ವಿದೇಶಾಂಗವೆಂಬ ಸೋಮಾರಿ ಕತ್ತೆ!


ಸರಿಸುಮಾರು ಎರಡ್ಮೂರು ತಿಂಗಳುಗಳಿಂದ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ರೇಸಿಸ್ಟ್ ದಾಳಿಗಳ ಸುದ್ದಿ ಬರುತ್ತಲೇ ಇವೆ. ಅಲ್ಲಿ ಕಳೆದ ಆರು ತಿಂಗಳುಗಳ ಅವಧಿಯಲ್ಲಿ, ಇಂತಹ 75 ಭಾರತೀಯರ ಮೇಲಿನ ಹಲ್ಲೆ
ಪ್ರಕರಣಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇವೆ. ಇದೇನೇ ಇದ್ದರೂ ಆಸ್ಟ್ರೇಲಿಯಾ ದೇಶವೇ ರೇಸಿಸ್ಟ್ ಅಲ್ಲ. ಹಾಗಂತ ನಾವು ಹೇಳಲೂಬಾರದು. ಇದು ಅಲ್ಲಿನ ಕೆಲವು ಕಿಡಿಗೇಡಿಗಳ ಕೆಲಸ. ಆದರೆ ಅಲ್ಲಿನ ಸರ್ಕಾರದ ತಪ್ಪಿರುವುದು ಇದನ್ನು ಗುರುತಿಸಿ, ಕ್ರಮ ಕೈಗೊಳ್ಳದೇ ಇರುವುದರಲ್ಲಿ. ಭಾರತ ಈ ವಿಷಯವನ್ನು
ಗಂಭೀರವಾಗಿಯೇ ತೆಗೆದುಕೊಂಡಿದೆಯಾದರೂ,
ರಿಜಲ್ಟುಗಳೇನೂ ಇಲ್ಲ. ನಮ್ಮ ಸರ್ಕಾರ ಇಲ್ಲಿಂದ ಪುಂಖಾನುಪುಂಖ ಹೇಳಿಕೆಗಳನ್ನು ನೀಡುತ್ತಿದೆಯಾದರೂ ಅಲ್ಲಿ ಆಸ್ಟ್ರೇಲಿಯಾದಲ್ಲಿ ಅವು ಮಾರ್ದನಿಸುತ್ತಲೇ ಇಲ್ಲ. ಒಟ್ಟಾರೆಯಾಗಿ ಅಲ್ಲಿನ ಭಾರತೀಯ ವಿದ್ಯಾರ್ಥಿ ಸಮೂಹ ಭಾರತ ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತರಾಗಿಲ್ಲ. ಅವರಲ್ಲಿ ಒಂದು frustration ಮನೆಮಾಡಿದೆ.

ಹೀಗಿರುವಾಗ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳು ಶುರುವಾದ ಸುಮಾರು ಮೂರು ತಿಂಗಳುಗಳಿಗೆ, ನಮ್ಮ ವಿದೇಶಾಂಗ ಸಚಿವರು ಅಲ್ಲಿಗೆ ಐದು ದಿನಗಳ ಪ್ರವಾಸ ಕೈಗೊಂಡು ಹಿಂತಿರುಗಿದ್ದಾರೆ. ಇರಲಿ better late than never. ನಮ್ಮ ಕೃಷ್ಣರವರು ಈಗ ಅಲ್ಲಿಗೆ ಹೋಗಿ ಮಾಡುವುದಾದರೂ ಏನಿತ್ತು? ಬಹಳಷ್ಟಿತ್ತು. ರಾಜತಾಂತ್ರಿಕ ಕೆಲಸ-ಒತ್ತಡ-ಕಾರ್ಯಕ್ರಮಗಳಲ್ಲದೆ, ಇವೆಲ್ಲಕ್ಕಿಂತಲೂ ಮಿಗಿಲಾದ ಜವಾಬ್ದಾರಿಯೊಂದು ಕೃಷ್ಣರ ಹೆಗಲ ಮೇಲಿತ್ತು. ಅದು ಅಲ್ಲಿನ ಭಾರತೀಯ ವಿದ್ಯಾರ್ಥಿ ಸಮೂಹದ frustration ಅನ್ನು ಹೋಗಲಾಡಿಸುವುದು. ಅದಕ್ಕಿರುವುದು ಒಂದೇ ದಾರಿ - ಅವರ ಎಲ್ಲ ಸಮಸ್ಯೆಗಳನ್ನು ಕೂತು ಕಿವಿಗೊಟ್ಟು ಆಲಿಸುವುದು. ಅವರ ಸಮಸ್ಯೆಗಳನ್ನು ಆಲಿಸಲೂ ಒಬ್ಬ ಭಾರತೀಯ ಹಿರಿಯನಿಲ್ಲ ಅಲ್ಲಿ. ಎಸ್ಸೆಂ.