ಮಾರ್ಚ್ 5ರಿಂದ ಬೆಂಗಳೂರಿನಲ್ಲಿ ಹೊಸ ಕೆಲಸ. ಡೆಕ್ಕನ ಹೆರಾಲ್ಡ್!


ಕಳೆದ ಏಳು ತಿಂಗಳ ಹಿಂದೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಡಿಗ್ರಿ ಮುಗಿಸಿ, ಯಾವುದೇ ಕಾರಣಕ್ಕೂ ನ್ಯೂಸ್ ಛಾನೆಲ್ಲುಗಳಿಗೆ ಹೋಗುವುದು ಬೇಡವೆಂದು ನಿರ್ಧರಿಸಿ ಮುದ್ರಣ ಮಾಧ್ಯಮದ ಕಡೆ ಹೊರಳಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಬಳ್ಳಾರಿಯ ಜಿಲ್ಲಾ ವರದಿಗಾರನಾಗಿ ಬಂದೆ. ರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿಯ ಅವಸಾನಕ್ಕೆ ಸಾಕ್ಷಿಯಾದೆ. ಅಪೂರ್ವ ಅನುಭವ ಮತ್ತು ಈ ಜನ್ಮಕ್ಕಾಗುವ ಒಳ್ಳೆಯ ಸ್ನೇಹ ಸಂಬಂಧಗಳಿಗೆ ಭಾಜನನಾದೆ.

ನದಿ ಹರಿಯುತ್ತಲೇ ಇರಬೇಕು. ಅಧಿಕೃತವಾಗಿ ಟೈಮ್ಸ್ಗೆ ರಾಜೀನಾಮೆ ಸಲ್ಲಿಸಿಯಾಗಿದೆ. ಮತ್ತೆ ಮನೆಯತ್ತ ಪಯಣ. ಮಾರ್ಚ್ 5ರಿಂದ ಬೆಂಗಳೂರಿನಲ್ಲಿ ಹೊಸ ಕೆಲಸ. ಡೆಕ್ಕನ ಹೆರಾಲ್ಡ್! ಪ್ರತಿ ಮನುಷ್ಯನಿಗೂ ತನ್ನ ಮೊದಲ ಕೆಲಸ, ಊರು ಯಾವತ್ತಿಗೂ ಸ್ಪೆಷಲ್. ಹಾಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ಬಳ್ಳಾರಿ ನನ್ನ ಮನದಲ್ಲಿ ಯಾವತ್ತಿದ್ದರೂ ಸ್ಪೆಷಲ್ ಸ್ಪೆಷಲ್!! ಇನ್ನು ಬಳ್ಳಾರಿಯೇನೂ ಸಾಮಾನ್ಯವಲ್ಲ, ನನಗೆ ಸ್ವತಂತ್ರವಾಗಿ ಬದುಕಲು, ನೆಚ್ಚಿದಂತೆ ಅಡುಗೆ ಮಾಡಿಕೊಳ್ಳಲು ಕಲಿಸಿದೂರು..ಭೀಮಸೇನ ನಳ ಮಹಾರಾಜರು ಗಂಡಸರಲ್ಲವೆ....ಮತ್ತೆ ಮನೆಯತ್ತ, ನನ್ನ ಊರು ಬೆಂಗಳೂರಿನತ್ತ...ನಮ್ಮ ಊರು ಬೆಂಗಳೂರು...

ತಮ್ಮ ವಿಶ್ವಾಸ ಹೀಗೇ ಮುಂದುವರಿಯಲಿ.

tv9 pornography

tv9 today aired a 4 hour live drama in the afternoon, a case in which the rascal husband was forcing his wife for couple swap and also web sex chat to make money out of it uploading it on pornographic sites. tv9 brought both to the studio and staged a explicit masala drama, reading out obscene mails, showing nude photos! worst of worst the 4 hour show was slickly edited into a one hour show, selecting the most explicit conversations and was re aired in the evening on prime time! i wonder what is the difference between that husband who was forcing his wife for couple swap and pornography to make money out of it and TV9 honchos. is there any? the standard reply may be trps! airing content what people like to watch. why not pornography? where are we heading to or rather where are we?

the last gentleman miner of bellary ಎಂ. ವೈ. ಘೋರ್ಪಡೆ ಸಾವು ತಂದ ನಿರ್ವಾತ


ಎಂ. ವೈ. ಘೋರ್ಪಡೆ ತೀರಿ ಹೋಗುವುದರೊಂದಿಗೆ ಬಳ್ಳಾರಿಯ ಒಂದು ಸಭ್ಯ ಯುಗದ ಕಡೆಯ ಕೊಂಡಿ ಕಳಚಿದೆ. ಒಂದು ವರ್ಷದ ಅಂತರದಲ್ಲಿ ಎಂ.ಪಿ.ಪ್ರಕಾಶ್ ಮತ್ತು ಎಂ.ವೈ.ಘೋರ್ಪಡೆಯವರನ್ನು ಕಳೆದುಕೊಂಡ ಜಿಲ್ಲೆಯ ಆತ್ಮ ಅನಾಥವಾಗಿದೆಯೆಂದರೆ ಅದು ಕ್ಲೀಷೆಯಾಗಲಾರದು. 

ಸಂಡೂರು ಬಳ್ಳಾರಿಯ ಒಂದು ತಾಲೂಕಷ್ಟೆ. ಆದರೆ ಸ್ವಾತಂತ್ರ್ಯಾ ಪೂರ್ವದಲ್ಲಿ ಇದು ಒಂದು ಸ್ವತಂತ್ರ್ಯ ಸಂಸ್ಥಾನ. ಬೆಂಗಾಡು ಬಳ್ಳಾರಿಯ ನಟ್ಟ ನಡುವೆ ಅರೆ ಮಲೆನಾಡಿನ ಪರಿಸರದ ಸಂಡೂರು ಗಿರಿ ಕಂದರಗಳ ನಡುವಿನ ಒಂದು ಕಣಿವೆ. ಈ ಸಂಸ್ಥಾನವನ್ನು 18ನೇ ಶತಮಾನದಿಂದಲೂ ಘೋರ್ಪಡೆ ವಂಶಸ್ಥರು ಆಳುತ್ತಿದ್ದರು. 1947ರಲ್ಲಿ ಸ್ವಂತಂತ್ರ್ಯ ಬಂದಾಗ ಎಂ.ವೈ. ಘೋರ್ಪಡೆಯವರ ತಾತ ಮುಮ್ಮುಡಿ ವೆಂಕಟರಾವ್ ಘೋರ್ಪಡೆಯವರು ಆಳುತ್ತಿದ್ದರು. ಅವತ್ತಿಗೆ ಆ ಸಂಸ್ಥಾನದ ಜನ ಸಂಖ್ಯೆ 15000 ಮತ್ತು ವಿಸ್ತೀರ್ಣ 433 ಚದರ ಕಿಮೀ.ಗಳು ಅಷ್ಟೆ. ಈ ಪುಟ್ಟ ಸಂಸ್ಥಾನವನ್ನು ಭಾರತದೊಳಕ್ಕೆ ವಿಲೀನ ಮಾಡಲೊಪ್ಪದ ಘೋರ್ಪಡೆಗಳು ಅಂದು ಈ ರೀತಿ ಮೊಂಡು ಹಿಡಿದು ಕೂತಿದ್ದ ಜುನಾಘಢ ಮತ್ತು ಹೈದರಾಬಾದಿನೊಡನೆ ಸೇರುತ್ತದೆ. ಆದರೆ ಪಟೇಲರ ಮಧ್ಯಸ್ತಿಕೆಯಿಂದಾಗಿ 1949 ಏಪ್ರಿಲ್ 1ರಂದು ಸಂಡೂರು ಭಾರತದಲ್ಲಿ ವಿಲೀನವಾಯಿತು. ನಂತರ ಘೋರ್ಪಡೆಗಳದ್ದು ಕಾಂಗ್ರೆಸ್ಸಿಗೆ ಅಚ್ಚಳಿಯದ ನಿಷ್ಠೆ. ಸದರಿ ಎಂ.ವೈ.ಘೋರ್ಪಡೆ ಕ್ಯಾಂಬ್ರಿಡ್ಜ್ನಲ್ಲಿ ಅರ್ಥಶಾಸ್ತ್ರವನ್ನು ಅಭ್ಯಸಿಸಿ ಬಂದವರು. ಕಾಂಗ್ರೆಸ್ಸಿನ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. 70ರ ದಶಕದ ಕಡೆಯವರೆಗೂ ಬಳ್ಳಾರಿ ರಾಜಕಾರಣ ಸಂಪೂರ್ಣ ಘೋರ್ಪಡೆಗಳ ಬಿಗಿಮುಷ್ಠಿಯಲ್ಲಿತ್ತು. ಘೋರ್ಪಡೆಯವರ ವಿರುದ್ಧ ಸೆಣಸಿ ಗೆಲ್ಲುವನೆಂಬ ನಂಬಿಕೆ ಯಾರಿಗೂ ಇರಲಿಲ್ಲ.

