ಆಗಸದ ಆಘಾತ

ಭವ್ಯ ಭಾರತದ ಎಲ್ಲ ಖಾಸಗೀ ವಿಮಾನಯಾನ ಸಂಸ್ಥೆಗಳೂ ಆಗಸ್ಟ್ 18ರಂದು ತಮ್ಮೆಲ್ಲಾ ಹಾರಾಟಗಳನ್ನು ನಿಲ್ಲಿಸುತ್ತವಂತೆ! ಇದು ಸರ್ಕಾರದ ಗಮನ ಸೆಳೆಯಲು ಅವರಿಗುಳಿದಿರುವ ಏಕೈಕ ಮಾರ್ಗವಂತೆ! ಮೊನ್ನೆ ಒಳ್ಳೆವರ ಮಹಾಲಕ್ಷ್ಮಿ ಹಬ್ಬದ ದಿನ ಭಾರತದ ಖಾಸಗೀ
ವಿಮಾನಯಾನ ಸಂಸ್ಥೆಗಳು, ಸರ್ಕಾರದ ಬಾಗಿಲಿಗೆ ಪಾಪರ್ ಚೀಟಿ ಅಂಟಿಸಿ ಚೀರಾಡುತ್ತಿದ್ದರು. ಯಾಕೋ ವರಮಹಾಲಕ್ಷ್ಮಿಯ ಕೃಪೆಯಿದ್ದ ಹಾಗಿಲ್ಲ ವಿಮಾನಯಾನಕ್ಕೆ. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ದೇಶದ ಎಲ್ಲ ಖಾಸಗಿ ವಿಮಾನಯಾನ ಸಂಸ್ಥೆಗಳು ಫೆಡರೇಷನ್ ಫಾರ್ ಇಂಡಿಯನ್ ಏರ್ಲೈನ್ಸ್ ಹೆಸರಿನಲ್ಲಿ ಒಗ್ಗೂಡಿ ಸರ್ಕಾರಕ್ಕೆ ಧಮಕಿ ಹಾಕುತ್ತಿದ್ದಾರೆ. ಇವರಿಗೆಲ್ಲ

ನಮ್ಮ ವಿಜಯ ಮಲ್ಯನೇ ನಾಯಕನಿದ್ದ ಹಾಗೆ ಕಾಣುತ್ತದೆ. ವಿಶ್ವದಾದ್ಯಂತ ಖಾಸಗಿ ವಿಮಾನಯಾನ ಸಂಸ್ಥೆಗಳು ಮತ್ತು ಸರ್ಕಾರಗಳ ನಡುವಿನ ಸಂಬಂಧಗಳು ಅಷ್ಟೇನೂ ಸುಸೂತ್ರವಾಗಿಲ್ಲವಾದರೂ, ಹೀಗೆ ಇಡೀ ಉದ್ಯಮವನ್ನು ನಿಲುಕಡೆಗೆ ತರುತ್ತೇವೆಂಬ ಬೆದರಿಕೆ ವಿಶ್ವದ ವಿಮಾನಯಾನ ಇತಿಹಾಸದಲ್ಲಿ ಇದೇ ಮೊದಲಿರಬೇಕು. ಎರಡನೇ ಅಭಿಪ್ರಾಯವೇ ಇಲ್ಲ, ಇದರಷ್ಟು ಬೇಜವಾಬ್ದಾರಿಯುತ ತಿಕ್ಕಲು ಕೆಲಸ ಮತ್ತೊಂದಿರಲಾರದು.
ಸರ್ಕಾರ ಇಂತಹ ಧಮಕಿಗಳಿಗೆಲ್ಲ ಬಾಗಬಾರದು. ಸರ್ಕಾರವೂ ಖಡಕ್ ಆಗಿ ನಡೆದುಕೊಂಡು ಒಂದೊಮ್ಮೆ ಸ್ಟ್ರೈಕನ್ನು ನಡೆಸುದುದೇ ಆದರೆ ಏಸ್ಮಾ ಪ್ರಯೋಗಿಸುತ್ತೇವೆ ಎಂಬ ಬೆದುರಿಸುವುದರೊಂದಿಗೆ ಕಂಪೆನಿಗಳು ತಮ್ಮ ನಿರ್ಧರವನ್ನು ಕೈಬಿಟ್ಟಿವೆ.


ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಹಾಗೆಲ್ಲ ಹಣ ಸಹಾಯ ಮಾಡುವುದಿಲ್ಲ, ಮುಕ್ತ ಮಾರುಕಟ್ಟೆಯ ಆಧಾರದಲ್ಲಿ ವಿಮಾನಯಾನ ಕ್ಷೇತ್ರವನ್ನು ಮುಕ್ತಗೊಳಿಸಲಾಗಿದೆ. ಇನ್ನು ಅಲ್ಲಿನ ಖಾಸಗಿ ಕಂಪೆನಿಗಳು ಮಾರುಕಟ್ಟೆಗನುಗುಣವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅವುಗಳಿಗೆ ನಷ್ಟವಾದರೆ ಅದಕ್ಕೆ ಸರ್ಕಾರವೇನು ಮಾಡಲಿಕ್ಕಾಗುತ್ತದೆ? ಲಾಭ ಬಂದಾಗೇನು ಸರ್ಕಾರಕ್ಕೆ ಕೊಟ್ಟರಾ? ನಷ್ಟವನ್ನು ಸರ್ಕಾರ ಹಂಚಿಕೊಳ್ಳಬೇಕೆಂದು ಬಯುಸುವಿರೇ ಇದು
ನ್ಯಾಯವಾ? ಎಂದು ಕೇಳಿರುವ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರ ಮಾತುಗಳನ್ನು ಒಪ್ಪಲೇ ಬೇಕು. ಆದರೆ ಇದು ಅರ್ಧ ಸತ್ಯ! ಪೂರ್ಣ ಸತ್ಯದ ದರ್ಶನಕ್ಕೆ ನಾವು ವಿಮಾನಯಾನದ ಒಳಹೊಕ್ಕು ಅವಲೋಕಿಸಬೇಕು. ಅಲ್ಲಿ ನಮಗೆ ಕಾಣಿಸುವುದು ಆರ್ಥಿಕ ಹಿಂಜರಿತ, ವಿಮಾನಯಾನ ಕುಸಿತ, ಸರ್ಕಾರದ ತಿಕ್ಕಲುಗಳು, ದ್ವಂದ್ವಗಳು, ಶತಕೋಟಿ ಕುಳಗಳ ಅಸಹಾಯಕತೆ, ಅದನ್ನು ಅರಗಿಸಿಕೊಳ್ಳಲಾಗದ ಧಿಮಾಕು....


ಸ್ವತಂತ್ರ್ಯ ಭಾರತದ ಏಕಮಾತ್ರ ವಿಮಾನಯಾನ ಸಂಸ್ಥೆಯಾಗಿ ಸುಮಾರು 5 ದಶಕಗಳ ಮೆರೆದಿದ್ದು ಏರ್ ಇಂಡಿಯಾ. 77ರಲ್ಲಿ ಹಸ್ತಿನೆಯ ಕೊಬ್ಬಿದ ಅಧಿಕಾರಶಾಹಿಯ ವಶವಾದ ಇದು ಅಧೋಗತಿ ತಲುಪಿತು. ಅಲ್ಲಿ ಈ ಜುಲೈ ತಿಂಗಳ ಸಂಬಳವನ್ನು 2 ವಾರಗಳ ಕಾಲ ತಡೆಹಿಡಿಯಲಾಗಿತ್ತು. ಆಗಸ್ಟ್ನ ಸಂಬಳದ ಸುಳಿವೇ ಇಲ್ಲ. ಏರ್ ಇಂಡಿಯಾ ಇಂದು ಅಕ್ಷರಶಃ ಮುಳುಗುವ ಹಡಗು!
2000ದ ನಂತರ ವಿಮಾನಯಾನ ಕ್ಷೇತ್ರವನ್ನು ಮುಕ್ತಗೊಳಿಸಲಾಯಿತು. ಬರಬರುತ್ತಾ ಖಸಗೀ ವಿಮಾನಯಾನ ಸಂಸ್ಥೆಗಳು ತಲೆಯೆತ್ತಲಾರಂಭಿಸಿದವು. ಅಲ್ಲಿವರೆಗೂ ಏರ್ ಇಂಡಿಯಾದ ದರ್ಪದಿಂದ ಬೇಸತ್ತ ಭಾರತೀಯ ಪ್ರಯಾಣಿಕನಿಗೆ ಮುಕ್ತ ಅವಕಾಶ ದೊರೆಯಿತು. ಈ ಕಂಪೆನಿಗಳು ಸ್ಪರ್ಧೆಗೆ ಬಿದ್ದು