ನೈಸ್ ಪುರಾಣ - 6 - ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಮತ್ತಷ್ಟು ಹಗರಣಗಳು

ಬಿಬಿಎಂಪಿ ಫಲಿತಾಂಶ ಹೊರಬಿದ್ದಿದೆ. ಮೊದಲ ಬಾರಿಗೆ ಬೆಂಗಳೂರಿನ ಪುರಭವನದ ಮೇಲೆ ಕಮಲ ಅರಳಿ ನಿಂತಿದೆ. ಯಾವುದೇ ಸಮಸ್ಯೆಯಿಲ್ಲದೆ, ಇಂಡಿಪೆಂಡೆಂಟ್ಗಳ ಮುಲಾಜಿಲ್ಲದೆ, ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಬಹುದು, ಆ ಮಟ್ಟಿಗೆ ಅದು ಇತ್ತೀಚೆಗೆ ಬೆಂಗಳೂರಿನಲ್ಲಿ ಬೇರು ಬಿಟ್ಟಿರುವುದು ವಾಸ್ತವ ಎಂಬುದು ನಿಜವಾಯಿತು. ಬಿಬಿಎಂಪಿಯನ್ನು ಕಾಂಗ್ರೆಸ್ನ ಭಧ್ರಕೋಟೆ ಎಂದು ಎಲ್ಲರೂ ಹೇಳಿದ್ದೇ ಬಂತು, ಕಾಂಗ್ರೆಸ್ ಉಡಾಫೆಯಿಂದ ಕೆಲಸ ಮಡತೊಡಗಿತು. ತನ್ನ ಸ್ವಯಂಕೃತಾಪರಾಧಗಳಿಂದಾಗಿಯೇ ಸೋತು ಸುಣ್ಣವಾಗಿದೆ.

ಆದರೆ ಸುದ್ದಿ ಅದಲ್ಲ. ದೇವೇಗೌಡರ ಜೆಡಿಎಸ್ ಇನ್ನಿಲ್ಲದಂತೆ ಹೀನಾಯವಾಗಿ ಸೋಲುಂಡು ಅಧಃಪತನಕ್ಕೊಳಗಾಗಿರುವುದು. 198 ಸ್ಥಾನಗಳ ಬಿಬಿಎಂಪಿಯಲ್ಲಿ ಜೆಡಿಎಸ್ ಪಡೆದಿರುವುದು ಕೇವಲ 15 ಸ್ಥಾನಗಳು! ಬೆಂಗಳೂರಿನ ಹೊರವಲಯದಲ್ಲಿರುವ ಅನೇಕ ಮುನ್ಸಿಪಾಲಿಟಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲ್ಪಟ್ಟಿರುವುದು ಮತ್ತು ನೈಸ್ ಬಾಧಿತ ಪ್ರಾಂತ್ಯಗಳು ಬಿಬಿಎಂಪಿಯಡಿ ಬರುವುದರಿಂದ ಜೆಡಿಎಸ್ ಕನಿಷ್ಠ ಆ ಕ್ಷೇತ್ರಗಳಲ್ಲಾದರೂ ಉತ್ತಮ ಪ್ರದರ್ಶನ ನೀಡುತ್ತದೆಂಬ ನಿರೀಕ್ಷೆಯಿತ್ತು. ಇದನ್ನು ದೃಷ್ಟಿಯಲ್ಲಿಟ್ಟಕೊಂಡೇ ಶ್ರೀಮಾನ್ ದೇವೇಗೌಡರು ನೈಸ್ ಖೇಣಿ ಮತ್ತು ಯಡಿಯೂರಪ್ಪನವರ ವಿರುದ್ಧ ಪಂಚೆ ಎತ್ತಿಕಟ್ಟಿ ಹೋರಾಟಕ್ಕಿಳಿದದ್ದು. ನೈಸ್ ರಸ್ತೆಯಿಂದ ಬಧೀತ 27 ವಾರ್ಡ್ಗಳಿವೆ ಬಿಬಿಎಂಪಿಯಲ್ಲಿ. ಆದರೆ ಆಶ್ಚರ್ಯ ಈ 27 ವಾರ್ಡ್ಗಳಲ್ಲಿ ಕೇವಲ 2 ವಾರ್ಡ್ಗಳಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದೆ! ಕಾಂಗ್ರೆಸ್ 5ರಲ್ಲಿ ಗೆದ್ದಿದ್ದರೆ ಮಿಕ್ಕ 20 ಸ್ಥಾನಗಳಲ್ಲಿ ಬಿಜೆಪಿಯ ಕಮಲ ಅರಳಿ ನಿಂತಿದೆ.

