ಹಂದಿ ಜ್ವರ - ಜಗತ್ತೇ ಜ್ವರ ಪೀಡಿತ!



ಜಗತ್ತಿನೆಲ್ಲೆಡೆ ಸ್ವೈನ್ ಫ್ಲೂ ಒಂದು ರೌಂಡು ಹೊಡೆದು ಇನ್ನು ಇದರ ಕತೆ ಮುಗಿಯಿತು ಎನ್ನುವಷ್ಟರಲ್ಲೇ ಇದು ಮತ್ತೆ ಬಂದಿದೆ. ಇದು ಇಷ್ಟು ದಿನ ತೆಗೆದುಕೊಂಡದ್ದು ಒಂದು ಸಣ್ಣ ಬ್ರೇಕ್ ಅಷ್ಟೆ, ಇದು ಸೀಸನ್ 2! ಇದರ ಸೀಸನ್ 1ರಲ್ಲಿ ಅಷ್ಟೇನೂ ಬಾಧಿತವಾಗದಿದ್ದ ಭಾರತ ಮತ್ತಿತರ ಏಷಿಯನ್ ರಾಷ್ಟ್ರಗಳೆಲ್ಲವೂ ಈಗ ಜ್ವರ ಪೀಡಿತ-ತತ್ತರ! ಭಾರತದಲ್ಲಿ ಈಗ ಸರಿಸುಮಾರು 1200 ಹಂದಿ ಜ್ವರ ಪೀಡಿತರಿದ್ದಾರೆ, ಸಾವಿನ ಸಂಖ್ಯೆ - 21! ಕಳೆದೊಂದು ವಾರದಿಂದ ಮೀಡಿಯಾಗೆ ಇದೇ ಸುದ್ದಿ - ಲೈವ್ ಅಪಡೇಟುಗಳು ಬೇರೆ! ಇದು ಜನರಲ್ಲಿ ಒಂದು ರೀತಿಯ ಆತಂಕವನ್ನು ಹುಟ್ಟುಹಾಕಿದೆ. ಎಲ್ಲರೂ ಜ್ವರ ಭೀತಿಗೊಳಗಾಗಿದ್ದಾರೆ. ಈ ಜ್ವರ ಹೇಗೆ ಹರಡುತ್ತದೆ? ಅದು ನಮಗೆ ತಗುಲದಂತೆ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಾವುವು? ಒಂದೊಮ್ಮೆ ಬಂದರೆ ನಂತರ ನಾವು ಎಲ್ಲಿಗೆ ಹೋಗಬೇಕು? ಅದೇನೋ ಇದಕ್ಕೆ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲವಂತೆ?....ಇತ್ಯಾದಿ, ಇತ್ಯಾದಿ.. ಜನರಲ್ಲಿ ಎಲ್ಲ ಪ್ರಶ್ನೆಗಳೇ, ಉತ್ತರವಿಲ್ಲವಷ್ಟೆ. ಮೊದಲಿಗೇ ಕೆಲವನ್ನು ಸ್ಪಷ್ಟ ಪಡಿಸಬೇಕು. ಯಾವುದೇ ಕಾರಣಕ್ಕೂ ಹಂದೀ ಜ್ವರ ಮಹಮ್ಮಾರಿಯಲ್ಲ! ಹಂದಿ ಜ್ವರ ಪೀಡಿತರೆಲ್ಲರೂ ಸಾಯುವುದಿಲ್ಲ. ಅಸಲಿಗೆ ಹಂದಿಜ್ವರದ ಆಯುಶ್ಯ ಕೇವಲ ಹತ್ತು ದಿನಗಳು! ಇದೂ ಸಹ ಸಾಮಾನಯ ಜ್ವರವಿದ್ದಂತೆಯೇ ಸ್ವಾಮಿ. ಸೂಕ್ತ ಕಾಲದಲ್ಲಿ ಗುರುತಿಸಿ ಚಿಕಿತ್ಸೆ ತೆಗೆದುಕೊಂಡಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಒಂದರಿಂದ ಮೂರು ದಿನಗಳು ಇದು ಉಲ್ಬಣಾವಸ್ಥೆಯಲ್ಲಿದ್ದು ನಂತರ ಉಪಶಮನವಾಗುತ್ತದೆ. 7-8 ದಿನಗಳಲ್ಲಿ ಮನುಷ್ಯ ಮಾಮೂಲಿಯಾಗುತ್ತಾನೆ. ಆದರೆ ಇದರಲ್ಲೊಂದು ಸಮಸ್ಯೆಯಿದೆ - ಇದು ಬಹುಬೇಗನೇ ಜ್ವರ ಪೀಡಿತನಿಂದ ಮತ್ತೊಬ್ಬರಿಗೆ ಹಬ್ಬುತ್ತದೆ. ಜ್ವರ ಪೀಡಿತ ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ರೋಗಾಣುಗಳನ್ನು ಗಾಳಿಗೆ ಬಿಡುತ್ತಾನೆ. ಅದು ಸುತ್ತಲಿನ ಪರಿಸರದಲ್ಲಿ ಜಮೆಯಾಗಬಹುದು - ತೀಪಾಯಿ, ಲೋಟ, ಪೇಪರ್ರು, ಫೋನ್ ಸೆಟ್ಟು, ಬಾಗಿಲುಗಳು ಹೀಗೆ. ಆ ಪರಿಸರದಲ್ಲಿ ಮತ್ತೊಬ್ಬರು ಉಸಿರಾಡುವುದರಿಂದ ಈ ರೋಗಾಣುವು ಅವರ ದೇಹವನ್ನೂ ಪ್ರವೇಶಿಸಿ ಜ್ವರ ಪೀಡಿತರನ್ನಾಗಿ ಮಾಡುತ್ತದೆ. ರೋಗಿಯ ದೇಹದಿಂದ ಹೊರಬಿದ್ದ ರೋಗಾಣುವು ಪರಿಸರದಲ್ಲಿ ಸುಮಾರು ಎರಡು ಘಂಟೆಗಳ ಕಾಲ ಜೀವಿಸಬಲ್ಲದು, ಅಷ್ಟರಲ್ಲಿ ಯಾರ ದೇಹವನ್ನೋ ಅದು ಹೊಕ್ಕರೆ ಅದಕ್ಕೆ ಪನರ್ಜನ್ಮ ಬಂದಂತೆಯೇ! ವಯಸ್ಕ ರೋಗಿಗಳು ಸುಮಾರು ರೋಗ ಬಂದಾಗಿನಿಂದ ಸುಮಾರು ಏಳು ದಿನಗಳು ಮತ್ತು ಮಕ್ಕಳು ಸುಮಾರು 10 ದಿನಗಳು ಈ ರೋಗವನ್ನು ಇತರರಿಗೆ ಹರಡಬಲ್ಲರು. ರೋಗಿಗಳು ಶಾಲಾ, ಕಾಲೇಜು, ಖಚೇರಿಗಳಿಂದ ಕನಿಷ್ಠ ಏಳು ದಿನಗಳ ಕಾಲ ದೂರವುಳಿದರೇನೆ ಒಳ್ಳೆಯದು.
ಇದು ರೋಗ ಮತ್ತೆ ಹಲವರಿಗೆ ಹರಡದಂತೆ ತಡೆಯುವಲ್ಲಿ ಸಹಕಾರಿ. ಈ ಹಂದಿ ಜ್ವರವಿದೆಯಲ್ಲ ಅದೊಂಥರಾ ಸೀಜನಲ್ ರೋಗ. ವೈರಾಣುವಿನ ಪ್ರಸರಣಕ್ಕೆ ಇಂದಿನ ವಾತಾವರಣ ಮತ್ತು ಹವೆ ಅತ್ಯಂತ ಪ್ರಶಸ್ತ್ಯ. ಈಗ ಭಾರತದಲ್ಲೆಲ್ಲಾ ಮಳೆ, ಚಳಿಗಳು ಸಮ್ಮಿಳಿತವಾಗಿ ಒಳ್ಳೆ ತಂಪು ಹವೆ ಇದೆ. ಇದೇ ಇದರ ಗುಟ್ಟು. ಈ ವೈರಾಣುಗಳು ಹರಡುವುದೇ ಈ ಕಾಲದಲ್ಲಿ. ಬರಬರುತ್ತಾ ಇದೂ ಸತ್ತು ಹೋಗುತ್ತದೆ, ಇದು ಮಾರಣಾಂತಿಕವೂ ಅಲ್ಲ, ಶಾಶ್ವತವೂ ಅಲ್ಲ.

