ಶಾರದ ಪ್ರಸಾದ್ ಒಂದು ನೆನಪು


(ಈ ಭಾನುವಾರ ವಾರಪತ್ರಿಕೆಯಲ್ಲಿ ಪ್ರಕಟಿತ)
ಮೂಲ ಲೇಖಕರು - ಸುಗತಾ ಶ್ರೀನಿವಾಸರಾಜು
ಕೃಪೆ - ಔಟ್ಲುಕ್

ಶಾರದಾಪ್ರಸಾದ್ ಕಾಲವಾಗಿ ವರ್ಷವಾಯಿತು. ಸೆಪ್ಟೆಂಬರ್ 2, 2008 ರಂದು ಅವರ ಸಾವಿನ ಸುದ್ದಿ ಒಂದು ಜಿಚಿಛಿಣ ಣಚಿಣಜಟಜಟಿಣ ಆಗಿತ್ತು ಅಷ್ಟೆ. ಅದರಲ್ಲಿ ಯಾವುದೇ ಉತ್ಪ್ರೇಕ್ಷೆಯಾಗಲೀ ತೋರಿಕೆಯಾಗಲೀ ಇರಲಿಲ್ಲ, ಅವರಂತಯೇ. ಆದರೆ ಶಾರದಾ ಪ್ರಸಾದರ ಸಾವು ಅವರ ಕುರಿತ ಕೌತುಕದ ಪ್ರಶ್ನೆಯೊಂದನ್ನು ತಣಿಸಿಲ್ಲ. ಅವರು ಪ್ರಧಾನಿ ಕಾರ್ಯಾಲಯದ ದಿನಗಳ ಬಗ್ಗೆ ಪುಸ್ತಕವನ್ನಂತೂ ಬರೆಯಲಿಲ್ಲ, ಹೋಗಲೀ ಆ ದಿನಗಳ ಟಿಪ್ಪಣಿ ಇಲ್ಲ ಡೈರಿಯನ್ನಾದರೂ ಇಟ್ಟಿದ್ದಾರಾ? ಈ ಪ್ರಶ್ನೆಗೆ ಉತ್ತರ ಹೌದು!

ಶಾರದಾ ಪ್ರಸಾದರ 5 ದಶಕಗಳ ಪ್ರೀತಿಯ ಓಡನಾಡಿ, ಅವರ ಧರ್ಮಪತ್ನಿ ಕಮಲಮ್ಮನವರು ಈ ಖಾಸಗೀ ಪುಟಗಳಲ್ಲಿ ಹೈ ಆಫೀಸಿನ ಸ್ವಾರಸ್ಯಕರ ಜ್ಯೂಸೀ ಸುದ್ದಿಗಳಿಲ್ಲದಿರುವುದನ್ನು ಬದಲಿಗೆ ಈ ಪುಟಗಳು ತಮ್ಮ ನೈತಿಕ ಪ್ರಜ್ಞೆಯ ಬಗೆಗಿನ ಸ್ವವಿಮರ್ಶೆಯಿಂದ ತುಂಬಿರುವುದನ್ನೂ ಹೊರಗೆಡವಿದ್ದಾರೆ. ಇಲ್ಲಿ ತನ್ನ ನಿಯಮನಿಷ್ಠೆ ಮತ್ತು ಭರವಸೆಗಳ ಕಠಿಣ ವಿಮರ್ಶೆಯಿದೆ. ತಾನಾರಿಸಿಕೊಂಡ ದಾರಿ ಮತ್ತು ತನ್ನ ನಡಿಗೆಯ ಕುರಿತು ಸಣ್ಣ ತಲ್ಲಣವಿದೆ. ಸ್ವಪ್ರತಿಷ್ಠೆಯ ಎಲ್ಲ ಲವಲೇಷಗಳನ್ನೂ ತೊಡೆದುಹಾಕುವ ಧ್ಯಾನಸ್ಥ ಪ್ರಯತ್ನವಿದೆ. ತನ್ನ ಅಹಂನ ಪ್ರತಿಯೊಂದು ಎಳೆಯನ್ನೂ ಮೈಕ್ರೋಸ್ಕೋಪಿನಡಿಯಲ್ಲಿಟ್ಟು ಪರೀಕ್ಷಿಸುತ್ತಾರೆ. ತನ್ನೆಲ್ಲಾ ಕಪಟತೆಗಳೊಂದಿಗೆ ಯಾವುದೇ ಮುಜುಗರವಿಲ್ಲದೆ ಮುಖಾಮುಖಿಗೆ ಕೂರುತ್ತಾರೆ. ಇನ್ನು ಕೆಲವಂತೂ ತಪ್ಪೊಪ್ಪಿಗೆಯ ಪತ್ರಗಳಂತಿವೆ. ಇವೆಲ್ಲವೂ ಯಾವುದೇ ಕಥನ ಕ್ರಮದಲಿಲ್ಲ ಅಥವಾ ಕ್ರನಲಾಜಿಕಲ್ ಆಗಿಯೂ ಇಲ್ಲ. ಶಾರದಾ ಪ್ರಸಾದರು ಬಿಟ್ಟು ಹೋಗಿರುವ ಸಾವಿರಾರು ಕಾಗದ ಪತ್ರಗಳಲ್ಲಿ ಇವು ಚೆದುರಿ ಹೋಗಿವೆ. ಪರಸ್ಪರ ಕೆಸರೆರಚಾಟ, ಬೈಗುಳ, ನಿಂದನೆಗಳ ಕೃತಕತೆಗಳು ನಮ್ಮ ಸಾರ್ವಜನಿಕ ರಂಗವನ್ನು ಆಳುತ್ತಿರುವ ಇಂದಿನ ದಿನಮಾನಸದಲ್ಲಿ ಇವು ವ್ಯಕ್ತಿಯೊಬ್ಬನ ಸಾರ್ವಜನಿಕ ಮತ್ತು ವಯಕ್ತಿಕ ವ್ಯಕ್ತಿತ್ವಗಳ ಸಮಗ್ರತೆಯ ಅಪೂರ್ವ ಋಜುವಾತು.
ಒಂದೆರಡು ಸ್ಯಾಂಪಲ್ಲುಗಳು ಇಲ್ಲಿವೆ ನೋಡಿ.

1957ರಲ್ಲಿ ಸರಕಾರೀ ಸೇವೆಗೆ ಸೇರುವ ಮೊದಲು ಅವರು ಮಾಡಿದ ಪ್ರಾರ್ಥನೆ:
"ನಾನು ಒಂದು ಮೆಟ್ರಾಪಾಲಿಟನ್ ನಗರದ [ಬಾಂಬೆ] ವೃತ್ತಿಗೆ [ಪತ್ರಿಕೋದ್ಯಮ] ಗುಡ್ಬೈ ಹೇಳಿ ರಾಷ್ಟ್ರದ ರಾಜಧಾನಿಯ ಸರಕಾರೀ ಸೇವೆಯಲ್ಲಿ ಸೆಟ್ಲ್ ಆಗುತ್ತಿದ್ದೇನೆ. ಸರಕಾರೀ ಅಧಿಕಾರಿಯೊಬ್ಬನ ತೋರಿಕೆಯಾಗಲೀ ಅಧಿಕಾರದ ದರ್ಪವಾಗಲೀ ಇರಬಾರದು, ಬದಲಿಗೆ ನಾನು ಜನರ ಸೇವಕನೆಂಬ ಭಾವವಿರಲಿ. ಮೇಲಿನವರ ಮೇಲೂ ಮತ್ತೊಬ್ಬರಿದ್ದಾರೆಂಬ ನಿಜ ನನ್ನ ಬುದ್ದಿ ಮನಸ್ಸುಗಳಲ್ಲಿ ನಾಟಲಿ. ಜನಹಿತ ಉಳಿದೆಲ್ಲವಗಿಂತಲೂ ಮೇಲಾದದ್ದೆಂಬುದು ನನ್ನ ಜ್ಞಪ್ತಿಯಲ್ಲಿರಲಿ. ರಾಜಧಾನಿಯ ವೈಭವ, ಅಧಿಕಾರ, ಸೊಕ್ಕು, ಪ್ರಾಮುಖ್ಯತೆ ನನ್ನನ್ನು ಆವರಿಸಿಕೊಳ್ಳದಿರಲಿ. ನನ್ನ ಆತ್ಮಸಾಕ್ಷಿಯೇ ನನ್ನ ಮಾರ್ಗದರ್ಶಿಯೆಂಬ ಜ್ಞಾನವೇ ನನ್ನ ರಕ್ಷೆಯಾಗಿರಲಿ."