ಆದರೆ ಮೆಲ್ಲಗೆ ಅಪಸ್ವರಗಳು ಹುಟ್ಟಿಕೊಂಡವು. ಅದಕ್ಕೆ ಎಂ.ವೈ. ಘೋರ್ಪಡೆಯವರ ಕಾರ್ಯವೈಖರಿ ಮತ್ತು ಬೀಸುತ್ತಿದ್ದ ಸಮಾಜವಾದದ ಗಾಳಿ ಕಾರಣವಾಗಿದ್ದವು. ಎಷ್ಟೇ ಜನಾನುರಾಗಿಯೆನಿಸಿದರೂ ಘೋರ್ಪಡೆಗಳು ದಂತದ ಗೋಪುರದ ವಾಸಿಯೇ. ರಾಜವಂಶದ ಠಾಕು ಠೀಕಿನ ಮನುಷ್ಯ. ಸಾಮಾನ್ಯ ಜನಕ್ಕೆ ಯಾವತ್ತಿಗೂ ಕೈಗೆಟುಕದವ ಮತ್ತು ಜಿಲ್ಲೆಯಲ್ಲಿ ತನ್ನ ನಂತರದ ಎರಡನೇ ಸಾಲಿನ ನಾಯಕತ್ವವನ್ನು ಅವರು ಬೆಳಸಲೇ ಇಲ್ಲ. ಈ ಎಲ್ಲ ಅಸಮಾಧಾನಗಳ ನಡುವೆ 70ರ ದಶಕದಲ್ಲಿ ಅರಸು ಮಂತ್ರಿ ಮಂಡಲದಲ್ಲಿ ಎಂ.ವೈ.ಘೋರ್ಪಡೆ ವಿತ್ತ ಸಚಿವರಾಗಿದ್ದರು ಮತ್ತು ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾರಣವಾಗಿ ಕಾಂಗ್ರೆಸ್ ವಿರೋಧಿ ಅಲೆ ಮತ್ತು ಸಮಾಜವಾದದ ಗಾಳಿ ಪ್ರಬಲವಾಗಿ ಬೀಸುತ್ತಿತ್ತು. ಬಳ್ಳಾರಿಯಲ್ಲಿ ಯಜಮಾನ ಶಾಂತರುದ್ರಪ್ಪ ಮತ್ತು ಎಲೆಗಾರ ತಿಮ್ಮಪ್ಪರಂತಹ ಅನೇಕ ಹೋರಾಟಗಾರರು ತಮ್ಮ ಕಡೆಯ ಉಸಿರಿನವರೆಗೂ ಘೋರ್ಪಡೆಯವರ ಆಡಳೀತವನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದರು. ಅದನ್ನು ರಾಜಾಡಳಿತದ ಮುಂದುವರಿಕೆಯೆಂದೇ ಭಾವಿಸಿದ್ದರು. ಸಂಡೂರಿನಲ್ಲಿ 1973ರವರೆಗೂ ಕೂಡ ಸುಮಾರು 15 ಸಾವಿರ ಎಕರೆಯಷ್ಟು ಸಾರ್ವಜನಿಕ ಭೂಮಿಯನ್ನು ರಾಜವಂಶ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ರೈತರು ಇಂತಿಷ್ಟೆಂದು ಗೇಣಿ ನೀಡಿ ಸಾಗುವಳಿ ಮಾಡುತ್ತಿದ್ದರು. 1974ರಲ್ಲಿ ಸೋಷಿಯಲಿಸ್ಟ್ ಪಕ್ಷದ ನಾಯತ್ವದಲ್ಲಿ 46 ದಿನಗಳ ಕಾಲ ಈ ಇನಾಮು ಭೂಮಿಗಾಗಿ ರೈತ ಹೋರಾಟ ಭುಗಿಲೆದ್ದಿತು. ಜಾರ್ಜ್ ಫಾರ್ನಾನ್ದೀಸ್ರಿಂದ ಹಿಡಿದು ಎಲ್ಲ ಸಮಾಜವಾದೀ ನಾಯಕರೂ ಹೋರಾಟದ ಮುಂಚೂಣಿಯಲ್ಲಿದ್ದರು. ಕಡೆಗೂ ಘೋರ್ಪಡೆ ಬಾಗಲೇ ಬೇಕಾಯಿತು. ಇದ್ದಕ್ಕಿದ್ದ ಹಾಗೇ Ghorpade was no longer invincible. ಇದರೊಂದಿಗೆ ಎಂ.ವೈ. ಘೋರ್ಪಡೆಗೆ ಒಂದು ತಾತ್ವಿಕ ವಿರೋಧ ಹುಟ್ಟಿಕೊಂಡಿತು. ರಾಜ್ಯ ರಾಜಕೀಯದಲ್ಲಿ ಎದ್ದ ಮತ್ತೊಂದು ಸುನಾಮಿಯಲ್ಲಿ ಎಂ.ವೈ. ಘೋರ್ಪಡೆ ಇಂದಿರಾ ಗಾಂಧಿ ವಿರುದ್ಧ ಬಂಡೆದ್ದ ದೇವರಾಜ ಅರಸು ಅವರ ಜೊತೆ ಉಳಿದುಕೊಂಡರು. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಅರಸು ಕಾಂಗ್ರೆಸ್ನಿಂದ ಸ್ಪರ್ಧಿಸಿದಾಗ ಮೊದಲ ಬಾರಿಗೆ ಸೋಲುಣ್ಣುತ್ತಾರೆ, ಅವರ ತಮ್ಮ ರಣಧೀರ ಘೋರ್ಪಡೆಯ ವಿರುದ್ಧ! ಆತ ಕಾಂಗ್ರೆಸ್ (ಐ)ಹುರಿಯಾಳು. 

ಇದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕರ್ನಾಟಕದಲ್ಲಿ ಜನತಾ ಆಡಳಿತವಿರುತ್ತದೆ. ಬಳ್ಳಾರಿ ರಾಜಕಾರಣಕ್ಕೆ ಎಂ.ಪಿ.ಪ್ರಕಾಶ್ ಧೃವತಾರೆಯಾಗಿರುತ್ತಾರೆ. ನಂತರ ಕೂಡ ಅನೇಕ ಬಾರಿ ಎಂ.ಪಿ.ಪ್ರಕಾಶ್ ಮತ್ತು ಎಂ.ವೈ.ಘೋರ್ಪಡೆ ಒಬ್ಬರ ನಂತರ ಒಬ್ಬರು ಜಿಲ್ಲಾ ಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದಾರೆ. ಅಸಲಿಗೆ ಅದು ಬಳ್ಳಾರಿಗೊಂದು ಸುವರ್ಣಯುಗವೇ ಸರಿ. ಎಂ.ವೈ. ಘೋರ್ಪಡೆ ಮತ್ತು ಎಂ.ಪಿ.ಪ್ರಕಾಶ್ ಇಬ್ಬರೂ ಮಾಡಿದ ಮತ್ತೊಂದು ತಪ್ಪೆಂದರೆ, ಘೋರ್ಪಡೆಗಳು ಮಂತ್ರಿಗಳಾಗಿದ್ದಾಗ ಅವರು ಜಿಲ್ಲಾ ಕೇಂದ್ರ ಬಳ್ಳಾರಿಯನ್ನು ಬಿಟ್ಟು ಸಂಡೂರು ಹೊಸಪೇಟೆಗಳನ್ನೇ ಕೇಂದ್ರವಾಗಿಸಿಕೋಮಡರು. ಅವರು ಬಳ್ಳಾರಿಗೆ ಬರುತ್ತಿದ್ದದ್ದೇ ಝಂಡಾ ಹಾರಿಸಲು ಮಾತ್ರ. ಎಂ.ಪಿ.ಪ್ರಕಾಶ್ ಕೂಡ ಅಂತದೇ ತಪ್ಪನ್ನು ಮಾಡುತ್ತಿದ್ದರು. ಅವರು ಹಡಗಲಿ, ಹಗರಿಬೊಮ್ಮನಹಳ್ಳಿ ಸಿರುಗುಪ್ಪ ಸೇರಿದಂತೆ ಪಶ್ಚಿಮದ ತಾಲೂಕುಗಳ ರಾಜ. ಜಿಲ್ಲಾಕೇಂದ್ರ ಬಳ್ಳಾರಿ ಇಬ್ಬರಿಂದಲೂ ನಿರ್ಲಕ್ಷಿತ. ಆಗ ಇಲ್ಲಿ ಹುಟ್ಟಿದ ಬಸ್ಮಾಸುರರೇ ಸಾರಾಯಿ ಮಾಫಿಯಾ ಮತ್ತು ಶುದ್ಧ ರಾಯಲಸೀಮೆಯ ಧಣಿ ಮತ್ತು ಪೊಲಿಟಿಕಲ್ ವಯಲೆನ್ಸ್ ಅನ್ನು ಹೊತ್ತು ತಂದ ಮುಂಡ್ಲೂರು ಧಣಿಗಳು. ಮೊದಲ ಬಾರಿಗೆ ಬಳ್ಳಾರಿಯ ರಾಜಕಾರಣ ದುಡ್ಡು ಮತ್ತು ರಕ್ತ ಎರಡನ್ನೂ ನೋಡಿತು. ಅಲ್ಲಿಂದ ಕ್ರಮೇಣ ಘೋರ್ಪಡೆ ಮತ್ತು ಪ್ರಕಾಶ್ ಇಬ್ಬರ ಹಿಡಿತದಿಂದಲೂ ಬಳ್ಳಾರಿಯ ರಾಜಕಾರಣ ಬಿಡಿಸಿಕೊಳ್ಳತೊಡಗಿತು. ಮುಂಡ್ಲೂರು ಎಷ್ಟು ಪ್ರಬಲರಾಗಿ ಬೆಳೆದುಬಿಟ್ಟರೆಂದರೆ ಅವರನ್ನು ಎದುರಿಸಲು ಈ ಇಬ್ಬರು ಮುತ್ಸದ್ಧಿಗಳ ಕೈಲೂ ಸಾಧ್ಯವಾಗಲಿಲ್ಲ. ನಂತರದ್ದು ಸಂಡೂರು ಸಂಸ್ಥಾನವೇ. ಬಳ್ಳಾರಿ ಘೋರ್ಪಡೆಯವರ ಕೈಬಿಟ್ಟು ಹೋಯಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಇಡೀ ಜಿಲ್ಲೆ ಮುಂಡ್ಲೂರು ದರ್ಬಾರನ್ನು ಕೊನೆಗಾಣಿಸುವುದೊಂದೇ ಗುರಿ ಎಂದು ಪಣ ತೊಟ್ಟಿತೊಮ್ಮೆ, ಅನಿವಾರ್ಯವಾಗಿ ಹುಟ್ಟಿದ ಭಸ್ಮಾಸುರ ಜನಾರ್ಧನ ರೆಡ್ಡಿ ಶ್ರೀರಾಮುಲು ಜೋಡಿ. 

