ಕಳೆದೊಂದು ವಾರದಿಂದ ಚೆನ್ನೈ ರಾಜಕೀಯ ಚಟುವಟಿಕೆಯಿಂದ ಗಿಜಿಗುಡುತ್ತಿದೆ. ದೆಹಲಿ ಚೆನ್ನೈ ನಡುವಿನ ಸಂಪರ್ಕ ಮಾರ್ಗಗಳು ಜಾಂ ಆಗುವಷ್ಟರ ಮಟ್ಟಿಗೆ ರಿಂಗಣಿಸುತ್ತಲೇ ಇದೆ. ಸದ್ಯ ತಲೆದೋರಿದ್ದ ರಾಜಕೀಯ ಬಿಕ್ಕಟ್ಟೊಂದು ಬಗೆಹರಿದ ಹಾಗೆ ತೋರುತ್ತಿದೆ. ಕಾಂಗ್ರೆಸ್ ಡಿಎಂಕೆ ನಡುವೆ ಮೂಡಿದ್ದ ಬಿರುಕಿಗೆ ಮತ್ತೆ ಪ್ರಣಬ್ ಮುಖರ್ಜೀ ತೇಪೆ ಹಾಕಿದ್ದಾರೆ. ಗುಲಾಂನಭಿ ಆಜಾದ್ ಮತ್ತು ಕರುಣಾ ಕುಟುಂಬ ಕೈಕೈ ಹಿಡಿದು ಪೋಸು ಕೊಟ್ಟಿದೆ. ಆದರೆ ಒಳಗೆ ಎಲ್ಲವೂ ಸರಿಯಿದೆಯೇ? ಅಸಲು ಬಿರುಕು ಮೂಡಿದ್ದಾದರೂ ಏಕೆ? ತೇಪೆ ಹಾಕಿದ್ದಾರಲ್ಲ ಈಗ ಅದರ ಶರತ್ತುಗಳೇನು?
ಈ ರಾಜಕೀಯ ಪ್ರಹಸನದಲ್ಲಿ ಪುನಃಪುನಃ ಪ್ರದರ್ಶನಗೊಂಡದ್ದು ಕರುಣಾನಿಧಿಯ ಗತಿಕೆಟ್ಟ ಜನವಿರೋಧಿ ಭ್ರಷ್ಟ ಕುಟುಂಬ ರಾಜಕಾರಣ ಮತ್ತದನ್ನು ಸಾಧಿಸಲು ಆತನ ಕುಟಿಲ ಬ್ಲಾಕ್ಮೇಲ್ ತಂತ್ರ ಮತ್ತು ಇದಕ್ಕೆ ತಲೆಬಾಗಿದ ಮಾನಗೆಟ್ಟ ಕಾಂಗ್ರೆಸ್. ಕಳೆದ ಎರಡು ಅವಧಿಗಳಿಂದಲೂ ಕರುಣಾನಿಧಿ ತಮಿಳುನಾಡಿನ ಗದ್ದುಗೆ ಹಿಡಿದು ಕೂತಿದ್ದು ಈಗ 87 ವರ್ಷ. ಆತ ಗಾಲಿಖುರ್ಚಿ ಬಿಟ್ಟೆದ್ದು ವರ್ಷಗಳೇ ಉರುಳಿವೆ. ಆತ ಇವತ್ತು ಒಬ್ಬ ಉತ್ಸವ ಮೂರ್ತಿ ಅಷ್ಟೆ. ಆದರೆ ತಮಿಳರ ಹೃದಯ ಸಿಂಹಾಸನದಲ್ಲಿ ಆತನಿಗಿನ್ನೂ ಸ್ಥಾನವಿದೆ. ಹಾಗಾಗಿಯೇ ಈ ಚುನಾವಣೆ ಅತ್ತ ಡಿಎಂಕೆ, ಇತ್ತ ಕರುಣಾನಿಧಿ ಮತ್ತಾತನ ಕುಟುಂಬಕ್ಕೂ ಅತಿ ಮುಖ್ಯ. ಈ ಚುನಾವಣೆಯಲ್ಲಿ ಗೆದ್ದು ಮಗ ಸ್ಟಾಲಿನ್ನನ್ನು ಮುಖ್ಯಮಂತ್ರಿ ಗದ್ದಿಯಲ್ಲಿ ಕೂರಿಸುವುದು, ದೊಡ್ಡ ಮಗ ಅಳಗಿರಿಗೊಂದು ದಾರಿ ಮಾಡಿಕೊಡುವುದಲ್ಲದೆ ಮುದ್ದಿನ ಮಗಳು ಕನಿಮೊಳಿಗೂ ಒಂದು ದಾರಿ ಮಾಡಿಕೊಡಬೇಕಿದೆ. ಇದೆಲ್ಲವೂ ಕರುಣಾನಿಧಿ ಇದ್ದಾಗಲೇ ಆಗಬೇಕು. ಆಮೇಲಿನದೇನೋ ಹೆಂಗೋ ಬಲ್ಲವರಾರು? ಅದಕ್ಕಾಗಿಯೇ ಕರುಣಾನಿಧಿ ತನ್ನ ಕುಟುಂಬದ ರಾಜಕೀಯ ಅಸ್ತಿತ್ವಕ್ಕಾಗಿ ಅಂತಿಮ ಯುದ್ಧಕ್ಕೆ ಅಣಿಯಾಗಿರುವುದು. ಕಾಂಗ್ರೆಸ್ ಜೊತೆ ಕಾಲು ಕೆರೆದುಕೊಂಡು ಹೋಗಿ ಹುಸಿಮುನಿಸು ತೋರಿಸಿ ತನ್ನ ಕುಟುಂಬದ ಭಧ್ರತೆಯನ್ನು ಮತ್ತಷ್ಟು ಭಧ್ರ ಮಾಡಿಕೊಂಡಿರುವುದು. ಹೌದು ಈ ಪ್ರಹಸನದ ಮೂಲವಿದ್ದದ್ದು ಬರುವ ಚುನಾವಣೆಯ ಸೀಟು ಹಂಚಿಕೆಯಲ್ಲಲ್ಲ, ಕಾಂಗ್ರೆಸ್ಗೆ 63 ಬೇಕಂತೆ, ಡಿಎಂಕೆ 60 ಕೊಡಲು ಸಿದ್ಧವಿದೆಯಂತೆ. ಅದೇ ಮುನಿಸು. ಕೇವಲ 3 ಸೀಟಿಗಾಗಿ ಯಾರೂ ಒಂದು ಮೈತ್ರಿಯನ್ನು ಕಳೆದುಕೊಳ್ಳುವುದಿಲ್ಲ. ಅದೂ ಸದ್ಯದ ಪರಿಸ್ಥಿತಿಯಲ್ಲಿ ಕರುಣಾನಿಧಿ!
