ಇಂದಿನ ಭಾರತ - ಸೂಪರ್ ಸ್ಟಾರೋ? ವೈಟ್ ಟೈಗರ್ರೋ?

ಇತ್ತೀಚೆಗಷ್ಟೆ ನಾವು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದೇವೆ. ಈಗ ಇಂಥ ರಾಷ್ಟ್ರೀಯ ಹಬ್ಬಗಳು ಸಾಮಾನ್ಯರ ಪಾಲಿಗೆ ರಜಾದಿನಗಳಾಗಿ ಮಾತ್ರ ನೆನಪು. ಆದರೂ ಸ್ವಾತಂತ್ರ್ಯೋತ್ಸವವೆಂಬುದು ದೇಶ ಸದ್ಯ ಇರುವ ಪರಿಸ್ಥಿತಿಗಳ ಮತ್ತು ನಡೆದು ಬಂದ ಹಾದಿಯ ಕುರಿತು ಆತ್ಮಾವಲೋಕನ ನಡೆಸಲು ಒಳ್ಳೆಯ ಸಂದರ್ಭ. ನಾವು ಗಮನಿಸಿದರೆ ಭಾರತ ಮತ್ತು ಅದರ ಆರ್ಥಿಕದಾಪುಗಾಲು ವಿಶ್ವದಲ್ಲಿ ಬಹುಚರ್ಚಿತ ವಿಷಯವಾಗಿದೆ. ಅದು ಸಕಾರಾತ್ಮಕವಾಗಿರಬಹುದು, ನಕರಾತ್ಮಕವಾಗಿರಬಹುದು, ಚರ್ಚೆಯಂತೂ ನಡೆದಿದೆ. ಇಂಡಿಯಾ ಷೈನಿಂಗ್ ಘೋಷಣೆ ನಮ್ಮ ನೆನಪಿನಿಂದ ಮಾಸುವ ಮುನ್ನವೇ ಭಾರತದ ಆಥರ್ಿಕ ದಾಪುಗಾಲು ಆರ್ಥಿಕ ದಾಪುಗಾಲಿಗೆ ಜಾಗತಿಕ ಆರ್ಥಿಕ ಹಿಂಜರಿತ ಲಗಾಮು ಹಾಕಿರುವುದು ಭಾರತದ `ನಾಗಾಲೋಟ'ದ ಕುರಿತು ಹಲವಾರು ಪ್ರಶ್ನೆಗಳೇಳುವಂತೆ ಮಾಡಿದೆ.

ಇತ್ತೀಚಿನ ಕುತೂಹಲಕಾರಿ ಟ್ರೆಂಡ್ ಎಂದರೆ ಹಲವಾರು ಆಂಗ್ಲ ಲೇಖಕರು ತಮ್ಮ ಪುಸ್ತಕಗಳನ್ನು ಬರೆಯಲು ಆರಿಸಿಕೊಳ್ಳುವ ವಿಷಯ - ಅದು ಭಾರತ. ಭಾರತವೆಂಬುದು ಈಗ `ಮೋಸ್ಟ್ ಸೇಲಬಲ್'. ನಾರಾಯಣ ಮೂರ್ತಿ, ನಂದನ್ ನೀಲಕೇಣಿ, ಶಶಿ ತರೂರ್, ಶೋಭಾ ಡೇ ರಿಂದ ಹಿಡಿದು ಅರವಿಂದ ಅಡಿಗರವರೆಗೂ ಎಲ್ಲರೂ ಬರೆಯುತ್ತಿರುವುದು ಭಾರತದ ಬಗೆಗೆ! ಇತ್ತೀಚೆಗೆ ಇದೊಂದು ಟ್ರೆಂಡ್. ಅದರಲ್ಲಿ ಎರಡು ತಮ್ಮ ಹೆಸರಿನಲ್ಲಿನ ಉಪಮೆಯಿಂದ ಹೆಚ್ಚು ಗುರಿತಸಲ್ಪಟ್ಟವು. ಒಂದು ಶೋಭಾ ಡೇ ಅವರ `ಸೂಪರ್ ಸ್ಟಾರ್ - ಇಂಡಿಯಾ' ಮತ್ತೊಂದು ಬುಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗರ `ವೈಟ್ ಟೈಗರ್'. ಶೋಭಾ ಡೇರವರ ಪ್ರಕಾರ ಇಂದಿನ ಭಾರತವೆಂಬುದು ಮೂರನೇ ಜಗತ್ತಿನ ಸ್ಟಿಗ್ಮಾದಿಂದ ಹೊರಬಂದು ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ನಡೆಯುತ್ತಿರುವ ಮಿನುಗು ನಕ್ಷತ್ರ - ಸೂಪರ್ ಸ್ಟಾರ್.

