ಸಾಮಾಜಿಕ ನ್ಯಾಯದ ಕನಸಿನ ನನಸಿಗೆ ಬೆನ್ನೆಲುಬಾಗಿ ನಿಂತಿದ್ದ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ನಾವೆ ನಾಯಕನಿಲ್ಲದೆ ದಿಕ್ಕು ತಪ್ಪಿದೆ. ಕಳೆದ ಜುಲೈಗೆ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕಾನಾಥ್ ಅವರ ಅಧಿಕಾರಾವಧಿ ಮುಗಿದಿದೆ. ಅದಾದ ಒಂದೆರಡು ತಿಂಗಳಲ್ಲೇ ಆಯೋಗದ ಎಲ್ಲ ಸದಸ್ಯರ ಅವಧಿಯೂ ಮುಗಿದಿದ್ದು, ಇದುವರೆಗೂ ಆಯೋಗದ ಅಧ್ಯಕ್ಷರನ್ನಾಗಲೀ ಸದಸ್ಯರನ್ನಾಗಲೀ ನೇಮಿಸಿಯೇ ಇಲ್ಲ ಸರ್ಕಾರ. ಅಂದರೆ ಕಳೆದ 9 ತಿಂಗಳುಗಳಿಂದ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ for all practical purposes ಅಸ್ತಿತ್ವದಲ್ಲೇ ಇಲ್ಲ! ಇದುವರೆಗೂ ಯಡಿಯೂರಪ್ಪನವರ ಸರ್ಕಾರ ಹಿಂದುಳಿದ ವರ್ಗಗಳ ಕುರಿತು ಹುಸಿ ಕಾಳಜಿ ವ್ಯಕ್ತಪಡಿಸುತ್ತಿದೆಯೇ ಹೊರತು, ನಿಜ ಕೆಲಸವನ್ನು ಕೈಗೆತ್ತಿಕೊಂಡೆಯೇ ಇಲ್ಲ. ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುವುದು ಕನಿಷ್ಠ ನಿರೀಕ್ಷಿತ. ಆದರೆ ಅದನ್ನೂ ಈ ಸರ್ಕಾರ ಮಾಡಿಲ್ಲ. ಕಳೆದ 9 ತಿಂಗಳುಗಳಿಂದ ಕೆಲಸವೇ ಇಲ್ಲದೆ 38 ಜನ ಸರಕಾರೀ ಅಧಿಕಾರಿಗಳು, 2 ಕೆಎಎಸ್ ಅಧಿಕಾರಿಗಳು ಮತ್ತು ಒಬ್ಬ ಐಎಎಸ್ ಅಧಿಕಾರಿ ಕುಂತು ತಿನ್ನುತ್ತಿದ್ದಾರೆ. ಕೆಲಸವೇ ಇಲ್ಲದೆ ಇವರು ತೆಗೆದುಕೊಳ್ಳುತ್ತಿರುವ ಸಂಬಳಗಳ ಲೆಕ್ಕ ತೆಗೆದರೂ ಅದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಕನ್ನವನ್ನೇ ಕೊರೆದಿದೆ. ಅಷ್ಟು ಯಾಕೆ ಕ್ವೀನ್ಸ್ ರಸ್ತೆಯಲ್ಲಿರುವ ಆಯೋಗದ ಕಛೇರಿಯ ಕಟ್ಟಡದ ಬಾಡಿಗೆಯೇ ತಿಂಗಳಿಗೆ 2 ಲಕ್ಷ! ಕಳೆದ 9 ತಿಂಗಳಿಂದ ಇದು ವ್ಯರ್ಥವೇ ಸರಿ. ನೀವೊಮ್ಮೆ ಆಯೋಗದ ಕಛೇರಿಯ ಕಡೆಗೆ ಪಾದ ಬೆಳಸಿ ಬರಬೇಕು. ಅಲ್ಲಿರುವ ಅಷ್ಟೂ ಅಧಿಕಾರಿಗಳು ಕಛೇರಿಗೆ ಬಂದು ಹರಟೆ ಹೊಡೆಯುತ್ತಾ, ನಿದ್ದೆ ಹೊಡೆಯುತ್ತಾ, ವಿಧಾನಸೌಧದ ಬಳಿ ಅಂಡಲೆಯುತ್ತಾ, ಬಡ್ಡಿ-ಚೀಟಿ ವ್ಯವಹಾರ ನಡೆಸುತ್ತಾ ದಿನ ದೂಡುತ್ತಿದ್ದಾರೆ. ಇವರಿಗೆ ಯಾರ ಅಂಕೆಯೂ ಇಲ್ಲ. ಇನ್ನು ಹಿಂದುಳಿದ ವರ್ಗಗಳ ಕುರಿತು ಕೇಳುವ ಯಾಂವ ಇದಾನಿಲ್ಲಿ? ಅವ ಭಿಕಾರಿ. ಇದರ ಹಿಂದಿರುವ ಕಾರಣಗಳನ್ನು ಕೆದಕುತ್ತಾ ಹೋದರೆ, ಕಾಣಿಸುವುದು ಹಿಂದುಳಿದ ವರ್ಗಗಳ ಬಗೆಗೆ 'ಸರ್ಕಾರದ' ಮೇಲ್ಜಾತಿಗಳ ದ್ವೇಷಪೂರಿತ ಅವಜ್ಞೆ ಮತ್ತು ತತ್ಪ್ರೇರಿತ ಆಯೋಗವನ್ನು ಒಳಗಿನಿಂದಲೇ ಗೆದ್ದಲು ಹಿಡಿಸಿ ನಿವೀರ್ಯನನ್ನಾಗಿ ಮಾಡಿ ತನಗನುಗುಣವಾಗಿ ಪಳಗಿಸಿಕೊಳ್ಳುವ ಕುತಂತ್ರ, ರಾಜಕಾರಣದ ದುಷ್ಟ ಹುನ್ನಾರ.
ಆಯೋಗ ರಾಷ್ಟ್ರದಲ್ಲೇ ಮೊಟ್ಟಮೊದಲಬಾರಿಗೆ ರಾಜ್ಯದ ಸಮಸ್ತ ಜನತೆಯ ಜಾತಿವಾರು ಸಾಮಾಜಿಕ-ಆರ್ಥಿಕ ಗಣತಿಯನ್ನು ನಡೆಸಲು ಮುಂದಾಗಿತ್ತು. ಇದಕ್ಕಾಗಿಯೇ ಕೇಂದ್ರ ಸರ್ಕಾರ 20.05 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದ ಪರವಾಗಿ 1 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರು. ಈ ಜಾತಿವಾರು ಜನಗಣತಿ ಮಾಡಿದ್ದರೆ, ರಾಜ್ಯದ ನೈಜ ಸ್ಥಿತಿಗತಿಗಳ ಸ್ಪಷ್ಟ ಪರಿಚಯವಾಗುತ್ತಿತ್ತು. ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಯೂ ಆಗುತ್ತಿತ್ತು. 1931ರ ಜನಗಣತಿಯ ಆಧಾರದ ಮೇಲೆಯೇ ನಾವಿನ್ನೂ ನಮ್ಮ ಮೀಸಲಾತಿಯನ್ನು ನಿಗದಿಗೊಳಿಸುತ್ತಿದ್ದೇವೆ. ಇದನ್ನು ಪರಿಷ್ಕರಿಸಲೇ ಈಗ ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ನಡೆಸಲು ಹೊರಟದ್ದು. ಆದರೆ ಪಟ್ಟಭಧ್ರ ಹಿತಾಸಕ್ತಿಗಳು ಇದನ್ನು ಒಳಗಿನಿಂದಲೇ ಬೆನ್ನಿಗೆ ಚೂರಿ ಹಾಕಿಬಿಟ್ಟವು. ಈಗ ಅಲ್ಲಿ ನಡೆಯುತ್ತಿರುವುದು ಜಾತಿ ಗಣತಿಯೇ ಹೊರತು ಜಾತಿವಾರು ಸಾಮಾಜಿಕಾರ್ಥಿಕ ಗಣತಿಯಲ್ಲ. ಅದನ್ನು ಮೊಟ್ಟಮೊದಲಬಾರಿಗೆ ಮಾಡಲು ಹೊರಟದ್ದು ಕರ್ನಾಟಕ. ಅದರ ನೇತೃತ್ವ ವಹಿಸಿದ್ದು ಆಯೋಗ. ಆದರೆ ಯಡಿಯೂರಪ್ಪನವರ ಸರ್ಕಾರ ಇದನ್ನು ಆಗಗೊಡಿಸಲೇ ಇಲ್ಲ. ಒಮ್ಮೆ ಈ ಗಣತಿಯನ್ನು ಖಾಸಗೀ ಕಂಪೆನಿಗೆ ವಹಿಸುವುದೆಂದರು. ಮತ್ತೊಮ್ಮೆ ಮಗದೊಂದು. ಒಟ್ಟಾರೆ ಆಗಗೊಡಿಸಲಿಲ್ಲ. ಕಳೆದ 9 ತಿಂಗಳುಗಳಿಂದ ಆಯೋಗವೇ ಇಲ್ಲ, ಇನ್ನು ಇದೆಲ್ಲಿ ಮುಂದುವರೆಯುತ್ತದೆ? ವಾಸ್ತವದ ಬೆಳಕಿಗಂಜುವ ಪಟ್ಟಭಧ್ರ ಹಿತಾಸಕ್ತಿಯಾಗಿ ಹೋಯಿತು ಸರ್ಕಾರ.