ಈಗ ಮತ್ತೆ ಚಕ್ರ ಉರುಳಿದೆ. ರೆಡ್ಡಿಯ ಅವಸಾನವಾಗಿದೆ. ಮುಂಡ್ಲೂರು ಮತ್ತು ರೆಡ್ಡಿಗಳಿಗೆ ಪರ್ಯಾಯ ರಾಜಕೀಯ ಆಯ್ಕೆಯ ಬಗ್ಗೆ ಜಿಲ್ಲೆಯ ಜನ ಯೋಚಿಸುವಂತಾಗಿರುವಾಗ ಒಂದೇ ವರ್ಷದ ಅವಧಿಯಲ್ಲಿ ಜಿಲ್ಲೆಯ ಈರ್ವರು ಮುತ್ಸದ್ಧಿಗಳಾದ ಎಂ.ಪಿ.ಪ್ರಕಾಶ್ ಮತ್ತು ಎಂ.ವೈ. ಘೋರ್ಪಡೆಯವರು ತೀರಿಹೋಗಿರುವುದು ಜಿಲ್ಲೆಯನ್ನು ನಿಜಕ್ಕೂ ಅನಾಥವಾಗಿಸಿದೆ. ಇಂದು ಅವರು ಬದುಕಿದ್ದಿದ್ದರೂ ಆರೋಗ್ಯದ ದೃಷ್ಟ್ಯಾ ಅವರು ಸಕ್ರಿಯರಾಗಿದ್ದಿರಲರರೆಂಬುದು ನಿಜವಾದರೂ ಒಂದು ತಾತ್ವಿಕ ಆಯ್ಕೆಯ ಪ್ರತೀಕಗಳಾಗಿ ಅವರಿಬ್ಬರೂ ಇದ್ದರು. ಈಗ ಆ ಪ್ರತೀಕಗಳೂ ಇಲ್ಲ. ರಾಜಕೀಯ ನಿರ್ವಾತವೊಂದು ಸೃಷ್ಟಿಯಾಗಿದೆ. ಇದನ್ನು ತುಂಬಲರ್ಹರೇ ಇಲ್ಲದ ಆಯ್ಕೆ ಪಟ್ಟಿ ಮತದಾರರ ಮುಂದಿದೆ.

ರಿಪಬ್ಲಿಕ್ ಆಫ್ ಬಳ್ಳಾರಿ ಮತ್ತು ಘೋರ್ಪಡೆ. 


ಎಂ.ವೈ. ಘೋರ್ಪಡೆಯವರನ್ನು the first and last gentleman miner of Bellary ಎಂದು ಕರೆಯಬಹುದೇನೋ. ಬಳ್ಳಾರಿಯ ಬೆಟ್ಟಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿದೆ ಎಂದು ಗುರುತಿಸಿ ಗಣಿಗಾರಿಕೆಯನ್ನು ನಡೆಸಿದವರೇ ಘೋರ್ಪಡೆಗಳು. ಎಂ. ವೈ. ಘೋರ್ಪಡೆಯವರ ತಾತ ಮುಮ್ಮುಡಿ ವೆಂಕಟರಾವ್ ಘೋರ್ಪಡೆ. 1838 ಮತ್ತು 1848ಗಲಲ್ಲೇ ನ್ಯೂಬೋಲ್ಡ್ ಎಂಬ ವಿದೇಶೀ ಗಣಿ ಶಾಸ್ತ್ರಜ್ಞನರು ಈ ಪ್ರದೇಶದ ಸವೇ ನಡೆಸಿದ್ದರು. ಈ ಶೋಧ ಕಾರ್ಯಗಳು ಎಡೆಬಿಡದೆ ಮುಂದುವರೆದಿದ್ದವು. 1890ರಲ್ಲಿ ಸರ್ವೇ ನಡೆಸಿದ ಬ್ರೂಸ್ಫೂಟ್ ಎಂಬ ಖಗೋಳ ವಿಜ್ಞಾನಿ ಭಾರತದಲ್ಲಷ್ಟೇ ಅಲ್ಲ ಇಡಿಯ ವಿಶ್ವದಲ್ಲೇ ಅತಿ ದೊಡ್ಡ ಕಬ್ಬಿಣ ಅದಿರಿನ ನಿಕ್ಷೇಪವಿರುವುದೇ ಬಳ್ಳಾರಿ-ಹೊಸಪೇಟೆ ಮತ್ತು ಮುಖ್ಯವಾಗಿ ಸಂಡೂರು ಭಾಗದ ಈ ಸಂಡೂರು ಶಿಸ್ಟ್ನಲ್ಲಿ ಎಂದು ಘೋಷಿಸಿಬಿಟ್ಟ. ಅಲ್ಲಿಂದ ಶುರುವಾಯಿತು ಗಣಿಗಾರಿಕೆ. 1907ರಲ್ಲಿ ಅಂದು ಸ್ವತಂತ್ರವಾಗಿ ರಾಜ್ಯವಾಳುತ್ತಿದ್ದ ಇಂದಿನ ಎಂ.ವೈ.ಘೋರ್ಪಡೆಯವರ ತಾತ ವೆಂಕಟರಾವ್ ಘೋರ್ಪಡೆಯವರ ಅನುಮತಿಯೊಂದಿಗೆ ಬೆಲ್ಜಿಯಂನ ಗಣಿ ಕಂಪೆನಿಯೊಂದು ಗಣಿಗಾರಿಕೆ ಪ್ರಾರಂಭಿಸಿತು. ಇದಕ್ಕೆ ಜನರಲ್ ಸಂಡೂರು ಮ್ಯಾಂಗನೀಸ್ ಎಂಬ ಹೆಸರಿತ್ತು. ಈ ಕಂಪೆನಿಯು 1954ರವರೆಗೂ ಗಣಿಗಾರಿಕೆ ನಡೆಸಿತ್ತು. ಅಷ್ಟರಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿದ್ದರಿಂದ ಅವರು ಈ ಗಣಿಗಳನ್ನು ಅಂದಿನ ಸಂಡೂರು ಒಡೆಯ ಯಶವಂತರಾವ್ ಘೋರ್ಪಡೆಯವರಿಗೆ ಒಪ್ಪಿಸಿ ನಡೆದು ಬಿಟ್ಟಿತು. ಇದೇ ಮುಂದೆ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ (ಸ್ಮಯೋರ್) ಎಂಬ ಕಂಪೆನಿಯಾಗಿ ಉದ್ಭವಿಸಿತು. 

ಅಷ್ಟರಲ್ಲಿ ಎಂ.ವೈ. ಘೋರ್ಪಡೆಯವರ ತಂದೆ ಯಶವಂತರಾವ್ ಘೋರ್ಪಡೆ ಅವರ ಬಳಿ ಕೆಲಸ ಮಾಡುತ್ತಿದ್ದ ಅನೇಕರಿಗೆ ಒನ್ ಟೈಮ್ ಸೆಟ್ಲಮೆಂಟಾಗಿ ಅದಿರಿನ ಒಂದೊಂದು ಗುಟ್ಟಗಳನ್ನು ಬರೆದುಕೊಟ್ಟುಬಿಟ್ಟರು. ಅದರಲ್ಲೂ ಚಾಣಾಕ್ಷತೆ ಮೆರೆದ ರಾಜ, ಕೊಟ್ಟಿದ್ದೆಲ್ಲವೂ ಕಬ್ಬಿಣದ ಅದಿರಿನ ಬೆಟ್ಟಗಳು, ಮ್ಯಾಂಗನೀಸ್ ಅದಿರಿನ ಬೆಟ್ಟಗಳನ್ನೆಲ್ಲಾ ತನ್ನಲ್ಲೇ ಉಳಿಸಿಕೊಂಡರು. ಅವರಿಗೆ ತಾನೆ ಏನು ತಿಳಿದಿತ್ತು, ಮುಂದೊಂದು ದಿನ ಕಬ್ಬಿಣದ ಅದಿರು ಕೆಂಪು ಬಂಗಾರವಾಗಿ ಅಭಿವರ್ನಿಸಲ್ಪಡುತ್ತದೆಂದು ಬಳ್ಳಾರಿಯನ್ನು ಹೀಗೆ ಆಳುತ್ತದೆಂದು. 