ಈ ಪುಸ್ತಕವನ್ನು ನೀವು ಓದಿದರೆ ಭಾರತವು ಸಮಸ್ಯೆಗಳೇ ಇಲ್ಲದ ವಂಡರ್ಲ್ಯಾಂಡ್ ಎಂದು ಬಿಂಬಿಸಹೊರಟಿರುವುದು ಸ್ಪಷ್ಟವಾಗುತ್ತದೆ. 90ರ ದಶಕದ ಆದಿಯಲ್ಲಿ ನಮ್ಮ ಮಾರುಕಟ್ಟೆಗಳನ್ನು ಮುಕ್ತಗೊಳಿಸಿದ್ದರಿಂದಾಗಿ ಜಾಗತೀಕರಣದ `ಸಂಪೂರ್ಣ' ಲಾಭವನ್ನು ನಮ್ಮ ದೇಶವು ಪಡೆದುಕೊಳ್ಳಲು ಸಾಧ್ಯವಾಯಿತು. ಜನಸಂಖ್ಯಾ ಸ್ಫೋಟವನ್ನು
ಸಮಸ್ಯೆಯೆಂದು ತಿಳಿಯುತ್ತಿದ್ದ ಭಾರತಕ್ಕೆ ತನ್ನ ಅಪಾರ ಜನಸಂಖ್ಯೆಯ ಮೌಲ್ಯ ತಿಳಿದದ್ದೇ ಆಗ. ಲಿಬರಲೈಸೇಷನ್ನಿಂದಾಗಿ ಭಾರತವು ಐ.ಟಿ.ಕ್ರಾಂತಿಗೆ ಸಾಕ್ಷಿಯಾಯಿತು. ಇದು ಮಾನವ ಸಂಪನ್ಮೂಲ ಕೇಂದ್ರಿತ ಉದ್ಯಮವಾದ್ದರಿಂದ ಭಾರತದ ಜನಸಂಖ್ಯೆಯು ಆಗಿ ಪರಿವರ್ತಿತವಾಯಿತು. ಭಾರತದಲ್ಲಿ ತಾಂಡವವಾಡುತ್ತಿದ್ದ ನಿರುದ್ಯೋಗ ಸಮಸ್ಯೆಗೆ ಬಹುಮಟ್ಟಿಗೆ ಇದು ಮದ್ದಾಯಿತು. ಇದರಿಂದ ಭಾರತದಲ್ಲಿ ಸಮಾಜದ ಮಧ್ಯಮ ವರ್ಗದ ವಿಸ್ತರಿಸುತ್ತಾ ಹೋಯಿತು ಮತ್ತು ನಗರ ಕೇಂದ್ರಿತ ಸಮಾಜದ ಕಡೆಗೆ ನಮ್ಮ ದಾಪುಗಾಲು. ಇದರಿಂದ ಪ್ರಾರಂಭವಾದ ಸಂಪತ್ತು ಉತ್ಪಾದನೆಯು ಇತರ ಹಲವಾರು ಕ್ಷೇತ್ರಗಳಿಗೆ ಹರಡಿ ಭಾರತದ ಆರ್ಥಿಕತೆಯ ನಾಗಾಲೋಟಕ್ಕೆ ನಾಂದಿ ಹಾಡಿತು.