ಯಡಿಯೂರಪ್ಪನವರು ಅಧಿಕಾರಕ್ಕೆ ಬರುತ್ತಿದ್ದ ಹಾಗೆ, ತಮ್ಮ ಬೆನ್ನೆಲುಬಾಗಿದ್ದ ಲಿಂಗಾಯತರಿಗೆ ಕೃತಜ್ಞತೆ ಸಲ್ಲಿಸುವ ಹುಕಿ ಹುಟ್ಟಿಕೊಂಡಿತು. ವೃತ್ತಿಯಾಧಾರಿತ ಕೆಳವರ್ಗದ ಜಾತಿಗಳಿಗೆ ಮೀಸಲಾದ 2ಎ ವರ್ಗಕ್ಕೆ ಮತ್ತಷ್ಟು ಜಾತಿಗಳನ್ನು ಸೇರಿಸಿದರು. ಹಿಂದೂ ಸಾದರ, ಸಾದುಗೌಡರ್, ಸಾದುಕುಲ..ಮತ್ತಿತರರ ಜೊತೆ ಸಾದರ ಲಿಂಗಾಯತರನ್ನೂ ಹಿಂದೂ ಸಾದರರ ಕೆಳಗೆ ಸೇರಿಸಿಬಿಟ್ಟರು. ಸಾದರ ಲಿಂಗಾಯತರೇನೂ ವೃತ್ತಿಯಾಧಾರಿತ ಜಾತಿಯಲ್ಲ. ಮೇಲ್ಜಾತಿಯವರನ್ನು ಈ ರೀತಿ ಹಿಂಬಾಗಿಲಿನಿಂದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿ ದೊರಕಿಸಿಕೊಡುವ ರಾಜಕೀಯ ಹುನ್ನಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಈ ವಿಷಯವಾಗಿ ಆಯೋಗವನ್ನು ಮಾತಿಗಾದರೂ ಕೇಳದೆ ಏಕಮುಖಿ ನಿರ್ಧಾರ ಕೈಗೊಂಡ ಯಡಿಯೂರಪ್ಪನವರನ್ನು ದ್ವಾರಕಾನಾಥ್ ಬಹಿರಂಗವಾಗಿ ವಿರೋಧಿಸಿದರು. ಇದರೊಂದಿಗೆ ಯಡಿಯೂರಪ್ಪನವರ ಪಿತ್ಥ ನೆತ್ತಿಗೇರಿತು. ದ್ವಾರಕಾನಾಥ್ ಅವರನ್ನು ಕಿತ್ತೊಗೆಯುವ ಪ್ರಯತ್ನಗಳು ಉಧೃತಗೊಂಡವು.
ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವೇನೂ ಇತರೆ ಆಯೋಗಗಳಂತಲ್ಲ. 1994ರಲ್ಲಿ ಮಂಡಲ್ ಕೇಸ್ ಎಂದೇ ಪ್ರಖ್ಯಾತವಾದ ಇಂದಿರಾ ಸಹಾನಿ ಮತ್ತು ಕೇಂದ್ರ ಸಕರ್ಾರದ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿಹಿಡಿಯುತ್ತಾ ಕೇಂದ್ರದಲ್ಲಿ ಮತ್ತು ಪ್ರತಿ ರಾಜ್ಯದಲ್ಲೂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವಂತೆ ಆದೇಶಿಸಿತು. ಈ ಆದೇಶದಂತೆ 1995ರಲ್ಲಿ ರಾಜ್ಯದಲ್ಲೂ ಈ ಆಯೊಗ ರಚಿತವಾಯಿತು. ಸುಪ್ರೀಂ ಕೋರ್ಟ್ ತೀರ್ಪು ನೀಡುವ ವೇಳೆಗಾಗಲೇ ನಮ್ಮ ರಾಜ್ಯಕ್ಕೆ ಹಿಂದುಳಿದ ವರ್ಗಗಳ ಆಯೋಗ ಹಳೆಯದು. 1977ರಲ್ಲಿ ದೇವರಾಜ ಅರಸು ಸಾಮಾಜಿಕ ನ್ಯಾಯಕ್ಕಾಗಿ ಈ ಆಯೋಗವನ್ನು ರಚಿಸಿ ಹಾವನೂರ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಹಾವನೂರು ವರದಿ ಇವತ್ತಿಗೂ ಪ್ರಸ್ತುತ. ಸುಪ್ರೀಂ ತೀರ್ಪಿನೊಂದಿಗೆ ಈ ಆಯೋಗವನ್ನೇ ಮತ್ತಷ್ಟು ಶಕ್ತಿಯುತಗೊಳಿಸಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನಾಗಿ ಪುನಾರಚಿಸಲಾಯಿತು. ಸುಪ್ರೀಂ ತೀರ್ಪಿನನ್ವಯ ರಚಿತವಾದ ಈ ಆಯೋಗಕ್ಕೆ ನ್ಯಾಯಾಂಗಿಕ ಕೋನವೂ ಉಂಟು. ಆಯೋಗದ ಅಧ್ಯಕ್ಷರಾಗುವವರು ಅಂದಿನ, ಇಲ್ಲ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಇಲ್ಲವೇ ಹೈಕೋರ್ಟ್ ನ್ಯಾಯಮೂರ್ತಿಯಾಗುವ ಅರ್ಹತೆಯುಳ್ಳವರಾಗಿರಬೇಕು. ಅಧ್ಯಕ್ಷರಿಗೆ ಹೈ ಕೋರ್ಟ್ ನ್ಯಾಯಮೂರ್ತಿಯ ಸ್ಥಾನವಿರುತ್ತದೆ. ಅವರಿಗೆ ಸಿವಿಲ್ ಕೋರ್ಟ್ನ ನ್ಯಾಯಮೂರ್ತಿಯೊಬ್ಬನ ಅಧಿಕಾರವಿರುತ್ತದೆ. ಅವರು ಮುಖ್ಯಕಾರ್ಯದರ್ಶಿ, ಮಂತ್ರಿ, ಮುಖ್ಯಮಂತ್ರಿಯನ್ನೂ ಕೂಡ ಸಮನ್ಸ್ ಜಾರಿ ಮಾಡಿ ಕರೆಸಿಕೊಳ್ಳಬಹುದು. ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ custodian ಆಗಿ ರಚಿತವಾಗಿರುವ ಈ ಆಯೋಗ, ಅದೇ ಕಾರಣಕ್ಕಾಗಿ ಸರ್ಕಾರದ ಅಡಿಯಾಳಾಗದೇ ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಲಾಗಿದೆ. ನಮ್ಮ ನಾಡಿನ ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗದಂತೆಯೇ ಇದು. ಇತರೆ ಆಯೋಗಗಳು ಹೀಗಿಲ್ಲ. ಅವುಗಳನ್ನು ರಚಿಸಿರುವುದು ರಾಜ್ಯ ಸರ್ಕಾರದ ಕಾನೂನಿನನ್ವಯ. ಉದಾಹರಣೆಗೆ ಪರಿಶಿಷ್ಟ ಜಾತಿ-ಪಂಗಡಗಳ ಆಯೋಗ. ಈ ಆಯೋಗ ತನಗೆ ಬರುವ ಬಿಡಿ ಬಿಡಿ ಪ್ರಕರಣಗಳನ್ನು ಪರಾಂಬರಿಸಿ ಶಿಫ್ಫಾರಸ್ಸು ನೀಡುತ್ತದೆ. ಅದರ ಮುಂದಿನದು ಅದರ ವ್ಯಾಪ್ತಿಯಲ್ಲಿಲ್ಲ. ಅದು ಸರ್ಕಾರದ ಅಡಿಯಾಳು. ಆದರೆ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಡೊಗ್ಗು ಸಲಾಂ ಹೊಡೆಯುವ ಅವಶ್ಯಕತೆಯಿಲ್ಲ. ಯಡಿಯೂರಪ್ಪನವರ ದುರಹಂಕಾರಿ ಸರ್ವಾಧಿಕಾರೀ ಧೋರಣೆಗೆ ಇದು ಸಹಿಸಲಸಾಧ್ಯ. ಈ ಆತ್ಮರತಿಗಾಗಿ ಅವರು ಸಾಮಾಜಿಕ ನ್ಯಾಯದ ಹರಿಕಾರನಾಗಿ ದುಡಿಯುತ್ತಿದ್ದ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಒಳಗಿನಿಂದಲೇ ಗೆದ್ದಲು ಹಿಡಿಸಲು ಹೊರಡುತ್ತಾರೆ.
1995ರ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಗೆ ತಿದ್ದುಪಡಿ ತರುತ್ತಾರೆ. ಈ ತಿದ್ದುಪಡಿಯಲ್ಲಿ ಆಯೋಗದ ಅಧ್ಯಕ್ಷರ ಸ್ಥಾನವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ಸಚಿವನ ಸ್ಥಾನಕ್ಕಿಳಿಸಲಾಗಿದೆ. ಜೊತೆಗೆ ಈ ಹಿಂದೆ ಅಧ್ಯಕ್ಷರ ಕೈಲಿದ್ದ ಆಯೋಗದ ಹಣಕಾಸು ಮತ್ತು ಆಡಳಿತವನ್ನು ಸದಸ್ಯ ಕಾರ್ಯದರ್ಶಿಗೊಪ್ಪಿಸಲಾಗಿದೆ. ಅಲ್ಲಿಗೆ ಆಯೋಗದ ಅಧ್ಯಕ್ಷರು ಕೂಡ ಒಬ್ಬ ಐಎಎಸ್ ಅಧಿಕಾರಿಯ ಕೈಕೆಳಗೆ ಕಾರ್ಯನಿರ್ವಹಿಸಬೇಕು. ಇದರೊಂದಿಗೆ ಒಂದೇ ಏಟಿಗೆ ಆಯೋಗದ ಎಲ್ಲ ನ್ಯಾಯಾಂಗಿಕ ಕೋನಗಳನ್ನೂ ಒಡೆದು ಹಾಕಲಾಗಿದೆ. ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗಗಳಂತೆ ಸಾರ್ವಜನಿಕರ ಸಾಕ್ಷಿಪ್ರಜ್ಞೆಯಂತಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ಹಲ್ಲು ಕಿತ್ತ ಹಾವಾಗಿಸಿ ಸರ್ಕಾರವೆಂಬ ಹಾವಾಡಿಗ ತನ್ನ ಬುಟ್ಟಿಯೊಳಗಿಟ್ಟುಕೊಳ್ಳಲು ಹೊರಟಿದೆ. ಕಡೆಗೆ ಇದು ಮತ್ತೊಂದು ನಿಗಮ ಮಂಡಳಿಯಾಗಿಬಿಡುತ್ತದೆ. ಅದಕ್ಕೊಬ್ಬ ರಾಜಕೀಯ ಪುಢಾರಿ ಅಧ್ಯಕ್ಷನಾಗುತ್ತಾನೆ. ಮುಖ್ಯಮಂತ್ರಿಗಳ ಈ ಪ್ರಸಾದಕ್ಕೆ ಕೃತಾರ್ಥನಾಗಿ ಸರ್ಕಾರದ ಬೂಟು ನೆಕ್ಕುತ್ತಾ ಕಾಲ ದೂಡುತ್ತಾನೆ. ಅಲ್ಲಿಗೆ ಹಾವನೂರರಿಂದ ದ್ವಾರಕಾನಾಥ್ ಅವರವರೆಗಿನ ಒಂದು ಪ್ರಜ್ವಲ ಜನಪರ ಪರಂಪರೆ ಸರ್ಕಾರದ `ಬೂಟಿಗೆ' ಆಹುತಿಯಾಗುತ್ತದೆ. ನಾಡಿನ ಎಲ್ಲ ಪ್ರಜ್ಞಾವಂತರೂ ಇದನ್ನು ವಿರೋಧಿಸಬೇಕಿದೆ.