ಅದೇನೋ ಮೊದಲಿಂದಲೂ ಘೋರ್ಪಡೆಗಳು ನಡೆಸಿದ್ದು ಶುದ್ಧ ಮ್ಯಾಂಗನೀಸ್ ಗಣಿಗಾರಿಕೆಯನ್ನು ಮಾತ್ರ. ಎಂ.ವೈ. ಘೋರ್ಪಡೆಯವರೂ ಇದನ್ನೇ ಮುಂದುವರೆಸಿದರು. ಒಂದು ಟನ್ ಕಬ್ಬಿಣದ ಅದಿರಿಗೆ ಚೈನಾ ಬೂಂ ಸಂದರ್ಭದಲ್ಲಿ ಘರಿಷ್ಠ 8 ಸಾವಿರ ತಲುಪಿತ್ತಾದರೂ ಒಂದು ಟನ್ ಮ್ಯಾಂಗನೀಸ್ ಅದಿರಿಗೆ 55 ಸಾವಿರವಿದೆ. ಆದರೆ ಒಂದು ಟನ್ ಕಬ್ಬಿಣದ ಅದಿರನ್ನು ತೆಗೆಯಲು ಘರಿಷ್ಠ 500 ಖರ್ಚಾದರೆ ಒಂದು ಟನ್ ಮ್ಯಾಂಗನೀಸ್ ಅದಿರನ್ನು ತೆಗೆಯಲು ಏನಿಲ್ಲವೆಂದರೂ 53-54 ಸಾವಿರ ಖರ್ಚಾಗುತ್ತದೆ. ಹಾಗಾಗಿಯೇ ಯಶವಂತರಾವ್ ಘೋರ್ಪಡೆಯವರಿಂದ ಒನ್ ಟೈಮ್ ಸೆಟ್ಲಮೆಂಟಾಗಿ ಒಂದು ಕಬ್ಬಿಣದ ಅದಿರಿನ ಬೆಟ್ಟವನ್ನು ಪಡೆದ ಹೀರೋಜಿ ಲಾಡರ ಮೊಮ್ಮಗ ಅನಿಲ್ ಲಾಡ್ ಮತ್ತು ಸಂತೋಷ ಲಾಡ್ 4 ಹೆಲಿಕಪ್ಟರುಗಳನ್ನು ಇಟ್ಟಿದ್ದರೆ ಎಂ.ವೈ. ಘೋರ್ಪಡೆ ಕಳೆದ ಶತಮಾನದ ಕೊನೆಯಲ್ಲಿ ಆರ್ಥಿಕವಾಗಿ ದಿವಾಳಿಯೆದ್ದು ಹೋದರು! ಹೌದು 2000ದಲ್ಲಿ ಎಸ್ಸೆಂ ಕೃಷ್ಣರ ಸರ್ಕಾರದಲ್ಲಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಯಾಗಿದ್ದಾಗಲೇ ಅವರ ಸ್ಮಯೋರ್ ಕಂಪೆನಿ ಬಾಗಿಲು ಮುಚ್ಚುವಂತಹ ಸಂಧಿಗ್ಧಕ್ಕೆ ಬಂದುಬಿಟ್ಟಿತು. ವೈಯಕ್ತಿಕವಾಗಿ ಘೋರ್ಪಡೆಯವರ ಹೆಸರಿನಲ್ಲಿ ಅನೇಕ ಬ್ಯಾಂಕುಗಳಲ್ಲಿ 100 ಕೋಟಿಗಳಷ್ಟು ಸಾಲವಿತ್ತು. ರಿಜರ್ವ್ ಬ್ಯಾಂಕ್ ಅವರನ್ನು ಹಣ ಹಿಂತಿರುಗಿಸದ ಸಾಲಗಾರರು ಎಂದು ಘೋಷಿಸಿಬಿಟ್ಟಿತು. ಗಣಿ ಭೂಮಿಯನ್ನು ಬಿಟ್ಟು ಕಂಪೆನಿಯ ಮಿಕ್ಕೆಲ್ಲವನ್ನೂ ಮಾರಿ ಈ ಆರ್ಥಿಕ ಸಂಧಿಗ್ಧದಿಂದ ಹೊರಬಂದರಾದರೂ ಅವರ ಹಿಂದಿನ ಅಭಯ ಹಸ್ತ ಈ ಎಲ್ಲ ಸಾಲಗಳನ್ನೂ ಮಾಫ್ ಮಾಡಿತ್ತು. ಕೂಡಲೇ ಸ್ಮಯೋರ್ ಕಂಪೆನಿಯಲ್ಲಿ 100 ಕೋಟಿಗಳ ಒಂದು ಆಪತ್ಕಾಲ ಫಂಡನ್ನು ಸ್ಥಾಪಿಸಿ ಕಾರ್ಮಿಕರಿಗೆ ತಂದೆಯಂತೆಯೇ ನಡೆದುಕೊಂಡರು. ಅಮದಿನೀಂದಲೂ ಇವರದು ಹಿತ-ಮಿತ ಗಣಿಗಾರಿಕೆಯೇ. ಎಂದಿಗೂ ಅಬ್ಬರಿಸಿದವರಲ್ಲ, ದೋಚಿದವರಲ್ಲ. ಇವತ್ತಿಗೂ ಲೋಕಾಯುಕ್ತ ಸಿಇಸಿ ತನಿಖೆಗಳೆಷ್ಟೇ ನಡೆದರೂ ಒಬ್ಬೇಒಬ್ಬರೂ ಕೂಡ ಘೋರ್ಪಡೆಯವರ ಸ್ಮಯೋರ್ನತ್ತ ಬೆರಳೆತ್ತಿ ತೋರಿಸಿಲ್ಲ. ಜಿಲ್ಲೆಯಲ್ಲಿ ಗಣಿಗಾರಿಕೆ ಬಂದ್ ಆಗಿ 3 ತಿಂಗಳಾಯಿತು. ಇವತ್ತಿಗೂ ಒಬ್ಬ ಕಾರ್ಮಿಕನಿಗೂ ತೊಂದರೆಯಾಗದಂತೆ ಆ 100 ಕೋಟಿಗಳ ಆಪತ್ಕಾಲ ಧನದಲ್ಲಿ ನಿರ್ವಹಿಸಿಕೊಂಡು ಹೋಗುತ್ತಿದೆ ಸ್ಮಯೋರ್. ವೈಯಕ್ತಿಕವಾಗಿ ಕೃಷ್ಣರ ಸರ್ಕಾರ ಗಣಿಗಾರಿಕೆಯ ಯಾವುದೇ ಹಿನ್ನೆಲೆಯಿಲ್ಲದವರಿಗೆ ಇಂತಿಷ್ಟೆಂದು ಹಣ ಕಟ್ಟಿಸಿಕೊಂಡು ಮಕ್ಕಳಿಗೆ ಚಾಕೋಲೇಟ್ ಕೊಟ್ಟಂತೆ ಅತಿ ಸಣ್ಣ ಗಣಿ ಹಿಡುವಳಿಗಳನ್ನು ನೀಡಿದ್ದನ್ನು ಸರ್ವಥಾ ವಿರೋಧಿಸಿದ್ದರು. ಆದರೆ ಅದನ್ನು ತಡೆಯದಾದರು. ಇದೇ ರಿಪಬ್ಲಿಕ್ ಆಫ್ ಬಳ್ಳಾರಿಯ ಬುನಾದಿಯಾಯಿತು.

ರಿಪಬ್ಲಿಕ್ ಆಫ್ ಬಳ್ಳಾರಿಗೊಂದು ಸಂತಾಪ


ಬಳ್ಳಾರಿ: ರೆಡ್ಡಿ ಆಡಳಿತದಲ್ಲಿ ರಾಜ್ಯದೊಳಗಿದ್ದೂ ಅದೊಂದು ಪ್ರತ್ಯೇಕ ಗಣರಾಜ್ಯವೆನ್ನುವ ಮಟ್ಟಕ್ಕೆ ಅಲ್ಲಿ ಆತನ ಹಿಡಿತ, ಆಡಳಿತ ನಡೆದಿತ್ತು. ಕಾನೂನಿಗೆ ಬೆಲೆಯೇ ಇಲ್ಲ. ಅಲ್ಲಿ ಕುಟೀರದಿಂದ ಹೊರಬೀಳೂವ ಆತನ ಮಾತೇ ಅಂತಿಮ, ಅದೇ ಕಾನೂನು. ಹೀಗೆ ಒಂದು ಗಣರಾಜ್ಯಕ್ಕೆ ಮಹಾರಾಜನಾಗಿ ಮೆರೆದವನು ಗಾಲಿ ಜನಾರ್ಧನ ರೆಡ್ಡಿ. ಇಂಥದೊಂದು ಗಣರಾಜ್ಯವನ್ನು ತಮ್ಮದೇ ಸ್ವಾರ್ಥಗಳಿಗಾಗಿ ರಾಜಕೀಯ ಕೂಡ ಇದನ್ನು ಪೋಷಿಸಿತೇ ಹೊರತು, ಖಂಡಿಸಲಿಲ್ಲ. ಜನಾರ್ಧನ ರೆಡ್ಡಿ ತನಗಿನ್ನೆದುರೇ ಇಲ್ಲವೆಂಬಂತೆ ಮೆರೆದಾಡುತ್ತಲೇ ಇದ್ದ. ಆದರೆ ಕಾನೂನಿಗಿಂತಲೂ ಯಾರೂ ದೊಡ್ಡವರಲ್ಲ, ಎಂಬ ಮಾತು ಕ್ಲೀಷೆಯಾಗದೇ, ನಿಜವೆಂದು ನಿರೂಪಿತವಾಗಿದೆ.

