ಬೆಂಗಳೂರು ವಿವಿ ಕರ್ಮಕಾಂಡ



ಕಳೆದೊಂದು ವಾರದಿಂದ ಬೆಂ.ವಿವಿ ಯುದ್ಧಕಾಂಡವಾಗಿ ಮಾರ್ಪಟ್ಟಿರುವುದು ಸಕಲೆಂಟು ತಪ್ಪು ಕಾರಣಗಳಿಗಾಗಿ ಸುದ್ದಿಯಾಗಿರುವುದು ಎಲ್ಲರೂ ಬಲ್ಲ ವಿಚಾರವೇ. ಈ ಬಹಿರಂಗ ಯುದ್ಧಕ್ಕೆ ವೇದಿಕೆಯಾಗಿರುವುದು ವಿವಿಯ ರಿಜಿಸ್ಟ್ರಾರ್ಗಳ ನೇಮಕ ಮತ್ತವರ ಪದಗ್ರಹಣ. ಈ ಪ್ರಕರಣದಲ್ಲಿ ದೊಡ್ಡವರೆನಿಸಿಕೊಂಡಿದ್ದವರೆಲ್ಲರೂ ಚಿಕ್ಕವರಾಗಿ ನಡೆದುಕೊಂಡು ಇದ್ದ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿಸಿಕೊಂಡಿದ್ದಾರೆ. ಅಸಲಿಗೆ ಅಲ್ಲಿ ನಡೆದಿರುವುದಾದರೂ ಏನು? ಇಲ್ಲಿ ತಪ್ಪು ಯಾರದು? ಅಂತ ಹುಡುಕಲು ಹೊರಟರೆ ಬೆಂ.ವಿವಿಯಷ್ಟೇ ಏಕೆ ನಮ್ಮ ಇಡಿಯ ವಿವಿಗಳ, ಉನ್ನತ ಶಿಕ್ಷಣ ವ್ಯವಸ್ಥೆಯ ಹುಳುಕುಗಳೆಲ್ಲಾ ಹೊರಬರತೊಡಗುತ್ತವೆ.



ಉಪಕುಲಪತಿಗಳ ಕೆಳಗೆ ಮುಖ್ಯವಾಗಿ ಸರ್ಕಾರ ಇಬ್ಬರು ರಿಜಿಸ್ಟ್ರಾರ್ಗಳನ್ನು ನೇಮಿಸುತ್ತದೆ. ಅದರಲ್ಲಿ ಒಬ್ಬರು ರಿಜಿಸ್ಟ್ರಾರ್ ಇವ್ಯಾಲ್ಯುಯೇಷನ್ ಮತ್ತು ರಿಜಿಸ್ಟ್ರಾರ್ ಅಡ್ಮಿನಿಸ್ಟ್ರೇಷನ್. ಸಹಜವಾಗಿ ಉಪಕುಲಪತಿಗಳು ಮತ್ತು ಈ ಇಬ್ಬರು ರಿಜಿಸ್ಟ್ರಾರ್ಗಳದು ವಿವಿಯಲ್ಲಿ ಪ್ರಮುಖ ಪಾತ್ರ, ಇಡಿಯ ವಿವಿಯನ್ನು ನಿಯಂತ್ರಿಸುವುದು ಈ ಮೂವರ ಟೀಂ. ಆದರೆ ಈ ಮೂವರಲ್ಲೇ ಸಮನ್ವಯ ಇಲ್ಲದಿದ್ದರೆ? ವಿವಿ ಸುಗಮವಾಗಿ ನಡೆಯುವುದಾದರೂ ಎಂತು? ಇಂತಿಪ್ಪ ಈ ಇಬ್ಬರು ರಿಜಿಸ್ಟ್ರಾರ್ಗಳ ಜಾಗ ಬೆಂಗಳೂರು ವಿವಿಯಲ್ಲಿ ಕೆಲ ಸಮಯದಿಂದ ಖಾಲೀ ಬಿದ್ದಿದ್ದವು. ಮೊನ್ನೆ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಎಂ.ಜಿ.ಕೃಷ್ಣನ್ ಅವರನ್ನು ರಿಜಿಸ್ಟ್ರಾರ್ (ಆಡಳಿತ)ವಾಗಿಯೂ, ಪ್ರೊ.ಎಂ.ಎಸ್. ತಳವಾರ್ ಅವರನ್ನು ರಿಜಿಸ್ಟ್ರಾರ್ (ಪರೀಕ್ಷೆ) ಯಾಗಿಯೂ ನೇಮಕ ಮಾಡಿದೆ.

