ಭಾರತದ ಫುಟ್ಬಾಲ್ ವಿಕ್ರಮ


ಭಾರತದ ಫುಟ್ಬಾಲ್ ಕಡೆಗೂ ಮಿಂಚುತ್ತಿದೆ, ಮಿನುಗುತ್ತಿದೆ. ಮೊನ್ನೆ ಸೋಮವಾರ ಸಂಜೆ ದೆಹಲಿಯ ಡಾ. ಅಂಬೇಡ್ಕರ್ ಸ್ಟೇಡಿಯಮ್ ಕ್ಕಿಕ್ಕಿರಿದು ತುಂಬಿತ್ತು. ಹಲವಾರು ಟಿಕೆಟ್ಗಳು ಬ್ಲಾಕ್ನಲ್ಲಿ ಸೇಲಾಗಿಹೋಗಿದ್ದವು. ಆಶ್ಚರ್ಯ ಅಲ್ಲಿ ನಡೆಯುತ್ತಿದ್ದದ್ದು ಕ್ರಿಕೆಟ್ ಮ್ಯಾಚಲ್ಲ ಬದಲಿಗೆ ನೆಹರೂ ಕಪ್ ಫುಟ್ಬಾಲ್ ಟೂರ್ನಿ ಫೈನಲ್ಸ್! ಹೌದು ಫುಟ್ಬಾಲ್ ಮ್ಯಾಚ್ ನೋಡಲು ದೆಹಲಿಯ ಜನ ಬ್ಲಾಕ್ನಲ್ಲಿ ಟಿಕೆಟ್ ತೆಗೆದುಕೊಂಡು ಬಂದು ಕುಂತಿದ್ದರು. ವ್ಹಾ, ಕ್ಯಾ ಸೀನ್ ಹೈ....! ಭಾರತ ಸಿರಿಯಾ ತಂಡಗಳ ನಡುವೆ ನಡೆದ ಈ ಫೈನಲ್ಸ್ ಅತ್ಯಂತ ಜಿದ್ದಾಜಿದ್ದಿನಿಂದಲೂ ಆಸಕ್ತಿಕರವಾಗಿಯೂ ನಡೆದದ್ದು ವಿಶೇಷ. ಸದ್ಯ ಭಾರತ ಫುಟ್ಬಾಲ್ ರಾಂಕಿಂಗ್ನಲ್ಲಿ 156ನೇ ಸ್ಥಾನದಲ್ಲಿದ್ದರೆ, ಸಿರಿಯಾ 94ನೇ ಸ್ಥಾನದಲ್ಲಿದೆ. ಈ ಲೆಕ್ಕದ ಪ್ರಕಾರ ಸಿರಿಯಾ ಭಾರತಕ್ಕಿಂತಲೂ ಉತ್ತಮ ತಂಡ. ಆದರೆ ಇದೇ ಸಿರಿಯಾವನ್ನು 2007ರ ನೆಹರೂ ಕಪ್ ಫೈನಲ್ಸ್ನಲ್ಲಿ ಭಾರತ ಸೋಲಿಸಿ ಕಪ್ಪನ್ನು ಕೈವಶಪಡಿಸಿಕೊಂಡದ್ದು ಇನ್ನೂ ನೆನಪಿನಿಂದ ಮಾಸಿಲ್ಲ. ಅಂತೂ ಪಂದ್ಯ ಶುರು.


