ಆಸ್ಟ್ರೇಲಿಯಾದ ರೀಸಿಸ್ಟ್ ದಾಳಿಗಳು - ಒಂದು ಒಳನೋಟ

ಸರಿಸುಮಾರು ಎರಡ್ಮೂರು ತಿಂಗಳುಗಳಿಂದ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ರೇಸಿಸ್ಟ್ ದಾಳಿಗಳ ಸುದ್ದಿ ಬರುತ್ತಲೇ ಇವೆ. ಅಲ್ಲಿ ಕಳೆದ ಆರು ತಿಂಗಳುಗಳ ಅವಧಿಯಲ್ಲಿ, ಇಂತಹ 75 ಭಾರತೀಯರ ಮೇಲಿನ ಹಲ್ಲೆ ಪ್ರಕರಣಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇವೆ. ಇದೇನೇ ಇದ್ದರೂ ಆಸ್ಟ್ರೇಲಿಯಾ ದೇಶವೇ ರೇಸಿಸ್ಟ್ ಅಲ್ಲ. ಹಾಗಂತ ನಾವು ಹೇಳಲೂಬಾರದು. ಇದು ಅಲ್ಲಿನ ಕೆಲವು ಕಿಡಿಗೇಡಿಗಳ ಕೆಲಸ. ಆದರೆ ಅಲ್ಲಿನ ಸರ್ಕಾರದ ತಪ್ಪಿರುವುದು ಇದನ್ನು ಗುರುತಿಸಿ, ಕ್ರಮ ಕೈಗೊಳ್ಳದೇ ಇರುವುದರಲ್ಲಿ. ಅಲ್ಲಿನ ಸರ್ಕಾರ ಈ ದಾಳಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಪರಿಗಣಿಸಿದರೂ ಅದನ್ನವರು ತೋರಿಸ ಬಯಸುತ್ತಿಲ್ಲ. ಆಸ್ಟ್ರೇಲಿಯಾದ ಪ್ರಧಾನಿ ಇನ್ನು ರೇಸಿಸ್ಟ್ ದಾಳಿಗಳೆಂದು ಒಪ್ಪಿಕೊಳ್ಳ ಬಯಸುತ್ತಿಲ್ಲ. ಅವರ ಪ್ರಕಾರ ಇದೊಂದು ಸ್ಟ್ರೀಟ್ ಕ್ರೈಮ್ ಅಷ್ಟೆ. ಅದನ್ನು ಪೋಲೀಸರು ನೋಡಿಕೊಳ್ಳುತ್ತಾರೆ. ಅಲ್ಲಿನ ಮೀಡಿಯಾ ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರಾರಿಗೂ ಇದೊಂದು ದೊಡ್ಡ ವಿಷಯವಾಗುವುದು ಬೇಕಿಲ್ಲ. ಒಂದೊಮ್ಮೆ ಹಾಗಾದರೆ, ಅವರ ಶಿಕ್ಷಣೋದ್ಯಮಕ್ಕೆ ಹೊಡೆತ ಬೀಳುತ್ತದೆಂಬ ದಿಗಿಲವರಿಗೆ.

ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ರೇಸಿಸ್ಟ್ ದಾಳಿಗಳ ಕುರಿತಾಗಿ ನನಗೆ ದಕ್ಕಿದ ಒಳನೋಟವನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ. ರೇಸಿಸಮ್ ಎಂದರೆ, ಒಬ್ಬ ಮನುಷ್ಯನನ್ನು ಆತನ ಜನಾಂಗ, ಕುಲ, ಮೈಬಣ್ಣವನ್ನಾಧರಿಸಿ ತುಚ್ಛವಾಗಿ ಕಾಣುವುದು. ಮಾನವ ಇತಿಹಾಸ, ದೇಶ ಮತ್ತು ಜನಾಂಗಗಳು ತಮ್ಮ ಸ್ವಹಿತಾಸಕ್ತಿಗಾಗಿ, ಮತ್ತೊಬ್ಬರ ಮೇಲೆ ಸವಾರಿ ಮಾಡಿದುದೇ ಆಗಿದೆ. ವಸಾಹತುಶಾಹಿಯ ತಳಹದಿಯೇ ಇದಲ್ಲವೇ? ಬಿಳಿಯ ತೊಗಲಿನ ಜನ ತಮ್ಮನ್ನು ತಾವು ಕಪ್ಪು ಚರ್ಮ ಉಳ್ಳವರಿಗಿಂತಲೂ, ಉತ್ತಮರೆಂದೂ, ಕಪ್ಪು ಚರ್ಮದವರು ಅಧಮರೆಂದೂ, ಅನಾಗರೀಕರೆಂದೂ, ತಮ್ಮನ್ನು ತಾವು ಆಳಿಕೊಳ್ಳಲು ಅಸಮರ್ಥರೆಂದೂ ಭಾವಿಸಿ ಅವರನ್ನು ನಾಗರೀಕಗೊಳಿಸುವ ನೆಪದಲ್ಲಿ, ತೃತೀಯ ಜಗತ್ತಿನಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸತೊಡಗಿದ್ದು, ಮತ್ತು ನಂತರದ ಕಾಲಘಟ್ಟದಲ್ಲಿ, ಈ ವಸಾಹತು ದೇಶಗಳಲೆಲ್ಲಾ ಸ್ವತಂತ್ರ್ಯ ಹೋರಾಟಗಳು ನಡೆದು ಆ ದೇಶಗಳು ಬಿಳಿಯರ ಸವಾರಿಯಿಂದ ಮುಕ್ತರಾದದ್ದು ಇತ್ತೀಚಿನ ಇತಹಾಸ. ಆದರೆ ದುರ್ದೈವವೆಂದರೆ, ಎಲ್ಲಾ ವಸಾಹತುಗಳ ವಿಮುಕ್ತಿಯ ನಂತರವೂ ಕೂಡ, ಅಭಿವೃದ್ಧಿ ಹೊಂದಿದ ಬಿಳಿಯರ ಪ್ರಥಮ ಜಗತ್ತು ಮತ್ತು ಅಭಿವೃದ್ಧಿ ಕಾಣದ ಭಾಗಶಃ ಕರಿಯರ ತೃತೀಯ ಜಗತ್ತುಗಳಂತೆ ಈ ವಿಶ್ವ ಅರ್ಧಕ್ಕೆ ಅರ್ಧ ಭಾಗವಾಗಿ ಹೋಯಿತು. ಇತ್ತೀಚೆಗೆ ತೃತೀಯ ಜಗತ್ತಿನ ದೇಶಗಳು ಕಾಣುತ್ತಿರುವ ಪ್ರಗತಿಯಿಂದ ಈ ಗೆರೆಗಳು ಅಳಿಸಿಹೋಗುತ್ತಿದೆಯಾದರೂ, ಅಭಿವೃದ್ಧಿ ಹೊಂದಿದವರೆಂದು, ನಾಗರೀಕರೆಂದೂ ಬೀಗುವ ಬಿಳಿಯರ ಮನಃಸ್ಥಿತಿ ಇನ್ನೂ ಬದಲಾಗಿಲ್ಲ. ಹೀಗೆ ಬಿಳಿಯರು ಕರಿಯರನ್ನು ತುಚ್ಛವಾಗಿ ಕಾಣುವುದನ್ನು ರೇಸಿಸಮ್ ಎನ್ನುತ್ತಾರೆ. ತಮ್ಮನ್ನು ತಾವು ನಾಗರೀಕರೆಂದು ಕರೆದುಕೊಳ್ಳುವ ಬಿಳಿಯರು ಈ ಅನಾಗರೀಕ ಪದ್ಧತಿಯನ್ನು ರೂಢಿಸಕೊಂಡು ಬಂದಿದ್ದಾರೆ. ದಕ್ಷಿಣಾಫ್ರಿಕಾಗೆ ಸ್ವತಂತ್ರ್ಯ ಬರುವುದರೊಂದಿಗೆ, ಜಗತ್ತಿನಲ್ಲಿ ರೇಸಿಸಮ್ ಅನ್ನುವುದು ಕೊನೆಗೊಂಡಿತು ಎಂದು ಹೇಳಲಾಗುತ್ತಿದೆಯಾದರೂ, subtle ಆಗಿ ಅದು ಜಾರಿಯಲ್ಲಿದ್ದೇ ಇದೆ.

ಅಮೆರಿಕಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ದಕ್ಷಣಾಫ್ರಿಕಾ ಈ ಎಲ್ಲಾ ತಥಾಕಥಿತ ಮುಂದುವರೆದ ದೇಶಗಳಲ್ಲಿಯೂ ಇದು ಇಂದಿಗೂ ಮುಂದುವರೆದಿದೆ. ಇನ್ನು ಇದೇ ಮೂಸೆಯಲ್ಲಿ ನಾವು ಆಸ್ಟ್ರೇಲಿಯಾವನ್ನು ಪರಿಗಣಿಸಿದರೆ, ಅಲ್ಲೂ ಇದೇ ಕಥೆ. ನಮಗೆಲ್ಲರಿಗೂ ಕಾಣಿಸುವುದೂ, ಅನುಭವಕ್ಕೆ ಬಂದಿರುವ ಆಸ್ಟ್ರೇಲಿಯನ್ನರ ಇಂತಹ ಮನೋಭಾವವೆಂದರೆ ಕ್ರಿಕೆಟ್ನಲ್ಲಿ. ಇದು ನಮಗೆಲ್ಲರಿಗೂ ತಿಳಿದಿರುವುದೇ. ಅವರು ಏನನ್ನು ಬೇಕಾದರೂ ಸಹಿಸುತ್ತಾರಾದರೂ, ಅವರು ನಮಗೆ ಮಾಡಿದುದನ್ನು ಅವರಿಗೆ ಅದೇ ರೀತಿಯಲ್ಲಿ ಮರಳಿಸುವುದನ್ನು ಮಾತ್ರ ಅವರು ಸಹಿಸಲಾರರು. ಉದಾಹರಣೆಗೆ ಇತ್ತೀಚಿನ ಸೈಮಂಡ್ಸ್-ಹರ್ಭಜನ್ ಸಿಂಗ್ ಗಲಾಟೆಯನ್ನೇ ತೆಗೆದುಕೊಳ್ಳಬಹುದು. ಇದು ಅವರ ಜಾತ್ಯಹಂಕಾರಕ್ಕೆ ಒಂದು ಸ್ಪಷ್ಟ ನಿದರ್ಶನ. ಹಾಗೆ ನೋಡಿದರೆ ಆಸ್ಟ್ರೇಲಿಯಾದ ಇತಿಹಾಸವೇ ರೇಸಿಸ್ಟ್ ದಬ್ಬಾಳಿಕೆಯ ಇತಿಹಾಸ. ಆಸ್ಟರೇಲಿಯಾದ ಮೂಲನಿವಾಸಿಗಳು ಈ ಬಿಳಿಯರಲ್ಲ. ಮೂಲವಾಗಿ ಆಸ್ಟ್ರೇಲಿಯಾ ಕರಿಯ ಬುಡಕಟ್ಟಿನವರ ದೇಶ. ಅವರನ್ನು ಅಬಾರಿಜಿನ್ಸ್ ಎನ್ನುತ್ತಾರೆ. ಬಿಳಿಯರು ಅಮೆರಿಕಾಗೆ ಹೋಗಿ ನೆಲಸಿದಂತೆ ಇಲ್ಲಿಗೂ ಬಂದು ನೆಲಸಿ ಇಲ್ಲಿ ಅಬಾರಿಜಿನ್ಸ್ ಬುಡಕಟ್ಟಿನವರ ಮೇಲೆ ಸವಾರಿ ಮಾಡಿ, ಇದು ತಮ್ಮದೇ ನೆಲವೆಂದು ಸಾರಿ ಹೇಳಿದರು. ಇಂದು ಅತ್ಯಂತ ಚಿಕ್ಕ ಮೈನಾರಿಟಿ ಆಗಿರುವ ಈ ಅಬಾರಿಜಿನ್ಸ್ಗೆ ಇಂದಿಗೂ ಆಸ್ಟ್ರೇಲಿಯಾದಲ್ಲಿ ಸಮಾನ ಅವಕಾಶಗಳಿಲ್ಲ. ಇದು ಅವರ ಇತಿಹಾಸ ಮತ್ತು ವರ್ತಮಾನವೂ ಆಗಿದೆ.ರೇಸಿಸಮ್ ಅನ್ನು ಖಂಡಿಸಿ ವಿಶ್ವಸಂಸ್ಥೆಯೂ ಸೇರಿ ಅನೇಕ ಸಂಸ್ಥೆಗಳಲ್ಲಿ, ದೇಶಗಳಲ್ಲಿ ಠರಾವುಗಳು ಪಾಸಾಗಿವೆ. ರೇಸಿಸಮ್ ಇಂದು out of fashion. ಬಹಿರಂಗವಾಗಿ ಅದನ್ನು ಪಾಲಿಸ ಹೊರಟರೆ ಸಮಾಜದ ಮತ್ತು ವಿಶ್ವಸಮುದಾಯದ ನಿಂದನೆಗೆ ನೀವು ಗುರಿಯಾಗಬೇಕಾಗುತ್ತದೆ. ನಿಮ್ಮನ್ನು ಅನಾಗರೀಕರೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬಹಿರಂಗವಾಗಿ ಇಂದು ರೇಸಿಸಮ್ ಅನ್ನುವುದು ಎಲ್ಲಿಯೂ ಇಲ್ಲ. ಆದರೆ, subtle ಆಗಿ ಇದು ಜಾರಿಯಲ್ಲಿದ್ದೇ ಇದೆ. ಹಲವಾರು ಅಂತರಾಷ್ಟ್ರೀಯ ವಿವಾದಗಳಲ್ಲಿ ಬಿಳಿಯರೇ ಸರಿ ಎಂದು ವಾದ ಮಾಡುವುದರಿಂದ ಹಿಡಿದು, ಸರ್ಕಾರದವರೆಗೂ ಇದನ್ನು ನಾವು ಕಾಣಬಹುದು. ಕರಿಯ ಒಬಾಮಾ ಅಮೆರಿಕಾದ ಅಧ್ಯಕ್ಷನಾಗಿರುವುದು ನಿಜವಾದರೂ, ಬಿಳಿಯರ ಆ ರೇಸಿಸ್ಟ್ ಮನೋಧರ್ಮ ಇನ್ನೂ ಬದಲಾಗಿಲ್ಲ.
ಈ ಎಲ್ಲಾ ದಾಳಿಯ ಪ್ರಕರಣಗಳಲ್ಲಿಯೂ ಕೆಲಸ ಮಾಡುತ್ತಿರುವುದು ಇದೇ ಮನೋಭಾವ. ಈ ದಾಳಿಗಳಿಗೆ ಬರಿಯ ರೇಸಿಸಮ್ ಕಾರಣವಲ್ಲ, ಬದಲಿಗೆ ಇದೊಂದು ಜಟಿಲ ಸಮಸ್ಯೆ. ಇದಕ್ಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕಾರಣಗಳಿವೆ. ಅಸಲಿಗೆ ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಆಸ್ಟ್ರೇಲಿಯಾಕ್ಕೆ ಯಾಕೆ ಹೋಗುತ್ತಾರೆ? ಇದಕ್ಕೆ ಮುಖ್ಯ ಕಾರಣ ನಮ್ಮವರ ಫಾರಿನ್ ಮೋಹ. ಉನ್ನತ ವ್ಯಾಸಂಗ ಫಾರಿನ್ನಲ್ಲಿ ಮಾಡಿದರೇನೆ ಅದಕ್ಕೆ ಬೆಲೆ ಎಂಬ ಭಾವನೆ. ಅಲ್ಲಿ ಏನೇ ಓದಲಿ ಬಂದ ಮೇಲೆ ಫಾರಿನ್ ರಿಟರ್ನ್ಡ್ ಎಂದು ಹೇಳಿಕೊಂಡರೆ ನಮ್ಮ ಸಮಾಜದಲ್ಲಿ ಅವರಿಗೆ ಸಿಗುವ ಬೆಲೆಯೇ ಬೇರೆ. ಇದು ನಮ್ಮಲ್ಲಿರುವ ಕೀಳರಿಮೆಯ ಅಥವಾ ಬಿಳಿಯದನ್ನೆಲ್ಲವನ್ನೂ ನಾವಿಂದಿಗೂ ಉತ್ತಮವೆಂದು ಭಾವಿಸುವುದರ ಸಂಕೇತವಾ? ಇಂದು ಆಸ್ಟ್ರೇಲಿಯಾದಲ್ಲಿ ಸುಮಾರು 4-5 ಲಕ್ಷ ವಿದೇಶೀ ವಿದ್ಯಾರ್ಥಿಗಳಿದ್ದರೆ, ಅದರಲ್ಲಿ ಭಾರತೀಯರ ಸಂಖ್ಯೆ, ಸುಮಾರು 2 ಲಕ್ಷ. ಯಾಕೆ ಭಾರತೀಯರು ಹೀಗೆ ಆಸ್ಟ್ರೇಲಿಯನ್ ವಿಶ್ವವಿದ್ಯಾಲಯಗಳನ್ನು ಮುತ್ತಿಕೊಳ್ಳುತ್ತಿದ್ದಾರೆ?