ಕೃಷ್ಣ ಒಬ್ಬ ಮನೆಹಿರಿಯನಂತೆ ಅವರಿಗೆ ಸಾಂತ್ವನ, ಧೈರ್ಯ ಹೇಳಬೇಕಿತ್ತು, ಅವರ ಕೈಲಾದ ಮಟ್ಟಿಗೆ ಅದನ್ನು ನಿರ್ವಹಿಸಿದ್ದಾರೆ ಕೂಡ. ಅಲ್ಲಿನ ಭಾರತೀಯ ವಿದ್ಯಾರ್ಥಿ ಸಮೂಹ ಕಳೆದೆರಡ್ಮೂರು ತಿಂಗಳುಗಳಿಂದ ಅನುಭವಿಸಿದ ತಬ್ಬಲಿತನಕ್ಕೆ ಉತ್ತರಿಸಬೇಕಿತ್ತು ಕೃಷ್ಣ. ಆದರೆ ಇದು ನಡೆಯಲೇ ಇಲ್ಲ ಬಿಡಿ. ಕೃಷ್ಣರ ಭೇಟಿ-ಮಾತುಕತೆಗಳು ಆಸ್ಟ್ರೇಲಿಯಾದ ಭಾರತೀಯರೊಂದಿಗೆ ಆತ್ಮೀಯವಾಗಿಯೂ, ಸಾಂತ್ವನಪೂರಕವಾಗಿಯೂ ಇರಬೇಕಿತ್ತು. ಆದರೆ ಅಲ್ಲಿಯೂ ತಮ್ಮ ಯೂರೋಪಿಯನ್, ಹೈಫೈ ರಾಜ-ಗಜ ಗಾಂಭೀರ್ಯವನ್ನು ಬಿಟ್ಟುಕೊಡದ ಕೃಷ್ಣ ಬಿಗುಮಾನದಿಂದಿದ್ದು ತಿರುಗಿ ಮರಳಿದ್ದಾರೆ ಅಷ್ಟೆ! ಆಸ್ಟ್ರೇಲಿಯಾದ ಭಾರತೀಯ ವಿದ್ಯಾರ್ಥಿ ಸಮೂಹ ಸ್ಪಷ್ಟವಾಗಿ ಹತ್ತು ಬೇಡಿಕೆಗಳನ್ನು ನಮ್ಮ ಸರ್ಕಾರ ಮುಂದಿಟ್ಟಿದ್ದರು. ಅದೆಲ್ಲವೂ ಕಿವುಡನ ಮುಂದೆ ಕಿನ್ನರಿ ಬಾರಿಸಿದಂತಾಯಿತು.


ಮೊನ್ನೆ ಉತ್ತರ ಕೊರಿಯಾಗೆ ಧಿಢೀರ್ ಭೇಟಿ ಕೊಟ್ಟರು ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್! ಹೌದು ಹೋಗಿದ್ದು ಬಿಲ್ ಕ್ಲಿಂಟನ್ನೇ, ಉತ್ತರ ಕೊರಿಯಾಗೇ ಸ್ವಾಮಿ! ಅಮೆರಿಕಾ ಮತ್ತು ಉತ್ತರ ಕೊರಿಯಾದ ನಡುವಿನ ಸಂಬಂಧಗಳ ಹಿನ್ನೆಲೆ-ಮುನ್ನೆಲೆಗಳು ತಿಳಿದಿರುವ ಯಾರಿಗೇ ಆದರೂ ಇದು ಆಶ್ಚರ್ಯ ತರುವ ವಿಚಾರವೇ ಆಗಿತ್ತು. ಅಸಲಿಗೆ ಇದ್ದಕ್ಕಿದ್ದಂತೆ ಕ್ಲಿಂಟನ್ ಉತ್ತರ ಕೊರಿಯಾಗೆ ಹೋಗಿದ್ದಾದರೂ ಯಾಕೆ? ಅದಕ್ಕೊಂದು ಕಥೆಯಿದೆ. ಲೌರಾ ಲಿಂಗ್ ಎಂಬ ಮೂವತ್ತೆರಡು ವರ್ಷದ ಮತ್ತು ಯುನ ಲೀ ಎಂಬ ಮೂವತ್ತಾರು ವರ್ಷದ ಇಬ್ಬರು ಮಹಿಳಾ ಅಮೆರಿಕನ್ ಪತ್ರಕರ್ತರನ್ನು ಉತ್ತರ ಕೊರಿಯಾದ ಸರ್ಕಾರ ಬಂಧಿಸಿತ್ತು. ಅವರ ಮೇಲಿದ್ದ ಆರೋಪ ದೇಶದೊಳಕ್ಕೆ ಅಕ್ರಮ ನುಸುಳುವಿಕೆ. ಅಸಲು ವಿಷಯವೇ ಬೇರೆಯಿತ್ತು. ಈ ಇಬ್ಬರು ಪತ್ರಕರ್ತರು ಉತ್ತರ ಕೊರಿಯಾದ ರೆಫ್ಯೂಜಿಗಳ ಕುರಿತಾಗಿ ಸಾಕ್ಷಿ ಚಿತ್ರವೊಂದನ್ನು ತಯಾರಿಸುತ್ತಿದ್ದರು. ಇದರಿಂದ ರೇಗಿ ಹೋದ ಉತ್ತರ ಕೊರಿಯಾ ಸರ್ವಾಧಿಕಾರಿ ಸರ್ಕಾರ ಇವರನ್ನು ನ್ಯಾಯಾಲಯದ ಕಟೆಕಟೆಗೆ ತಂದು ನಿಲ್ಲಿಸಿತು. ಇವರನ್ನು ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯವು 12 ವರ್ಷಗಳ ಕಠಿಣ ಸೆಜೆಯನ್ನ ವಿಧಿಸಿಬಿಟ್ಟತು. ಅಮೆರಿಕಾದ ಸರ್ಕಾರ ಕನುಲಿ ಕೂತಿತು. ಹೇಗಾದರೂ ಮಾಡಿ ತನ್ನ ನಾಗರೀಕರನ್ನು ರಕ್ಷಿಸಲೇಬೇಕೆಂದು ಪಣ ತೊಟ್ಟಂತೆ ಕೆಲಸ ಶುರುವಿಟ್ಟುಕೊಂಡಿತು. ಆದರೆ ಅಲ್ಲೊಂದು ಸಮಸ್ಯೆಯಿತ್ತು ಅಮೆರಿಕಾ ಮತ್ತು ಉತ್ತರ ಕೊರಿಯಾಗಳ ನಡುವೆ ರಾಜತಾಂತ್ರಿಕ ಸಂಬಂದಗಳೇ ಇರಲಿಲ್ಲ. ಹಾಗಾಗಿ ಅಲ್ಲಿಗೆ ಸಂಧಾನಕ್ಕಾಗಿ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಹೋಗುವಂತಿರಲಿಲ್ಲ. ಅಮೆರಿಕಾ ಕೈಚೆಲ್ಲಲಿಲ್ಲ. ಹಿತ್ತಲ ಬಾಗಿಲ ಮೂಲಕ ಸಂಧಾನಗಳನ್ನು ಶುರುವಿಟ್ಟುಕೊಂಡಿತು. ಕಡೆಗೆ ಎಲ್ಲವೂ ನಿರ್ಧಾರಿತವಾದ ಮೇಲೆ ಅವರನ್ನು ಬಿಡಿಸಿಕೊಂಡು ಮರಳಿ ಮಾತೃಭೂಮಿಗೆ ಕರೆತರಲು ಆಮೆರಿಕಾದಿಂದ ಯಾರಾದರೂ ಒಬ್ಬರು ಹೋಗಬೇಕಿತ್ತು. ಈ ಕೆಲಸಕ್ಕಾಗಿ ಒಬಾಮಾ ನಿಯೋಜಿಸಿದ್ದು, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನನ್ನು! ಅಮೆರಿಕಾ ತನ್ನ ಪ್ರಜೆಗಳ ಕುರಿತು ತೆಗೆದುಕೊಳ್ಳುವ ಕೇರ್ ಅಂತಹುದು. ಬಿಲ್ ಕ್ಲಿಂಟನ್ ಹೋಗಿ, ಉತ್ತರ ಕೊರಿಯಾದ ಅಧ್ಯಕ್ಷನೊಂದಿಗೆ ಮಾತುಕತೆ ನಡೆಸಿ ಆ ಇಬ್ಬರು ಪತ್ರಕರ್ತೆಯರಿಗೂ ಕ್ಷಮಾಪಣೆ ಕೊಡಿಸಿ, ಅವರನ್ನು ಹೊರತರಿಸಿದರು. ತಕ್ಷಣ ಕ್ಲಿಂಟನ್ ಆಗಮಿಸಿದ್ದ ಫ್ಲೈಟಿನಲ್ಲೇ ಅವರನ್ನು ಅಮೆರಿಕಾಗೆ ಕೊಂಡೊಯ್ಯಲಾಯಿತು. ಕ್ಲಿಂಟನ್ರನ್ನು ನೋಡಿದ ಕೂಡಲೆ ಆ ಪತ್ರಕರ್ತೆಯರ ರಿಯಾಕ್ಷನ್ ಅನ್ನು ನೋಡಬೇಕಿತ್ತು ನೀವು. ಅವರು ಜೈಲಿನಲ್ಲಿ ಅನುಭವಿಸಿದ ದಿಗುಲು, ಒಂಟಿತನ, ತಬ್ಬಲಿತನ್ಗಳೆಲ್ಲವನೂ ದೂರ ಮಾಡಿಬಿಟ್ಟ ಕ್ಲಿಂಟನ್ನನ್ನು ನೋಡಿ ಅವರು ಭಾವಪರವಶರಾದರು. ಆ ಕ್ಷಣ ಅವರು ಕ್ಲಿಂಟನ್ನನ್ನು ಒಬ್ಬ ಸೇವಿಯರ್ ಅಥವಾ ತಂದೆಯ ಸ್ತಾನದಲ್ಲಿಟ್ಟು ನೋಡುತ್ತಿದ್ದರು!

