`ಹೊಸ ಆರಂಭ'ವೊಂದರ ಶುಭಸಂಕಲ್ಪ - america - islam - obama - a triangle love - story
ಅಮೆರಿಕಾದ ಡಬ್ಲ್ಯೂಟಿಒ ಕಟ್ಟಡದಲ್ಲಿ ವಿಮಾನಗಳು ನುಗ್ಗಿದ ಆ ದುರಂತಕ್ಕೆ 8 ವರ್ಷ. ಇತ್ತೀಚಿನ ಇತಿಹಾಸದಲ್ಲಿ ವಿಶ್ವ ನದಿಯ ಹರಿವ ದಿಕ್ಕನ್ನೇ ಬದಲಿಸಿ ಕೆಡವಿದಂಥ ಗಟನೆಯೆಂದರೆ ಅದು 9/11! ಹೌದು 9/11 ನಂತರ ವಿಶ್ವದಲ್ಲಿ ಯಾವುದೂ ಮೊದಲಿನಂತಿಲ್ಲ. 9/11 ದಾಳಿಯ ಹಿನ್ನಲೆಯಲ್ಲಿ ಭಯೋತ್ಪಾದನೆಯ ವಿರುದ್ಧದ ಸಮರ - ವಾರ್ ಆನ್ ಟೆರರ್ನ ಹೆಸರಿನಲ್ಲಿ ಅಮೆರಿಕಾ ವಿಶ್ವದ ಮುಸ್ಲಿಂ ಜಗತ್ತಿನ ಮೇಲೆ ಮುರಕೊಂಡು ಬಿತ್ತು. ವಾರ್ ಆನ್ ಟೆರರ್ನ ಜೊತೆಜೊತೆಗೇ ವಾರ್ ಆನ್ ಟ್ರುಥ್ ಮತ್ತು ವಾರ್ ಆನ್ ಹಿಸ್ಟರಿ ಕೂಡ ನಡೆದು ಹೋಯಿತು. ನಾಗರೀಕತೆಗಳ ಸಂಘರ್ಷದ ಮಾತುಗಳು ಮತ್ತೆ ಮತ್ತೆ ಕೇಳಿ ಬಂದವು. ಅಮೆರಿಕಾ ಮತ್ತು ಇಸ್ಲಾಂ - ಇವೆರಡೂ ಒಂದಕ್ಕೊಂದು ಹೊರತಾದಂಥವು, ಇವೆರಡನ್ನೂ ಒಂದೇ ಸಾಲಿನಲ್ಲಿ ಪ್ರಸ್ತಾಪಿಸಲಾದೀತೆ ಎನ್ನುವ ಕಾಲವೊಂದಿತ್ತು. ಆದರೆ ಕಾಲ ಬದಲಾಗಿದೆ. ಅತ್ತ 9/11ನ ವರ್ಷಾಚರಣೆಯ ದುಃಖದಲ್ಲಿಯೂ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ವೈಟ್ ಹೌಸ್ನಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು! ವೈಟ್ ಹೌಸ್ ಇಫ್ತಾರ್ ಕೂಟಗಳು ಹೊಸವೇನಲ್ಲ. ಬುಷ್ ಕಾಲದಲ್ಲೂ ಇವನ್ನು ಏರ್ಪಡಿಸಲಾಗುತ್ತಿದ್ದರೂ ಇದನ್ನು ಕಾಟಾಚಾರಕ್ಕೆ ನಿರ್ವಹಿಸಿದರೇ ಹೊರತು ಮನಸಿಟ್ಟು ಮಾಡಿದವರಿಲ್ಲ. ಆದರೆ ಬರಾಕ್ ಒಬಾಮಾ ಇದನ್ನು ಬದಲಿಸಿದ್ದಾನೆ. ಇಫ್ತಾರ್ ಕೂಟವನ್ನು ಅಮೆರಿಕಾ-ಇಸ್ಲಾಂ ಸೌಹಾರ್ದ
ವೃದ್ದಿಗೆ ವೇದಿಕೆಯಾಗಿ ಬಳಸಿಕೊಂಡಿದ್ದಾನೆ.

ಒಬಾಮಾ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕಾ ಸರ್ಕಾರದ ಮುಸ್ಲಿಂ ವಿದ್ವೇಷದ
ಕಿಚ್ಚು ಆವಿಯಾಗತೊಡಗಿದೆ. ಇಸ್ಲಾಂನ ಮೂಲಭೂತವಾದಿ ಭಯೋತ್ಪಾದಕರನ್ನು ಮಿಲಿಟರಿ ಶಕ್ತಿಯಿಂದ ದಮನ ಮಾಡಲಾಗುವುದಿಲ್ಲ, ಮೇಲಾಗಿ ತಲೆತಿರುಕರೊಂದಷ್ಟು ಜನ ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆಗಿಳಿದರೆ ಅದಕ್ಕೆ ಇಸ್ಲಾಂ ಅನ್ನೇ ದೂಷಿಸುವುದು ಸರಿಯಲ್ಲ, ಅಂತಹದರಲ್ಲಿ ಯುದ್ಧ ಸಾರುವುದು ಮೂರ್ಖತನವಾಗುತ್ತದೆಯೆಂಬ ಕನಿಷ್ಠ ಅರಿವುಳ್ಳ ಒಬಾಮಾ ಅಮೆರಿಕಾದ ಅಧ್ಯಕ್ಷನಾಗಿರುವುದು ಈ ಬದಲಾವಣೆ ತಂಗಾಳಿ ಬೀಸಲು ಕಾರಣ. ಇರಾಕ್ ಯುದ್ಧವನ್ನು ಖಂಡಿಸುತ್ತಾ, ನಾಗರೀಕತೆಗಳ ಸಂಘರ್ಷ ಥಿಯರಿಯ ವಿರುದ್ಧ ಮಾತನಾಡುತ್ತಾ, ವಿಶ್ವ ಭ್ರಾತೃತ್ವದಾಧಾರದ ಮೇಲೆ ನಿಂತ ವಿಶ್ವದ ಕನಸು ಕಟ್ಟಿಕೊಂಡ ಕಿಂದರಜೋಗಿಯಂತೆ ತನ್ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ನಡೆಸಿ ವಿಜಯಿಯಾಗಿ ವೈಟ್ಹೌಸ್ ಒಳಹೊಕ್ಕವನು ಒಬಾಮಾ.

ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದ ಒಬಾಮಾ ಅಮೆರಿಕಾ ಮತ್ತು ಮುಸ್ಲಿಂ ಜಗತ್ತಿಗಳ ನಡುವಿನ ಸಂಬಂಧಗಳನ್ನು ವೃದ್ಧಿಸಲು ತನ್ನ ಕೈಲಾದಷ್ಟು ಪ್ರಯತ್ನ ನಡೆಸುತ್ತಲೇ ಬಂದಿದ್ದಾನೆ. ಮೊದಲೇ ಮಾತು ಕೊಟ್ಟಂತೆ ಪರಮ ಕುಖ್ಯಾತ ಗ್ವಾಂಟನಮೋ ಬೇ ಚಿತ್ರಹಿಂಸಾ ಕೇಂದ್ರವನ್ನು ಬಂದ್ ಮಾಡಿಸಿದ್ದಾನೆ. ತನ್ನ ಮೊದಲ ನಿಲುವಿಗೆ ಬದ್ಧನಾಗಿ ಇರಾಕನ್ನು ಇರಾಕಿಗರಿಗೇ ಬಿಟ್ಟು ತನ್ನ ಸೈನ್ಯವನ್ನು ಸಂಪೂರ್ಣವಾಗಿ ವಾಪಸು ಕರೆಸಿಕೊಂಡಿದ್ದಾನೆ. ಒಸಾಮಾನ ಕಥೆ ಇತ್ಯರ್ಥವಾಗುವವರೆಗೆ ಅಫಘಾನಿಸ್ತಾನದಿಂದ ಸೈನ್ಯದ ವಾಪಸಾತಿಯಿಲ್ಲ ಎಂದು