ಇದೆಲ್ಲಾ ಸರಿ, ನಮಗೆ ಹಂದಿ ಜ್ವರ ಬಂದಿದೆ ಅಂತ ಹೇಗೆ ತಿಳಿಯುವುದು? ಮೊದಲಿಗೆ ಈ ವೈರಾಣು ನಮ್ಮ ಮೂಗು ಅಥವಾ ಬಾಯಿಯಿಂದ ದೇಹದ ಒಳ ಪ್ರವೇಶಿಸುತ್ತದೆ, ಅದೇ ಅದಕ್ಕ ರಾಜ ಮಾರ್ಗ. ಮೊದಲಿಗೆ ಅದು ದಾಳಿ ಮಾಡುವುದೇ ಶ್ವಾಸಕೋಶವನ್ನು. ಈ ವೈರಾಣು ರಕ್ತದಲ್ಲಿ ಅದರ ಸಂತಾನಾಭಿವೃದ್ಧಿ ಮಾಡುತ್ತದೆ. ಹಂದಿ ಜ್ವರದ ಲಕ್ಷಣಗಳು ಸಾಧಾರಣವಾಗಿ ಇತರ ಜ್ವರ ಅಥವಾ ಇನ್ಫ್ಲೂಎನ್ಜಾ ಜ್ವರಗಳಂತೆಯೇ ಇರುತ್ತವೆ. ತೀವ್ರ ಅಥವಾ ಸಾಧಾರಣ ತಾಪಮಾನದ ಜ್ವರ, ಕೈ-ಕಾಲು ನೋವು, ಗಂಟಲು ನೋವು, ತಲೆನೋವು, ಸುಸ್ತು, ಕೀಲು ನೋವು, ಕಟ್ಟಿದ ಮೂಗು ಅಥವಾ ಮೂಗಿನ ಸೋರುವಿಕೆ ಹೀಗೆ. ಹಂದಿ ಜ್ವರದ ಮುಖ್ಯ ಲಕ್ಷಣವೆಂದರೆ ಉಸಿರಾಟದ ತೊಂದರೆ. ಈ ರೋಗ ಲಕ್ಷಣಗಳನ್ನು ಮೊಳಕೆಯಲ್ಲೇ ಗುರುತಿಸಿ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಸಮಸ್ಯೆಯಿರುವುದಿಲ್ಲವಾದರೂ ಇವುಗಳನ್ನು ನಿರ್ಲಕ್ಷಿಸಿ ಕೂತರೆ, ಈ ಲಕ್ಷಣಗಳು ಉಲ್ಬಣಾವಸ್ಥೆಗೆ ಹೋಗಿ ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ಈಗ ದೇಶದಲ್ಲಿ ನಡೆಯುತ್ತಿರುವ ಸಾವಿನ ಪ್ರಕರಣಗಳೆಲ್ಲವೂ ಇಂಥವೇ. ಸಮಸ್ಯೆಯೆಂದರೆ ಈಗ ಹಂದಿ ಜ್ವರವಲ್ಲದೇ ಬೇರೆ ಇನ್ನಿತರ ಅನೇಕ ಜ್ವರಗಳು ಚಾಲ್ತಿಯಲ್ಲಿರುವುದು - ಡೆಂಗೆ, ಚಿಕನ್ ಗುನ್ಯಾ.... ಆದ್ದರಿಂದ ಈ ಲಕ್ಷಣಗಳು ಕಂಡು ಬಂದ ತಕ್ಷಣವೇ ಇದು ಹಂದಿ ಜ್ವರ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅದು ಡೆಂಗ್ಯೂ ಆಗಿರಬಹುದು, ಇಲ್ಲ ಗುನ್ಯಾ ಕೂಡ ಆಗಿರಬಹುದು, ಇಲ್ಲ ಸಾಮಾನ್ಯ ಜ್ವರವೇ ಆಗಿರಬಹುದು. ಯಾವುದಕ್ಕೂ ಈ ಲಕ್ಷಣಗಳ ಸುಳಿವು ಕಂಡಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳುವುದು ಒಳಿತು. ಯಾವ ವೈದ್ಯರು? ಇದು ಇನ್ನೂ ಗೋಜಲು ಗೋಜಲು ಮಾರಾಯ್ರೇ!