ಕುಂತಲ್ಲೇ ಪ್ರಭುದೇವ ಕುದ್ದು ಹೋಗಿದ್ದಾರೆ, ಮೇಲಾಗಿ ಬೆವೆತು ಹೋಗಿದ್ದಾರೆ. ಕೂಡಲೇ ಯಡ್ಯೂರಪ್ಪನವರನ್ನು ಹಿಡಿದು ಇವರಿಬ್ಬರ ನೇಮಕಾತಿಯನ್ನು ತಡೆಹಿಡಿಯಲು ಶತ ಪ್ರಯತ್ನ ನಡೆಸಿದ್ದಾರೆ. ಪಾಪಾ ರೆಡ್ಡಿಗಳ ಚಿಂತೆಯಲ್ಲಿ ಕಂಠ ಮಟ್ಟ ಮುಳುಗಿದ್ದ ಯಡ್ಯೂರಪ್ಪನವರಿಗೆ ಸರಿಯಾಗಿ ಕೇಳಿಸಿತೋ ಇಲ್ಲವೋ? ಅಂತೂ ಪ್ರಭುದೇವ ಯಡ್ಯೂರಪ್ಪನವರ ಕಿವಿ ಕಚ್ಚಿ ಬಂದಿದ್ದಾರೆ. ಆದರೆ ಇದು ಯಾವುದೇ ಫಲ ನೀಡಿಲ್ಲ ಎನ್ನುವುದನ್ನರಿಯಲು ಪ್ರಭುದೇವ ತುಂಬಾ ಕಾಯಬೇಕೇನಿರಲಿಲ್ಲ. ಮರುದಿನವೇ ಎಂ.ಜಿ.ಕೃಷ್ಣನ್ ಮತ್ತು ತಳವಾರ್ ರಿಜಿಸ್ಟ್ರಾರ್ಗಳಾಗಿ charge ತೆಗೆದುಕೊಳ್ಳಲು ಅಣಿಯಾಗಿ ಬಂದಿದ್ದಾರೆ. ಈ ಸನ್ನಿವೇಶವನ್ನು ತಡೆಯಲು ಶಥಪಥ ತಿರುಗಾಡಿದ್ದ ಪ್ರಭುದೇವರಿಗೆ, ಆ ಸನ್ನಿವೇಶ ಎದುರಾದಾಗ ಏನು ಮಾಡುವುದೆಂದು ತೋಚಿಲ್ಲ ಅಂತ ಕಾಣುತ್ತೆ. ರಿಜಿಸ್ಟ್ರಾರ್ ರೂಮುಗಳಿಗೆ ಬೀಗ ಜಡಿದು, charge ಕೊಡುವುದಕ್ಕೆ ನಿರಾಕರಿಸಿ ಬಿಟ್ಟಿದ್ದಾರೆ. ವಿವಿಯಲ್ಲಿ ಕೂಡಲೇ ಪ್ರತಿಭಟನೆಗಳಾಗಿವೆ, ಧರಣಿಗಳಾಗಿವೆ. ಪ್ರಭುದೇವ ಸ್ವಜಾತಿ ಪ್ರೇಮ ತೋರಿಸುತ್ತಿದ್ದಾರೆಂದೂ, ಇತರ ಜಾತಿಯವರನ್ನು ತುಳಿಯುತ್ತಿದ್ದಾರೆಂದೂ ದೂರಿದ್ದಾರೆ. ಪ್ರಭುದೇವರ ವಿರುದ್ಧ ಇದ್ದ ಅಸಮಾಧಾನದ ಕಟ್ಟೆಯೊಡೆದಿದೆ. ಈ ಉಪಕುಲಪತಿಗಳು ನಮಗೆ ಬೇಡ, ಇವರನ್ನು ಬದಲಾಯಿಸಬೇಕು ಎನ್ನುವಲ್ಲಿಯವರೆಗೆ ಘೋಷಣೆಗಳು ಹೋಗಿವೆ. ಕೂಡಲೇ ಡ್ಯಾಮೇಜು ಕಂಟ್ರೊಲ್ ಮೋಡ್ಗೆ ಇಳಿದ ಪ್ರಭುದೇವ ತಾನು ರಿಜಿಸ್ಟ್ರಾರ್ಗಳು charge ತೆಗೆದುಕೊಳ್ಳುವುದನ್ನು ನಿಲ್ಲಿಸಿಲ್ಲವೆಂದೂ, ಇದಕ್ಕೂ ಜಾತಿಗೂ ಯಾವುದೇ ವಿಧದ ಸಂಬಂಧವಿಲ್ಲವೆಂದೂ, ರಿಜಿಸ್ಟ್ರಾರ್ಗಳ ನೇಮಕಾತಿಯ ಆದೇಶ ಇನ್ನೂ ನನ್ನ ಕೈಸೇರಿಲ್ಲವಾದ್ದರಿಂದ ಅದು ಬರುವವರೆಗೂ ತಡೆಯಿರಿ ಎಂದಷ್ಟೇ ಹೇಳಿದೆ, ಎಂದೂ ಗಿಳಿಯಂತೆ ಉಲಿಯಲಾರಂಭಿಸಿದರು. ಆದರೆ ಇದೊಂದು ಪಿಳ್ಳೆ ನೆವ ಎನ್ನುವುದು ಅಷ್ಟರಲ್ಲಿ ಸುಸ್ಪಷ್ಟವಾಗಿ ಹೋಗಿತ್ತು.