ಹೇಳಿದ್ದರೂ ಅಲ್ಲಿ 2001ರ ನಂತರ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಚುನಾವಣೆಗಳು ನಡೆಯುತ್ತಿವೆ. ಅಲ್ಲಿ ಅಮೆರಿಕಾ ಕೂರಿಸಿದ್ದ ಹಮೀದ್ ಕಜರ್ಾಯ್ ಸೋಲಿನ ಭೀತಿಯಲ್ಲಿರುವುದು ಚುನಾವಣೆಯ
ಪ್ರಜಾಸತ್ತಾತ್ಮಕತೆಗೆ ಹಿಡಿದ ಕನ್ನಡಿಯಾಗಿದೆ. ಇತ್ತೀಚೆಗೆ ಒಬಾಮಾ ಸಿಕ್ಕ ಪ್ರತಿ ಚಿಕ್ಕ ಅವಕಾಶವನ್ನೂ ಇಸ್ಲಾಂ ಜಗತ್ತಿನೊಂದಿಗೆ ಸಂಭಾಷಿಸಲು, ಅವರಲ್ಲಿ ಆಳವಾಗಿ ಬೇರುರಿವ ಅಮೆರಿಕಾ ಕುರಿತ ದ್ವೇಷ, ಅನುಮಾನಗಳನ್ನು ದೂರ ಮಾಡುಲು ಪ್ರಯತ್ನಿಸುತ್ತಿದ್ದಾನೆ. ಇಫ್ತಾರ್ ಕೂಟ ಅಂತಹುದೊಂದು ಗೆಸ್ಚರ್ ಅಷ್ಟೆ. ಒಬಾಮಾ ಮೊದಲ ಬಾರಿಗೆ ಮುಸ್ಲಿಂ ಜಗತ್ತಿನೊಂದಿಗೆ ಸಂಧಿಸಿದ್ದು ಮುಖಕ್ಕೆ ಮುಖ ಕೊಟ್ಟು ಭುಜಕ್ಕೆ ಭುಜ ಆನಿಸಿ ಆತ್ಮೀಯವಾಗಿ ಸಂಭಾಷಿಸಿದ್ದು ಈ ಏಪ್ರಿಲ್ನಲ್ಲಿ, ಪಿರುಮಿಡ್ಡುಗಳ ನಾಡು ಈಜಿಪ್ಟಿನ ಕೈರೋದಲ್ಲಿ. ಒಬಾಮಾನ ಕೈರೋ ಭಾಷಣ ಐತಿಹಾಸಿಕವೇ ಸರಿ. ಒಬ್ಬ ಅಮೆರಿಕಾದ ಅಧ್ಯಕ್ಷ ಮುಸ್ಲಿಂ ಜಗತ್ತಿನಲ್ಲಿ ನಿಂತು, re-conciliationನ ಮಾತನಾಡಿದ್ದು ಐತಿಹಾಸಿಕವೂ, ಚೇತೋಹಾರಿಯೂ ಆಗಿತ್ತು.

-"ನಾವು ಅಮೆರಿಕಾ ಮತ್ತು ಜಗಿತ್ತಿನಾದ್ಯಂತ ಇರುವ ಮುಸ್ಲಿಮರ ನಡುವೆ ಕರ್ಷಣಗಳಿರುವ ಸಮಯದಲ್ಲಿ ಸಂಧಿಸುತ್ತಿದ್ದೇವೆ. ಪಶ್ಚಿಮ ಮತ್ತು ಮುಸ್ಲಿಂ ಜಗತ್ತುಗಳ ನಡುವಿನ ಸಂಬಂಧಗಳು ಶತಮಾನಗಳಿಂದ ಸಹಧಾವಿಯೂ, ಸಹಕಾರಿಯೂ ಆಗಿದ್ದರೂ ಅದು ಧಾರ್ಮಿಕ ಯುದ್ಧಗಳು ಮತ್ತು ಕರ್ಷಣಗಳಿಂದಲೂ ಕೂಡಿದೆ. ಇತ್ತೀಚೆಗೆ ಅನೇಕ ಮುಸ್ಲಿಮರಿಗೆ ತಮ್ಮ ಹಕ್ಕುಗಳನ್ನು ಮತ್ತು ಅವಕಾಶಗಳನ್ನು ವಂಚಿಸಿದ ವಸಾಹತುಶಾಹಿತನ ಮತ್ತು ಶೀತಲಸಮರ....... ಜಾಗತೀಕರಣ ಮತ್ತು ಆಧುನಿಕತೆ ತಂದಿರುವ ಅಪಾರ ಬದಲಾವಣೆ ಮುಸ್ಲಿಂ ಜಗತ್ತಿಗೆ ಪಶ್ಚಿಮ ಜಗತ್ತು ಇಸ್ಲಾಂನ ಸಂಪ್ರದಾಯಕ್ಕೆ ವಿರುದ್ಧವಾಗಿದೆಯೆಂಬ ಭಾವನೆಯನ್ನು ಮೂಡಿಸಿರುವುದು ನಿಜ. ಇದನ್ನು ಕೆಲವು ಹಿಂಸಾವಿನೋದಿ ಮೂಲಭೂತವಾದಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 9/11 ದಾಳಿ ನನ್ನ ದೇಶದ ಕೆಲವರು ಇಸ್ಲಾಂ ಅನ್ನು ಅಮೆರಿಕಾ, ಮತ್ತು ಮಾನವ ಹಕ್ಕುಗಳಿಗೆ ವಿರೋಧವಾದದ್ದೆಂದು ಭಾವಿಸುವಂತೆ ಮಾಡಿತು. ಎಂದಿನವರೆಗೂ ನಮ್ಮ ನಡುವಿನ ಸಂಬಂಧ ನಮ್ಮ ನಡುವಿನ ವೈರುಧ್ಯಗಳಿಂದ ಗೊತ್ತುಮಾಡಲ್ಪಟ್ಟಿರುತ್ತದೋ, ಅಲ್ಲಿವರೆಗೆ ನಾವು ಶಾಂತಿಯ ಬದಲಿಗೆ ದ್ವೇಷ ಬಿತ್ತುವ, ಸಹಕಾರದ ಬದಲಿಗೆ ಕರ್ಷಣವನ್ನು ಪ್ರೋತ್ಸಾಹಿಸುವವರ ಕೈಯನ್ನು ಬಲಪಡಿಸುತ್ತಿರುತ್ತೇವೆ. ಈ ಸಂಶಯ ಮತ್ತು ವೈಷಮ್ಯದ ಚಕ್ರಸುಳಿಯಿಂದ ನಾವು ಹೊರಬರಬೇಕಿದೆ. ಹೊಸ ಆರಂಭ - ಪರಸ್ಪರ ಹಿತಾಸಕ್ತಿ, ಪರಸ್ಪರ ಗೌರವ ಮತ್ತು ಅಮೆರಿಕಾ ಮತ್ತು ಮುಸ್ಲಿಂ ಜಗತ್ತು ಒಂದಕ್ಕೊಂದು ಎಕ್ಸ್ಕ್ಲೂಜಿವ್ ಅಲ್ಲ ಮತ್ತು ಅವೆರಡೂ ಸ್ಪರ್ಧೆಗೆ ಬೀಳುವ ಅಗತ್ಯವಿಲ್ಲವೆನ್ನುವ ಸತ್ಯಾಂಶದ ಆಧಾರದಲ್ಲಿ ನಮ್ಮ ನಡುವಿನ ಸಂಬಂಧಗಳಲ್ಲಿ ಹೊಸ ಆರಂಭ ಕೇಳಲು ನಾನಿಲ್ಲಿಗೆ ಬಂದಿದ್ದೇನೆ......."

ಅಮೆರಿಕಾದ ಅಧ್ಯಕ್ಷ ಇದನ್ನು ಹೇಳುವುದು ಎಷ್ಟು ಚೇತೋಹಾರಿಯಲ್ಲವೇ? ಇದು ವಿಶ್ವ ಶಾಂತಿಗೊಂದು ಮುನ್ನುಡಿಯಂತಿಲ್ಲವೇ? ಇದನ್ನು ನಾವು ಬುಷ್ನಿಂದ ನಿರೀಕ್ಷಿಸಲು ಸಾಧ್ಯವಿತ್ತೇ? ಅಮೆರಿಕಾ ಮತ್ತು ಮುಸ್ಲಿಂ ಜಗತ್ತಿನ ಸಂಭಾಷಣೆಯಲ್ಲಿ ಈ ಹಿಂದೆ ಸಂಘರ್ಷಮಯವಾಗಿದ್ದ, ಶಾಸಿಸುವಂತಿದ್ದ ಭಾಷೆ ಒಬಾಮಾ ಭಾಷಣದಲ್ಲಿ ಪರಸ್ಪರ ಗೌರವ, ಪ್ರೀತ್ಯಾದರಗಳ ಸ್ವರೂಪ ಪಡೆದಿತ್ತು. ಇಷ್ಟೇ ಅಲ್ಲದೆ ಅಮೆರಿಕನ್ನರ ಮನಸ್ಸಿನಾಳಗಳಲ್ಲಿ ಮುಸ್ಲಿಮರ ಕುರಿತು ಬೇರೂರಿರುವ ತಪ್ಪು ಕಲ್ಪನೆ, ಅನುಮಾನ, ಹೆದರಿಕೆಗಳನ್ನೂ ದೂರಮಾಡಲು ಕೂಡ ಒಬಾಮಾ ಶ್ರಮಿಸುತ್ತಿದ್ದಾನೆ. ಮುಖ್ಯವಾಗಿ ಮುಸ್ಲಿಮರ ಕುರಿತು ಇರುವ ಪೂರ್ವಾಗ್ರಹ ಪೀಡಿತ ಸಿದ್ಧಮಾದರಿಗಳನ್ನು ತೊಡೆದು ಹಾಕುವೆಡೆ ಆತ ದೃಷ್ಟಿ ಹರಿಸುತ್ತಿದ್ದಾನೆ. ಈ ಎಲ್ಲದರಿಂದ ಬಳಲುತ್ತಿರುವ ಮೈನಾರಿಟಿಯಾದ ಅಮೆರಿಕನ್ ಮುಸ್ಲಿಮರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾನೆ. ಅಮೆರಿಕಾದ ಚಾರಿಟಿ ಕಾನೂನಿನಿಂದ ಅಲ್ಲಿನ ಮುಸ್ಲಿಮರು ತಮ್ಮ ಧರ್ಮಾಚರಣೆಯ ಭಾಗವಾದ `ಜಕತ್' ಅನ್ನು ನಿರ್ವಹಿಸಲು ಸಾಧ್ಯವಾಗದಿರುವುದನ್ನು ಗುರುತಿಸಿ ಸರಿಪಡಿಸಿದ್ದು, ಮುಸ್ಲಿಂ ಹುಡುಗಿಯೊಬ್ಬಳನ್ನು ಶಾಲೆಯಲ್ಲಿ `ಹಿಜಾಬ್' ಹಾಕುವಂತಿಲ್ಲ ಎಂದು ಹೊರಗಟ್ಟಿದಾಗ ಸರ್ಕಾರದ ಜಸ್ಟೀಸ್ ಇಲಾಖೆ ಹುಡುಗಿಯ ಪರ ನಿಂತು `ಹಿಜಾಬ್' ತೊಡುವುದು ಅವರ ಧರ್ಮದ ಭಾಗವೆಂದು ವಾದಿಸಿ ಅವಕಾಶ ಮಾಡಿಸಿಕೊಟ್ಟದ್ದು, ಇವೆಲ್ಲಾ ಸಣ್ಣಸಣ್ಣ ವಿಷಯಗಳಾದರೂ, ಒಬಾಮಾನ ಸೂಕ್ಷ್ಮ ಸಂವೇದನೆಗಳನ್ನು ಸಂಕಲ್ಪವನ್ನೂ ತೋರಿಸುತ್ತವೆ. ಒಬಾಮಾ ಮಾಡುತ್ತಿರುವುದೆಲ್ಲಾ ಹಲವರಿಗೆ ಬರಿಯ ಅರ್ಥವಿಲ್ಲದ ರೆಟರಿಕ್ನಂತೆಯೂ ಮತ್ತೆ ಕೆಲವರಿಗೆ ಆಕ್ಷನ್ ರಹಿತ ಗೆಸ್ಚರ್ಗಳೆಂತಯೂ ತೋರಿದೆ. ಆದರೆ ಒಬಾಮಾನ ಈ ನಡೆ ತೀರ ಗಮನಾರ್ಹವಾದದ್ದು ಮತ್ತು ಅರ್ಥಗರ್ಭಿತವಾದದ್ದು. ನೆನಪಿಡಿ ಇದು ಮುಸ್ಲಿಂ ಜಗತ್ತಿನೊಂದಿಗಿನ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕಾ ಇಟ್ಟ ಮೊದಲ ಹೆಜ್ಜೆ. ಇದು ರೆಟರಿಕ್ ಎನ್ನುವುದು ನಿಜವಾದರೂ ಅದನ್ನು ಕೂಡ ಇಷ್ಟು ದಿನ ಹೇಳುವವರಿರಲಿಲ್ಲವೆಂಬುದರಲ್ಲಿ ಈ ರೆಟರಿಕ್ನ ಪ್ರಾಮುಖ್ಯತೆ ಅಡಗಿದೆ.


