ಚಿರು ದುರಂತ
ಆಗಸ್ಟ್ 26, 2008: ಆಂಧ್ರದ ಆಗಸದಲ್ಲಿ ಮತ್ತೊಂದು ಪಕ್ಷದ ಉದಯವಾಗಿದೆ. ತೆಲುಗು ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಬಹುದಿನಗಳ ಊಹಾಗಾನಗಳ ನಂತರ ಇಂದು ಇಲ್ಲಿ ನೆರೆದ ಸುಮಾರು 12 ಲಕ್ಷ ಜನಸಾಗರದ ಭಾರಿ ಸಭೆಯಲ್ಲಿ ತಮ್ಮ ಪ್ರಜಾರಾಜ್ಯಂ ಪಕ್ಷವನ್ನು ಸ್ಥಾಪಿಸಿದರು. ಇಂದಿನ ಕುಲಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಮತ್ತು ಸಾಮಾಜಿಕ ನ್ಯಾಯದ ನಿನಾದದೊಂದಿಗೆ ಚಿರಂಜೀವಿ ರಾಜಕೀಯ ಅರಂಗ್ರೇಟಂ ಮಾಡಿದ್ದಾರೆ. ಈಗಾಗಲೇ ರಾಜ್ಯದ ನಾನಾ ರಂಗಗಳ ಬುದ್ಧಿಜೀವಿಗಳು, ಸಾಫ್ಟ್ವೇರಿಗರು ಮತ್ತು ಸುಶಿಕ್ಷಿತ ಯುವಕರು ಉತ್ಸಾಹ ತೋರಿ ಪಕ್ಷದಲ್ಲಿ ಸೇರುವ ಇಂಗಿತ ತೋರಿದ್ದಾರೆ. ಚಿರಂಜೀವಿ ಮತ್ತೊಬ್ಬ ರಾಮರಾಯರಾಗುವ
ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ..........

ಮೇ 16, 2009: ಎಲ್ಲರ ನಿರೀಕ್ಷೆಗಳೂ ತೆಲೆಕೆಳಗಾಗಿವೆ. ಇನ್ನೇನು ಮತ್ತೊಬ್ಬ ರಾಮರಾಯರಾಗಿ ಚಿರಂಜೀವಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬಷ್ಟರ ಮಟ್ಟಿಗೆ ನಿರೀಕ್ಷೆಗಳನ್ನು ಮೂಡಿಸಿದ್ದ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಕೇವಲ 17 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾತ್ರ ಸಫಲವಾಗಿದೆ! ತಿರುಪತಿ ಮತ್ತು ಪಾಲುಕೊಲ್ಲುಗಳಲ್ಲಿ ನಿಂತಿದ್ದ ಚಿರಂಜೀವಿ ತಿರುಪತಿಯಲ್ಲಿ ಗೆದ್ದಿದ್ದಾರಾದರೂ ಸ್ವಂತ ಜಿಲ್ಲೆಯ ಪಾಲಕೊಲ್ಲುವಿನಲ್ಲಿ ಸೋತು ಹೋಗಿದ್ದಾರೆ. ಮುಂದಿನ ಮುಖ್ಯಮಂತ್ರಿಯೆಂದೇ ಬಿಂಬಿಸಿಕೊಳ್ಳುತ್ತಿದ್ದ ಚಿರಂಜೀವಿಗೆ ಇದು ತೀವ್ರ ಮುಖಭಂಗವನ್ನೇ ಮಾಡಿದೆ. ಪ್ರಜಾರಾಜ್ಯಂ ಈಗ ಸೂತಕದ ಮನೆಯಂತೆ ದರ್ಶನವೀಯುತ್ತಿದೆ. ಚಿರಂಜೀವಿ ಜನರ ತೀರ್ಪನ್ನು ಒಪ್ಪಿ ಬರುವ ಐದು ವರ್ಷಗಳಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ. ಸೋಲಿನ ಪರಾಮರ್ಶೆಯ ಸಂದರ್ಭದಲ್ಲೇ ಪ್ರಜಾರಾಜ್ಯಂ ಮನೆಯಲ್ಲಿ ಒಡಕುಗಳು ಕಾಣಿಸಿಕೊಳ್ಳಲಾರಂಭಿಸಿವೆ..........

