ಮೊದಲಿಗೆ ಮೈಸೂರು ವಿಶ್ವವಿದ್ಯಾಲಯ. ಈ ಹಿಂದೆ ಮೈಸೂರು ವಿವಿಯ ಉಪಕುಲಪತಿಗಳಾಗಿದ್ದ ದೇಜಗೌ ಅವರ ಕುಲಪುತ್ರ ಶಶಿಧರ ಪ್ರಸಾದ್ ಅವರು ವಿವಿಯಲ್ಲಿ ನಡೆಸಿದರೆನ್ನಲಾದ ಅಪಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನೂತನ ನೇಮಕಗಳಲ್ಲಿ ರೂಸ್ಟರ್ ಪದ್ಧತಿಯನ್ನು ಗಾಳಿಗೆ ತೂರಿ ಪರಿಶಿಷ್ಠ ಜಾತಿ ವರ್ಗಗಲ ಸ್ಥಾನಗಳಲ್ಲಿ ತಮ್ಮ ಕುಲಭಾಂಧವರನ್ನು ಕೂರಿಸಿ ಇಡಿಯ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಿಬಿಟ್ಟಿದ್ದರಲ್ಲದೆ, ಇನ್ನೂ ಅನೇಕ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದ ಆರೋಪಗಳು ಅವರ ಮೇಲಿದ್ದವು. ಈ ಕುರಿತು ತನಿಖೆ ನಡೆಸಲು ರಚಿತವಾದ ರಂಗವಿಠಲಾಚಾರ್ ಅವರ ಏಕಸದಸ್ಯ ನ್ಯಾಯಾಂಗ ಆಯೋಗ ವರದಿ ನೀಡಿದ್ದು ಮೇಲ್ಕಂಡ ಬಹುತೇಕ ಆರೋಪಗಳನ್ನು ನಿಜವೆಂದೂ, ಶಶಿಧರ ಪ್ರಸಾದ್ ಅವರ ವಿರುದ್ಧ ವಿವಿ ಕ್ರಮಿನಲ್ ಕೇಸ್ ಹೂಡಬೇಕೆಂದೂ ಹೇಳಿತ್ತು. ಆದರೆ ದೇಜಗೌ ಅವರ ಎಸ್ಸೆಂಕೆ-ಸಾಯಿಬಾಬಾ ಲಾಬಿಯಿಂದ ಪ್ರಭಾವಿತರಾಗಿ ನ್ಯಾಯದಾನದ ಈ ಪ್ರಕ್ರಿಯೆಯಲ್ಲಿ ಮೂಗು ತೂರಿಸಿದ ಭಾರಧ್ವಾಜ್ ಶಶಿಧರ ಪ್ರಸಾದ್ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಂತೆ ನೋಡಿಕೊಂಡರು. ಮೈಸೂರು ವಿವಿಗೆ ಹೋದಾಗೊಮ್ಮೆ ಉಪಕುಲಪತಿ ವಿ.ಜಿ.ತಳವಾರ್ ಅವರನ್ನು ಒಬ್ಬ ಚಪರಾಸಿಯಂತೆ ಬಾಗಿಲಲ್ಲಿ ನಿಲ್ಲಿಸಿಕೊಂಡು ಬೈದಾಡಿದರು. ಅಲ್ಲಿಗೆ ರಾಜ್ಯಪಾಲರ ನೈತಿಕತೆ, ಪ್ರಾಮಾಣಿಕತೆಗಳ ಸೋಗುಗಳೆಲ್ಲವೂ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಯಿತು.