ಈ ತಿದ್ದುಪಡಿಯನ್ನು ತಂದಾಗ ಇನ್ನೂ ದ್ವಾರಕಾನಾಥ್ ಆಯೋಗದ ಅಧ್ಯಕ್ಷರಾಗಿದ್ದರು. ಅವರು ಈ ತಿದ್ದುಪಡಿಯನ್ನು ಹೈ ಕೋರ್ಟ್ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ಇನ್ನೂ ಜಾರಿಯಲ್ಲಿದೆ. ಆದರೆ ಕಳೆದ ಜುಲೈನಲ್ಲಿ ದ್ವಾರಕಾನಾಥ್ ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಸರ್ಕಾರ ತನ್ನ ತಿದ್ದುಪಡಿಯನ್ನು ಒಂದು ನೋಟಿಫಿಕೇಷನ್ ಮೂಲಕ ಜಾರಿಗೊಳಿಸಿದೆ. ಇದರನ್ವಯ ನೂತನ ಅಧ್ಯಕ್ಷರನ್ನು ಅರಸಲು ಹೊರಟಿದೆ. ಆದರೆ ಈ ಹಲ್ಲು ಕಿತ್ತ ಹಾವಿನ ನಿರುಪಯುಕ್ತ ಹೆಡೆಯಾಗಿ ಕಂಗೊಳಿಸಲು ಯಾವ ಯೋಗ್ಯರೂ ತಯಾರಿಲ್ಲ. ಅವರನ್ನು ಹುಡುಕುವ ತೀವ್ರ ಪ್ರಯತ್ನವನ್ನೇನೂ ಸರ್ಕಾರ ಮಾಡಿಲ್ಲ. ಅಧ್ಯಕ್ಷರೇ ಇಲ್ಲದ ಆಯೋಗ ಸರ್ಕಾರಕ್ಕೆ ಇನ್ನೂ ಹಿತ. ಸರ್ಕಾರದ್ದು ಒಂದು ದಿವ್ಯ ಅವಜ್ಞೆ. ಹೈ ಕೋರ್ಟ್ನ ತಡೆಯಾಜ್ಞೆ ಇನ್ನೂ ತೆರವಾಗಿಲ್ಲ. ಆಗಲೇ ಸರ್ಕಾರ ತನ್ನ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಇದು ನ್ಯಾಯಾಂಗ ನಿಂದನೆಯಲ್ಲವೇ? ಹೌದು. ಆದರೆ ಸರ್ಕಾರದ ವಾದವೇ ವಿಚಿತ್ರ. ದ್ವಾರಕಾನಾಥ್ ಅವರು ಅರ್ಜಿ ಹಾಕಿ ಇದನ್ನು ಅಮಲುಗೊಳಿಸದಿರಲು ತಡೆಯಾಜ್ಞೆ ತಂದರು. ಇಂದು ಅವರ ಅಧಿಕಾರಾವಧಿಯೇ ಮುಗಿದಿದೆ. ಹಾಗಾಗಿ ತಂತಾನೇ ಈ ತಡೆಯಾಜ್ಞೆ ತೆರವಾಗಿದೆಯಂತೆ! ಆದರೆ ಈ ತಿದ್ದುಪಡಿಯನ್ನು ಪ್ರಶ್ನಿಸಿದ್ದ ದ್ವಾರಕಾನಾಥ್ ಅವರ ಮುಖ್ಯ ಅರ್ಜಿಗಿನ್ನೂ ಜೀವವಿದೆ. ವಾದ ಪ್ರತಿ ವಾದಗಳು ನಡೆಯುತ್ತಿವೆ. ಕಳೆದ ವಾರ ಕೂಡ ಆಯೋಗದ ಹಿಂದಿನ ಅಧ್ಯಕ್ಷ ಪ್ರೊ. ರವಿವರ್ಮಕುಮಾರ್ ಸರ್ಕಾರದ ವಿರುದ್ಧ ತಮ್ಮ ವಾದ ಮಂಡಿಸಿದರು. ಇಷ್ಟರಲ್ಲೇ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕೇಸನ್ನು ಹಾಕುವುದಾಗಿ ಸಿ.ಎಸ್. ದ್ವಾರಕಾನಾಥ್ ಹೇಳುತ್ತಾರೆ. ಅದರ ತಯಾರಿ ನಡೆದಿದೆ.