ಆಗಸ್ಟ್ 26 2009: ಇಂದಿಗೆ ಪ್ರಜಾರಾಜ್ಯಂ ಪಕ್ಷದ ಉದಯವಾಗಿ ಸರಿಯಾಗಿ ಒಂದು ವರ್ಷ. ಚಿರಂಜೀವಿಗಿದ್ದ ಎಲ್ಲ ಭ್ರಮೆಗಳೂ ಕಳಚಿ ಬಿದ್ದಿವೆ, ಜನರವೂ ಸಹ. ಚಿರಂಜೀವಿ ಇಂದು ಅಕ್ಷರಶಃ ಒಬ್ಬಂಟಿಯಾಗಿ ಕಾಣಿಸುತ್ತಿದ್ದಾರೆ. ಪಕ್ಷದ ಪ್ರಮುಖ ನಾಯಕರೆಲ್ಲರೂ ನಾನಾ ಕಾರಣಗಳಿಗಾಗಿ ಪಕ್ಷ ಬಿಟ್ಟು ತೆರಳಿದ್ದಾರೆ, ಉಳಿದಿರುವವರೆಲ್ಲರೂ ಬಕಗಳು ಇಲ್ಲ ಮಿಕಗಳು! ಪಕ್ಷಕ್ಕೆ ಒಂದು ನೆಲೆಗಟ್ಟೇ ಇಲ್ಲದಂತಾಗಿದೆ. ಗೆದ್ದು ಬಂದ 17 ಮಂದಿ ಶಾಸಕರಲ್ಲಿ ಬಹುಪಾಲು ಹೊಸಬರು. ಹಾಗಾಗಿ ವಿಧಾನಸಭೆಯಲ್ಲೂ ಪಕ್ಷದ performance ತೀರ ಕಳಪೆ. ಒಂದೇ ವರ್ಷದಲ್ಲಿ ಪಕ್ಷದ ಅಳಿವು-ಉಳಿವುಗಳೇ ಪ್ರಶ್ನಾರ್ಹವಾಗುತ್ತಿವೆ. ಗೆದ್ದು ಬಂದಿರುವ 17 ಶಾಸಕರಿಗೆ ಅಧಿಕಾರ ಬೇಕು. ಅತ್ತ ರಾಜಶೇಖರ ರೆಡ್ಡಿ ಮೊಲಗಳಿಗೆ ಕ್ಯಾರೆಟ್ಟು ಹಿಡಿದು ನಿಂತಿದ್ದಾರೆ. ಅದು ಆಪರೇಷನ್ ಹಸ್ತವಾ? ಮೊನ್ನೆ ಸುಮಾರು 9 ಪ್ರಜಾರಾಜ್ಯಂ ಶಾಸಕರು ಪಕ್ಷದ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್ ಬಳಿ ತೆರಳಿ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷವನ್ನು ನಡೆಸುವುದು ಸಾಧ್ಯವಿಲ್ಲವೆಂದೂ, ಅಧಿಕಾರಸ್ಥ ಕಾಂಗ್ರೆಸ್ನಲ್ಲಿ ಪಕ್ಷವನ್ನು ವಿಲೀನ ಮಾಡಿಬಿಡೋಣವೆಂದು ಪ್ರತಿಪಾದಿಸಿದ್ದಾರೆ!.................

ರಾಜ್ಯದುದ್ದಗಲಕ್ಕೂ ಹೊಸ ಸಂಚಲನ ಮೂಡಿಸಿದ್ದ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷದ ಮೂರು ಪ್ರಮುಖ ಘಟ್ಟಗಳನ್ನು ಈ ಮೇಲಿನ ವರದಿಗಳು ಚಿತ್ರಿಸುತ್ತವೆ. ಇಂದು ಇದೊಂದು `ಚಿರು ದುರಂತ'ವಾಗಿ ನಮ್ಮನ್ನು ಕಾಡುತ್ತಿದೆ. ಇದು ಅವರ ಸ್ವಯಂಕೃತಾಪರಾಧವೇ ಸರಿ. ಅವರು ಎಡವಿದ್ದೆಲ್ಲಿ? ಶುದ್ಧ ರಾಜಕೀಯದ ಭರವಸೆಯ ಪ್ರಯೋಗವೊಂದು ಏಕೆ ಮಧ್ಯದಲ್ಲೇ ಕಮರಿ ಹೋಯಿತು? ಅದಕ್ಕೆ ಕಾರಣಗಳು ಅಂತರ್ಗತವಾ, ಬಹಿರ್ಗತವಾ? ಪ್ರಜಾರಾಜ್ಯಂ ಪಕ್ಷ ಸ್ಥಾಪನೆಯ ಮೊದಲನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೂ ಮುಂದಿಟ್ಟುಕೊಂಡು ಒಂದು ವಿಮರ್ಶೆಗೆ ಕೂತ ಫಲವೇ ಈ ಲೇಖನ.


ಪಕ್ಷ ಸ್ಥಾಪಿಸಿದ ಏಳು ತಿಂಗಳಿಗೆ ಚುನಾವಣೆ ಎದುರಿಸಿದ ಪಕ್ಷ ಬಹುಜನರ ಅಪಾರ ನೀರೀಕ್ಷೆಗಳನ್ನು ಪೂರೈಸದೇ ಇದ್ದರೂ ಶೇ.17ರಷ್ಟು ಮತಗಳಿಸುವಲ್ಲಿ ಸಫಲವಾಯಿತು. ಆದರೆ ಪಕ್ಷದ ಮೊದಲನೇ ವಾರ್ಷಿಕೋತ್ಸವದೊಳಗೇ ಪಕ್ಷದ ಅಸ್ತಿತ್ವದ ಕುರಿತು ಪ್ರಶ್ನೆಗಳೇಳುತ್ತಿರುವುದಾದರೂ ಏಕೆ? ವಿಲೀನದ ಸದ್ದು ದೊಡ್ಡದಾಗುತ್ತಿದೆಯಲ್ಲಾ, ಚಿರಂಜೀವಿ ಸದ್ಯದಲ್ಲೇ ಅಂಗಡಿ ಎತ್ತಲಿದ್ದಾರೆಯೇ? ಪ್ರಜಾರಾಜ್ಯಂ ಅನ್ನುವ ಒಂದು ರಾಜಕೀಯ ಪ್ರಯೋಗವನ್ನು ಆಮೂಲಾಗ್ರವಾಗಿ ಅವಲೋಕಿಸುತ್ತಾ ಬಂದರೆ ಇದಕ್ಕೆ ನಮಗೆ ಉತ್ತರ ಸಿಗಬಹುದು. ಅಸಲು ಸಮಸ್ಯೆಯಿರುವುದು ಅಡಿಪಾಯದಲ್ಲಿ!