90 ನಿಮಿಷಗಳ ನಿಗದಿತ ಅವಧಿಯ ಪಂದ್ಯದಲ್ಲಿ ಎರಡೂ ತಮಡಗಳು ಅತ್ಯುತ್ತಮ ಪ್ರದರ್ಶನ ತೋರಿದರೂ, ಪಂದ್ಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದರೂ ಈರ್ವರು ತಂಡಗಳೂ ಗೋಲು ಹೊಡೆಯುವಲ್ಲಿ ವಿಫಲವಾದವು. ನಂತರದ 15 ನಿಮಿಷಗಳ ಹೆಚ್ಚುವರಿ ಸಮಯದಲ್ಲೂ ಕೂಡ ಎರಡೂ ತಂಡಗಳು ಗೋಲು ಹೊಡೆಯುವಲ್ಲಿ ವಿಫಲವಾದವು. ಆಟ ಆಸಕ್ತಿ ಕೆರಳಿಸಿತ್ತು. ಮತ್ತೊಂದು 15 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. 9 ನಿಮಿಷಗಳ ಆಟ ಕಳೆಯುವಷ್ಟರಲ್ಲೇ ದೊರೆತ ಫ್ರೀಕಿಕ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರೆನಡಿ ಸಿಂಗ್ ಗೋಲು ಗಳಿಸಿ ತಂಡ ಗೆಲುವಿನತ್ತ ಮುಖ ಮಾಡುವಂತೆ ಮಾಡಿದರು. ಆದರೆ ಕೆಲವೇ ನಿಮಿಷಗಲಲ್ಲಿ ಸಿರಿಯನ್ನರು ಕೂಡ ಗೋಲು ಗಳಿಸುವುದರೊಂದಿಗೆ ಸಮಬಲ ಸಾಧಿಸಿ ಪಂದ್ಯವನ್ನು ಮತ್ತೆ ಮೊದಲಿಗೆ ತಂದರು. ಪಂದ್ಯ ಪೆನಾಲ್ಟಿಗೆ ಹೋಗಿ ನಿಂತಿತು. ಎಲ್ಲರೂ ಉಸಿರು ಬಿಗಿ ಹಿಡಿದು ನಿಂತಿದ್ದರು. ಭಾರತದ ಪರ ಸುನೀಲ್ ಛೆಟ್ರಿ, ಸ್ಟೀವನ್ ಡಯಾನ್, ಅನ್ವರ್ ಮತ್ತು ಸುರ್ಕುಮಾರ್ ಸಿಂಗ್ ಪೆನಾಲ್ಟಿಯಲ್ಲಿ ಗೋಲುಗಳಿಸಿ ಭಾರತವನ್ನು ದಡ ಸೇರಿಸಿದರಾದರೂ ಅಂತಿಮವಾಗಿ ಭಾರತದ ವಿಜಯ ಪತಾಕೆಯನ್ನು ಎಗರಿಹಾಕಿದ್ದು ತಂಡದ ಗೋಲ್ಕೀಪರ್ ಸುಬ್ರತಾ ಪಾಲ್. ಸಿರಿಯನ್ನರ ಮೂರೂ ಪೆನಾಲ್ಟಿ ಶಾಟ್ಗಳನ್ನು ಗೋಲುಗಳಾಗದಂತೆ ತಡೆದು ಮ್ಯಾಚ್ ವಿನ್ನರ್ ಎನಿಸಿಕೊಂಡರು. ಇದರೊಂದಿಗೆ ನೆಹರೂ ಕಪ್ ಅನ್ನು ಅತಿಥೇಯ ಭಾರತ ತಂಡ ಸತತ ಎರಡನೇ ಬಾರಿಗೆ ತನ್ನದಾಗಿಸಿಕೊಂಡ ಕೀರ್ತಿ ಸಾಧಿಸಿತು. ಈ ವಿಕ್ರಮವನ್ನು ಸಾಧಿಸಿದ ಮೂರನೇ ದೇಶ ಭಾರತ. ಈ ಫುಟ್ಬಾಲ್ ವಿಕ್ರಮಕ್ಕೆ ಭಾರತದಾದ್ಯಂತ ಸಿಕ್ಕ ಮನ್ನಣೆ, ಪ್ರೋತ್ಸಾಹ ಅಪೂರ್ವ. ಇದು ಭಾರತದಲ್ಲಿ ಫುಟ್ಬಾಲನ್ನು ಮತ್ತಷ್ಟು ಪ್ರೊಮೋಟ್ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಬೈಚುಂಗ್ ಭೂಟಿಯಾ ಇಂದು ಯಾವ ಕ್ರಿಕೆಟಿಂಗ್ ಸ್ಟಾರ್ಗಿಂತಲೂ ಕಡಿಮೆಯಿಲ್ಲವೆಂಬಂತೆ ಮನೆಮಾತಾಗಿದ್ದಾರೆ.