ಒಬ್ಬರಿಗಿಂತ ಒಬ್ಬರು ಕಡಿಮೆ ದರಗಳಲ್ಲಿ ಉತ್ತಮ ಸೇವೆಯನ್ನು ನೀಡತೊಡಗಿದರು. ಭರತದ ವಿಮಾನಯಾನ ಕ್ಷೇತ್ರ ಗುರತೇ ಸಿಗದಂತೆ ಬದಲಾಗಿಬಿಟ್ಟಿತು. ಭಾರತದಲ್ಲಿಂದು ಇರುವ ಖಾಸಗೀ ವಿಮಾನಯಾನ ಕಂಪೆನಿಗಳು ಒಂದೇ ಎರಡೇ - ಮಲ್ಯನ ಕಿಂಗ್ಫಿಷರ್, ಗೋಯಲ್ರ ಜೆಟ್ ಏರ್ವೇಸ್ ಇವುಗಳಲ್ಲಿ ಪ್ರಮುಖವಾದುವು. ಇನ್ನು ಸ್ಪೈಸ್ ಜೆಟ್, ಸಹರಾ, ಇಂಡಿಗೋ, ಜೆಟ್ಲೈಟ್, ಗೋಏರ್..ಈ ಎಲ್ಲವೂ ಸೇರಿ ಭಾರತದ ಸ್ವದೇಶೀ ಮಾರುಕಟ್ಟೆಯ ಅರ್ಧ ಭಾಗವನ್ನು ನಿಯಂತ್ರಿಸುತ್ತಿವೆ. 2002 - 03ರಲ್ಲಿ ಆರಂಭವಾದ ವಿಮಾನಯಾನದ ಬೂಮ್ನಲ್ಲಿ ಅರಳಿದ ಹೂವುಗಳಿವೆಲ್ಲ. 2002 ರಿಂದ 2006ರವರೆಗೂ ಭಾರತದ ವಿಮಾನಯಾನ ಕ್ಷೇತ್ರ ಬೆಳೆದ ಪರಿ ಅಗಾಧ. ಆಗ ವರ್ಷಕ್ಕೆ ಶೇ.35ರಷ್ಟು ಬೆಳವಣಿಗೆ ಕಂಡ ಕ್ಷೇತ್ರ ಇಂದು ಮುಳುಗುತ್ತಿರುವ ಹಡಗಿಗೆ ಹೋಲಿಸುವಷ್ಟು ಸಂಕಷ್ಟದಲ್ಲಿದೆ. ಯಾಕೆ? ಅದಕ್ಕೆ ಕಾರಣಗಳು ಹಲವು...

ವಿಮಾನಯಾನ ಕ್ಷೇತ್ರಕ್ಕೆ ಮೊದಲ ಹೊಡೆತ ಬಿದ್ದದ್ದು 2006-07ರಲ್ಲಿ. ವಿಮಾನ ಇಂಧನದ ಬೆಲೆ ಆಗಸಕ್ಕೇರುತ್ತಿದ್ದಂತೆ ವಿಮಾನಯಾನವು ತಲೆಗೆರೆಯಂತೆ ಧರೆಗುರುಳುವ ಭೀತಿಗೊಳಗಾಯಿತು. ವಿಮಾನಕ್ಕೆ ಬಳಸುವ ಇಂಧನವನ್ನು ಏರ್ ಟರ್ಬೈನ್ ಫ್ಯುಯೆಲ್ ಎನ್ನುತ್ತಾರೆ. ಅದನ್ನು ಕಂಪೆನಿಗಳು ತೈಲ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಪೆಟ್ರೋಲಿಗಿದ್ದಂತೆ ಇವಕ್ಕೆ ಸಕರ್ಾರದ ಸಬ್ಸಿಡಿ ಯಿಲ್ಲದರಿಂದ ಇದರ ಪ್ರಭಾವ ವಿಮಾನಯಾನದ ಮೇಲಾಯಿತು. ಅತೀವ ಸ್ಪರ್ಧೆಯಿದ್ದ ಕಾರಣ ದರವೇರಿಸುವ ಹಾಗಿರಲಿಲ್ಲ, ಕಂಪೆನಿಗಳು ನಷ್ಟ ದಾಖಲಿಸತೊಡಗಿದವು. ಆಗಲೇ ಶವಪೆಟ್ಟಿಗೆಯಲ್ಲಿನ ಕಡೆಯ ಮೊಳೆಯಂತೆ ಬಂದು ಬಡಿದದ್ದು ಜಾಗತಿಕ ಆರ್ಥಿಕ ಹಿಂಜರಿತ. 2008ರಲ್ಲಿ ಶುರುವಾದ ಜಾಗತಿಕ ಆರ್ಥಿಕ ಹಿಂಜರಿತ ಮೊದಲ ಹೊಡೆತ ನೀಡಿದ್ದೇ ವಿಮಾನಯಾನ ಕ್ಷೇತ್ರಕ್ಕೆ. ಯಾರು