Showing posts with label ಪ್ರಚಲಿತ. Show all posts
2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೇ?
2009 ಮಗುಚಿ ಬಿದ್ದಿದೆ. ಸರಿಯಾಗಿ ಒಂದು ವರ್ಷದ ಹಿಂದೆ 2008ರನ್ನು ಅತ್ಯಂತ ಉತ್ಸಾಹದಲ್ಲಿ ಕಳಿಸಿಕೊಟ್ಟಿದ್ದೆವು. ಎಂಥ ದರಿದ್ರದ ವರ್ಷ ಅದಾಗಿತ್ತು. ಭಾರತದ ಆರ್ಥಿಕ ನಾಗಾಲೋಟಕ್ಕೆ ಲಗಾಮು ಬಿದ್ದಿತ್ತು. ಜಾಗತಿಕ ಆರ್ಥಿಕ ಹಿಂಜರಿತ ಎಲ್ಲರನ್ನೂ ಹಿಪ್ಪಿ ಹಿಂಡು ಮಾಡಿ ಹಾಕಿತ್ತು. ವರ್ಷಾಂತ್ಯದಲ್ಲಿ ಮುಂಬೈ ನರಮೇಧ ನಡೆದು ಒಂದು ಆಕ್ರೋಶ, ಕೆಚ್ಚು, ಯುದ್ಧದ ಭೀತಿ, ಒಂದು ಸೂತಕದ ಛಾಯೆ ಆವರಿಸಿತ್ತು. ಸದ್ಯ ಈ ವರ್ಷ ಮುಗಿದರೆ ಸಾಕು ಎಂಬಂತಿತ್ತು ಎಲ್ಲರ ಮನಸ್ಥಿತಿ. ಆದರೆ 2009 ತಕ್ಕಮಟ್ಟಿಗೆ ಆಹ್ಲಾದಕರವಾಗೇ ಇತ್ತು, ಲೋಕಸಭೆ ಚುನಾವಣೆ ನಡೆದು ಯುಪಿಎ ಮತ್ತೆ ಅಧಿಕಾರ ಹಿಡಿಯಿತು, ಮನಮೋಹನರು ತಮ್ಮ ಸೇವೆ ಮುಂದುವರೆಸಿದರು, ಒಬ್ಬ ನೆರೆಯ ಆಂಧ್ರದ ದೊರೆ ವೈ.ಎಸ್.ಆರ್. ತೀರಿಕೊಂಡು ಬಿಟ್ಟರು. ಆಂಧ್ರ ರಾಜಕೀಯ ಅತಂತ್ರತೆ ಬಿದ್ದು ಬಿಟ್ಟಿತು, ಅದು ಬಿಟ್ಟರೆ ಎಲ್.ಕೆ.ಅದ್ವಾನಿಯವರ ಸುದೀರ್ಘ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಲಾಗಿತ್ತು. ಇವು ಬಿಟ್ಟರೆ ಅಂಥ ನಾಟಕೀಯ ಬೆಳವಣಿಗೆಗಳೇನೂ ನಡೆಯಲಿಲ್ಲ. ವರ್ಷದ ಕೊನೆಯಲ್ಲಿ ಎಲ್ಲ ಪತ್ರಕರ್ತರೂ 2009ರ ರಿವ್ಯೂಗೆ ಕೂತಿದ್ದರು ವಿಶೇಷಾಂಕಗಳನ್ನು ಹೊರತಂದರು, ಎಲ್ಲೂ ಸೂತಕ, ವಿಷಾದ ಇರಲಿಲ್ಲ. ಆದರೆ 2009ರ ಸೆರಗಿನಲ್ಲಿ ಇನ್ನು ಏನೋ ಇತ್ತು.

ಅವತ್ತು ಡಿಸೆಂಬರ್ 29. ಎಲ್ಲರೂ ಡಿಸೆಂಬರ್ 31ರ ಪಾರ್ಟಿಗೆ ಪ್ಲಾನು ಮಾಡುತ್ತಾ ಕೂತಿದ್ದರು. ಆಗ ಬರಸಿಡಿಲನಂತೆ ಬಂದೆರಗಿತ್ತು ಆ ಸುದ್ದಿ. ಸಿ.ಅಶ್ವತ್ಥ್ ಇನ್ನಿಲ್ಲ! ತಿಂಗಳ ಹಿಂದೆಯಷ್ಟೇ ದೊಡ್ಡದೊಂದು ಆರ್ಭಾಟದೊಂದಿಗೆ ಒಂದು ಅತ್ಯುತ್ತಮ ಕಾರ್ಯಕ್ರಮ ನೀಡಿ ಯಾಕೋ ಹೊಟ್ಟೆ ನೊವು ಅಂತ ಆಸ್ಪತ್ರೆ ಸೇರಿದವರು ಮತ್ತೆ ಮನೆಗೆ ಬರಲೇ ಇಲ್ಲ. ಅವರಿಗೆ ಲಿವರ್ ಸಿರೊಸಿಸ್ ಆಗಿತ್ತು, ಕಿಡ್ನಿ ಕೈಕೊಟ್ಟಿತ್ತು. ಅವರು ಆಸ್ಪತ್ರೆಯಲ್ಲಿದ್ದಷ್ಟೂ ದಿನ ಒಂದೊಂದು ರೀತಿಯ ಸುದ್ದಿ ಬರುತ್ತಿತ್ತು. ಇನ್ನು