ಇದರ ಪ್ರತಿಫಲವೆಂದರೆ ಭಾರತದಲ್ಲಿ ಹಿಂದೆಂದೂ ಕಾಣದಿದ್ದ ನವೋಲ್ಲಾಸ ಮತ್ತು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವೊಂದು ಯುವಕರಲ್ಲಿ ಮೂಡಿರುವುದು. ಇದು ಉತ್ತಮ ಬೆಳವಣಿಗೆಯೇ. ಆರ್ಥಿಕ ಹಿಂಜರಿತದ ಹೊರತಾಗಿಯೂ ಭಾರತದ ಆರ್ಥಿಕತೆ ದಾಪುಗಾಲಿಡುತ್ತಿದೆ. ಇದು ಇತರ ಹಲವರಿಗಿಂತ ಎಷ್ಟೋ ಲೇಸು. ಬರುವ ಶತಮಾನದಲ್ಲಿ ವಿಶ್ವದ ಆಗು ಹೋಗುಗಳು, ಭಾರತ-ಅಮೇರಿಕಾ-ಚೈನಾಗಳ ನಡುವಿನ ಸಂಬಂಧಗಳ ಸ್ವರೂಪದ ಮೇಲೆ ನಿರ್ಧಾರವಾಗುತ್ತವೆ ಎನ್ನುತ್ತಾರೆ. ಕೇವಲ ಎರಡು ದಶಕಗಳ ಹಿಂದೆ ಹಾವಾಡಿಗರ ದೇಶವೆಂದು ಹೆಸರಾಗಿದ್ದ ಭಾರತವು ಇಂದಿರುವ ಸ್ಥಿತಿಯನ್ನ ತಲುಪಿರುವುದು ಸಾಧನೆಯೇ ಸರಿ.


ಆದರೆ ಪ್ರಶ್ನೆ ಈ ಹಾವಾಡಿಗರು, ಭಿಕ್ಷುಕರು, ಅನಕ್ಷರಸ್ತರು, ಇವರೆಲ್ಲಾ ಎಲ್ಲಿ ಹೋದರು ಅನ್ನುವುದು? ಅದನ್ನು ಹುಡುಕುತ್ತಾ ಹೊರಟವರಿಗೆ `ಇಂಡಿಯಾ ಷೈನಿಂಗ್'ನ ಕರಾಳ ಮುಖದ ದರ್ಶನವಾದೀತು. ಇತ್ತೀಚೆಗೆ ಅರವಿಂದ ಅಡಿಗರು ತಮ್ಮ `ವೈಟ್ ಟೈಗರ್' ಕೃತಿಯಲ್ಲಿ ಇದರ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ಕೂಡ. ಇದರಲ್ಲಿ, ಇಂದಿನ ಸಮಾಜದಲ್ಲಿ ಕಡೆಗೆ ನಿರ್ಣಾಯಕವಾಗುವುದು ಹಣವೇ ಹೊರತು ಅದನ್ನು ಸಂಪಾದಿಸಿದ ಮಾರ್ಗವಲ್ಲವೆಂದಾಗ, ತಲೆ ಹೊಡೆದು ದುಡ್ಡು ಮಾಡಿದರೂ ಸರಿಯೇ ಎಂಬ ವಾದ ಹುಟ್ಟುವುದನ್ನು, ಒಬ್ಬ ಮನುಷ್ಯ ಎಷ್ಟು ದುಡಿಯುತ್ತಾನೋ ಅದರಲ್ಲಿ ಆತನ ಸಕ್ಸಸ್ ಅನ್ನು ಅಳೆಯುವ ಇತ್ತೀಚಿನ ಸಂಸ್ಕೃತಿಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಇದರಲ್ಲಿ ಅಡಿಗರು ಮಾರುಕಟ್ಟೆ ಕೇಂದ್ರಿತವಾಗುತ್ತಿರುವ ಭಾರತದ ವ್ಯವಸ್ಥೆಯ ವೈಫಲ್ಯವನ್ನು ಮತ್ತು ಇಂದಿಗೂ ಸೋಷಿಯಲಿಸ್ಟ್ ಎನಿಸಿಕೊಂಡಿರುವ ಚೀನಾದಲ್ಲಿನ ವ್ಯವಸ್ಥೆಗೆ ತಾಳೆ ಹಾಕಿ ನೋಡುತ್ತಾರೆ. ಇದರಿಂದ ಅವರು ಮುಂದಿನ ದಿನಗಳಲ್ಲಿ ಸಮಾಜವಾದದ ಪುನರುದಯವನ್ನು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ ಸಮಸ್ಯೆಯೆಂದರೆ ಈ ಪುಸ್ತಕವನ್ನು ಓದಿದರೆ ಭಾರತವೆಂಬುದು ಅಸಲು ಬೆಳವಣಿಗೆಯನ್ನೇ ಕಾಣದ `third worldನ ಕೊಂಪೆಯೆನಿಸದೇ ಇರದು. ಇದು ಇಂದಿನ ಭಾರತದ ನೈಜ ಚಿತ್ರಣವಾದೀತೆ? ಹಿಂದೆ ಹೇಳಿದಂತೆ ಮುಕ್ತ ಮಾರುಕಟ್ಟೆಯು ನಮ್ಮ ಸಮಾಜದಲ್ಲಿ ಕ್ರಾಂತಿಯನ್ನೇ ಉಂಟುಮಾಡಿರುವುದು ವಾಸ್ತವವಾದರೂ, ಅದು ಸಂಪತ್ತಿನ ದ್ವೀಪಗಳನ್ನು ಸ್ಥಾಪಿಸಲು ಸಫಲವಾಯಿತೇ ಹೊರತು, ಜನ್ಯ ಸಂಪತ್ತನ್ನು ಸಾಮಾನ್ಯರಿಗೆ, ಸಮಾಜದ ತಳ ಮಟ್ಟದಲ್ಲಿರುವವರಿಗೆ ತಲುಪುವಂತೆ ಮಾಡುವಲ್ಲಿ ವಿಫಲವಾಗಿರುವುದು ಸುಸ್ಪಷ್ಟ.

ಇದರಿಂದ ಉಳ್ಳವರ ಮತ್ತು ಬಡವರ ನಡುವಿನ ಅಂತರ ಮತ್ತು ನಗರ ಹಳ್ಳಿಗಳ ಜೀವನ ಮಟ್ಟದಲ್ಲಿನ ಅಂತರವು ಬೆಳೆಯುತ್ತಲೇ ಇದೆ. ಇದು ಎಂದಿಗಾದರೂ ಅಪಾಯಕಾರಿ ಬೆಳವಣಿಗೆಯೇ. ಜಾಗತೀಕರಣದಿಂದಾಗಿ ಸ್ಥಾಪಿಸಲ್ಪಟ್ಟ ಈ ಸಂಪತ್ತಿನ ದ್ವೀಪಗಳಲ್ಲಿ ನಮ್ಮ ರಾಜಕೀಯ, ಸಾಮಾಜಿಕ, ಮಾಧ್ಯಮ ವ್ಯವಸ್ಥೆಯು ಮೈಮರೆತಿರುವುದು ವಾಸ್ತವ. ಆದರೆ ಜಾಗತಿಕ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಂಪತ್ತಿನ ಈ ದ್ವೀಪಗಳೂ ಮುಳುಗಡೆಯಾಗುವ ಲಕ್ಷಣಗಳನ್ನು ಪ್ರದರ್ಶಿಸುತ್ತಿವೆ. ಈಗಲಾದರೂ ವಿಶ್ವದ ಹ್ಯೂಮನ್ ಡೆವಲಪಮೆಂಟ್ ಇಂಡೆಕ್ಸ್ನಲ್ಲಿ ಭಾರತವು ಕೆಳಗಡೆಯಿಂದ ಐದೋ ಆರೋ ಸ್ಥಾನದಲ್ಲಿರುವುದನ್ನು ಮನದಟ್ಟು ಮಾಡಿಕೊಂಡು ದೇಶವನ್ನು ಪ್ರಗತಿಯ ದಿಶೆಯಲ್ಲಿ(ಅಭಿವೃದ್ಧಿಯಲ್ಲ) ಮುನ್ನಡೆಸಲು ಹೆಜ್ಜೆ ಹಾಕಬೇಕಿದೆ. ಈ ಆರ್ಥಿಕ ಬೆಳವಣಿಗೆಯ ಮುಖ್ಯ ಸೋಲೆಂದರೆ ಅದು