ಕ್ರಿಕೆಟ್ ಕಳಕೊಂಡ ಇಬ್ಬರು ದೈತ್ಯರು

ಸಾಧಾರಣವಾಗಿ ಕ್ರಿಕೆಟ್ನಲ್ಲಿ ಆಟಗಾರರೇ ಸ್ಟಾರ್ಗಳು, ಸೂಪರ್ ಸ್ಟಾರ್ಗಳು. ಆದರೆ ವಿಶ್ವ ಕ್ರಿಕೆಟ್ ರಂಗದಲ್ಲಿ ಆಟಗಾರರಷ್ಟೇ ಇಲ್ಲ., ಇರಲಾರರು. ಅಲ್ಲಿ, ಕಾಮೆಂಟೇಟರುಗಳಿದ್ದಾರೆ, ಅಂಪೈರುಗಳಿದ್ದಾರೆ, ಟೆಕ್ನೀಷಿಯನ್ಗಳಿದ್ದಾರೆ, ಬರಹಗಾರರಿದ್ದಾರೆ, ಹೀಗೇ ಇನ್ನೂ ಸಾಕಷ್ಟು ಮಂದಿಯಿಂದ ಕೂಡಿದ ವ್ಯವಸ್ಥೆ ಈ ಜಾಗತಿಕ ಕ್ರಿಕೆಟ್ ರಂಗ. ಆದರೆ ಬಹುಪಾಲು ಇವರೆಲ್ಲಾ ತೆರೆಯ ಹಿಂದೆಯೇ ಕೆಲಸ ಮಾಡುವುದರಿಂದ ಆವರಾರೂ ಜನರ ಜೊತೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳುವುದೇ ಇಲ್ಲ. ಅಷ್ಟೆಲ್ಲಾ ಏಕೆ, ವಿಶ್ವ ಕ್ರಿಕೆಟ್ ರಂಗದ ಸೂಪರ್ ಸ್ಟಾರ್ಗಳಾರು ಅಂತ ತೆಗದು ನೋಡಿ, ಬಹುಪಾಲು ಅದರಲ್ಲಿ ಬ್ಯಾಟ್ಸಮನ್ಗಳೇ ಇರ್ತಾರೆ, ಇಲ್ಲೇ ಹೀಗಿರುವಾಗ ಇನ್ನು ಇಂತಹ ಮಿಕ್ಕವರ ಗತಿಯೇನು? ಆದರೆ ಇಲ್ಲಿಬ್ಬರು ಅಪವಾದಗಳಿದ್ದಾರೆ ನೋಡಿ. ಒಬ್ಬರು ದಂತಕಥೆಯಾದ ಅಂಪೈರು ಡೇವಿಡ್ ಶೆಪರ್ಡ್ ಮತ್ತು ಭಾರತದ ಅತ್ಯಂತ ಹಿರಿಯ ಕ್ರಿಕೆಟ್ ಬರಹಗಾರ ರಾಜನ್ ಬಾಲ. ಆದರೆ ಅತೀವ ದುಃಖದ ಸಂಗತಿಯೆಂದರೆ ಇವರಿಬ್ಬರ ಬಗ್ಗೆ ಮಾತನಾಡಲು ನಾವು ಕುಳಿತುಕೊಂಡಿರುವುದು ಅವರ ಸಾವಿನ ಸೂತಕದಲ್ಲಿ! ಹೌದು ಮೊನ್ನೆ ಡೇವಿಡ್ ಶೆಪರ್ಡ್ ಲಂಗ್ ಕ್ಯಾನ್ಸರ್ನಿಂದ ತಮ್ಮ 69ನೇ ವಯಸ್ಸಿಗೆ ತೀರಿಕೊಂಡರೆ, ಬೆಂಗಳೂರಿನವರೇ ಆದ ರಾಜನ್ ಬಾಲ ಅಕ್ಟೋಬರ್ ಎಂಟರಂದು ತೀರಿಕೊಂಡರು. ಇಬ್ಬರ ಸಾವೂ ಕೂಡ ನಮ್ಮ ಸೆಲಿಬ್ರಿಟಿ ಮೀಡಿಯಾದಲ್ಲಿ ಒಳಪುಟಗಳ box-item ಗಳಷ್ಟೇ ಆದದ್ದು ಮಾತ್ರ ವಿಷಾದ.