ಅಮೆರಿಕಾ ವಿಶ್ವದ ದೊಡ್ಡಣ್ಣನಂತೆಯೇ ವರ್ತಿಸುತ್ತಾ, ಹಲವಾರು ದೇಶಗಳ ಮೇಲೆ ಸವಾರಿ ಮಾಡುತ್ತಾ ಬಂದಿರುವುದು ಇತಿಹಾಸ. ಅಮೆರಿಕಾ ನವ-ವಸಾಹತುಶಾಹಿ ಆಡಳಿತವನ್ನು ಹೇರಬಯುಸುತ್ತದೆಂಬುದು ಅದರ ವಿರುದ್ಧ ಕೇಳಿ ಬರುವ ಸಾಧಾರಣ ಆರೋಪ. ಇದು ತಕ್ಕಮಟ್ಟಿಗೆ ನಿಜವೂ ಹೌದು. ಇದು ಪರಾಕಾಷ್ಠೆಗೆ ತಲುಪಿದ್ದು ಜಾರ್ಜ್ ಬುಷ್ನ ಕಾಲದಲ್ಲಿ. ಕ್ಲಿಂಟನ್ ಆಡಳಿತದ ನಂತರ ಅಮೆರಿಕಾದಲ್ಲಿ ಸಂಪ್ರದಾಯವಾದಿ ರಿಪಬ್ಲಿಕನ್ನರು ಅಧಿಕಾರಗ್ರಹಣ ಮಾಡಿದರು. ಜಾರ್ಜ್ ಬುಷ್ ಅಧ್ಯಕ್ಷರಾದರು. ಬುಷ್ ಮತ್ತು ತಂಡದ ಫಿಲಾಸಫಿ, ಅದರ ಕಾರ್ಯಚಟುವಟಿಕೆಗಳು ವಿಶ್ವದ ರಾಜಕೀಯ ನಕ್ಷೆಯನ್ನೇ ಬದಲಾಯಿಸಿಬಿಟ್ಟಿತು. ಅವರ ತಂಡದಲ್ಲಿದ್ದ ಪ್ರತಿಯೊಬ್ಬರೂ - ಡಿಕ್ ಚೆನಿ, ಕೊಲಿನ್ ಪವೆಲ್, ಡೊನಾಲ್ಡ್ ರಮ್ಸ್ಫೆಲ್ಡ್, ಕಾಂಡೊಲೀಸಾ ರೈಸ್, ಆರ್ಮಿಟೇಜ್, ವುಲ್ಫೋವಿಟ್ಜ್ - ಮಿಲಿಟರಿ ಹಿನ್ನಲೆಯಿಂದ ಬಂದವರಾಗಿದ್ದರು, ಉಗ್ರ ಸಂಪ್ರದಾಯವಾದಿಗಳಾಗಿದ್ದರು. ಇವರನ್ನು ಇವರು ವಲ್ಕನ್ಸ್ ಎಂದು ಕರೆದುಕೊಂಡರು. ಇವರು ವಿಶ್ವದ ಶಕ್ತಿ ರಾಜಕಾರಣದಲ್ಲಿ ಅಮೆರಿಕಾಗಿರುವ ಪ್ರತ್ಯೇಕ ಸ್ಥಾನ ಮತ್ತದರ ಮಿಲಿಟರಿ ಶಕ್ತಿಗೆ ಧಾರ್ಮಿಕ ಸಂಪ್ರದಾಯವಾದಿ ನೆಲೆಗಟ್ಟಿನಲ್ಲಿ ಹೊಸ ಅರ್ಥವನ್ನೂ, ಆಯಾಮವನ್ನೂ ಕೊಡತೊಡಗಿದರು.

ಇವರ ನಡುವಲ್ಲೇ ಮೂಲಭೂತವಾದಿಗಳಾದ ನಿಯೋಕಾನ್ಸ್ ಹುಟ್ಟುಕೊಂಡರು. ಇವರ ಮುಖ್ಯ ಸಿದ್ಧಾಂತ ಮಿಲಿಟರಿ ಶಕ್ತಿಯ ಪರಮಾಧಿಪತ್ಯ. ಇವರ ಪ್ರಕಾರ ಎರಡು ದೇಶಗಳ ನಡುವಿನ ಸಂಬಂಧದ ಮೂಲಧಾತು ಅವುಗಳ ಮಿಲಿಟರಿ ಶಕ್ತಿ ಮತ್ತು ಅದನ್ನು ಬಳಸುವ ಉತ್ಸುಕತೆ. ಇಲ್ಲಿ ಮೂಲಧಾತುವಾಗಿ ಹರಿಯುತ್ತಿದ್ದುದು - ಅಮೆರಿಕನ್ ನಂಬಿಕೆಗಳನ್ನು, ಜೀವನವಿಧಾನವನ್ನೂ ಜಗತ್ತಿನಾದ್ಯಂತ ಹರಡಲು, ಅಮೆರಿಕಾ ನವ-ವಸಾಹತುಶಾಹಿಯನ್ನು ಸ್ಥಾಪಿಸಬೇಕು, ಇದಕ್ಕಾಗಿ ಅಮೆರಿಕಾ ತನ್ನ ಸೇನಾ ಶಕ್ತಿಯನ್ನು ಬಳಸಲು ಹಿಂದಡಿಯಿಡಬಾರದೆಂಬ ಸಿದ್ಧಾಂತ. ಇಂಥ ಆಘಾತಕಾರಿ ಸಿದ್ಧಾಂತಕ್ಕೆ ಅವರು ಸಾಲದೆಂಬಂತೆ, ಧರ್ಮದ ಆಯಾಮವನ್ನೂ ಕೊಡತೊಡಗಿದರು. ಕ್ರಿಶ್ಚಿಯನ್ ಮತ್ತು ಇಸ್ಲಾಂ ನಾಗರೀಕತೆಗಳ ಸಂಘರ್ಷ - ಛಿಟಚಿ ಠಜಿ ಛಿತಟದಚಿಣಠಟಿ ಣಜಠಡಿಥಿ ಯನ್ನು ಇವರು ಬೇಸ್ ಆಗಿರಿಸಿಕೊಂಡಿದ್ದರು. ಇವರ ಮನಸ್ಸಿನಲ್ಲಿ ಕೊರೆಯುತ್ತಿದ್ದುದು ಮಧ್ಯಪ್ರಾಚ್ಯ, ಅದರಲ್ಲೂ ಇರಾಕ್. ಅವರೆಲ್ಲರಿಗೂ ಇರಾಕ್ನಲ್ಲಿನ ಆಡಳಿತದಲ್ಲಿ ಬದಲಾವಣೆ ಬೇಕಾಗಿತ್ತು, ಅದು ಅಮೆರಿಕನ್ ದಾಳಿಯಿಂದಲಾದರೂ ಸರಿ.


