ಡೆಲ್ಲಿ ರಣಜಿಲ್ಲಿ ವೀರು ಬಿರುಗಾಳಿ

ಕಳೆದ ಒಂದು ವಾರದಿಂದ ವೀರೇಂದ್ರ ಸೆಹ್ವಾಗ್ರದೇ ಸುದ್ದಿ. ವೀರು ದೆಹಲೀ ರಣಜಿ ತಂಡದ ನಾಯಕನಾಗಿರುವುದು, ಈಗ ಆತ ದೆಹಲಿ ತಂಡವನ್ನು ತ್ಯಜಿಸಿ ಹರ್ಯಾಣ ರಣಜಿ ತಂಡಕ್ಕೆ ಹೋಗಿ ಸೇರುವುದಾಗಿ ಬೆದರಿಸಿರುವುದು, ತಂಡದ ಸುಮಾರು 8-9 ಆಟಗಾರರು ವೀರೂನನ್ನು ಹಿಂಬಾಲಿಸಲು ತಯಾರಾಗಿ ನಿಂತಿರುವುದು - ಬರೀ ಇದರದೇ ಸುದ್ದಿ. ಇದೆಲ್ಲಾ ನೋಡುತ್ತಲಿದ್ದರೆ, ದೆಹಲೀ ಕ್ರಿಕೆಟ್ ಸಂಕಷ್ಟದಲ್ಲಿರುವುದಂತೂ ಖಚಿತ. ಹಾಗೆ ನೋಡಿದರೆ ದೆಹಲೀ ಕ್ರಿಕೆಟ್ ಬಹುದಿನಗಳಿಂದ ಸಮಸ್ಯೆಯಲ್ಲಿದೆ. ಏನು ಅಂಥಾ ಸಮಸ್ಯೆ? - ಮಾಮೂಲೇ - ರಾಜಕೀಯ, ಭ್ರಷ್ಟಾಚಾರ ಮತ್ತು ತಂಡದ ಕಳಪೆ ನಿರ್ವಹಣೆ. ಇವೆಲ್ಲಾ ದೆಹಲೀ ರಣಜಿ ತಂಡದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.


ಹೋದ ವರ್ಷದ ರಣಜಿ ಪಂದ್ಯಾವಳಿಯನ್ನು ದೆಹಲೀ ತಂಡ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಅದೇ ತಂಡ ನಾಕೌಟ್ ಸುತ್ತಿಗೂ ಕೂಡ ಅರ್ಹತೆ ಗಳಿಸಿಕೊಳ್ಳಲಾಗದೆ, ಅತ್ಯಂತ ಹೀನಾಯ ಮತ್ತು ಅವಮಾನಕಾರಿ ಸೋಲು ಕಂಡಿತು. ಹೋಗಲೀ ಸರಿಯಾದ ಆಟಗಾರರರಿಲ್ಲವೇ ಅಂದರೆ, ಅದೂ ಇದೆ. ಭಾರತ ಕಂಡ ಅತ್ಯಂತ ಸ್ಫೋಠಕ ಓಪನರ್ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇವರಲ್ಲದೆ ಭಾರತ ಅಂತರಾಷ್ಟ್ರೀಯ ತಂಡದಲ್ಲಿ ಪ್ರಜ್ವಲವಾಗಿ ಬೆಳಗುತ್ತಿರುವ ಮತ್ತೊಬ್ಬ ಸ್ಫೋಠಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಮತ್ತು ಅತ್ಯುತ್ತಮ ಬೌಲರ್ ಈಶಾಂತ್ ಶರ್ಮರಲ್ಲದೆ ಭಾರತವನ್ನು ಬಹುದಿನಗಳ ಕಾಲ ಪ್ರತಿನಿಧಿಸಿದ ಆಶಿಷ್ ನೆಹ್ರಾ ಇದ್ದಾರೆ. ಹೀಗೆ ದೆಹಲೀ ತಂಡದಲ್ಲಿ ಅತಿ ಹೆಚ್ಚು ನಾಲ್ಕು ಅಂತರಾಷ್ಟ್ರೀಯ ಆಟಗಾರರರಿದ್ದಾರೆ. ಆದರೂ ಸೋತರು ಯಾಕೆ? ಈಗ ಅದೇ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ನಾಯಕ ವೀರೇಂದ್ರ ಸೆಹ್ವಾಗ್ ಅದಕ್ಕೆ ಉತ್ತರವೀಯುವ ಮತ್ತು ಅದನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದಾರೆ ಅಂತಲೇ ಹೇಳಬಹುದು.

ಅಸಲಿಗೆ ಸೆಹ್ವಾಗ್ ಹೇಳಿರುವುದಾದರೂ ಏನು? ದೆಹಲೀ ಕ್ರಿಕೆಟ್ನಲ್ಲಿ ನಡೆಯುತ್ತಿರುವ ಅಪಾರ ಭ್ರಷ್ಟಾಚಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಲ್ಲಿ ತಂಡದ ಮ್ಯಾನೇಜರರು ಮತ್ತು ಆಡಳಿತದ ಉಸ್ತುವಾರಿ ಹೊತ್ತುಕೊಂಡಿರುವವರ ಅತೀವ ಹಸ್ತಕ್ಷೇಪವನ್ನು ಅವರು ಬಯಲಿಗೆಳೆದಿದ್ದಾರೆ. ರಣಜಿಗಿಂತಲೂ ಹೆಚ್ಚಾಗಿ ಅಮಡರ್ 16 ಮತ್ತು ಅಂಡರ್ 19 ತಂಡಗಳ ಆಯ್ಕೆ ಅಪಾರ ಪ್ರಮಾಣದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆಯುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪ್ರತಿ ಬಾರಿ ಒಂದಿಲ್ಲೊಂದು ಕಾರಣ ನೀಡಿ ಎರಡು ಮೂರು ಅಟಗಾರರನ್ನು ಹೀಗೆ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲದಂತಾಗಿದೆ. ಯಾರು ದೊಡ್ಡವರ ಬಳಿ ರೆಕಮೆಂಡೇಷನ್ ತರುತ್ತಾರೋ ಅಥವ
ಯಾರ ಬಳಿ ಹೆಚ್ಚು ದುಡ್ಡಿದಡಯೋ ಅವರು ಸರಾಗವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದವರನೇಕರು ತಂಡದಲ್ಲಿ ಸ್ಥಾನ ಪಡೆಯುವುದೇ ಇಲ್ಲ. ಈ ಎಲ್ಲ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸದಿದ್ದರೆ, ತಾವು ದೆಹಲೀ ತಂಡವನ್ನು ತ್ಯಜಿಸಿ ಹರಿಯಾಣ ತಂಡದ ಪರ ಆಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದು ಸದ್ಯ ದೆಹಲೀ ಅಷ್ಟೆ ಅಲ್ಲದೆ ರಾಷ್ಟ್ರದ ಕ್ರಿಕೆಟ್ ರಂಗದಲ್ಲೇ ಹೊಸದೊಂದು ಸಂಚಲನ ಮೂಡಿಸಿದೆ. ಭ್ರಷ್ಟ ಆಡಳಿತದ ವಿರುದ್ಧ ದಂಗೆಯೆದ್ದಿರುವ ಸೆಹ್ವಾಗ್ರ ಕ್ರಮವನ್ನು ಯಾರೂ ಕೂಡ ಸದ್ಯ ಬಹಿರಂಗವಾಗಿ ಸ್ವಾಗತಿಸುತ್ತಿಲ್ಲವಾದರೂ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಅನೇಕರು ಸೆಹ್ವಾಗ್ರನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ.