ಹಾಗಾದರೆ ಪ್ರಭುದೇವ ಯಾಕೆ ಹೀಗೆಲ್ಲಾ ನಡೆದುಕೊಂಡರು? ಅಂತ ಕೆದುಕುತ್ತಾ ಹೋದರೆ ನಮಗೆ ಸಿಗುವ ಒಂದೇ ಉತ್ತರ ಜಾತಿ - ಕೆಟ್ಟ ಜಾತಿ ರಾಜಕಾರಣ. ಪ್ರಭುದೇವರಿಗೆ ಸ್ವಜಾತಿ ಪ್ರೇಮ ಕೊಂಚ ಹೆಚ್ಚು ಎನ್ನುವುದು ಅವರ ಮೇಲೆ ಅನಾದಿಕಾಲದಿಂದಲೂ ಇರುವ ಆರೋಪ. ಅವರ ಕೆರಿಯರ್ನುದ್ದಕ್ಕೂ ಜಾತಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇವರಿಗಿಂತಲೂ ಹಿರಯರು ಅನೇಕರಿದ್ದರೂ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪ್ರಭುದೇವರನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ನೇಮಿಸಿದ್ದೇ ಇವರು ಲಿಂಗಾಯತರು ಎಂಬ ಕಾರಣಕ್ಕೆ ಎಂಬ ಗುಸುಗುಸು ನಡೆದಿತ್ತು. ನಂತರ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕುಂತ ಪ್ರಭುದೇವ ಅಲ್ಲಿ ಜಾತಿಯಾಧಾರಿತ ಗುಂಪುಗಾರಿಗೆ ಮತ್ತು ಸ್ವಜಾತಿಪ್ರೇಮದಲ್ಲಿ ತೊಡಗಿಸಿಕೊಂಡರು. ಅಲ್ಲಿನ ಒಕ್ಕಲಿಗ ಲಾಬಿ ಇವರ ವಿರುದ್ಧ ನಿಂತು ಬಡಿದಾಡಿತು. ಅಷ್ಟರಲ್ಲಿ ಪಟೇಲರ ಸರ್ಕಾರ ಬಿದ್ದು, ಕೃಷ್ಣ ಬಂದಿದ್ದರು. ಒಕ್ಕಲಿಗ ಲಾಬಿಗೆ ನೂರಾನೆಯ ಬಲ ಬಂತು. ಪ್ರಭುದೇವರ ವಿರುದ್ಧ ಅನೇಕ ಆರೋಪಗಳನ್ನು ಮಾಡಲಾಯಿತು, ಲೋಕಾಯುಕ್ತ ತನಿಖೆ ನಡೆಯಿತು, ವಿಧಾನಸಭೆಯಲ್ಲೂ ಈ ವಿಷಯಗಳು ದೊಡ್ಡದಾಗಿ ಚರ್ಚೆಗೊಳಗಾಯಿತು, ಅಂತೂ ಜಯದೇವ ಆಸ್ಪತ್ರೆಯಲ್ಲಿ ಪ್ರಭುದೇವರ ಬದುಕನ್ನು ನಿತ್ಯ ನರಕವಾಗಿಸಿಬಿಟ್ಟಿತು ಈ ಲಾಬಿ. ನಂತರ ಮತ್ತೆ ಲಿಂಗಾಯಿತ ಲಾಬಿಯ ಮುಖಾಂತರ ಪ್ರಭುಧೇವ ಆಶ್ಚರ್ಯಕರ ರೀತಿಯಲ್ಲಿ ಬೆಂಗಳೂರು ವಿವಿಯ ಉಪಕುಲಪತಿಗಳಾಗಿ ಬಂದು ಕುಂತರು. ಇಲ್ಲಿ ಕೂಡ ಅವರು ಸ್ವಜಾತಿಪ್ರೇಮವನ್ನು ಬಿಡಲಿಲ್ಲ. ತಮ್ಮ ಜಾತಿಯವರನ್ನೆಲ್ಲರನ್ನೂ ಒಲಿಸಿಟ್ಟುಕೊಂಡರೆ, ಇಲ್ಲಿ ತನ್ನ ಆಡಳಿತ ಸುಗಮವಾಗಲಿದೆ ಎಂಬ ಭ್ರಮೆಯಲ್ಲಿದ್ದ, ಪ್ರಭುದೇವ ತಮ್ಮ ಸುತ್ತಾ ಲಿಂಗಾಯತರದೇ ಒಂದು ಕೋಟೆ ಕಟ್ಟಿಕೊಂಡರು. ಪ್ರಭುದೇವರ ಮತ್ತೊಂದು ಬಲಹೀನತೆಯೆಂದರೆ, ಅವರು ತಮ್ಮ ಸುತ್ತಾ ಸದಾ ಹೌದಪ್ಪಗಳನ್ನು ನೆರೆಸುತ್ತಾರೆ, ಮತ್ತು ಅವರದು ಹಿತ್ತಾಳೆ ಕಿವಿ. ಬೆಂ.ವಿವಿಯಲ್ಲಿ ಪ್ರಭುದೇವರ ವಿರುದ್ಧ ಅಸಮಾಧಾನ ಈ ಮಟ್ಟಕ್ಕೆ ಬೆಳೆಯಲು ಈ ಎಲ್ಲವೂ ಕಾರಣ. ವಿವಿ ನಿಯಮಗಳಿಗೆ ಮೀರಿ ಪ್ರಭುದೇವ ಆಡಳಿತಾತ್ಮಕ ಮಂಡಳಿಯೊಂದನ್ನು ರಚಿಸಿದ್ದು, ಅದರಲ್ಲಿ ಎಲ್ಲರೂ ಶಿವಶರಣರೇ, ಹೌದಪ್ಪಗಳೇ. ಎಂದೋ ನಿವೃತ್ತಿ ಹೊಂದಿದ್ದ ಮರಳುಸಿದ್ದಯ್ಯ ಎಂಬ ಅಧಿಕಾರಿಯನ್ನು ಕರೆತಂದು ಖಾಸಗೀ ಸೆಕ್ರೆಟರಿಯಾಗಿ ನೇಮಿಸಿಕೊಂಡಿದ್ದಾರೆ. ಹೀಗೆ ಎಲ್ಲವೂ ಅವರಿಗೆ ತೋಚಿದಂತೆ!

ಬೆಂ.ವಿವಿಯಲ್ಲೇನು ಜಾತಿ ರಾಜಕಾರಣಕ್ಕೆ ಕೊರತೆಯೇ? ಪ್ರಭುದೇವ ಬರುವುದಕ್ಕೂ ಮುಂಚೆಯೇ ಇದು ಹಳಸಿದ್ದ ಅನ್ನ. ಇಲ್ಲಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಹೀಗೆ ಮೂರು ಹಂತಗಳಲ್ಲಿ ಜಾತೀವಾರು ಗುಂಪುಗಳಿವೆ, ಮತ್ತು ಸಾಧಾರಣವಾಗಿ ಘರ್ಷಣೆಗಳಿವೆ. ಇಂತಹ ವಾತಾವರಣದಲ್ಲಿ ಪ್ರಭುದೇವ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿತ್ತು. ಆದರೆ ಅವರು ಲಿಂಗಾಯಿತರ ಕೋಟೆ ಕಟ್ಟಿದರು. ಇತರರನ್ನು ನಿರ್ಲಕ್ಷಿಸಿದರು. ಅಸಮಾಧಾನ ಮೂಟೆ ಕಟ್ಟ ತೊಡಗಿದ್ದೇ ಆವಾಗ. ಈಗ ರಿಜಿಸ್ಟ್ರಾರ್ಗಳಾಗಿ ಬಂದಿದ್ದಾರಲ್ಲ ಎಂ.ಜಿ.ಕೃಷ್ಣನ್ ಅವರು ಒಕ್ಕಲಿಗರು, ಮೇಲಾಗಿ ಮದ್ದೂರಿನವರು! ಇನ್ನು ತಳವಾರ್ ಹಿಂದುಳಿದ ಜನಾಂಗಕ್ಕೆ ಸೇರಿದವರು. ಪ್ರಭುದೇವ ಗಾಬರಿಗೊಂಡಿರುವುದೇ ಎಂ.ಜಿ.ಕೃಷ್ಣನ್ ಅವರ ನೇಮಕಾತಿಯಿಂದ. ಕೃಷ್ಣನ್ ಒಕ್ಕಲಿಗ ಲಾಬಿಯ ಮುಖವಾಡ ಎಂಬುದು ಪ್ರಭುದೇವಾರ ಅಭಿಪ್ರಾಯ. ಇದು ಒಂದು ಮಟ್ಟಿಗೆ ನಿಜವೂ ಹೌದು. ಪ್ರಭುದೇವ ಬೆವೆತಿರುವುದೇ ಇಲ್ಲಿ. ಅವರನ್ನು ಜಯದೇವ ಆಸ್ಪತ್ರೆಯ ಅನುಭವ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಅದಕ್ಕಾಗಿ ಇಷ್ಟೆಲ್ಲಾ ರಾದ್ಧಾಂತ ಮಾಡಿಕೊಂಡಿದ್ದಾರೆ.