ಇಲ್ಲಿ ಅಮೆರಿಕಾ ಅದರ ಇಬ್ಬರು ಪ್ರಜೆಗಳು ಶತ್ರು ದೇಶವೊಂದರಲ್ಲಿ ತೊಂದರೆಗೆ ಸಿಲುಕಿಕೊಂಡಾಗ ಅದು respond ಮಾಡಿದ ರೀತಿಯನ್ನು ಗಮನಿಸಿ. ಅದೊಂದು paternal gesture. ಅದು ಅಮೆರಿಕಕ್ಕೆ ತನ್ನ ಪ್ರಜೆಗಳ ಕುರಿತಿರುವ ಕಾಳಜಿಯನ್ನು ತೋರಿಸುತ್ತದೆ. ಅಮೆರಿಕಾ ಅನೇಕ ಸಂದರ್ಭಗಳಲ್ಲಿ ಇಂತಹ ಕಾಳಜಿಯನ್ನು ಪ್ರದರ್ಶಿಸಿದೆ. ಯಾವುದೇ ದೇಶದ ಯಾವುದೇ ಮೂಲೆಯಲ್ಲಿ ಅಮೆರಿಕನ್ ಪ್ರಜೆಯೊಬ್ಬನ ಕೊಲೆಯೋ ಮತ್ತೊಂದೋ ಆದರೆ, ಅವರು ಸುಮ್ಮನಿರುವುದಿಲ್ಲ ಆ ಪ್ರಕರಣದ ಸ್ವತಂತ್ರ್ಯ ತನಿಖೆಯನ್ನು FBI ಕೈಗೆತ್ತಿಕೊಳ್ಳುತ್ತದೆ. ಇನ್ನು ಇಸ್ರೇಲ್ ಕೂಡ ಇಂತಹ ಕಾಳಜಿಗೆ ಹೆಸರುವಾಸಿ. 1976ರಲ್ಲಿ ಫ್ರಾನ್ಸ್ನ ವಿಮಾನವೊಂದನ್ನು ಅಪಹರಿಸಿ ಉಗಾಂಡಾಗೆ ಕೊಂಡೊಯ್ಯಲಾಗಿತ್ತು. ಅದರಲ್ಲಿ ಇಇಸ್ರೇಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೆ ಇಸ್ರೇಲ್ ಉಗಾಂಡಾಗೆ ತೆರಳಿ ಕಮ್ಯಾಂಡೋ ಕಾರ್ಯಾಚರಣೆ ನಡೆಸಿ ಆ ವಿಮಾನವನ್ನು ರಕ್ಷಿಸಿತ್ತು. ಇದೇ ಎಂಟೆಬೆ ಆಪರೇಷನ್ ಎಂದು ಹೆಸರಾಯಿತು. ಅಷ್ಟ್ಯಾಕೆ ಮೊನ್ನೆಯ ಮುಂಬಿಯಿ ನರಮೇಧದಲ್ಲಿ ಅಮೆರಿಕನ್ನರು, ಇಸ್ರೇಲೀಯರನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿತ್ತು. ಅಮೆರಿಕನ್ ಮತ್ತು ಇಸ್ರೇಲೀ ಅಧಿಕಾರಿಗಳು ಈ ನರಮೇಧದ ಸ್ವತಂತ್ರ್ಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರ ತನಿಖೆಯು ಭಾರತಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಅದ್ಸರಿ ಭಾರತ ಹಾಗೂ ಭಾರತೀಯರ ವಿಷಯದಲ್ಲೂ ಹೀಗಾಗುತ್ತಿದೆಯೇ? ಪ್ರಶ್ನೆ ಕೇಳಿದವರು ಗುಗ್ಗುಗಳು! ಆ ನಮ್ಮ ಸೌತ್ ಬ್ಲಾಕ್ ಇದೆಯಲ್ಲ ಅದೊಂದು ಸೋಮಾರಿ ಕತ್ತೆ! ಅದನ್ನು ನಿದ್ದೆಯಿಂದ ಎಚ್ಚರಿಸುವುದು ಅಷ್ಟು ಸುಲಭವಲ್ಲ. ಭಾರತೀಯರನೇಕರು ಅನೇಕ ದೇಶಗಳಲ್ಲಿ ತೊಂದರೆಗಳಿಗೆ ಸಿಲುಕಿಕೊಂಡದ್ದಿದೆ, ಆದರೆ ಈ ಕತ್ತೆ ಮಾತ್ರ ನಿದ್ದೆಯಿಂದೆಚ್ಚೆತ್ತದ್ದು ತೀರ ವಿರಳ. ಕೆಲವು ತಿಂಗಳ ಹಿಂದೆ ಭಾರತ ಮೂಲದ ಹಡಗನ್ನು ಸೋಮಾಲಿಯಾ ತೀರದಲ್ಲಿ ಪೈರೇಟ್ಸ್ ಹೈಜಾಕ್ ಮಾಡಿದ್ದರು. ಅದರಲ್ಲಿ 19 ಜನ ಭಾರತೀಯರು ಸಿಲುಕಿಕೊಂಡಿದ್ದರು. ಇತ್ತ ಕ್ಯಾಪ್ಟನ್ನ ಪತ್ನಿ ಭಾರತ ಸರ್ಕಾರ ತನಗೆ ತನ್ನ ಪತಿಯನ್ನು ಬಿಡಿಸಿ ತರುವಲ್ಲಿ ಸಹಾಯ ಮಾಡಬೇಕೆಂದು ಅಂಗಲಾಚುತ್ತಾ ದೆಹಲಿಯೆಲ್ಲಾ ಮೂರು ರೌಂಡು ಹೊಡೆದುಬಿಟ್ಟರು, ಆದರೂ ಅವರು ಸಂಬಂಧಿತ ಅಧಿಕಾರಿ, ಮಂತ್ರಿಗಳನ್ನು ಭೇಟಿಯಾಗಿರಲಿಲ್ಲ. ಅವರು ಸೀದಾ ತಮ್ಮ ಗೋಳನ್ನು ತೋಡಿಕೊಂಡದ್ದು ಮೀಡಿಯಾಗೆ. ಇದು ದೊಡ್ಡ ಸುದ್ದಿಯಾಯಿತು, ಎಲ್ಲರೂ ಅವರನ್ನು ಸಂದರ್ಶಿಸುವವರೇ. ಇದೆಲ್ಲಾ ಆದರೂ ಭಾರತ ಸರ್ಕಾರ ತನ್ನ ಫಸ್ಟ್ ಮೂವ್ ಮಾಡಲು ವಾರದ ಮೇಲೆ ತೆಗೆದುಕೊಂಡಿತ್ತು. ಕೊನೆಗೆ ಆ ಷಿಪ್ನಲ್ಲಿ ಸಿಲುಕಿಕೊಂಡವರೆಲ್ಲಾ ಸೇಫ್ ಆಗಿ ಮನೆಗೆ ಮರಳಲು ಎರಡು ತಿಂಗಳುಗಳೇ ಬೇಕಾಯಿತು. ವಿದೇಶಾಂಗ ಇಲಾಖೆಯಲ್ಲಿರುವಷ್ಟು ರೇಡ್ ಟೇಪ್ ಬಹುಶಃ ಭಾರತದ ಯಾವುದೇ ಇಲಾಖೆ-ಕಛೇರಿಯಲ್ಲಿರುವುದಿಲ್ಲ. ರೆಡ್ ಟೇಪ್ ಅವಾರ್ಡ್ ಅಂತೇನಾದರೂ ಇದ್ದರೆ ಅದು ಅದಕ್ಕೇ ಸೇರಬೇಕು! ಒಬ್ಬರೋ ಇಬ್ಬರೋ ಸಮಸ್ಯೆಯಲ್ಲಿ ಸಿಲುಕಿಕೊಂಡರೆ ಕದಲುವಂತಹದ್ದಲ್ಲ ಈ ಕತ್ತೆ. ಹಾಗೆ ಸಿಲುಕಿಕೊಂಡು ಒದ್ದಾಡುತ್ತಿರುವವರು ಅದೆಷ್ಟೋ ಮಂದಿ. 115 ಕೋಟಿ ಭಾರತದಲ್ಲಿ ಒಬ್ಬರು, ಅದಕ್ಕೆ ನಾನು ಇದ್ದೇಳುವುದಾ? ಛೇ, ಛೇ..! ಅನ್ನುವಂತಿರುತ್ತದೆ ಅದರ ವರ್ತನೆ. ಅದಕ್ಕೆ ಡ್ರಾಮಾ ಬೇಕು, ಕ್ರೈಸಿಸ್ ಬೇಕು. ಹೋದ ಬಾರಿ ಸೌತ್ ಬ್ಲಾಕ್ ಧಢಾರನೆ ಎದ್ದು ಕೆಲಸ ಮಾಡಿ ತನ್ನ ಮಾನವೀಯ ಮುಖವನ್ನು ತೋರಿಸಿದ್ದು ಯಾವಾಗ ಅಂತ ನಾವು ಹುಡುಕುತ್ತಾ ಹೋದರೆ, ನಾವು ಕಂದಹಾರ್ನಲ್ಲಿ ತೇಲುತ್ತೇವೆ. ಹೌದು ಅದೇ ಕಡೆ. ಆಮೇಲಿಂದು ನನ್ನ ಗಮನಕ್ಕಂತೂ ಬಂದಿಲ್ಲ.