ಒಂದು ಹಂತದಲ್ಲಿ ಶಾರದಾ ಪ್ರಸಾದರು ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮ ಜೀವನ ಮತ್ತು 1942ರ `ಕ್ವಿಟ್ ಇಂಡಿಯಾ' ಚಳುವಳಿಯ ಕಾಲದಲ್ಲಿ ಅವರು ಬೆಂಗಳೂರು ಮತ್ತು ಮೈಸೂರು ಸೆರೆಮನೆಗಳಲ್ಲಿ ಕಳೆದ ಕಾಲವನ್ನು ಕಥನ ರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ. ಅವರು ಆಗ ಮೈಸೂರು ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿದ್ದರು. ಇದರ ಕೆಲ ಭಾಗಗಳು ಕಾಲ್ಪನಿಕ ಸಂದರ್ಶನ ಅಥವಾ ಸಂವಾದದ ರೂಪದಲ್ಲಿದೆ. ಈ ಕಾಗದಗಳೆಲ್ಲಾ ಚಿಂದಿಯಾಗುವ ಹಂತದಲ್ಲಿವೆ. ಇದಲ್ಲದೆ ಪ್ರಸಾದರು ನಂತರ ಅನೇಕ ಕಡೆ ಹೊಡೆದು ಹಾಕಿದ್ದಾರೆ ಕರೆಕ್ಷನ್ಗಳನ್ನು ಮಾಡಿರುವುದರಿಂದ ಇದನ್ನು ಒಂದು ಕಥಾನಕಕ್ಕೆ ತರುವುದು ಬಹುಕಷ್ಟವಾಗಿದೆ. ಇದಲ್ಲದೆ ಇದು ಅಪೂರ್ಣವೂ ಆಗಿದೆ. ಬರೆಯುವ ಮಧ್ಯದಲ್ಲಿಯೇ ಅವರಿಗೆ ಆ ಐಡಿಯಾದಲ್ಲಿ ಆಸಕ್ತಿ ಹೊರಟುಹೋಗಿದೆ, ಇಲ್ಲ ತನಗೇ ಒಂದು ಇತಿಹಾಸವನ್ನು ಬರೆದುಕೊಳ್ಳುವುದು ಅತಿಯಾಯಿತು ಅನ್ನಿಸಿತೇನೋ, ಅಂತೂ ಮಧ್ಯದಲ್ಲಿಯೇ ನಿಲ್ಲಿಸಬಿಟ್ಟಿದ್ದಾರೆ. ಆದರೆ ದಕ್ಕಿರುವಷ್ಟರಲ್ಲಿ ಅವರ ಚಿಂತನೆಗಳು ಸ್ಫಠಿಕದಷ್ಟೇ ಸ್ಫುಟವಾಗಿವೆ.