ಡೇವಿಡ್ ಶೆಪರ್ಡ್, ಆ ಹೆಸರು ಕೇಳಿದ ತಕ್ಷಣ ಹಲವರಿಗೆ ಹೊಲಗಳಲ್ಲಿ ನಿಲ್ಲಿಸಿರುವ ದೃಷ್ಟಿಬೊಂಬೆ ನೆನಪಾಗುತ್ತಿತ್ತು, ಕಲೆವರಿಗೆ ನಗು ಬರುತ್ತಿತ್ತು, ಆತನ ಸಾಮರ್ಥ್ಯ ಬಲ್ಲವರಿಗೆ ಗೌರವ ಮೂಡುತ್ತಿತ್ತು, ಅಂತೂ ಡೇವಿಡ್ ಶೆಪರ್ಡ್ ಅಂದರೆ ನಮಗೊಂದು ಆತ್ಮೀಯ ಭಾವ ಮೂಡುತ್ತಿತ್ತು. ಅವರ ಆ ಸ್ಥೂಲ ಕಾಯ, ಅದರ ಮೇಲಿನ ಆ ಗುಂಡು ಮೊಗ. ಒಟ್ಟಿನಲ್ಲಿ ಅವರನ್ನು ನೋಡಿದವರಿಗೆ ಲಾರೆಲ್ & ಹಾರ್ಡಿಯ, ಹಾರ್ಡಿಯನ್ನು ನೋಡಿದ ಹಾಗಾಗುತ್ತಿತ್ತು. ಒಬ್ಬ ಅಂಪೈರು ಹೀಗೂ ಇರಬಹುದೇ? ಅಂತ ಅನ್ನಿಸುವುದಿತ್ತು. ಆದರೆ ವೃತ್ತಿಗೆ ಸಂಬಂಧ ಪಟ್ಟಂತೆ ಡೇವಿಡ್ ಶೆಪರ್ಡ್ ನಿಜಕ್ಕೂ ದೈತ್ಯ. ಆತನ ಕೆರಿಯರ್ನುದ್ದಕ್ಕೂ ಎಂದಿಗೂ ವಿವಾದಕ್ಕೊಳಗಾದವರಲ್ಲ, ಯಾವುದೋ ಒಂದು ದೇಶದ ಪರ ನಿರ್ಧಾರ ಕೊಡುತ್ತಾರೆ ಅಂತ ಅನ್ನಿಸಿಕೊಂಡವರಲ್ಲ. ಅವರ ಅಂಪೈರಿಂಗೇ ಅತ್ಯಂತ ವಿಶಿಷ್ಟ. ಅವರು ಎಲ್ಲ ನಿರ್ಧಾರಗಳನ್ನೂ ನಿಧಾನವಾಗಿ ಆಲೋಚಿಸಿ ಅಳೆದು ತೂಗಿ ತೆಗೆದುಕೊಳ್ಳುತ್ತಿದ್ದರು. ಅವರು ಅಂಪೈರಿಂಗ್ಗೆ ನಿಂತರೆಂದರೆ ಅವರಷ್ಟು ಆ ಆಟವನ್ನು ಬಹುಶಃ ಆಟಗಾರರೂ ಎಂಜಾಯ್ ಮಾಡುತ್ತಿರಲಿಲ್ಲ, ಅಂತ ಕಾಣುತ್ತೆ, ಹಾಗಿತ್ತು ಅವರ ಕ್ರಿಕೆಟ್ ಪ್ರೀತಿ. ಈಗಿನ ಅಂಪೈರುಗಳಂತೆ ಅವರೆಂದೂ ಜಿಮ್ಗಳಲ್ಲಿ ಕಾಲ ಕಳೆದವರೇ ಅಲ್ಲ, ಅವರ ಸ್ಥೂಲ ಕಾಯವನ್ನೂ ಅವರು ಎಂಜಾಯ್ ಮಾಡುತ್ತಿದ್ದರು, ಅವರನ್ನು ಅವರೇ ಗೇಲಿ ಮಾಡಿಕೊಳ್ಳುತ್ತಿದ್ದರು, ತಮ್ಮ ವಿಶಿಷ್ಟ ಅಂಗ ಚೇಷ್ಟೆಗಳ ಮೂಲಕ ಜನರ ಮುಖದ ಮೇಲೆ ಒಂದು ಮಂದಹಾಸ ಮೂಡಿಸುತ್ತಿದ್ದರು. ಆಟದ ಸ್ಕೋರ್ 111, 222, 333...ಆದಾಗ, ಅದು ಶೆಪರ್ಡ್ ಟೈಮ್. ಈ ಸ್ಕೋರ್ಗಳು ಬ್ಯಾಟ್ಸಮನ್ಗಳಿಗೆ ದುರಾದೃಷ್ಟಕರ ಎಂಬುದು ಅವರ ನಂಬಿಕೆ. ಅದನ್ನು ಹೋಗಲಾಡಿಸಲವರು ಒಂದು ಕಾಲನ್ನು ಮೇಲೆತ್ತಿ ಒಂದು ಕುಣಿತ ಹಾಕುತ್ತಿದ್ದರು, ಅದನ್ನು ನೋಡೇ ಸವಿಯಬೇಕು. ಅವರು 1981ರಿಂದ ಅಂಪೈರಿಂಗ್ ಆರಂಭಿಸಿದರು. ಅಂದಿನಿಂದ ಅವರು 2005ರಲ್ಲಿ ನಿವೃತ್ತಿ ಹೊಂದುವವರೆಗೆ 172 ಒಡಿಐ ಮತ್ತು 82 ಟೆಸ್ಟ್ ಮ್ಯಾಚ್ಗಳಿಗೆ ಅಂಪೈರಿಂಗ್ ಮಾಡಿದ್ದರು. ಸತತ ಮೂರು ವಿಶ್ವಕಪ್ ಫೈನಲ್ಗಳಿಗೆ ಅಂಪೈರಿಂಗ್ ಮಾಡಿದ ಘನತೆ ಶೆಪರ್ಡ್ಗೆ ಮಾತ್ರ ಸ್ವಂತ. 2005ರ ನಿವೃತ್ತಿಯ ನಂತರ 2008ರಲ್ಲಿ ತಮ್ಮ ಚಿರಕಾಲ ಒಡನಾಡಿ ಜೆನ್ನಿಯನ್ನವರು ಮದುವೆಯಾಗಿದ್ದರು. ಆದರೆ ಅಷ್ಟರಲ್ಲಾಗಲೇ ಲಂಗ್ ಕ್ಯಾನ್ಸರ್ ಅವರನ್ನು ಕಿತ್ತು ತಿನ್ನಲಾರಂಭಿಸಿತ್ತು. ಕ್ಯಾನ್ಸರ್ ವಿರುದ್ಧ ಒಂದು ಸುಧೀರ್ಘ ಹೋರಾಟದ ನಂತರ ಶೆಪರ್ಡ್ ಮೊನ್ನೆ ಉಸಿರು ಚೆಲ್ಲಿಬಿಟ್ಟರು.

