ನೇತಾಜಿ: ಹಿಸ್ಟರಿಯೋ? ಮಿಸ್ಟರಿಯೋ?

ಇಂದು ನಾವು ನಮ್ಮ 63ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸಹ ಸಂಪದಿಗ ಶ್ರೀಯುತ ರಾಕೇಶ್ ಶೆಟ್ಟಿಯವರು `1947ರ ಸ್ವಾತಂತ್ರ್ಯದ ಸೂರ್ಯ ನೋಡಲು ಅವರು ಬದುಕಿದ್ದರಾ?' ಎಂಬ ಲೇಖನ ಮಾಲಿಕೆಯ ಮೂಲಕ ಸುಭಾಷ್ ಚಂದ್ರ ಬೋಸರ ಸಾವಿನ ನಿಗೂಢತೆ ಮತ್ತು ವಿವಾದಗಳನ್ನು ಚರ್ಚೆಗೊಡ್ಡಿದ್ದಾರೆ. ಅದು ಸ್ವಾಗತಾರ್ಹವೇ ಸರಿ. ನೇತಾಜಿ ವಿಮಾನಾಪಘಾತದಲ್ಲಿ ಸಾಯಲಿಲ್ಲವಂತೆ, ಅವರು ಸ್ವಾತಂತ್ರ್ಯ ಬಂದ ಮೇಲೂ ಬದುಕಿದ್ದರಂತೆ, ಸನ್ಯಾಸಿಯಾಗಿದ್ದರಂತೆ, ಅವರೂ ಇನ್ನೂ ಇದ್ದಾರಂತೆ.. ಇತ್ಯಾದಿ, ಇತ್ಯಾದಿ ಅನೇಕ ವದಂತಿ, ಪುಕಾರುಗಳಿಗೆ ಲೆಕ್ಕವಿಲ್ಲ. ಇದನ್ನೇ ವಸ್ತುವಾಗಿಟ್ಟುಕೊಂಡು ಕೊಂಚ ಹಿಂದೆ ನಾನು ಬರೆದ ಕಿರು ಲೇಖನವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು ನೇತಾಜಿಯವರ ಸಾವಿನ ಕುರಿತ ಎಲ್ಲ ವಿವಾದಗಳನ್ನೂ ಮುಟ್ಟುತ್ತದಾದರೂ ವಿಸ್ತೃತವಾಗಿ ಚರ್ಚಿಸುವುದಿಲ್ಲ. ಆದರೆ ನೇತಾಜಿ ಸಾವಿನ ಕುರಿತ ನಿಗೂಢತೆ ಮತ್ತು ವಿವಾದಗಳ ಕುರಿತು ಒಂದು ವಿಹಂಗಮ ನೋಟವನ್ನಂತೂ ನೀಡುತ್ತದೆ. ತಮಗಿಷ್ಟವಾದೀತೆಂದು ಇಲ್ಲಿ ಪ್ರಕಟಿಸುತ್ತಿದ್ದೇನೆ.

ನೇತಾಜಿ ಸುಭಾಷ್ ಚಂದ್ರ ಬೋಸ್. ಆ ಹೆಸರು ಕೇಳದರೇನೆ ಏನೋ ಒಂದು ರೋಮಾಂಚನ. ನಮ್ಮ ಪೀಳಿಗೆಯ ಅನೇಕರಿಗೆ ಅವರ ಕುರಿತು ಹೆಚ್ಚು ತಿಳಿದೇ ಇಲ್ಲ. ಅವರು ಗೋಡೆಯ ಮೇಲಿನ ಚಿತ್ರವಷ್ಟೆ. ಆದರೆ ನೇತಾಜಿಯವರ ಕುರಿತು ಓದುತ್ತಾ ಹೋದಂತೆ ಅವರ ವ್ಯಕ್ತಿತ್ವದ ಅನೇಕ ಮುಖಗಳು ಮತ್ತು ನಮ್ಮ ಸ್ವತಂತ್ರ್ಯ ಸಂಗ್ರಾಮದಲ್ಲಿ ಅವರು ವಹಿಸಿದ ನಿರ್ಣಾಯಕ ಪಾತ್ರದ ಕುರಿತು ತಿಳಿಯುತ್ತದೆ. ಅವರ ಶೌರ್ಯ ಸಾಹಸದ ಅನೇಕ ಕಥೆಗಳು ಮೈನವಿರೇಳಿಸುತ್ತವೆ. ಅವರು 1941ರಲ್ಲಿ ಬ್ರಿಟಿಷರ ಗೃಹಬಂಧನದಿಂದ ತಪ್ಪಿಸಿಕೊಂಡು ನಂತರ ಅವರು ನಡೆಸಿದ ಸ್ವತಂತ್ರ್ಯ ಹೋರಾಟ ಭಾರತ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕದ್ದು. ಆದರೆ ಸುಭಾಷರಿಗೆ ಸಲ್ಲಬೇಕಾದ ಗೌರವವನ್ನು ಅವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. ಇದು ನಮ್ಮ ದೇಶದ ದುರ್ದೈವ . ಸುಭಾಷರು 1897ರ ಜನವರಿ 23ರಂದು ಕಟಕ್ನಲ್ಲಿ ಜನಿಸಿದರು. ಕಾಂಗ್ರೆಸ್ ಸೇರಿ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಅವರು ನಂತರ ಅಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ ತೊರೆದು ಫಾರ್ವಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದರು. ತಮ್ಮ ರಾಷ್ಟ್ರೀಯವಾದ, ಸ್ಪಷ್ಟ ಚಿಂತನೆ ಮತ್ತು ಬ್ರಿಟಿಷರಿಗೆ
ಬಂದೂಕಿನ ನಳಿಕೆಯಿಂದಲೇ ಉತ್ತರಕೊಡಬೇಕೆಂಬ ಅವರ ವಿಚಾರಧಾರೆ ಅಪಾರ ಜನಮನ್ನಣೆ ಗಳಿಸಿದ್ದವು. ಎರಡನೇ ವಿಶ್ವ ಯುದ್ಧದಲ್ಲಿ ಭಾರತವನ್ನು ಪಾಲ್ಗೊಳ್ಳುವಂತೆ ಮಾಡಿದ ಬ್ರಿಟಿಷರ ಕ್ರಮವನ್ನು ವಿರೋಧಿಸಿದ ಸುಭಾಷರನ್ನು ಗೃಹಬಂಧನದಲ್ಲಿರಿಸಲಾಯಿತು. ಆದರೆ 41ರ ಜನವರಿ 17ರಂದು ಅಲ್ಲಿಂದ ತಪ್ಪಿಸಿಕೊಂಡ ಸುಭಾಷರು ನಂತರ ಜರ್ಮನಿ, ಜಪಾನ್ಗಳ ಸಹಾಯದಿಂದ ಭಾರತ ಸ್ವತಂತ್ರಕ್ಕಾಗಿ ಹೋರಾಡಿದರು. ಅವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿ ಜಪಾನ್ ಸೇನೆಯೊಡಗೂಡಿ ಬರ್ಮ ಮತ್ತು ಭಾರತದ ಈಶಾನ್ಯ ಪ್ರದೇಶದ ಬಹುತೇಕ ಭಾಗವನ್ನು ಆಕ್ರಮಿಸಿಕೊಂಡಿದ್ದರು. ಇದೇ ಅಲ್ಲದೇ ಭಾರತದ ಹಂಗಾಮಿ ಸರ್ಕಾರವನ್ನೂ ಅವರು ಸ್ಥಾಪಿಸಿದ್ದರು. ಆದರೆ 1945ರ ಆಗಸ್ಟ್ 18ರಂದು ತೈವಾನ್ನ ತೈಪೆಯಲ್ಲಿ ನಡೆದಿದೆಯೆನ್ನಲಾದ ವಿಮಾನಾಪಘಾತವೊಂದರಲ್ಲಿ ಅವರು ಮರಣವನ್ನಪ್ಪಿದರೆಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಆದರೆ ಇದನ್ನು ಬಹುತೇಕರು ನಂಬಲೇ ಇಲ್ಲ. ಇದು ಸುಭಾಷರು ಭೂಗತರಾಗಿದ್ದಾಗ ಅವರ ಸಹವರ್ತಿಗಳು ತೇಲಿಬಿಟ್ಟ ಸುದ್ದಿಯೆಂದೇ ಭಾವಿಸಲಾಯಿತು. ಅವರ ವ್ಯಕ್ತಿತವವೇ ಹಾಗೆ - ನಿಗೂಢ. ಅವರ ಪ್ರತಿ ಹೆಜ್ಜೆಯ ಹಿಂದೆಯೂ ಒಂದು ದೂರದರ್ಶಿತ್ವ, ನಿಗೂಢತೆ ಇರುತಿತ್ತು. ಇದು ಕೂಡ ಅಂತಹುದೇ ಒಂದು ಸುದ್ದಿಯೆಂದು ಅನೇಕರು ಭಾವಿಸಿದರು. ಆದರೆ ಅಂದೇ ಕೊನೆ ನಂತರ ಸುಭಾಷರು `ಅವರಾಗಿ' ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸುಭಾಷರ ಕುರಿತು ಈಗಲೂ

ಹೊಗೆಯಾಡುತ್ತಿರುವ ವಿವಾದವೆಂದರೆ ಅದು ಅವರ ಸಾವಿನ ಕುರಿತಾದ್ದೇ. ಸರ್ಕಾರದ ದಾಖಲೆಗಳ ಪ್ರಕಾರ ಸತ್ತನೆಂದು ಘೋಷಿಸಲಾದ ಮನುಷ್ಯನ ಸಾವಿನ ಬಗ್ಗೆ 64 ವರ್ಷಗಳ ನಂತರವೂ ವಿವಾದಗಳಿರುವುದು ಇದೇ ಮೊದಲಿರಬೇಕು.