ಇದು ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಸುವಣರ್ಾಕ್ಷರಗಳಲ್ಲಿ ಬರೆದಿಡತಕ್ಕಂತಹ ಗೆಲುವು. ಇಂತಹುದೊಂದು ರೋಚಕ ಗೆಲುವನ್ನು ನೋಡಿ ಸುಮಾರು ಕಾಲು ಶತಮಾನವೇ ಸಂದು ಹೋಗಿತ್ತೇನೋ? 1970ರ ಏಷಿಯಾಡ್ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು. ಅದು ಭಾರತ ಫುಟ್ಬಾಲ್ನ ಮೊದಲ ಗೆಲುವು. ನಂತರವೂ ಅನೇಕ ಗೆಲುವುಗಳನ್ನು ದಾಖಲಿಸಿದೆಯಾದರೂ ಯಾವ ಗೆಲುವೂ ಕೂಡ ಅಷ್ಟು ರೊಚಕವಲ್ಲ. 2007ರಲ್ಲಿ ನೆಹರೂ ಕಪ್ ಅನ್ನು ಭಾರತ ಗೆಲ್ಲುತ್ತದೆಂದು ಯಾರೂ ಭಾವಿಸಿರಲಿಲ್ಲ. ನಮ್ಮವರು ತಮ್ಮ ನೈಜ ಆಟ ಪ್ರದರ್ಶಿಸಿದರು ಅಷ್ಟೆ. 2007ರ ನೆಹರೂ ಕಪ್ ನಮ್ಮದಾಯಿತು. ಭಾರತದಲ್ಲಿ ಫುಟ್ಬಾಲ್ ಬಗ್ಗೆ ಮೊದಲ ಬಾರಿಗೆ ಗುಸುಗುಸು ಕೇಳ ಹತ್ತಿತು. ಆದರೆ ಈ ಬಾರಿಯ ಆಟವೇ ಬೇರೆ ರೀತಿಯದ್ದು. ಹೋದ ಬರಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಆದ್ದರಿಂದ ಯಾವುದೇ ಒತ್ತಡಗಳೂ ಇರಲಿಲ್ಲ. ಆದರೆ ಈ ಬಾರಿ ಗೆಲುವಿನ ನಿರೀಕ್ಷಗಳಿದ್ದವು. ಅದು ಮೀಡಿಯಾದಲ್ಲಿರಬಹುದು, ಸಾಮಾನ್ಯ ಜನರಲ್ಲಿರಬಹುದು, ವ್ಯವಸ್ಥೆಯಲ್ಲಿರಬಹುದು, ಕೋಚ್ ಇರಲಿ ಸ್ವತಃ ಆಟಗಾರರಲ್ಲೇ ಇತ್ತು. ಹೋದ ಬಾರಿ ಫೈನಲ್ಸ್ನಲ್ಲಿ ಮಣಿಸಿದ್ದ ಸಿರಿಯಾನೇ ಮತ್ತೆ ಫೈನಲ್ನಲ್ಲಿ ಎದುರಾಗಿತ್ತು. ಅವರಿಗಿದು ಸೇಡು ತೀರಿಸಿಕೊಳ್ಳಲು ಸದಾವಕಾಶವಾಗಿದ್ದರೆ, ಭಾರತಕ್ಕೆ ತನ್ನ ಮಾನ ಉಳಿಸಿಕೊಳ್ಳುವ ತವಕ. ಡಿಫೆಂಡಿಂಗ್ ಛಾಂಪಿಯನ್ನರ ಮೇಲಿರುವ ಒತ್ತಡವದು. ಒಂದೊಮ್ಮೆ ನಮ್ಮವರು ಸೋತುಬಿಟ್ಟಿದ್ದರೆ ನಮ್ಮ ಕ್ರೀಡಾ ವ್ಯವಸ್ಥೆ ಫುಟ್ಬಾಲಿನ ಮೇಲೆ ತೀರ ಇತ್ತೀಚೆಗೆ ಮಾಡಿರುವ ಚಿಲ್ಲರೆ ಖಚರ್ಿನ ಔಚಿತ್ಯವನ್ನೂ ಪ್ರಶ್ನಿಸುತ್ತಿತ್ತು. ಭಾರತದ ಫುಟ್ಬಾಲ್ ಮತ್ತೆ ನಗೆಪಾಟಲಿಗೀಡಾಗುತ್ತಿತ್ತು. ಆದರೆ ನಮ್ಮವರು ಗೆದ್ದರು. ಈಗ ಸೀನೇ ಬದಲಾಗಿ ಹೋಗಿದೆ. ಎಲ್ಲರೂ ಬೈಚುಂಗ್ನನ್ನು ಹಾಡಿ ಹೊಗಳುವವರೇ. ಎಲ್ಲರೂ ಗೆದ್ದೆತ್ತಿನ ಬಾಲಗಳು...ಆದರೆ ದುನಿಯಾ ಇರೋದೆ ಹೀಗೆ. ಇದು ವಾಸ್ತವ.