ಅತ್ತ ಡಿಎಂಕೆಯ ದಲಿತ ನಾಯಕ, ಕರುಣಾನಿಧಿಯ ಮುದ್ದಿನ ಮಗಳು ಕನಿಮೊಳಿಯ ಆಪ್ತಸ್ನೇಹಿತ ಎಂಬ ಕಾರಣಕ್ಕೇ ಆ ಮಟ್ಟಕ್ಕೇರಿದ ಅಂದಿಮುತ್ತು ರಾಜಾ, ಇನ್ನಿಲ್ಲದ ರಾಡಿಯಲ್ಲಿ ಸಿಲುಕಿ 2ಜಿ ತರಂಗಗುಚ್ಛ ವಿತರಣಾ ಹಗರಣದಲ್ಲಿ ಸಿಲುಕಿ ಕಂಡಕಂಡವರೆಲ್ಲರನ್ನೂ ಸಿಲುಕಿಸಿ ತಿಹಾರ್ ಜೈಲಿನಲ್ಲಿ ಕೈಕೈ ಹಿಸುಕುತ್ತಾ ಕೂತ್ತಿದ್ದಾನೆ. ಇದೇ ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆಗೆ ಇದೇ ದೊಡ್ಡ ತಲೆನೋವು. ಈ ಚುನಾವಣೆಯ ಮುಖ್ಯ ವಿಷಯವೇ ಅದಾಗಲಿರುವುದು ದಿಟ. ಅದಕ್ಕುತ್ತರವಾಗಿ ಕರುಣಾನಿಧಿ ಒಂದು ಪ್ರಜ್ಞಾವಾದವನ್ನು ಹೂಡಿದ್ದಾರೆ. ಅಸಲು ರಾಜಾ ಒಂದು ಕಾರ್ಟೆಲ್ನಿಂದ ಆಳಲ್ಪಟ್ಟಿದ್ದ ಟೆಲಿಕಾಂ ರಂಗಕ್ಕೆ ಹೊಸ ಕಂಪೆನಿಗಳನ್ನು ತಂದು ರಿಯಾಯಿತಿ ದರದಲ್ಲಿ ತರಂಗಗುಚ್ಛವನ್ನು ನೀಡಿದ್ದರಿಂದಲೇ ಸಾಮಾನ್ಯ ಜನರಿಗೂ ಈಗ ಮೊಬೈಲ್ಗಳು ಎಟುಕುವಂತಿದೆ. ಶ್ರೀಶಾಮಾನ್ಯನಿಗಾಗಿ ಹೋರಾಡಿದ ರಾಜಾನನ್ನು ಈಗ ಜೈಲಿನಲ್ಲಿರಿಸಲಾಗಿದೆ ಎಂದು ಊರತುಂಬಾ ಡಂಗೂರ ಸಾರಲು ನಿಂತಿದ್ದಾರೆ. ಆದರೆ ಇದನ್ನು ಮೀರಿ ಡಿಬಿ ರಿಯಾಲಿಟಿ ಕಂಪೆನಿಯವರು ಕರುಣಾ ಕುಟುಂಬಕ್ಕೆ ಸಲ್ಲಿಸಿರುವ ಕಪ್ಪ ಕಲೈಗ್ನರ್ ಟಿವಿಗೆ ಬಂದು ಬಿದ್ದ 214 ಕೋಟಿಗಳ ಸುಳಿವನ್ನೂ ಸಿಬಿಐ ಹಿಡಿದುಬಿಟ್ಟಿದೆ. ರಾಡಿಯಾ ಟೇಪ್ಗಳ ತುಂಬಾ ಇರುವುದು ಕನಿಮೊಳಿ! 2ಜಿ ತರಂಗಗುಚ್ಛ ಹಗರಣದಲ್ಲಿ ಕನಿಮೊಳಿಯ ವಿರುದ್ಧ ಒಂದು ಬಲವಾದ ಕೇಸ್ ಬಿಲ್ಡಪ್ ಆಗುತ್ತಾ ಹೋಗುತ್ತಿರುವುದು ಸತ್ಯ. ಇಷ್ಟರಲ್ಲೇ ಸಿಬಿಐ ಕನಿಮೊಳಿಯನ್ನು ವಿಚಾರಣೆಗೊಳಪಡಿಸಲಿದೆ ಮತ್ತು ಅವಶ್ಯ ಬಿದ್ದರೆ ಬಂಧಿಸಲಿದೆ ಎಂಬ ಸುದ್ದಿಗಳು ದಟ್ಟವಾಗಿ ಹಬ್ಬಿದೆ. ಅದೂ ಆಗಿಬಿಟ್ಟರೆ ಕರುಣಾನಿಧಿ ಮತ್ತೆ ಮೇಲೇಳಲಾರರು. ಅದು ಆತನಿಗೂ ಗೊತ್ತು.
