ಕಳೆದ ವಾರ ಬಾಲಸುಬ್ರಮಣ್ಯಂ ಅವರ ವರದಿಯ ಒಂದು ಪಕ್ಷಿ ನೋಟವನ್ನು ನೋಡಿದಿವಿ. ಇಂದು ಅದರ ಪದರಗಳಿಗಿಳಿಯುವುದಾದರೆ, ಅತಿ ಹೆಚ್ಚು ಒತ್ತುವರಿಯಾಗಿರುವುದು ಕಂದಾಯ ಇಲಾಖೆಯ ಭೂಮಿ. ಅವರು ಸಮಿತಿಗೆ ವರದಿ ಮಾಡಿದಂತೆ 11 ಲಕ್ಷ ಎಕರೆಗಳು! ನಂತರದ ಸ್ಥಾನ ಅರಣ್ಯ ಇಲಾಖೆಯದ್ದು. ಅದು 1.65 ಲಕ್ಷ ಎಕರೆಗಳನ್ನು ವರದಿ ಮಾಡಿತು. ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶ 190,498 ಚದರ ಕಿಮಿಗಳಾದರೆ 30,718 ಚದರ ಕಿಮಿಗಳಷ್ಟು ಭೂಮಿಯನ್ನು ಅರಣ್ಯವೆಂದು ವರ್ಗೀಕರಿಸಲಾಗಿದೆ. ಅಂದರೆ ಇದು ಸುಮಾರು 76 ಲಕ್ಷ ಎಕರೆಯಷ್ಟು ಅರಣ್ಯ ಭೂಮಿ. ಎಲ್ಲ ಜಿಲ್ಲೆಗಳಲ್ಲಿಯೂ ಅರಣ್ಯ ಭೂಮಿ ಸಮವಾಗಿ ಹರಡಿಲ್ಲ. ಪ್ರಮುಖ ಅರಣ್ಯ ಜಿಲ್ಲೆಗಳು ಉತ್ತರ ಕನ್ನಡ - 20 ಲಕ್ಷ ಎಕರೆ, ಶಿವಮೊಗ್ಗ - 6.83 ಲಕ್ಷ ಎಕರೆ, ಚಿಕ್ಕಮಗಳೂರು - 4.95 ಲಕ್ಷ ಎಕರೆ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು. ಅದರಲ್ಲಿ ವರದಿಯ ಪ್ರಕಾರ ಒತ್ತುವರಿಯಾಗಿರುವುದು ಒಟ್ಟು 1.65 ಲಕ್ಷ ಎಕರೆಗಳು. ಶಿವಮೊಗ್ಗ ವಲಯದಲ್ಲಿ 40,178 ಎಕರೆ, ಚಿಕ್ಕಮಗಳೂರು ವಲಯದಲ್ಲಿ 35,946 ಎಕರೆ, ಉತ್ತರ ಕನ್ನಡ ವಲಯ 28,373 ಎಕರೆ, ಗುಲ್ಬರ್ಗ ವಲಯದಲ್ಲಿ 12, 940 ಎಕರೆ.
ಅರಣ್ಯ ಇಲಾಖೆಯ ಕರ್ಮಕಾಂಡ ಅರಿವಾಗಬೇಕಾದರೆ ಚಿಕ್ಕಮಗಳೂರು ಜಿಲ್ಲೆಯ ಉದಾಹರಣೆಯೇ ಅತ್ಯುತ್ತಮ. ಸಮಿತಿ ಗುರುತಿಸಿರುವಂತೆ ಚಿಕ್ಕಮಗಳುರು ಜಿಲ್ಲೆಯಲ್ಲಿ 35 ಸಾವಿರದ 946 ಎಕರೆಗಳಷ್ಟು ಅರಣ್ಯ ಭೂಮಿ ಖಾಸಗಿಯವರಿಂದ ಒತ್ತುವರಿಯಾಗಿದೆ. ಕಾರ್ಯಪಡೆ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಪರಾಮರ್ಷೆ ನಡೆಸಿದಾಗ ಕಂಡುಬಂದದ್ದೆಂದರೆ, 30 ಸಾವಿರ ಎಕರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಅರಣ್ಯ ಅಧಿನಿಯಮದ ಕೆಳಗೆ 7846 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಕೇವಲ 1193 ಪ್ರಕರಣಗಳಲ್ಲಿ ಮಾತ್ರ ಸಂಬಂಧಪಟ್ಟ ಅರಣ್ಯ ಸಮರಕ್ಷಣಾದಿಕಾರಿಗಳು ಆದೇಶಗಳನ್ನು ಹೊರಡಿಸಿದ್ದಾರೆ. ಇನ್ನುಳಿದ 6653 ಪ್ರಕರಣಗಳನ್ನು ದಾಖಲು ಮಾಡಿಕೊಂಡು 4 ವರ್ಷಗಳೇ ಕಳೆದಿದ್ದರೂ ಅವು ಕಾಗದಗಳಾಗಿಯೇ ಉಳಿದಿವೆ. ಇನ್ನು ಆದೇಶ ಹೊರಡಿಸಿದ ಪ್ರಕರಣಗಳು ಸೇರಿದಂತೆ ಇದುವರೆಗೂ ಒಂದೇ ಒಂದಿಂಚು ಸರಕಾರೀ ಅರಣ್ಯ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲಾಗಿಲ್ಲ! ಯಾಕೆ?
ಜಿಲ್ಲೆಯ ಕೊಪ್ಪ ತಾಲೂಕಿನದು ಅತ್ಯುತ್ತಮ ಉದಾಹರಣೆ. ಇದು ಸರಕಾರೀ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಲ್ಲಿ ಕಾರ್ಯಪಡೆಯ ವಿಫಲತೆಗೆ ಸುಸ್ಪಷ್ಟ ಕಾರಣ. ಇಲ್ಲಿನದು ಬಡ ಅಥವಾ ಸಣ್ಣ ರೈತರು ನಡೆಸಿರುವ ಅತಿಕ್ರಮವೇನಲ್ಲ. ಬದಲಾಗಿ ನೂರಾರು ಎಕರೆ ಗಾತ್ರದ ಕಾಫಿ ಪ್ಲಾಂಟೇಷನ್ ಮಾಲೀಕರು ತಮ್ಮ ಕಾಫಿ ಸಾಗುವಳಿಯನ್ನು ಆಜುಬಾಜಿನ ಸರಕಾರೀ ಅರಣ್ಯ ಭೂಮಿಗೂ ವಿಸ್ತರಿಸಿದ್ದಾರೆ. ಅವರ ಎಸ್ಟೇಟಿನ ಬೇಲಿ ಸದಾ ಮುಂದಡಿಯಿಡುತ್ತಲೇ ಇರುತ್ತದೆ. ಈ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾದರೆ, `ಸನ್ಮಾನ್ಯ' ಮುಖ್ಯಮಂತ್ರಿಗಳ ಕಛೇರಿಯಿಂದ ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಲಿಖಿತ ಆದೇಶ ಬರುತ್ತದೆ! ಇದು ನಮ್ಮ ವ್ಯವಸ್ಥೆ. ದಿ. 18.01.2010ರಂದು ಈ ಪ್ರಭಾವಿ ಒತ್ತುವರಿದಾರರು ಪ್ರಧಾನ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳಿಗೊಂದು ಸಲಹಾ ಪತ್ರವನ್ನು ಕಳಿಸುವಲ್ಲಿ ಸಫಲರಾಗುತ್ತಾರೆ. ಆ ಪತ್ರದಲ್ಲಿ ಜಿಲ್ಲಾಧಿಕಾರಿಗಳು ಯಾವುದೇ `ದುಡುಕಿನ ಕ್ರಮ' ಕೈಗೊಳ್ಳಬಾರದೆಂದು ಸಲಹೆ ಮಾಡಲಾಗಿತ್ತು. ಅಸಲು ದುಡುಕಿನ ಕ್ರಮವೆಂದರೇನು? ಅದು ` ಅನಿರೀಕ್ಷಿತವಾಗಿ, ಆತುರದಲ್ಲಿ ಹಾಗೂ ಯಾವುದೇ ಮುನ್ನೆಚ್ಚರಿಕೆ ನೀಡದೆ' ಎಂದರ್ಥ. ಆದರೆ ಇಲ್ಲಿ ಪ್ರಕರಣ ದಾಖಲಿಸಿಯೇ 4 ವರ್ಷಗಳಾಗಿವೆ! ಕರ್ನಾಟಕ ಅರಣ್ಯ ಅಧಿನಿಯಮ ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮಗಳಡಿ ನೋಟಿಸು ನೀಡುವ, ಅಪರಾಧಿಗಳ ಅಹವಾಲುಗಳನ್ನು ಆಲಿಸುವ, ಆದೇಶಗಳನ್ನು ಹೊರಡಿಸುವ ಆಧಿಕಾರವಿರುತ್ತದೆ. ಆದರೆ ನಮ್ಮ ಮುಖ್ಯಮಂತ್ರಿಗಳು ಕೃಷಿ ಬಡ್ಜೆಟ್ಟ ಮಂಡಿಸಿದ, ರೈತರ ಹೆಸರಿನಲ್ಲಿ ಅಧಿಕಾರ ವಹಿಸಿಕೊಂಡ ರೈತ ಮುಖ್ಯಮಂತ್ರಿಗಳಲ್ಲವೇ? ಈ ಪತ್ರವನ್ನಾಧರಿಸಿ ಕೂಡಲೇ `ಬಡ' ಕಾಫೀ ಎಸ್ಟೇಟು ಮಾಲೀಕರ ಸಹಾಯಕ್ಕೆ ಧಾವಿಸಿ ಬಂದು ಬಿಟ್ಟರು. ದಿನಾಂಕ 04-08-2010ರಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್ ಅವರು ಈ ಕೆಳಕಂಡಂತೆ ಪತ್ರ ಬರೆಯುತ್ತಾರೆ -
ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರು ಜಿಲ್ಲೆಯ ರೈತರು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿಯ ಮೇಲೆ ಮಾನ್ಯ ಮುಖ್ಯಮಂತ್ರಿಯವರು ಈ ಕೆಳಕಂಡಂತೆ ಆದೇಶಿಸಿರುತ್ತಾರೆ -
"ಅರ್ಜಿದಾರರ ಮನವಿಯನ್ನು ಪರಿಗಣಿಸಲು ಆದೇಶಿಸಿದೆ ಹಾಗೂ ಸರ್ಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ಯಾವುದೇ precipitative action ತೆಗೆದುಕೊಳ್ಳದಿರುವಂತೆ ಆದೇಶಿಸಿದೆ."
ಇನ್ನು ಕಾರ್ಯಪಡೆಯ ನಾಟಕವಾದರೂ ಏಕೋ? ಸರ್ಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನವೆಂದರೆ? ಯಡ್ಡಿ ಕುಟುಂಬದ ಮತ್ತೊಂದು ಭೂಹಗರಣದ ಚಿಗುರಲ್ಲವೆ ಇದು? ಅಸಲಿಗೆ ಸರಕಾರೀ ಕಾನೂನಿನಂತೆ ಅಧಿಕಾರಿಗಳು ಕ್ರಮ ಜರುಗಿಸುತ್ತಿರುವಾಗ ಮುಖ್ಯಮಂತ್ರಿಗಳು ಹೀಗೆ ಲೀಖಿತ ರೂಪದಲ್ಲಿ `ತಡೆಯಾಜ್ಞೆ' ನೀಡಬಹುದೆ? ಕಾನೂನು ರೀತ್ಯ ಇದು ಅಕ್ಷಮ್ಯ. ಆದರೆ ಇದು ವಾಸ್ತವದ ವ್ಯವಸ್ಥೆ. ಈ ಪತ್ರವನ್ನು ಅಡ್ಡ ಹಿಡಿದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದಿಂಚಿನಷ್ಟೂ ಅತಿಕ್ರಮಗೊಂಡ ಅರಣ್ಯ ಭೂಮಿಯನ್ನು ಹಿಂಪಡೆಯುವ ಗೋಜಿಗೇ ಹೋಗಲಿಲ್ಲ ಅಲ್ಲಿನ ಅಧಿಕಾರಿಗಳು.