ಸಕಲರನ್ನೂ ಒಳಗೊಳ್ಳದೇ ಇರುವುದು. ಒಂದು ದೇಶದ ಆರ್ಥಿಕತೆಯು ಬಹಳ ವರ್ಷಗಳ ಕಾಲ ವಿದೇಶಿ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿ ಬೆಳೆಯಲಿಕ್ಕಾಗುವುದಿಲ್ಲ. ಭಾರತದಲ್ಲಿ ಬೃಹತ್ತಾದ ಸ್ವದೇಶಿ ಮಾರುಕಟ್ಟೆಯೊಂದು ಬಳಸದೇ ವ್ಯರ್ಥವಾಗುತ್ತಿದೆ. ಆದರೆ ಇದನ್ನು ನಾವು ಬಳಸಬೇಕಾದರೆ ಮುಖ್ಯವಾಗಿ ದೇಶದ ಸಾಮಾನ್ಯರಿಗೆ ಕೊಳ್ಳುವ ಶಕ್ತಿಯನ್ನು ನೀಡಬೇಕಿದೆ. ಅದಕ್ಕೆ ಸಂಪತ್ತಿನ ಸಮಾನ ವಿತರಣೆ ಆಗಬೇಕು. ಇದು ಇಂದಿನ ಭಾರತದ ಪ್ರಥಮ ಸವಾಲುಗಳ್ಳಲ್ಲೊಂದು.

ಶೋಭಾ ಡೇ ತಿಳಿಸಿರುವಂತೆ ಇಂದಿನ ಭಾರತ ಸೂಪರ್ ಸ್ಟಾರೂ ಅಲ್ಲ. ಅರವಿಂದ ಅಡಿಗರು ಹೇಳುವಂತೆ ವೈಟ್ ಟೈಗರ್ರೂ ಅಲ್ಲ. ಇವೆರಡೂ ಆಶಾವಾದ ಮತ್ತು ನಿರಾಶಾವಾದದ ಉತ್ಪ್ರೇಕ್ಷಿತ ಉಪಮೆಗಳು ಅಷ್ಟೆ. ಇದು ಶಾಶ್ವತ ಆಶಾವಾದಿಗಳ ಮತ್ತು ಶಾಶ್ವತ ನಿರಾಶಾವಾದಿಗಳ ನಡುವಿನ ತಿಕ್ಕಾಟಗಳೇ ಹೊರತು ಇದರಲ್ಲಿ ಯಾವ ಕೃತಿಯು ಇಂದಿನ ಭಾರತದ ನೈಜ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ. ಹಾಗಾದರೆ ಇವೆರಡೂ ಸುಳ್ಳುಗಳ ಕಂತೆಯೇ? ಉತ್ತರ ಅಷ್ಟು ಸುಲಭವಲ್ಲ. ಇದು ಭಾರತ. ಇಲ್ಲಿನ ಎರಡೂ ಚಿತ್ರಣಗಳು ನಿಜ. ಆದರೆ ಸಂಪೂರ್ಣವಲ್ಲ ಅಷ್ಟೆ. ಭಾರತದ ವೈವಿಧ್ಯತೆ ಅಪಾರ. ಅದೇ ಅದರ ಶಕ್ತಿ ಕೂಡ. ನೆಹರೂ ಎಲ್ಲೋ ಹೇಳಿದ ನೆನಪು ಭಾರತದ ಕುರಿತು ಏನೇ ಹೇಳಿದರೂ ಅದರ ವಿರುದ್ದವೂ ಅಷ್ಟೆ ನಿಜವೆಂದು. ಹಾಗಾಗಿ ನಾಣ್ಯದ ಒಂದೇ ಮುಖವನ್ನು ಕಂಡು ನಾಣ್ಯಕ್ಕಿರುವುದೇ ಒಂದು ಮುಖವೆಂದು ವಾದಿಸ ಹೊರಡುವುದು ಹಾಸ್ಯಾಸ್ಪದವಾಗುತ್ತದೆ. ಶೋಭಾ ಡೇ ಚಿತ್ರಿಸಲು ಹೊರಟಂತೆ ಇದು ಸಮಸ್ಯೆಗಳೇ ಇಲ್ಲದ ವಂಡರ್ಲ್ಯಾಂಡ್ ಅಲ್ಲವೇ ಅಲ್ಲ - ಇಲ್ಲಿ ಹಲವಾರು ಸಮಸ್ಯೆಗಳಿವೆ. ಜನಸಂಖ್ಯೆಯ ಮೂರನೇ ಒಂದು ಭಾಗವು ಬಡತನ ರೇಖೆಗಿಂತ ಕೆಳಗಿದೆ ಮತ್ತು ಶೇ.40 ರಷ್ಟು ಅನಕ್ಷರಸ್ತರಿದ್ದಾರೆ. ಹಾಗಂತ ಅರವಿಂದ ಅಡಿಗರು ನಂಬಿಸ ಹೊರಟಂತೆ ಇದು ಇನ್ನೂ ಬೆಳವಣಿಗೆಯೇ ಕಾಣದ ಮೂರನೇ ಜಗತ್ತಿನ ಕೊಂಪೆಯೂ ಅಲ್ಲ. ವಾಸ್ತವವೆಂಬುದು ಈ ಎರಡು ಉತ್ಪ್ರೇಕ್ಷೆ ಗಳ ನಡುವೆ ಎಲ್ಲೊ ಇದೆ. ಇಂದಿನ ಭಾರತದಲ್ಲಿ ವಂಡರ್ಲ್ಯಾಂಡ್ನಂತಹ ದ್ವೀಪಗಳೂ ಇವೆ, ಇವನ್ನು ಸುತ್ತುವರೆದ ಕೊಂಪೆಗಳಂತಹ ವಿಶಾಲ ಸಮುದ್ರವೂ ಇದೆ. ಇವರೆಡರ ನಡುವಿನ ಅಂತರವನ್ನು ಕಡಿತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಭಾರತವು 1991ರಲ್ಲಿ ತನ್ನ ಮಾರುಕಟ್ಟೆಗಳನ್ನು ಮುಕ್ತಗೊಳಿಸಿತು. ಈ ಹಿಂದೆ ನಾಲ್ಕೂವರೆ ದಶಕಗಳ ಕಾಲ ನಮ್ಮ ದೇಶವನ್ನು ಸಮತಾವಾದ ಆವರಿಸಿಕೊಂಡಿತ್ತು. ಮುಖ್ಯವಾಗಿ ನಮ್ಮ ದೇಶವು ಪ್ರಜಾಪ್ರಭುತ್ವವನ್ನು ಒಪ್ಪಿ, ಅಪ್ಪಿ ಅದು ಜಾರಿಯಾಗಲು ಶೂರುವಾದ ನಾಲ್ಕು ದಶಕಗಳ ನಂತರ ನಾವು ಲಿಬರಲೈಸೇಶನ್ ಅನ್ನು ಆಹ್ವಾನಿಸಿರುವುದು. ತಮ್ಮ ಇಂಡಿಯಾ ಅನ್ಬೌಂಡ್ ಕೃತಿಯಲ್ಲಿ ಗುರುಚರಣ್ದಾಸ್ ಹೇಳುವಂತೆ - ಪ್ರಜಾಪ್ರಭುತ್ವ ಮತ್ತು ಲಿಬರಲೈಸೇಶನ್ ನಡುವಿನ ಈ ಸಂಬಂಧ ಭಾರತಕ್ಕೆ ವಿಷೇಶ. ಹೀಗಾಗಿ ಭಾರತದ ಭವಿಷ್ಯವೆಂಬುದು ಮಾರುಕಟ್ಟೆಯ ಲಂಗುಲಗಾಮಿಲ್ಲದ ಶಕ್ತಿಗಳಿಂದ ರೂಪಿತವಾಗುವುದಿಲ್ಲ. ಬದಲಾಗಿ ಅದು ಡೆಮಾಕ್ರಟಿಕ್ ಆಗಿ ನೆಹರೂವಿಯನ್ ಸಮತಾವಾದಿಗಳು, ಕಮ್ಯೂನಿಸ್ಟರು, ಧರ್ಮಗಳು - ಹೀಗೆ ಭಾರತದ ಮನೋ ಸಾಮ್ರಾಜ್ಯವನ್ನು ಆಳುತ್ತಿರುವ ಮನಸ್ಥಿತಿಗಳು ಮತ್ತು ಶಕ್ತಿಗಳೊಂದಿನ ದೈನಂದಿನ ಚರ್ಚೆಯಿಂದ ಭಾರತದ ಭವಿಷ್ಯ ರೂಪಿತವಾಗುತ್ತದೆ. ಇಂತಹುದೊಂದು ಪ್ರಕ್ರಿಯೆಯಿಂದಾಗಿ ವೈವಿಧ್ಯಮಯ ದೃಷ್ಟಿಕೋನಗಳು, ಇಸಮ್ಗಳು ತಮ್ಮ ಪ್ರಭಾವ ಬೀರುವುದರಿಂದ ಭಾರತದ ಆರ್ಥಿಕ ಸುಧಾರಣೆಗಳು ಸಾವಧಾನವಾಗಿ, ಮುಂದುವರಿಯುತ್ತವೆಯೇ ಹೊರತು ಇತರ ಏಷಿಯನ್ ಟೈಗರ್ ಇಕಾನಮಿಗಳಂತೆ ಛಂಗನೆ ನೆಗೆಯುವುದಿಲ್ಲ. ಅಸಲಿಗೆ ಭಾರತವು ಹುಲಿಯೇ ಅಲ್ಲ. ಅದೊಂದು ಆನೆ - ಒಂಟಿ ಸಲಗ. ಈಗತಾನೆ ಅದು ನಡೆಯಲು ಪ್ರಾರಂಭಿಸಿದೆ, ಅದು ಛಂಗನೆ ಎಗರುವುದಿಲ್ಲ ಆದರೆ ಅದು ಬೀಳುವುದೂ ಇಲ್ಲ, ನಡೆಯುವುದನ್ನು ನಿಲ್ಲುಸುವುದೂ ಇಲ್ಲ. ಅದಕ್ಕೆ ಯಾವತ್ತು ಸ್ಪೀಡ್ ಇರುವುದಿಲ್ಲ ಆದರೆ ಎದುರು ಹೊಡೆತಗಳನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸ್ಟಾಮಿನಾ ಇರುತ್ತದೆ. ಇದನ್ನು ನಾವೀಗಾಗಲೇ ಕಾಣುತ್ತದ್ದೇವೆ. ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಭಾರತದ ಆರ್ಥಿಕತೆಯು ಶೇ.5ರಷ್ಟು ಬೆಳೆಯುವ ನಿರೀಕ್ಷೆಯಿದ್ದರೆ ಅದು ಈ ನಿಧಾನಗತಿಯ ಲಿಬರಲೈಸೇಷನ್ನ ಫಲಿತವೇ. 90ರ ದಶಕದಲ್ಲಿ ಏಕಾಏಕಿ ಸಂಪೂರ್ಣವಾಗಿ ಜಾಗತೀಕರಣಕ್ಕೆ ಮೊರೆ ಹೋಗಿದ್ದರೆ ಇಂದಿನ ಸ್ಥಿತಿ ಬೇರೆಯದೇ ಆಗಿರುತ್ತಿತ್ತು. ಭಾರತದ ಡೆಮಾಕ್ರಸಿ ಮತ್ತು ಕ್ಯಾಪಿಟಲಿಸಮ್ನ ಈ ವಿಶಿಷ್ಟ ಸಂಬಂಧದ ಹಿನ್ನಲೆಯಲ್ಲಿ ನಮ್ಮ ಭವಿಷ್ಯವು ಆಶಾದಾಯಕವಾಗೇ ಕಾಣುತ್ತದೆ. ಜಾಗತೀಕರಣದ ಹೊಡೆತಗಳ ಹೊರತಾಗಿಯೂ ಭಾರತವು ತನ್ನ ಸಂಸ್ಕೃತಿ, ಆಧ್ಯಾತ್ಮ, ರೈತಾಪಿ ಜನರನ್ನು ಸಂರಕ್ಷಿಸಿಕೊಂಡರೆ ಖಂಡಿತಾ ಭಾರತವು ಒಂಟಿ ಸಲಗವೇ. ಅದನ್ನು ಸಾಧಿಸುತ್ತೇವೆಂಬ ಭರವಸೆ, ವಿಶ್ವಾಸ ಮತ್ತು ಛಲದೊಂದಿಗೆ ನಾವು ಮುನ್ನಡೆಯಬೇಕಿದೆ. ಆಗಸ್ಟ್ 15, 1947ರ ಮಧ್ಯರಾತ್ರಿ ನೆಹರೂ ಮಾಡಿದ ಭಾಷಣ ವಿಧಿಯೊಂದಿಗೆ ಅನುಸಂಧಾನದಲ್ಲಿ ನೆಹರೂರ ಧ್ಯೇಯವಾಕ್ಯವನ್ನು ನಾವಿಂದು ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ.

