ಆದಿಲೋಕ - ಕನ್ನಡ ಬ್ಲಾಗಲೋಕದಲ್ಲಿ ಹೊಸದೊಂದು ಲೋಕ


ಜಾಗತೀಕರಣವು ಇಡೀ ವಿಶ್ವವನ್ನು ಕಿರಿದುಗೊಳಿಸಿಬಿಟ್ಟಿದೆ. ಇದರಿಂದ ನಮ್ಮ ಜೀವನವು ಹೆಚ್ಚೆಚ್ಚು ಸಂಕೀರ್ಣವಾಗುತ್ತಾ ಸಾಗಿದೆ. ಕಳೆದ ಕೆಲ ದಶಕಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಂತೂ ಅಸದಳ. ಇಂದು ಇಡೀ ಜಗತ್ತೇ ನಮ್ಮ ಅಂಗೈಯಲ್ಲಿದೆ. ಅಂತರ್ಜಾಲವು ಇಂದು ಜಗತ್ತಿನ ಕಿಟಕಿಯೆನಿಸಿದೆ. ಜಗತ್ತಿನ ಸಮುದಾಯ ಮತ್ತು ವ್ಯಕ್ತಿಗೆಳೆಲ್ಲರ ಬಳಿಯಲ್ಲೂ ಒಂದಲ್ಲ ಒಂದು ತಿಳುವಳಿಕೆಯಿದ್ದೇ ಇದೆ. ಅದರ ಮುಕ್ತ ಹಂಚಿಕೆಯನ್ನು ಸಾಧ್ಯವೆಂದು ತೋರಿಸಿದ್ದೇ ಈ ಮಾಧ್ಯಮಗಳು. ಸಮಾನಮನಸ್ಕರು ಒಂದೆಡೆ ಸೇರುವುದೂ ಕಷ್ಟವಾಗಿರುವ ಇಂದಿನ ದಿನಮಾನಸದಲ್ಲಿ ಸಮಾನಮನಸ್ಕರನ್ನು ಒಂದೆಡೆ ಸೇರಿಸುವ, ಮಾನಸಿಕ ಸಮುದಾಯಗಳನ್ನು ನಿರ್ಮಿಸುವ ಇಂತಹ ವೇದಿಕೆಗಳು ಪ್ರವರ್ಧಮಾನಕ್ಕೆ ಬರುತ್ತಿವೆ.
ಈ ನಿಟ್ಟಿನಲ್ಲಿ ಬ್ಲಾಗುಗಳು ಕ್ರಾಂತಿಕಾರಕ ಆವಿಶ್ಕಾರವೆನಿಸಿದೆ. ಇಂದು ಬ್ಲಾಗುಗಳ ಪ್ರಭಾವ ಅಪಾರ. ಬ್ಲಾಗುಗಳಲ್ಲಿ ನಮ್ಮ ವಿಚಾರಗಳನ್ನು ಮುಕ್ತವಾಗಿ, ನಿರ್ಭಿಡೆಯಿಂದ ಹೇಳಿಕೊಳ್ಳಬಹುದು. ಇಲ್ಲಿ ಚರ್ಚೆಗೂ ಅವಕಾಶವಿರುವುದರಿಂದ ಈ ಮಾಧ್ಯಮವು ಅನೇಕ ವೃತ್ತಿಪರ ಮತ್ತು ಹವ್ಯಾಸಿ ಬರಹಗಾರರನ್ನು ಆಕರ್ಷಿಸಿದೆ, ಆಕರ್ಷಿಸುತ್ತಿದೆ. ಕನ್ನಡದ ಬ್ಲಾಗುಗಳ ಸಂಖ್ಯೆ ಕಡಿಮೆಯಿದ್ದರೂ, ಅನಂತಮೂರ್ತಿಯವರಿಂದ ಹಿಡಿದು ಅನೇಕ ಪ್ರತಿಭಾನ್ವಿತರು ಕನ್ನಡದಲ್ಲಿ ಬ್ಲಾಗುಗಳನ್ನು ನಡೆಸುತ್ತಿರುವುದು ವಿದಿತವೇ. ಆ ಪಟ್ಟಿಗೆ ನನ್ನದೊಂದು ಹೊಸ ಬಾಲಂಗೋಚಿ - `ಆದಿಲೋಕ.'