ಈಗ ನೇಮಕವಾಗಿರುವ ರಿಜಿಸ್ಟ್ರಾರ್ಗಳಿಬ್ಬರು ಎಂ.ಜಿ.ಕೃಷ್ಣನ್ ಮತ್ತು ತಳವಾರ್, ಇಬ್ಬರೂ ಹಿರಿಯರು, ಅರ್ಹರೂ ಕೂಡ ಅಂತ ಮೇಲ್ನೊಟಕ್ಕೇ ಅನ್ನಿಸುತ್ತದೆ. ಆದರೆ ವಿಷಯ ಅಷ್ಟು ಸರಳವಲ್ಲ. ಒಕ್ಕಲಿಗ ಲಾಬಿಯ ಮುಖವಾಡ ಎಂಬುದು ಎಂ.ಜಿ.ಕೃಷ್ಣನ್ ವಿರುದ್ಧ ಇರುವ ಪ್ರಮುಖ ಆರೋಪ. ಇದಲ್ಲದೇ ಅವರದೂ ಕೂಡ ಗುಂಪುಗಾರಿಕೆ, ಸ್ವಜಾತಿಪ್ರೇಮ ಎರಡೂ ಅತಿ ಎನಿಸುವಷ್ಟು ಹೆಚ್ಚು ಎನ್ನುವುದು ಆಪಾದನೆ. ಇನ್ನು ತಳವಾರ್, ಇವರ ವಿರುದ್ಧ ಅನೇಕ ವಿಚಾರಣೆಗಳು ನಡೆದು, ಇನ್ನೇನು ಕ್ರಮ ಕೈಗೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಹೋಗಿತ್ತು ವಿಷಯ. ಇಂತಹವರನ್ನು ಇಷ್ಟು ತರಾತುರಿಯಲ್ಲಿ ರಿಜಿಸ್ಟ್ರಾರ್ಗಳಾಗಿ ನೇಮಿಸುವ ಅವಶ್ಯಕತೆಯಾದರೂ ಏನಿತ್ತು ಸರ್ಕಾರಕ್ಕೆ?