ಇದೇ ಹತಾಶೆಯಲ್ಲಿ ಆತ ಕಾಂಗ್ರೆಸ್ ಅನ್ನು ಮಣಿಸಲು ಹೊರಟು ನಿಂತ. ಕಾಂಗ್ರೆಸ್ ಮುಂದೆ ಆತ ಇಟ್ಟ ಬೇಡಿಕೆಗಳು ಎರಡೇ. ಮೊದಲನೆಯದು ಸಿಬಿಐ ಕನಿಮೊಳಿಯನ್ನು ವಿಚಾರಣೆಗೊಳಪಡಿಸಬಾರದು. ಕಾಂಗ್ರೆಸ್ ಆಕೆಯನ್ನು ರಕ್ಷಿಸಬೇಕು. ಯಾವುದೇ ತನಿಖೆಗಳು ತನ್ನ ಕುಟುಂಬದವರೆಗೂ ಬರಕೂಡದು. ಎರಡು ತಿಹಾರ್ ಜೈಲಿನಲ್ಲಿರುವ ಅಂದಿಮುತ್ತು ರಾಜಾನನ್ನು ಚುನಾವಣೆಯಷ್ಟರಲ್ಲಿ ಬಿಡುಗಡೆ ಮಾಡಬೇಕು. ಆತ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬೇಕು. ಇಂಥವೇನೂ ಕಾಂಗ್ರೆಸ್ಗೆ ಹೊಸತಲ್ಲ. ಅದು ಇಂಥ ವಿಚಾರಗಳಲ್ಲಿ ಅನುಭವಸ್ಥವೇ ಹೌದು. ಆದರೆ ಸದ್ಯದ ಪರಿಸ್ಥಿತಿಗಳು ಬೇರೆಯಿದೆ. 2ಜಿ ತರಂಗಗುಚ್ಛ ಹಗರಣದ ಸಿಬಿಐ ತನಿಖೆ ಸುಪ್ರೀಂ ಕೋರ್ಟ್ನ ನಿರ್ದೇಶನದನ್ವಯ ನಡೆಯುತ್ತಿರುವುದರಿಂದ ಅದರ ನಿಯಂತ್ರಣವೂ ತಕ್ಕಮಟ್ಟಿಗೆ ಕಾಂಗ್ರೆಸ್ ಕೈತಪ್ಪಿದೆ. ಮತ್ತು ರಾಜಕೀಯವಾಗಿ ಡಿಎಂಕೆ ಮತ್ತು 2ಜಿ ತರಂಗಗುಚ್ಛ ಹಗರಣವು ಕಾಂಗ್ರೆಸ್ಗೆ ಮೊಣಭಾರವೂ ಹೌದು. ಇದನ್ನು ಕಳಚಿಕೊಳ್ಳಲೂ ಇದು ಉತ್ತಮ ಸಂದರ್ಭ. ಕಾಂಗ್ರೆಸ್ ಡಿಎಂಕೆಯನ್ನು ಕೈಬಿಡುತ್ತದೆಂದೇ ಎಲ್ಲರೂ ಎಣಿಸಿದ್ದರು. ಇವತ್ತಿನ ರಾಜಕೀಯ ಪರಿಸ್ಥಿತಿ ಎಣಿಕೆಗಳೂ ಹಾಗೇ ಕೂಡಿ ಬಂದಿದ್ದವು.