ಕೆಲವು ಸ್ಯಾಂಪಲ್ಲುಗಳು :
"ಆತ ಸೆಂಟ್ರಲ್ ಹಾಲ್ನ ಮಧ್ಯರಾತ್ರಿಯ ಸಮಾವೇಶಕ್ಕೆ ಹೋಗಲಿಲ್ಲ. ಆತ ಆನಿವರ್ಸರಿಗಳ ಆಚರಣೆಗಳಿಂದ ದೂರ. ಆತ ನಿಜ ಅನುಭವವನ್ನು ಬೇಡುತ್ತಾನೆ, ಆದರೆ ಅದನ್ನು ಜೀರ್ಣಿಸಿಕೊಳ್ಳಲು ಆತನಿಗೆ ಶಕ್ತಿಯಿಲ್ಲ. ಬದಲಿಗೆ ಆತ ಮನೆಯಲ್ಲೇ ಕೂತ, ಒಬ್ಬನೇ. ಆ ದಿನ, ತನ್ನ ಇಂದಿನ ಅರ್ಧ ವಯಸ್ಸಿನಲ್ಲಿ ಸ್ವಾತಂತ್ರ್ಯವನ್ನು ಸ್ವಾಗತಿಸಿದ ಸಂಭ್ರಮ, ಕೋಟ್ಯಾಂತರರಲೊಬ್ಬನಾಗಿ ಜೀವನದ ಅವಿಸ್ಮರಣೀಯ ರಾತ್ರಿಯನ್ನು ಬಾಂಬೆಯ ಅಂದಿನ ಕಲರವದಲ್ಲಿ ಕಳೆದ ಚಿತ್ರಗಳು ತನ್ನ ಜ್ಞಾಪಕ ಚಿತ್ರಶಾಲೆಯಲ್ಲಿ ಕದುಲಿ ಮರೆಯಾದವು. ಆತನ ಮನಸ್ಸು 5 ವರ್ಷಗಳ ಹಿಂದೆ ಸರಿದು ನಿಂತಿತ್ತು. 42 ಮತ್ತು ಆಗಸ್ಟ್ ಜನ ಆತನ ಭಾಷಣವನ್ನು ಕೇಳಲು ನೆರೆದಿದ್ದರು. ಆತನಿಗೆ ಮಾತನಾಡುವ ಮಾಡರೇಟ್ ಆದ ಕಲೆಯಿತ್ತು. ಅದರ ಆಧಾರದ ಮೇಲೆಯೇ ಆತ ವಿಶ್ವವಿದ್ಯಾಲಯ ಯೂನಿಯನ್ನ ಕಾರ್ಯದರ್ಶಿಯಾಗಿದ್ದ. ನಗರದ ರಾಜಕೀಯ ನಾಯಕರ ಮೇಲೆ ಸರ್ಕಾರ ಮುರಕೊಂಡು ಬಿದದ್ದರಿಂದ ಎಲ್ಲರ ಗಮನ ಈತ ಮತ್ತು ಈತನ ಕೆಲವು ಸ್ನೇಹಿತರ ಮೇಲಿತ್ತು..........

ಒಂದೆರಡು ವಾರಗಳು ಹೀಗೇ ನಡೆದವು. ಆತನ ಹೆಸರಲ್ಲಿ ಜೈಕಾರಗಳೂ ಕೇಳಿಬಂದವು. ಆದರೆ ಒಂದು ಸುಂದರ ಸಂಜೆ ಆತನ ಭಾಷಣದ ನಡುವೆ ಪವರ್ ಸ್ವಚ್ ಆಫ್ ಆದಂತೆನಿಸಿತು. ಆತ ಮಾತನಾಡುವುದನ್ನು ಮುಂದುವರೆಸಿದನಾದರೂ ಆತನಲ್ಲಿನ ಮ್ಯಾಜಿಕ್ ಮರೆಯಾಗಿತ್ತು. ಆತ ಆ ಕ್ಷಣವನ್ನು ಅನೇಕ ಬಾರಿ ಒಂದು ನಾಸ್ಟಾಲ್ಜಿಕ್ ಆದ ನೋವಿನಿಂದ ಮರುಜೀವಿಸಿದ್ದ, ಸತ್ಯದ ಆ ಕ್ಷಣ ತನ್ನ ಜೀವನದಲ್ಲಿ ಅಷ್ಟು ಬೇಗ ಬಂದದ್ದಕ್ಕೆ ನಿರಾಳನಾಗಿದ್ದ. ಆ ಕ್ಷಣದಲ್ಲಿ ಆತನೊಳಗಿನವನೊಬ್ಬ ಅಧಿಕಾರಯುತವಾಗಿ ಪ್ರಶ್ನಿಸಿದ್ದ - ಅವರು ನಿನ್ನನ್ನು ಹಾಗೆ ಹೊಗಳಲು ನಿನ್ನೊಳಗೇನಿದೆ? ಸಾವಿರಾರು ಕಿವಿಗಳು ಆತನನ್ನು ಕೇಳುತ್ತಿದ್ದವು, ಆದರೆ ಆತನ ಕಿವಿಗಳು ಈ ಮಾತುಗಳನ್ನಷ್ಟೇ ಕೇಳಿಸಿಕೊಂಡಿದ್ದವು. ತಕ್ಷಣ ಆ ಪದಗಳು ಆತನ ಜೀವನದಲ್ಲಿ ಯಾವುದೇ ಬದಲಾವಣೆ ತರಲಿಲ್ಲ - ಮೆರವಣಿಗೆಗಳು, ಪೋಲೀಸರ ಆಜ್ಞೆಗಳನ್ನು ಧಿಕ್ಕರಿಸುವುದು, ಲಾಠೀ ಏಟು, ಜೈಲು, ಬಿಡುಗಡೆ, ಸಭೆಗಳು. ಮತ್ತೆ ಜೈಲು..........

ಆತನ ಹುಟ್ಟೂರ ಅತಿಥಿ ಹೊರನಡೆಯುತ್ತಾನೆ. ಆತ ಮತ್ತೆ ಆಲೋಚಮಗ್ನನಾಗುತ್ತಾನೆ. ಜ್ಯುಬಿಲಿಯ ಮೇಲೆ ಬರೆದಿರುವ ಅನೇಕ ಲೇಖನಗಳ ಕುರಿತು ಕೇಳಲಾಗುತ್ತಿರುವ ಪ್ರಶ್ನೆಗಳ ಕುರಿತು ಆಲೋಚಿಸುತ್ತಾನೆ.

ನೀವು ಜೈಲಿನಲ್ಲಿ ಒಂದು ವರ್ಷ ಕಳೆದರಲ್ಲವೆ?
ಹೌದು, ಹತ್ತೂವರೆ ತಿಂಗಳುಗಳು. ನನ್ನ ಸ್ಕೂಲು ಕಾಲೇಜಿನ ಕಲಿಕೆಗಿಂತಲೂ ಹೆಚ್ಚಿನದನ್ನು ನಾನು ಈ ತಿಂಗಳುಗಳಲ್ಲಿ ಕಲಿತೆ. ಬಹುಜನರ ಮಾನಸಿಕ ಶಕ್ತಿ ಹದಿನೆಂಟರ ನಂತರ ಇಳಿಮುಖವಾಗುತ್ತಾ ಹೋಗುತ್ತದೆ ಎಂಬುದು ನನ್ನದೊಂದು ಥಿಯರಿ. ಇದು ನನ್ನ ವಿಷಯದಲ್ಲಂತೂ ನಿಜ. ಆಗ ಬೆಂಗಳೂರು ಜೈಲಿನಲ್ಲಿ ಐನೂರು-ಆರುನೂರು ರಾಜಕೀಯ ಖೈದಿಗಳೂ ಸುಮಾರು 1500 ಕನ್ವಿಕ್ಟ್ಗಳೂ ಇದ್ದರು.