“The service of India means the service of the millions who suffer. It means the ending of poverty and ignorance and disease and inequality of opportunity. The ambition of the greatest man of our generation [Mahatma Gandhi] has been to wipe every tear from every eye. That may be beyond us but so long as there are tears and suffering, so long our work will not be over”
- Jawaharlal Nehru, tryst with destiny
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ )

2 thoughts on “ಇಂದಿನ ಭಾರತ - ಸೂಪರ್ ಸ್ಟಾರೋ? ವೈಟ್ ಟೈಗರ್ರೋ?

umesh desai said...

ಆದಿತ್ಯ ಮೊದಲಬಾರಿ ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತಿರುವೆ. ನಿಮ್ಮ ವಿಚಾರ ಅದನ್ನು ಪ್ರಸ್ತುತಪಡಿಸುವ ರೀತಿ
ಮೆಚ್ಚಿಗೆ ಆತು. ನೀವು ಬ್ಲಾಗಿಂಗ್ ಸೀರಿಯಸ್ಸಾಗಿ ತಗೊಂಡಿರಿ
ಇದು ವೇದ್ಯ ವಿಷಯ. ಇಲ್ಲಿ ಪ್ರಸ್ತಾಪವಾದ ವಿಷಯ ಚರ್ಚೆಗೆ ಆಸ್ಪದ ಕೊಡುತ್ತದೆ. ನಿಮ್ಮ ಪ್ರತಿಪಾದನೆ ಸರೀನೆ ಇರಬಹುದು
ಆದರೂ ನಾವು ಅಂದರೆ ಭಾರತೀಯರು ಇನ್ನೂ ಪಳಗಬೇಕಾಗಿದೆ
ನಮ್ಮನ್ನು ಸರಿಯಾಗಿ ಗುರ್ತಿಸಿಕೊಳ್ಳಬೆಕಾಗಿದೆ ಮುಖ್ಯವಾಗಿ ನಮ್ಮ ಯುವಜನಾಂಗ ಮಾಲ್,ಪಬ್ ,ಹಿಂದುತ್ವ ಹೀಗೆ ಪ್ರಲೋಭನೆಗಳಿಗೆ ಒಳಗಾಗದೇ ತಮ್ಮ ದಿಕ್ಕು ತಾವೆ ಗುರ್ತಿಸಿ ಸಾಗಬೇಕಾಗಿದೆ...

ಮಲ್ಲಿಕಾರ್ಜುನ.ಡಿ.ಜಿ. said...

ಆದಿತ್ಯ ಅವರೆ,
ನೀವು ಕೈವಾರದವರೆಂದು ತಿಳಿದು ಸಂತೋಷವಾಯ್ತು. ನನ್ನೂರು ಶಿಡ್ಲಘಟ್ಟ.
ನಿಮ್ಮ ಬ್ಲಾಗ್ ಚೆನ್ನಾಗಿದೆ. ಚಿಂತನೆಗೆ ಹಚ್ಚುವಂತಹ ಲೇಖನಗಳಿವೆ. ಓದಿ ಖುಷಿಯಾಯ್ತು. ಧನ್ಯವಾದಗಳು.

Proudly powered by Blogger
Theme: Esquire by Matthew Buchanan.
Converted by LiteThemes.com.