ವೀರೇಂದ್ರ ಸೆಹ್ವಾಗ್ ದೆಹಲೀ ಕ್ರಿಕೆಟ್ಗೆ ಬಹುದಿನಗಳ ನಂತರ ಸಿಕ್ಕ ಅತ್ಯಂತ ಯಶಸ್ವಿ ಸ್ಟಾರ್ ಆಟಗಾರ. ಈಗ ಸೆಹ್ವಾಗ್ರನ್ನು ಬಿಟ್ಟುಕೊಡುವುದು ದೆಹಲೀ ಕ್ರಿಕೆಟ್ಗೆ ಅತ್ಯಂತ ದುಬಾರಿಯೆನಿಸಲಿದೆ. ಬಹು ಅಂತರಾಷ್ಟ್ರೀಯ ಅಸೈನ್ಮೆಂಟುಗಳು ಇರುವ ಕಾರಣ ಸೆಹ್ವಗ್ ಅಷ್ಟಾಗಿ ರಣಜಿ ಕ್ರಿಕೆಟ್ ಆಡದೇ ಇರಬಹುದು. ಆದರೆ ಸೆಹ್ವಾಗ್ ದೆಹಲೀ ತಂಡದ ಹಿಂದಿನ ಮುಖ್ಯ ಇನ್ಸ್ಪಿರೇಷನ್. ಸೆಹ್ವಗ್ ಇಲ್ಲದ ದೆಹಲೀ ತಂಡ ಅತ್ಯಮತ ನೀರಸವೂ, ಕಳಪೆಯೂ ಆಗುತ್ತದೆ. ಇದಲ್ಲದೆ ತಂಡದ ಇತರೆ ಅಂತರಾಷ್ಟ್ರೀಯ ಆಟಗಾರರಾದ ಆಶಿಷ್ ನೆಹ್ರಾ, ಇಶಾಂತ್ ಶರ್ಮ ಮತ್ತು ಗೌತಮ್ ಗಂಭೀರ್ ಅವರೆಲ್ಲರೂ ತಾವು ಸೆಹ್ವಾಗ್ನ ಹಿಂದೆ ಇರುವುದಾಗಿ, ಆತನ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿಯೂ ಘೋಷಿಸಿದ್ದಾರೆ. ಇದಲ್ಲದೆ ಒಂದೊಮ್ಮೆ ಸೆಹ್ವಾಗ್ ದೆಹಲೀ ತಂಡ ಬಿಟ್ಟು, ಹರ್ಯಾಣ ತಂಡವನ್ನು ಆಶ್ರಯಿಸಲು ನಿಶ್ಚಯಿಸಿದರೆ ತಾವೂ ಕೂಡ ಸೆಹ್ವಾಗ್ನನ್ನು ಹಿಂಬಾಲಿಸುವುದಾಗಿ ಘೋಷಿಸಿದ್ದಾರೆ. ಸದ್ಯ ದೆಹಲಿ ತಂಡದ ಮೂರು ದಿನಗಳ ತರಬೇತಿ ಶಿಬಿರ ನಡೆಯುತ್ತಿದೆ. ಈ ಶಿಬಿರಕ್ಕೆ 15 ಆಟಗಾರರಲ್ಲಿ 9 ಮಂದಿ ಗೈರಾಗಿದ್ದಾರೆ. ಸೆಹ್ವಾಗ್ ಸದ್ಯ ಭುಜದ ಗಾಯಕ್ಕೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲದೆ ಮೇಲೆ ಹೆಸರಿಸಿದ ಯಾವುದೇ ಆಟಗಾರರೂ ಈ ತರಬೇತಿ ಶಿಬಿರಕ್ಕೆ ಹಾಜರಾಗಿಲ್ಲ. ಇದು ಆಟಗಾರರು ಒಗ್ಗಟ್ಟಾಗಿರುವುದು ಮತ್ತು ಅವರ ಧೃಢ ನಿರ್ಧಾರವನ್ನು ತೋರಿಸುತ್ತದೆ. ಇಧೇ ಸಮಯದಲ್ಲಿ ದೆಹಲೀ ಕ್ರಿಕೆಟ್ ಅಸೋಸಿಯೇಷನ್ನ ಉಪಾಧ್ಯಕ್ಷ ಭಾರತದ ಮಾಜೀ ಆಟಗಾರ ಚೇತನ್ ಛೌಹಾಣ್ ಸೆಹ್ವಾಗ್ರೊಂದಿಗೆ ಏಕೀಭವಿಸಿದ್ದಾರೆ. ಖಾಸಗೀ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಸೆಹ್ವಾಗ್ ಅವರು ಮಾಡಿರುವ ಎಲ್ಲ ಆರೋಪಗಳೂ ವಾಸ್ತವವೆಂದೂ ಅವರ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿಯೂ ಹೇಳಿದ್ದಾರೆ. ಸ್ವತಃ ಉಪಾಧ್ಯಕ್ಷರಿಂದ ಬಂದ ಈ ಹೇಳಿಕೆ ಸೆಹ್ವಾಗ್ ಮತ್ತು ಸಂಗಡಿಗರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೆ ದೆಹಲೀ ಕ್ರಿಕೆಟ್ ಆಡಳಿತ ಹೇಗೆ ಪ್ರತಿಕ್ರಿಯಿಸಿದೆ? ಅವರ ಪ್ರಕಾರ ಸೆಹ್ವಾಗ್ ಮಾಡುತ್ತಿರುವುದು ಬರಿಯ ಪ್ರೆಷರ್ ಟ್ಯಾಕ್ಟಿಕ್ಸು ಅಷ್ಟೆ. ಅವರಿಗೆ ಅವರ ಹುಡುಗರಾದ ಮಾನ್ಯಂಕ್ ತೆಹ್ಲಾನ್ ಮತ್ತು ಪ್ರದೀಪ್ ಸಾಂಗ್ವಾನ್ರನ್ನು ಕೂಡಲೇ ತಂಡಕ್ಕೆ ಸೇರಿಸಬೇಕಿದೆ. ಸದ್ಯ ಅದು ಆಗದೇ ಇರುವುದರಿಂದ ಸೆಹ್ವಾಗ್ ಹೀಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇದಲ್ಲದೆ ಅವರು ಮತ್ತೊಂದು ಕಡೆ ದೆಹಲೀ ಕ್ರಿಕೆಟ್ ಅನ್ನುವುದು ಒಂದು ಕುಟುಂಬವಿದ್ದಂತೆ, ಏನೇ ಸಮಸ್ಯೆ ಬಂದರೂ ನಾವು ನಾವೇ ಬಗೆಹರಿಸಿಕೊಳ್ಲಬೇಕೇ ಹೊರತು ಅದನ್ನು ನೆರೆಹೊರೆಯವರಿಗೆ ತಗುಲಿಸಬಾರದು ಎಂದು ಹೇಳುತ್ತಿದ್ದಾರೆ. ಇದು ಯಾವುದೇ ಆಡಳಿತ ವ್ಯವಸ್ಥೆಯ ರೆಡಿಮೆಡ್ ಹೇಳಿಕೆ. ಇಲ್ಲ ದೆಹಲಿ ಕ್ರಿಕೆಟ್ ಆಡಳಿತ ಮಾಡುತ್ತಿರುವುದೂ ಅದೇ. ಅಸಲಿಗೆ ಅಲ್ಲಿ ನಡೆಯುತ್ತಿರುವುದು ಶುದ್ಧ ರಾಜಕೀಯ ಮತ್ತು ಸಣ್ಣತನ. ಆಡಳಿತದ ವಿರುದ್ಧ ಬಂಡೆದ್ದ ಆಟಗಾರರಿಗೆ ಉಪಾಧ್ಯಕ್ಷರ ಬೆಂಬಲ! ಅಲ್ಲಿಗೆ ಅಧ್ಯಕ್ಷರ ಪೀಠಕ್ಕೆ ಕುತ್ತು ಬಂತು ಅಂತಲೇ ಅರ್ಥ.