ಇದುವರೆಗೂ ಮೂರು ತನಿಖಾ ಆಯೋಗಗಳು ಇದರ ಕುರಿತು ತನಿಖೆ ನಡೆಸಿವೆ. ಆದರೂ ಜನರಿಗೆ ತಮ್ಮ ರಾಷ್ಟ್ರನಾಯಕನೊಬ್ಬನ ಅಂತ್ಯದ ಸತ್ಯಾಂಶಗಳನ್ನು ತಿಳಿಸಲಾಗಿಲ್ಲ. ಆರಂಭದ ಎರಡು ವಿಚಾರಣಾ ಆಯೋಗಗಳಾದ ಷಾ ನವಾಜ್ ಖಾನ್ ಆಯೋಗ (1956) ಮತ್ತು ಜೆ.ಡಿ.ಖೋಸ್ಲಾ (1970)ಆಯೋಗಗಳು - ಸುಭಾಷರು ಜಾಪಾನೀಯರು ಹೇಳುವಂತೆ ವಿಮಾನಾಪಘಾತದಲ್ಲಿ ಸತ್ತಿರುವುದು ನಿಜವೆಂದೂ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮವು ಅವರದೇ ಎಂದು ವರದಿ ನೀಡಿದವು. ಆದರೆ ಇವು ಪೂರ್ವಾಗ್ರಹ ಪೀಡಿತವಾಗಿದ್ದವೆಂಬುದು ಎಲ್ಲರೂ ಬಲ್ಲ ವಿಚಾರವೆ. ನರಸಿಂಹರಾಯರ ಅವಧಿಯಲ್ಲಿ ಮರುಜೀವ ಪಡೆದ ಈ ವಿವಾದವು ಕಲ್ಕತ್ತೆಯ ಹೈಕೋರ್ಟ್ ವಿಚಾರಣೆಗೆ ಆದೇಶಿಸುವುದರೊಂದಿಗೆ, 1999ರಲ್ಲಿ ಏಕಸದಸ್ಯ ಮುಖರ್ಜಿ ಆಯೋಗದ ರಚನೆಗೆ ದಾರಿ ಮಾಡಿಕೊಟ್ಟಿತು. ಅದು 2005ರ ನವೆಂಬರ್ 8ರಂದು ತನ್ನ ವರದಿ ಸಲ್ಲಿಸಿತು. ಹಲವಾರು ಅಡ್ಡಿ ಆತಂಕಗಳ ನಡುವೆ ತನ್ನ ತನಿಖೆ ನಡೆಸಿದ ಸಮಿತಿಯು ಸುಭಾಷರು ಈಗ ಬದುಕಿಲ್ಲವಾದರೂ, ಹಲವರು ತಿಳಿದಿರುವಂತೆ ಅವರು 45ರ ವಿಮಾನಾಪಘಾತದಲ್ಲಿ ಮರಣವನ್ನಪ್ಪಲಿಲ್ಲವೆಂದೂ, ರೆಂಕೋಜಿ ದೇವಾಲಯದಲ್ಲಿರುವುದು ಅವರ ಚಿತಾಭಸ್ಮವಲ್ಲವೆಂದು ವರದಿ ನೀಡಿದೆ. ಆದರೆ ಕೇಂದ್ರದ ಯು.ಪಿ.ಎ ಸರ್ಕಾರವು ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಕಾರಣ? - ಆ ದೇವರೇ ಬಲ್ಲ. ಇದೇ ನಿಜವಾದರೆ 1945ರ ವಿಮಾನಾಪಘಾತದ ನಂತರ ಸುಭಾಷರು ಏನಾದರು? ಅವರೇಕೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ? ಅಷ್ಟಕ್ಕೂ ಸುಭಾಷರು ವಿಮಾಣಾಪಘಾತದಲ್ಲಿ ಸಾಯಲಿಲ್ಲವೆಂದು ವರದಿ ನೀಡಿರುವ ಮುಖರ್ಜಿ ಆಯೋಗವು ಅದಕ್ಕೆ ಪೂರಕವಾಗಿ ಸಂಗ್ರಹಿಸಿರುವ ಸಾಕ್ಷಿಗಳಾದರೂ ಯಾವುವು?