ಕಳೆದೊಂದೆರಡು ತಿಂಗಳ ಹಿಂದೆ ತಮಿಳುನಾಡಿಗೆ ಭೇಟಿ ನೀಡಿದ ರಾಹುಲ ಗಾಂಧಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಅನ್ನು ಪುನರುತ್ಥಾನಗೊಳಿಸುವಲ್ಲಿ ರಣೋತ್ಶಾಹ ಪ್ರದರ್ಶಿಸಿದ್ದರು. ಅದಕ್ಕೆ ತಕ್ಕಂತೆ ಕಾಂಗ್ರೆಸ್ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳುವೆಡೆ ದಾಪುಗಾಲು ಹಾಕಿತ್ತು. ಕಳೆದ 5 ದಶಕಗಳಿಂದ ದ್ರಾವಿಡ ರಾಜಕಾರಣಕ್ಕೆ ಸಿಕ್ಕು ಬೈಪೋಲಾರ್ ಆಗಿಬಿಟ್ಟಿರುವ ತಮಿಳುನಾಡು ರಾಜಕಾರಣವನ್ನು ಇದರಿಂದ ವಿಮುಕ್ತಿಗೊಳಿಸಿ ಅದಕ್ಕೆ ಮೂರನೇ ಆಯಾಮವನ್ನು ಸೇರಿಸುವ ನಿಚ್ಛಳ ಅವಕಾಶವಿದೆ. ಈ ನಿಟ್ಟಿನೆಡೆ ವಿಜಯಕಾಂತ್ ಅವರ ಡಿಎಂಡಿಕೆ, ಪಿಎಂಕೆಗಳು ಸೆಣಸಿ ಸೋತಿವೆ. ಹೀಗಾಗಿ ಈ ಎಲ್ಲ ಪಕ್ಷಗಳೂ ಕಾಂಗ್ರೆಸ್ ನೇತೃತ್ವದಲ್ಲಿ ಒಗ್ಗೂಡಿದರೆ ಈ ರಾಜಕೀಯ ಲೆಕ್ಕಾಚಾರ ಸಾಧ್ಯ ಎಂಬುದು ಸದ್ಯ ಇದ್ದ ವಾದ. ಕಾಮರಾಜರ ನಂತರ ತಮಿಳುನಾಡು ಕಾಂಗ್ರೆಸ್ನಲ್ಲಿ ಅಂಥ ಮತ್ತೊಬ್ಬ ನಾಯಕನಿಲ್ಲ. ಆದರೆ ಚಿದಂಬರಂ ತನ್ನ ರಾಜಕೀಯ ಮಹತ್ವಾಕಾಂಕ್ಷೆಯಲ್ಲಿ ತನ್ನನ್ನು ಆ ಸ್ಥಾದಲ್ಲಿ ನೋಡಿಕೊಳ್ಳುವುದು ದಿಟ. ಈ ಎಲ್ಲವೂ ಸೇರಿ ಕಾಂಗ್ರೆಸ್ ಡಿಎಂಕೆಯನ್ನು ಡಂಪ್ ಮಾಡಿ ಏಕಾಂಗಿ ಹೋರಾಟಕ್ಕಿಳಿಯುತ್ತದೆ ಎಂದೇ ಎಲ್ಲರ ಎಣಿಕೆಯಾಗಿತ್ತು. ಇದರಿಂದ 2ಜಿ ತರಂಗಗುಚ್ಛ ಹಗರಣಕ್ಕೆ ಡಿಎಂಕೆ ಮತ್ತು ರಾಜಾ ಹರಕೆಯ ಕುರಿಗಳಾಗಿ ಕಾಂಗ್ರೆಸ್ ಆ ಕಳಂಕದಿಂದ ಹೊರಬರುವ ಸಾಧ್ಯತೆಯೂ ಇತ್ತು. ಆದರೆ ಕಡೆಯ ಕ್ಷಣದ ಲೆಕ್ಕಾಚಾರಗಳು ಈ ಎಲ್ಲವನ್ನೂ ತಲೆಕೆಳಗು ಮಾಡಿಬಿಟ್ಟವು.