ಏನೇ ಹೇಳಿದರೂ ವಿಮಾನಯಾನವೆನ್ನುವುದು ಭಾರತದಲ್ಲಿ ಇಂದಿಗೂ ಲಕ್ಷುರಿಯೇ, ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಜನಸಾಮಾನ್ಯರನ್ನೂ ಸಹ ಪ್ರಭಾವಿತಗೊಳಿಸುತ್ತವೆ. ಅವರು ಆರ್ಥಿಕ ಬಿಕ್ಕಟ್ಟಿನ ಚಿಂತೆಯ ಗೆರೆಗಳು ಮೂಡಿದಾಗ, ಸಹಜವಾಗಿಯೇ ವ್ಯಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕಾಯರ್ೋನ್ಮುಖರಾಗುತ್ತಾರೆ. ಅವರು ಮೊದಲು ಕಡಿತಗೊಳಿಸುವುದೇ ಲಕ್ಷುರಿಗಳನ್ನು. ಹೀಗಾಗಿ ವಿಮಾನಯಾನಕ್ಕೆ ಬೇಡಿಕೆ ಕುಸಿಯಿತು. ಮಧ್ಯಮ ವರ್ಗ ವಿಮಾನಯಾನಕ್ಕೆ ಗುಡ್ಬೈ ಹೇಳಿ ರೈಲು, ಬಸ್ಸುಗಳಿಗೆ ಮರಳಿತು. ಪುಟಿಯುತ್ತಿರುವ ಮಧ್ಯಮ ವರ್ಗದ ಮಾರುಕಟ್ಟೆಯನ್ನೇ ನಂಬಿದ್ದ ಈ ಸಂಸ್ಥೆಗಳ ಮುಖ್ಯ ಮಾರುಕಟ್ಟೆಯೇ ಮಾಯವಾಗಿಬಿಟ್ಟಿತು. ಇಂದು ನಮ್ಮ ಏರಿಂಡಿಯಾ ಕೂಡ ಸೇರಿದಂತೆ ಎಲ್ಲ ವಿಮಾನಗಳೂ ಸರಿಸುಮಾರು ಅವುಗಳ ಪೂರ್ಣ ಶಕ್ತಿಯ ಶೇ. 50ರಷ್ಟು ಜನರನ್ನು ಮಾತ್ರವೇ ಹೊತ್ತು ತಿರುಗುತ್ತಿವೆ. ಈ ವರ್ಷದ ಜುಲೈ ತಿಂಗಳೊಂದರಲ್ಲೇ ವಿಮಾನಯಾನ ಬೇಡಿಕೆ ಶೇ. 15ರಷ್ಟು ಕುಸಿದಿದೆ. ಅಲ್ಲಿಗೆ ಭಾರತದ ವಿಮಾನಯಾನ ಕ್ಷೇತ್ರ ಸುಳಿಗೆ ಸಿಕ್ಕ ಹಡಗಿನಂತಾಗಿದೆ - ಬೆಳೆಯುತ್ತಿರುವ ಖರ್ಚುಗಳು, ಅಪಾರ ನಷ್ಟ, ಅಷ್ಟೇ ಸಾಲ ಮತ್ತು ಕುಸಿಯುತ್ತಿರುವ ಬೇಡಿಕೆ. ಒಂದು ಕ್ಷೇತ್ರದ ಅವಸಾನಕ್ಕೆ ಇನ್ನೇನು ಬೇಕು ಹೇಳಿ? ಕಳೆದ ವರ್ಷದಲ್ಲಿ ಭಾರತದ ಖಾಸಗಿ ವಿಮಾನಯಾನ ಸಂಸ್ಥೆಗಳು 10 ಸಾವಿರ ಕೋಟಿಗಳಷ್ಟು ನಷ್ಟ ಅನುಭವಿಸಿದೆ. ಈ ವರ್ಷ ಈ ನಷ್ಟದ ಪ್ರಮಾಣ 57 ಸಾವಿರ ಕೋಟಿಗಳಿಗೇರುವ ಅಂದಾಜಿದೆ! ಅದಕ್ಕೇ ಮಲ್ಯ-ಪಲ್ಯರೆಲ್ಲ ಹಾಗೆ ಅಂಬೋ ಅನ್ನುತ್ತಿರುವುದು!