ಹಂದಿ ಜ್ವರ ತಪಾಸಣೆಯನ್ನು ಎಲ್ಲ ವೈದ್ಯರೂ ಮಾಡಲಾಗುವುದಿಲ್ಲ. ಅದರ ಪತ್ತೆಗೆಂದೇ ಒಂದು ಪ್ರತ್ಯೇಕ ಕಿಟ್ ಬರುತ್ತದೆ. ಅದನ್ನು ಕೇಂದ್ರ ಸರ್ಕಾರವೇ ಪೂರೈಸುತ್ತದೆ. ಈ ಕಿಟ್ಗಳನ್ನು ಸದ್ಯ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮೊದಲಿಗೆ ಸರ್ಕಾರವು ಜ್ವರ ಲಕ್ಷಣಗಳು ಕಂಡಾಕ್ಷಣ ಸರ್ಕಾರೀ ಆಸ್ಪತ್ರೆಗಳಿಗೇ ತೆರಳಿ ಖಸಗೀ ಆಸ್ಪತ್ರೆಗಳಲ್ಲಿ ಇದರ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ ಎಮದು ಘೋಷಿಸಿತು. ಅದೂ ಏನು ಎಲ್ಲಾ ಸರ್ಕಾರೀ ಆಸ್ಪತ್ರೆಗಳಲ್ಲೂ ಈ ಸೌಲಭ್ಯವಿಲ್ಲ. ಕೆಲವೇ ಕೆಲವು ಸರ್ಕಾರೀ ವೈದ್ಯಕೀಯ ಸಂಸ್ಥೆಗಳಲ್ಲಿ ಮಾತ್ರ ಈ ಸೌಲಭ್ಯ. ಇಡೀ ಕರ್ನಾಟಕಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಒಂದೇ ಇತ್ತು. ಇದು ಅಗತ್ಯವಿಲ್ಲದ ನೂಕುನುಗ್ಗಲು, ಗೊಂದಲಗಳಿಗೆ ಕಾರಣವಾಗಿತ್ತು. ಇದರಿಂದ ಎಚ್ಚತ್ತ ಕೇಂದ್ರ ಆರೋಗ್ಯ ಸಚಿವಾಲಯ ಖಾಸಗೀ ಆಸ್ಪತ್ರೆಗಳೂ ಇನ್ನು ಮುಂದೆ ಹಂದಿ ಜ್ವರ ಪೀಡಿತರ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತವೆ ಎಂದು ಘೋಷಿಸಿದೆ. ಎಲ್ಲೋ ಕೆಲ ಆಸ್ಪತ್ರೆಗಳು ಮಾತ್ರ ಈಗ ಈ ಸೇವೆಯನ್ನು ಪ್ರಾರಂಬಿಸಿದೆ. ಇವತ್ತಿಗೂ ಇದೆಲ್ಲವೂ ಗೊಂದಲಮಯ.