ಮೊದಲಿಂದಲೂ ಅಷ್ಟೇ ಆಂಧ್ರದ ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಅವಿನಾಭವ ಸಂಬಂಧ. ಇದನ್ನು ಮೊದಲ ಬಾರಿಗೆ ಬಳಸಿಕೊಂಡು ರಾಜ್ಯದ ಮುಖ್ಯಮಂತ್ರಿಯಾದವರು ಎನ್.ಟಿ.ರಾಮರಾಯರು. ಚಿರಂಜೀವಿಗೆ ಮಾತ್ರ ಅದನ್ನು ಪುನರಾವರ್ತಿಸುವ ಶಕ್ತಿಯಿತ್ತು(?). ಚಿರಂಜೀವಿ ಚಾರಿಟಬಲ್ ಟ್ರಸ್ಟ್ನ ಮೂಲಕ ರಕ್ತದಾನ ನೇತ್ರದಾನಗಳ ಚಳುವಳಿಯನ್ನೇ ಹುಟ್ಟುಹಾಕಿದ. ತನ್ನ ಸಮಾಜಸೇವೆಯನ್ನು ಮತ್ತೊಂದು ಬೃಹತ್ ಕ್ಯಾನ್ವಾಸ್ಗೆ ತೆಗೆದುಕೊಂಡುಹೋಗುವ ಇಂಗಿತ ಮತ್ತು ಆತನಿಗೆ ಇದ್ದಿರಬಹುದಾದ ಅಧಿಕಾರದ ಆಸೆ ಚಿರಂಜೀವಿಯನ್ನು ರಾಜಕಾರಣದ ಅಂಗಳಕ್ಕೆ ತಂದು ನಿಲ್ಲಿಸಿದವು. ಸರಿ ಕ್ರಿಯಾ ಯೋಜನೆಯೊಂದು ಸಿದ್ಧವಾಯಿತು.


ಎಡರಂಗದ ಡಾ.ಮಿತ್ರಾ ಮತ್ತು ಬಲಪಂಥೀಯ ಪರಕಾಲ ಪ್ರಭಾಕರ ರಾವ್ ಚಿರಂಜೀವಿಯ ಜೊತೆಗೂಡಿದರು. ಆತನ ಸೂಪರ್ ಸ್ಟಾರ್ಗಿರಿಯೊಂದೇ ಆತನನ್ನು ದಡ ತಲುಪಿಸ ಬಿಡಬಹುದೆಂಬಷ್ಟು ಶಕ್ತವಾಗಿತ್ತು. ಆತನ `ಜೆಂಟಲ್ಮ್ಯಾನ್' ಇಮೇಜ್, ಸೇವಾತತ್ಪರತೆ, ರಾಜಕೀಯೇತರ ಹಿನ್ನಲೆ ಇವೆಲ್ಲವೂ ಆತನ ಪರ ಅಲೆ ಸೃಷ್ಟಿಸುತ್ತವೆಂದು ಅಂದಾಜಿಸಲಾಗಿತ್ತು. ಚಿರಂಜೀವಿ ಕಾಲಿಗೆ ಚಕ್ರ
ಕಟ್ಟಿಕೊಂಡಂತೆ ರಾಜ್ಯಾದ್ಯಂತ ಬಿರುಗಾಳಿ ಪ್ರವಾಸ ಕೈಗೊಂಡರು. ಆಂಧ್ರದ ಬೀದಿ ಬೀದಿಗಳಲ್ಲಿ ಚಿರಂಜೀವಿಯದ್ದೇ ಮಾತು. ಚಿರಂಜೀವಿಯ ರೋಡ್ಷೋಗಳಿಗೆ ಬಂದವರೆಲ್ಲಾ ಆತನಿಗೆ ವೋಟು ಹಾಕಿದಿದ್ದರೆ ಆತ ಈಗ ಆಂಧ್ರದ ಮುಖ್ಯಮಂತ್ರಿಯಾಗಿರುತ್ತಿದ್ದ. ಅದೊಂದು ಅಲೆ, ಸಿನಿ ಗ್ಲಾಮರು ಮತ್ತು ಚಿರಂಜೀವಿಯ ಅಮಲು ಆಂಧ್ರಪ್ರದೇಶವನ್ನು ಆವರಿಸಿಕೊಳ್ಳಲು ಪ್ರಾರಂಭಿಸಿತು. ಆದರೆ ಆ ಅಲೆ, ಅಮಲನ್ನು ಎನ್ಕ್ಯಾಷ್ ಮಾಡಿಕೊಳ್ಳಲು ಪಕ್ಷಕ್ಕೆ ಅಗತ್ಯ ಬೇಕಾದ ಒಂದು ಸಾಂಸ್ಥಿಕ ವ್ಯವಸ್ಥೆ, ಆದರ್ಶ-ಸಿದ್ಧಾಂತಗಳ ತಳಹದಿಯನ್ನು ಪಕ್ಷ ಪಡೆಯಲೇ ಇಲ್ಲ. ಇದು ದುರಂತವೇ ಸರಿ.