ಸೆಪ್ಟೆಂಬರ್ 5ರ ಸವಿ ಮುಂಜಾನೆ ಬೆಳಿಗ್ಗೆ 4:30ಕ್ಕೆ ಡಿಐಜಿ ಲಕ್ಷ್ಮೀನಾರಾಯಣ ನೇತೃತ್ವದ ಆಂಧ್ರದ ಸಿಬಿಐ ತಂಡ ರೆಡ್ಡಿ ನಿವಾಸ ಕುಟೀರದ ಬಾಗಿಲು ಬಡಿದಿತ್ತು. ಒಳನಡೆದರೆ, ಜನಾರ್ಧನ ರೆಡ್ಡಿ ಇನ್ನೂ ಸವಿ ನಿದ್ದೆಯಲ್ಲಿದ್ದ. ಆತನನ್ನು ಎಬ್ಬಸಿದವರೆ, ಆತನ 16 ಮೊಬೈಲುಗಳನ್ನೂ ವಶಪಡಿಸಿಕೊಂಡು ಕೂರಿಸಿಬಿಟ್ಟರು. ಸತತ ಎರಡು ಘಂಟೆಗಳ ಕಾಲ ಕುಟೀರವನ್ನು ಶೋಧಿಸಿದ ಅಧಿಕಾರಿಗಳು ಅನೇಕ ದಾಖಲೆಗಳನ್ನು ವಶಪಡಿಸಿಕೊಂಡರು. ಕೂಡಲೇ ಜನಾರ್ಧನ ರೆಡ್ಡಿಯನ್ನು ಸಿಬಿಐ ತಂಡ ಬಂಧಿಸಿ ವಶಕ್ಕೆ ತೆಗೆದುಕೊಂಡಿತು. ಜನಾರ್ಧನ ರೆಡ್ಡಿ ಎಂಬೊಬ್ಬ ಪಾಳೇಗಾರ ಜೈಲು ಸೇರಲಿದ್ದ. ಹೊರಡುತ್ತಾ ತನ್ನ ಬೆನ್ಸ್ನಲ್ಲಿ ಬರುತ್ತೇನೆಂದಾಗಲೇ ಆತನಿಗೆ ತಿಳಿದದ್ದು ಅದನ್ನೂ ಸಿಬಿಐ ಸೀಜ್ ಮಾಡಿದೆಯೆಂದು. ಆತನನ್ನು ಸಿಬಿಐ ತಂಡದ ವಾಹನದಲ್ಲೇ ಕೂರಿಸಿಕೊಳ್ಳಲಾಯಿತು. ಅಲ್ಲಿಂದ ಅಲ್ಲೇ ಹತ್ತಿರದಲ್ಲಿದ್ದ ಒಎಂಸಿ ಕಿಂಪೆನಿಯ ವ್ಯವಸ್ಥಾಪಕ ನಿದರ್ೇಶಕ ಶ್ರೀನಿವಾಸ ರೆಡ್ಡಿಯ ಮನೆಗೂ ಹೋಗಿ ಆತನನ್ನೂ ಬಂಧಿಸಿ ಕೂರಿಸಿಕೊಂಡರು. ನಂತರ ನಡೆದದ್ದು ಅಕ್ಷರಶಃ ಮೆರವಣಿಗೆ. ಪ್ರೆಸ್ಸಿನವರು ಫೋಟೋ ತೆಗೆಯಲನುಕೂಲವಾಗಲೆಂಬಂತೆ ಕಾರಿನ ಕಿಟಕಿ ಗಾಜುಗಳನ್ನು ಇಳಿಸಿ ಇಡಿಯ ಊರೆಲ್ಲಾ ಓಡಾಡಿಬಿಟ್ಟಿತ್ತು ಕಾರು. 

ಇನ್ನೂ ಸಂಪೂರ್ಣ ಎಚ್ಚರಾಗದಿದ್ದ ಬಳ್ಳಾರಿಯ ಜನತೆ ಊರನ್ನು ಈ ಮಟ್ಟದ ಕುಖ್ಯಾತಿಗೆ ತೆಗೆದುಕೊಂಡು ಹೋದ ರಿಪಬ್ಲಿಕ್ ಆಫ್ ಬಳ್ಳಾರಿಯ ಶ್ರೀಮನ್ಮಹಾರಾಜ ಗಾಲಿ ಜನಾರ್ಧನ ರೆಡ್ಡಿ, ಬಂಧನದಲ್ಲಿರುವುದನ್ನು ನೋಡುವುದಾಯಿತು. ಅಲ್ಲಿಂದ ಹೈದರಾಬಾದ್ಗೆ ತೆಗೆದುಕೊಂಡು ಹೋದ ಸಿಬಿಐ ತಂಡ ಅವರನ್ನು ನಾಂಪಲ್ಲಿ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ಕೋರ್ಟ್  ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿತು. ಅಲ್ಲಿಗೆ ಬಳ್ಳಾರಿ ರಿಪಬ್ಲಿಕ್ನ ಚರಮಗೀತೆಗೆ ಖೋರಸ್ ಜೊತೆಯಾಗಿತ್ತು. ಇತ್ತ ರೆಡ್ಡಿ ನಿವಾಸದ ಮೇಲೆ ಸಿಬಿಐ ದಾಳಿ ಮುಂದುವರೆಸಿ, 30 ಕೆಜಿ ಬಂಗಾರ, 3 ಕೋಟಿ ನಗದು, ಅನೇಕಾನೇಕ ದಾಖಲೆಗಳು, 3 ಲಕ್ಷುರಿ ಕಾರುಗಳು, ಒಂದು ಹೆಲಿಕಾಪ್ಟರ್, ಒಟ್ಟಾರೆ 294 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಜನಾರ್ಧನ ರೆಡ್ಡಿಯ ಪತ್ನಿ ಗಾಲಿ ಲಕ್ಷ್ಮೀ ಅರುಣರನ್ನೂ ಪ್ರಶ್ನಿಸಿದ ಸಿಬಿಐ, ಇಷ್ಟರಲ್ಲೇ ಅವರನ್ನೂ ಬಂಧಿಸುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ. 

ಜನಾರ್ಧನ ರೆಡ್ಡಿಯ ಅಧಿಕೃತ ಗಣಿಗಾರಿಕೆಯಿರುವುದು ನೆರೆಯ ಆಂಧ್ರದ ಹಿರೇಹಾಳದ ಓಬಳಾಪುರಂನಲ್ಲಿ. ಈಗ ಸಿಬಿಐ ಬಂದಿರುವುದು ಆಂಧ್ರದ ಅಕ್ರಮದ ಬಗ್ಗೆ. ಕನರ್ಾಟಕದ ಅಕ್ರಮಗಳ ದಸ್ತಾವೇಜುಗಳು ಲೋಕಾಯುಕ್ತ ವರದಿಯಲ್ಲಿ ಅಡಕವಾಗಿದೆ. ಈ ಕೇಸಿನ ಹಿನ್ನೆಲೆ ತಿಳಿದುಕೊಳ್ಳುವುದಾದರೆ, ವೈ.ಎಸ್.ರಾಜಶೇಖರ ರೆಡ್ಡಿಯ ಆಳ್ವಿಕೆಯಲ್ಲಿ ಆತನ ಮಗ ಜಗನ್ಮೋಹನ ರೆಡ್ಡಿ ಮತ್ತು ಜನಾರ್ಧನ ರೆಡ್ಡಿ ಇಬ್ಬರೂ `ತೋಡುದೊಂಗಲು'. ಇವರು ಊಟಕ್ಕೆ ಕೂತುಬಿಟ್ಟಿದ್ದರು. ವೈ.ಎಸ್.ಆರ್. ಮೃತಿ ಇವರೆಲ್ಲರಿಗೂ ನುಂಗಲಾರದ ತುತ್ತಾಯಿತು. ನಂತರ ಬಂದ ರೋಶಯ್ಯ ಸರ್ಕಾರವನ್ನು ಜಗನ್ಮೋಹನ ರೆಡ್ಡಿ, ಬೆಂಬಿಡದೆ ಕಾಡತೊಡಗಿದ. ಆತನ ಹಿಂದೆ ನಿಂತು ಸ್ಟ್ರಾಟಜಿ ರೂಪಿಸುತ್ತಿದ್ದಾತನೇ ಗಾಲಿ ಜನಾರ್ಧನ ರೆಡ್ಡಿ. ಹಾಗಾಗಿ ಜಗನ್ನನ್ನು ಹೊಡೆಯಲು ಜನಾರ್ಧನ ರೆಡ್ಡಿಯ ಮೇಲಿದ್ದ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೊಪ್ಪಿಸಿಬಿಟ್ಟರು ರೋಶಯ್ಯ. ಕೂಡಲೇ ಇದರ ವಿರುದ್ಧ ಆಂಧ್ರ ಹೈ ಕೋರ್ಟ್ನಲ್ಲಿ ತಡೆಯಾಜ್ಞೆ ತಂದು ಬೀಗಿದರಾದರೂ, ಕಳೆದ ಡಿಸೆಂಬರ್ 2010ರಲ್ಲಿ ಈ ತಡೆಯಾಜ್ಞೆ ತೆರವುಗೊಂಡಿತ್ತು. ಈಗ ರೆಡ್ಡಿ ಕುತ್ತಿಗೆಗೆ ಕೈಹಚ್ಚಿದೆ ಸಿಬಿಐ.

ಮೊದಲಿಗೆ ಬಂದದ್ದು ಲೋಕಾಯುಕ್ತ ವರದಿ. ಬಳ್ಳಾರಿಯ ಕುರಿತೇ ಅನೇಕ ಅಧ್ಯಾಯಗಳನ್ನೊಳಗೊಂಡ ಈ ವರದಿ, ಸ್ಫೋಠಕವೇ ಸರಿ. ಲೋಕಾಯುಕ್ತ ವರದಿ ಬಂದ ಕೆಲವೇ ದಿನಗಳಲ್ಲಿ ಎಸ್.ಆರ್.ಹಿರೇಮಠ್ ಸುಪ್ರೀಂ ಮೆಟ್ಟಿಲು ಹತ್ತಿದ ಪರಿಣಾಮ, ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಪರಿಸರನಾಶವಾಗಿದ್ದು, ಅದು ಇತ್ಯರ್ಥವಾಗುವವರೆಗೆ ಎಲ್ಲ ಗಣಿಗಾರಿಕೆಯನ್ನೂ ಬಂದ್ ಮಾಡಿ ಆದೇಶ ಹೊರಡಿಸಿಬಿಟ್ಟಿತು. ಅಲ್ಲಿಗೆ ರಿಪಬ್ಲಿಕ್ ಆಫ್ ಬಳ್ಳಾರಿ ತಣ್ಣಗೆ ಮಲಗಿಬಿಟ್ಟಿತು.