ತಪಾಸಣೆ ಅಂತ ತಲೆಬಿಸಿಯೇನಿಲ್ಲ. ಸೋಂಕಿನ ಶಂಕೆಯಿರುವವರ ಮೂಗಿನ ಸ್ರಾವ, ಉಗುಳು ಅಥವಾ ಉಸಿರಾಟದ ಅಂಗಗಳಿಂದ ಹೊರತೆಗೆಯುವ ಮಾದರಿಯನ್ನು ಪರೀಕ್ಷೆಗೊಳಪಡಿಸಿ ಅದು ಹಂದಿ ಜ್ವರವೋ ಅಲ್ಲವೋ ಎಂಬುದನ್ನು ಹೇಳುತ್ತಾರೆ. ಜ್ವರ ಪೀಡಿತರು ಅಂತ ಗೊತ್ತಾದರೆ ಏನು ಮಾಡಬೇಕು? ಅವರ ಮನೆಯವರು ಸುತ್ತಲಿನವರು ತೆಗೆದುಕೊಳ್ಳಬೇಕಾದ ಜಾಗ್ರ್ರತೆಗಳ್ಯಾವವು ಅಂದಿರಾ? ಮೊದಲಿಗೆ ಮೂಗು ಮತ್ತು ಬಾಯಿಗೆ ಅಡ್ಡವಾಗಿ ಒಂದು ಮಾಸ್ಕನ್ನು ಹಾಕಿಕೊಳ್ಳುವುದೊಳಿತು. ಇದು ರೋಗ ಬೇರೆಯವರಿಗೆ ಹರಡದಂತೆ ತಡೆಯುತ್ತದೆ. ರೋಗಿಗಳ ಜೊತೆ ಹತ್ತಿರದಲ್ಲೇ ಓಡನಾಡುವವರೂ ಕೂಡ ಇಂಥದೊಂದು ಮಾಸ್ಕನ್ನು ಹಾಕಿಕೊಳ್ಳುವುದು ಒಳಿತು. ಈ ಮಾಸ್ಕು ಎಲ್ಲ ಔಷಧೀ ಅಂಗಡಿಗಳಲ್ಲೂ ಸಿಗುತ್ತದೆ. ರೋಗಿಗಳು ಸದಾ ಕಾಲ ಬೆಚ್ಚನೆಯ ಬಟ್ಟೆ ಧರಿಸಿದ್ದರೆ ಒಳ್ಳೆಯದು. ಇನ್ನು ಹೆಚ್ಚುಹೆಚ್ಚು ಬಿಸಿನೀರನ್ನು ಸೇವಿಸುವುದು ಕೂಡ ಒಳ್ಳೆಯದು. ರೋಗಿ ಬಳಸಿದ ಊಟದ ತಟ್ಟೆ, ಲೋಟ...ಇತ್ಯಾದಿ ಸಾಮಾನುಗಳು ಮತ್ತು ತೊಟ್ಟ ಬಟ್ಟೆಯ ನಿರ್ವಹಣೆ ಸರಿಯಾಗಿರಬೇಕು. ಅವನ್ನು ಮುಟ್ಟಿದ ನಂತರ ಬಿಸಿನೀರಿನಲ್ಲಿ ಕೈತೊಳೆಯುವುದು ಉತ್ತಮ. ಮರೆತಿದ್ದೆ, ಆಗಾಗ ಸೋಪು ತಿಕ್ಕಿ ಬಿಸಿನೀರಿನಲ್ಲಿ ಕೈತೊಳೆಯುವುದು ಮೋಸ್ಟ್ ರೆಕಮೆಂಡೆಡ್! ವಿಶೇಷವಾಗಿ ಮಕ್ಕಳನ್ನು ರೋಗಿಗಳಿಂದ ದೂರವುಳಿಸುವುದು ಶ್ರೇಯಸ್ಕರ. ಈ ರೋಗವು ಮುಖ್ಯವಾಗಿ ಮಕ್ಕಳು, ಗರ್ಭಿಣಿಯರು ಮತ್ತು ಮುದಕರಿಗೆ ಬಹುಬೇಗನೇ ಹರಡುವುದರಿಂದ ಅವರ ವಿಷಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ.