ಪ್ರಜಾರಾಜ್ಯಂ ಪಕ್ಷ ಚಿರಂಜೀವಿಯವರ ತಾರಾಬಲದ ಮೇಲೆ ಅತಿ ವಿಶ್ವಾಸವನ್ನಿಟ್ಟು ಚುನಾವಣೆಗೆ ಹೋಯಿತು. ಇದರ ನಡುವೆ ಅವರು ಪಕ್ಷಕ್ಕೆ ಒಂದು ಗಟ್ಟಿ ಸೈದ್ಧಾಂತಿಕ ನೆಲೆಯನ್ನು ರೂಪಿಸುವುದನ್ನೇ ನಿರ್ಲಕ್ಷಿಸಿದರು. ಅವರ ಮುಖ್ಯ ಘೋಷಣೆ `ಬದಲಾವಣೆ'. ಆದರೆ ಅವರು ತರ ಬಯಸುವ ಬದಲಾವಣೆ ಯಾವುದು, ಎಂತಹುದು? ಎಂಬುದನ್ನು ಇವತ್ತಿಗೂ ಅವರು ಸ್ಪಷ್ಟವಾಗಿ ಹೇಳಿಲ್ಲ. ಇನ್ನು ಪ್ರಜಾರಾಜ್ಯಂನ ನಿನಾದ ಸಾಮಾಜಿಕ ನ್ಯಾಯ. ಚಾರತ್ರಿಕವಾಗಿ ಆಂಧ್ರದಲ್ಲಿ ರಾಜಕೀಯವಾಗಿ ಪ್ರಬಲ ಕೋಮಿನವರೆಂದರೆ ರೆಡ್ಡಿ ಮತ್ತು ನಾಯುಡುಗಳು. ಕಮ್ಮಾ-ನಾಯುಡುಗಳ ನಂತರ ಅಲ್ಲಿ ಪ್ರಬಲ ಕೋಮಿನವರೆಂದರೆ ಕಾಪುಗಳು. ಚಿರಂಜೀವಿ ಕಾಪು ಜನಾಂಗಕ್ಕೆ ಸೇರಿದವರು. ಆತನ ರಾಜಕೀಯ ನಡೆಗಳು ನಿರ್ಧಾರಿತವಾದದ್ದೇ ಈ ಜಾತಿ ಸಮೀಕರಣಗಳ ಮೇಲೆ. ಬದಲಾವಣೆಯ

ಹರಿಕಾರನೆಂದು ಪೋಸುಕೊಡುತ್ತಾ ಜಾತಿ ಸಮೀಕರಣಗಳ ಬೆನ್ನು ಹತ್ತಿದ ಚಿರಂಜೀವಿಯಲ್ಲಿದ್ದದ್ದು ರಾಜಕೀಯ ಸ್ಪಷ್ಟತೆಯ
ಕೊರತೆ. ತೆಲಂಗಾಣವೂ ಸೇರಿದಂತೆ ರಾಜ್ಯವೆದುರಿಸುತ್ತಿದ್ದ ಹಲವಾರು ಪ್ರಮುಖ ಸಮಸ್ಯೆಗಳ ಕುರಿತು ಏನೇ ಕೇಳಿದರೂ ಅಡ್ಡಗೋಡೆಯ ಮೇಲೆ ದೀಪ! ಅಸಲಿಗೆ ಸಾಮಾಜಿಕ ನ್ಯಾಯದ ಒಣ ಠೇಂಕಾರ ಬಿಟ್ಟರೆ ಚಿರಂಜೀವಿಯ ಬಳಿ ಬೇರೇನೂ ಇರಲಿಲ್ಲ, ಈಗಲೂ ಇಲ್ಲ. ಚುನಾವಣೆಗೆ ತನ್ನ ಪಕ್ಷದ ಉಮೇದುವಾರರಾಗಿ ಸುಮಾರು ಶೇ.45-50 ರಷ್ಟು ಹಿಂದುಳಿದ ವರ್ಗದವರನ್ನೇ ಆರಿಸಿ ಅದನ್ನು ಉಳಿಸಿಕೊಂಡರಾದರೂ ಗೆದ್ದು ಬಂದವರು ಬೆರಳೆಣಿಕೆಯಷ್ಟು ಮಂದಿಯೂ ಇಲ್ಲ.

ಈ ಎಲ್ಲದರ ನಡುವೆ ಪಕ್ಷಕ್ಕೆ ಜಿಲ್ಲಾ, ತಾಲೂಕು, ಮಂಡಲ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅದನ್ನು ಕಾರ್ಯಪ್ರವೃತ್ತಗೊಳಿಸುವಲ್ಲಿಯೂ ಪಕ್ಷ ಸೋತಿತು. ಎಲ್ಲವೂ ad-hoc ವ್ಯವಸ್ಥೆಯೇ ಹೊರತು ಸಾಂಸ್ಥೀಕರಣಗೊಂಡ ಕ್ಯಾಡರ್ ವ್ಯವಸ್ಥೆಯೊಂದು ರೂಪುಗೊಳ್ಳಲೇ ಇಲ್ಲ. ಯಾವುದೇ ಪಕ್ಷಕ್ಕೆ ತನ್ನ ನೀತಿ-ಸಿದ್ಧಾಂತ-ಕಾರ್ಯಕ್ರಮಗಳನ್ನು ಜನರ ಬಳಿ ಕೊಂಡೊಯ್ಯಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಇಲ್ಲದಿದ್ದರೆ ಜನರಿಗೆ ತಲುಪುವುದಾದರೂ ಹೇಗೆ? ಇನ್ನು ಪ್ರಜಾರಾಜ್ಯಂನಲ್ಲಿ ನಾಯಕರೆನಿಸಿಕೊಂಡವರೆಲ್ಲಾ ಒಂದು ಬ್ಯಾಗೇಜನ್ನು ಹೊತ್ತು ತಂದ ಇತರೆ ಪಕ್ಷಗಳಿಂದ ವಲಸೆ ಬಂದವರೆ. ಇವರೆಲ್ಲರನ್ನೂ ಜೊತೆಯಿಟ್ಟುಕೊಂಡು ಚಿರಂಜೀವಿ ಅದೇನು ಬದಲಾವಣೆ ತರಬಲ್ಲರು ಎಂಬುದು ಬಹುತೇಕರ ಪ್ರಶ್ನೆಯಾಗಿತ್ತು.