..........ಜೈಲರ್ ರಿಜಿಸ್ಟರ್ನಲ್ಲಿ ಎಂಟ್ರಿ ಮಾಡಿ ಅವರ ಬೆರಳಚ್ಚನ್ನೆಲ್ಲಾ ಪಡೆದುಕೊಂಡ ನಂತರ ಒಬ್ಬ ಖೈದಿಯನ್ನು ಕರೆದು ಅವರನ್ನು ಅವರ ವಾಡರ್್ಗೆ ಕರೆದುಕೊಂಡು ಹೋಗಲು ಸೂಚಿಸಿದ. ಆತನೊಬ್ಬ ಹಳ್ಳಿಯವನು. ಆ ಬಿಳೀ ಗಿರಿಜಾ ಮೀಸೆ, ಸುಕ್ಕುಗಟ್ಟಿದ ಮುಖ, ಆತ ಕಂಕ್ರೇಜ್ ಎತ್ತನ್ನು ಗುರುತಿಗೆ ತಂದ. ಆತ ಕಳ್ಳತನಕ್ಕೆ 8ನೇ ಬಾರಿ ಸಜೆ ಅನುಭವಿಸುತ್ತಿದ್ದನೆಂಬುದು ಅವರಿಗೆ ತರುವಾಯ ತಿಳಿದು ಬಂತು. ಇವರು ಆತನ ಜೊತೆ ಒಂದೂವರೆ ಫರ್ಲಾಂಗ್ ದೂರ ನಡೆದರು. ಆತ ವಿದ್ಯಾರ್ಥಿಗಳ ಕೆಚ್ಚೆದೆಯ ಕೆಲಸಗಳ ಸುದ್ದಿ ಜೈಲೊಳಗೂ ಹರಡಿದ್ದು ತಾವೆಲ್ಲಾ ಅವರ ಕುರಿತಾಗಿ ಹೆಮ್ಮೆ ಪಡುತ್ತಿರುವುದಾಗಿ ಹೇಳಿದ. ಅವರ ಬ್ಯಾಗುಗಳನ್ನು ವಾಡರ್್ನಲ್ಲಿರಿಸಿದಾಗ ಒಳ್ಳೆ ಸಲಹೆ ಕೊಟ್ಟ: "ನಿಮ್ಮ ವಸ್ತುಗಳನ್ನು ಜೋಪಾನ ನೋಡಿಕೊಳ್ಳಿ. ಇಲ್ಲಿ ಎಲ್ಲರೂ ಕಳ್ಳರೇ!"

ಆದರೆ ಜೈಲುಗಳು ವಿಶ್ವವಿದ್ಯಾಲಯಗಳಾಗಿರಬೇಕಿತ್ತಲ್ಲವೇ?
ಒಂದು ರೀತಿಯಲ್ಲಿ ಅವು ವಿಶ್ವವಿದ್ಯಾಲಯಗಳೇ ಆಗಿದ್ದವು. ನಾವು ಸ್ವಂತವಾಗಿ ತುಂಬಾ ಓದಿಕೊಂಡೆವು. ಇದಲ್ಲದೆ ನಾವು ಕೆಲವು ತಿಂಗಳನ್ನು ಕಳೆದ ಮತ್ತೊಂದು ಜೈಲಿನಲ್ಲಿ ವಿದ್ಯಾಥರ್ಿಗಳು ರೈತಾಪಿಗರಿಗೆ ಪಾಠ ಮಾಡುತ್ತಿದ್ದರು. ಕಾಂಗ್ರೆಸ್ನ ಹಿರಿಯರು ಬೆಂಗಳೂರಿನ ಜೈಲಿನಲ್ಲಿ ಅಂತಹ ಯಾವುದೇ ಪ್ರಯತ್ನಕ್ಕೆ ಕೈಹಾಕಲಿಲ್ಲ. ಅವರು ಅವರಲ್ಲೇ ಕಳೆದುಹೋಗಿದ್ದರಲ್ಲದೇ ವಿದ್ಯಾರ್ಥಿಗಳ ಕಂಡರೆ ಅಸಹನೆ ವ್ಯಕ್ತಪಡಿಸುತ್ತಿದ್ದರು. ಇದಲ್ಲದೆ ಕೆಲವು ಹಿರಿಯರು ಜೈಲಿನ ಅಧಿಕಾರಿಗಳೊಂದಿಗೆ ಸೇರಿ ಬ್ಲಾಕ್ ಮಾರ್ಕೆಟ್ ಡೀಲಿಂಗುಗಳನ್ನೆಲ್ಲಾ ನಡೆಸುತ್ತಿದ್ದರೆಂದು ಕೆಟ್ಟ ಕಥೆಗಳು ಹರಡಿದ್ದವು. ಗಾಂಧೀ ಕಾಲದಲ್ಲಿ ರಾಜಕೀಯ ಶುದ್ಧವಾಗಿದ್ದವು ಎಂಬ ಆ ಕಾಲದಲ್ಲಿ ಇದು ನನಗ್ಯಾಕೋ ಅನುಮಾನ - ಆದರೆ 1942ರ ವೇಳೆಗಾಗಲೇ ರಾಜಕೀಯದ ಮಟ್ಟ ಕುಸಿದಿದ್ದರೆ ಮಾತ್ರ......