ಹಂದಿ ಜ್ವರಕ್ಕೆ ಚಿಕಿತ್ಸೆ ಇದೆಯೇ? ಇನ್ನೂ ಯಾವುದೇ ವ್ಯಾಕ್ಸೀನ್ ಕಂಡು ಹಿಡಿದಿಲ್ಲವಂತೆ? ಹಾಗಾದರೆ ಜ್ವರ ಪೀಡಿತರ ಗತಿ? ಹೀಗೆಲ್ಲ ಮಾತುಗಳು ಹರಿಯುತ್ತಿವೆ. ಆದರೆ ಹಂದಿ ಜ್ವರಕ್ಕೆ ಚಿಕಿತ್ಸೆ ಇದೆ. ಟ್ಯಾಮಿಫ್ಲೂ ಅನ್ನೋ ಮಾತ್ರೆಯನ್ನು ವೈದ್ಯರು ಇದಕ್ಕೆ ಕೊಡುತ್ತಾರೆ. ಇದನ್ನು ಒಸೆಲ್ಟಾಮಿವಿರ್ ಎಂದೂ ಕರೆಯುತ್ತಾರೆ. ಆದರೆ ಇದರ ರೀಟೇಲ್ ಮಾರಾಟವನ್ನು ಸಕರ್ಾರ ನಿಷೇಧಿಸಿದೆ. ಇದರ ಸಮಸ್ಯೆಯೆಂದರೆ ಇದನ್ನು ಸಾಧಾರಣ ಜ್ವರಗಳಿಗೆ ತೆಗದುಕೊಂಡುಬಿಟ್ಟರೆ, ನಂತರ ಹಂದಿ ಜ್ವರ ಬಂದರೂ ಇದು ಕೆಲಸ ಮಾಡುವುದಿಲ್ಲ. ದೇಹ ಇದಕಲ್ಕನುಗುಣವಾಗಿ ಅಷ್ಟರಲ್ಲಿ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡುಬಿಟ್ಟಿರುತ್ತದೆ. ಈ ಮಾತ್ರೆಯನ್ನು ಹಂದಿ ಜ್ವರ ಖಚಿತವಾದ ಮೇಲೆ ವೈದ್ಯರೇ ಸೂಚಿಸುತ್ತಾರೆ. ಆಗಲೇ ತೆಗೆದುಕೊಳ್ಳಬೇಕು. ಇಲ್ಲಿ ಮೂಕೈವಾಗಿ ಆಗುತ್ತಿರುವುದೆಂದರೆ ಹಂದಿ ಜ್ವರದ ಕುರಿತು ಅನೇಕ ಊಹಾಗಾನಗಳು, ವದಂತಿಗಳು ಚಾಲ್ತಿಯಲ್ಲಿವೆ. ಇದು ನಡೆಯುವುದು ಸಾಮಾನ್ಯರಿಗೆ ಮಾಹಿತಿಯ ಕೊರತೆ ಕಾಡಿದಾಗ. ಆದ್ದರಿಂದ ಹಂದಿ ಜ್ವರ ಅಂದ ತಕ್ಷಣ ಅದೇನೋ ಮಹಮ್ಮಾರಿಯೆಂಬಂತೆ ಜನ ಭಯಭೀತಿಗೊಳ್ಳುತ್ತಿದ್ದಾರೆ. ಇನ್ನು ತಮ್ಮ ಕಥೆ ಮುಗಿಯಿತು ಎಂಬಂತೆ ಆಡುತ್ತಿದ್ದಾರೆ, ಅದರ ಜೊತೆಗೆ ತಪಾಸಣೆ-ಚಿಕಿತ್ಸೆಯ ಕುರಿತು ಗೊಮದಲಗಳು ಬೇರೆ. ಇನ್ನು ಮೀಡಿಯಾ ಅಂತೂ ಒಳ್ಳೆ ಕ್ರಿಕೆಟ್ ಸ್ಕೋರ್ ಹೇಳಿದ ಹಾಗೆ ರೋಗ ಪೀಡಿತರ ಮತ್ತು ಸತ್ತವರ ಸಂಖ್ಯೆಯನ್ನು ಘಳಿಗೆಗೊಂದು ಸಾರಿ ಬಿತ್ತರಿಸುತ್ತಿದೆ. ಇದು ಜನರಲ್ಲಿನ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಅನೇಕರು ಹಂದಿ ಜ್ವರ ಖಚಿತವಾದ ಕೂಡಲೇ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಇದು ಜ್ವರದ ಪರಿಣಾಮಗಳನ್ನು ಬೂಥಕನ್ನಡಿಯಡಿಯಿಟ್ಟಂತೆ ದೊಡ್ಡದಾಗಿ ಮಾಡಿ ತೋರಿಸುತ್ತದೆ, ಆತಂಕ ಇನ್ನೂ ಹೆಚ್ಚುತ್ತದೆ. ಭಯ ಪಡುವ ಅಗತ್ಯವಿಲ್ಲ ಹಂದಿ ಜ್ವರ ಮತ್ತೊಂದು ರೀತಿಯ ಸಾಮಾನ್ಯ ಜ್ವರ ಅಷ್ಟೆ, ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ತಿಂದು ಹಾಕಿ ನಿಮ್ಮನ್ನು ಸಾವಿಗೆ ದೂಡುವ ಏಡ್ಸೂ ಅಲ್ಲ, ಲಿವರನ್ನು ತಿಂದು ಹಾಕುವ ಹ್ಯಪಟಟಿಸ್ಸೂ ಅಲ್ಲ, ಅದೊಂದು ಸಾಮಾನ್ಯ ಜ್ವರ. ಆತಂಕ ಬೇಡ ಆದರೆ ಎಚ್ಚರವಿರಲಿ.


ಏನಿದು ಎಚ್1ಎನ್1? ಹಂದಿ ಜ್ವರಕ್ಕೆ ಕಾರಣವಾಗಿರುವ ವೈರಾಣುವನ್ನು ಎಚ್1ಎನ್1 ಎಮದು ಕರೆಯುತ್ತಾರೆ. ಇದೊಂದು ವ್ಯರಸ್. ಇದರ ಮೂಲ ಹಕ್ಕಿ ಜ್ವರ - ಏವಿಯನ್ ಫ್ಲೂ! ಉತ್ತರ ಅಮೆರಿಕಾದ ಹಕ್ಕಿ ಜ್ವರ, ಹಂದಿ ಜ್ವರ, ಮಾನವ ಜ್ವರ ಮತ್ತು ಏಷಿಯಾದ ಹಂದಿ ಜ್ವರಕ್ಕೆ ಕಾರಣವಾಗುವ ವೈರಾಣುಗಳ ಸಮ್ಮಿಳಿತ ರೂಪವೇ ಈ ಎಚ್1ಎನ್1! ಇದನ್ನು ಜೆನೆಟಿಕ್ ಮಿಕ್ಸ್ ಎಮದು ಕರೆಯುತ್ತಾರೆ. ಜ್ವರ ತಗುಲಿರುವ ವ್ಯಕ್ತಿಗೆ ಹಂದಿಗಳ, ಹಕ್ಕಿಗಳ ಜೊತೆ ಒಡನಾಟವಿದ್ದರೆ, ಆ ವೈರಸ್ಗಳೆಲ್ಲವೂ ಹೀಗೆ ಸಮ್ಮಿಳಿತಗೊಮಡು ಜಗತ್ತನ್ನೇ ಆಟವಾಡಿಸಬಹುದು, ಆಡಿಸುತ್ತಿದೆ. ಈ ಎಚ್1ಎನ್1 ವೈರಸ್ನ ಮೂಲ ಮೆಕ್ಸಿಕೋ ನಗರ. ಈ ಸ್ವೈನ್ ಫ್ಲೂನ ಉಗಮವೂ ಅಲ್ಲೇ. ಎಲ್ಲಾ ವೈರಸ್ಸುಗಳಂತೆಯೇ ಈ ಎಚ್1ಎನ್1 ಕೂಡ ರೂಪಾಂತರಗೊಳ್ಳುವ ಅಥವಾ ಮ್ಯುಟೇಟ್ ಆಗುವ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ ಇದು ಪ್ರತಿ ಬಾರಿ ರೂಪಾಂತರಗೊಂಡು, ಒಂದೊಂದು ಹೊಸ ಪ್ರಭೇಧದ ವೈರಸ್ ಹುಟ್ಟಿಕೊಂಡಾಗಲೂ ಒಂದೊಂದು ಬಗೆಯ ಫ್ಲೂ ಅನ್ನು ಹರಡಿಸುತ್ತದೆ. ಈಗಿನದು ಹಂದಿ ಜ್ವರದ ಸರದಿ.

ಫ್ಲೂ ಇತಿಹಾಸ - ಈ ಫ್ಲೂಗೆ ದೊಡ್ಡ ಇತಿಹಾಸವೇ ಇದೆ. ಇದರಲ್ಲಿ ಅತ್ಯಂತ ಭಯಾನಕವೆಂದರೆ 1918ರ ಸ್ಪಾನಿಷ್ ಫ್ಲೂ. ಸುಮಾರು 50 ದಶಲಕ್ಷ ಜನ ಈ ಸ್ಪಾನಿಷ್ ಫ್ಲೂದಿಂದ ಅಂದು ಮೃತಪಟ್ಟಿದ್ದರು. ಇದರ ನಂತರ ಇದು ಮತ್ತೆ ಕಾಣಿಸಿಕೊಂಡದ್ದು 1957ರಲ್ಲಿ - ಏಷ್ಯನ್ ಫ್ಲೂ, ಆಗ ಸತ್ತವರ ಸಂಖ್ಯೆ 70 ಸಾವಿರ. ಮತ್ತೆ 1968-69ರಲ್ಲಿ ಹಾಂಕಾಂಗ್ ಫ್ಲೂನ ರೂಪದಲ್ಲಿ ದರ್ಶನವಿತ್ತ ಇದು 33 ಸಾವಿರ ಜನರನ್ನು ಬಲಿತೆಗೆದುಕೊಂಡಿತು. ನಂತರದ್ದು ಇತ್ತೀಚಿನ 1990ರ ಹಕ್ಕಿ ಜ್ವರ, ಸತ್ತವರ ಸಂಕ್ಯೆ ಕೇವಲ 257. ತೀರ ಇತ್ತೀಚಿನದ್ದು ಎಂದರೆ 2002ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸಾರ್ಸ್. ಆಗ 774 ಜನ ಅಸುನೀಗಿದ್ದರು. ನಂತರ ಮತ್ತೆ ಕಳೆದೆರಡು ವರ್ಷಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತಾದರೂ ಅದು ಮನುಷ್ಯರಿಗೇ ಹರಡಲಿಲ್ಲ. ಈಗಿನದ್ದು ಹಂದಿ ಜ್ವರ. ಇಲ್ಲಿ ಪ್ರತಿ ಬಾರಿ ಫ್ಲೂ ಬಂದಾಗಲೂ ಸತ್ತವರ ಸಂಕ್ಯೆ ಜೋರಾಗಿಯೇ ಇದೆ ಅಂತ ಭಯ ಪಡುವ ಅಗತ್ಯವಿಲ್ಲ, ಯಾಕೆಮದರೆ ಈ ಎಲ್ಲಾ ಪ್ರಕರಣಗಲಲ್ಲೂ ಸೋಂಕಿತರ ಸಂಖ್ಯೆ ಸತ್ತವರಿಗಿಂತಲೂ ನೂರು-ನೂರೈವತ್ತು ಪಟ್ಟು ಹೆಚ್ಚಿತ್ತು.