ಜನಜನಿತ ವೃತ್ತಾಂತದಂತೆ 1945ರ ಆಗಸ್ಟ್ 18ರಂದು ತೈವಾನ್ನ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಸುಭಾಷರು ತೀರಿಕೊಂಡಿದ್ದರು. ಆದರೆ ಆಶ್ಚರ್ಯಕರ ವಿಚಾರವೆಂದರೆ ತೈವಾನ್ನ ಸಕರ್ಾರವು 45ರ ಆಗಸ್ಟ್ 18ರಂದು ತೈಪೆಯಲ್ಲಿ ಯಾವುದೇ ವಿಮಾನಾಪಘಾತ ನಡೆದಿಲ್ಲವೆಂದು ಹೇಳಿಕೆ ನೀಡಿದೆ. ಈ ಹೇಳಿಕೆಯನ್ನು ಹಿಂದಿನ ಯಾವುದೇ ಆಯೋಗವು ದಾಖಲಿಸಿರಲಿಲ್ಲ. ಹೀಗೆ ಮುಂದುವರಿದು 1945ರ ನಂತರವೂ ವಿಶ್ವದ ಅನೇಕ ದೇಶಗಳ ಸರ್ಕಾರಗಳು ಸುಭಾಷರ ಚಟುವಟಿಕೆಗಳ ಕುರಿತಾಗಿ ಚರ್ಚೆ ನಡೆಸಿರುವುದರ ದಾಖಲೆಗಳನ್ನು ಮುಂದಿರುಸುತ್ತಾರೆ. ಇದರಲ್ಲಿ ಪ್ರಮುಖವಾಗಿರುವವರೆಂದರೆ ಗ್ರೇಟ್ ಬ್ರಿಟನ್, ಅಮೇರಿಕಾ ಮತ್ತು ರಷಿಯಾ(ಯು.ಎಸ್.ಎಸ್.ಆರ್). ಹಾಗಾದರೆ ಅವರು ಏನು ಮಾಡುತ್ತಿದ್ದರು. ಅವರ `ಸಾವಿನ' ನಂತರದ ಬದುಕಿನ ಯಾವುದೇ ವಿವರಗಳು ಲಭ್ಯವಿಲ್ಲವೇ? ಒಂದು ಕಥಾನಕದ ಪ್ರಕಾರ ಎರಡನೇ ಪ್ರಪಂಚ ಯುದ್ಧದಲ್ಲಿ ಸುಭಾಷರು ಗುರುತಿಸಿಕೊಂಡಿದ್ದ ಆಕ್ಸಿಸ್ ಶಕ್ತಿಗಳು ಸೋಲುವುದರೊಂದಿಗೆ, ಸುಭಾಷರು ತಮ್ಮ ಮುಂದಿನ ಕಾರ್ಯತಂತ್ರದಂತೆ ರಷಿಯಾದ ಸಹಾಯ ಬೇಡಲು ಮಂಚೂರಿಯಾಕ್ಕೆ ಹೊರಟರೆನ್ನಲಾಗಿದೆ. ಇಲ್ಲಿ ನಡೆದ ಕುಖ್ಯಾತ ಉಗಐಉ ಆಪರೇಶನ್ನ ಭಾಗವಾಗಿ ರಷಿಯಾದ ಸ್ಟಾಲಿನ್ ಸಕರ್ಾರ ಸುಭಾಷರನ್ನು ಬಂಧಿಸಿ ಸೈಬೀರಿಯಾದ ಬಂದೀಖಾನೆಯಲ್ಲಿಟ್ಟಿದ್ದರು. ಇದಕ್ಕೂ ಪೂರಕ ಸಾಕ್ಷಿಗಳಿಲ್ಲದಿಲ್ಲ. 1946ರಲ್ಲಿ ತನ್ನ ಸಚಿವ ಸಂಪುಟದ ಸಭೆಯಲ್ಲಿ ನೇತಾಜಿಯವರ ಜೊತೆ ಹೇಗೆ ವ್ಯವಹರಿಸಬೇಕು? ಅವರನ್ನು ಏನು ಮಾಡಬೇಕೆಂದು ಚರ್ಚಿಸಿರುವುದರ ಕುರಿತ ದಾಖಲೆಗಳು ರಷಿಯಾದ ಪತ್ರಾಗಾರದಲ್ಲಿವೆಯೆಂದು ಅಲೆಕ್ಸಾಂಡರ್ ಕೊಲೆಷ್ನಿಕೋವ್ ತಿಳಿಸಿದ್ದಾರೆ. ಇದೇ ಅಲ್ಲದೇ ಸ್ವಲ್ಪ ಕಾಲ ರಷಿಯಾದ ರಾಯಭರಿಯಾಗಿದ್ದ ಎಸ್. ರಾಧಾಕೃಷ್ಣನ್ರವರು ರಷಿಯಾದಲ್ಲಿ ಸುಭಾಷರನ್ನು ಬೇಟಿಯಾದರೆಂಬ ಪ್ರತೀತಿಯಿದೆ. ಇದನ್ನು ಅವರೇ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರೆಂಬುದಾಗಿ ಹೇಳುತ್ತಾರೆ. ಇದರ ಮುಂದಕ್ಕೆ ಒಂದು ಕಥಾನಕವು ಸುಭಾಷರು ಸೈಬೀರಿಯಾದ ಸರೆವಾಸದ ಸಂದರ್ಭದಲ್ಲೆ ತೀರಿಕೊಂಡರೆಂದು ಹೇಳಿದರೆ, ಮಗದೊಂದು ಕಥಾನಕದ ಪ್ರಕಾರ ಸುಭಾಷರು ಸೈಬೀರಿಯಾದ ಸೆರೆವಾಸದಿಂದ ಬಿಡುಗಡೆಗೊಂಡು ಭಾರತಕ್ಕೆ ಮರಳಿ ಬಂದರು. ಅಷ್ಟರಲ್ಲಿ ಭಾರತಕ್ಕೆ ಸ್ವತಂತ್ರ್ಯ ದಕ್ಕಿಸಿಕೊಡುವ ಅವರ ಆಶಯ ಈಡೇರಿದ್ದರಿಂದ ಸನ್ಯಾಸಿಯ ಜೀವನ ನಡೆಸಿದರೆಂದು ಹೇಳುಲಾಗುತ್ತದೆ.

ಉತ್ತರಪ್ರದೇಶದಲ್ಲಿ ಗುಮ್ನಾಮಿ ಬಾಬಾ ಎಂಬ ಹೆಸರಿನಲ್ಲಿ ಅವರು ಅಜ್ಞಾತವಾಸದಲ್ಲಿದ್ದರೆಂಬ ಪ್ರತೀತಿ ಇದೆ. ಕುತೂಹಲ ಕೆರಳಿಸುವ ವಿಚಾರಗಳೆಂದರೆ - ಗುಮ್ನಾಮಿ ಬಾಬಾ ತಮ್ಮ ಮುಖವನ್ನು ಯಾರಿಗೂ ತೋರಿಸದೇ ಇರುತ್ತಿದ್ದುದು, ಸುಭಷರಿಗೆ ಪರಿಚಯವಿದ್ದ ಹಲವಾರು ಜನ ಬಾಬಾಗೂ ಪರಿಚಯವಿದ್ದುದು, ಬಾಬಾ ಮತ್ತು ಸುಭಾಷರ ಜನ್ಮದಿನ ಮತ್ತು ಕೈಬರಹ ಒಂದೇ ಆಗಿದ್ದುದು, ಬಾಬಾ ಸೈಬೀರಿಯಾದಲ್ಲಿ ತಾನು ಕಳೆದ ಸೆರೆವಾಸದ ಕುರಿತು ಮಾತನಾಡುತ್ತಿದ್ದುದು ಮತ್ತು 1985ರ ಸೆಪ್ಟೆಂಬರ್ 16ರಂದು ಗುಮ್ನಾಮಿ ಬಾಬಾ ತೀರಿಕೊಂಡ ನಂತರ ಉತ್ತರ ಪ್ರದೇಶದ ಹೈಕೋಟರ್್ ಆದೇಶದ ಮೇರೆಗೆ ಅವರ ವಸ್ತುಗಳನ್ನು ಜಪ್ತಿ ಮಾಡಿ ಸಕರ್ಾರದ ಖಜಾನೆಗೆ ತುಂಬಿದಾಗ ಸುಭಾಷರಿಗೆ ಸೇರಿದ್ದೆನ್ನಲಾದ ಅನೇಕ ವಸ್ತುಗಳು ಅದರಲ್ಲಿದ್ದುದು. ಇವೆಲ್ಲವುಗಳ ಕುರಿತು ತನಿಖೆ ನಡೆಯಬೇಕಿದೆ. ನಡೆಯುತ್ತದಾ?