ಸರಿ ವಿಮಾನಯಾನ ಕ್ಷೇತ್ರ ಸಂಕಷ್ಟದಲ್ಲಿದೆ, ಅದಕ್ಕೆ ಸರ್ಕಾರವೇನು ಮಾಡಲಿಕ್ಕಾಗುತ್ತದೆ? ಭಾರತದಂತಹ ದೇಶದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಖಾಸಗಿ ಕಂಪೆನಿಗಳನ್ನು ಬೇಲೌಟ್ ಮಾಡಲು ಬಳಸುವುದು ಅಪರಾಧವಾಗುತ್ತದೆ. ಅದಕ್ಕೆ ವಿಮಾನಯಾನ ಕಂಪೆನಿಗಳ ಈ ಧಮಕಿಗೆ ಈ ಮಟ್ಟದ ವಿರೋಧ ವ್ಯಕ್ತವಾಗಿರುವುದು. ಆದರೆ ಇಲ್ಲಿ ಒಂದನ್ನು ವಿವರಿಸಲೇ ಬೇಕು. ಬೇಲ್ಔಟ್ ಕೇಳುತ್ತಿರುವುದು ಖಾಸಗಿ ಕಂಪೆನಿಗಳಲ್ಲ, ಬದಲಿಗೆ ಏರ್ಇಂಡಿಯಾ. (ಏರ್ ಇಂಡಿಯಾಗೆ 20 ಸಾವಿರ ಕೋಟಿಗಳ ಬೇಲ್ಔಟು ಪ್ಯಾಕೇಜೊಂದು ಸಿದ್ಧವಾಗುತ್ತಿದೆಯೆಂದು ಸುದ್ದಿ.) ಈಗ ಧಮಕಿ ಹಾಕಿರುವ ಖಾಸಗಿ ಕಂಪೆನಿಗಳು ಸರ್ಕಾರದಿಂದ ಆರ್ಥಿಕ ಸಹಾಯವನ್ನು ಅಪೇಕ್ಷಿಸುತ್ತಿಲ್ಲ. ಬೇಲ್ಔಟಿನಲ್ಲೂ ಎರಡು ವಿಧಗಳು. ಮೊದಲನೆಯದು ಆರ್ಥಿಕ ಸಹಾಯ - ಏರಿಂಡಿಯಾಗೆ ನೀಡುವಂತಿರುವ ಪ್ಯಾಕೇಜು. ಎರಡನೆಯದು ಪಾಲಿಸಿ ಇನಿಷಿಯೇಟಿವ್ಸ್ - ಒಂದು ಉದ್ಯಮ ಕ್ಷೇತ್ರ ಸಂಕಷ್ಟದಲ್ಲಿರುವಾಗ, ಅದರ ಬೆಳವಣಿಗೆಗೆ ಪೂರಕವಾಗುವಂತೆ ಸಕರ್ಾರ ಕೆಲ ಸಹಾಯ-ಸೌಲಭ್ಯಗಳನ್ನು ಘೋಷಿಸುವುದು. ಇವುಗಲಲ್ಲಿ ಪ್ರಮುಖವಾದವು ತೆರಿಗೆ ರಜೆ, ಮಾರಾಟ ತೆರಿಗೆಯ ಇಳಿಕೆ ಇತ್ಯಾದಿ, ಇತ್ಯಾದಿ...ಈಗ ಖಾಸಗೀ ವಿಮಾನಯಾನ ಸಂಸ್ಥೆಗಳೂ ಕೇಳುತ್ತಿರುವುದು ಇಂತಹ ಪ್ರೋತ್ಸಾಹವನ್ನೇ ಹೊರತು ಬೇಲ್ಔಟನ್ನಲ್ಲ! ಬೇಲ್ಔಟ್ ಎನ್ನುವ ಪದಬಳಕೆ ಮೀಡಿಯಾದ ಅನುಚಿತತೆ ಅಷ್ಟೆ! ಇದಕ್ಕೆ ಸರಿಯಾದ ಹೆಸರು ಸ್ಟಿಮ್ಯುಲಸ್ ಪ್ಯಾಕೇಜ್!

ಇಂದಿನ ಪರಿಸ್ಥಿತಿಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ಜೇಬಿಗೆ ಕತ್ತರಿ ಹಾಕುತ್ತಿರುವ ಪ್ರಮುಖ ಅಂಶವೆಂದರೆ ವಿಮಾನಯಾನ ಇಂಧನ. ಇದಕ್ಕೆ ಮೂಲ ಕಾರಣ ಭಾರತದ ತೆರಿಗೆ ವ್ಯವಸ್ಥೆ! ಈ ವಿಮಾನಯಾನ ಇಂಧನದ ಮೇಲೆ ರಾಜ್ಯ ಸಕಾರಗಳೂ ಕೂಡ ಮಾರಾಟ ತೆರಿಗೆ ವಿಧಿಸಬಹುದಾದ್ದರಿಂದ ಶೇ. 4 ರಿಂದ ಶೇ. 26ರ ನಡುವೆ ಒಂದೊಂದು ರಾಜ್ಯದಲ್ಲಿ ಒಂದು ದರದ ತೆರಿಗೆ. ಸದ್ಯ ಇಂದು ವಿಮಾನಯಾನ ಇಂಧನದ ದರ ಇತರೆ ದೇಶಗಳಿಗಿಂತ ಭಾರತದಲ್ಲಿ ಶೇ. 