ಎರಡು ವರ್ಷಗಳಿಗೊಮ್ಮೆ ನಡೆಯುವ ನೆಹರೂ ಕಪ್ ಫುಟ್ಬಾಲ್ ಟೋನರ್ಿಯನ್ನು ಭಾರತವೇ ನಡೆಸಿಕೊಡುತ್ತದೆ. ಇಂದು ಇದು ಫುಟ್ಬಾಲ್ ಪ್ರಪಂಚದ ಪ್ರಮುಖ ಟೋನರ್ಿಯಾಗಿದೆ. 2007ರಲ್ಲಿ ಭಾರತ ನೆಹರೂ ಕಪ್ ಅನ್ನು ತನ್ನದಾಗಿಸಿಕೊಂಡಾಗ ಇಡಿಯ ಭಾರತಕ್ಕೆ ಅದೇನೋ ಪುಳಕ. ಅಂತೂ ಫುಟ್ಬಾಲ್ನಲ್ಲೂ ನಮ್ಮವರು ಬೆಳಗುತ್ತಿದ್ದಾರಲ್ಲ ಅನ್ನುವ ಸಂಭ್ರಮ. ಆಗ ನಮ್ಮ ಬಹುಪಾಲು ಮಂದಿಗೆ ಅಸಲು ಫುಟ್ಬಾಲ್ ಅಂದರೆ ಏನೆಂಬುದೇ ಗೊತ್ತಿರಲಿಲ್ಲ. ನಾಲ್ಕು ವರ್ಷಗಳಿಗೊಮ್ಮೆ ಫೀಫಾ ವಲ್ರ್ಡಕಪ್ ನಡೆಯುತ್ತೆ ವಿಶ್ವವೆಲ್ಲಾ ಗುಲ್ಲಾಗುತ್ತೆ, ಈ ಆಟದಲ್ಲಿ ಸಥರನ್ ಅಮೆರಿಕನ್ ದೇಶಗಳಾದ ಬ್ರೆಜಿಲ್, ಚಿಲಿ, ಅರ್ಜೆಂಟಿನ ಮತ್ತು ಇಟಲಿ ದೇಶಗಳದೇ ಪಾರುಪತ್ತೆ, ಭಾರತ ಅಸಲು ಈ ವಿಶ್ವಕಪ್ಗೆ ಕ್ವಾಲಿಫೈ ಕೂಡ ಆಗುವುದಿಲ್ಲ, ಇಲ್ಲಿ ಅದೇನಿದ್ದರು ಕ್ರಿಕೆಟ್ನಲ್ಲಿ ಹಾಲ್ಯಾಂಡ್ ಇದ್ದ ಹಾಗೆ ಎಂಬಷ್ಟೇ ಗೊತ್ತಿತ್ತು. ಇಂದಿಗೂ ಇದರ ಬಹುಪಾಲು ನಿಜವೂ ಕೂಡ.

ಆದರೆ ಭಾರತದ ಕೆಲವು ಪ್ರಾಂತ್ಯಗಳಲ್ಲಿ ಮೊದಲಿಂದಲೂ ಕೊಂಚ ಫುಟ್ಬಾಲ್ ಮೇನಿಯಾ ಇದ್ದದ್ದೇ. ಈ ಕಮ್ಯೂನಿಸ್ಟರಿಗೂ ಫುಟ್ಬಾಲ್ಗೂ ಅದೇನು ಸಂಬಂಧವೋ ನಾ ಕಾಣೆ, ಇವರು ಬಲವಾಗಿರುವ ಕೇರಳ, ಪಶ್ಚಿಮ ಬಂಗಾಳ, ತ್ರಿಪುರಗಳಲ್ಲಿ ಕ್ರಿಕೆಟ್ ಮೇನಿಯಾ ಬದಲಾಗಿ ಫುಟ್ಬಾಲ್ ಮೇನಿಯಾ ಇದೆ. ಈ ಪ್ರದೇಶಗಳಲ್ಲದೆ ಪೂರ್ವೂತ್ತರ ಭಾರತದ ಸಪ್ತ ಸೋದರಿಯರ ನಾಡು ಮತ್ತು ಸಿಕ್ಕಿಂ, ಅರುಣಾಚಲಗಳಲ್ಲಿ ಫುಟ್ಬಾಲ್ಗೆ ಹೆಚ್ಚೆಚ್ಚು ಜನ ಆಕರ್ಷಿತರಾಗಿದ್ದಾರೆ. ಇವತ್ತಿನ ಭಾರತದ ಫುಟ್ಬಾಲ್ ತಂಡವನ್ನು ಗಮನಿಸಿದರೂ ಇದು ನಮಗೆ ಮನವರಿಕೆಯಾಗುತ್ತದೆ. ತಂಡದ ನಾಯಕ ಬೈಚುಂಗ್ ಭೂಟಿಯಾ ಸದ್ಯದ ನೂತನ ಸ್ಟಾರ್. ಈತ ಸಿಕ್ಕಿಂನವನು. ಈತ ಇಂದು ಭಾರತದ ಫುಟ್ಬಾಲ್ ಇತಿಹಾಸದ ದಂತಕಥೆಯಾಗಿದ್ದಾನೆ. ಆದರೆ...........

ಇಷ್ಟೆಲ್ಲ ಇದ್ದಾಗ್ಯೂ ಭಾರತದಲ್ಲಿ ಫುಟ್ಬಾಲ್ನೆಡೆಗೆ ಮಲತಾಯಿ ಧೋರಣೆ ಇದ್ದದ್ದೇ! ಬೈಚುಂಗ್ ಭೂಟಿಯಾ ಇಂದು ಒಂದು ದಂತಕಥೆ. ಆದರೆ ಇಂದಿಗೂ ಆತನಿಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿಲ್ಲ. ಸತತ 6 ವರ್ಷಗಳಿಂದ ಕ್ರೀಡಾ ಪುರಸ್ಕಾರಗಳಲ್ಲಿ ಒಬ್ಬನೇ ಒಬ್ಬ ಫುಟ್ಬಾಲಿಗನಿಲ್ಲ. ಅದು ಸಕರ್ಾರ ನಮ್ಮ ದೇಶದ ಫುಟ್ಬಾಲ್ಗೆ ಕೊಡುತ್ತಿರುವ ಪ್ರೋತ್ಸಾಹ. ಅದೇ ಕ್ರಿಕೆಟ್ನ ಚಿಲ್ಟೂ ಪಿಲ್ಟೂಗಳಿಗೆಲ್ಲ arjuna, ಖೇಲ್ ರತ್ನ, ಪದ್ಮ ಎಲ್ಲವೂ ಬಂದಾಗಿರುತ್ತದೆ. ಸಾನಿಯಾಗೂ ಪದ್ಮ, ಅಭಿನವ್ ಭಿಂದ್ರಾಗಂತೂ ಪದ್ಮಭೂಷಣ, ಬೈಚುಂಗ್ನಂತಹ ತಳಮಟ್ಟದ ನೈಜ ಆಟಗಾರನಿಗೆ, ಸುಬ್ರತಾ ಪಾಲ್ನಂತಹ ಕೆಚ್ಚೆದೆಯ ಕುಶಲ ಆಟಗಾರರನ್ನು ಸರ್ಕಾರ ಗುರುತಿಸುವುದೇ ಇಲ್ಲ. ಇನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ಗೋ ದಶಕಗಳ ಕಾಲ ಪ್ರಿಯ ರಂಜನ್ ದಾಸ್ ಮುನ್ಶಿ ಅಧ್ಯಕ್ಷರಾಗಿದ್ದರು. ಆಗ ಸ್ವಲ್ಪ ಕೆಲಸವೂ ನಡಿಯಿತೆನ್ನಿ. ನಂತರ ಈಗ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲ್ ಅಧ್ಯಕ್ಷರಾಗಿದ್ದಾರೆ. ಈ ಫೆಡರೇಷನ್ ರಾಜಕೀಯದ ಅಡುಂಬೋಲವೇ ಹೊರತು ಅದು ಕ್ರೀಡಾ ಫೆಡರೇಷನ್ ಎನ್ನುವುದನ್ನು ಸಾಕಷ್ಟು ಮಂದಿ ಮರೆತುಹೋಗಿದ್ದಾರೆ. ಹಾಗಿದೆ ಅದರ ಕಾರ್ಯಕಲಾಪಗಳು. ಇದು ನಮ್ಮ ದೇಶದ ಬಹುಪಾಲು ಕ್ರೀಡಾ ಫೆಡರೇಷನ್ಗಳ ಗೋಳಾಗಿದೆ ಬಿಡಿ. ಭಾರತ ಫುಟ್ಬಾಲ್ನ ಮತ್ತೊಂದು ಪ್ರಮುಖ ಸಮಸ್ಯೆ ಪ್ರಾಯೂಜಕರದು.