ನೆನಪಿಡಿ ಇದು 9/11ಗೂ ಹಿಂದೆಯೇ ಚಾಲ್ತಿಯಲ್ಲಿತ್ತು. ಇರಾಕನ್ನು ವಶಪಡಿಸಿಕೊಂಡರೆ, ಮಧ್ಯಪ್ರಾಚ್ಯದ ತೈಲ ನಿಕ್ಷೇಪಗಳ ಮೇಲೆ ಹಿಡಿತ, ಆ ಪ್ರದೇಶದಲ್ಲಿ ಅಮೆರಿಕಾದ ಪ್ರಾಧಾನ್ಯ-ಪ್ರಭುತ್ವ, ಹೀಗೆ ಸಕಲೆಂಟನ್ನೂ ಸಾಧಿಸಿದಂತಾಗುತ್ತದೆಯೆಂಬುದು ಅವರ ವಾದ. ದುರಾದೃಷ್ಟವೆಂದರೆ, ಇವರು ಕಾಯುತ್ತಿದ್ದಂತಹ ಅವಕಾಶವನ್ನು 9/11 ದಾಳಿಯ ಮೂಲಕ ಒಸಾಮಾ ಬಿನ್ ಲಾಡೆನ್ ಒದಗಿಸಿಬಿಟ್ಟ. ತಕ್ಷಣವೇ ಎಚ್ಚೆತ್ತ ಇವರು ತಮ್ಮ ಗುಪ್ತ ಅಜೆಂಡಾವನ್ನು ಅಮಲು ಮಾಡಲು ನಿಂತರು. 9/11 ದಾಳಿಯ ಹಿನ್ನಲೆಯಲ್ಲಿ ಇವರ ಸಿದ್ಧಾಂತಕ್ಕೆ ವ್ಯಾಪಕ ಜನಮನ್ನಣೆ ದೊರೆಯಿತು, ಭಯೋತ್ಪಾದನೆಯ ವಿರುದ್ಧದ ಸಮರದ ಹೆಸರಿನಲ್ಲಿ ಅಮೆರಿಕಾ ಮುಸ್ಲಿಂ ಜಗತ್ತಿನ ಮೇಲೆ ಮುರಕೊಂಡು ಬಿತ್ತು. ಅಫಘಾನಿಸ್ತಾನದ ನಂತರ ಇಲ್ಲ-ಸಲ್ಲದ ನೆವ ಹೇಳಿ, ಇರಾಕ್ ಮೇಲೂ ಅಮೆರಿಕಾ ಯುದ್ಧ ಸಾರಿತು. ಇತ್ತ ನಿಯೋಕಾನ್ಸ್ ವಿಜಯೋತ್ಸವ ಆಚರಿಸಿಕೊಂಡರೆ, ಅತ್ತ ಮುಸ್ಲಿಂ ಜಗತ್ತಿನಲ್ಲಿ ಒಸಾಮಾ ಹೊತ್ತಿಸಿದ ಅಮೆರಿಕಾ ವಿದ್ವೇಶದ ಕಿಡಿ ಹೊತ್ತಿ ಉರಿಯಿತು. ಅಮೆರಿಕಾದ ಈ ಮನೋಧರ್ಮ ಜಿಹಾದ್ನ ಸದ್ದಡಗಿಸಲಿಲ್ಲ, ಬದಲಿಗೆ ಮುಸ್ಲಿಂ ಜಗತ್ತಿನಲ್ಲಿ ಅದಕ್ಕೊಂದು ಕೆಚ್ಚೆದೆಯ ಹೋರಾಟದ ಇಮೇಜನ್ನು ದಯಪಾಲಿಸಿತು. ಅದಕ್ಕೆ ಸಮರ್ಥಕರನ್ನು ಹುಡುಕಿಕೊಟ್ಟಿತು. ವಿಶ್ವಶಾಂತಿಯೆನ್ನುವುದು ಆವಿಯಾಗಿ ಮರೀಚಿಕೆಯಾಯಿತು.