70 ರಷ್ಟು ದುಬಾರಿಯಾಗಿದೆ. ಇದಕ್ಕೆ ನಮ್ಮ ಅವೈಜ್ಞಾನಿಕ ತೆರಿಗೆ ವ್ಯವಸ್ಥೆಯೇ ಕಾರಣವೆನ್ನುವುದು ನಿರ್ವಿವಾದ. ಈಗ ಕಂಪೆನಿಗಳೇನೂ ಸಬ್ಸಿಡಿಯನ್ನೂ, ತೆರಿಗೆ ರಜೆಯನ್ನೋ ಕೇಳುತ್ತಿಲ್ಲ. ಬದಲಿಗೆ ಅವರು ಆಗ್ರಹಿಸುತ್ತಿರುವುದು ವಿಮಾನಯಾನ ಇಂಧನವನ್ನು ಕೇಂದ್ರ ಸಕರ್ಾರ ಘೋಷಿತ ಸರಕಾಗಿ ಘೋಷಿಸಲಿ ಎಂದು. ಹಾಗೊಮ್ಮೆ ಇದನ್ನು ಘೋಷಿತ ಸರಕಾಗಿಸಿದಲ್ಲಿ ದೇಶಾದ್ಯಂತ ಏಕರೂಪ ಮಾರಾಟ ತೆರಿಗೆ ಜಾರಿಗೆ ಬಂದು, ಶೇ.4 ಕ್ಕೆ ಸೀಮಿತಗೊಳ್ಳುತ್ತದೆ. .ನಮ್ಮ ಐಟಿ ಉದ್ಯಮ ಇಂದಿಗೂ ತೆರಿಗೆ ರಜೆಯಲ್ಲೇ ಕಾಲಕಳೆಯುತ್ತಿದೆ. ಹೀಗಿರುವಾಗ ಸಂಕಷ್ಟದಲ್ಲಿರುವ ಕ್ಷೇತ್ರಕ್ಕೆ ಮಾರಾಟ ತೆರಿಗೆ ಕಡಿತಗೊಳಿಸಿ ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೆ ತರಬೇಕೆನ್ನುವ ಬೇಡಿಕೆ ಉಚಿತವೇ ಸರಿ. ಇನ್ನು ಈ ಕಂಪೆನಿಗಳು ಎತ್ತಿರುವ ಮತ್ತೊಂದು ಪ್ರಮುಖ ಅಂಶವೆಂದರೆ ವಿಮಾನ ನಿಲ್ಡಾಣಗಳ ಸೇವಾ ದರಗಳದು. ಮೆಟ್ರೋದ ನೂತನ ಖಾಸಗಿ ವಿಮಾನ ನಿಲ್ಡಾಣ ಮಾಲೀಕರದು ಅಕ್ಷರಶಃ ಮನೋಪ. ಈ ನೂತನ ಜಾಗೀರುದಾರರು ಮಾಡಿದ್ದೇ ರೂಲು, ಹಾಕಿದ್ದೇ ಫೀಸು! ಇವರು ಕಂಡುಕೊಂಡ ಸುಲಭ ಮಾರ್ಗ ಸೇವಾ-ದರ. ಖಾಸಗೀಕರಣದ ನಂತರ ಭಾರತದಲ್ಲಿ ವಿಮಾನನಿಲ್ಡಾಣಗಳ ಸೇವಾದರಗಳಲ್ಲಿ ಶೇ. 82ರಷ್ಟು ಏರಿಕೆಯಾಗಿದೆ! ಜಗತ್ತಿನ ಇತರೆಡೆ ಕಂಪೆನಿಗಳು ವಿಮಾನನಿಲ್ಡಾಣಗಳ ಸೇವಾದರಗಳಿಗಾಗಿ ತಮ್ಮ ವೆಚ್ಚದ ಶೇ. 2-3ರಷ್ಟು ಬಳಸುತ್ತಿದ್ದರೆ, ಭಾರತದಲ್ಲಿ ಅದು ಸದ್ಯ ಶೇ. 10 ರಿಂದ 12 ರಷ್ಟಿದೆ! ಇದನ್ನು ನಿಯಂತ್ರಿಸಬೇಕೆನ್ನುವುದು ಈ ಕಂಪೆನಿಗಳ ಅಂಬೋಣ. ಮೊದಲೇ ಹಲವಾರು ಕಾರಣಗಳಿಂದ ಜರ್ಜರಿತವಾಗಿರುವ ವಿಮಾನಯಾನ ಕ್ಷೇತ್ರ ಸದ್ಯ ಐಸಿಯುನಲ್ಲಿದೆ. ಅವರು ಆಗ್ರಹಿಸುತ್ತಿರುವುದು ಆಕ್ಸಿಜನ್ಗಾಗಿ! ಆದರೆ ಮಾಡಿದ ರೀತಿ, ಅದು ಖಂಡನೀಯ.