ಇಂದಿನ ದಿನಮಾನಸದಲ್ಲಿ ಯಾವುದೇ ಒಂದು ಕ್ರೀಡೆಗೆ ವಾಣಿಜ್ಯದ ಬೆಂಬಲ ಅತ್ಯಗತ್ಯ. ಅದಿಲ್ಲದೆ ಆ ಕ್ರೀಡೆ ಬಧ್ರವಾಗಿ ನೆಲೆನಿಲ್ಲುವುದು ಅನುಮಾನವೇ ಸರಿ. ಎಲ್ಲ ಕಂಪೆನಿಗಳೂ ಕ್ರಿಕೆಟ್ನಲ್ಲೇ ಮುಳುಗಿರುವಾಗ ಇತ್ತ ನೋಡುವವರಾದರೂ ಯಾರು? ಸದ್ಯ ನೆಹರೂ ಕಪ್ ಅನ್ನು ಓಎನ್ಜಿಸಿ ಸಂಸ್ಥೆ ನಡೆಸಿಕೊಡುತ್ತಿದೆ. ಇದಲ್ಲದೆ ಜೀ ಸ್ಪೋಟ್ಸ ಛಾನೆಲ್ನೊಡನೆ ಪಂದ್ಯಗಳ ಟೆಲಿಕ್ಯಾಸ್ಟ್ ರೈಟ್ಸ್ನ ಒಪ್ಪಂದವೂ ಇದೆ. ಈ ವಿಜಯದ ನಂತರ ಕೋಕಾ ಕೋಲಾ ಜೂನಿಯರ್ಸ್ ಟೂನರ್ಿಯನ್ನು ಪ್ರಾಯೋಜಿಸಲು ಮುಂದೆ ಬಂದಿರುವುದು ಬರಲಿರುವ ದಿನಗಳ ಸೂಚನೆಯಂತಿದೆ. ಇನ್ನು ಸಲ್ಮಾನ್ ಖಾನ್ ನಯಾಪೈಸೆಯನ್ನೂ ತೆಗೆದುಕೊಳ್ಳದೆ ಭಾರತದ ಫುಟ್ಬಾಲ್ಗೆ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿರುವುದು ಕೂಡ ಶುಭ ಸೂಚಕವೇ ಸರಿ. ಈ ಎಲ್ಲ ಇಲ್ಲಗಳ ನಡುವೆ ಭಾರತ ತಂಡದ ಪ್ರಮುಖ ಬಲವಾಗಿ ಕಾಣುತ್ತಿರುವುದು ನಾಯಕ ಬೈಚುಂಗ್ ಭೂಟಿಯಾ ಮತ್ತು ಕೋಚ್ ಬಾಬ್ ಹಾಗ್ಟನ್. ಬಾಬ್ ತಂಡದ ಬೆನ್ನುಲುಬಾಗಿ ದುಡಿಯುತ್ತಿದ್ದಾರೆ. ಮೊದಲ ಬಾರಿಗೆ ಭಾರತದ ಫುಟ್ಬಾಲ್ ರಂಗದಲ್ಲಿ ನಾವು ಗೆಲ್ಲಬಲ್ಲವೆಂಬ ಆತ್ಮವಿಶ್ವಾಸವನ್ನೂ, ಗೆಲ್ಲುವ ವಾತಾವರಣವನ್ನೂ ಹುಟ್ಟುಹಾಕಿರುವುದು ಮಹತ್ತರ ಸಾಧನೆಯೇ ಸರಿ. ಹಾಗೇ ಅವರು ಬರುವ ಏಷಿಯನ್ ಗೇಮ್ಸ್ನಲ್ಲೂ ತಂಡವನ್ನು ಹೀಗೆ ಮುನ್ನಡೆಸಿಬಿಟ್ಟರೆ, ಆಹಾ..ಹಾಗೇ ಬರುವ ಫೀಫಾ ವಿಶ್ವಕಪ್ನಲ್ಲಿ ಭಾರತವನ್ನು ಕ್ವಾಲಿಫೈ ಮಾಡಿಸಿ ಆಡಿಸಿಬಿಟ್ಟರೆನಾ..ಆಸೆಗಳು ನೂರಾರು.....ಬೈಚುಂಗ್ ಮತ್ತು ಬಾಬ್ ಕೇಳುತ್ತಿದ್ದಾರಾ?