ಒಬಾಮಾನ ಗೆಸ್ಚರ್ರೂ ರೆಟರಿಕ್ಕುಗಳನ್ನು ನಾವು ಈ ಹಿನ್ನಲೆಯಲ್ಲಿ ನೋಡಬೇಕು. ಆಗಲೇ ಅದರ ಪ್ರಾಮುಖ್ಯತೆಯನ್ನು
ನಾವು ಮನಗಾಣಲಾಗುವುದು. ಅಮೆರಿಕಾದ ವಿದೇಶೀ ನೀತಿಗಳಲ್ಲಿ ಐರೋಪ್ಯ ಮತ್ತು ಏಷಿಯನ್ ಜಗತ್ತುಗಳ ಸೂಕ್ಷ್ಮಗಳನ್ನರಿತವರಿದ್ದರೇ ಹೊರತು, ಮುಸ್ಲಿಂ ಜಗತ್ತಿನ ಸೂಕ್ಷ್ಮಗಳನ್ನರಿತವರಿರಲಿಲ್ಲ. ಅದೂ ಕೂಡ ಈ ಕರ್ಷಣಗಳಿಗೆ ದಾರಿ ಮಾಡಿಕೊಟ್ಟಿರಬಹುದು. ಆದರೆ ಮುಸ್ಲಿಂ ಮಧ್ಯ ಹೆಸರುಳ್ಳ ಒಬಾಮಾ ಅಮೆರಿಕಾದ ಅಧ್ಯಕ್ಷನಾಗುವುದರೊಂದಿಗೆ ಆ ಕೊರತೆ ಗಣನೀಯವಾಗಿಯೇ ನೀಗಿದಂತಾಗಿದೆ. ಅಮೆರಿಕಾದ ದೊಡ್ಡಣ್ಣಗಿರಿ ನಿಂತಿದ್ದದ್ದು ಅದರ ಮಿಲಿಟರಿ ಶಕ್ತಿಗಿಂತ ಹೆಚ್ಚಾಗಿ ಅದರ ಅಪಾರ ಆರ್ಥಿಕ ಶಕ್ತಿಯ ಮೇಲೆ. ಜಾಗತಿಕ ಆರ್ಥಿಕ ಹಿಂಜರಿತ ಅದನ್ನು ಕೆಡವಿ ಹಾಕಿಬಿಟ್ಟಿದೆ. ಇಂದು ಅಮೆರಿಕಾದ ಅರ್ಥವ್ಯವಸ್ಥೆಗೆ ಅಫಘಾನ, ಇರಾಕ್ನಂತಹ ಯುದ್ಧಗಳನ್ನು ತಾಳಿಕೊಳ್ಳುವ ಶಕ್ತಿಯಿಲ್ಲ. ಅಮೆರಿಕಾ ತನ್ನ ವಸಾಹತು ಮತ್ತು ದಾಳಿಕೋರ ಫ್ಯಾಂಟಸಿಗಳನ್ನು ನಿಜಕ್ಕೂ ತ್ಯಜಿಸಿದರೆ ಖಂಡಿತವಾಗಿಯೂ ಅದು ವಿಶ್ವಶಾಂತಿಗೆ ಬರೆದ ಮುನ್ನುಡಿಯಾಗುತ್ತದೆ. ಇದು ಆ ಹೊಸ ಆರಂಭವಾ?, ವಿಶ್ವಶಾಂತಿಗೆ ಬರೆದ ಮುನ್ನುಡಿಯಾ? ಇದು ಹೊಸ ಆರಂಭವಲ್ಲದಿರಬಹುದು, ಆದರೆ ಒಬಾಮಾನ ಮುಸ್ಲಿಂ ಜಗತ್ತಿನೊಡನೆಯ ಈ ಸಂವಾದ ವಿಶ್ವಶಾಂತಿಗೆ ಮತ್ತು ಹೊಸ ಆರಂಭಕ್ಕೊಂದು ಶುಭಸಂಕಲ್ಪವಂತೂ ಹೌದು.
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ)

One thoughts on “`ಹೊಸ ಆರಂಭ'ವೊಂದರ ಶುಭಸಂಕಲ್ಪ - america - islam - obama - a triangle love - story

Proudly powered by Blogger
Theme: Esquire by Matthew Buchanan.
Converted by LiteThemes.com.