ಪ್ರಧಾನಿಗಳ ಕಾರ್ಯಾಲಯದಲ್ಲಿ ಸುಭಾಷರಿಗೆ ಸಂಬಂಧಿಸಿದಂತೆ 11 ಕಡತಗಳಿದ್ದು, ಅವೆಲ್ಲವೂ `ಕ್ಲಾಸಿಫೈಡ್' ಆಗಿವೆ. ಇನ್ನುಳಿದ ಈ ಕುರಿತ ಕೆಲವು ಕಡತಗಳು ಕಳುವಾಗಿವೆಯಂತೆ! ಈ ಕ್ಲಾಸಿಫೈಡ್ ಆದ ಕಡತಗಳಲ್ಲಿ ಅಂತಹುದ್ದೇನಿದೆಯೋ ನಾನಂತೂ ಕಾಣೆ. ಸುಭಾಷರ ಕುರಿತು, ಅವರ ಸಾವಿನ ಕುರಿತ ಸತ್ಯದ ಕುರಿತು ತೀರ ಪ್ಯಾಷನೇಟ್ ಆಗಿ ಮಾತನಾಡಿದವರು ಅನೇಕರಿದ್ದರು. ಇದರಲ್ಲಿ ಹಲವರು ಪ್ರಧಾನಿಗಳೂ ಆದರು. ಆದರೆ ಅಲ್ಲಿ ಹೋಗಿ ಕೂತು ಆ ಫೈಲಿನ ಮೇಲೆ ಕೈಯಿಡುತ್ತಿದ್ದಂತೆಯೇ ಅದೇನಾಗುತ್ತದೋ ಎಲ್ಲರೂ ಗಪ್ಚುಪ್! ಬಿಜೆಪಿಯ ವಾಜಪೇಯಿಯವರು ಅಂಥವರಲ್ಲಿ ಒಬ್ಬರು. ವಾಜಪೇಯಿ ಅಧಿಕಾರಕ್ಕೆ ಬಂದ ಕೂಡಲೇ ಅವರು ಸುಭಾಷ್ರ ಸಾವಿನ ಕುರಿತು ನೂತನವಾಗಿ ತನಿಖೆ ನಡೆಸಲು ಮುಖಜರ್ಿ ಆಯೋಗವನ್ನು ನೇಮಿಸಿದರು. ನಾನ್-ಕಾಂಗ್ರೆಸ್ ಸರ್ಕಾರವೊಂದು ಮುತುವರ್ಜಿ ವಹಿಸಿ ನೇಮಿಸಿದ್ದ ಆಯೋಗವಾದ್ದರಿಂದ ಈ ಬಾರಿ ಸತ್ಯ ಹೊರಬೀಳುತ್ತದೆಂದೇ ಎಲ್ಲರೂ ಆಸೆ ಪಟ್ಟಿದ್ದರು. ಆದರೆ ಅದೇನೇಯಿತೋ ಏನೋ ಅಪ್ಪ, ಮುಖರ್ಜಿ ಆಯೋಗ ಪ್ರಧಾನಿ ಕಛೇರಿಯಲ್ಲಿ ಕ್ಲಾಸಿಫೈಡ್ ಆಗಿರುವ ಕಡತಗಳನ್ನು ಪರಿಶೀಲನೆಗೆ ಕೊಡಬೇಕೆಂದು ಸರ್ಕಾರವನ್ನು ವಿನಂತಿಸಿದಾಗ, ಸರ್ಕಾರ ವಿಚಿತ್ರವಾಗಿ ಸ್ಪಂದಿಸಿತು. ಆ ಕಡತಗಳನ್ನು ಬಹಿರಂಗಗೊಳಿಸುವುದರಿಂದ ಭಾರತ ಮತ್ತಿತರ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ಬರುವುದೆಂದೂ ಮತ್ತು ಸುಭಾಷರ ವ್ಯಕ್ತಿತ್ವದ ಮೇಲೆಯೂ ಇದು ಕಪ್ಪು ಮಚ್ಚೆಯೇಳಿಸಬಹುದು. ಆದ್ದರಿಂದ ಇದನ್ನು ಆಯೋಗಕ್ಕೆ ನೀಡಲಾಗುವುದಿಲ್ಲ ಎಂದಿತು ಸರ್ಕಾರ . ಅಲ್ಲ ಈ ಕಡತಗಳಲ್ಲಿ ಅಂತದ್ದೇನಿದೆ ಅಂತ? ದೇವರೇ ಬಲ್ಲ.