ದೆಹಲಿಯ ಕ್ರಿಕೆಟ್ ಅನ್ನು ಕಳೆದ ಸರಿಸುಮಾರು ಒಂದು ದಶಕದಿಂದ ಆಳುತ್ತಿರುವುದು ಸದ್ಯ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ. ಅವರು ಕಳೆದ ಸುಮಾರು ಒಂದು ದಶಕದಿಂದ ದೆಹಲೀ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದಾರೆ. ಸಮಸ್ಯೆಯಿರುವುದು ಇವರದ್ದಾ, ಇಲ್ಲ ಅವರು ಬ್ಯುಸಿಯಾಗಿದ್ದಾಗ ಅವರ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವವರದ್ದಾ? ಅದು ಇನ್ನೂ ತಿಳಿಯಬೇಕಿದೆ. ಸದ್ಯ ಸೆಹ್ವಗ್ ಮತ್ತು ಸಂಗಡಿಗ ಆಟಗಾರರು ತಮ್ಮ ನಿರ್ಧಾರವನ್ನು ಕೆಲ ದಿನಗಳ ಕಾಲ ತಡೆಹಿಡಿದಿದ್ದಾರೆ. ಸದ್ಯ ಅರುಣ್ ಜೇಟ್ಲಿ ಬಿಜೆಪಿಯ ಚಿಂತನ್ ಬೈಠಕ್ನಲ್ಲಿ ಪಾಲ್ಗೊಳ್ಲಲು ಶಿಮ್ಲಾಗೆ ತೆರಳಿದ್ದಾರೆ. ಅವರು ಹಿತುರಿಗಿದ ತಕ್ಷಣವೇ ಸೆಹ್ವಾಗ್ ಮತ್ತು ಅವರ ನಡುವಿನ ಭೇಟಿಯನ್ನು ಆಯೋಜಿಸಲಾಗಿದೆ. ಅರುಣ್ ಜೇಟ್ಲಿ ಆಗಲೇ ಸೆಹ್ವಾಗ್ರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದಾರೆಂಬ ಸುದ್ದಿಗಳಿವೆ. ಬಹುಷಃ ಆಗಸ್ಟ್ 22 ರಂದು ನಡೆಯಲಿರುವ ಆ ಭೇಟಿಯ ನಂತರ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಸೆಹ್ವಾಗ್ ಘೋಷಿಸಿದ್ದಾರೆ.

ಆಟಗಾರರಿಲ್ಲದೇ ಆಡಳಿತಕ್ಕೆ, ಆಡಳಿತ ನಡೆಸಲು ಯಾವ ಕ್ರಿಕೆಟ್ಟೂ ಇರುವುದಿಲ್ಲ. ಅದನ್ನು ಮನಗಂಡು ದೆಹಲೀ ಕ್ರಿಕೆಟ್ ಆಡಳಿತ ಆಟಗಾರರ ಬೇಡಿಕೆಗಳಿಗೆ ತಲೆಬಾಗುತ್ತದಾ? ಊಹಿಸುವುದು ಕಷ್ಟ. ಈ ಆಡಳಿತ ವ್ಯವಸ್ಥೆಯಿದೆಯಲ್ಲ ಅದೊಮಥರಾ ಸೊಕ್ಕಿದ ಆನೆ ಇದ್ದ ಹಗೆ ಅದನ್ನು ಪಳಗಿಸುವುದು ತೀರ ಕಷ್ಟ. ಭಾರತ ಕ್ರೀಡಾರಂಗದಲ್ಲಿ ಈ ಹಿಮದೆ ಇಂಥ ಹಲವಾರು ಪ್ರಯತ್ನಗಳನ್ನು ಮಾಡಿದ ಅತಿರಥ ಮಹಾರಥರಿದ್ದಾರೆ - ಕಪಿಲ್, ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಪ್ರಕಾಶ ಪಡುಕೋಣೆ, ಮೀರ್ ರಂಜನ್ ನೇಗಿ..., ಎಲ್ಲರೂ ಕಡೆಗೆ ಸೋಲೊಪ್ಪಿಕೊಂಡವರೇ. ಈ ಬಾರಿ ಸೆಹ್ವಾಗ್ ಗೆಲ್ಲುತ್ತಾರಾ? ಕಾದು ನೋಡಬೇಕಿದೆ.

Proudly powered by Blogger
Theme: Esquire by Matthew Buchanan.
Converted by LiteThemes.com.