ಲಿಟ್ಲ್ ಮಾಸ್ಟರ್ಗೆ 60!

ಮೊದಲಿಗೆ `ಲಿಟ್ಲ್ ಮಾಸ್ಟರ್' ಎಂಬ ಬಿರುದು ಸಂದಾಯವಾಗಿದ್ದು ಗವಾಸ್ಕರ್ಗೆ, ಅವರ ನಿವೃತ್ತಿಯ ನಂತರವೇ ಸಚಿನ್ ಆ ನಾಮಾಂಕಿತರಾದದ್ದು. ಆದ್ದರಿಂದ ರಿಯಲ್ `ಲಿಟ್ಲ್ ಮಾಸ್ಟರ್' ಅವರೇ - ಕ್ರಿಕೆಟ್ ಜಗತ್ತಿನ
ಜೀವಂತ ದಂತಕಥೆ ಸುನೀಲ್ ಮನೋಹರ್ ಗವಾಸ್ಕರ್ - ನಲ್ಮೆಯ `ಸನ್ನಿ!' ಹೌದು ಕ್ರಿಕೆಟ್ ಜಗತ್ತಿನ ಜೀವಂತ ದಂತಕಥೆ, ಜೆಂಟಲ್ಮ್ಯಾನ್ ಗವಾಸ್ಕರ್ ಇತ್ತೀಚೆಗಷ್ಟೇ ತಮ್ಮ ಅರವತ್ತನೇ ಹುಟ್ಟುಹಬ್ಬವನ್ನು ಸರಳವಾಗಿ ಪುಟ್ಪರ್ತಿಯಲ್ಲಿ ಆಚರಿಸಿಕೊಂಡಿದ್ದಾರೆ. ಅವರು ಕ್ರಿಕೆಟ್ಟಿನಲ್ಲಂತೆ ತಮ್ಮ ಜೀವನದಲ್ಲೂ ಸೆಂಚುರಿ ಬಾರಿಸಲೆಂಬುದು ನಮ್ಮೆಲ್ಲರ ಆಶಯ. ಆ ಉತ್ಸಾಹ ಜೀವನ್ಮುಖತೆ ಮತ್ತು ಆರೋಗ್ಯ ಅವರಲ್ಲಿ ಉಕ್ಕುಕ್ಕಿ ತುಳುಕುತ್ತಿರುವುದು ನಮ್ಮನ್ನು ಆಶಾಜನಕರನ್ನಾಗಿಸಿದೆ.

ಗವಾಸ್ಕರ್ - ಬಹುಶಃ ಭಾರತ ಕಂಡ ಮೊದಲ ಸೂಪರ್ ಸ್ಟಾರ್ ಕ್ರಿಕೆಟಿಗ ಇವರೇ ಇರಬೇಕು. ಅವರು ಆ ಪಟ್ಟಕ್ಕೆ ಅರ್ಹರಾಗಿದ್ದರು, ಹಾಗಿತ್ತು ಅವರ ಆಟ. ಗವಾಸ್ಕರ್ ಜನಿಸಿದ್ದು ಮುಂಬೈನಲ್ಲಿ. ಮೊದಲಿಂದಲೂ ಅವರಿಗೆ ಕ್ರಿಕೆಟ್ ಮೇಲೆ ಎಲ್ಲಿಲ್ಲದ ಆಸಕ್ತಿ. ಅವರ ಮೊದಲ ಗುರು ಅವರ ತಾಯಿ. ಇದನ್ನು ಅವರ ಆತ್ಮಚರಿತ್ರೆಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. ಹೀಗೆ ಕ್ರಿಕೆಟ್ ಆಡುವಾಗ ಅವರ ಅಮ್ಮನ ಮೂಗಿಗೆ ಅವರು ಮಾಡಿದ ಗಾಯ ಇನ್ನೂ ಇದೆ. ಶಾಲಾ ಕಾಲದಲ್ಲೇ ಭರತೀಯ ಶಾಲಾ ಬಾಲಕರ ಕ್ರಿಕೆಟ್ ತಂಡದ ನಾಯಕರಾಗುತ್ತಾರೆ ಗವಾಸ್ಕರ್! ಲಂಡನ್ ಸ್ಕೂಲ್ ಬಾಯ್ಸ್ ಮೇಲೆ ಅಮೋಘ ವಿಜಯ ದಾಖಲಿಸುತ್ತಾರೆ. ನಂತರ ಪ್ರಖ್ಯಾತ ಸೇಂಟ್ ಗ್ಜೇವಿಯರ್ ಕಾಲೇಜಿನ ಮೆಟ್ಟಿಲತ್ತಿದ ನಂತರ ಕಾಲೇಜು ತಂಡದಲ್ಲಿ ಸ್ಥಾನ ಪಡೆದು ಅವರ ಪ್ರತಿಭೆಯನ್ನು ಪ್ರದರ್ಶಿಸಿದರು. ನಂತರ ಮುಂಬೈ ವಿಶ್ವವಿದ್ಯಾಲಯ, ದಾದರ್ ಯೂನಿಯನ್ ತಂಡಗಳ
ಪರ ಆಡಿ ಅವರ ಆಟವನ್ನು ಹುರಿಗೊಳಿಸಿಕೊಂಡರು. ಆಗಿನ ಕ್ರಿಕೆಟ್ ನಿಪುಣರೆನಿಸಿಕೊಂಡಿದ್ದವರ ಗರಡಿಯಲ್ಲಿ ಪಳಗಿದ ಗವಾಸ್ಕಾರ್ಗೆ ಮುಂದೆ ಇದು ತನ್ನ ಕೆರಿಯರ್ನಲ್ಲಿ ಎಷ್ಟೋ ಸಹಾಯಕ್ಕೆ ಬಂತು. ಅಂತೂ-ಇಂತೂ ಬಹುನಿರೀಕ್ಷಿತವಾಗಿದ್ದ ಅವರ
ಅಂತರಾಷ್ಟ್ರೀಯ ಕ್ರಿಕೆಟ್ ಅರಂಗ್ರೇಟಂ ನಡೆದದ್ದು 1970-71 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ. ಅಂದು ಕ್ರಿಕೆಟ್ನಲ್ಲಿ ವಿಂಡೀಸ್ ಪ್ರಶ್ನಾತೀತರಾಗಿದ್ದರು. ಅವರ ಬೌಲಿಂಗ್ ದಾಳಿಗೆ ದೈತ್ಯರೇ ತತ್ತರಿಸುತ್ತಿದ್ದರು. ಇನ್ನು ಗವಾಸ್ಕರ್ಗೆ ಆಗ 22-23 ವರ್ಷ. ಹುಡುಗನಿಗೆ ಭಯ ಎಂಬುದೇ ಗೊತ್ತಿಲ್ಲ, ಸೋಲನ್ನು ಹೇಟ್ ಮಾಡುವ, ಅನಿಸಿದ್ದನ್ನು ಸಾಧಿಸುವ ಛಲವಂತ. ಆ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಹುಡುಗ ಕುದುರಿಕೊಳ್ಳುವ ಹೊತ್ತಿಗೇ ಡಕ್ ಔಟು! ಎಲ್ಲರೂ ನಗಾಡಿದರು. ಗವಾಸ್ಕರ್ ಎದೆಗುಂದಲಿಲ್ಲ. ಆ ಟೆಸ್ಟ್ನ ನಂತರದ ಎರು ಇನ್ನಿಂಗ್ಸ್ಗಳಲ್ಲೂ ಸೆಂಚುರಿ ಬಾರಿಸಿ ಪಂದ್ಯ ಭಾರತದ ಪಾಲಾಗುವಂತೆ ನೋಡಿಕೊಂಡ. ಗವಾಸ್ಕರ್ನ ಅಪ್ರತಿಮ ಆಟದಿಂದ ಭಾರತ ಮೊದಲ ಬಾರಿಗೆ ವಿಂಡೀಸ್ ನೆಲದಲ್ಲಿ ಟೆಸ್ಟ್ ಸರಣಿ ವಿಜಯ ದಾಖಲಿಸಿತು. ಗವಾಸ್ಕರ್ ಬೆಳಗಾಗುವುದರೊಳಗೆ ಮನೆಮಾತಾಗಿಬಿಟ್ಟ. ಅದೇ ವರ್ಷದ ಇಂಗ್ಲೆಂಡ್ ವಿರುದ್ಧದ ಮತ್ತೊಂದು ಐತಿಹಾಸಿಕ ಸರಣಿ ವಿಜಯದ ನಂತರ ಗವಾಸ್ಕರ್ ಮೇಲೆ ಒತ್ತಡ ಹೆಚ್ಚಾಗಿ ಅದನ್ನವರು ಸರಿದೂಗಿಸಲು ವಿಫಲರಾದರು. ನಂತರ ತಮ್ಮ ಕೆರಿಯರ್ನಲ್ಲಿ ಅನೇಕ