ಒಂದು ದಶಕದ ಹಿಂದಿನ ಮಾತು, ಶತಮಾನದ ಕೊನೆಯ ಕ್ಷಣಗಳು ಭಾರತದ ಮಟ್ಟಿಗೆ ತಲ್ಲಣದವಾಗಿದ್ದವು. 168 ಜನ ಪ್ರಯಾಣಿಕರನ್ನು ಹೊತ್ತ ಇಂಡಿಯನ್ ಏರ್ಲೈನ್ಸ್ನ ಐಸಿ 814 ವಿಮಾನವನ್ನು ಉಗ್ರರು ಅಪಹರಿಸಿ ಕಂದಹಾರಕ್ಕೊಯ್ದು ಇಟ್ಟಿದ್ದರು . ಅವತ್ತಿಗೆ ನಮ್ಮ ಸರ್ಕಾರ ಅಲ್ಲಿನ ತಾಲೀಬಾನಿ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಬಂಧಗಳಿರಲಿ, ಆ ಸರ್ಕಾರವನ್ನು ಅಫಘಾನಿಸ್ತಾನದ ಅಧಿಕೃತ ಸರ್ಕಾರವೆಂದೇ ಗುರುತಿಸಿರಲಿಲ್ಲ. ತಕ್ಷಣವೇ ಎಚ್ಚೆತ್ತ ನಮ್ಮ ಸರ್ಕಾರ ಅಪಹರಣಕಾರರೊಂದಿಗೆ ಮಾತುಕತೆಗಿಳಿಯಿತು. ಫಲಪ್ರದವಾಗಿ ಮುಗಿದ ಮಾತುಕತೆಯಲ್ಲಿ ಅವರು ಎಲ್ಲ ಪ್ರಯಾಣಿಕರನ್ನು ಬಿಡುಗಡೆಗೊಳಿಸಬೇಕಾಗಿಯೂ ಭಾರತದ ಸಕಾರವು 3 ಉಗ್ರರನ್ನು ಬಿಟ್ಟುಬಿಡಬೇಕಾಗಿಯೂ ಒಪ್ಪಂದವಾಯಿತು. ಈ ಉಗ್ರರನ್ನು ಅವರಿಗೊಪ್ಪಿಸಿ ನಮ್ಮ ಪ್ರಯಾಣಿಕರನ್ನು ಸೇಫ್ ಆಗಿ ತಿರುಗಿ ಭಾರತಕ್ಕೆ ಕರೆತರಲು ಭಾರತದಿಂದ ನಿಯೋಗವೊಂದು ಹೊರಡಬೇಕಿತ್ತು. ಅದರ ನಾಯಕತ್ವವನ್ನು ವಹಿಸಿಕೊಂಡದ್ದು ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್!

ಈ ನಿರ್ಣಯ ತೀರ ವಿವಾದಾಸ್ಪದವೇ ಆಗಿರಬಹುದು. ಮೂವರು ಉಗ್ರರನ್ನು ಬಿಟ್ಟುಬರಲು, ವಿದೇಶಾಂಗ ಸಚಿವರೇ ತೆರಳುವುದು ಭಾರತಕ್ಕೆ ಅವಮಾನವೇ. ಆದರೆ ನೀವು ಆ ವಿಮಾನದಲ್ಲಿದ್ದ ನತದೃಷ್ಟರಲ್ಲೊಬ್ಬರಾದ ಯು.ಬಿ.ಭಟ್ ಅವರು ಬರೆದ `ಟೆರರ್ ಆನ್ ಬೋರ್ಡ್' ಪುಸ್ತಕ ಓದಬೇಕು. ಅದರಲ್ಲಿ ಅವರು ಸರ್ಕಾರ ಜಸ್ವಂತ್ ಸಿಂಗರನ್ನು ಕಂದಹಾರಕ್ಕೆ ಕಳಿಸಿಕೊಡುವ ನಿರ್ಣಯವನ್ನು ಸರ್ಕಾರದ paternal gesture ಎಂದು ಬಣ್ಣಿಸುತ್ತಾರೆ. ಅಂದು ಎಲ್ಲ ಪ್ರಯಾಣಿಕರ ಬಿಡುಗಡೆಯಾದ ನಂತರ ಜಸ್ವಂತ್ ಅವರೆಲ್ಲರೊಡಗೂಡಿ ಒಂದೇ ವಿಮಾನದಲ್ಲಿ ದೆಹಲಿಗೆ ಮರಳುತ್ತಾರೆ. ಸಹಸ್ರಮಾನದ ಕಡೆಯ ಕ್ಷಣಗಳು ಆಗಸದಲ್ಲಿ ಕಳೆದು ಹೋಗುತ್ತವೆ. ಅಲ್ಲಿ ಕೆಲವರು ಜಸ್ವಂತರಲ್ಲಿ ಸರ್ಕಾರದ ವಿರುದ್ಧ ತಮಗಿರುವ ಅಸಮಾಧಾನವನ್ನು