ನಿಜ ಒಂಬತ್ತು ತಿಂಗಳುಗಳಿಂದ ಆಯೋಗ ನಿಷ್ಕ್ರಿಯವಾಗಿದೆ. For all practical purposes, ಅದು ಅಸ್ತಿತ್ವದಲ್ಲೇ ಇಲ್ಲ. ಆದರೆ ಸರ್ಕಾರ ತಂದಿರುವ ನೂತನ ತಿದ್ದುಪಡಿ ಸಾಂಸ್ಥೀಕರಣಗೊಂಡುಬಿಟ್ಟರೆ ಆಯೋಗ ಶಾಶ್ವತವಾಗಿ ನಿಷ್ಕ್ರಿಯವಾಗಿಬಿಡುತ್ತದೆ. ಒಂದು ನ್ಯಾಯಾಂಗಿಕ ಸ್ವಾಯತ್ತ ಸಂಸ್ಥೆ ರಾಜಕೀಯ ಪುಢಾರಿಗಳ ಗಂಜಿ ಕೇಂದ್ರವಾಗಿಬಿಡುತ್ತದೆ. ಸರ್ಕಾರದ `ಬೂಟಿನ' ಕೆಳಗಿನ ಚೇಳಾಗಿಬಿಡುತ್ತದೆ. ನಾಡಿನ ಪ್ರಜ್ಞಾವಂತರೆಲ್ಲರೂ ಇದನ್ನು ವಿರೋಧಿಸಬೇಕಿದೆ. ದ್ವಾರಕಾನಾಥ್ ಅವರ ಹೋರಾಟಕ್ಕೆ ತಮ್ಮ ನೈತಿಕ ಬೆಂಬಲ ಸೂಚಿಸುವ ಅಗತ್ಯವಿದೆ. ನಮ್ಮ ಹೈ ಕೋರ್ಟ್ ಈ ಎಲ್ಲವನ್ನೂ ಪರಿಗಣಿಸಿ ಜನಪರ ನಿಲುವು ತಾಳಬೇಕಾದ ಅಗತ್ಯವಿದೆ. ಕಂಡದ್ದೆಲ್ಲವನ್ನೂ ತನ್ನ ಅಧಿಕಾರದ ವ್ಯಾಪ್ತಿಗೊಳಪಡಿಸುವ ಈ ಸರ್ಕಾರದ ಮದವನ್ನು ಹುಟ್ಟಡಗಿಸಬೇಕಿದೆ. ನಾಡಿನ ಸಾರ್ವಜನಿಕ ಸ್ವಾಯತ್ತ ಸಂಸ್ಥೆಗಳೊಂದಿಗಿನ ಸರ್ಕಾರದ ಸಂಬಂಧಗಳ ಆರೋಗ್ಯದ ಆಧಾರದ ಮೇಲೆ ಆ ಸರ್ಕಾರ ಮತ್ತದರ ನಾಯಕನ `ಅಧಿಕಾರ'ವನ್ನು ಅಳೆಯಬಹುದಾದರೆ, ಈ ಸರ್ಕಾರ ಮತ್ತು ಯಡಿಯೂರಪ್ಪನವರು ಸದಾ ಜನಾದೇಶ ಜಪಿಸುವ ಪ್ರಜಾಪ್ರಭುತ್ವವಾದಿಯ ಛಧ್ಮವೇಷದಲ್ಲಿರುವ ಒಬ್ಬ ಸರ್ವಾಧಿಕಾರಿಯಂತೆ ಕಂಗೊಳಿಸುತ್ತಾರೆ. ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಮತ್ತು ಈಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳ ಕಥಾನಕಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.
Post a Comment