ಇದಲ್ಲದೆ ಇತ್ತೀಚೆಗೆ, ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿಕೊಂಡು ಈ ಕಡತಗಲನ್ನು ಬೆಳಕಿಗೆ ತರುವ ಹೋರಾಟಗಳು ನಡೆದಿದೆ. ಈ ವಿಷಯದಲ್ಲಿ ದೆಹಲಿಯ ಪತ್ರಕರ್ತ ಅನುಜ್ ಧರ್ ಕಳೆದ ಕೆಲವಾರು ವರ್ಷಗಳಿಂದ ಅವಿಷ್ರಾಂತವಾಗಿ ದುಡಿಯುತ್ತಿದ್ದಾರೆ. ಆದರೆ ಫಲ ಮಾತ್ರ ಸೊನ್ನೆ. ಎಲ್ಲ ಕ್ಲಾಸಿಫೈಡ್ ಕಡತಗಳನ್ನು ವಿಶೇಷವೆಂದು ತಿಳಿಸಿ ಮಾಹಿತಿ ಹಕ್ಕಿನಡಿಯಲ್ಲಿ ನಿರಾಕರಿಸಲಾಗಿದೆ. ಅವರು ಇದಕ್ಕಾಗಿ `ಮಿಷನ್ ನೇತಾಜಿ' (missionnetaji.org) ಎಂಬ ಎನ್ಜಿಒ ಒಂದನ್ನು ಕೂಡ ಹುಟ್ಟು ಹಾಕಿದ್ದಾರೆ. ಇವರು ಈ ವಿಷಯವಾಗಿ back from dead - inside subhash bose mystery ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಸುಭಾಷರ ಸಾವಿನ ಕುರಿತ ಎಲ್ಲ ಮಾಹಿತಿಗಳ ಎನ್ಸೈಕ್ಲೋಪೀಡಿಯಾ ಇದ್ದಂತಿದೆ ಈ ಪುಸ್ತಕ. ಇನ್ನು ಕನ್ನಡದಲ್ಲಿ ಸದ್ಯ ಟಿವಿ9ನ ದೆಹಲಿ ಬ್ಯೂರೋ ಚೀಫ್ ಆಗಿರುವ ಶಿವಪ್ರಸಾದ್ ಅವರು `ಸುಭಾಷ್ ಸಾವಿನ ಸುತ್ತ?!' ಎಂಬ ಚೆಂದನೆಯ ಪುಸ್ತಕವೊಂದನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ಹಾಗೆ ಸುಭಾಷರ ಸಾವಿನ ಸತ್ಯ ಬಯಲಿಗೆ ಬಂದಿಲ್ಲ, ಬರುತ್ತದಾ? ನನಗಂತೂ ನಂಬಿಕೆಯಿಲ್ಲ. ನಾವಿರುವ ರಾಜಕೀಯ ವ್ಯವಸ್ಥೆ ಅಂತಹುದ್ದು.

Proudly powered by Blogger
Theme: Esquire by Matthew Buchanan.
Converted by LiteThemes.com.