ಅತ್ತ ಯಡಿಯೂರಪ್ಪನವರ ತಲೆದಂಡವಾಯಿತಾದರೂ ಮಾಧ್ಯಮದಲ್ಲಿ ರೆಡ್ಡಿ ಸಹೋದರರ ಮೇಲಿರುವ ಆಪಾದನೆಗಳ ವಿವರಗಳು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಇಷ್ಟೂ ದಿನ, ಕರ್ನಾಟಕದಲ್ಲಿ ನಾನು ಒಂದಿಂಚೂ ಗಣಿಗಾರಿಕೆ ನಡೆಸಿಯೇ ಇಲ್ಲ ಎಂದೇ ತನ್ನನ್ನು ತಾನು ಸಮಥರ್ಿಸಿಕೊಳ್ಳುತ್ತಿದ್ದ ರೆಡ್ಡಿಯ ಕರ್ನಾಟಕದ ಅಕ್ರಮ ಗಣಿಗಾರಿಕೆಯ ವಿವರಗಳು ಸಂಪೂರ್ಣ ಬಹಿರಂಗಗೊಂಡಿದ್ದವು. ಆತ ಇಲ್ಲಿನ 43 ಗಣಿಗಳ ಮಾಲೀಕರೊಂದಿಗೆ `ರೈಸಿಂಗ್ ಕಾಂಟ್ರಾಕ್ಟ್' ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವುದು, ಆತನದೇ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ, ಆತ ಮಿಕ್ಕವರ ಹತ್ತಿರ ವಸೂಲಿ ಮಾಡುತ್ತಿದ್ದ ಶೇ40ರಷ್ಟು ಹಫ್ತಾ, ಎಲ್ಲವೂ ಡಾ.ಯು.ವಿ.ಸಿಂಗರ ವರದಿಯಲ್ಲಿ ಅಡಕವಾಗಿದೆ. ಆದಾಯ ತೆರಿಗೆಯವರು ರೆಡ್ಡಿಯ ಸಹಚರರಾದ ಖಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರ ಮೇಲೆ ರೇಡು ಬಿದ್ದಾಗ ಸಿಕ್ಕ ದಾಖಲೆಗಳಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಂಚ ಕೊಡಲಾಗಿದೆಯೆಂಬ ಮಾಹಿತಿಯೂ ಸುಸ್ಪಷ್ಟ. ಈ ವರದಿಯಲ್ಲಿ ಅಂದಿನ ಮುಖ್ಯಮಂತ್ರಿಯ ಮೇಲೂ ಆಪಾದನೆಯಿತ್ತು. ಅವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಮಾತ್ರ ಇರುತ್ತದೆಯಾದ್ಧರಿಂದ ಸಂತೋಷ್ ಹೆಗಡೆ ಆ ವರದಿಯನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದರು. ಅವರು ಮುಖ್ಯಮಂತ್ರಿಯ ಮೇಲೆ ಆರೋಪವಿರುವ ಭಾಗವನ್ನಷ್ಟೇ ಒಪ್ಪಿ ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆ. ಯಡಿಯೂರಪ್ಪ ಕಟಕಟೆಯಲ್ಲಿ. ಆದರೆ ವರದಿಯ ಇನ್ನುಳಿದ ಭಾಗವನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಹಾಗಾಗಿ ಅದಿನ್ನೂ ಇವರ ಬೆನ್ನತ್ತಿಲ್ಲ. ರೆಡ್ಡಿ ಬಣವನ್ನು ರಾಜಕೀಯವಾಗಿ ಸದೆಬಡಿಯಲು ಇದಕ್ಕಿಂತಲೂ ಉತ್ತಮ ಸಮಯವಿಲ್ಲವೆಂದೂ, ಇದನ್ನೇ ಬಳಸಿಕೊಂಡು ಸದಾನಂದ ಗೌಡರು ಲೋಕಾಯುಕ್ತ ವರದಿಯನ್ನು ಈ ಕೂಡಲೇ ಒಪ್ಪಿ, ಕ್ರಮ ಜರುಗಿಸುವುದರೊಂದಿಗೆ ರೆಡ್ಡಿಯನ್ನು ಸಂಪೂರ್ಣವಾಗಿ ಸದೆಬಡಿಯುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.

ಲೋಕಾಯುಕ್ತ ವರದಿಯ ಪರಿಣಾಮ ಇವರ ವಿರುದ್ಧ ಕಾನೂನು ಕ್ರಮ ಜರುಗಿಲ್ಲವಾದರೂ ರಾಜಕೀಯವಾಗಿ ಇವರು ಝರ್ಝರಿತರಾದರು. ಮೂವರೂ ಮಂತ್ರಿಗಳು ಮನೆಯಲ್ಲೇ ಕೂತರು. ಇದೆಲ್ಲವನ್ನೂ ನಿರೀಕ್ಷಿಸಿ `ನಿರೀಕ್ಷಣಾ ಜಾಮೀನು' ತೆಗೆದುಕೊಂಡಿದ್ದ ರೆಡ್ಡಿಗಳ ಗಾಡ್ಮದರ್ ಸುಷ್ಮಾಸ್ವರಾಜ್ ತನ್ನ ಮಾತಿಗೆ ತಪ್ಪಿ ಈ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರಲೇ ಇಲ್ಲ. ರೆಡ್ಡಿಗಳು ಹರಸಾಹಸ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಕರೆತಂದು, ಅವರಿಗೆ 40 ಲಕ್ಷದ ಚಿನ್ನದ ಖಡ್ಗ, ಒಂದೂವರೆ ಕೋಟಿಯ ಕಾರು ಉಡುಗೊರೆಯಾಗಿ ನೀಡಿದರೆ, ಸ್ಟೇಜು ಹತ್ತಿ, ಮಂತ್ರಿ, ಶಾಸಕ, ಸಂಸದ ಎಲ್ಲರೂ ಮಾಜಿಯಾಗಬಹುದು, ಆದರೆ ಕಾರ್ಯಕರ್ತ ಮಾಜಿಯಾಗಲಾರ. ಕಾರ್ಯಕರ್ತರಾಗಿರಲು ಖುಷಿ ಪಡಿ ಎಂದು ಹಿತವಚನ ಹೇಳಿ ಹೊರಟರು. ಅಲ್ಲಿಗೆ ಇವರು ಇನ್ನು ಮಂತ್ರಿಯಾಗುವುದು ಗಗನಕುಸುಮವೆಂಬುದು ವಿದಿತವಾಗಿತ್ತು. ಆದರೂ ರೆಡ್ಡಿಗಳು ತಮ್ಮ ಪ್ರಯತ್ನ ಕೈಬಿಡಲಿಲ್ಲ. ಜಿಲ್ಲೆಯ ಶಾಸಕರನ್ನು ಒಟ್ಟುಗೂಡಿಸಿಕೊಂಡು ಇಂಡೋನೇಷ್ಯಾಗೆ ಹಾರಲೂ ತಯಾರಿ ನಡೆದಿತ್ತು. ರೆಡ್ಡಿ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚಚರ್ೆಯಲ್ಲಿದ್ದರು. ಯಾವುದೂ ಕೈಗೂಡದಾದಾಗ, ರೆಡ್ಡಿ ತೊಡೆತಟ್ಟಿ ಸೆಟೆದು ನಿಲ್ಲಲು ನಿರ್ಧರಿಸಿದ್ದರು.