ಇನ್ನು ರಾಜನ್ ಬಾಲ. ಭಾರತದ ಅತ್ಯುನ್ನತ ಮಟ್ಟದ ಕ್ರಿಕೆಟ್ ಬರಹಗಾರ. ಅದಕ್ಕೂ ಮಿಗಿಲಾಗಿ ಅವರೊಬ್ಬ ಕ್ರಿಕೆಟ್ ರೊಮ್ಯಾಂಟಿಕ್. ಅವರಿಗೆ ಅದು ಬಿಟ್ಟರೆ ಬೇರೆ ಜಗತ್ತಿದ್ದಂತೆ ಅನ್ನಿಸುವುದಿಲ್ಲ. ಅವರು ಮೂಲತಃ ಒಬ್ಬ ಕ್ರಿಕೆಟಿಗ. ಅವರ ಯೌವನ್ನದ ದಿನಗಳಲ್ಲಿ ಯೂನಿವರ್ಸಿಟಿ ಲೆವೆಲ್ನಲ್ಲಿ ಆಡಿದವರವರು. ಆದ್ದರಿಂದ ಅವರಿಗೆ ಆಟದ ಬಗ್ಗೆ ಸಂಪೂರ್ಣ ನೈಪುಣ್ಯತೆ ಇತ್ತು. ನೈಪುಣ್ಯತೆ ಅಷ್ಟೇ ಅಲ್ಲ, ಇಡೀ ಆಟದ ಬಗ್ಗೆ ಅವರು ತಾಂತ್ರಿಕವಾಗಿ ಚರ್ಚಿಸಬಲ್ಲಷ್ಟು ಸಮರ್ಥರಾಗಿದ್ದರು. ಅವರ ಮೂಲ ಹೆಸರು ನಟರಾಜನ್ ಬಾಲಸುಬ್ರಮಣ್ಯಮ್. ಅವರು ಇಂಡಿಯನ್ ಎಕ್ಸ್ಪ್ರೆಸ್, ದಿ ಹಿಂದೂ ಮತ್ತು ಬಹುಕಾಲ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಕ್ರಿಕೆಟ್ ಕರೆಸ್ಪಾಂಡೆಂಟ್ ಆಗಿ, ನಂತರ ಸ್ಪೋರ್ಟ್ಸ್ ಎಡಿಟರ್ ಆಗಿ ಕೆಲಸ ನಿರ್ವಹಿಸಿದ್ದರು. ಅವರಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ, ಅವರೆಂದೂ ಕ್ರಿಕೆಟಿಗರ ಬಗ್ಗೆ ಬರೆಯುತ್ತಿರಲಿಲ್ಲ, ಅವರು ಬರೆಯುತ್ತಿದ್ದದ್ದು ಕ್ರಿಕೆಟ್ನ ಬಗ್ಗೆ. ಒಬ್ಬ ಆಟಗಾರನಲ್ಲಿ ಪ್ರತಿಭೆಯಿದೆ ಅಂತ ಅವರು ಗುರುತಿಸಿದರೆಂದರೆ ಆತನ ಪ್ರದರ್ಶನದ ಹೊರತಾಗಿಯೂ ಅವರು ಆತನನ್ನು ಪ್ರಮೋಟ್ ಮಾಡುತ್ತಿದ್ದರು. ಗವಾಸ್ಕರ್, ಸಚಿನ್, ವಾಡೇಕರ್ ಹೀಗೆ ಇನ್ನೂ ಅನೇಕ ಮಂದಿಯನ್ನು ದಂತಕಥೆಗಳನ್ನಾಗಿ ರೂಪಿಸುವಲ್ಲಿ ರಾಜನ್ ಬಾಲಾರ ಪೆನ್ನಿನ ಪಾತ್ರ ಬಹಳ ಹಿರಿದು. ಇಂತಹ ರಾಜನ್ ಬಾಲ ತಿಂಗಳ ಹಿಂದೆ ನ್ಯೂಸ್-9 ಛಾನೆಲ್ಲಿನಲ್ಲಿ ಕ್ರಿಕೆಟ್ ಅನಾಲಿಸಿಸ್ ಮಾಡುತ್ತಿದ್ದಾಗ ಅಲ್ಲೇ ಅವರಿಗೆ ಹೃದಯಾಘಾತವಾಗಿ, ಅವರು ಕೋಮಾಗೆ ಸರಿದುಬಿಟ್ಟರು. ಆದರೆ ಅವರು ಮತ್ತೆಂದೂ ಕಣ್ಣು ಬಿಡದಿದ್ದುದು ಮಾತ್ರ ದುಃಖಕರ.

One thoughts on “ಕ್ರಿಕೆಟ್ ಕಳಕೊಂಡ ಇಬ್ಬರು ದೈತ್ಯರು

umesh desai said...

ಆದಿತ್ಯ ಶೆಪರ್ಡ ಒಬ್ಬ ಅಪರೂಪದ ಅಂಪೈರ ಕ್ರಿಕೆಟ ಒಬ್ಬ ವಿಶಿಷ್ಟ ಅನುಭೂತಿ ಕಳಕೊಂಡಿದೆ ೧೧೧,೨೨೨,೩೩೩ ಈ ಸ್ಕೋರು
ಬಂದಾಗಲೆಲ್ಲ ಇನ್ನು ಮುಂದೆ ಶೆಪರ್ಡ ನೆನಪಾಗ್ತಾರೆ....!

Proudly powered by Blogger
Theme: Esquire by Matthew Buchanan.
Converted by LiteThemes.com.