ಇಂದು ಸರ್ಕಾರ ಖಾಸಗಿ ಕಂಪೆನಿಗಳನ್ನು ಟೀಕಿಸುತ್ತಿದೆ. ಆದರೆ ಈ ವಿಷಯದಲ್ಲಿ ಸರ್ಕಾರದ ಪಾಲೇನು ಕಡಿಮೆಯಿದೆಯೇ? ಅದರ ದ್ವಂದ್ವ ನೀತಿಗಳೇ ಪರಿಸ್ಥಿತಿ ಈ ರೀತಿ ಬಿಗಡಾಯಿಸಲು ಕಾರಣವಲ್ಲವೇ? ಈ ವಿಷಯದ ಕುರಿತಾಗಿ ಸರ್ಕಾರದ ಪ್ರತಿಕ್ರಿಯೆಯಲ್ಲೇನು ಕಮ್ಮಿ ದ್ವಂದ್ವಗಳಿವೆಯೇ? 1992ರಲ್ಲಿ ಭಾರತದ ಆಥರ್ಿಕತೆಯನ್ನು ಮನಮೋಹನರು ಮುಕ್ತಗೊಳಿಸಿದರು ಎಂಬುದು ನಿಜವಾದರೂ ಅದು ಇನ್ನೂ ಪೂರ್ಣಗೊಳ್ಳದ ಕನಸು. ಇಂದಿಗೂ ಎಲ್ಲ ರಂಗಗಳ ಎಲ್ಲ ವ್ಯಾಪಾರಗಳ ಮೇಲ್ಹಂತಗಳನು ಶಾಸಿಸುವುದು, ನಿಯಂತ್ರಿಸುವುದು ದೆಹಲಿಯೇ. ಸರ್ಕಾರದ ನೀತಿ ನಿಯಮಗಳ ಮೂಲಕ ಅದು ಉದ್ಯಮವನ್ನು ನಿಯಂತ್ರಿಸುತ್ತಿದೆ. ಉದ್ಯಮದ ಬೆಳವಣಿಗೆಗೆ ಪೂರಕವಾಗುವಂತಹ ವಾತಾವರಣವನ್ನೊದಗಿಸಿಕೊಡುವ ಜವಾಬ್ದಾರಿ ಸರ್ಕಾರಕ್ಕಿರುತ್ತದೆ. ವಿಮಾನಯಾನ ಕ್ಷೇತ್ರವು ಕಳೆದ 3 ವರ್ಷಗಳಿಂದ ಅತೀವ ಸಂಕಷ್ಟದಲ್ಲಿದ್ದರೂ ಸರ್ಕಾರ ನಿದ್ರಿಸುತ್ತಿತ್ತು. ಪರಿಸ್ಥಿತಿ ಹೀಗಿರುವಾಗ ಸಚಿವರು ಈಗ ಕಂಪೆನಿಗಳಿಗೆ ಮುಕ್ತ ಮಾರುಕಟ್ಟೆಯ ಪಾಠ ಹೇಳಿ ಕೊಡುತ್ತಿದ್ದಾರೆ. ಒಂದು ಕಡೆ ಸ್ಪರ್ಧೆ, constructivedestruction, ಎಂದೆಲ್ಲಾ ಬೊಂಬಡಾ ಬಜಾಯಿಸುವ ಸಚಿವರು ಮತ್ತೊಂದು ಕಡೆ ಏರಿಂಡಿಯಾಗೆ 20 ಸಾವಿರ ಕೋಟಿ ರೂ.ಗಳ ಬೇಲ್ ಔಟ್ ಪ್ಯಾಕೇಜಿನ ಫೈಲು ಹಿಡಿದು ಪ್ರಧಾನಿಯ ಬಳಿಗೆ ದೌಡಾಯಿಸುತ್ತಾರೆ. ಜೆಟ್ ಏರ್ವೇಸ್ನವರು ವೆಚ್ಚಕಡಿತದ ಭಾಗವಾಗಿ 2 ಸಾವಿರ ಉದ್ಯೋಗಿಗಳನ್ನು ತೆಗೆಯಲು ಹೋದಾಗ, (ಚುನಾವಣಾ ಸಮಯ ಬೇರೆ) ಇದೇ ಸಕರ್ಾರ ಅದನ್ನು ತಡೆದಿರಲಿಲ್ಲವೇ? ಈಗ ನಮಗೂ ನಿಮಗೂ ಯಾವುದೇ ಆಬ್ಲಿಗೇಷನ್ ಇಲ್ಲ, ನಷ್ಟವಾದರೆ ಅದು ನಿಮಗೆ ಎನ್ನವಂತೆ ಮಾತನಾಡುವುದು ಎಷ್ಟು ಸರಿ? ಇಲ್ಲ ಕಂಪೆನಿಗಳ ಪಾಡಿಗೆ ಕಂಪೆನಿಗಳನ್ನಾದರೂ ಬಿಡಬೇಕು, ಎಲ್ಲೂ ಮೂಗು ತೂರಿಸಬಾರದು, ಇಲ್ಲ ಒಂದು ಮ್ಯೂಚುವಲ್ ಆದ ಒಬ್ಬರ ಕಷ್ಟ ಒಬ್ಬರು ಅರ್ಥಮಾಡಿಕೊಳ್ಳುವಂತಹ ಸಂಬಂಧವನ್ನಾದರೂ ಬೆಳೆಸಿಕೊಳ್ಳಬೇಕು. ಎರಡೂ ಇಲ್ಲವೆಂದರೆ....