ದೇವೇಗೌಡರು ಹೋರಾಟ ಶುರುವಿಟ್ಟುಕೊಂಡ, ಯಡಿಯೂರಪ್ಪನವರನ್ನು ಬಾಸ್ಟರ್ಡ್ ಎಂದು ಕರೆದ ಅದೇ ಹೆಮ್ಮಿಗೇಪುರದಲ್ಲಿ ಕಮಲ ಅರಳಿ ನಿಂತಿದೆ. ಹೆಮ್ಮಿಗೇಪುರ ಫ್ರೇಂವರ್ಕ್ ಅಗ್ರೀಮೆಂಟಿನ ಅಲೈನ್ಮೆಂಟಿನ ಪ್ರಕಾರ ನೈಸ್ ಟೌನ್ಷಿಪ್ಗೆ ಸೇರತಕ್ಕದುಲ್ಲ, ಆದರೆ ಹೆಮ್ಮಿಗೆಪುರವನ್ನು ಕೆಐಎಡಿಬಿ ಟೌನ್ಷಿಪ್ಗೆಂದು ನೋಟಿಫೈ ಮಾಡಿ ಕೂತಿದೆ. ಮೂಲ ಒಪ್ಪಂದದ ಪ್ರಕಾರ ಕೂಡ ಟೌನ್ಷಿಪ್ ಹೆಮ್ಮಿಗೆಪುರದಲ್ಲೇ ಬರಬೇಕು ಎಂದು ಸ್ವತಃ ಅಶೋಕ ಹಾರ್ನಳ್ಳಿ ಸರ್ಕಾರದ ಪರ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಇದನ್ನು ಪ್ರತಿಭಟಿಸಿಯೇ ದೇವೇಗೌಡರು ಪಂಚೆ ಎತ್ತಿ ಕಟ್ಟಿ ಬೀದಿಗಿಳಿದದ್ದು. ಆದರೆ ಸೋಜಿಗ ನೋಡಿ ಅದೇ ಹೆಮ್ಮಿಗೇಪುರದಲ್ಲಿ ಜೆಡಿಎಸ್ ಸೋತಿದೆ, ಬಿಜೆಪಿಯ ಕಮಲ ಅರಳಿ ನಿಂತಿದೆ.

ಧಿಗ್ಗನೆ ಎದ್ದು ಕೂತಿದ್ದಾರೆ ಯಡಿಯೂರಪ್ಪ. ಬಿಬಿಎಂಪಿ ಚುನಾವಣೆಯಲ್ಲಿ ಜನಾಭಿಪ್ರಾಯ ಹೊರಬಿದ್ದಿದೆ. ಜೆಡಿಎಸ್ನ ಸೋಲು ಮತ್ತು ಬಿಜೆಪಿಯ ಗೆಲುವು, ಮತ್ತೂ ಮುಖ್ಯವಾಗಿ ನೈಸ್ ಪ್ರಾಂತ್ಯಗಳಲ್ಲಿ ಜೆಡಿಎಸ್ನ ಸೋಲು ಜನ ನೈಸ್ ವಿವಾದವನ್ನು ಅದನ್ನು ಮುಂದಿಟ್ಟುಕೊಂಡು ದೇವೇಗೌಡರು ಆಡಿದ ಆಟವನ್ನು ಜನ ತಿರಸ್ಕರಿಸಿದ್ದಾರೆ. ಈಗಲಾದರೂ ದೇವೇಗೌಡರು ಎಚ್ಚೆತ್ತು ಬೆಂಗಳೂರಿನ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದನ್ನು ಬಿಡಬೇಕು. ನೈಸ್ ಹೋರಾಟವನ್ನು ಕೈಬಿಡಬೇಕು. ನಾವಂತೂ ಫ್ರೇಂವರ್ಕ್ ಅಗ್ರೀಮೆಂಟ್ ಮತ್ತು ಕೋರ್ಟ್ ಆದೇಶಗಳನ್ವಯ ನೈಸ್ ಕಾರಿಡಾರ್ ಅನ್ನು ಮಾಡಿಯೇ ತೀರುತ್ತೇವೆ. ಜನಾದೇಶ ನಮ್ಮ ಪರವಾಗಿದೆ ಎಂದು ಬೀಗಿದ್ದಾರೆ. ಬಿಬಿಎಂಪಿ ಫಲಿತಾಂಶ ಹೊರಬಿದ್ದ ಮಾರನೆಯ ದಿನವೇ ಯಡಿಯೂರಪ್ಪನವರ ಸರ್ಕಾರ ನೈಸ್ಗಾಗಿ ಪಡೆದುಕೊಂಡ ಭೂಮಿಗೆ ದರ ನಿಗದಿ ಮಾಡಲು ಸಭೆ ಕರೆದಿದೆ. ರೈತರ ಕೈಲಿ ಛೀಮಾರಿ ಹಾಕಿಸಿಕೊಂಡು ಸಬೆಯನ್ನು ಮುಂದೂಡಿದೆ.

ಯಾಕೆ ಯಡಿಯೂಪ್ಪನವರಿಗೆ ನೈಸ್ ವಿಚಾರದಲ್ಲಿ ಅಷ್ಟೊಂದು ಆಸಕ್ತಿಯೋ ತಿಳಿಯದಾಗಿದೆ. ಸ್ವಾಮಿ ಯಡಿಯೂರಪ್ಪನವರೆ ಜನಾದೇಶ ಇರುವುದು ತಮ್ಮ ಪಕ್ಷಕ್ಕೆ ಸ್ವಾಮಿ, ಅದೇನೋ ಈ ಬಿಬಿಎಂಪಿ ಚುನಾವಣೆ ನೈಸ್ ಕುರಿತಾಗಿ ನಡೆದ ರೆಫೆರೆಂಡಂ ಇದ್ದಂತೆ ಮಾತುನಾಡುತ್ತಿದ್ದೀರಲ್ಲ? ದೇವೇಗೌಡರ ಹೋರಾಟಕ್ಕೆ ಜನ ತಮ್ಮ ಬೆಂಬಲ ಸೂಚಿಸದೇ ಇರಬಹುದು. ಅವರಿಗದು `ಭೂತದ ಬಾಯಲ್ಲಿ ಭಗವದ್ಗೀತೆ' ಎಂಬಂತೆ ಕಂಡಿರಬಹುದು. ಆದರೆ ಅಷ್ಟು ಮಾತ್ರಕ್ಕೆ ತಾವು ಜನ ಬೆಂಬಲ ನೈಸ್ ಪರವಾಗಿದೆಯೆಂಬಂತೆ ಮಾತನಾಡುವುದು ಎಷ್ಟು ಸೂಕ್ತ? ಇದು ನೈಸ್ ಅನ್ನು ಒಂದು ನಾನ್ ಇಷ್ಯೂ ಮಾಡಿಬಿಡುವ ಹುನ್ನಾರ. ಇದನ್ನು ಪ್ರಾಜ್ಞರಾದವರೆಲ್ಲರೂ ವಿರೋಧಿಸಬೇಕಾಗುತ್ತದೆ. ದೇವೇಗೌಡರ ಹೋರಾಟ, ಹಾರಾಟ, ಅವರ ಸ್ವಾರ್ಥಗಳೇನೇ ಇರಲಿ ಅದು ನಮಗೆ ಅನಾವಶ್ಯಕ. ಇವುಗಳ ಲೆಕ್ಕಾಚಾರದಲ್ಲಿ ಇಶ್ಯೂ ಗೌಣವಾಗಬಾರದು.