ಬದಲಾವಣೆ, ಬದಲಾವಣೆ ಅಂತ ಹೇಳಿಕೊಂಡು ತಿರುಗುತ್ತಿದ್ದ ಪ್ರಜಾರಾಜ್ಯಂನಲ್ಲಿ ನಡೆಯುತ್ತಿದ್ದದ್ದು, ನಡೆಯುತ್ತಿರುವುದು ಅಕ್ಷರಶಃ ಕುಟುಂಬ ಪರಿಪಾಲನೆ. ಚಿರಂಜೀವಿ ಪ್ರಜಾರಾಜ್ಯಂನ ಅಧ್ಯಕ್ಷರಾದರೆ,

ಅವರ ಭಾವಮೈದುನ ಅಲ್ಲು ಅರವಿಂದ್ ಪ್ರಧಾನ ಕಾರ್ಯದರ್ಶಿ ತಮ್ಮ ಪವನ್ ಕಲ್ಯಾಣ್ ಯುವರಾಜ್ಯಂ ಅಧ್ಯಕ್ಷ. ಇದು ಸಹಜವಾಗಿಯೇ ಅನೇಕರನ್ನು ಕೆರಳಿಸಿದೆ. ಮುಖ್ಯವಾಗಿ ಅಲ್ಲು ಅರವಿಂದ್. ಪಕ್ಷದ ರಾಜಕೀಯ ಸಲಹಾ ಸಮಿತಿ ಚುನಾವಣಾ ಸೋಲಿನ ಸಂಪೂರ್ಣ ಹೊಣೆಯನ್ನು ಅರವಿಂದ್ ಮೇಲೇ ಹೊರಿಸಿಬಿಟ್ಟಿದೆ. ಚಿರಂಜೀವಿಯ ಭಾವಮೈದುನನಾದ ಈತ ತೆಲುಗು ಚಿತ್ರರಂಗದ ಗೌರವಾನ್ವಿತ ಸಿನಿ ನಿರ್ಮಾಪಕ. ಚಿರಂಜೀವಿಯ ನೆರಳಿನಂತಿದ್ದು ಆತನ ಇಮೇಜನ್ನು ಕಾಪಿಟ್ಟು ಬೆಳೆಸಿದವನೇ ಈತ. ಆತನನ್ನು ಒಪ್ಪಿಸಿ ರಾಜಕೀಯಕ್ಕೆ ಕರೆತಂದವನೂ ಈತನೇ. ಈತ ಚಿರಂಜೀವಿಯ ಹಿಂದಿನ ಬ್ರೈನ್! ಚಿರಂಜೀವಿ ಉತ್ಸವ ಮೂರ್ತಿಯಷ್ಟೇ. ಹಿಂದಿನಿಂದ ಎಲ್ಲವನ್ನೂ ನಡೆಸುತ್ತಿರುವವನೇ ಈತ. ಇಂದಿನ ರಾಜಕಾರಣದಲ್ಲಿ ಪ್ರತಿ ಪಕ್ಷದಲ್ಲಯೂ ಒಬ್ಬರಲ್ಲ ಒಬ್ಬರು ಮ್ಯಾನಿಪ್ಯುಲೇಟರ್ ಇರಬೇಕಾಗುತ್ತದೆ, ಪ್ರಜಾರಾಜ್ಯಂನಲ್ಲಿ ಅಲ್ಲು ಅರವಿಂದ್. ಈತನಿಂದಲೇ ಪಕ್ಷದ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದಿವೆ, ಹಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ಚಿರಂಜೀವಿ ಮಾತ್ರ ಇವರನ್ನು ಬಿಟ್ಟುಕೊಟ್ಟಿಲ್ಲ. ಇದು ಚಿರಂಜೀವಿಯ ಮೇಲೂ ಹಲವಾರು ಅನುಮಾನಗಳು ಮೂಡುವಂತೆ ಮಾಡಿವೆ.

ಇನ್ನು ಪಕ್ಷ ಟಿಕೆಟ್ ಹಂಚಿಕೆ ಮಾಡಿತು ನೋಡಿ, ಎಲ್ಲ ಅಸಮಾಧಾನಗಳೂ ಕಟ್ಟೆಯೊಡೆಯಿತು. ಅಲ್ಲಿ ಚಿರಂಜೀವಿಗೂ ಇತರರಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಅಂದರೂ ದೊಂಗಲೇ!....ಪ್ರಜಾರಾಜ್ಯಂ ಪಕ್ಷ ಶೇ.40 ರಷ್ಟು ಸೀಟುಗಳನ್ನು ಹಿಂದುಳಿದ ವರ್ಗದವರಿಗೆ ಕೊಟ್ಟಿತಾದರೂ ಮಿಕ್ಕವನ್ನು ಓಪನ್ ಆಕ್ಷನ್ನಲ್ಲಿ ಹರಾಜು ಹಾಕಿಬಿಟ್ಟಿತು. ಪಕ್ಷಕ್ಕಾಗಿ ದುಡಿದ ಹಲವಾರು ನಿಷ್ಠಾವಂತರನ್ನು ಕಡೆಗಣಿಸಿ ದುಡ್ಡಿದ್ದವರು, ರೌಡಿಗಳಿಗೆಲ್ಲಾ ಟಿಕೆಟ್ಟುಗಳನ್ನು ಹಂಚಲಾಯಿತು. ಹಲವರು ಟೆಕೆಟ್ ಆಕಾಂಕ್ಷಿಗಳು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹಂಚಿಕೊಂಡರು. ಒಬ್ಬ ಭೂಪನಂತೂ ನಾನು ಪಕ್ಷದ ಟಿಕೆಟ್ಟಿಗಾಗಿ 2 ಕೋಟಿ ಫಂಡು ಕೊಟ್ಟಿದ್ದೆ, ಆದರೂ ನನಗೆ ಟಿಕೆಟ್ಟು ಸಿಗಲಿಲ್ಲ ಎಂದು ಆರ್ಭಟಿಸಿದ. ಮೂಲಗಳ ಪ್ರಕಾರ ಪ್ರಜಾರಾಜ್ಯಂನ ಎಂಎಲ್ಲೆ ಟಿಕೆಟ್ಟು 5 ಕೊಟಿಗಳಿಗೂ, ಎಂಪಿ ಟಿಕೆಟ್ಟು 8 ಕೋಟಿಗಳಿಗೂ ಹರಾಜಾದವಂತೆ! ಮತ್ತೊಬ್ಬರು ಚಿರಂಜೀವಿಯದು 2500 ಕೋಟಿಗಳ ಹಗರಣ ಎಂದು ಆಪಾದಿಸಿದರು. ಬಿಜೆಪಿಯ ಶತೃಘ್ನ ಸಿನ್ಹಾರೊಂದಿಗೆ ಎಂಪಿಗಳ ಬಿಕರಿಗೆ ಡೀಲು ಕುದಿರಿತ್ತೆಂದೂ, ಅದಕ್ಕೆ ತಾನೇ ಸಾಕ್ಷಿಯೆಂದೂ ಹೇಳ ತೊಡಗಿದರು.


ಈ ಎಲ್ಲವೂ ಅಂತೆ ಕಂತೆಗಳಾಗೇ ಇದ್ದವು. ಆದರೆ ಚುನಾವಣೆಗೆ ಕೆಲವೇ ದಿನಗಳ ಹಿಂದೆ ಪಕ್ಷದ ಸ್ಥಾಪಕ ಸದಸ್ಯರಾದ ಪರಕಾಲ ಪ್ರಭಾಕರ ರಾವ್ ಈ ಎಲ್ಲ ಆಪಾದನೆಗಳೂ ನಿಜವೆಂದು ಹೇಳಿ, ಪ್ರಜಾರಾಜ್ಯಂನನ್ನು ವಿಷವೃಕ್ಷವೆಂದು ಹೀಯಾಳಿಸಿ ಪಕ್ಷ ತ್ಯಜಿಸಿಬಿಟ್ಟರು. ಚಿರಂಜೀವಿಗೆ ಸಿಡಿಲು ಬಡಿದಂತಾಯಿತು. ಪರಕಾಲ ಪ್ರಭಾಕರ ರಾವ್ ಬೇರೆ ಏನಾದರೂ ಭ್ರಷ್ಟರಲ್ಲ. ಜನರಿಗೂ ಅದು ಗೊತ್ತು. ಹಾಗಾಗಿ ಪ್ರಭಾಕರ ರಾವ್ ರಾಜೀನಾಮೆ ಪಕ್ಷದ ಇಮೇಜಿಗೆ ಅಪಾರ ಪ್ರಮಾಣದ ಧಕ್ಕೆಯುಂಟು ಮಾಡಿತ್ತು. ಅವರು ಪ್ರಜಾರಾಜ್ಯಂನಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ, ಸಿದ್ಧಾಂತ ನೀತಿಗಳೂ ಇಲ್ಲ. ಇಲ್ಲಿ ನಡೆಯುತ್ತಿರುವುದು ಶುದ್ಧ ವ್ಯಾಪಾರ, ಜನರನ್ನು ಇಷ್ಟು ದಿನಗಳ ಕಾಲ ಮೋಸ ಮಾಡಲಾಗಿದೆ. ಅದರಲ್ಲಿ ನಾನೂ ಒಬ್ಬ ಪಾಲುದಾರನಾಗಿರುವುದಕ್ಕೆ ಕ್ಷಮೆಯಿರಲಿ ಎಂದು ಹೇಳಿ ಸೀದಾ ಹೊರಟುಬಿಟ್ಟರು. ನಿಜ ಇಂದಿನ ಚುನಾವಣೆಗಳಲ್ಲಿ ನಿಂತು ಬಡಿದಾಡಲಿಕ್ಕೆ ದುಡ್ಡು ಬೇಕು. ಇದು ನಮ್ಮ ಇಂದಿನ ವಾಸ್ತವ. ಆದರೆ ಟಿಕೆಟ್ಟುಗಳನ್ನು ಹರಾಜು ಹಾಕುವುದೆಂದರೆ ಏನು? ಅಲ್ಲು ಅರವಿಂದ್ ಪಕ್ಷವನ್ನು ಒಂದು corporate ಕಂಪೆನಿಯಂತೆ ನಡೆಸಿದರೊ ಅಥವಾ ಒಂದು ಖಾಸಗೀ ಕುಟುಂಬ ನಿಯಂತ್ರಿತ ಕಂಪೆನಿಯನ್ನು ಪಕ್ಷ ಎಂದು ಜನರನ್ನು ಮರಳು ಮಾಡಿದರೋ ಎಂಬುದು ಇಂದಿಗೂ ಹಲವರ ಮನದಲ್ಲುಳಿದಿರುವ ಅನುಮಾನ.


