ಆರೋಗ್ಯ ಇಲಾಖೆಯೆಂಬ ಸೋಮಾರಿ ಕತ್ತೆ!

ಮೊದಲಿಗೆ ನಾನು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ರೇಸಿಸ್ಟ್ ದಾಳಿಗಳು ಮತ್ತು ಅವುಗಳಿಗೆ ನಮ್ಮ ವಿದೇಶಾಂಗ ಇಲಾಖೆಯ ರೆಸ್ಪಾನ್ಸ್ ಅನ್ನು ಟೀಕಿಸುತ್ತಾ ವಿದೇಶಾಂಗ ಇಲಾಖೆಯನ್ನು ಸೋಮಾರಿ ಕತ್ತೆ ಅಂತ ಜರಿದಿದ್ದೆ. ಬರೆದ ಮೇಲೆ ನನಗೇ ಯಾಕೋ ಇದು ಅತಿಯಾಯಿತಾ ಅನ್ನಿಸಿತ್ತು. ಆದರೆ ಅದಾದ ಕೆಲವೇ ದಿನಗಳಿಗೆ ನಮ್ಮ ದೇಶದ ಆರೋಗ್ಯ ಇಲಾಖೆಗಳಿಗೆ ಹಾಗೆ ಜರಿಯುವಂತಾಗಿದೆ. ಈ ಬಾರಿ I think I am justified .

ಭವ್ಯ ಭಾರತದ ಜನ ಹಂದಿ ಜ್ವರದ ಭೀತಿಯಲ್ಲಿ ನರಳುತ್ತಿದ್ದಾರೆ. ಜ್ವರ ಪೀಡಿತರ ಸಂಖ್ಯೆ 1000-1500 ದಾಟಿದೆ, ಸತ್ತವರ ಸಂಕ್ಯೆ 26ಕ್ಕೇರಿದೆ. ಇದೊಂದು ಹೆಲ್ತ್ emergency ಅನ್ನುವುದರಲ್ಲಿ ಅನುಮಾನವೇ ಇಲ್ಲ. ಈಗ ನಮ್ಮ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿರುವುದು ನಮ್ಮ ಸರ್ಕಾರಗಳ ಆರೋಗ್ಯ ಇಲಾಖೆಗಳು. ಈ ಆರೋಗ್ಯ ಇಲಾಖೆಯಿದೆಯಲ್ಲ ಅದು ಅತ್ಯಗತ್ಯ ಸೇವೆಯ ಮಿನಿಸ್ಟ್ರಿ, ಆದರೆ ಹಲವರು ಅಲ್ಲಿ ಹೋಗಿ ಕೂರಲೇ ಹಿಂಜರಿಯುತ್ತಾರೆ - ನಮ್ಮ ಹಲವು ರಾಜಕಾರಣಿಗಳಿಗೆ ಅದೇನೋ ಕೀಳು ಎಂಬ ಭಾವನೆ. ಎಲ್ಲರಿಗೂ ದುಡ್ಡು-ಕಾಸು ಜೋರಾಗಿರುವ ಇಲಾಖೆಯೇ ಬೇಕು. ಹಾಗಾಗಿ ಅಲ್ಲಿ ಹೋಗಿ ಕೂತವರಿಗೆಲ್ಲರಿಗೂ ಅದೇನೋ ಉದಾಸೀನ. ಹೀಗಾಗಿ ಇಂದು ಆರೋಗ್ಯ ಇಲಾಖೆಯೆಂಬುದು ಸೋಮಾರಿ ಕತ್ತೆಯೆನಿಸಿಕೊಂಡಿದೆ. ದೇಶದಲ್ಲಿ ಇಷ್ಟೆಲ್ಲಾ ನಡೀತಿದ್ದರೂ ಅದು ನಿದ್ದೆಯಿಂದೆಚ್ಚೆತ್ತದ್ದು ನಾ ಕಾಣೆ. ಅದು ಕೇಂದ್ರ ಸರ್ಕಾರವಾಗಿರಬಹುದು, ರಾಜ್ಯ ಸರ್ಕಾರವಾಗಿರಬಹುದು ಎರಡರ ಕಥೆಯೂ ಅಷ್ಟೆಯಾ!

ಹಂದಿ ಜ್ವರ ಬರಲು ಶುರು ಮಾಡಿದಾಗ, ನಮ್ಮ ಕೇಂದ್ರ ಆರೋಗ್ಯ ಸಚಿವ ಗುಲಾಂ ನಭಿ ಆಜಾದ್ ವಿಮಾನ ನಿಲ್ಡಾಣಗಳಲ್ಲೆಲ್ಲಾ ಸ್ಕ್ರೀನಿಂಗು, ಹಾಳು ಮೂಳು ಅಂತ ಏರ್ಪಡಿಸಿದ್ದಷ್ಟೇ ಬಂತು ನಂತರ ಅವರು ಅದೇನೂ ಮಾಡಿದರೋ ಭಗವಂತ ಬಲ್ಲ. ಈಗ ಮತ್ತೆ ಹಂದಿ ಜ್ವರ ಹರಡಲು ಶುರುವಾದಾಗ ಧಡಬಡನೆ ಎದ್ದು ಬಂದು ಮೀಡಿಯಾ ಮುಂದೆ ನಿಂತು ಬಡಬಡಾಯಿಸಿದ್ದಷ್ಟೇ ಬಂತು ಕೆಲಸವೇನಿಲ್ಲ. ಹೋಗಲೀ ಅದನ್ನಾದರೂ ಸರಿಯಾಗಿ ಮಾಡಿದರಾ ಮೊದಲಿಗೆ ಸರ್ಕಾರೀ ಆಸ್ಪತ್ರೆಗಲಲ್ಲಿ ಮಾತ್ರ ಚಿಕಿತ್ಸೆ ಎಂದೂ, ನಂತರದ ಕೆಲವೇ ದಿನಗಳಲ್ಲಿ ಇಲ್ಲ ಕೆಲವು ಖಾಸಗೀ ಆಸ್ಪತ್ರೆಗಳಲ್ಲೂ ತಪಾಸಣೆ, ಚಿಕಿತ್ಸೆ ನಡೆಯುತ್ತದೆ ಎಂದು ಗೊಂದಲಮಯ ಹೇಳಿಕೆಗಳನ್ನು ನೀಡಿ ಜನರೆಲ್ಲರನ್ನೂ ಗೊಂದಲದಲ್ಲಿ ಮುಳುಗಿಸಿದರು. ಇದಲ್ಲದೆ, ಹಂದಿ ಜ್ವರಕ್ಕೆ ಭಾರತದಲ್ಲಿ ಬಲಿಯಾದ ಹುಡುಗಿಯ ಮನೆಯವರನ್ನು ಕೆರಿಳಿಸುವಂತೆ ಅಸೂಕ್ಷ್ಮ ಹೇಳಿಕೆಗಳನ್ನು ನೀಡಿ ಉಗಿಸಿಕೊಂಡರು. ಇತ್ತ ಅನೇಕ ಕಡೆ ತಪಾಸಣಾ ಕಿಟ್ಗಳು ಖಾಲಿಯಾಗುತ್ತಿವೆ. ಆ ಕಿಟ್ಗಳಿಲ್ಲದೇ ತಪಾಸಣೆ ಸಾಧ್ಯವಿಲ್ಲ. ಅವುಗಳನ್ನು ವಿದೇಶಗಳಿಂದ ಆಮದು ಮಡಿಸಿಕೊಳ್ಳಬೇಕು. 27 ಸಾವಿರ ಕಿಟ್ಗಳನ್ನು ತರಿಸಿಕೊಳ್ಳಲಾಗಿತ್ತಾದರೂ ಅವೆಲ್ಲವೂ ಮುಗಿದಾಗಿದೆ, ಈಗ ಹೊಸದಾಗಿ 22 ಸಾವಿರ ಕಿಟ್ಗಳಿಗಾಗಿ 1.75 ಕೋಟಿಗಳನ್ನು ಸಕರ್ಾರ ಈಗ ತೆಗೆದಿರಸುತ್ತದಂತೆ, ಇವರು ಬಿಡುಗಡೆ ಮಾಡುವುದು ಯಾವಾಗೋ? ಅವು ಬರುವುದು ಯಾವಾಗೋ? ದೇವರೇ ಬಲ್ಲ! ಖಾಸಗೀ ಆಸ್ಪತ್ರೆಗಳಿಗೂ ತಪಾಸಣೆ ನಡೆಸಲು ಬೇಗ ಲೈಸೆನ್ಸ್ ನೀಡುತ್ತಿಲ್ಲ. ಎಲ್ಲದರಲ್ಲೂ ವಿಳಂಬ. ಹಾಗೆ ನೋಡಿದರೆ ಮಹಾರಾಷ್ಟ್ರದ ಪುಣೆ, ಮುಂಬಯಿ, ಕರ್ನಾಟಕ ಮತ್ತಿತರ ಜ್ವರ ಪೀಡಿತ ರಾಜ್ಯಗಳಿಗೆ ಆರೋಗ್ಯ ಸಚಿವ ಗುಲಾಂ ನಭಿ ಆಜಾದ್ ಭೇಟಿ ನೀಡಿ ಪರಿಶೀಲನೆ ನಡೆಸಿ ಧೈರ್ಯ ಹೇಳಬೇಕಿತ್ತು. ಅದನ್ನು ಬಿಟ್ಟು ಮೀಡಿಯಾದಲ್ಲಷ್ಟೆ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ಇನ್ನು ಹಂದಿ ಜ್ವರ ತಡೆಗೆ ಪ್ರಧಾನಿಗಳ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆಯಂತೆ. ಇದು ಒಳ್ಳೆಯದೇ ಆದರೆ, ಗ್ರೌಂಡ್ನ ಮೇಲೆ ಕೆಲಸ ಮಾಡವವರಿಲ್ಲದೆ, ದೆಹಲಿಯಲ್ಲಿ ಪ್ರಧಾನಿಗಳು ಕೂತು ಮಾಡುವುದಾದರೂ ಏನು?


ಇದು ಕೇಂದ್ರ ಸರ್ಕಾರದ ಕಥೆಯಾದರೆ, ಇನ್ನು ನಮ್ಮ ರಾಜ್ಯ ಸಕಾರದ ಆರೋಗ್ಯ ಇಲಾಖೆಯ ಸ್ಥಿತಿ ನೋಡಿ ನಗಬೇಕೋ, ಅಳಬೇಕೋ ನಮಗೇ ತಿಳಿಯದು. ಹೌದು ಥಟ್ಟನೆ ಹೇಳಿ, ನಮ್ಮ ರಾಜ್ಯದ ಆರೋಗ್ಯ ಸಚಿವರಾರು? ತುಂಬ ಜನಕ್ಕೆ ತಿಳಿದಿಲ್ಲ. ಗಣಿ ರೆಡ್ಡಿಗಳ ಆಪ್ತಮಿತ್ರ ಶ್ರೀರಾಮುಲು! ಈತನದ್ದು ಪ್ರಚಂಡ ಉದಾಸೀನ, ಬೇಜವಾಬ್ದಾರಿತನ. ಮೊನ್ನೆ ವಿಧಾನಮಂಡಲ ಕಲಾಪದಲ್ಲಿ ಎರಡು ದಿನ ಆರೋಗ್ಯ ಇಲಾಖೆಯ ಅವ್ಯವಸ್ಥೆಗಳ ಕುರಿತೇ ಚಚರ್ೆ ನಡೆಯಿತು. ಆದರೆ ಈ ಸ್ವಾಮಿ ನಾಪತ್ತೆ! ಕಲಾಪ ಶುರುವಾದಾಗೊಮ್ಮೆ ಮುಖ ತೋರಿಸಿ ನಂತರ ಮಂಗಮಾಯ. ಇವರಿಗೆ ಗಣಿ ವಹಿವಾಟಿನ ನಡುವೆ ಎಲ್ಲೋ ಟೈಮು ಸಿಕ್ಕಿದರೆ ಆರೋಗ್ಯ ಖಾತೆಯ ಎಡತಾಕುತ್ತಾರೆ. ಸದ್ಯ ರಾಜ್ಯಾದ್ಯಂತ ಹಂದಿ ಜ್ವರದ ಭೀತಿ ಕಾಳ್ಗಿಚ್ಚಿನಂತೆ ಹಬ್ಬಿರುವಾಗಲೂ ಈತ ನಾಪತ್ತೆಯೇ. ರಾಜ್ಯದಲ್ಲಿ ಹಂದಿ ಜ್ವರದ ಮೊದಲ ಪ್ರಕರಣ ದಾಖಲಾದ ಹತ್ತು ದಿನಗಳಿಗೆ ಬೆಂಗಳೂರಿನಲ್ಲಿ ರಾಜ್ಯದ ಮೊದಲ ಎಚ್1ಎನ್1 ಸಾವು ಸಂಭವಿಸಿತು. ಆಗಲೂ ಸಾಹೇಬರು ನಾಪತ್ತೆ. ಮರುದಿನ ಭಕ್ತರಿಗೆ ದೇವರು ದರ್ಶನವಿತ್ತಂತೆ ಧಢಾರನೆ ಪ್ರತ್ಯಕ್ಷರಾಗುತ್ತಾರೆ ಶ್ರೀರಾಮುಲು. ಅದು ಭೇಟಿಯಂತಿರಲಿಲ್ಲ. It was more of an appearance. ಇವೆರಡಕ್ಕೂ ಶಾನೆ ವ್ಯತ್ಯಾಸವಿದೆ. ಸಚಿವ ರಾಮಚಂದ್ರೇಗೌಡ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಜೊತೆ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾರೆ (?). ಆ ಪತ್ರಿಕಾಘೋಷ್ಠಿ it was a statement in itself. ಆರೋಗ್ಯ ಸಚಿವರು ಪತ್ರಕರ್ತರು ಕೇಳಿದ ಯಾವುದೇ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅಲ್ಲಿ ಸಿಡುಕಿದ್ದು ರಾಮುಲು ಅಲ್ಲ ಬದಲಿಗೆ ರಾಮಚಂದ್ರೇಗೌಡರು. ಮಂತ್ರಿ ಸಹೋದ್ಯೋಗಿಯನ್ನು ಸಮರ್ಥಿಸಲು ಹೋಗಿ, ಅದಾಗದಾದಾಗ ಸರ್ರನೆ ಸಿಡುಕಿ, ಮೀಡಿಯಾ ಕಣ್ಣಲ್ಲಿ ವಿಲನ್ ಆದರು. ರಾಮುಲು ತುಟಿ ಎರಡು ಮಾಡಲಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಇಲಾಖೆಗೆ ಸಂಬಂಧವೇ ಇಲ್ಲದ ರಾಮಚಂದ್ರೇಗೌಡರನ್ನು ಕೂರಿಸಿಕೊಂಡು ಪತ್ರಿಕಾಘೋಷ್ಠಿ ನಡೆಸಿದ್ದೇ ತಿಳಿಸುತ್ತಿತ್ತು ಅವರ lack of confidence ಅನ್ನು. ಯಾವಾಗಾದರೂ ಪಟ್ಟಾಗಿ ಕೂತು ಕೆಲಸ ನಿರ್ವಸಿದ್ದರೆ ತಾನೆ ಅದೆಲ್ಲ?

ಇದೇ ಅತಿಯಾಯಿತು ಅಂದರೆ ಮಾರನೇ ದಿನ ರಾಮುಲು ಆರೋಗ್ಯ ಜ್ಞಾನದ ಕುರಿತು ಮತ್ತೊಂದು ತಮಾಷೆ ನಡೆಯಿತು. ವಿಷಯ ಏನಪ್ಪಾ ಅಂದರೆ ಜಯದೇವ ಆಸ್ಪತ್ರೆಯಲ್ಲಿನ ಯಾವುದೋ ಕಾರ್ಯಕ್ರಮಕ್ಕೆ ಆರೋಗ್ಯ ಮಂತ್ರಿಗಳು ಹೋಗಿದ್ದಾರೆ. ಜೊತೆಗೆ ಮತ್ತೆ ರಾಮಚಂದ್ರೇಗೌಡರಿದ್ದಾರೆ. ಜಯದೇವ ಆಸ್ಪತ್ರೆಗೆ ಹೋದ ರಾಮುಲುಗೆ ಒಳಗೆಲ್ಲಾ ನೋಡಿ ಖುಷಿಯಾಗಿದೆ. ಪಕ್ಕದಲ್ಲೇ ಇದ್ದ ಗೌಡರನ್ನು - `ಅಣ್ಣಾ ಈ ಆಸ್ಪತ್ರೆ ತುಂಬಾ ಸುಸಜ್ಜಿತವಾಗಿ, ಚೆನ್ನಾಗಿದೆ. ಅಂದಹಾಗೆ ಇದು ಯಾರದು?' ಅಂತ ಕೇಳಿದರಂತೆ! ಗೌಡರು ಅವಾಕ್ಕಾಗಿ ಬಿಟ್ಟ ಬಾಯಿ ಬಿಟ್ಟಂತೆ ಹಾಗೇ...ಆಮೇಲೆ ಗೌಡರೇ ವಿವರಿಸಿದರಂತೆ ಜಯದೇವ ಆಸ್ಪತ್ರೆ ಸರ್ಕಾರದ್ದು, ಆರೋಗ್ಯ ಇಲಾಖೆ ಕೆಳಗೇ ಬರುತ್ತದೆ ಎಂದು. ಈ ವಿಷಯವನ್ನು ಅದೇ ಕಾರ್ಯಕ್ರಮದಲ್ಲಿ ಗೌಡರು ತಮ್ಮ ಬಾಷಣದಲ್ಲಿ ಹೇಳಿದರೆಂದು ಇಂದಿನ ಪತ್ರಿಕೆಯಲ್ಲಿ ವರದಿಯಾಗಿದೆ. ಅಲ್ಲಾ ರಾಮುಲು ಸಾಹೇಬರು ಆರೋಗ್ಯ ಮಂತ್ರಿಗಳಾಗಿ ಹತ್ತಿರತ್ತಿರ ಒಂದೂಕಾಲು ವರ್ಷವಾಗುತ್ತಾ ಬಂತು. ಇನ್ನೂ ಜಯದೇವ ಆಸ್ಪತ್ರೆ ಸರ್ಕಾರದ್ದು ಎಂದು ಗೊತ್ತಿಲ್ಲವೆಂದರೆ ಇಲಾಖೆಯಲ್ಲಿ ಅವರ involvement ಎಷ್ಟಿದೆಯೆಂದು ನೀವೇ ಲೆಕ್ಕ ಹಾಕಿ. ಅಸಲಿಗೆ ಈ ಹಂದಿ ಜ್ವರ, ಎಚ್1ಎನ್1 ಎಂದರೆ ಏನೆಂಬದಾದರೂ ನಮ್ಮ ಆರೋಗ್ಯ ಮಂತ್ರಿಗಳಿಗೆ ತಿಳಿದಿದೆಯೇ? ನನಗಂತೂ ಅನುಮಾನ. ಕುರಿಸಿ ಪಾಠ ಮಾಡಿದರೂ ಅರ್ಥವಾಗುವುದು ಇನ್ನೂ ಅನುಮಾನ! ಇಂಥವರನ್ನು ಆರೋಗ್ಯ ಸಚಿವರನ್ನಾಗಿಟ್ಟುಕೊಂಡು ಯಡಿಯೂರಪ್ಪನವರು ರಾಜ್ಯವನ್ನು ಹೇಗೆ ಪರಿಪಾಲಿಸುತ್ತಾರೆ? ಶ್ರೀರಾಮುಲು ಮೊದಲಿಂದಲೂ ಅವರ ಮುಗ್ಧತೆ, ನೇರವಂತಿಕೆಯಿಂದಲೇ ಗುರುತಿಸಿಕೊಂಡವರು. ಕೆಲಸಗಾರನೆಂದೂ ಹೆಸರಾದವರು, ಕೆಳಜಾತಿಯಿಂದ ಬಂದವರು, ಬಳ್ಳಾರಿಯಲ್ಲಿ ಜನರೊಪ್ಪಿದ ನಾಯಕರು. ಎಲ್ಲಾ ನಿಜ. ಅವರನ್ನು ಮಂತ್ರಿಯಾಗಿ ಮಾಡಿರುವುದೂ ಸರಿಯೇ ಅಂತಿಟ್ಟುಕೊಳ್ಳಿ, ಆದರೆ ಆರೋಗ್ಯ ಇಲಾಖೆಯೆಂಬುದು ಅತ್ಯಗತ್ಯ ಸೇವೆಯ ಮಿನಿಸ್ಟ್ರಿ ಮತ್ತು ಅದು ತೀರ ಟೆಕ್ನಿಕಲ್ ಆದಂತುಹುದು. ಅಲ್ಲಿಗೆ ಬರುವವರು ಮೆಡಿಕಲ್ ಓದಿರಬೇಕು ಅಂತಿಲ್ಲವಾದರೂ ಓದಿದ್ದರೆ ಉತ್ತಮ. ಈ ಎಲ್ಲದರ ಹಿನ್ನಲೆಯಲ್ಲಿ ನೋಡಿದರೆ ಶ್ರೀರಾಮುಲು ಅವರು ಆರೋಗ್ಯ ಇಲಾಖೆಗೆ ಸರಿಹೊಂದುವ ಕ್ಯಾಂಡಿಡೇಟಲ್ಲ. ಅವರಿಗೆ ಬೇರೆ ಇಲಾಖೆಯ ಜವಾಬ್ದಾರಿ ಕೊಟ್ಟರೆ ಒಳ್ಳಯದಿತ್ತೇನೋ ಎಂಬುದು ನನ್ನ ಭಾವನೆ. ಏನಂತೀರಿ? ಇದನ್ನೆಲ್ಲಾ ಕೇಳುವವರಾರು? ಯಾರು ಕೇಳಲಿ ಬಿಡಲಿ ನಾವು ಊದೋ ಶಂಖ ನಾವು.....

ಆರೋಗ್ಯ ಇಲಾಖೆಯಲ್ಲಿ ಮೊದಲಿಗೆ ಮದನ್ ಗೋಪಾಲ್ ಎಂಬ ದಕ್ಷ ಅಧಿಕಾರಿಯಾದರೂ ಇದ್ದರು. ಈಗ ಅವರೂ ಇಲ್ಲ, ಎತ್ತಂಗಡಿಯಾಗಿ ತುಂಬ ದಿನವಾಯಿತು. ರಾಜ್ಯದ ಆರೋಗ್ಯ ಇಲಾಖೆ ಅಕ್ಷರಶಃ ಅನಾಥವಾಗಿದೆ. ಈ ಕುರಿತು ವಿರೋಧಪಕ್ಷಗಳು ಸಕಾರಣವಾಗಿ ಟೀಕಿಸಿದರೆ ರಾಮುಲು ಬದಲಿಗೆ ರೆಡ್ಡಿಗಳು ಉತ್ತರಿಸುತ್ತಾರೆ - ಸಿದ್ಧರಾಮಯ್ಯನವರಿಗೆ ಹಂದಿ ಜ್ವರ ಬಂದರೆ ಅವರಿಗೆ ನಾನೇ ಮದ್ದು ಕೊಡಿಸುತ್ತೇನೆ ಆಯಿತಾ ಎಂಬಂತೆ ಮಾತಾಡುತ್ತಾರೆ. ಇನ್ನ ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು. ಜನರ ಪಾಲಿಗೆ ಆರೋಗ್ಯ ಇಲಾಖೆಯಂತೂ ಇಲ್ಲ!

Proudly powered by Blogger
Theme: Esquire by Matthew Buchanan.
Converted by LiteThemes.com.