ವಿಶ್ವವಿದ್ಯಾಲಯಗಳ ವಿಚಾರದಲ್ಲಿ ರಾಜ್ಯಪಾಲ ಭಾರಧ್ವಾಜ್ ಮತ್ತೆ ಅಂಥದೊಂದು ಸಂಧಿಗ್ಧಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಬಾರಿಯದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ. ಹೋದ ಬಾರಿ ಮಾಜಿ ಉಪಕುಲಪತಿಗಳಾದರೆ ಈ ಬಾರಿ ಹಾಲಿ ಉಪಕುಲಪತಿಗಳ ರಗಳೆ. ಈ ಹಿಂದೆ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಕೆ. ಎಚ್. ಹಿಂಚಾ ಅವರ ಅವಧಿ ಕಳೆದ ಜುಲೈ ಮೊದಲ ವಾರಕ್ಕೆ ಮುಗಿದ ಕಾರಣ ರಾಜ್ಯಪಾಲರು ಪ್ರೊ. ಎಸ್. ರಾಮೇಗೌಡ ಅವರ ನೇತೃತ್ವದಲ್ಲಿ ಒಂದು ಸರ್ಚ್ ಕಮಿಟಿಯನ್ನು ನೇಮಿಸಿದರು. ಇವರು ಈ ಹಿಂದೆ ಎಐಸಿಟಿಇನ ಅಧ್ಯಕ್ಷರಾಗಿದ್ದವರು. ಈ ಸರ್ಚ ಕಮಿಟಿಗೆ ಬಂದ ಹಲವಾರು ಅರ್ಜಿಗಳಲ್ಲಿ ಅವರು ವ್ಯಕ್ತಿಯ ಅನುಭವ, ಅರ್ಹತೆ, ಚಾರಿತ್ರ್ಯ ಮುಂತಾದವುಗಳನ್ನು ಪರಿಗಣನೆಗೆ ತೆಗೆದುಕೊಂಡು. ಮೂರು ಹೆಸರುಗಳನ್ನು ಅಕಾರಾದಿಯಾದಿಯಾಗಿ ರಾಜ್ಯಪಾಲರಿಗೆ ಕೊಟ್ಟರು. ಈ ಮೂವರಲ್ಲಿ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರು ಪ್ರೊ. ಎಚ್. ಮಹೇಶಪ್ಪ ಅವರನ್ನು ಆಯ್ಕೆ ಮಾಡಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಿಸಿದರು. ಇಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಪಾಪ ಯಾರೋ ಅತೃಪ್ತರು ಇಲ್ಲ ಮಹೇಶಪ್ಪನವರ ಒಳ ಹೊರಗನ್ನು ಬಲ್ಲವರು ಅವರ ಅಕಾಡೆಮಿಕ್ ದಾಖಲೆಗಳನ್ನು ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಒಂದು ಅರ್ಜಿ ಸಲ್ಲಿಸಿದರು. ಆಗ ಒಂದೊಂದಾಗಿ ಹೊರಬಂದಿತು ನೋಡಿ, ಮಹೇಶಪ್ಪನವರ ನಿಜಬಣ್ಣಗಳು.
ಇಷ್ಟೇ ಅಲ್ಲ ಮಹೇಶಪ್ಪನವರು ತಮ್ಮ ಸಂಶೋಧನೆಯ ಬಗ್ಗೆಯೂ ಸುಳ್ಳು ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ್ದಾರೆ. ರಾಜಭವನಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಅವರು ಪ್ರತಿಷ್ಠಿತ ಡಿಆರ್ಡಿಒದ ಅಂಗ ಸಂಸ್ಥೆಯಾದ ಏರೋನಾಟಿಕ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಬೋರ್ಡ್ನಲಿ 