ಇಲ್ಲಿ ಎರಡೂ ಕಡೆಗಳಿಂದಲೂ ತಪ್ಪು ನಡೆದಿದೆ, ಅದರೆ ಸರ್ಕಾರದ ಆದೇಶವನ್ನು ಪುರಸ್ಕರಿಸದೇ ಉಪಕುಲಪತಿಗಳಾದ ಪ್ರಭುದೇವ ಅವರು ದೊಡ್ಡ ತಪ್ಪು ಮಾಡಿದ್ದಾರೆ. ಅದಕ್ಕವರು ಅನುಭೋಗಿಸಲೇ ಬೇಕಾಗುತ್ತದೆ. ಇನ್ನು ರಿಜಿಸ್ಟ್ರಾರ್ಗಳು ಶಿಕ್ಷಣ ಇಲಾಖೆಯ ಕಾರ್ಯದರ್ಶಿಯ ಮಧ್ಯಸ್ಥಿಕೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಭುದೇವ ದೆಹಲಿಗೆ ಹಾರಿದ್ದಾರೆ! ಯಾಕೆ ಅಂತೀರಾ? ಅಲ್ಲಿ ಆಲ್ ಇಂಡಿಯ ಮೆಡಿಕಲ್ ಕೌನ್ಸಿಲ್ನ ಅಧ್ಯಕ್ಷ ಪದವಿಗೆ ತಮ್ಮನ್ನು ತರುವಂತೆ ಅವರಿವರನ್ನು ಹಿಡಿದು ಲಾಬಿ ನಡೆಸುತ್ತಿದ್ದಾರೆ, ಅಂತ ಗುಸುಗುಸು! ಅದೇನಾದರೂ ಕೈಗೂಡಿಬಿಟ್ಟರೆ ಯಾವನಿಗೆ ಬೇಕು ಈ ಬೆಂ.ವಿವಿ ಉಪಕುಲಪತಿ ಪಟ್ಟ ಅನ್ನೋದು ಅವರ ಯೋಚನಾಲಹರಿಯಾಗಿರಬಹುದು.