ಸ್ವೈನ್ ಫ್ಲೂ ಮಾನವ ನಿರ್ಮಿತವೇ? ಹಾಗೊಮದು ಪ್ರಶ್ನೆ ಈಗ ಮನುಕುಲದ ಮುಂದೆ ಧುತ್ತನೆ ಬಂದು ಎದುರು ನಿಂತಿದೆ. ಅಮೆರಿಕಾ ಮತ್ತು ಇನ್ನೂ ಹಲವಾರು ದೇಶಗಳು, ಅನೇಕ ಭಯೋತ್ಪಾದನಾ ಸಂಸ್ಥೆಗಳೂ ವಿಧ್ವಂಸ ಸೃಷ್ಟಿಸಲು ಬಯಲಾಜಿಕಲ್ ವಾರ್ಫೇರ್ನಲ್ಲಿ ಅನೇಕ ಸಂಶೋಧನೆಗಳನ್ನು ನಡೆಸುತ್ತಿರುವುದು ವಿದಿತವೇ ಸರಿ. ಇಲ್ಲೊಂದು ಆಘಾತಕಾರಿ ಸುದ್ದಿಯಿದೆ ನೋಡಿ, ಮನುಕುಲ ಇತಿಹಾಸದಲ್ಲೇ ಅತ್ಯಂತ ವಿನಾಶಕಾರೀ ಫ್ಲೂ ಎನಿಸಿರುವ 1918ರ ಸ್ಪಾನಿಷ್ ಫ್ಲೂವನ್ನು ಟ್ರಿಗರ್ ಮಾಡಿದ ಆ ವೈರಾಣು ಯಾವುದೆಂಬುದು ಬಹುಕಾಲ ಮಾನವನಿಗೆ ಮಿಸ್ಟರಿಯೇ ಆಗಿತ್ತು. ಆದರೆ ಅಮೆರಿಕಾದ ವಿಜ್ಞಾನಿಗಳು ಸ್ಪಾನಿಷ್ ಫ್ಲೂನಿಂದಾಗಿ ಸತ್ತ ವ್ಯಕ್ತಿಯೊಬ್ಬಳ ದೇಹ ಭಾಗಗಳಿಂದ ಅದನ್ನು ಐಸೋಲೇಟ್ ಮಾಡಿ ಅದನ್ನು ಪುನಸೃಷ್ಟಿಸುವ ಸಾಹಸಕ್ಕೆ ಕೈಹಾಕಿ ಭಾಗಶಃ ಯಶಸ್ವಿಯಾಗಿದ್ದಾರೆ. ಅದಕ್ಕೂ ಇದಕ್ಕೂ ಏನು ಸಂಬಂಧ ಅಂದಿರಾ? ಇಲ್ಲಿದೆ ನೋಡಿ ಬಾಂಬು - ಈಗಿನ ಎಚ್1ಎನ್1 ವೈರಾಣುವೂ ಸ್ಪಾನಿಷ್ ಫ್ಲೂನ ವೈರಾಣುವನ್ನು ತುಂಬಾ ಹೋಲುತ್ತದೆ. ಆದರೆ ಇದು ಅದರ ಅತ್ಯಂತ ಕಳಪೆ ರೂಪ ಎಂದು ಹೇಳಲಾಗುತ್ತಿದೆ. ಸದ್ಯ ಇದು ಆ ಮಟ್ಟದಲ್ಲಿ ಮರಕವಲ್ಲ. ಇನ್ನೊಂದು ಆರೋಪವೂ ಕೇಳಿ ಬರುತ್ತಿದೆ ಅದು ಈ ಸ್ವೈನ್ ಫ್ಲೂಗಿರುವುದು ಒಂದೇ ಔಷಧ - ಟಾಮಿಫ್ಲೂ. ಈ ಔಷಧವನ್ನು ತಯಾರಿಸುತ್ತಿರುವ ಕಂಪೆನಿಯ ಚರಿತ್ರೆಯೇನೂ ಹೇಳಿಕೊಳ್ಳವಂತಿಲ್ಲ ಬಿಡಿ. ಈಗ ಈ ಕಂಪೆನಿಯವರು ತಮ್ಮ ಮಾತ್ರೆಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಅವರೇ ಈ ವೈರಾಣುವನ್ನು ಪಸರಿಸುತ್ತಿದ್ದಾರೆ ಎಂಬುದು ಆರೋಪ. ಇದರಲ್ಲಿ ಸತ್ಯವೆಷ್ಟೋ, ಮಿಥ್ಯವೆಷ್ಟೋ? ಯಾರೂ ಹೇಲಲಾರರು. ಆದರೆ ಇಂಥ ಆರೋಪಗಳಿರುವುದು ಸುಳ್ಳಲ್ಲ. ಇದರ ಉಗಮಕ್ಕೆ ಮನುಷ್ಯ ಕಾರಣನೋ ಅಲ್ಲವೋ ತಿಳಿದಿಲ್ಲವಾದರೂ ಇದರ ಹರಡುವಿಕೆಗಂತೂ ಮನುಷ್ಯನೇ ಕಾರಣ! ಇಂದು ಜಗತ್ತು ಅತ್ಯಂತ ಕಿರಿದಾಗುತ್ತಾ ಸಾಗಿದೆ. ಜನರ ಓಡಾಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಮೊದಲಿಗೆ ಈ ಹಂದಿ ಜ್ವರ ಮೂಲ ಮೆಕ್ಸಿಕೋ ನಗರವನ್ನು ಬಿಟ್ಟು ಕದಲಿದ್ದೇ ವಿಮಾನಗಳ ಮೂಲಕ. ಭರತಕ್ಕೂ ಇದು ಎಂಟ್ರಿ ಪಡೆದದ್ದು ಅಲ್ಲಿಂದಲೇ.

3 thoughts on “ಹಂದಿ ಜ್ವರ - ಜಗತ್ತೇ ಜ್ವರ ಪೀಡಿತ!

shruts said...

thanks for the detailed info

B.S.Chandrashekhara said...

good; but has to abridged ; ple free the article from copy right so that it canbe used in Wikis/bsc/11-2-2017

B.S.Chandrashekhara said...

Ple add edit fecility.
good; but has to be abridged ; ple free the article from copy right so that it can be used in Wikis/bsc/11-2-2017

February 11, 2017 at 9:51 PM ple,visit me at[[https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Bschandrasgr]]

Proudly powered by Blogger
Theme: Esquire by Matthew Buchanan.
Converted by LiteThemes.com.