ಏಳು-ಬೀಳುಗಳನ್ನು ಕಂಡರೂ ಒಟ್ಟಾರೆ ಅವರ 17 ವರ್ಷಗಳ ಕ್ರಿಕೆಟಿಂಗ್ ಕೆರಿಯರ್ ಗ್ರಾಫ್ ಅತ್ಯಮೋಘ. ಅವರು ಮಾಡದ ದಾಖಲೆಗಳಿಲ್ಲ. ಟೆಸ್ಟ್ ಇತಿಹಾಸದಲ್ಲಿ 10,000 ರನ್ ಶೇಖರಿಸಿದ ವಿಶ್ವದ ಮೊದಲ ಆಟಗಾರ. ಇದಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು - 34 ಸೆಂಚುರಿಗಳನ್ನು ದಾಖಲಿಸಿದ ಮಹಾವೀರ. ಒಂದೇ ಎರಡೇ, ಅನೇಕ ದಾಖಲೆಗಳು. ತಲೆಗೆ ಹೆಲ್ಮೆಟ್ಟೇ ಇಲ್ಲದ ಆ ಕಾಲದಲ್ಲಿ ಇದೆಲ್ಲವೂ ದುಸ್ಸಾಧ್ಯವೆನಿಸಿತ್ತೇ ಸರಿ..ಆದರೆ ಅದೆಲ್ಲವೂ ಗವಾಸ್ಕರ್ಗೆ ಅನ್ವಯಿಸುತ್ತಿರಲಿಲ್ಲ.

ಗವಾಸ್ಕರ್ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲೊಬ್ಬ. ಅನೇಕ ಬಾರಿ ಆತ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡದ್ದಿದೆ. ಆತನ ನಾಯಕತ್ವದಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿತ್ತು. ಗವಾಸ್ಕರ್ ತನ್ನ ಟೀಮಿನಲ್ಲಿ ಗೆಲ್ಲುವ ಆರದ ಕಿಚ್ಚನ್ನು ಹಚ್ಚುತ್ತಿದ್ದ. ಆತ ಸೋಲನ್ನು ದ್ವೇಷಿಸುತ್ತಿದ್ದ. ಆತ ಅತ್ಯದ್ಭುತ ಮೋಟಿವೇಟರ್. ಆತ ಹಚ್ಚಿಸಿದ ಕಿಚ್ಚಿನಿಂದ ಆವೃತರಾದ ಆಟಗಾರರು ಕ್ರೀಡಾಂಗಣದಲ್ಲಿ ಹುಲಿಗಳಂತೆ ಹೋರಾಡುತ್ತಿದ್ದರು. ಗೆಲುವು ಅ
