿನಿಮಾ ಮಾದರಿಯ ಸಾಕ್ಷ್ಯಚಿತ್ರ ಮಾಡಲು ನಿರ್ಧರಿಸಿತು. ಅದೇ ಈಗ ತೆರೆಕಂಡಿರುವ ಜಾಕ್ಸನ್ ಚಿತ್ರ - `this is it'. ಈ ಸಿನಿಮಾದಿಂದ ಬರುವ ಲಾಭಾಂಶದ ಶೇ.90ರಷ್ಟನ್ನು ಜಾಕ್ಸನ್ ಎಸ್ಟೇಟಿಗೂ, ಮಿಕ್ಕ ಶೇ.10ರಷ್ಟು ತಮಗೆಂದೂ ಕೋರ್ಟನ್ನೂ ಕೂಡ ಒಪ್ಪಿಸಿ ಈಗ ವಿಶ್ವದ ಮೂಂದೆ ಈ ಸಿನಿಮಾವನ್ನು ಇಟ್ಟದೆ. ಜಾಕ್ಸನ್ ನಡೆಸಿದ ರಿಹರ್ಸಲ್ಗಳು, ಐದಾರು ಹಾಡುಗಳ ಪೂರ performence, ಕೆಲವು ಖಾಸಗೀ ಕ್ಷಣಗಳು, ಆತನ ಸಂದರ್ಶನಗಳ ಸಂಕಲನವೇ ಈ ಸಿನಿಮಾ. ಮೊನ್ನೆ ಅಕ್ಟೋಬರ್ 28ರಂದು ಈ ಸಿನಿಮಾ ಇಡಿಯ ವಿಶ್ವದಲ್ಲಿ ತೆರೆಕಂಡಿದೆ. ಈ ಸಿನಿಮಾ ಕೇವಲ ಎರಡು ವಾರ ಒಡಲಿದೆ. ಭಾರತದಲ್ಲಿ ಸುಮಾರು 120 ಪ್ರಿಂಟ್ಗಳೊಂದಿಗೆ ಇದು ತೆರೆಕಂಡಿದೆ. ಮೈಖೇಲ್ ಜಾಕ್ಸನ್ನ ಅಭಿಮಾನಿಗಳು ಮತ್ತೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಮೊನ್ನೆ ಲಾಸ್ ಏಂಜಲೀಸ್ನಲ್ಲಿ ಈ ಸಿನಿಮಾದ ಪ್ರೀಮಿಯರ್ ಷೋ ಅನ್ನು ನೋಡಿ ಹೊರಬಂದ ಜಾಕ್ಸನ್ ಸೋದರರೆಲ್ಲರೂ ಮಾತೇ ಬಾರದವರಂತೆ ಮೌನಕ್ಕೆ ಮೊರೆ ಹೋಗಿಬಿಟ್ಟಿದ್ದರು, ಆ ಪ್ರೀಮಿಯರ್ ನೋಡಿ ಹೊರಬಂದ ಪ್ರತಿಯೊಬ್ಬರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ವಿಶ್ವದಾದ್ಯಂತ ಈ ಚಿತ್ರಕ್ಕೆ ಅಮೋಘ ಎನ್ನುವಂತಹ ಸ್ಪಂದನೆ ಲಭಿಸಿದೆ, ಅತ್ಯುತ್ತಮ ಎನ್ನಬಹುದಾದ ಓಪನಿಂಗ್ ಸಿಕ್ಕಿದೆ. ಆಗಲೇ ಎರಡು ವಾರಗಳ ಎಲ್ಲಾ ಟಿಕೇಟುಗಳೂ ಸೇಲ್ ಆಗಿ ಹೋಗಿವೆ.

ನೀವೇ ಊಹಿಸಿ ಇದು ಸಿನಿಮಾ ಅಲ್ಲ, ಒಂದು ಸಾಕ್ಷ್ಯಚಿತ್ರ. ಆದರೆ ಜಗತ್ತಿನ ನಾನಾಕಡೆ ಜನ ಇದನ್ನು ಥಿಯೇಟರ್ನಲ್ಲಿ ನೋಡಲು ಮುಗಿ ಬೀಳುತ್ತಿದ್ದಾರೆ, ನಾವು ಅದರ ಬಾಕ್ಸಾಫೀಸು, ಓಪನಿಂಗ್ ಬಗ್ಗೆ ಮಾತನಾಡುತ್ತಿದ್ದೇವೆಂದರೆ ಜಾಕ್ಸನ್ ಮೇನಿಯಾ ಎಷ್ಟಿದೆಯೆಂದು ನೀವೇ ಊಹಿಸಿ. ಅದು ಕಲಾವಿದನೊಬ್ಬನ ಶಕ್ತಿ. ಬೇರಾರಿಗೂ ಅದು ಸಾಧ್ಯವಿಲ್ಲದ್ದು. ಜಾಕ್ಸನ್ ಒಬ್ಬ ಅಪ್ಪಟ ಕಲಾವಿದ.

One thoughts on “ಇನ್ನೂ ಜಾಕ್ಸನ್ ಮೇನಿಯಾ!

shruts said...

Miss u MJ....love'd u a lot
may your soul rest in peace

Proudly powered by Blogger
Theme: Esquire by Matthew Buchanan.
Converted by LiteThemes.com.