ಹೌದು, ಹೈ ಲೆವೆಲ್ ಕಮಿಟಿಯ ಮೊದಲ ಸಭೆಯಲ್ಲಿಯೇ ಅಶೋಕ್ ಖೇಣಿಯ ವರಾತ ಶುರುವಾಗುತ್ತದೆ. ತಮ್ಮ ಕಂಪೆನಿಗಳ ಒಕ್ಕೂಟ ಇಡಿಯ ಪ್ರಾಜೆಕ್ಟಿನ ಕಮರ್ಷಿಯಲ್ ಮತ್ತು ಫೀಸಿಬಲಿಟಿ ಸರ್ವೇ ಕೈಗೊಂಡಿದ್ದು, ಈಗಿರುವಂತೆ ಮಾಡುವುದಾದರೆ ಕಂಪೆನಿಗಳಿಗೆ ಏನೂ ಗಿಟ್ಟುವುದಿಲ್ಲ, ಇದು ಆರ್ಥಿಕವಾಗಿ ಮಾಡಲೋಗ್ಯವಲ್ಲ ಎಂದು ಶರಾ ಬರೀತಾರೆ. ನಂತರ ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ. ಇಡಿಯ ಪ್ರಾಜೆಕ್ಟನ್ನು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಗೆ ಸೀಮಿತಗೊಳಿಸುವ ಬದಲಿಗೆ ಇದನ್ನು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಅನುಮತಿ ಕೊಡಬೇಕೆಂದೂ, ವಿನಂತಿಸಿಕೊಳ್ಳುತ್ತಾರೆ. ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿನ ಭೂಮಿಯನ್ನು ಕಮರ್ಷಿಯಲ್ ಆಗಿ ಬಳಸಿಕೊಂಡು, ಒಂದು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವುದೆಂದೂ, ಇದರ ಭಾಗವಾಗಿ ಬೆಂಗಳೂರ ಮೇಲಿನ ಒತ್ತಡ ಕಡಿತಗೊಳಿಸಲು ಅರ್ಬನ್ ಟೌನ್ಷಿಪ್ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಅಗ್ರೋಬೇಸ್ಡ್ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ರೆಸಾರ್ಟ್ಗಳನ್ನು ಕಟ್ಟಬಹುದೆಂದು ಕನಸು ಬಿತ್ತಿದರು, ಖೇಣಿ! ಇದಲ್ಲದೆ ಎಕ್ಸ್ಪ್ರೆಸ್ ವೇ ಮತ್ತು ಎನ್ಎಚ್ 7ರ ನಡುವೆ ಎನ್ಎಚ್ 4ರ ಮೂಲಕ ಒಂದು ಲಿಂಕ್ ರಸ್ತೆ ಮತ್ತು ಬೆಂಗಳೂರಿನ ಒಳ ಭಾಗಗಳಿಗೂ ರಸ್ತೆಯ ವಿಸ್ತಾರದ ಕುರಿತು ಮಾತನಾಡಿದರು. ಈ ಟೌನ್ಷಿಪ್ಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನೂ ಕಂಪೆನಿಯೇ ಮಾಡಿಕೋಳ್ಳುವುದಾಗಿಯೂ ಖೇಣಿ ಹೇಳುತ್ತಾರೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಎಂಬ ಹೆಸರನ್ನು ಬದಲಿಸಿ ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ಎಂದು ಮರುನಾಮಕರಣಗೊಳಿಸಿ, ನಂದಿಯನ್ನು ಪ್ರಾಜೆಕ್ಟಿನ ಲಾಂಛನವಾಗಿ ಬಳಸಬೇಕೆಂದು ಖೇಣಿ ಒತ್ತಾಯಿಸುತ್ತಾರೆ. ಸರ್ಕಾರ ಮತ್ತು ಕಂಪೆನಿ ನಡುವಿನ ಎಂಒಯುನ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತೊಂದು ಎಂಒಯುವನ್ನು ಮಾಡಿಕೊಳ್ಳಬೇಕೆಂದೂ ಹೇಳುತ್ತಾರೆ.
ಆಶ್ಚರ್ಯ! ಖೇಣಿ ಹತ್ತಿಸಿದ ಅಮಲಿನಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಂತೆ ಕಂಡು ಬಂದ ಇಡೀ ಸಭೆ ಯಾವುದೇ ಪ್ರಶ್ನೆಗಳಿಲ್ಲದೆ ಖೇಣಿ ಹೇಳಿದ ಎಲ್ಲವನ್ನೂ ಮರುಮಾತಿಲ್ಲದೆ ಒಪ್ಪಿಕೊಂಡು ಅಸ್ತು ಎಂದಿತು. ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಜೆ. ವಾಸುದೇವನ್ ಇಡಿಯ ಪ್ರಪೋಸಲ್ಲಿಗೆ ಒಪ್ಪಿಗೆ ಸೂಚಿಸುತ್ತಾರೆ. ಈ ಹೈ ಲೆವೆಲ್ ಕಮಿಟಿಯ ಸಭೆಯ ಮಿನಟ್ಸ್ ಅನ್ನು ತೆಗೆದು ನೋಡಿದವರಿಗೆ ತುಂಬಾ ಸ್ಪಷ್ಟವಾಗಿ ಅರ್ಥವಾಗುವ ಮೊದಲ ವಿಷಯವೆಂದರೆ, ಈ ಸಭೆಯ ಎಲ್ಲ ನಿರ್ಣಯಗಳೂ ಪೂರ್ವ ನಿರ್ಧಾರಿತ. ಸಭೆ ಒಂದು ಸ್ಟೇಜ್ ಶೋ ಅಷ್ಟೆ, ಎಂಬುದು.
ಇಡೀ ಬಿಎಂಐಸಿಪಿಯನ್ನು ನಾವು ಇಂದು ಹಗರಣವೆನ್ನುವುದೇ ಆದರೆ ಅದರ ಬೀಜಾಂಕುರವಾಗಿದ್ದೇ ಇಲ್ಲಿ. ರೈತ ನಾಯಕನೆಂದು ಕೊಚ್ಚಿಕೊಳ್ಳುವ ದೇವೇಗೌಡರು ಆತನಲ್ಲಿ ರಸ್ತೆ ಕಟ್ಟಲು ಹಣವಿಲ್ಲವೆಂದು 20 ಸಾವಿರ ಎಕರೆ ರೈತರ ಭೂಮಿಯನ್ನು ಆತನಿಗೆ ಕಮರ್ಷಿಯಲ್ ಆಗಿ ಬಳಸಿಕೊಳ್ಳಲು ಅನುಮತಿ ನೀಡುತ್ತಾರೆ! ಗೌಡರು ಖೇಣಿಯನ್ನು ಈಗ ಬರಿಗೈ ಫಕೀರ ಎಂದು ಅಣಕಿಸುವುದುಂಟು, ಆದರೆ ತಿಳಿದಿರಬೇಕು ಖೇಣಿ ಅಂದೂ ಸಹ ಬರಿಗೈ ಫಕೀರರೇ. ಅಂತಹ ಬರಿಗೈ ಫಕೀರರು ಈ ಬೃಹತ್ ಪ್ರಾಜೆಕ್ಟನ್ನು ಮಾಡಲು ಅನುವು ಮಾಡಿಕೊಟ್ಟದ್ದು ತಾವೇ ಸ್ವಾಮಿ! ಖೇಣಿ ಸರ್ಕಾರಕ್ಕೆ ಕೊಟ್ಟ ಪ್ರಪೋಸಲ್ಲು ಬಹಳ ಸರಳ - ಕ್ರಾಸ್ ಸಬ್ಸಿಡಿ! ಏನು ಹಾಗಂದರೆ? ಖೇಣಿ ಸಾಹೇಬರು ಐಡ್ಯಾ ಮಾಡ್ಯಾರ, ಸರಳ ಸ್ವಾಮಿ, ಪ್ರತಿಪಾದಿತ ರಸ್ತೆಯ ಇಕ್ಕೆಲಗಳ ಭೂಮಿಯನ್ನು ಕೊಳ್ಳುವ ಕಂಪೆನಿ ಅದನ್ನು ಕಮರ್ಶಿಯಲಿ (ರಿಯಲ್ ಎಸ್ಟೇಟ್) ಎಕ್ಸ್ಪ್ಲಾಯಿಟ್ ಮಾಡುತ್ತದೆ. ಟೌನ್ಷಿಪ್ಗಳನ್ನು ಕಟ್ಟುತ್ತದೆ, ಪ್ರವಾಸೋದ್ಯಮ ರೆಸಾರ್ಟ್ಗಳನ್ನು ಕಟ್ಟತ್ತದೆ. ಅದರಿಂದ ಬರುವ ಅಪಾರ ಹಣವನ್ನು ವ್ಯಯಿಸಿ ರಸ್ತೆ ನಿರ್ಮಾಣ ಮಾಡುತ್ತದೆ. ಹೀಗೆ ನಿರ್ಮಿಸಿದ ರಸ್ತೆ ಮೇಲೆ ಜನ ಓಡಾಡೋದಿಕ್ಕೆ ಟೋಲ್ ಅನ್ನು ಕೂಡ ಸಂಗ್ರಹಿಸುತ್ತದೆ. ಅದೂ 30 ವರ್ಷಗಳ ಕಾಲ! ಇಂತಹುದೊಂದು ಯೋಜನೆಗೆ ಗೌಡರೇ ಒಪ್ಪಿದ್ದರಲ್ಲ? ಇದನ್ನು ಗೌಡರು ಸಮರ್ಥಿಸಿಕೊಳ್ಳದೇ ಬಿಡುವುದಿಲ್ಲ. ಆಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟತ್ತು, ಉದಾರೀಕರಣ ಆಗಷ್ಟೆ ಜಾರಿಗೆ ಬರುತ್ತಿತ್ತು, ಆದ್ದರಿಂದ ಹೂಡಿಕೆಗೆ ಹಣ ಸಂಗ್ರಹಿಸುವುದು ಅಷ್ಟು ಸುಲಭವಿರಲಿಲ್ಲ. ಮೇಲಾಗಿ ಈ ಪ್ರಾಜೆಕ್ಟ್ನ ಫೀಸಬಿಲಿಟಿ ಸರ್ವೇ ನಡೆಸಿದ್ದ ಎಡಿಬಿ ಸಂಸ್ಥೆಯು ಸರ್ಕಾರ ಕ್ಯಾಪಿಟಲ್ನ ಶೇ.20ರಷ್ಟನ್ನು ಸಬ್ಸಿಡಿ ರೂಪದಲ್ಲಿ ಕೊಡದ ಹೊರತು ಈ ಪ್ರಾಜೆಕ್ಟ್ ಆರ್ಥಿಕವಾಗಿ ಯೋಗ್ಯವಲ್ಲ ಎಂದಿದ್ದನ್ನು ನೆನಪಿಸುತ್ತಾರೆ. ಇರಲಿ.
ಆಗಸ್ಟ್ 26, 1995ರಂದು ಕಂಪೆನಿಗಳು ಈ ಮೇಲ್ಕಂಡಂತೆ ನಿರ್ಧಾರಿತವಾಗಿದ್ದ ರೂಪುರೇಷೆಗಳಂತೆ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಇದರಲ್ಲಿ ಕಂಪೆನಿ ಸ್ಪಷ್ಟವಾಗಿ ಬೆಂಗಳೂರು - ಮೈಸುರು ಹೆದ್ದಾರಿಗೆ 5119.37 ಎಕರೆಗಳು ಮತ್ತು ಏಳು ಟೌನ್ಷಿಪ್ಗಳಿಗೆ 20, 092 ಎಕರೆಗಳು ಬೇಕಾಗುತ್ತದೆಂದೂ ಗುರುತಿಸುತ್ತದೆ. ಬೆಂಗಳೂರು - ಮೈಸೂರು ಹೆದ್ದಾರಿಗಾಗಿ ಅಂದಾಜು 1568 ಮಿಲಯನ್ ರೂ.ಗಳು ಖರ್ಚಾಗಬಹುದೆಂದು ತಿಳಿಸಲಾಗಿದೆ. ಈ ವರದಿ ಬೆಂಗಳೂರು ಮೈಸೂರಿನ ನಡುವೆ ಏಳು ಟೌನ್ಷಿಪ್ಗಳ ಸ್ಥಾಪನೆಯನ್ನು ಪ್ರತಿಪಾದಿಸುತ್ತದೆ. ಅದರಂತೆ ಬಿಡದಿ ಬಳಿ ಕಾರ್ಪರೇಟ್ ಸೆಂಟರ್ (1) ಮತ್ತು ಕಮರ್ಷಿಯಲ್ ಸೆಂಟರ್ (2), ರಾಮನಗರದ ಬಳಿ ಹೆರಿಟೇಜ್ ಸೆಂಟರ್ (3), ಫಾರ್ಮಿಂಗ್ ಅಂಡ್ ಮಾರ್ಕೆಟಿಂಗ್ ಸೆಂಟರ್(4) ಮತ್ತು ಇಂಡಸ್ಟರಿಯಲ್ ಸೆಂಟರ್ (5), ಮಂಡ್ಯ ಮತ್ತು ಶ್ರೀರಂಗಪಟ್ಟಣದ ನಡುವೆ ಅಗ್ರೀಕಲ್ಚರಲ್ ಸೆಂಟರ್(6), ಮತ್ತು ಶ್ರೀರಂಗಪಟ್ಟಣದ ಬಳಿ ಇಕೋ-ಟೂರಿಸಂ ಸೆಂಟರ್(7) ಎಂಬ ಏಳು ಟೌನ್ಷಿಪ್ಗಳನ್ನು ಕಂಪೆನಿ ಪ್ರತಿಪಾದಿಸುತ್ತದೆ. ಸೆಪ್ಟೆಂಬರ್ 13, 1995ರಮದು ಮತ್ತೆ ಸಭೆ ಸೇರುವ ಹೈ ಲೆವೆಲ್ ಕಮಿಟಿಯು ಕಂಪೆನಿ ಸಲ್ಲಿಸಿದ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಅಂಗೀಕರಿಸಿ, ಕಂಪೆನಿಯಿಂದ ಹಲವಾರು ಸ್ಪಷ್ಟನೆಗಳನ್ನು ಬಯಸುತ್ತದೆ. ಖೇಣಿಯವರು ಕೊಡುವ ವಿವರಣೆಗಳನ್ನು ದಾಖಲಿಸಿ ಸಭೆ ಮುಕ್ತಾಯವಾಗುತ್ತದೆ.
ಅಕ್ಟೋಬರ್ 12,1995ರಂದು ಈ ಹೈ ಲೆವೆಲ್ ಕಮಿಟಿಯು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ. ಖೇಣಿ ಕೊಟ್ಟ ರಿಪೋರ್ಟ್ಗೂ ಹೈ ಲೆವೆಲ್ ಕಮಿಟಿಯ ರಿಪೋರ್ಟ್ಗೂ ಅಂತಹ ಫರಕ್ಕೇನೂ ಇಲ್ಲ. ವ್ಯವಸ್ಥೆ ಖೇಣಿ ಸಾಹೇಬರೊಂದಿಗೆ ಅಷ್ಟು ಅನ್ಯೋನ್ಯವಾಗಿತ್ತು ಅಂತಾತು! ಈ ಹೈ ಲೆವೆಲ್ ಕಮಿಟಿಯ ರಿಪೋರ್ಟ್ರಿನಲ್ಲಿ ದಾಖಲಾಗಿರುವ ಕೆಲವು ಟರ್ಮ್ಸ್ ಅಂಡ್ ಕಂಡೀಷನ್ಸ್ ಮುಂದೆ ಹಗರಣವನ್ನು ಅರ್ಥ ಮಾಡಿಕೊಳ್ಳಲು ಇರುವ ಏಕೈಕ ರೆಫೆರೆನ್ಸ್ ಪಾಯಿಂಟ್. ಇದಕ್ಕೆ ನಂತರ ಬರೋಣ. ಹೈ ಲೆವೆಲ್ ಕಮಿಟಿಯ ಶಿಫಾರಸುಗಳ ಪರಾಮರ್ಶೆಗೆ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಂದು ಸಬೆ ನಡೆಯುತ್ತದೆ. ಎಲ್ಲ ವಿಷಯಗಳ ಕೂಲಂಕುಷ ಚಿಂತನೆಯ ನಂತರ ಸರ್ಕಾರ ಒಂದು ಆದೇಶ ಹೊರಡಿಸುತ್ತದೆ. ಈ ಆದೇಶ ಟೌನ್ಷಿಪ್ಗಳನ್ನು 7ರ ಬದಲು 5ಕ್ಕೆ ಮಿತಿಗೊಳಿಸುತ್ತದೆ ಎಂಬುದನ್ನು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ರಾಮನಗರದ ಬಳಿಯ ಹೆರಿಟೇಜ್ ಸೆಂಟರ್(3) ಮತ್ತು ಮಂಡ್ಯ ಶ್ರೀರಂಗಪಟ್ಟಣದ ನಡುವಿನ ಅಗ್ರೀಕಲ್ಚರ್ ಸೆಂಟರ್ (6)ಗೆ ಸರ್ಕಾರ ಅನುಮತಿ ನಿರಾಕರಿಸುತ್ತದೆ. ಇವೆರಡರ ಹೊರತಾಗಿಯೂ ಕೂಡ ಪ್ರಾಜೆಕ್ಟ್ ಲಾಭದಾಯಕವಾಗಿರಲಿದೆ ಎಂಬುದು ಸರ್ಕಾರದ ವಾದ. ಇದರಂತೆ ರಸ್ತೆಗೆ 5119 ಎಕರೆ ಮತ್ತು ಐದು ಟೌನ್ಷಿಪ್ಗಳಿಗೆ 13, 194 ಎಕರೆ ಭೂಮಿ ಅಗತ್ಯವೆಂದು ಗುರುತಿಸುತ್ತದೆ. ಇದರಂತೆ ಸರ್ಕಾರದ ಲೋಕೋಪಯೋಗಿ ಇಲಾಖೆಯು ಕಂಪೆನಿಗಳ ಕನ್ಸಾರ್ಶಿಯಂನೊಂದಿಗೆ ಸೂಕ್ತ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚಿಸುತ್ತದೆ.
ಇಲ್ಲಿ ಮತ್ತೊಂದು ಸಣ್ಣ ಸ್ಕ್ಯಾಮಿದೆ. ಇಂತಹ ಯಾವುದೇ ಪ್ರಾಜೆಕ್ಟಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಕು. ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಪರಿಶೀಲಿಸಿದ ಆರ್ಥಿಕ ಇಲಾಖೆ ಎರಡು ಆಯ್ಕೆಗಳನ್ನು ನೀಡುತ್ತದೆ. ಒಂದು - ಟೌನ್ಷಿಪ್ 1+2+4 = 6227 ಎಕೆರೆಗಳು, ಎರಡು - ಟೌನ್ಷಿಪ್ 1+2+4+5 = 8909 ಎಕೆರೆಗಳು. ಅಲ್ಲಿಗೆ ಗರಿಷ್ಠ 4 ಟೌನ್ಷಿಪ್ಗಳಿಗೆ ಮಾತ್ರ ಆರ್ಥಿಕ ಇಲಾಖೆ ಅಸ್ತು ಅಂದಿತ್ತು. ಆದರೆ ಸರ್ಕಾರದ ಆದೇಶದಲ್ಲಿ 5 ಟೌನ್ಷಿಪ್ಗಳಿಗೆ ಅನುಮತಿ ನೀಡಲಾಗಿದೆ. ಅದು ಟೌನ್ಷಿಪ್ ನಂ.7 ಶ್ರೀರಂಗಪಟ್ಟಣದ ಬಳಿ ಇಕೋ ಟೂರಿಸಂಗಾಗಿ ರೆಸಾರ್ಟ್. ಇದಕ್ಕೆ ಆರ್ಥಿಕ ಇಲಾಖೆ ತನ್ನ ಒಪ್ಪಿಗೆ ಸೂಚಿಸಿಲ್ಲ, ಆದರೆ ಇದಕ್ಕಾಗಿ 4285 ಎಕರೆಗಳನ್ನು ತೆಗೆದಿರಿಸಲಾಗಿದೆ! ಆರ್ಥಿಕ ಇಲಾಖೆಯ ಅನುಮೋದನೆಯೇ ಇಲ್ಲದೆ 4285 ಎಕರೆಗಳು ಖೇಣಿ ಕೈ ಸೇರುತ್ತವೆ, ದೇವೇಗೌಡರ ಹಯಾಮಿನಲ್ಲಿ!
ನಂತರ ಗೌಡರದ್ದೋ ದೇಶದ್ದೋ ಯಾರ ಅದೃಷ್ಟವೋ ತಿಳಿಯದು, ಅತ್ಯಂತ ಸಿನಿಮೀಯ ರೀತಿಯಲ್ಲಿ ಕೇವಲ 16 ಸಂಸದರನ್ನು ಬೆನ್ನಿಗೆ ಕಟ್ಟಕೊಂಡು ದೇವೇಗೌಡರು ದೆಹಲಿಗೆ ಹಾರುತ್ತಾರೆ, ಈ ದೇಶದ ಪ್ರಧಾನಿಯಾಗುತ್ತಾರೆ. ಅಲ್ಲಿಗೆ ಈ ನೈಸ್ ಪುರಾಣದಲ್ಲಿ ದೇವೇಗೌಡರ ಪಾತ್ರದ ಮೊದಲ ಅಂಕ ಮುಕ್ತಾಯವಾಗುತ್ತದೆ. ಇಲ್ಲಿ ನಮ್ಮ ನಾಡಿನಲ್ಲಿ ಬಹು ತರ್ಜನ ಭರ್ಜನದ ಬಳಿಕ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗುತ್ತಾರೆ. ನೈಸ್ ಪುರಾಣದಲ್ಲಿ ಒಂದು ಅಂಕಕ್ಕೆ ತೆರೆ ಬಿದ್ದು, ಮತ್ತೊಂದು ಅಂಕದ ತೆರೆಯೇಳುತ್ತದೆ.
(ಮುಂದುವರಿಯುವುದು)
One thoughts on “ನೈಸ್ ಪುರಾಣ - 3 - ಹಗರಣದ ಬೀಜಾಂಕುರವಾಗಿದ್ದೇ ಗೌಡಪ್ಪನ ಕಾಲದಲ್ಲಿ!”
ನೈಸ್ ಪುರಾಣದ ಈ ವರೆಗಿನ ಎಲ್ಲಾ ಲೇಖನ ಓದಿದೆ. ಮಾಹಿತಿ ಪೂರ್ಣ ಲೇಖನ.
ಒಂದು ದೇಶದ ನಾಯಕರು ಎಚ್ಚರಿಕೆಯಿಂದ ಇಲ್ಲದೆ ಹೋದರೆ ಏನೇನಾಗುತ್ತದೆ ಎಂಬುದು ಸ್ಪಷ್ಟವಾಗಿ ಅನಾವರಣವಾಗುತ್ತಿದೆ. ಮುಂದಿನ ಲೇಖನ ಸಿದ್ಧವಾದೊಡನೆ ತಿಳಿಸಿ.
ಇದು ನಾಡಿನ ಎಲ್ಲರೂ ಓದಬೇಕಾದ ಲೇಖನ.
ದೇವೇಗೌಡರಂತಹ ಎರಡು ಮುಖದ ರಾಜಕಾರಣಿಗಳು, ಯಡಿಯೂರಪ್ಪನಂತಹ ಎಡಬಿಡಂಗಿ ರಾಜಕಾರಣಿಗಳು-ಇಬ್ಬರೂ ಈ ನಾಡಿಗೆ ಅಪಾಯಕಾರಿಯೇ. ಅನುಮಾನವಿಲ್ಲ.
- ಬಿ.ಸುರೇಶ
Post a Comment