ಲವಟಾಯಿತು. ತಂಡ ಮೈಮರೆಯಿತು, ಗೆಲುವು ಮರೀಚಿಕೆಯಾಯಿತು, ಬಿಸಿಸಿಐ ಛಾಟಿ ಬೀಸಿತು. ಅಷ್ಟರಲ್ಲಿ ಭಾರತ ಕ್ರಿಕೆಟ್ ರಂಗದಲ್ಲಿ ಬಿರುಗಾಳಿಯೆಬ್ಬಿಸಿದ್ದನೊಬ್ಬ 23 ವರ್ಷದ ಪೋರ. ಆತನೇ ಕಪಿಲ್ ದೇವ್! ಬಿಸಿಸಿಐ ಗವಾಸ್ಕರ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಗವಾಸ್ಕರ್ಗಿಂತಲೂ ಬಹುವರ್ಷ ಜೂನಿಯರ್ ಆಗಿದ್ದ ಕಪಿಲ್ರನ್ನು ಪದವಿಗೆ ತಂದಿತು. ಅಲ್ಲಿಂದ ಶುರುವಾಯಿತು ಮ್ಯೂಸಿಕಲ್ ಛೇರ್! ಕಪಿಲ್ನಡಿಯಲ್ಲಿ ಸೋತರೆ, ಮುಂದಿನ
ಪಂದ್ಯಕ್ಕೆ ಗವಾಸ್ಕರ್ ನಾಯಕ, ಗವಾಸ್ಕರ್ನಡಿಯಲಿ ಸೋತರೆ ಕಪಿಲ್ ನಾಯಕ! ಕಪಿಲ್ ದೇವ್ ಇದನ್ನು ನೆನಪಿಸಿಕೊಳ್ಳುತ್ತಾ - ಆಗ ತಂಡದ ಆಯ್ಕೆದಾರರೇ ನಮ್ಮ ಆಟವನ್ನೂ ಆಡುತ್ತಿದ್ದರು, ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಗವಾಸ್ಕರ್ ಮತ್ತು ಕಪಿಲ್ರ ಸ್ನೇಹಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಂಡವಾದರೂ, ಅವರೆಂದೂ ಅದನ್ನು ಕೈತಪ್ಪುವ ಹಂತದವರೆಗೂ ಕೊಮಡಯ್ಯಲೇ ಇಲ್ಲ. ಮೀಡಿಯಾಗಂತೂ ಆಗ ಇದು ಸಮೃದ್ಧ ಸುದ್ದಿಮೂಲವಾಯಿತಷ್ಟೆ. ಹೀಗಿದ್ದಾಗಲೇ 1983ರ ವಿಶ್ವಕಪ್ ಬಂತು. ಗವಾಸ್ಕರ್ ಫರ್ಮನಲ್ಲಿರಲಿಲ್ಲ. ಕಪಿಲ್ ತಂಡದ ನಾಯಕರಾದರು. ಮುಂದಿನದೆಲ್ಲವೂ ಇತಿಹಾಸ. ಭಾರತ ತಂಡ ಎಲ್ಲರ ನಿರೀಕ್ಷೆಗಳನ್ನೂ ಮೀರಿ ವಿಶ್ವಕಪ್ನ ಕಿರೀಟವನ್ನು ಮುಡಿಗೇರಿಸಿಕೊಂಡು, ಭಾರತೀಯರನ್ನೆಲ್ಲರನು ಆನಂದಾಶ್ಚರ್ಯಗಳಲಿ ಮುಳುಗೇಳಿಸಿತು. ಕಪಿಲ್ ದಂತಕಥೆಯಾದರು, ಕಪಿಲ್ನ ನೂತನ ಪ್ರಭಾವಳಿಯಲ್ಲಿ ಗವಾಸ್ಕರ್ ಮಂಕಾದರೆ, ಎಂದು ಯೋಚಿಸುವಷ್ಟರಲ್ಲಿ ಗವಾಸ್ಕರ್ ಮರಳಿ ಪುಟಿದೆದ್ದರು. ತಾನೇನೆಂದು ಮತ್ತೊಮ್ಮೆ ತೊರಿಸಿಕೊಟ್ಟರು. ನಾಲ್ಕನೇ ಇನ್ನಿಂಗ್ಸ್ನಲ್ಲಿ ನಿಂತು ಘಂಟೆಗಟ್ಟಲೇ ಆಡಿ ಕೈತಪ್ಪಿಹೋಗಬಹುದಾಗಿದ್ದ ಪಂದ್ಯವನ್ನು ಡ್ರಾ ಮಾಡಿಸಲು ಹೆಣಗಿದವರು ಗವಸ್ಕರ್. ಅವರು ಪಟ್ಟಾಗಿ ನಿಂತರೆಂದರೆ ಅವರ ವಿಕೆಟ್ ಅನ್ನು ಉರುಳಿಸುವುದು ಎಂತಹ ಅರಿಭಯಂಕರ ಬೌಲರ್ಗಳಿಗೂ ದುಸ್ಸಾಧ್ಯವಾಗಿತ್ತು. 75ರ ವಿಶ್ವಕಪ್ನ ಇಂಗ್ಲೇಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ನಿಂದ ಕಡೆಯ 60ನೇ ಓವರ್ವರೆಗೂ ಕ್ರೀಸ್ನಲ್ಲುಳಿದು ಕೇವಲ 36 ರನ್ ಮಾಡಿದ್ದರು. ಬೌಲರ್ಗಳೆಲ್ಲಾ ಅಂದು ಮೈಪರಚಿಕೊಂಡಿದ್ದರು. ಈ ದಾಖಲೆ ಇಂದಿಗೂ ಗವಾಸ್ಕರ್ದೇ ಸ್ವಂತ. ಇದನ್ನು ಇನ್ನೂ ಯಾರೂ ಮುರಿಯಲಾಗಿಲ್ಲ. ಇದೇ ಗವಾಸ್ಕರ್ 1987ರ ವಿಶ್ವಕಪ್ನ ನಿರ್ಣಾಯಕ ಪಂದ್ಯವೊಂದರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಶರವೇಗದಲ್ಲಿ ಶತಕ ಸಿಡಿಸಿ ಭಾರತಕ್ಕೆ ವಿಜಯ ಮಾಲೆಯನ್ನು ತೊಡಗಿಸಿದರು. ಅದು ಗವಾಸ್ಕರ್ರ ಏಕದಿನ ಪಂದ್ಯದ ಏಕೈಕ ಶತಕ.
ಮುಂದೆ 1987ರಲ್ಲಿ 17 ವರ್ಷಗಳ ತೃಪ್ತಿಕರ ವೃತ್ತಿಜೀವನದ ನಂತರ ಗವಾಸ್ಕರ್ ನಿವೃತ್ತರಾದರು. ಗವಾ
ಸ್ಕರ್ ಒಬ್ಬ ಕ್ರಿಕೆಟಿಂಗ್ ಲೆಜೆಂಡ್. ಆದರೂ ಅವರನ್ನು ಅನೇಕ ವಿವಾದಗಳು ಬೆನ್ನತ್ತಿ ಕಾಡಿದವು. ಗವಾಸ್ಕರ್ ಮೊದಲಿಂದಲೂ ನೇರ, ನಿಷ್ಠುರಿ. ಅನ್ಯಾಯ ಸಹಿಸಿ ಮೂಕನಾಗಿರುವ ಜಾಯಮಾನದವರಲ್ಲ ಅವರು. ಅವರ ಜೊತೆ ಅವರ ಕೋಪವೂ ದಂತಕಥೆಯ ಪ್ರಮಾಣಗಳನ್ನು ಪಡೆದುಕೊಂಡಿದೆ. ಅವರಿಗೆ ಸದಾ ಮೂಗಿನ ಮೇಲೆಯೇ ಕೋಪ - ದೂರ್ವಾಸ ಮುನಿ. ಅದರ ಒಂದು ಸ್ಯಾಂಪಲ್ಲು ಇಲ್ಲಿದೆ ನೊಡಿ - 1980ರ ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಫಾರ್ಮ್ ಕಳಕೊಂಡಿದ್ದರು. ಆದರೆ ಮೇಲ್ಬೌರ್ನ್ ಟೆಸ್ಟ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾಗ ಡೆನ್ನಿಸ್ ಲಿಲಿರವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಎಂದು ಅಂಪೈರ್ ತಪ್ಪಾಗಿ ತೀರ್ಪಿತ್ತರು. ಇದನ್ನು ಗವಾಸ್ಕರ್ ಪ್ರತಿಭಟಿಸಿದರು. ಲಿಲಿಯೂ ಸೇರಿದಂತೆ ಅನೇಕ ಆಸ್ಟ್ರೇಲಿಯನ್ ಆಟಗಾರರು ಗವಾಸ್ಕರ್ರನ್ನು ಕ್ರೀಡಾಂಗಣದಲ್ಲೇ ಹೀಯಾಳಿಸಿದರು. ಕುಪಿತಗೊಂಡ ಗವಾಸ್ಕರ್ ಸ್ಫೋಠಗೊಂಡರು. ಜೊತೆ ಆಟಗಾರ ಚೇತನ್ ಛೌಹಾಣ್ರನ್ನು ಎಳೆದುಕೊಂಡು ಪೆವಿಲಿಯನ್ನತ್ತ ಹೊರಳಿದರು. ಮ್ಯಾಚನ್ನು ಬಿಟ್ಟುಕೊಡಲು ಅವರು ನಿರ್ಧರಿಸಿದ್ದರು. ಆದರೆ ತಂಡದ ಮ್ಯಾನೇಜರ್ರ ಸಮಯೋಚಿತ ವರ್ತನೆಯಿಂದ ಇದು ತಪ್ಪಿತು. ದಟ್ ಈಸ್ ಗವಾಸ್ಕರ್! ತನಗನಿಸದ್ದನ್ನು ಮಾಡಲು ಹಿಂಜರಿಯದವ, ಆದರೆ ಅತ್ಯಂತ ಸಭ್ಯ, ಜೆಂಟಲ್ಮ್ಯಾನ್. ವೃತ್ತಿಪರತೆ ಅವರ ರಕ್ತಗಂಟಿದ ಗುಣ. ಅವರು ತಮ್ಮ ಕಡೆಯ ಪಂದ್ಯದವರೆಗೂ ಅಷ್ಟೆ, ಅವರು ಫೀಲ್ಡಿಗಿಳಿಯುವ ಮೊದಲು, 15 ನಿಮಿಷಗಳು ತಮ್ಮ ಮತಿಯೆನ್ನೆಲ್ಲವನೂ ಆಟದ ಮೇಲೆ ಕೇಂದ್ರೀಕರಿಸುತ್ತಿದ್ದರು. ಆಗ ಅವರನ್ನು ಯಾರೂ ಸಹ ಮಾತನಾಡಿಸುತ್ತಿರಲಿಲ್ಲ. ವೃತ್ತಿಪರತೆಯೆಂದರೆ ಅದು. ಅವರ ಬ್ಯಾಟಿಂಗ್ ಎಮದಿಗಾದರೂ ನೋಡಲೇ ಒಂದು ಸೊಗಸು, ಅದು ಕಲಾತ್ಮಕವಾಗಿಯೂ, ಕುಶಲವಾಗಿಯೂ ಇರುತ್ತಿತ್ತು. ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಮತ್ತು ಅವರ ಓಪನರ್ಸ್ ಜೋಡಿಯದೂ ಒಂದು ದಂತಕಥೆಯೇ. ಗುಂಡಪ್ಪನವರ ಕಾವ್ಯಾತ್ಮಕ ಬ್ಯಾಟಿಂಗ್ ಮತ್ತು ಗವಾಸ್ಕರ್ರ ಕುಶಲಾತ್ಮಕ ಬ್ಯಾಟಿಂಗ್ ಜೊತೆಯಾದರೆ ಅಭಿಮಾನಿಗಳಿಗದು ರಸದೌತಣವೇ ಸರಿ. ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥ್ರ ಸ್ನೇಹ