ಒಂದು ಬ್ಲಾಗು ಹೇಗಿರಬೇಕು? ಅದೊಂದು ಚರ್ಚಾ ವೇದಿಕೆಯಾಗಿರಬೇಕೆ? ಇಲ್ಲ ಪತ್ರಿಕೆಯಂತಿರಬೇಕೆ ಅಥವಾ ಅದು ಬರಹಗಾರನ ಖಾಸಗೀ ಡೈರಿಯಂತಿರಬೇಕೆ? ಇದು ನನ್ನನ್ನು (ಇನ್ನೂ ಅನೇಕ ಬ್ಲಾಗಿಗರನ್ನು) ಕಾಡುತ್ತಿರುವ ಪ್ರಶ್ನೆ. ಈ ಎಲ್ಲ confusionನಿಂದ ಹೊರಬಂದು ಅಂತೂ ಈ ಬ್ಲಾಗಲೋಕದಲ್ಲಿ ಹೊಸದೊಂದು `ಲೋಕ'ವನ್ನು ಸೃಷ್ಟಿಸಿದ್ದೇನೆ - `ಆದಿಲೋಕ'. ಇದು ಎಲ್ಲದರ ಚೌಚೌಬಾತ್! ಇದು ಪತ್ರಿಕೆಯೂ ಹೌದು, ಚರ್ಚಾವೇದಿಕೆಯೂ ಹೌದು, ಹರಟೆಕಟ್ಟೆಯೂ ಹೌದು, ನನ್ನ `ಖಾಸ್ಬಾತೂ' ಹೌದು! ಅದಕ್ಕೆ ಹೇಳಿದ್ದು ಇದು ಎಲ್ಲದರ ಚೌಚೌಬಾತು!
ಇದೊಂದು ಪುಟ್ಟ ಪತ್ರಿಕೆ. ಇಲ್ಲಿ ಸಂಪಾದಕ, ಬರಹಗಾರ, ಟೈಪಿಸ್ಟು, ಕರಡು ತಿದ್ದುವವ ಎಲ್ಲವೂ ನಾನೇ. ಓದುವವನೂ ನಾನೇ?...., ಆಗದಿರಲೆಂದು ಆಶಿಸುತ್ತೇನೆ. ನಮ್ಮ ಸುತ್ತಣ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು, ಅದರಿಂದ ಜೀವನ ಕಟ್ಟಬೇಕು. ಸ್ಪಂದನ, ಸಂವಾದ, ಮಂಥನಗಳು ನಮ್ಮ ಆಲೋಚನೆಗಳಿಗೆ ಸ್ಪಷ್ಟತೆಯನ್ನೊದಗಿಸುತ್ತವೆ. ಇದರಿಂದ ನಮ್ಮ ಜಗತ್ತಿನ ಮತ್ತು ವರ್ತಮಾನದ ಗ್ರಹಿಕೆಗೆ ಸ್ಪಷ್ಟತೆ ಮೂಡುತ್ತದೆ. ಪ್ರಚಲಿತ ವಿದ್ಯಮಾನಗಳು - ರಾಜಕೀಯ, ಎಕಾನಮಿ, ಸಾಮಾಜಿಕ ಸಮಸ್ಯೆಗಳು, ಕ್ರೀಡೆ, ಸಾಹಿತ್ಯ - ಪುಸ್ತಕ, ಸಿನಿಮಾ - ರಂಗ, ಹೀಗೆ ಎಲ್ಲದರ ಕುರಿತು ಚರ್ಚಿಸಲು ಈ ಲೋಕದ ಅತಿಥಿಗಳಾಗಿ. ಪರ್ಮನೆಂಟ್ ನಿವಾಸಿ ಮಾತ್ರ ನಾನೊಬ್ಬನೇ! ನೀವೊಪ್ಪಿ ಬಿಡಿ ನನಗಂತೂ ಪ್ರತಿ ವಿಷಯದಲ್ಲೂ ನನ್ನದೇ ಆದ ಅಭಿಪ್ರಾಯವಿರುತ್ತದೆ ಅದರ ಅಭಿವ್ಯಕ್ತಿಗೆ ನಾನು ರೂಪಿಸಿಕೊಂಡಿರುವ ವೇದಿಕೆಯೇ ಆದಿಲೋಕ. ಏನೂ ಇಲ್ಲದಿದ್ದರೆ ಕಾಡು ಹರಟೆಯಾದರೂ ಇರುತ್ತದೆ. ಅದಕ್ಕೂ ಒಂದು ವಿಷಯದ ಚೌಕಟ್ಟೇ? ಆಂಗ್ಲ ಸಾಹಿತಿ ವಾಲ್ರಸ್ ಹೇಳಿದ ಹಾಗೆ -
Time has come,
To talk of many things,
Of shoes - and ships and sailing wax,
And cabbages and kings,
And why the sea is boiling hot,
And whether pigs have wings,
ಹೌದು ಆತ ಹೇಳಿದ್ದು ನಿಜ. ಮಾತಾಡಲೇನು ವಿಷಯಕ್ಕೆ ಬರವೇ?

Proudly powered by Blogger
Theme: Esquire by Matthew Buchanan.
Converted by LiteThemes.com.