ಈ ಫ್ರೇಂವರ್ಕ್ ಅಗ್ರೀಮೆಂಟ್ ಎಷ್ಟು ನಿರ್ಲಜ್ಜವಾಗಿ ನೈಸ್ ಕಂಪೆನಿಯ ಪರ ಇದೆ ಎಂಬುದನ್ನು ನಾವು ಕಳೆದೆರಡು ವಾರಗಳಿಂದ ನೋಡುತ್ತಲೇ ಬಂದಿದ್ದೇವೆ. ಈ ವಾರ ಮತ್ತೊಂದಷ್ಟು ಉಪಹಗರಣಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ ತೆರಿಗೆ ವಿನಾಯ್ತಿ. ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ.12 ಬಿಎಂಐಸಿಪಿ ಕಾರಿಡಾರ್ನ ಎಕ್ಸ್ಪ್ರೆಸ್ವೇ ಮತ್ತು ಟೌನ್ಷಿಪ್ಗಳಿಗೆ ಸರ್ಕಾರ 30 ವರ್ಷಗಳ ಈ ಕನ್ಸೆಷನ್ ಅವಧಿಯಲ್ಲಿ ಸಂಪೂರ್ಣ ಟ್ಯಾಕ್ಸ್ ಹಾಲಿಡೇ ನೀಡುತ್ತದೆ. ಇಷ್ಟೇ ಅಲ್ಲ. ಟೌನ್ಷಿಪ್ ಮತ್ತು ಇತರೆ ಭೂಮಿ ರಿಜಿಸ್ಟ್ರೇಷನ್ನ ಮೇಲೂ ಕೂಡ ರಿಜಿಸ್ಟ್ರೇಷನ್ ಫೀ, ಸ್ಟ್ಯಾಂಪ್ ಡ್ಯೂಟಿ, ಕನ್ವರ್ಷನ್ ಫೈನ್ ಮುಂತಾದ ಎಲ್ಲ ರೀತಿಯ ಫೀಗಳನ್ನು ಮಾಫಿ ಮಾಡಲಾಗಿದೆ. ಇದರ ಬಾಬ್ತೇ ನೂರಾರು ಕೋಟಿಗಳಷ್ಟಾಗುತ್ತದೆ. ಇದಕ್ಕೆ ಯಾವ ಲಾಜಿಕ್ಕೂ ಇಲ್ಲ. ಆತ ಸಾರ್ವಜನಿಕ ಹಿತಕ್ಕಾಗಿ ರಸ್ತೆ ಮಾಡಿಕೊಡುತ್ತಿದ್ದಾನೆ, ಅದಕ್ಕಾಗಿ ಈ ಎಲ್ಲ ವಿನಾಯ್ತಿಗಳು ಅಂತಾರೆ ಅಧಿಕಾರಸ್ಥರು. ಆದರೆ ನನೆಪಿಡಬೇಕು ಖೇಣಿ ಸಾಹೇಬರು ರಸ್ತೆಯನ್ನೇನು ಬಿಟ್ಟಿ ಮಾಡಿಕೊಡುತ್ತಿಲ್ಲ. ಇದೊಮದು ಬಿಸಿನೆಸ್ ಮಾಡೆಲ್. ಅವರು ಮಾಡುತ್ತರಿಉವುದು ವ್ಯಾಪಾರ, ಸೇವೆಯಲ್ಲ.

ಇಷ್ಟೇ ಆಗಿದ್ದರೆ ಚೆನ್ನಿತ್ತು. ಆದರೆ ಇದೇ ಆರ್ಟಿಕಲ್ 12ರಲ್ಲಿ ಮತ್ತೊಂದು ಅನಾಹುತಕಾರಿ ಕ್ಲಾಸ್ ಇದೆ. ಪ್ಯಾರಾ 12.4 ಏನು ಹೇಳುತ್ತದೆ?   GOK will use its best efforts to cause the infrastructure corridor project to be classified as an industry in accordance with Package scheme of incentives and Concessions 1996-2001 of Karnataka state and thereby qualify and extend to the company and the infrastructure corridor project to all of the benefits, incentives and concessions available to such industry under such scheme. 


 ಅಲ್ಲಿಗಾಯ್ತಲ್ಲ. ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳು! ಅಸಲಿಗೆ ಬಿಎಂಐಸಿಪಿ ಎನ್ನುವುದು ರಸ್ತೆ ಕಾಮಗಾರಿ. ಇದು ಬರಬೇಕಿರುವುದು ಲೋಕೋಪಯೋಗಿ ಇಲಾಖೆಯಡಿಯಲ್ಲಿ. ಆದರೆ ಇದನ್ನು ಇಂಡಸ್ಟ್ರಿ ಎಂದು ಪರಿಗಣಿಸಿಬಿಟ್ಟರೆ ಕಂಪೆನಿಗೆ ಹಲವಾರು ಲಾಭಗಳುಂಟು. ಮದಲಿಗೆ ಕೈಗಾರಿಕಾ ಸ್ಥಾಪನೆಗೆ ಸಿಗುವ ಎಲ್ಲ ಸೌಲಭ್ಯಗಳೂ, ವಿನಾಯ್ತಿಗಳೂ ಬಿಎಂಐಸಿಪಿಗೂ ಸೇರುತ್ತದೆ. ಇಷ್ಟೇ ಅಲ್ಲ ಒಮ್ಮೆ ಬಿಎಂಐಸಿಪಿಯನ್ನು ಕೈಗಾರಿಕೆ ಎಂದು ಪರಿಗಣಿಸದ ಮೇಲೆ ಮುಗಿಯಿತು. ಬಡ ರೈತರ ಭೂಮಿ ನುಂಗುವ ಹೆಬ್ಬಾವಿನಂತಿರುವ ಕೆಐಎಡಿಬಿ ಸೀನ್ಗೆ ಬರುತ್ತದೆ. ಮೂಲ ಒಪ್ಪಂದದ ಪ್ರಕಾರ ನೈಸ್ ಸಂಸ್ಥೆಯೇ ರೈತರಿಂದ ಜಮೀನನ್ನು ಕೊಂಡುಕೊಳ್ಳಬೇಕಿತ್ತು. ಅದಕ್ಕೂ ಸರ್ಕಾರಕ್ಕೂ ಸಂಬಂಧವೇ ಇರಲಿಲ್ಲ. ಆದರೆ ಒಮ್ಮೆ ಕೆಐಎಡಿಬಿ ಪಿಚ್ಚರ್ರಿಗೆ ಬಂದ ಮೇಲೆ ಖೇಣಿ ಸಾಹೇಬರಿಗೆ ಆ ತೊಂದರೆ ಕೂಡ ಇಲ್ಲ.  ಕಂಪೆನಿಗೆ ಸರ್ಕಾರ ತನ್ನ ಸಂಬಂಧಪಟ್ಟ ಇಲಾಖೆಗಳ ಮೂಲಕ ಬೇಕಾದ ಅಗತ್ಯ ಭೂಮಿಯನ್ನು ವಶಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸಬೇಕು. ಕಂಪೆನಿ ಈ ಮೊದಲೇ ಒಪ್ಪಿಗೆಯಾದಂತಹ ಪರಿಹಾರದ ಪ್ಯಾಕೇಜನ್ನು ಸರ್ಕಾರಕ್ಕೆ ಕಟ್ಟುತ್ತದೆ. ಇದನ್ನು ಸರ್ಕಾರ ಭೂಮಿ ಕಳೆದುಕೊಂಡ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಬೇಕು. ಅಲ್ಲಿಗೆ ಖೇಣಿ ಸಾಹೇಬರು ಏಕದಂ ಒಂದೇ ಏಟಿಗೆ ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳುವ ಎಲ್ಲ ತಲೆನೋವನ್ನೂ ಕಳೆದುಕೊಳ್ಳುತ್ತಾರೆ. ಅವರ ಬದಲಿಗೆ ಸರ್ಕಾರದ ಪರವಾಗಿ ಕೆಐಎಡಿಬಿ ಬ್ರೋಕರ್ ರೀತಿಯಲ್ಲಿ ಆ ಕೆಲಸ ಮಾಡಿಕೊಡಬೇಕು, ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಈ ಪ್ರಾಜೆಕ್ಟಿಗೆಂದು ವಶಪಡಿಸಿಕೊಂಡ ಭೂಮಿಯನ್ನು ಯಾರಾದರೂ ಅತಿಕ್ರಮಿಸಿದರೆ ಅದನ್ನು ತೆರವುಗೊಳಿಸಿ ಭೂಮಿಯನ್ನು ಸೇಫ್ ಆಗಿ ನೋಡಿಕೊಳ್ಳುವುದು ಕೂಡ ಇದರ ಕೆಲಸವೇ.

ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳು ಅಂದೆನಲ್ಲ, ಅದರಲ್ಲಿ ಒಂದೆರಡನ್ನಷ್ಟೇ ಮೇಲೆ ವಿವರಿಸಿದ್ದೇನೆ. ಮತ್ತೊಂದು ಮುಖ್ಯ ಪ್ರಮಾದ ಕೂಡ ಇದರಿಂದ ನಡೆದು ಹೋಯಿತು. ಈ ಕ್ಲಾಸ್ನಿಂದ ಇಡಿಯ ಬಿಎಂಐಸಿಪಿ ಪ್ರಾಜೆಕ್ಟಿನ ಮೇಲೆ ಕೈಗಾರಿಕಾ ಇಲಾಖೆಗೆ ಹಿಡಿತ ಸಿಕ್ಕಿ ಹೋಯಿತು. ಅಂದು ಜೆ.ಎಚ್.ಪಟೇಲರ ಸರ್ಕಾರದಲ್ಲಿ ಇಂಡಸ್ಟ್ರೀಸ್ ಮಿನಿಸ್ಟ್ರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿರುವಂತಹ ಆರ್.ವಿ.ದೇಶಪಾಂಡೆ! ನಂತರ ಎಸ್ಸೆಂ.ಕೃಷ್ಣರ ಸರ್ಕಾರದಲ್ಲೂ ಇವರೇ ಇಂಡಸ್ಟ್ರೀಸ್ ಮಿನಿಸ್ಟ್ರು! ಅಂದರೆ ಸತತ ಎರಡು ಅವಧಿಗೆ - 10 ವರ್ಷಗಳ ಕಾಲ ಆರ್.ವಿ.ದೇಶಪಾಂಡೆ ಈ ರಾಜ್ಯದ ಇಂಡಸ್ಟ್ರೀಸ್ ಮಿನಿಸ್ಟ್ರಾಗಿದ್ದರು. ಇವರು ಆ ಜಾಗದಾಗೆ ಕುಂತು ನೈಸ್ ಪರ ತೆಗೆದುಕೊಂಡ ನಿಲುವುಗಳು, ನಡೆಸಿದ ಹಗರಣಗಳು ಒಂದೇ ಎರಡೇ, ಸುವಿಸ್ತಾರವಾಗಿ ಬರೆದರೆ ಅದೇ ಒಂದು ಸೀರೀಸ್ ಆದೀತು. ಇದೇ ಸಮಯಕ್ಕೆ ಖೇಣಿಯವರ ಪರಮಾಪ್ತರಲ್ಲೊಬ್ಬರಾದ ಬಿ.ಎಸ್.ಪಾಟೀಲರು ಪ್ರಿನ್ಸಿಪಲ್ ಸೆಕ್ರೆಟರಿಗಳಾಗಿದ್ದರು, ನಂತರ ಎಸ್ಸೆಂ.ಕೃಷ್ಣರ ಅವಧಿಯಲ್ಲಿ ಇವರು ಚೀಫ್ ಸೆಕ್ರೆಟರಿಯಾಗಿದ್ದರು. ಮತ್ತೊಬ್ಬರು ಕ್ಯಾಪ್ಟನ್ ರಮೇಶ್, ಇವರು ಲೋಕೋಪಯೋಗಿ ಕಾರ್ಯದರ್ಶಿಗಳಾಗಿದ್ದರು. ಫ್ರೇಂವರ್ಕ್ ಅಗ್ರೀಮೆಂಟಿಗೆ ಸರ್ಕಾರದ ಪರವಾಗಿ ಇವರೇ ಸಹಿ ಹಾಕಿರುವುದು. ಅಲ್ಲಿಗೆ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಮೂವರು `ಮಹನೀಯರು' ಬಂದು ಕೂತರು. ಕಬ್ಬಿಣ ಕಾದಿತ್ತು. ಆಡಳಿತ ವ್ಯವಸ್ಥೆಯಲ್ಲಿ ಖೇಣಿಯ ಸುತ್ತಿಗೆಗಳು ಬಂದು ಕೂತವು. ಮಿಕ್ಕೆಲ್ಲವೂ ಯಾವುದೇ ಸದ್ದು ಸಪ್ಪಳವಿಲ್ಲದೆ ಸಾಂಗೋಪಾಂಗವಾಗಿ ನಡೆದು ಹೋದವು. 