8 ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಾರೆ. ಈ ಮಾಹಿತಿಯೂ ಸುಳ್ಳು ಎಂಬ ಬಲವಾದ ಆರೋಪಗಳ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ಮಾಹಿತಿ ನೀಡುವಂತೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯವರು ಏರೋನಾಟಿಕ್ಸ್ ರಿಸರ್ಚ್ರ ಅಂಡ್ ಡೆವೆಲಪ್ಮೆಂಟ್ ಬೋರ್ಡ್ನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಅವರು ಮಹೇಶಪ್ಪನವರು ಹೇಳಿಕೊಂಡ 8 ಸಂಶೋಧನೆಗಳಲ್ಲಿ ಒಂದು ಮಾತ್ರ ವಿಟಯುಗೆ ಸಂಬಂಧ ಪಟ್ಟಿದ್ದಾಗಿದ್ದು ಇನ್ನು ಮಿಕ್ಕ 7 ಸಂಶೋಧನೆಗಳು ಇತರೆ ರಾಜ್ಯಗಳಿಗೆ ಸಂಬಂಧಪಟ್ಟಿದ್ದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ತಾನಿದವರೆಗೂ 4 ವಿದ್ಯಾರ್ಥಿಗಳ ಪಿಎಚ್ಡಿಗೆ ಗೈಡ್ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ. ಆದರೆ ವಿಟಿಯುನ ಯಾವ ವಿದ್ಯಾರ್ಥಿಗಳಿಗೂ ಇವರು ಗೈಡ್ ಆಗಿಲ್ಲ. ಇನ್ನು ಇತರೆ ವಿವಿಗಳ ವಿದ್ಯಾರ್ಥಿಗಳಿಗೆ ಗೈಡ್ ಆಗಬೇಕೆಂದರೆ ವಿವಿಯಿಂದ ಪಡೆಯಬೇಕಾದ ಅನುಮತಿಯನ್ನೂ ಇವರು ಪಡದೇ ಇಲ್ಲ ಇದುವರೆಗೂ. ಅಲ್ಲಿಗೆ ಅದೂ ಸುಳ್ಳು. ಹೀಗೆ ಮಹೇಶಪ್ಪನವರ ಅಕಾಡೆಮಿಕ್ ದಾಖಲೆಗಳೆಲ್ಲವೂ ಉತ್ಪ್ರೇಕ್ಷಿತ ಸುಳ್ಳಿನ ಕಂತೆಗಳು. ಈತನ ನಿಜ ಅಕಾಡೆಮಿಕ್ ರೆಕಾರ್ಡ್ ಅನ್ನು ಗಣನೆಗೆ ತೆಗೆದುಕೊಂಡರೆ ಯಾವುದೇ ರೀತಿಯಲ್ಲೂ ಈತ ಉಪಕುಲಪತಿಯಾಗಲಿಕ್ಕೆ ಅನರ್ಹ ಮತ್ತು ಅಯೋಗ್ಯ. ಇಂತಹ ಒಬ್ಬ ಬೋಗಸ್ ಆಸಾಮಿಯನ್ನು ನಮ್ಮ ರಾಜ್ಯಪಾಲರು ವಿಟಿಯುದಂತಹ ಪ್ರತಿಷ್ಠಿತ ವಿವಿಗೆ ಉಪಕುಲಪತಿಗಳಾಗಿ ನೇಮಿಸಿದ್ದಾರೆ.
ಮಹೇಶಪ್ಪನವರ ಹೆಸರನ್ನು ಸೂಚಿಸಿದ ಸರ್ಚ ಕಮಿಟಿಯವರನ್ನು ಈ ಕುರಿತು ಪ್ರಶ್ನಿಸಲಾಗಿ ಅವರು ನಮಗೆ ರಾಜ್ಯಪಾಲರ ಕಛೇರಿಯಿಂದ ಬಂದ ಬಯೋಡಾಟಾಗಳನ್ನೇ ನಾವು ನಮ್ಮ ಆಯ್ಕೆಗೆ ಮೂಲವಾಗಿಟ್ಟುಕೊಂಡೆವು. ಅದರ ಆಧಾರದ ಮೇಲೆಯೇ ನಾವು ಮೂವರ ಹೆಸರನ್ನು ಅಕಾರಾದಿಯಾಗಿ ರಾಜ್ಯಪಾಲರಿಗೆ ಸುಚಿಸಿದೆವು ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ಹಾಗಾದರೆ ರಾಜ್ಯಪಾಲರ ಕಛೇರಿಯು ಬಂದ ಅರ್ಜಿಗಳ ಸತ್ಯಾಸತ್ಯತೆಗಳನ್ನು ಪರಾಂಬರಿಸದೆ ಸರ್ಚ್ರ್ ಕಮಿಟಿಗೆ ಗುಜರಾಯಿಸಿಬಿಟ್ಟಿತೆ? ಹೌದು ಇಲ್ಲಿ ನಡೆದಿರುವ ಅಚಾತುರ್ಯವೇ ಅದು. ಹೋಗಲಿ ನಂತರ ಅಕಾರಾದಿಯಾಗಿ ಮೂರು ಹೆಸರುಗಳು ಸೂಚಿಸಲ್ಪಟ್ಟವಲ್ಲ, ಆಗ ಆ ಮೂರು ಹೆಸರುಗಳಲ್ಲಿ ಮಹೇಶಪ್ಪನವರನ್ನೇ ರಾಜ್ಯಪಾಲರು ಏಕೆ ಆರಿಸಿದರು? ಆಗಲಾದರೂ ಅವರ ಹಿನ್ನೆಲೆಯನ್ನು ಕೂಲಂಕುಷವಾಗಿ ವಿಚಾರಿಸಬಹುದಿತ್ತಲ್ಲವೇ? ಇಲ್ಲಿ ಮಹೇಶಪ್ಪನವರು ತಮ್ಮ ನೇಮಕಕ್ಕೆ ರಾಜ್ಯಪಾಲರ ಬಳಿ ಲಾಬಿ ನಡೆಸಿದ್ದರೆ? ಅಂತಹುದೊಂದು ಲಾಬಿಗೆ ಭಾರಧ್ವಾಜ್ ಮಣಿದರೆ?
ಈಗ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರಿಗೆ ಅತ್ತ ದರಿ ಇತ್ತ ಪುಲಿ ಎಂಬಂತಹ ಸ್ಥಿತಿ. ಅತ್ತ ಮಹೇಶಪ್ಪನವರ ತಪ್ಪುಗಳು ದಾಖಲೆ ಸಮೇತ ಸಾಬೀತಾಗುತ್ತಿದೆ, ಈಗ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಉಪಕುಲಪತಿಗಳ ಹುದ್ದೆಯಿಂದ ವಜಾಗೊಳಿಸಿದರೆ ಅವರ ನೇಮಕವೇ ತಪ್ಪು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಒಂದು ಗೌರವಾನ್ವಿತ ವಿವಿಗೆ ಇಂತಹ ಒಬ್ಬ ಫ್ರಾಡ್ ಅನ್ನು ಉಪಕುಲಪತಿಗಳಾಗಿ ನೇಮಿಸಿದ ಆರೋಪವನ್ನು ಹೊರಬೇಕಾಗುತ್ತದೆ. ಇಲ್ಲ ಈ ಆರೋಪಗಳೆಲ್ಲವೂ ಸುಳ್ಳು ಎಂದೋ ಅಥವಾ ವಾಸ್ತವಾಂಶವನ್ನು ನೋಡಿದರೂ ನೋಡದೆ ಇದ್ದು ಪರೋಕ್ಷವಾಗಿ ಅವರನ್ನು ಸಮರ್ಥಿಸಿದರೆ ಅದು ಅವರ ನೈತಿಕ ಭಾಷಣಗಳಿಗೆ ತೀರದ ಕಳಂಕ. ರಾಜ್ಯಪಾಲರ ಮುಂದಿನ ನಡೆಯಾದರೂ ಯಾವುದು? ಇದು ಸದ್ಯ ಅಕಾಡೆಮಿಕ್ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರಶ್ನೆ. ರಾಜ್ಯಪಾಲರು ಆಗಿರುವ ಪ್ರಮಾದವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಮಹೇಶಪ್ಪನವರನ್ನು ಉಪಕುಲಪತಿಗಳ ಹುದ್ದೆಯಿಂದ ವಜಾಗೊಳಿಸಿ ನೂತನ ಸಮರ್ಥ ಉಪಕುಲಪತಿಗಳನ್ನು ನೇಮಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮರ್ಯಾದೆಯನ್ನು ಪುನಃ ದಕ್ಕಿಸಿಕೊಡಬೇಕೆಂಬುದು ಪ್ರಜ್ಞಾವಂತರೆಲ್ಲರ ಆಗ್ರಹ.