ಇದರ ಭಾಗವಾಗಿಯೇ ಸೆಪ್ಟೆಂಬರ್ 4ರಂದು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆಯೆಂದು ಶ್ರೀರಾಮುಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದೇ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವವರಿದ್ದರಾದರೂ, ಕಡೆಯ ಘಳಿಗೆಯಲಲ್ಲಿ ಬಿಜೆಪಿಯ ರಿಯಾಕ್ಷನ್ ಅನ್ನು ನೊಡಲೆಂಬಂತೆ ಬರಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಹಿಂದೆ, ರೆಡ್ಡಿ ಬಣದ ರಾಜಕೀಯ ಭವಿಷ್ಯವೇ ನಿಂತಿತ್ತು. ರಾಜೀನಾಮೆ ನೀಡಿದ ಕೂಡಲೇ ಶ್ರೀರಾಮುಲು ರಾಜ್ಯಾದ್ಯಂತ ಸ್ವಾಭಿಮಾನಿ ಯಾತ್ರೆಯ ಹೆಸರಿನಲ್ಲಿ ಪ್ರವಾಸ ಕೈಗೊಂಡು ಜನರನ್ನು ಸಂಘಟಿಸುವುದು, ಅದನ್ನು ಬಳಸಿ ಬಿಎಸ್ಆರ್ ಕಾಂಗ್ರೆಸ್ - ಬಿ. ಶ್ರೀರಾಮುಲು ಕಾಂಗ್ರೆಸ್ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿ, ಉತ್ತರ ಕನರ್ಾಟಕದ ಸೆಂಟಿಮೆಂಟನ್ನೇ ಹಿಡಿದು ಆರ್ಟಿಕಲ್ 371 ಗಾಗಿ ಧ್ವನಿಯೆತ್ತಿ, ಯತ್ನಾಳ್ ಥರಹದ ಲಿಂಗಾಯತ ನಾಯಕರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದು. ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಚಿತ್ರದುರ್ಗಗಳಲ್ಲಿ ಈಗಾಗಲೇ ರೆಡ್ಡಿ ಬಣಕ್ಕೆ ಎದುರಿಲ್ಲದಂತಹ ಪರಿಸ್ಥಿತಿ. ಇದನ್ನೇ ಬೇಸಾಗಿಟ್ಟುಕೊಂಡು ವಿಸ್ತರಿಸುವುದು. ಜೆಡಿಎಸ್ ಸೇರಿಬಿಡುವ ಕುರಿತೂ ಕುಮಾರಸ್ವಾಮಿಯೊಂದಿಗೆ ಅಂತಿಮ ಹಂತದ ಮಾತುಕತೆಗಳಾಗಿದ್ದವಾದರೂ ದೇವೇಗೌಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಸದ್ಯ ಅದನ್ನು ಕೈಬಿಟ್ಟು, ನೂತನ ಪಕ್ಷ ಸ್ಥಾಪಿಸಿ, ಚುನಾವಣೆಗೆ ಹೋಗುವುದು. ಈ ನೂತನ ಪಕ್ಷಕ್ಕೆ ಜೆಡಿಎಸ್ ಸಾಥ್ ನೀಡುತ್ತದೆ. ಚುನಾವಣೆಯ ನಂತರ ಹೊಂದಾಣಿಕೆಯಲ್ಲಿ ಅಧಿಕಾರ ಹಿಡಯುವುದು. ಇದು ರೆಡ್ಡಿ ನೀಲನಕ್ಷೆಯಾಗಿತ್ತು. ಪಾಳೇಗಾರ ತಾನೇ ಸ್ವತಃ ಶ್ರೀಮನ್ಮಹಾರಾಜನಾಗಲು ಹವಣಿಸುತ್ತಿದ್ದ.

ಆದರೆ ಅದರ ಮರುದಿನವೇ ಸಿಬಿಐ ರೆಡ್ಡಿಗೆ ಕೃಷ್ಣ ಜನ್ಮಸ್ಥಾನದ ಆತಿಥ್ಯ ನೀಡಿತು. ಎಲ್ಲವೂ ತರಗೆಲೆಗಳಂತೆ ಧರೆಗುರುಳಿ ಹೋದವು. ರೆಡ್ಡಿ ಬಣಕ್ಕೆ ಇದರ ಯಾವ ಮುನ್ಸೂಚನೆಯೂ ಇರಲಿಲ್ಲ. ಅಲ್ಲಿ ಮುಂಜಾನೆ ಉಷಃ ಕಾಲದಲ್ಲೇ ದಾವಾನಿಲ ಕುದಿಯುತ್ತಿತ್ತು. ಈಗ ಅವರಿಗೆ ರಾಜಕೀಯ ಬಲವಿರಲಿಲ್ಲ. ಹಾಗಾಗಿ ಅಧಿಕಾರ ಶಾಹಿ ಇವರ ಜೊತೆಗಿಲ್ಲ. ಕಳೆದೊಂದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ರಾಜಕೀಯ ಆಡಳಿತವೇ ಇಲ್ಲ. ಜಿಲ್ಲ ಉಸ್ತುವಾರಿ ಮಂತ್ರಿ ಬಾಲಚಂದ್ರ ಜಾರಕಿಹೊಳಿ, ಇನ್ನೂ ಇತ್ತ ತಲೆ ಹಾಕಿಯೂ ಇಲ್ಲ. ಅಧಿಕಾರಶಾಹಿ ಆಡಳಿತ. ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಮತ್ತು ಪೋಲೀಸ್ ಎಸ್ಪಿ ಡಾ. ಚಂದ್ರಗುಪ್ತ ಒಂದು ಉತ್ತಮ ಟೀಂ. ಇಬ್ಬರೂ ಖಡಕ್ ಅಧಿಕಾರಿಗಳು. ಇಷ್ಟು ದಿನದ ದಬ್ಬಾಳಿಕೆಯಲ್ಲಿ ಅಧಿಕಾರಿಗಳನ್ನು ಮನೆಯ ನಾಯಿಗಳಂತೆ ನಡೆಸಿಕೊಂಡ ರೆಡ್ಡಿ ವರ್ಗಕ್ಕೆ ಅಧಿಕಾರದ ಚುರುಕು ಮುಟ್ಟಿಸುತ್ತಲೇ ಅತ್ಯಂತ ಸಮರ್ಥವಾಗಿ ಜಿಲ್ಲಾಡಳಿತವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಇವರ ಬಳಿ ಉಳಿದಿರುವುದು ಮನಿ ಪವರ್ ಮತ್ತು ಅದರಿಂದಲೇ ಲಭ್ಯ ಮಸಲ್ ಪವರ್ ಮಾತ್ರ. ಮಿಕ್ಕೆಲ್ಲವನ್ನೂ ಕಳೆದುಕೊಂಡಾಗ ರೆಡ್ಡಿಗಳು ಇಳಿದದ್ದೇ ಇದಕ್ಕೆ.

ಒಂದು ಕ್ರಿಮಿನಲ್ ಅಫೆನ್ಸ್ ಮಾಡಿದುದಕ್ಕಾಗಿ ಸಿಬಿಐ ಜನಾರ್ಧನ ರೆಡ್ಡಿಯೆಂಬ ಮನುಷ್ಯನನ್ನು ಬಂಧಿಸಿದರೆ, ಅದನ್ನು ಖಂಡಿಸಿ ಬಳ್ಳಾರಿ ಬಂದ್ ಮಾಡಿಸಿದರು. ಈ ಬಂದ್ ಕರೆಗೆ ಜಿಲ್ಲಾ ಬಿಜೆಪಿ ಘಟಕ ಬೆಂಬಲ ವ್ಯಕ್ತಪಡಿಸದೇ ಇದ್ದದ್ದು ರೆಡ್ಡಿಗಳ ಇವತ್ತಿನ ಸ್ಥಾನಮಾನವನ್ನು ಸೂಚಿಸುತ್ತದೆ. ಊರಿಗೇ ಅವಮಾನ ಎಂದು ಜನ ಗೊಣಗಿಕೊಂಡರಾದರೂ, ರೆಡ್ಡಿ ಬೆಂಬಲಿಗರ ದೌರ್ಜನ್ಯಕ್ಕೆ ಹೆದರಿ ಬಾಲ ಸುಟ್ಟ ಬೆಕ್ಕಿನಂತೆ ಬಾಗಿಲೆಳೆದು ಮನೆಯೊಳಗೆ ಕೂತರು. ಬಳ್ಳಾರಿಯಾದ್ಯಂತ ದೊಣ್ಣೆ ಹಿಡಿದು ತಿರುಗಾಡಿದ ರೆಡ್ಡಿ ಬೆಂಬಲಿಗರು, ದಾಂಧಲೆ ನಡೆಸಿಬಿಟ್ಟರು. ಡಿಸಿ ಕಛೇರಿಗೇ ನುಗ್ಗಿ ದಾಂಧಲೆ ನಡೆಸಿದರು. ಸ್ವತಃ ಜಿಲ್ಲಾಧಿಕಾರಿ ಬಿಸ್ವಾಸ್ ಲಾಠಿ ಹಿಡಿದು ಗುಂಪನ್ನು ಚೆದುರಿಸಬೇಕಾಯಿತು. ಈ ಸಂಬಂಧ ಮೊಟ್ಟಮೊದಲ ಬಾರಿಗೆ 11 ಜನ ರೆಡ್ಡಿ ಬೆಂಬಲಿಗರನ್ನು ಬಂಧಿಸಲಾಗಿದೆ. ಬಳ್ಳಾರಿ ಮನಸ್ಸಿಲ್ಲದ ಮನಸ್ಸಿನಿಂದಲೇ ಮಂಡಿಯೂರಿತು. ಆದರೆ ಇದು ಅವಸಾನದ ಆರಂಭ ಎನ್ನುವುದಂತೂ ಸುಸ್ಪಷ್ಟ. ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರೋ?