ವೂ ಅಷ್ಟೆ ಮಧುರವಾದದ್ದು. ಅವರು ಅದನ್ನು ಸಂಬಂಧವಾಗಿಯೂ ಪರಿವರ್ತಿಸಿಕೊಂಡರು. ಗವಾಸ್ಕರ್ ಮದುವೆಯಾಗಿರುವುದು ಗುಂಡಪ್ಪ ತಂಗಿಯನ್ನ. ಗವಾಸ್ಕರ್ ಸ್ನೇಹಕ್ಕೆ ಕೊಟ್ಟ ಬೆಲೆಯದು. ಗವಾಸ್ಕರ್ ಕ್ರಿಕೆಟ್ ಆಟದ ಶ್ರೇಷ್ಟ ಚಿಂತಕರು. ಗವಾಸ್ಕರ್ ನಿವೃತ್ತರಾದ ಮೇಲೂ ಕೂಡ ಕ್ರಿಕೆಟ್ನಿಂದ ದೂರವುಳಿಯಲಿಲ್ಲ. ನಂತರ ಅವರು ಕ್ರಿಕೆಟ್ ವಿಶ್ಲೇಷಕರಾದರು, ಪತ್ರಿಕೆಗಳಿಗೆ ಅಂಕಣಕಾರರಾದರು, ಆತ್ಮಚರಿತ್ರೆ ಬರೆದರು, ಕ್ರಿಕೆಟ್ನ ಕುರಿತಾಗಿ ಅವರು ಅನೇಕ ಪುಸ್ತಕಗಳನ್ನು ಬರೆದರು, ಬರೆಯುತ್ತಿದ್ದಾರೆ, ಟೀವಿ ಕ್ರಾಂತಿಯ ನಂತರ ಕ್ರಿಕೆಟ್ ಪಂದ್ಯಗಳ ಹಿನ್ನಲೆ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಗವಾಸ್ಕರ್ರ ಆತ್ಮಚರಿತ್ರೆ ಸೊಗಸಾಗಿದೆ. ಕ್ರಿಕೆಟ್ನ ಹೊರತಾಗಿಯೂ ಅದೊಂದು ಉತ್ತಮ ಓದು. ಅವರು ಇಷ್ಟೆ ಅಲ್ಲದೆ ವಿಶ್ವದ ಸರ್ವಶ್ರೇಷ್ಠ ಕ್ರಿಕೆಟ್ ಸಂಸ್ಥೆ ಐಸಿಸಿಯ ಕ್ರಿಕೆಟ್ ಅಕಾಡಮಿಯ ಅಧ್ಯಕ್ಷರಾಗಿದ್ದರು. ಕಳೆದ ವರ್ಷದ ಆಸ್ಟ್ರೇಲಿಯಾ ಸರಣಿಯಲ್ಲಿನ ಅನೇಕ ಅಂಪೈರಿಂಗ್ ತಪ್ಪುಗಳನ್ನು ಮುಚ್ಚುಮರೆಯಿಲ್ಲದೇ ಟೀಕಿಸಿದರು. ಐಸಿಸಿ ಸಮಿತಿಯಲ್ಲಿದ್ದುಕೊಂಡು ಅಂಪೈರುಗಳನ್ನು ಹೀಗೆ ಮೀಡಿಯಾದಲ್ಲಿ ಕಮೆಂಟ್ ಮಾಡುವುದು ಸರಿಬರುವುದಿಲ್ಲವೆಂದು ಅನೇಕರು ಅಭಿಪ್ರಾಯವಿತ್ತಾಗ, ಗವಾಸ್ಕರ್ ಆ ಕಮಿಟಿಯ ಸದಸ್ಯತ್ವವನ್ನು ಎಡಗಾಲಲ್ಲಿ ಒದ್ದು ಎದ್ದು ಬಂದರು. ಗವಾಸ್ಕರ್ ಅಂದರೆ ಅದು.