ಭಾರತದ ಕ್ರೀಡಾರಂಗಕ್ಕೆ ಕ್ರಿಕೆಟ್ ಮೇನಿಯಾ ಹಿಡಿದಿರುವುದು ಸ್ಪಷ್ಟ. ಇಂದು ಭಾರತದಲ್ಲಿ ಕ್ರೀಡೆಯೆಂದರೆ ಕ್ರಿಕೆಟ್. ಕಡೆಗೆ ರಾಷ್ಟ್ರೀಯ ಆಟ ಹಾಕಿಯ ಬಗ್ಗೆಯೂ ಕ್ಯಾರೇ ಅನ್ನುವವರಿಲ್ಲ. ಅದೇನು ಈ ಆಟಗಳಲ್ಲಿ ಗೆಲುವಿನ ಬರವಿರುವುದರಿಂದ ಆಟ ಅಷ್ಟು ಪ್ಯಾಪುಲರ್ ಅಲ್ಲವೋ ಅಥವಾ ಪ್ರೋತ್ಸಾಹದ ಬರ ಗೆಲುವಿನ ಬರವಾಗಿ ಪರಿವತಿತವಾಗಿದೆಯೋ ಗೊತ್ತಿಲ್ಲ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋ ರೀತಿ ಈ ಇತರ ಆಟಗಳಿಗೆ ಗೆಲುವೂ ಇಲ್ಲ, ಪ್ರೋತ್ಸಾಹವೂ ಇಲ್ಲ. ಆದರೆ ನಿಧಾನವಾಗಿ ಇದು ಬದಲಾಗುತ್ತಿದೆ. ಭಾರತದ ಕ್ರೀಡಾಭಿಮಾನಿಗಳು ಹಾಕಿ, ಫಾಮರ್ುಲಾ 1, ಫುಟ್ಬಾಲ್ ಮತ್ತಿತರ ಟೀಂ ಇಂಡಿಯಾಗಳ ಸುತ್ತಲೂ ನೆರೆಯತೊಡಗಿದ್ದಾರೆ. ಇದಕ್ಕೆ ಪ್ರತಿಸ್ಪಂದಿಸುವಂತೆ ಅವೂ ಕೂಡ ಮಗುವಿನ ಮೊದಲ ಹೆಜ್ಜೆಗಳಂತೆ ಮೊದಮೊದಲ ಗೆಲುವುಗಳನ್ನು ದಾಖಲಿಸತೊಡಗಿವೆ. ಅಸಲಿಗೆ ಭಾರತದಂತಹ ದೇಶದ ಇಂದಿನ ದಿನಮಾನಸದಲ್ಲಿ ಆಟಗಳು ಬೆಳೆಯುವುದೇ ಹೀಗೆ. ಈ ಬೆಳವಣಿಗೆಗೆ ಮೀಡಿಯಾದ ಗೊಬ್ಬರ, ಮಸಾಲೆ ಜೊತೆಗೆ ಸಕರ್ಾರದ ನೀರೂ ಹರಿದುಬಿಟ್ಟರೆ ಅಲ್ಲೊಂದು ಮಹಾವೃಕ್ಷ ಕಾಣಸಿಗುತ್ತದೆ. ಭಾರತದಲ್ಲಿ ಇಂದು ಈ ಪ್ರಾಸೆಸ್ ಶುರುವಾಗಿದೆ ಅಂತಲೇ ಹೇಳಬಹುದು. ಮೊನ್ನೆ ಚೆಂಡನ್ನು ಬ್ಯಟಿನ ಬದಲಿಗೆ ಕಾಲಲ್ಲಿ ಒದೆಯುತ್ತಿದ್ದ ಹನ್ನೊಂದು ಆಟಗಾರರ ಸುತ್ತಲೂ ದೇಶವೇ ನೆರೆದು ಹುರಿದುಂಬಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆ.

Proudly powered by Blogger
Theme: Esquire by Matthew Buchanan.
Converted by LiteThemes.com.