ಇದು ಚಿಕ್ಕಮಗಳೂರಿನ ಕಥೆ. ಇಲ್ಲಿ ಮತ್ತೊಂದು ಕತೆಯಿದೆ. ಇಲ್ಲೇ ಪಕ್ಕದ ಕೋಲಾರದ ಶ್ರೀನಿವಾಸಪುರದ ಕಥೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಜನಗುಲ್ಕುಂಟೆ ಅರಣ್ಯ ಪ್ರದೇಶದ ಸುಮಾರು 60 ಎಕರೆಗಳಷ್ಟು ಅರಣ್ಯ ಭೂಮಿಯನ್ನು ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡ ಕಥೆ. ಒತ್ತುವರಿಯನ್ನು ತೆರವುಗೊಳಿಸಲು ಮುಂದಾದರೆ ಪ್ರಧೇಶದ ಸರ್ವೇ ನಡೆಸಲೂ ಅವಕಾಶ ನೀಡದೇ ಅಧಿಕಾರಿಗಳಿಗೇ ಧಮಕೀ ಹಾಕಿದ ಕಥೆ. ಈ ಪ್ರಭಾವೀ ವ್ಯಕ್ತಿ ಬೇರಿನ್ನಾರೂ ಅಲ್ಲ. ದಿನಬೆಳಗಾದರೆ ಟಿವಿ ಛಾನೆಲ್ಲುಗಳಲ್ಲಿ ಕೂತು ಇವತ್ತಿನ ರಾಜಕೀಯ ತಲುಪಿರುವ ಅಧೋಗತಿಯ ಬಗ್ಗೆ ತನಗೆ ಪರಮ ಜಿಗುಪ್ಸೆಯಾಗಿರುವಂತೆ, ಇಂದಿನ ರಾಜಕಾರಣದಲ್ಲಿರುವ ಕಡುಭ್ರಷ್ಟ ಮತ್ತು ಭಂಢರಿಂದಾಗಿ ತನ್ನಂತಹ ಪ್ರಾಮಾಣಿಕರಿಗೂ ಜನರ ಬಳಿ ಬೆಲೆಯಿಲ್ಲ ಎಂದು ವ್ಯರಾಗ್ಯ ತಾಳುವ, ಕಣ್ಣೀರಾಕುವ, ಆಚಾರ್ಯನಂತೆ ಬೋಧನೆ ಮಾಡುವ ವಿಧಾನಸಭೆಯ ಮಾಜಿ ಸಭಾಪತಿ ರಮೇಶ್ ಕುಮಾರ್!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ 30-03-2007ರಂದು ಅತಿಕ್ರಮ ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರೂ ರಮೇಶ ಕುಮಾರ್ ಅದರ ವಿರುದ್ಧ ಅಪೀಲು ಹೋಗಿರುತ್ತಾರೆ. ಹಾಗಾಗಿ 16-07-2008ರಂದು ಈ ಭೂಮಿಯ ಸರ್ವೇ ನಡೆಸಬೇಕೆಂದು ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶಿಸಿರುತ್ತಾರೆ. ಅದರಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಜಾಗದ ಸರ್ವೇ ನಡೆಸಲು ಹೋದರೆ, ಅಲ್ಲಿದ್ದ ಆಳುಗಳು ಅಧಿಕಾರಿಗಳಿಗೆ ಧಮಕಿ ಹಾಕಿ, ತಿರುಗಿಸಿ ಕಳಿಸಿದ್ದಾರೆ. ಅವರಿಗೆ ಒಳಗೆ ಪ್ರವೇಶವನ್ನೇ ನೀಡಿಲ್ಲ. ಈ ಕುರಿತು ಕಾರ್ಯಪಡೆಯ ಗಮನ ಸೆಳೆದಾಗ ಬಾಲಸುಬ್ರಮಣ್ಯಂ ಈ ಪ್ರಕರಣವನ್ನು ಕೈಗೆತ್ತುಕೋಲ್ಳುತ್ತಾರೆ. ಸರ್ವೇಗೆ ಅವರೇ ಹೊರಡುತ್ತಾರೆ. ಕೂಡಲೇ ಅನೇಕ ಕಡೆಗಳಿಂದ ಇದನ್ನು ಕೈಬಿಡುವಂತೆ ಅವರ ಮೇಲೆ ಒತ್ತಡ ಬರಲಾರಂಭಿಸುತ್ತದೆ. ಮುಖ್ಯಮಂತ್ರಿಗಳ ಕಛೇರಿಯಿಂದ ಅಂದು ಅವರ ಕಾನೂನು ಸಲಹೆಗಾರರಾಗಿದ್ದ ದಿವಾಕರ್ ಅವರು ಕೂಡ ಬಾಲಸುಬ್ರಮಣ್ಯಂ ಅವರ ಮೇಲೆ ಒತ್ತಡ ತರುತ್ತಾರೆ. (ಇದನ್ನು