ಅಂತೂ ಚುನಾವಣೆಗಳಲ್ಲಿ ನಿರೀಕ್ಷೆಯಷ್ಟು ಫಲಿತಾಂಶ ಬರಲಿಲ್ಲವಾದರೂ 17 ಶಾಸಕ ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಸಸ್ವಿಯಾಯಿತು. ಗೆದ್ದರೆ ಅಧಿಕಾರ ಪಕ್ಷವೊಂದನ್ನು ಒಗ್ಗೂಡಿಸಿಟ್ಟುಕೊಳ್ಳಬಹುದಾಗಿರುತ್ತದೆ, ಆದರೆ ಸೋತರೆ? ಎಲ್ಲ ಹೊಲಸೂ ಬೀದಿಗೆ ಬರುತ್ತದೆ. ಚುನಾವಣೆಯ ನಂತರದ ಕೆಲವೇ ದಿನಗಳಲ್ಲಿ ಪಕ್ಷದ ಮತ್ತೊಬ್ಬ ಮೂಲ ಸಿದ್ದಾಂತಕರ್ತ ಡಾ.ಮಿತ್ರಾ ಅವರು ಕೂಡ ಪಕ್ಷವನ್ನು ತ್ಯಜಿಸಿಬಿಟ್ಟರು. ಇವರು ಯಾವುದೇ ಆರೋಪಗಳನ್ನು ಮಡಲಿಲ್ಲವಾದರೂ ಅವರ ಹೊರನಡೆಯುವಿಕೆ ಪಕ್ಷದ ಇಮೇಜನ್ನು ಮತ್ತಷ್ಟು ಘಾಸಿಗೊಳಿಸಿತು. ತದನಂತರದ ಕೆಲವೇ ದಿನಗಳಲ್ಲಿ ಟಿಡಿಪಿಯಿಂದ ಬಂದು ಸೇರಿದ್ದ ಪ್ರಮುಖ ನೇತಾರ ದೇವೇಂದರ್ ಗೌಡ್, ಸಿನಿನಟ ಕೃಷ್ಣಂರಾಜುರೂ ಸೇರಿದಂತೆ ನಾಯಕರ ಒಂದು ದೊಡ್ಡ ಹಿಂಡೇ ಪಕ್ಷ ತ್ಯಜಿಸಿ ಹೊರಟು ಹೋಯಿತು.

ಇಂದು ಅಳಿದುಳಿದಿರುವ ನಾಯಕರು, ಶಾಸಕರು ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡುವ ಪ್ರಪೋಸಲ್ಲೊಂದನ್ನು ಕೈಲಿ ಹಿಡಿದು ಓಡಾಡುತ್ತಿದ್ದಾರೆ. ಚಿರಂಜೀವಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸದೇ ಇರಬಹುದು ಆದರೆ ಇರುವ 17 ಮಂದಿ ಶಾಸಕರಲ್ಲಿ 8-10 ಮಂದಿ ಕಾಂಗ್ರೆಸ್ಗೆ ಹೋಗಲು ನಿರ್ಧರಿಸಿದರೆ ಯಾವ ಕಾಯ್ದೆಗಳೂ ಅಡ್ಡ ಬರುವುದಿಲ್ಲ. ಅದೇ ಆಪರೇಷನ್ ಹಸ್ತ! ಚಿರಂಜೀವಿ ಇಂದು ಎಕಾಂಗಿಯಾಗಿದ್ದಾರೆ. ಅವರ ಸುತ್ತಲೂ ನೆರೆದಿರುವುದು ಅವರ ಕುಟುಂಬಿಗರು ಮಾತ್ರ, ಅಭಿಮಾನಿಗಳು? ಅವರು ಚಿರಂಜೀವಿಯನ್ನು ರಾಜಕೀಯ ನಾಯಕನಾಗಿ ತಿರಸ್ಕರಿಸಿ ಶಾನೇ ಕಾಲವಾಯಿತು ಬಿಡಿ.