ಇತ್ತ 18 ಸಂಸದ ಬಲ ಹೊಂದಿರುವ ಡಿಎಂಕೆ ಯುಪಿಎಯಿಂದ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಅಲ್ಲಿ ಕೇಂದ್ರ ಸರ್ಕಾರ ಡೋಲಾಯಮಾನ ಸ್ಥಿತಿಗೆ ಬೀಳುತ್ತದೆ. ಹಾಗಂತ ಅದು ಉರುಳುವುದೇನೂ ಇಲ್ಲ. ಮತ್ತೊಂದು ರಾಜಕೀಯ ಮೈತ್ರಿಯತ್ತ ಕಾಂಗ್ರೆಸ್ ಕೈಚಾಚಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿರುವುದು ಉತ್ತರ ಪ್ರದೇಶದಲ್ಲಿ ಮಾತ್ರ. ಮುಲಾಯಂರ ಸಮಾಜವಾದಿ ಪಕ್ಷ ಮತ್ತು ಅಧಿಕಾರಸ್ಥ ಮಾಯಾವತಿಯ ಬಹುಜನ ಸಮಾಜ ಪಕ್ಷ ಎರಡೂ ಕೂಡ ಕಾಂಗ್ರೆಸ್ಗೆ ಬೆಂಬಲ ನೀಡಲು ನಾ ಮುಂದು ತಾ ಮುಂದು ಎಂದು ತುದಿಗಾಲ ಮೇಲೆ ನಿಂತಿವೆ. ಡಿಎಂಕೆ ಹೊರನಡೆದಲ್ಲಿ ಇವರೀರ್ವರ ನಡುವೆ ಒಬ್ಬರ ಮೈತ್ರಿ ಕಾಂಗ್ರೆಸ್ಗೆ ಅನಿವಾರ್ಯ. ಸಮಾಜವಾದಿ ಪಕ್ಷ ತನ್ನ ಬೆಂಬಲವನ್ನು ಘೋಷಿಸಿಯೂ ಬಿಟ್ಟಿತು. ಆದರೆ ಉತ್ತರಪ್ರದೇಶ ರಾಹುಲ ಗಾಂಧಿಯ ಪ್ರಯೋಗಾಲಯ. ಅಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ಅಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆಂಬುದು ರಾಹುಲ ಗಾಂಧಿಯ ಮುಂದಿರುವ ಸದ್ಯದ ಏಕ ನಿಯಮ ಅಜೆಂಡಾ. ಈ ಅನಿವಾರ್ಯ ಒಲ್ಲದ ಮೈತ್ರಿ ಈ ಕಾಂಗ್ರೆಸ್ ರಣತಂತ್ರವನ್ನು ಹಾಳುಗೆಡವುತ್ತದೆ. ಕಳೆದ 4 ವರ್ಷಗಳ ರಾಹುಲರ ಕೆಲಸವನ್ನು ಮಣ್ಣುಪಾಲು ಮಾಡುತ್ತದೆ. ಕಾಂಗ್ರೆಸ್ನಲ್ಲಿ ಯುವರಾಜರಿಗೇ ಆದ್ಯತೆ. ಈ ಆದ್ಯತೆಯನ್ನು ಕಾಪಾಡಲು ಮತ್ತು ಮನಮೋಹರಿಗೂ ಒಲ್ಲದ ಸಮಾಜವಾದಿ ಪಕ್ಷದ ಮೈತ್ರಿಯನ್ನು ತಪ್ಪಿಸಲು ಕಡೆಯ ಕ್ಷಣದಲ್ಲಿ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿ ಪ್ರಣವ ಮುಖರ್ಜೀ ಡಿಎಂಕೆಯೊಂದಿಗಿನ ಮೈತ್ರಿಯನ್ನು ಕಾಪಾಡಿಕೊಂಡಿದ್ದಾರೆ. ಕರುಣಾನಿಧಿ ಹಾಕಿದ ಅಸಂಬದ್ಧ ಮತ್ತು ಜನವಿರೋಧಿ ನಿಬಂಧನೆಗಳಿಗೊಪ್ಪಿ ಮಾನಗೆಟ್ಟ ಕಾಂಗ್ರೆಸ್ ಮಂಡಿಯೂರಿದೆ.
ತಮಿಳುನಾಡು ರಾಜಕೀಯದಲ್ಲಿ ಉದ್ಭವಿಸಬಹುದಿದ್ದ ಮಹತ್ತರ ಐತಿಹಾಸಿಕ ಕ್ಷಣವೊಂದನ್ನು ಹರಿವಾಣದಲ್ಲಿಟ್ಟು ಕೊಟ್ಟರೂ ಅದನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಡೆಯ ನಗು ನಕ್ಕವರು ಅದೇ ಕರುಣಾನಿಧಿ.
Post a Comment