ಇನ್ನು ಸಾಮಾನ್ಯವಾಗಿ ಗವಾಸ್ಕರ್ ವಿರುದ್ಧ ಕೇಳಿ ಬರುವ ಆರೋಪವೆಂದರೆ, ಅವರು ತಮ್ಮ ವಯಕ್ತಿಕ ದಾಖಲೆಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದರೆಂಬುದು. ಸಾಮಾನ್ಯವಾಗಿ ಎಲ್ಲ ದಾಖಲೆ ವೀರರನ್ನೂ ಬೆನ್ನತ್ತುವ ಆರೋಪವೇ ಇದು. ಒಂದೊಮ್ಮೆ ಹಾಗಾಗಿದ್ದರೂ ಅವರ ಪ್ರತಿಭೆಯ ಮುಂದೆ ಇದೆಲ್ಲವೂ ಗೌಣವಾಗುತ್ತದೆ. ಭಾರತದ ಆಟಗಾರರಿಗೆ ವಯಕ್ತಿಕವಾಗಿ ಪ್ರಾಯೋಜಕರನ್ನು ಹುಡುಕಿಕೊಳ್ಳಬೇಕೆಂದು ಹೇಳಿಕೊಟ್ಟವರೇ ಗವಾಸ್ಕರ್. 1983ರ ವಿಮಡೀಸ್ ವಿರುದ್ಧದ ಪಂದ್ಯವೊಂದರಲ್ಲಿ ಬ್ಯಾಟಿಂಗ್ಗೆ ಹೋಗುವ ಮೊದಲು ತಮ್ಮ ಬ್ಯಾಟಿನ ಹಿಂಭಾಗದಲ್ಲಿ ಎಂಆರ್ಎಫ್ ಸ್ಟಿಕ್ಕರಂಟಿಸಿ ಎಲ್ಲರನ್ನೂ ಚಕಿತಗೊಳಿಸಿದರು. ಇದು ಆಟದ ವ್ಯಾಪಾರೀಕರಣ ಎಂದು ಎಲ್ಲರೂ ಟೀಕಿಸಿದರು. ಆದರೆ ಗವಸ್ಕರ್ ಇದಕ್ಕೆಲ್ಲಾ ಎಂದಿಗೂ ತಲೆಕೆಸಿಕೊಂಡವರೇ ಅಲ್ಲ. ಈ ಪರಿಪಾಠ ಇಂದು ಎಷ್ಟು ವ್ಯಾಪಕವಾಗಿದೆಯೆಂದು ಎಲ್ಲರೂ ಬಲ್ಲರು. ಸಚಿನ್ ಬ್ಯಾಟಿನ ಹಿಂಭಾಗದಲ್ಲಿ ಇಂದಿಗೂ ಎಂಆರೆಫ್ ಸ್ಟಿಕ್ಕರ್ ಇದ್ದೇ ಇರುತ್ತದೆ. ಅಂತರಾಷ್ಟ್ರೀಯ ಕ್ರಿಕೆಟಿಗನೊಬ್ಬನ ಕೆರಿಯರ್ ಕಾಲಾವಧಿ ಅತ್ಯಲ್ಪ. ನೂರು ವರ್ಷಗಳ ಜೀವನದಲ್ಲಿ ಕ್ರಿಕೆಟ್ ಕೇವಲ ಇಪ್ಪತ್ತು ವರ್ಷಗಳಿರುತ್ತದೆ ಅಷ್ಟೆ. ಆದ್ದರಿಂದ ಆತ ನಡೆಯುತ್ತಿದ್ದಾಗಲೇ ಜೀವನಕ್ಕಾಗುವಷ್ಟು ಹಣ ಸಂಪಾದಿಸಬೇಕೆಂಬುದು ಅವರ ವಾದ. ಎಷ್ಟು ಸತ್ಯವಲ್ಲವೇ? ಇನ್ನು ನಮ್ಮ ಕ್ರಿಕೆಟಿಗರು ತಮ್ಮ ನಿವೃತ್ತ ಜೀವನವನ್ನು ಹೇಗೆ ಕ್ರಮಬದ್ಧವಾಗಿ ಆಯೋಜಿಸಿಕೊಳ್ಳಬೇಕೆಂಬುದರಲ್ಲೂ ಗವಾಸ್ಕರ್ ಮತ್ತು ಕಪಿಲ್ ದೇವ್ ಇತರರಿಗೆ ಮಾದರಿ.
ಇಂತಿಪ್ಪ ಸುನೀಲ್ ಮನೋಹರ ಗವಾಸ್ಕರ್ 60 ವರ್ಷದ ಹೊಸ್ತಿಲನ್ನು ದಾಟಿದ್ದಾರೆ. ಅವರಿಗೆ ದೇವರು ಮತ್ತಷ್ಟು ಆರೋಗ್ಯ ಆಯಸ್ಸು ನೀಡಿ ಹರಸಲೆಂಬುದೇ ಅಭಿಮಾನಿಗಳೆಲ್ಲರ ಹಾರೈಕೆ...

Proudly powered by Blogger
Theme: Esquire by Matthew Buchanan.
Converted by LiteThemes.com.