...........ತಿಂಗಳುಗಳ ಕಾಲ ಜೈಲುವಾಸ, ಇವೆಲ್ಲವನ್ನೂ ಆತ ಅನುಭವಿಸಿಬೇಕಿತ್ತು. ಆದರೆ ಎಲ್ಲೋ ಆತನ ಅಂತರಾಳದಲ್ಲಿ ನಿರ್ಧಾರ ತೆಗದುಕೊಂಡಾಗಿತ್ತು: ರಾಜಕೀಯ ಆತನಿಗಲ್ಲ. ಆತನಲ್ಲಿ ಇಲ್ಲ ವಿಶ್ವಾಸದ ಅಥವಾ ಮಹತ್ವಾಕಾಂಕ್ಷೆಯ ಕೊರತೆಯಿತ್ತು, ಇಲ್ಲ ಆತ ಆತನೊಂದಿಗೆ ತುಂಬಾ ಪ್ರಾಮಾಣಿಕನಾಗಿದ್ದ."

1950ರಲ್ಲಿ ಕಮಲಮ್ಮನವರಿಗೆ ಬರೆದ ಪತ್ರದಲ್ಲಿ ಶಾರದಾ ಪ್ರಸಾದರು ಹೀಗೆ ಬರೀತಾರೆ:
"ನೀನು ನನ್ನದು ಆತ್ಮರತಿಯೆಂದು ದುಷಿಸುತ್ತಿರುವೆಯಲ್ಲ? ಇದು ನನ್ನ ಕಾಲೆಳೀಲಿಕ್ಕಾ? ಆದರೆ ನಾನು ಆತ್ಮರತಿಗೆ ತೊಡಗಿಲ್ಲ ಎಂಬುದು ನನ್ನ ನಂಬಿಕೆ. ನಾನು ನನ್ನನ್ನು ಇತರರು ನನ್ನನ್ನು ನೋಡಿದಂತೆಯೇ ನೋಡುತ್ತೇನೆ. ನನ್ನ ಆತ್ಮವಿಮರ್ಶೆ ಮತ್ತು ಅನುಮಾನಗಳ ಬಗ್ಗೆ ನಿನಗೆ ಹೇಳಿಲ್ಲ. ನನ್ನಲ್ಲಿ ಸ್ವಲ್ಪಮಟ್ಟಿಗೆ ಅವಶ್ಯವಿಲ್ಲದ ಉಡಾಫೆಯಿರಬಹುದು....ನಾನು ಈ ನನ್ನ ಉಡಾಫೆಯಂತೆ ತೋರುವ ಆತ್ಮತೃಪ್ತಿಯೊಡನೆ ಬಹುವರ್ಷದಿಂದ ನಡೆಸುತ್ತಿರುವ ಹೋರಾಟದ ಕುರಿತು ನಿನಗೆ ಹೇಗೆ ಹೇಳಲಿ? ನನ್ನ ಸಾಧನೆಗಳೇನು ಹೇಳಿಕೊಳ್ಳುವಂತಹವಲ್ಲ. ನಾನು ಹೃದಯಪೂರ್ಣವಾಗಿ ಇತರರಿಗೆ ಉಪಯೋಗವಾಗುವಂತೆ ಬದುಕಲು ಪ್ರಯತ್ನಿಸಿದರೂ ನನ್ನ ಸಾಮಥ್ರ್ಯಗಳು, ಸಾಧನೆಗಳು ಮತ್ತು ಅವು ಉಪಯೋಗವಾಗುತ್ತಿರುವ ರೀತಿಯಿಂದಾಗಿ ನನ್ನ ಪ್ರಯೋಜನ ಕಡಿಮೆಯೇ ಇರುತ್ತದೆ. ಇದು ನನ್ನನ್ನು ಬಾಧಿಸುತ್ತಿದೆ. ಆದರೆ ವಾಸ್ತವದಲ್ಲಿ ನಾನು ಎಲ್ಲರಿಗೂ ಪ್ರಯೋಜನಕಾರಿಯಾಗಿರಲಾರೆ. ಪ್ರತಿಯೊಬ್ಬರು ಒಂದೊಂದು ಸರ್ಕಲ್ನಲ್ಲಿ ಜೀವಿಸಬೇಕಾಗುತ್ತದೆ. ದಿನೇದಿನೇ ನನ್ನ ಸರ್ಕಲ್ ಕಿರಿದಾಗುತ್ತಿದೆಯಂಬುದೇ ನನ್ನ ಭಯ. ಇದರಿಂದ ನಾನು ಹೆಚ್ಚು ಹೆಚ್ಚು worthless ಆಗಿಬಿಡುವನೇನೋ........ಹಿಂದೊಮ್ಮೆ ನನಗಿದ್ದ ಅರ್ಪಣಾ ಮನೋಭಾವ ಈಗಿಲ್ಲ. ಆದರೆ ಈಗಲೂ ನನಗೆ ನಂಬಿಕೆಯಿದೆ ನಾನು ಬದುಕಿರುವಾಗಲೆಲ್ಜೀವಚ್ಛವವಾಗದಂತೆ, ನಾನು ಗತಿಸಿದ ಮೇಲೆ ನನ್ನನ್ನು ಬಲ್ಲವರು ನನ್ನ ನೆನಪಿಗೆ ಶಪಿಸದಂತೆ ಬದುಕಬಲ್ಲೆ. ಇದನ್ನೇ ನೀನು ಆತ್ಮರತಿ ಎಂದು ಕರೆದರೆ, ಇರಲೀ ಬಿಡು."

ಅವರ ಪತಿರಾಯರ ಕುರಿತು ಕಮಲಮ್ಮನವರ ಅತ್ಯಂತ ಗಾಢ ನೆನಪಿನೊಂದಿಗೆ ಈ ಲೇಖನವನ್ನು ಮುಗಿಸುತ್ತೇನೆ - ಅವರು ಪ್ರಧಾನಿಗಳ ಜೊತೆ ವಿದೇಶ ಪ್ರವಾಸ ಮಾಡಿ ರಾತ್ರಿ ಸರಹೊತ್ತಿನಲ್ಲಿ ಹಿಂತುರುಗಿದಾಗ ಪತ್ನಿಯೊಂದಿಗೆ ಸ್ಕ್ರಾಬಲ್ನ ಒಂದು ಆಟ ಆಡಿ ರಿಲ್ಯಾಕ್ಸ್ ಆಗುತ್ತಿದ್ದರು. ಹೀಗೆ ಸ್ಕ್ರಾಬಲ್ನ ಒಂದು ಆಟ ಆಡಿಯೇ ಅವರು ನಿದ್ರಿಸುತ್ತಿದ್ದದು, ಅದೂ ಕೆಲ ಘಂಟೆಗಳು ಅಷ್ಟೆ, ಬೆಳಿಗ್ಗೆ ಮತ್ತೆ ಆಫೀಸು. ಸ್ಕ್ರಾಬಲ್ ಬೋರ್ಡ್ನ ಅಥವಾ ಬೇರೆಲ್ಲೇ ಆಗಲೀ ಬರಹ ಅವರಿಗೆ ನೆಮ್ಮದಿ ಕೊಡುತ್ತಿತ್ತು, ಅದು ಅವರಿಗೆ ಪೂಜ್ಯವೂ ಆಗಿತ್ತು.

Proudly powered by Blogger
Theme: Esquire by Matthew Buchanan.
Converted by LiteThemes.com.