ಜನಾರ್ಧನ ರೆಡ್ಡಿಯೆಂಬ ಒಬ್ಬ ಬಂಧಿಸಲ್ಪಟ್ಟ. ಅದಕ್ಕೆ ನಮ್ಮ ಕಾನೂನಿಗೆ ಒಂದು ಸಲಾಮು. ಆದರೆ ಇನ್ನು ಮುಂದೆ ಇಂಥ ಜನಾರ್ಧನ ರೆಡ್ಡಿಗಳು ಹುಟ್ಟಲಾರರೆ? ಜನಾರ್ಧನ ರೆಡ್ಡಿಯನ್ನು ಹುಟ್ಟುಹಾಕಿದ ನಮ್ಮ ವ್ಯವಸ್ಥೆ ಬದಲಾಗಿದೆಯೇ? ಆರ್ಥಿಕ  ಉದಾರೀಕರಣದ ಹೆಸರಿನಲ್ಲಿ, ಅಸಲು ಗಣಿಗಾರಿಕೆಯ ಯಾವುದೇ ಅನುಭವ ಇಲ್ಲ ಜ್ಞಾನವಿಲ್ಲದ ರೆಡ್ಡಿ ಮತ್ತೂ ಅನೇಕರಿಗೆ ಗಣಿಗಾರಿಕೆ ನಡೆಸಿ ಅದನ್ನು ಅವರೇ ನೇರವಾಗಿ ರಫ್ತು ಮಾಡಲು ಅನುವು ಮಾಡಿಕೊಟ್ಟ ವ್ಯವಸ್ಥೆಯಾದರೂ ಎಂಥದು? 200-300 ಹೆಕ್ಟೇರುಗಳ ಗಣಿ ಲೀಸುಗಳನ್ನೊಳಗೊಂಡ ಬಳ್ಳಾರಿಯಲ್ಲಿಯೇ ಈ ಪಾಟಿ ಅಕ್ರಮ ನಡೆದಿರಬೇಕಜಾದರೆ, ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವ ಹೊಸ ಗಣಿ ನೀತಿಯಲ್ಲಿ ಒಂದು ಗಣಿ ಲೀಸು 500 ಚದರ ಕಿಲೋಮೀಟರ್ವರೆಗೂ ವಿಸ್ತರಿಸಬಹುದು ಮತ್ತು ಇದನ್ನು ಎಸ್ಇಜೆಡ್ ಎಂದೂ ಘೋಷಿಸಬಹುದೆಂದು ಇದೆಯೇ? ಇಂಥ ನೀತಿ ನಿಯಮಗಳನ್ನನುಸರಿಸುತ್ತಲೇ ಒಂದು ಜನ ಲೋಕಪಾಲ ಮಸೂದೆ ಜಾರಿಗೆ ಬಂದು ಬಿಟ್ಟರೆ, ಭ್ರಷ್ಟಾಚಾರವೇ ಇರುವುದಿಲ್ಲವೆಂದು ಭ್ರಮಿಸುವುದು ಹುಚ್ಚಾದೀತು.

ಇನ್ನು ನಮ್ಮ ರಾಜಕೀಯ ಮತ್ತು ಪ್ರಜಾಪ್ರಭೂತ್ವ. ಇವತ್ತು ಹಣಬಲದೊಂದಿಗೆ ರಾಜಕೀಯಬಲ ಪಡೆಯುತ್ತಾರೆ, ಮತ್ತು ರಾಜಕೀಯ ಬಲದಿಂದ ಹಣಬಲ ಹೆಚ್ಚುತ್ತದೆ ಎಂಬಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಜನಾರ್ಧನ ರೆಡ್ಡಿಯ ವಿಷಯದಲ್ಲೂ ಆಗಿದ್ದು ಇದೇ ಅಲ್ಲವೆ? ಈ ಹಣಬಲ ರಾಜಕೀಯ ಬಲವನ್ನು ಜನರೂ ಆರಾಧಿಸುವ ಹಂತಕ್ಕೆ ಬಂದುಬಿಟ್ಟಿದ್ದೇವೆ. ಇವೆಲ್ಲವೂ ಸೇರಿಯೇ ರೆಡ್ಡಿಯನ್ನು ತಾನು ಶ್ರೀಕೃಷ್ಣದೇವರಾಯನ ಅಪರಾವತಾರ ಎಂದು ಭ್ರಮಿಸುವಷ್ಟರ ಮಟ್ಟಿಗೆ ಬೆಳೆಸಿತಲ್ಲವೆ? ಹೌದು ಆತ ಒಮ್ಮೆಯಾದರೂ ಶ್ರೀಕೃಷ್ಣದೇವರಾಯನ ಗೆಟಪ್ಪಿನಲ್ಲಿ ದರ್ಶನ ನೀಡಬೇಕೆಂದು ಚಿನ್ನದ ಕಿರೀಟ, ಸಿಂಹಾಸನ ಮಾಡಿಸಿಟ್ಟು ಕೊಂಡಿದ್ದನಂತೆ. ಅದೀಗ ಸಿಬಿಐ ವಶದಲ್ಲಿದೆ. ಅಷ್ಟೇ ಅಲ್ಲ. ಶ್ರೀಕೃಷ್ಣದೇವರಾಯ ತಿರುಪತಿ ದೇವಸ್ತಾನಕ್ಕೆ 42 ಕೋಟಿಗಳಷ್ಟು ಚಿನ್ನಾಭರಣ ದಾನ ಮಾಡಿದ್ದನಂತೆ. ಅದನ್ನು ಪುರಸ್ಕರಿಸಿಯೇ ರೆಡ್ಡಿ 43 ಕೋಟಿ ಮೌಲ್ಯದ ಚಿನ್ನದ ಕಿರೀಟವನ್ನು ದಾನ ಮಾಡಿದ್ದದು. ಇದು ಹುಚ್ಚು ನಿಜ. ಆದರೆ ಒಬ್ಬ ಪೋಲೀಸ್ ಪೇದೆಯ ಮಗನಿಗೆ ಈ ಭ್ರಮೆಯನ್ನಿಡಿಸಿದ ವ್ಯವಸ್ಥೆ? ಅದು ಬದಲಾಗಬೇಕಿದೆ. ಇಲ್ಲದಿದ್ದರೆ ಇನ್ನೂ ಹತ್ತು ಜನಾರ್ಧನ ರೆಡ್ಡಿಗಳು ಹುಟ್ಟಿಕೊಳ್ಳುತ್ತಾರೆ.

ವ್ಯಾಸಂಗ ಮುಗಿಯಿತು. ನಾಳೆಯಿಂದ Times Of India ಬಳ್ಳಾರಿ ಜಿಲ್ಲಾ ವರದಿಗಾರನಾಗಿ ಕೆಲಸ!

ನಮಸ್ಕಾರ, 

ಹೀಗೆ ಮಾತಾಡಿ ತುಂಬಾ ದಿನಗಳಾದವು. ಈಗ ಮತ್ತೆ ಅಂಥ ಸಂದರ್ಭ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಷಯವಾಗಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದೆ. ಜೊತೆಜೊತೆಗೆ ಪತ್ರಿಕೋದ್ಯಮವೂ ನಡೆದಿತ್ತು. ಈಗ ವ್ಯಾಸಂಗ ಮುಗಿದಿದೆ. ಕೆಲಸವೂ ಸಿಕ್ಕಿದೆ. ಓದಿದ್ದು ವಿದ್ಯುನ್ಮಾನ ಮಾಧ್ಯಮ ಆದರೆ ಕೆಲಸ ಪ್ರಿಂಟಿನದು! ಇದುವರೆಗೂ ಬರೆದುದೆಲ್ಲವೂ ಕನ್ನಡದಲ್ಲಿ, ಆದರೆ ಕೆಲಸ ಇಂಗ್ಲೀಷ್ ಮಾಧ್ಯಮದಲ್ಲಿ! ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಬಳ್ಳಾರಿ ಜಿಲ್ಲಾ ವರದಿಗಾರನಾಗಿ ನಿಯುಕ್ತನಾಗಿದ್ದೇನೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಬಳ್ಳ್ಳಾರಿ ರಾಷ್ಟ್ರೀಯ ಸುದ್ದಿ. ಲೋಕಾಯುಕ್ತರು ಅದನ್ನು `republic of bellary' ಎಂದು ಬಣ್ಣಿಸಿದ್ದಾರೆ. is it a broken republic today? i think its too early to judge. ಅದು ಗಣಿ ಧಣಿ-ಧೂಳಿನ ನಾಡು. ಆದರೆ ಅಲ್ಲಿನ ಜನತೆ ಸಂತ್ರಸ್ತರು ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಂಥ ಸಂಧಿಗ್ಧ ಕಾಲದಲ್ಲಿ ನಾನು ಬಳ್ಳಾರಿಗೆ ಹೊರಟಿದ್ದೇನೆ. ಅನೇಕರು ಹೆದರಿಸಿದರು. many advised me against it. ಆದರೆ ಒಳ್ಳೆಯ ಕೆಲಸ ಮಾಡಲು ಅವಕಾಶವಿದೆಯೆನಿಸಿದ್ದರಿಂದ ಹೊರಟಿದ್ದೇನೆ. ಆತ್ಮಸಾಕ್ಷಿಗೆ ಅಲ್ಲಿ ಮಾರುಕಟ್ಟೆಯೂ ಹೆಚ್ಚು. ಆದರೆ ಅಲ್ಲಿ ನಿಲ್ಲದೆ ಜನಪರ ಪತ್ರಿಕೋದ್ಯಮದೆಡೆಗೆ ಲಕ್ಷ್ಯವಹಿಸುತ್ತೇನೆನ್ನುವುದು ಭರವಸೆ.

ಇನ್ನು ಇದು ನನ್ನ ಮೊದಲ ಕೆಲಸ. ಮನೆಯಿಂದ ದೂರ ಇರುತ್ತಿರುವುದೂ ಇದೇ ಮೊದಲು. ಸಹಜವಾಗಿ ಒಂದು ಆತಂಕ ಇದ್ದೇ ಇದೆ. ಜೊತೆಗೆ ಮನೆಯ ಸೆಳೆತ. ಆದರೆ ಜೀವನ ಹರಿವ ನದಿ, ಅನಿವಾರ್ಯ. ಅಲ್ಲಿ ಒಂದು ಪುಟ್ಟ ಮನೆಯನ್ನೂ ಮಾಡಿದ್ದೇನೆ. ಇಂದು ರಾತ್ರಿಯೇ ಪಯಣ. ನಾಳೆಯ ಬೆಳಗು ಬಳ್ಳಾರಿಯಲ್ಲಿ. ಹೊಸ ಕೆಲಸ, ಹೊಸ ಜೀವನ.

ನಿಮ್ಮೆಲ್ಲರ ಹಾರೈಕೆ ಹೀಗೆ ಮುಂದುವರಿಯಲಿ.

Proudly powered by Blogger
Theme: Esquire by Matthew Buchanan.
Converted by LiteThemes.com.