ಬಾಲಸುಬ್ರಮಣ್ಯಂ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿರುತ್ತಾರೆ.) ಆದರೆ ಇದೆಲ್ಲವನ್ನೂ ಮೆಟ್ಟಿ ನಿಂತು ದಿ.03-03-2010ರಂದು ಪೋಲೀಸ್ ನೆರವಿನೊಂದಿಗೆ ಸರ್ವೇ ನಡೆಸಲಾಯಿತು. ಇದರಲ್ಲಿ 60 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸ್ಪಷ್ಟವಾಗಿ ಬಯಲಾಯಿತು. ಇದರ ಹೊರತಾಗಿಯೂ ಇನ್ನೊಮ್ಮೆ ರಮೇಶ್ ಕುಮಾರ್ ಅವರ ಅಹವಾಲಿನ ಮೇರೆಗೆ 16-09-2010ರಂದು ಮತ್ತೆ ಸರ್ವೇ ನಡೆಸಲಾಯಿತು. ಆದರೆ ಈ ಒತ್ತುವರಿಯಾಗಿದೆಯೆಂಬ ಭೂಮಿಯನ್ನು ತಾನು ಖರೀದಿ ಮಾಡಿರುವುದಾಗಿಯೂ ಮತ್ತು ಈ ಸರ್ವೇ ನಡೆದಾಗ ತಾನು ಉಪಸ್ಥಿತನಿರಲಿಲ್ಲವೆಂಬುದಾಗಿಯೂ ನಿರೂಪಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿಯವರು, ಜಿಲ್ಲೆಯ ಡೆಪ್ಯೂಟಿ ಕಮೀಷನರು ಹಾಗೂ ಭೂ ದಾಕಲೆಗಳ ಉಪ ನಿರ್ದೇಶಕರು ಸೇರಿ ಇನ್ನೊಂದು ಸರ್ವೇ ನಡೆಸಬೇಕೆಂದು ಹಾಗೂ ಮನವಿದಾರನ ಉಪಸ್ಥಿತಿ ಕಡ್ಡಾಯವೆಂದೂ ನ್ಯಾಯಾಲಯ 16-12-2010ರಂದು ಆದೇಶಿಸಿತು. ಇದರಂತೆ ಎಲ್ಲರಿಗೂ ನೋಟೀಸ್ ನೀಡಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ವತಃ ತಾನೇ ಐದು ದಿನಗಳವರೆಗೆ ಸ್ಥಳದಲ್ಲಿ ಉಪಸ್ಥಿತರಿದ್ದು 2011ರ ಏಪ್ರಿಲ್ನಲ್ಲಿ ಮತ್ತೊಂದು ಸರ್ವೇ ಕೈಗೊಂಡರು. ಇದರಲ್ಲೂ ಕೂಡ ರಮೇಶ್ ಕುಮಾರ್ ಅವರಿಂದ 60 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವುದು ಧೃಢಪಟ್ಟಿದೆ. ಆದರೆ ಮತ್ತೊಮ್ಮೆ ಕ್ಯಾತೆ ತೆಗೆದ ರಮೇಶ್ ಕುಮಾರ್ ನ್ಯಾಯಾಲಯದ ಕದ ತಟ್ಟಿದ್ದಾರೆ.
ಮೇಲ್ಕಂಡ ಈ ಎರಡೂ ಪ್ರಕರಣಗಳು ಉದಾಹರಣೆಗಳು ಮಾತ್ರ. ಅರಣ್ಯ ಇಲಾಖೆಯು ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸುವಲಲಿ ಅದಕ್ಕೆ ಅಡ್ಡಿಯಾಗುತ್ತಿರುವುದು ಕಾನೂನು, ಅಧಿಕಾರಗಳ ಅಭಾವವಲ್ಲ. ಬದಲಿಗೆ ಈಗಿರುವ ಕಾನೂನು, ಅಧಿಕಾರಗಳನ್ನು ಅನುಷ್ಠನಗೊಳಿಸುವಲ್ಲಿ ನಮ್ಮ ಅಧಿಕಾರಗಳ ಅಸಮರ್ಥತೆಯೆಂಬುದನ್ನು ಈ ಮೇಲಿನ ನಿರೂಪಣೆ ವಿಷದಪಡಿಸುತ್ತದೆ. ಈ ಅಸಮರ್ಥತೆ ಅಧಿಕಾರಿಗಳೇ ಈ ಒತ್ತುವರಿದಾರರ ಜೊತೆ ಷಾಮೀಲಾಗಿರುವುದರಿಂದ ಇಲ್ಲವೆ ಕೆಲವು ಪ್ರಕರಣಗಳಲ್ಲಿ ನಾವು ಮೇಲೆ ಕಂಡಂತೆ ಸರ್ಕಾರದ ಮಟ್ಟದ ಮಂತ್ರಿಮಾಗಧರ `ಅಕ್ರಮ-ಅನೈತಿಕ' ಒತ್ತಡದಿಂದಲೂ ಜನ್ಯ.
Post a Comment