ವಿಮಾನಯಾನ ಸಂಸ್ಥೆಗಳ ಬೇಡಿಕೆಗಳು ನ್ಯಾಯಯುತವಾಗಿಯೇ ಇದ್ದರೂ ಯಾರೂ ಅವುಗಳೆಡೆ ಗಮನವೀಯದೆ ಈ ಕುಳಗಳ ಧಿಮಾಕಿನೆಡೆಗೆ ಗಮನ ಸೆಳೆಯುವಂತೆ ಮಾಡಿದ್ದು ಅವರ ಬೇಜವಾಬ್ದಾರಿ ವರ್ತನೆಯೇ! ಇದೊಂದು ಪಿಆರ್ ಡಿಸಾಸ್ಟರ್. ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡುವ ಅವಶ್ಯಕತೆಯಿತ್ತೆಂದು ಎಷ್ಟೇ ಸಮರ್ಥಿಸಿಕೊಳ್ಳ ಹೊರಟರೂ ಅವರು ಅಂದು ಪ್ರದರ್ಶಿಸಿದ್ದು ಉದ್ಧಟತನ ಮತ್ತು ಅಸೂಕ್ಷ್ಮತೆ. ಸರ್ಕಾರಕ್ಕೂ ನಿಮಗೂ ಇರುವ ನೂರೆಂಟು ತಗಾದೆಗಳಿಗೆ ಭಾರತೀಯ ಪ್ರಯಾಣಿಕನಿಗೇಕೆ ಬರೆ-ಹೊರೆ ಹಾಕುತ್ತೀರಿ? ಸರಿ ನೀವು ಸಾಲದಲ್ಲಿದ್ದೀರ, ನಷ್ಟವಾಗುತ್ತಿದೆ, ಸರ್ಕಾರದ ಕೆಲ ನೀತಿಗಳು ಗಾಯದ ಮೇಲಿನ ಬರೆಯಂತೆ ಕಾಡುತ್ತಿವೆ, ಆದರೆ ಹಾಗಂತ ಸರ್ಕಾರಕ್ಕೆ ಹೀಗೆ ಧಮಕಿ ಹಾಕುವುದು, ನಾವು ನಮ್ಮೆಲ್ಲಾ ಕಾರ್ಯಚಟುವಟಿಕೆಗಳನ್ನೂ ಸ್ಥಗಿತಗೊಳಿಸುತ್ತೇವೆನ್ನುವುದು ಎಷ್ಟು ಸರಿ? ನಾಡಿನ ರೈತನಿಗೆ ಇದಕ್ಕಿಂತಲೂ ದೊಡ್ಡ ದೊಡ್ಡ ಸಮಸ್ಯೆಗಳಿವೆ, ಆತನಿಗೂ ಸಾಲವಿದೆ, ಮಾರುಕಟ್ಟೆಯ ಕೊರತೆಯಿದೆ, ಸರ್ಕಾರದ ಮುಕ್ತ ಮಾರುಕಟ್ಟೆಯ ನೀತಿ ಆತನ ಅಸ್ತಿತ್ವವನ್ನೇ ಅಲುಗಾಡಿಸುತ್ತಿದೆ, ನಿಮಗಿದ್ದಂತೆ ರಾಶಿರಾಶಿ ಹಣವೂ ಇಲ್ಲ. ಹಾಗಂತ ನಾಡಿನ ರೈತನೂ ನಮ್ಮ ಸಮಸ್ಯೆಗಳನ್ನೆಲವನ್ನೂ ಪರಿಹರಿಸುವವರೆಗೂ ನಾವು ಕೃಷಿ ಮಡುವುದಿಲ್ಲ ಎನ್ನುತ್ತಾನಾ? ಅಂದರೆ ಏನು ಗತಿ ಎಂಬುದನ್ನು ಈ ದುಡುಕು-ಧಿಮಾಕಿನ ಕುಳಗಳು ಅರ್ಥ ಮಾಡಿಕೊಳ್ಳಲಿ. ಕೆಟ್ಟ ಮೇಲೆ ಬುದ್ದಿ ಬಂತೆನ್ನುವ ಹಾಗೆ ಕಂಪೆನಿಗಳು ತಮ್ಮ ಸ್ಟ್ರೈಕನ್ನು ಹಿಂಪಡೆದುಕೊಂಡಿವೆ. ಅವರು ಸರ್ಕಾರದೊಂದಿಗೆ ಮಾತುಕತೆಯ ಮೂಲಕ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲಿ. ಸರ್ಕಾರಕ್ಕೂ ಈ ವಿಷಯದಲ್ಲಿ ಜವಾಬ್ದಾರಿಯಿದೆ. ಅದರಿಂದ ಅದು ನೂಣುಚಿಕೊಳ್ಳಲಾಗುವುದಿಲ್ಲ.
(ವಿಕ್ರಾಂತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

One thoughts on “ಆಗಸದ ಆಘಾತ

Thimmappa’s said...

I just now went through your writings in the blog and I must say that I enjoyed reading it. A very competent writing,attractive layout and presentation with brilliant and sometimes rare photograph(as Vajapyee's). 'Pulse rate' and 'Mayaloka' touched me little deeper too. One of the rare and technically superior blog, Congratulations, Aditya Bharadwaja avare.

Proudly powered by Blogger
Theme: Esquire by Matthew Buchanan.
Converted by LiteThemes.com.