ಹೀಗೆ ಎರಡೂಮುಕ್ಕಾಲು ದಶಕದ ನಂತರ ಆಂಧ್ರದ ರಾಜಕೀಯದ ಅತ್ಯಂತ ಆಶಾಜನಕ ಬೆಳವಣಿಗೆಯೆನಿಸಿಕೊಂಡ, ಜನರಲ್ಲಿ ಶುದ್ಧ ರಾಜಕೀಯ ವ್ಯವಸ್ಥೆಯೊಂದರ ಭರವಸೆ ಹುಟ್ಟಿಸಿದ್ದ ರಾಜಕೀಯ ಪ್ರಯೋಗವೊಂದು ಕುಸಿದು ಬಿದ್ದಿದೆ. ಮತದಾರ ಮತ್ತೆ ಸಿನಿಕನಾಗಿದ್ದಾನೆ. ಇಂದಿಗೂ ಚಿರಂಜೀವಿಗೆ ಅವಕಾಶವಿದೆ. ಆತ ಇನ್ನೈದು ವರ್ಷಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸಬೇಕು. ವಿಧಾನಸಭೆಯಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಸಂಖ್ಯೆ ಕೇವಲ 17 ಅಂತ ಕೂರುವುದು ಪಲಾಯನವಾದವಾಗುತ್ತದೆ. ಅದೇ ವಿಧಾನಸಭೆಯಲ್ಲಿ ಲೋಕಸತ್ತಾದ ಜಯಪ್ರಕಾಶ ನಾರಾಯಣ ಒಬ್ಬರೇ ಇರುವುದು ಅವರ ಪಕ್ಷದಿಂದ. ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ನೋಡುವುದೇ ಒಂದು ಛೆಂದ! ಇವರು 17 ಅವರು ಒಬ್ಬರು, ಇವರು ಪ್ರೇಕ್ಷಕರು ಅವರು ಪ್ರತಿಪಕ್ಷ ನಾಯಕರು! ಅಲ್ಲಿ ತಮಿಳು ನಾಡಿನಲ್ಲಿ ವಿಜಯಕಾಂತ್ರನ್ನು ನೋಡಾದರೂ ಕಲಿಯಬೇಕು. ಅವರೂ ಇವರಷ್ಟೇ ಪ್ರಖ್ಯಾತ ಸಿನಿನಟರು, ರಾಜಕೀಯಕ್ಕೆ ಬಂದಿದ್ದಾರೆ. ಅವರ ಪಕ್ಷದಿಂದ ಅವರೊಬ್ಬರೇ ಶಾಸಕರು. ಆದರೆ ಅವರು ತಮ್ಮ ಹೋರಟವನ್ನು ಕೈಬಿಟ್ಟಿಲ್ಲ. ಯಾರೊಂದಿಗೂ ಕೈಜೋಡಿಸುತ್ತಲೂ ಇಲ್ಲ. ನಿಧಾನವಾಗಿ ತಮಿಳು ನಾಡಿನ ರಾಜಕೀಯವನ್ನು ತ್ರಿಕೋನಗೊಳಿಸುವುತ್ತಾ ಶ್ರಮಿಸುತ್ತಿದ್ದಾರೆ. ಈಗ ಚಿರಂಜೀವಿ ಮಾಡಬೇಕಾದ್ದೂ ಅದನ್ನೇ ಅವರು ನಿಧಾನವಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಒಂದು space ಅನ್ನು ಸೃಷ್ಟಿಸಿಕೊಳ್ಳಬೇಕು. ಅದು ಅವರ ಸ್ಟಾರ್ಗಿರಿಯಿಂದ ಆಗುವಂತಹ ಕೆಲಸವಲ್ಲ. ಅವರ ಜನಪರ ಹೋರಟಗಳಿಂದಲೇ ಅದು ಸಾಧ್ಯ. ಚಿರಂಜೀವಿಗೆ ಅಷ್ಟು ತಾಳ್ಮೆ ಇದೆಯೇ? ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಯಾರೇ ಆಗಲೀ ರಾಜಕೀಯ ಮಾಡುವುದು ಅಧಿಕಾರವನ್ನು ಗುರಿಯಾಗಿಸಿಕೊಂಡೋ ಅಥವಾ ಅಧಿಕಾರವನ್ನು ಜನಸೇವೆಯ ಮಾರ್ಗವೆನಿಸಿಕೊಂಡೋ ಎನ್ನುವುದು. ಚಿರಂಜೀವಿ ಮೊದಲನೇ ಗುಂಪಿಗೆ ಸೇರಿ ಬಂದವರು. ಅದಂತೂ ಈಡೇರಲಿಲ್ಲ, ಈಗಲಾದರೂ ಎರಡನೇ ಗುಂಪಿಗೆ ಸೇರುವರೋ? ಕಾದು ನೋಡಬೇಕು. ಏನೇ ಆಗಲಿ ಚಿರಂಜೀವಿ ಹುಟ್ಟಿಸಿದ ನಿರೀಕ್ಷೆ ಮತ್ತು ನಿರಾಶೆ ಅಕ್ಷಮ್ಯ.
( ಈ ವಾರದ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ )

One thoughts on “ಚಿರು ದುರಂತ

jayalaxmi said...

ಕೇವಲ ಜನಪ್ರಿಯತೆ ಇದ್ದರೆ ಸಾಲದು ರಾಜಕೀಯಕ್ಕೆ ಬರಲು ಎನ್ನುವುದು ಈಗಲಾದರೂ ಚಿರಂಜೀವಿಯಂಥ ಉತ್ತಮ ನಟರಿಗೆ ಅರಿವಾದರೆ ಸಾಕು. ರಾಜಕೀಯ ಹುಡುಗಾಟದ ವಸ್ತುವಲ್ಲ ಅಲ್ಲವೆ?
ಸವಿಸ್ತಾರ ಬರಹ. ಇಷ್ಟವಾಯ್ತು.

Proudly powered by Blogger
Theme: Esquire by Matthew Buchanan.
Converted by LiteThemes.com.