ಆಸ್ಟ್ರೇಲಿಯಾ ಅಸಲಿಗೆ ಒಂದು ಮರುಭೂಮಿ. ಅಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವುದೇ ಉದ್ಯಮವಿಲ್ಲ. ಅವರ ಅರ್ಥವ್ಯವಸ್ಥೆ ನಿಂತಿರುವುದೇ ಪ್ರವಾಸೋದ್ಯಮ ಮತ್ತು ಶಿಕ್ಷಣದ ಮೇಲೆ. ಅಲ್ಲಿ ಶಿಕ್ಷಣ ಎನ್ನುವುದು ಒಂದು ರಾಷ್ಟ್ರೀಯ ಉದ್ಯಮ. ದರಗಳು ಕೊಂಚ ದುಬಾರಿಯಾದರೂ ಆಸ್ಟ್ರೇಲಿಯಾದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಸಾಧಾರಣವಾಗಿ ಉನ್ನತ ವ್ಯಾಸಂಗಕ್ಕೆ ಎಲ್ಲರೂ ಅಮೆರಿಕಾ, ಇಂಗ್ಲೆಂಡ್ಗೆ ಹೋಗುತ್ತಾರಲ್ಲವೇ? ಅದಲ್ಲವೇ favoured destinations? ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿಲ್ಲವೇ ಇಲ್ಲವಲ್ಲ? ಮತ್ಯಾಕೆ ಅಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದ ತೀರ ತಾಕುತ್ತಿದ್ದಾರೆ? ಉನ್ನತ ವ್ಯಾಸಂಗಕ್ಕೆ ಇಂದಿಗೂ ಅಮೆರಿಕಾ, ಇಂಗ್ಲೆಂಡ್ಗಳೇ favoured destinationಗಳು, no doubt. ಆದರೆ ಆಸ್ಟ್ರೇಲಿಯಾದಲ್ಲಿ ಸಿಗುವಷ್ಟು ತರಾವರಿಯ ಕೋರ್ಸ್ಗಳು ನಿಮಗೆಲ್ಲಿಯೂ ಸಿಗುವುದಿಲ್ಲ. ಅಲ್ಲಿ ಕ್ಷೌರ ಮಾಡುವುದರಿಂದ ಹಿಡಿದು ಬ್ಯೂಟಿಷಿಯನ್ ಕೋರ್ಸ್, ಪಕ್ಷಿ ವೀಕ್ಷಣೆಯ ಆರ್ನಿಥಾಲಜಿ , ಮರೈನ್ ಇಂಜಿನೀರಿಂಗ್, ಹಾವುಗಳ ಸ್ಟಡಿ ಹೆಪ್ಟಾಲಜಿ, ರೋಬಾಟಿಕ್ ಇಂಜಿನೀರಿಂಗ್ವರೆಗೂ ತರಾವರಿ ವಿಷಯಗಳ ಕೋರ್ಸ್ಗಳು ಲಭ್ಯವಿದೆ. ಈ ಸಬ್ಜೆಕ್ಟುಗಳು ಇಲ್ಲಿನ ಹಲವರಿಗೆ ಗೋತ್ತೇ ಇಲ್ಲ. ಅಲ್ಲಿಗೆ ಇವುಗಳ ಕುರಿತ ಕೋರ್ಸ್ಗಳು ಇಲ್ಲಿ ಇರುತ್ತದೆಯೇ? ಭಾರತೀಯರು ಇಂತಹ ಚಿತ್ರವಿಚಿತ್ರ ಸಬ್ಜೆಕ್ಟುಗಳ ಕೋರ್ಸ್ಗಳು ಇಲ್ಲಿ ಸಿಗದೇ ಇದ್ದಾಗ ಆಸ್ಟ್ರೇಲಿಯಾದ ತೀರ ತಾಕುತ್ತಾರೆ. ನನ್ನ ಗೆಳೆಯನೊಬ್ಬನಿಗೆ ರೋಬೋಟ್ಗಳು ಮತ್ತು ಅವುಗಳ ತಯಾರಿಯಲ್ಲಿ ಎಲ್ಲಿಲ್ಲದ ಆಸಕ್ತಿ. ಆತ ಪಿಯುಸಿ ಆದ ಮೇಲೆ ರೋಬೋಟಿಕ್ ಇಂಜಿನೀರಿಂಗ್ ಮಾಡಲು ಇಚ್ಛಿಸಿದ. ಆದರೆ ಆ ಸಬ್ಜೆಕ್ಟಿನಲ್ಲಿ ಇಂಜಿನೀರಿಂಗ್ ಕೋರ್ಸ್ ಇಡೀ ಭಾರತದಲ್ಲೆಲ್ಲೂ ಸಿಗಲಿಲ್ಲ. ಸಿಕ್ಕಿದ್ದು ಆಸ್ಟ್ರೇಲಿಯಾದಲ್ಲಿ. ಈಗ ಆತ ಆಸ್ಟ್ರೇಲಿಯಾದಲ್ಲಿ ರೋಬೋಟಿಕ್ ಇಂಜಿನೀರಿಂಗ್ ಓದುತ್ತಿದ್ದಾನೆ. ಆಸ್ಟ್ರೇಲಿಯಾದ ಓದು ಆಕರ್ಷಕವಾಗಲು ಇದು ಮುಖ್ಯ ಕಾರಣ. ಇನ್ನೊಂದು ಕಾರಣವೆಂದರೆ, ಅಲ್ಲಿ ಓದುತ್ತಿದ್ದರೆ, ಅಮೆರಿಕಾ ಮತ್ತು ಇಂಗ್ಲೆಂಡ್ಗಳಿಗೆ ಸುಲಭವಾಗಿ ವೀಸಾ ಸಿಗುತ್ತದೆ. ಹೀಗಾಗಿ ಅಮೆರಿಕಾಗೆ ಹೋಗಲು ಅವಕಾಶ ಸಿದಿದ್ದವರು ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. ಹಾಗಾಗಿ ದುಬಾರಿಯಾದರೂ ಭಾರತೀಯರು ಆಸ್ಟ್ರೇಲಿಯಾಕ್ಕೆ ಹೋಗಿ ಶಿಕ್ಷಣ ಪಡೆಯುತ್ತಾರೆ.

ಹಾಗೆ ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವವರು ಸಾಧಾರಣವಾಗಿಯೇ ಭಾರತದ ಧನವಂತರ ಮಕ್ಕಳಾಗಿರುತ್ತಾರೆ. ಇವರದು ಅಲ್ಲಿಯೂ luxury ಜೀವನವೇ. ಇನ್ನು ಅಷ್ಟೇನೂ ಸ್ಥಿತಿವಂತರಲ್ಲದವರು, ಅಲ್ಲಿನ ಪೆಟ್ರೊಲ್ ಬಂಕ್ಗಳಲ್ಲೋ, ದಿನಸಿ ಅಂಗಡಿಗಳಲ್ಲೋ, ಅಥವಾ ಟ್ಯಾಕ್ಸಿ ಡ್ರೈವರ್ಗಳಾಗೋ ಕೆಲಸ ಹಿಡಿಯುತ್ತಾರೆ. ಇದೇ ಕೆಲಸ ಇಲ್ಲಿ ಮಾಡಲು ಹಿಂಜರಿಯುವವರು ಅಲ್ಲಿ ನಿಸ್ಸಂಕೋಚವಾಗಿ ಮಾಡುತ್ತಾರೆ. ಇನ್ನೊಂದೆಡೆ, ಆಸ್ಟ್ರೇಲಿಯಾದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ರೆಸೆಷನ್ ಅದನ್ನು ಇನ್ನಿಲ್ಲದಂತೆ ಹೊಡೆದುರುಳಿಸಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಅದರ ಫಲವಾಗಿ ಸಮಾಜದಲ್ಲಿ ಅಸಮಾಧಾನ, ಅನ್ನುವುದು ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದೆ. ಅವರ frustration ಅನ್ನು ಹೊರಹಾಕುವುದಕ್ಕೆ ಒಂದು ventಗಾಗಿ ಅವರು ಹುಡುಕಾಡುತ್ತಿರುತ್ತಾರೆ. ಅದು ಸಹಜ ಮಾನವ ಸೈಕಾಲಜಿ. ಹೀಗೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯಲ್ಲಿಯೇ ಅವರು ಭಾರತೀಯ ವಿದ್ಯಾರ್ಥಿಗಳು ನಡೆಸುತ್ತಿರುವ ಜೀವನವನ್ನು ನೋಡುತ್ತಾರೆ. ಅವರಿಗದು ನೆಮ್ಮದಿಯ ಜೀವನವೆನಿಸುತ್ತದೆ. ಇನ್ನು ಕೆಲಸಕ್ಕೆ ಹೋಗುವವರನ್ನು ನೋಡಿದರಂತೂ, ಅವರ ಕೆಲಸವನ್ನು ಇವರು ಎಲ್ಲಿಂದಲೋ ಬಂದು ದೋಚಿಕೊಳ್ಳುತ್ತಿದ್ದಾರೆಂಬ ಭಾವನೆ ಮೂಡುತ್ತದೆ. ಈ ಭಾವನೆ ಅಸಮಾಧಾನ, ಹಗೆಯ ರೂಪ ಪಡೆಯ ತೊಡಗುತ್ತದೆ. ಇನ್ನು ಜಗತ್ತಿನಾದ್ಯಂತ ಭಾರತೀಯರು ಹೊರಗುತ್ತಿಗೆ ಮೂಲಕ ಅಥವಾ ಪ್ರತ್ಯಕ್ಷವಾಗಿ ಬಂದು ತಮ್ಮ ದೇಶದ ಯುವಕರ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆಂಬ ಭಾವನೆ ಇಂದು ಒಬಾಮಾನ ಬಾಯಿಯಲ್ಲೂ ಬರುವಷ್ಟು ಸಾರ್ವತ್ರಿಕವಾಗಿದೆ. ಹಾಗಾಗಿ ಈ ಜನರಿಗೆ ತಮ್ಮ ಸಮಸ್ಯೆಗಳಿಗೆಲ್ಲಾ ಈ ಭಾರತೀಯರೇ ಕಾರಣವೆಂದು ಅನಿಸಲಾರಂಭಿಸುತ್ತದೆ. ತಾವು ಬಿಳಿಯರು, ತಾವು ಪ್ರಗತಿ ಹೊಂದಿದವರೆಂದೂ, ಉತ್ತಮರೆಂದೂ ತಲೆಗೆ ತುಂಬಿಸಿ ಕೊಂಡಿರುತ್ತಾರೆ. ಈ ಮನೋಭಾವದಿಂದಿರುವವರಿಗೆ ಬದಲಾದ ಪರಿಸ್ಥಿತಿಯಲ್ಲಿ ಒಂದು , inferiority-complex ಕಾಡುತ್ತಿರುತ್ತದೆ. ಅದನ್ನವರು ಅರಗಿಸಿಕೊಳ್ಳಲಾರರು, ಸಹಿಸಲಾರರು. ಆಗ ಅವರು ಅವರ frustration ಅನ್ನು ಭಾರತೀಯರ ಮೇಲೆ ಹಲ್ಲೆ ಮಾಡುವ ಮೂಲಕ ವ್ಯಕ್ತಗೊಳಿಸಿಕೊಳ್ಳುತ್ತಾರೆ. ಆದರೆ ಆ ಸಂದರ್ಭದಲ್ಲಿ ಇದಲ್ಲ ವ್ಯಕ್ತವಾಗುವುದು, ಬದಲಿಗೆ ಅವರ ರೇಸಿಸ್ಟ್ ಮನೋಧರ್ಮ ವ್ಯಕ್ತವಾಗುತ್ತದೆ. ಕರಿಯನೆಂದೂ, ಪಾಕಿಯೆಂದೂ ಜರಿಯುತ್ತಾರೆ, ಹೊಡೆಯುತ್ತಾರೆ. ಇದೊಂದು ರೀತಿ ಮಹಾರಾಷ್ಟ್ರದ ರಾಜ್ ಠಾಕ್ರೆ ಬಿಹಾರಿಗಳ ಮೇಲೆ ಕೂಗಾಡಿದಂತೆ. ಹೀಗೆ ಹಲವಾರು ಕಾರಣಗಳಿಂದ ಮೂಟೆಕಟ್ಟಿಕೊಂಡ ಭಾರತೀಯರೆಡಗಿನ ಅಸಮಾಧಾನ ಮೂಟೆಯೊಡೆದಾಗ ಅವರ ರೇಸಿಸ್ಟ್ ಮನೋಭಾವ ತಾಂಡವವಾಡುತ್ತದೆ. ರಾಮಕೃಷ್ಣಪರಮಹಂಸರು ಒಂದು ಕಡೆ ಹೇಳಿದ ಹಾಗೆ ನೆನಪು, ದುಡ್ಡು ಬಂದಾಗ ಮನುಷ್ಯ ಬದಲಾಗುವುದಿಲ್ಲ, ಬದಲಿಗೆ ಆತನ ಮುಖವಾಡ ಕಳಚಿ ಬೀಳುತ್ತದೆಂದು. ಇಲ್ಲಿ ನಡೆಯುತ್ತಿರುವುದೂ ಅದೇ.