ವಿಶ್ವವಿದ್ಯಲಯದಲ್ಲಿ ಬರಿಯ ಲಿಂಗಾಯತರಿಲ್ಲ, ಒಕ್ಕಲಿಗರಿಲ್ಲ. ಹಿಂದುಳಿದ ವರ್ಗಗಳಿಗೆ ಸೇರಿದವರಿಂದ ಹಿಡಿದು ಎಲ್ಲ ಸ್ತರದ, ಜಾತಿಯ ಜನಾಂಗದವರೂ ಇದ್ದಾರೆ. ಉನ್ನತ ಶಿಕ್ಷಣದ ಮೌಲ್ಯಗಳನ್ನು ಸಾರುವ, ಸಾರಬೇಕಾದ ವಿವಿ ಇಂದು ಜಾತಿ ರಾಜಕಾರಣದ ಅಡ್ಡೆಯಾಗಿರುವುದು ಮಾತ್ರ ದುರ್ದೈವ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ, ಅನ್ನೋ ಹಾಗೆ ಬೆಂ.ವಿವಿ ಉದ್ಧಾರ ಆಗೋ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಪರಿಸ್ಥಿತಿ ಬರಿಯ ಬೆಂ.ವಿವಿಗೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಎಲ್ಲ ವಿವಿಗಳದೂ ಇದೇ ಗೋಳೇ! ಇದು ನಮ್ಮ ನಾಡಿನ ದುರ್ದೈವ.

6 thoughts on “ಬೆಂಗಳೂರು ವಿವಿ ಕರ್ಮಕಾಂಡ

Anonymous said...

vaastavada chitrana, utpreekshe illade takka padagalalli bimbisiddira. muula styavannu grahisi hididu heluva pari mechchunantahudu. abhinandanegalu.

Anonymous said...

thimmappa m s.

b.suresha said...

ಇದು ಈ ದೇಶದ ಪರಿಸ್ಥಿತಿ... ಎಪ್ಪತ್ತರ ದಶಕದಿಂದ ಆರಂಭವಾದ ಈ ಜಾತಿ ರಾಜಕಾರಣ ಇಂದು ಇಡೀ ದೇಶವನ್ನು ತಿನ್ನುತ್ತಿದೆ.
ಕನಿಷ್ಟ ಶಿಕ್ಷಣವಾದರೂ ಈ ಜಾತಿ ರಾಜಕಾರಣದಿಂದ ದೂರ ಉಳಿಯಬೇಕಿತ್ತು. ಅದಕ್ಕೂ ಈ ರೋಗ ಬಡಿದಿದೆ ಅಂದರೆ ಇನ್ನೂ ನಮ್ಮ ದೇಶದ ಬುಡಕ್ಕೇ ಬೆಂಕಿ ಬಿದ್ದಂತೆ.
ಈ ರೋಗ ವಾಸಿಯಾಗುವುದಕ್ಕೆ ಕನಿಷ್ಟ ಎರಡು-ಮೂರು ತಲೆಮಾರು ಕಳೆಯಬೇಕೇನೋ?

ಜಲನಯನ said...

ಆದಿತ್ಯ...ಜಾತಿ ಒಂದು ಭೂತವಾಗಿ ಪರತಿಭೆಗಳನ್ನು ನುಂಗುತ್ತಿದೆ ಎಂದರೆ ತಪ್ಪಿಲ್ಲ...ಯಾರ ಪ್ರಾಭಲ್ಯ್ ಎಲ್ಲಿರುತ್ತೋ ಅಲ್ಲಿ ಅವರೇ ಮೆರೆಯೋದು...ಆದರೆ..ಇತರ ಪ್ರತಿಭೆಗಳನ್ನು ತುಳಿಯುವುದು ತೀರಾ ಅನ್ಯಾಯ.....ದೂರದಿಂದಲೇ ನಾರುವಾಸನೆಯಿದ್ದರೆ...ಹತ್ತಿರವಿದ್ದು ನೋಡುವ ನಿಮಗೆಲ್ಲಾ ಹೇಗನಿಸಬೇಡ....??

shruts said...

chennagide ee article

Unknown said...

hi,this is srihari, your ncb freind. i hardly get any time & opportunity to browse the net these days. still iam sending this reply as i read this bng vv article, its well written & i completely agree with mr.b.suresh, (for what he had written in his reply).

Proudly powered by Blogger
Theme: Esquire by Matthew Buchanan.
Converted by LiteThemes.com.