ಇನ್ನು ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನ ಪರಮ ನಿರ್ಲಜ್ಜ ಕ್ಲಾಸ್ ಎಂದರೆ ಆರ್ಬಿಟ್ರೆಶನದು. ಆರ್ಟಿಕಲ್ 18 ಇದನ್ನು ವಿವರಿಸುತ್ತದೆ. ಇದರ ಪ್ರಕಾರ ಏನೇ ಡಿಸ್ಪ್ಯೂಟ್ಗಳು ಎದುರಾದರೂ 30 ದಿನಗಳೊಳಗೆ ಉಭಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಸರ್ಕಾರ ಮತ್ತು ಕಂಪೆನಿ ಇಬ್ಬರಿಗೂ ಒಪ್ಪಿಗೆಯಾಗತಕ್ಕಂತಹ ತಜ್ಞರ ಸಮಿತಿಗೆ ಅದನ್ನು ಒಪ್ಪಿಸಬೇಕು. ಅದಕ್ಕೆ 60 ದಿನಗಳ ಕಾಲಾವಕಾಶ. ಇನ್ನು ಈ ತಜ್ಞರ ಸಮಿತಿಯ ಶಿಫಾರಸನ್ನು ಕಂಪೆನಿ ಒಪ್ಪಬಹುದು ಇಲ್ಲ ತಿರಸ್ಕರಿಸಬಹುದು. ಹಾಗಾದರೆ ತಜ್ಞರ ಸಮಿತಿಯೇಕೋ? ಇಲ್ಲ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಆರ್ಬಿಟ್ರೆಶನ್ಗೆ ಹೋಗಬೇಕು. ಸರ್ಕಾರ ಮತ್ತು ಕಂಪೆನಿ ಇಬ್ಬರೂ ತಮ್ಮ ತಮ್ಮ ಪರವಾಗಿ ಒಬ್ಬರನ್ನು ಆರ್ಬಿಟ್ರೇಟರ್ ಆಗಿ ನೇಮಿಸತಕ್ಕದ್ದು. ನಂತರ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್, ಪ್ಯಾರಿಸ್ ಮೂರನೆಯ ನ್ಯೂಟ್ರಲ್ ಆರ್ಬಿಟ್ರೇಟರ್ ಅನ್ನು ನೇಮಿಸುತ್ತದೆ. ಈ ಆರ್ಬಿಟ್ರೇಷನ್, ನ್ಯೂ ಯಾರ್ಕ್ ಕನ್ವೆಂಷನ್ 1958ರಂತೆ ನಡೆಯುತ್ತದೆ. ಈ ಆರ್ಬಿಟ್ರೇಷನ್ ಕಮಿಟಿ ನೀಡುವ ತೀರ್ಪೇ ಅಂತಿಮ. ಅದನ್ನು ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ! ಈ ಆರ್ಬಿಟ್ರೇಷನ  ನಡೆಸಬೇಕಾದ ಸ್ಥಳ ಯಾವುದು ಗೊತ್ತಾ - ಲಂಡನ್ ಕೋರ್ಟ್! ಅಂದರೆ ಹೆಮ್ಮಿಗೇಪುರ ಕುಂಬಳಗೋಡಿನ ರೈತ ಲಂಡನ್ ಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕು!

Proudly powered by Blogger
Theme: Esquire by Matthew Buchanan.
Converted by LiteThemes.com.