ತೋಡಿಕೊಂಡರು, ಕೆಲವರು ಸ್ಫೋಠಗೊಂಡು ಬೈದರು, ಮತ್ತೆ ಕೆಲವರು ಹಂಗಿಸಿದರು, ಉಳಿದವರನೇಕರು ತಮ್ಮ ಕಥೆ ಹೇಳಿಕೊಳ್ಳತ್ತಾ ಕಣ್ಣೀರಾದರು. ಜಸ್ವಂತ್ ಸಿಂಗ್ ಮನೆಹಿರಿಯನಂತೆ ಎಲ್ಲವನ್ನೂ ಕಿವಿಗೊಟ್ಟು ಆಲಿಸಿದರು. ಅವರು ಆ ಎಂಟು ದಿನಗಳಿಂದ ಅನುಭವಿಸಿದ ಅಸಹಾಯಕತೆ, ತಬ್ಬಲಿತನಗಳಿಗೆಲ್ಲಾ ಜಸ್ವಂತ್ ಅಂದು ಉತ್ತರವಾಗಿದ್ದರು. ದೆಹಲಿಗೆ ಬಂದಿಳಿಯುವ ಹೊತ್ತಿಗೆ ಎಲ್ಲರ ಕಣ್ಣುಗಳೂ ತೇವಗೊಂಡಿದ್ದವು. ಅವರೆಲ್ಲರ frustrationನ ಅಭಿವ್ಯಕ್ತಿಗೆ ಅಂದು ಜಸ್ವಂತ್ ವೇದಿಕೆಯಾಗಿದ್ದರು. ಇದು ರಾಜತಾಂತ್ರಿಕ ಜಯವೇನಲ್ಲ, ಬದಲಿಗೆ ನಮ್ಮ ಪ್ರಜೆಗಳು ಅನುಭವಿಸಿದ ತಬ್ಬಲಿತನವನ್ನು ಹೋಗಲಾಡಿಸುವಂತಹ, ನಮ್ಮನ್ನು ರಕ್ಷಿಸಲು ಒಬ್ಬರಿದ್ದಾರೆಂಬ ಬೆಚ್ಚನೆಯ ಭಾವನೆ ಮೂಡಿಸುವ ಒಂದು paternal gesture ಅಷ್ಟೆ.

ಯಾವುದೇ ದೇಶ ತನ್ನ ಪ್ರಜೆಗಳು ವಿಶ್ವದ ಯಾವುದೇ ಮೂಲೆಯಲ್ಲಿ ತೊಂದರೆಯಲ್ಲಿದ್ದರೂ ಅವರ ನೆರವಿಗೆ ಧಾವಿಸಬೇಕು. ಅದು ಅದರ obligation. ಏನಂತೀರಿ? ಜೀವನದ ಹೊಸ ದಿಗಂತಗಳನ್ನರಸಿ, ಮಾತೃಭೂಮಿಯ ತೊರೆದು ದೇಶವಲ್ಲದ ದೇಶ, ಭಾಷೆ ಬಾರದ ಸಾಗರದಾಚೆಯ ದೂರದೂರುಗಳಿಗೆ ಹೋಗಿ ನೆಲಸಿರುತ್ತಾರವರು. ಅವರು ತಮ್ಮ ನೆಲದ ಪ್ರತಿಯೊಂದರ ಕುರಿತೂ ಭಾವಪರವಶರಾಗಿರುತ್ತಾರೆ. ಅದಕ್ಕೇ ನೀವು ನಮ್ಮ `ಸಂಸ್ಕೃತಿಯ ಆಡಂಬರದ ಆಚರಣೆಯನ್ನು' ಇಲ್ಲಿಗಿಂತ ಹೊರದೇಶಗಳಲ್ಲೇ ಹೆಚ್ಚಾಗಿ ಕಾಣಬಹುದಾಗಿದೆ. ಈ ಅನಿವಾಸಿಗಳಿಗೆ ಬೇರು ಕಿತ್ತ ಅನುಭವವಾಗುತ್ತಿರುತ್ತದೆ. ಅವರು ಒಂದು ರೀತಿಯ ಇಬ್ಬಂದೀತನದಿಂದಲೂ, ತಬ್ಬಲೀತನದಿಂದಲೂ ಬಳಲುತ್ತಿರುತ್ತಾರೆ. ಇದನ್ನು ಯಾರೂ ಬಹಿರಂಗವಾಗಿ ಗುರುತಿಸುವುದಿಲ್ಲವಾದರೂ ಇದು `ಸಂಸ್ಕೃತಿಯ ಆಡಂಬರದ ಆಚರಣೆ' ಅಂತ ನಾನೇನು ಕರೆದೆ ಅದರಲ್ಲಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ನೀವು ಗಮನಿಸಿ, ಅನಿವಾಸಿಗಳು ನಮ್ಮ ಸರ್ಕಾರಗಳಿಂದ ಇಲ್ಲಿನವರಿಗಿಂತಲೂ ಹೆಚ್ಚಿನದನ್ನು ನಿರೀಕ್ಷಿಸುತ್ತಿರುತ್ತಾರೆ. ಇಲ್ಲಿನವರಿಗಿಂತಲೂ ಅವರೇ ನಮ್ಮ ರಾಜಕಾರಣಿಗಳನ್ನು ಹೆಚ್ಚು ಜರಿಯುತ್ತಿರುತ್ತಾರೆ. ಇದು ಅವರ frustration ಅನ್ನು ತೊರಿಸುತ್ತದೆ. ಅವರು ತಮ್ಮನ್ನು ರಕ್ಷಿಸಲು ಒಬ್ಬರಿದ್ದಾರೆಂಬ ಬೆಚ್ಚನೆಯ ಭಾವನೆಯನ್ನು ಅಪೇಕ್ಷಿಸುತ್ತಿರುತ್ತಾರೆ. ನಮ್ಮ ವ್ಯವಸ್ಥೆ ಆ ಭರವಸೆಯನ್ನು ಮೂಡಿಸದಿದ್ದಾಗ frustrate ಆಗುತ್ತಾರೆ. ಇದರಲ್ಲಿ ಎರಡು ಬಗೆಗಳು - ಒಂದು, ಇಲ್ಲಿನ ವ್ಯವಸ್ಥೆಯನ್ನು ಹೊರದೇಶಗಳ ವ್ಯವಸ್ಥೆಗಳೊಂದಿಗೆ ತಾಳೆ ಹಾಕಿ ನೋಡಿ, ಹತಾಶರಾಗಿ ಕೂಗಾಗುಡುವುದು. ಇದು ಸಾಮಾನ್ಯವಾಗಿಬಿಟ್ಟಿದೆ ಬಿಡಿ. ಇನ್ನು ಎರಡನೆಯದು, ಅದು ಇದಕ್ಕಿಂತಲೂ ಗಂಭೀರ. ಇಲ್ಲಿಂದ ಹೋದವರು, ಆ ನಾಡಿನಲ್ಲಿ ಏನೋ ಸಮಸ್ಯೆಯಲ್ಲಿ ಸಿಲುಕಿಕೊಳ್ಳತ್ತಾರೆ. ಎಷ್ಟೇ ಆಗಲೀ ಪರಾಯಿ ದೇಶ, ಸುತ್ತಲೂ ಮನೆಯವರಿರುವುದಿಲ್ಲ, ಹಿರಯರಿರುವುದಿಲ್ಲ, ಆ ಸಮಸ್ಯೆಯ ಸುಳಿಯಲ್ಲಿ ಒಬ್ಬಂಟಿಗ! ಎಂತಹ ಗಟ್ಟಿಗನಾದರೂ ಬೆವೆತು ಹೋಗುತ್ತಾನೆ, ತನ್ನನ್ನು ಈ ಸಮಸ್ಯೆಯಿಂದ ಹೊರಹಾಕಬಲ್ಲವನಿಗೆ ಮನಸ್ಸು ದುರ್ಬೀನು ಹಿಡಿದಿರುತ್ತದೆ. ಅದರಲ್ಲೂ ಕಾನೂನು, ಕ್ರೈಮ್ ಸಂಬಂಧಿ ಸಮಸ್ಯೆಯಾದರೆ ತಕ್ಷಣ ನೆನಪಿಗೆ ಬರುವುದೇ ಸರ್ಕಾರ! ಅಂತಹ ಕಷ್ಟಕರ ಸಂದರ್ಭದಲ್ಲಿರುವವರು ಸರ್ಕಾರವನ್ನು ಕೇರ್ ಟೇಕರ್ನ ಪಾತ್ರದಲ್ಲಿ ನೋಡಬಯುಸುತ್ತಾರೆ. ಸ್ವದೇಶದ ಸರ್ಕಾರ ತಂದೆಯ ಸ್ಥಾನ ಪಡೆದಿರುತ್ತದೆ. ತಂದೆ ತನ್ನ ಮಗನನ್ನು ಸಮಸ್ಯೆಯಿಂದ ಪಾರು ಮಾಡಲು ಹೇಗೆ ತನ್ನೆಲ್ಲಾ resources ಗಳನ್ನು ವ್ಯಯಿಸಿ ಕಡೆಯ ತನಕ ಹೋರಾಡುತ್ತಾನೋ ಅಂತಹುದನ್ನು ಅವರು ನಮ್ಮ ಸರ್ಕಾರದಿಂದ ನಿರೀಕ್ಷಿಸುತ್ತಿರುತ್ತಾರೆ. ಇದೊಂದು ಸಾಮಾನ್ಯ ಮಾನವ ಸೈಕಾಲಜಿ ಅಷ್ಟೆ. ಸರ್ಕಾರಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಸಬೇಕಾಗುತ್ತದೆ. ಅದು ಅದರ obligation ಕೂಡ ಆಗಿರುತ್ತದೆ.

Proudly powered by Blogger
Theme: Esquire by Matthew Buchanan.
Converted by LiteThemes.com.