ಈ ಹೊಸ ಯುಗದಲ್ಲಿ, ಇಂತಹ ರೇಸಿಸ್ಟ್ ಮನೋಧರ್ಮ ಕೆಲಸಕ್ಕೆ ಬರುವುದಿಲ್ಲ. ಇಂದಿನ ಪರಸ್ಪರ ಅವಲಂಬನೆಯ ಯುಗದಲ್ಲಿ, ಒಂದು ದೇಶ ಅಥವಾ ಒಂದು ಗುಂಪನ್ನು ಇನ್ನೊಬ್ಬರ ಸವಾರಿ ಮಾಡಲು ಅವಕಾಶ ಕೊಡುವ, ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುವ ಯಾವುದೇ ವಿಶ್ವವ್ಯವಸ್ಥೆ ಕುಸಿದು ಬೀಳುವುದು ಖಚಿತ. ನಮ್ಮ ಸಮಸ್ಯೆಗಳನ್ನು ನಾವು ಜೊತೆಯಾಗಿ ಬಗೆಹರಿಸಬೇಕು, ಪ್ರಗತಿಯೆನ್ನುವುದನ್ನು ಸಮಾನವಾಗಿ ಹಂಚಿ ತಿನ್ನಬೇಕು. ಆದರೆ ಮುಂದುವರೆದ ದೇಶಗಳಿಗೆ ಈ ಮನೋಭಾವವಿದೆಯೇ? ಅದಂತೂ ಪ್ರಶ್ನಾರ್ಥಕ.

One thoughts on “ಆಸ್ಟ್ರೇಲಿಯಾದ ರೀಸಿಸ್ಟ್ ದಾಳಿಗಳು - ಒಂದು ಒಳನೋಟ

ರೂpaश्री said...

ಬಹಳ ಚೆನ್ನಾಗಿ ರೇಸಿಸಮ್ ವಿಷಯವನ್ನು, ಮನುಷ್ಯನ ಮನೋಭಾವನೆಯನ್ನು ವಿವರಿಸಿದ್ದೀರಿ. ಅಮೇರಿಕಾದಲ್ಲಿ ಈಗಲೂ ಕರಿಯ ಜನರನ್ನು ಕಂಡರೆ ಮುಖ ಸಣ್ಣ ಮಾಡುವವರಿದ್ದಾರೆ, ಇದು ನನ್ನ ಸ್ವಂತ ಅನುಭವ. ಅಲ್ಲದೆ ಭಾರತೀಯರು ಮತ್ತು ಚೀನಿಗಳನ್ನು ಕಂಡರೂ ಇಲ್ಲಿ ಕೆಲವರಿಗೆ ಆಗೊಲ್ಲಾ, ಕಾರಣ ನಾವು ಹೆಚ್ಚು ಶ್ರಮಪಟ್ಟು ಕೆಲ್ಸ ಮಾಡ್ತೀವಿ ಅಂತ!

Proudly powered by Blogger
Theme: Esquire by Matthew Buchanan.
Converted by LiteThemes.com.