ಕಷ್ಟ, ಬರುವುದು ಅನುಮಾನ, ಏ ಇಲ್ಲ ಅಶ್ವತ್ಥ್ ಅದನ್ನೆಲ್ಲಾ ಸುಳ್ಳು ಮಾಡಿ ಅವರ 70 ವರ್ಷದ ಹುಟ್ಟಿದಹಬ್ಬದ ಕಾರ್ಯಕ್ರಮಕ್ಕೆ ಬಂದೇ ಬಿಡುತ್ತಾರೆ, ಏರು ಸ್ವರದಲ್ಲಿ ಹಾಡಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಾರೆ. ಹೀಗೆ ಸಾಗಿತ್ತು ಮಾತು. ಆದರೆ ಅವರು ತಮ್ಮ 70 ವರ್ಷದ ಹುಟ್ಟಿದ ಹಬ್ಬದ ದಿನವೇ ಇಹಲೋಕದ ಘಡತ್ತಾದ ಭೋಜನ ಮುಗಿಸಿ ಕೈತೊಳೆದೆದ್ದು ಬಿಟ್ಟರು ಅಶ್ವತ್ಥ್! ಅವರ ಭೋಜನ ಪ್ರೀತಿ ಬಲ್ಲವರಿಗೆ ಈ ಉಪಮೆ ಅಶ್ವಥರಿಗೆ ಅನ್ವರ್ಥ ಅನಿಸದಿರದು. ಕನ್ನಡದ ಸಾರಸ್ವತ ಲೋಕ ಒಬ್ಬ ಪ್ರಯೋಗಕರ್ತನನ್ನು, ಒಬ್ಬ perfectionistನ್ನು, ಅಸಾಧ್ಯ ಗಾತ್ರದ ಮಹಾ ಗಾಯಕನನ್ನು ಕಳಕೊಂಡು ಬಡವಾಗಿಬಿಟ್ಟತು. ಸುಗಮ ಸಂಗೀತ ಕ್ಷೇತ್ರವಂತೂ ಒಬ್ಬ ಆದ್ಯ ಪ್ರವರ್ತಕನನ್ನು, ಹಿರಿಯಣ್ಣನನ್ನು ಕಳಕೊಂಡು ಅನಾಥವಾಗಿಬಿಟ್ಟಿತು. ಹೊಸ ವರ್ಷದಲ್ಲೊಂದು ಸೂತಕದ ಕಳೆ ನಿಂತು ಬಿಟ್ಟಿತು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ. ಕನ್ನಡ ಸಾರಸ್ವತ ಲೋಕಕ್ಕೆ ಇನ್ನೊಂದು ಮಹಾಸೂತಕ ಜೊತೆಯಾಗುವುದಿತ್ತು.

ಅಶ್ವತ್ಥ್ರಿಗೆ ವಿದಾಯ ಹೇಳಿ ಮಲಗಿದ್ದ ಕನ್ನಡ ಮನಸ್ಸು ಬೆಳಿಗಾಗೇಳುವಷ್ಟರಲ್ಲಿ ಮತ್ತೊಂದು ಸಾವಿನ ಸುದ್ದಿ ಕೇಳಬೇಕಾಯಿತು. ಬರ ಸಿಡಿಲನಂತೆ ಬಂದು ಎರಗಿತ್ತು ಸುದ್ದಿ. ಕನ್ನಡ ಚಿತ್ರರಂಗದ ಯಜಮಾನ ವಿಷ್ಣುವರ್ಧನ್ ಅಶ್ವತ್ಥರನ್ನು ಹಿಂಬಾಲಿಸಿಬಿಟ್ಟಿದ್ದರು! ವಿಷ್ಣು ಯಾರ್ಯಾರಿಗೂ ಸುಳಿವು ನೀಡದೆ ಕೇವಲ 59 ವರ್ಷಕ್ಕೆ ಇಹಲೋಕದ ಯಾತ್ರೆ ಮುಗಿಸಿದ್ದರು! ವಿಷ್ಣು ಅವರ ಸಾವಿನ ಸುದ್ದಿಯನ್ನು ಮೊದಲಿಗೆ ಯಾರ್ಯಾರೂ ನಂಬಲೇ ಇಲ್ಲ. ಛೇ, ಇದೆಂಥ ರೂಮರು, ಅನ್ನೋದೇ ಬಹುತೇಕರ ಪ್ರತಿಕ್ರಿಯೆಯಾಗಿತ್ತು. ಆದರೆ ಅದು ರೂಮರಾಗಿರಲಿಲ್ಲ ಎಂಬುದು ಕನ್ನಡ ನಾಡಿನ ದುರ್ದೈವವಾಗಿತ್ತು. ಹೌದು ಎಂದಿನ ರೂಢಿಯಂತೆ ಮೈಸೂರಿಗೆ heart ಚೆಕಪ್ಗೆಂದು ಹೋಗಿದ್ದ ವಿಷ್ಣು, ರಾತ್ರಿ 2:20ಕ್ಕೆ ಹೃದಯಘಾತವಾಗಿ ತಮ್ಮ ನೆಚ್ಚಿನ kings court ಹೋಟೆಲಿನಲ್ಲಿಯೇ ಉಸಿರು ಚೆಲ್ಲಿಬಿಟ್ಟರು. ಕನ್ನಡ ನಾಡು ವಿಷಾದಕ್ಕೂ ಮೊದಲು ಒಂದು ದಿಗ್ಭ್ರಮೆಯಲ್ಲಿ ಮುಳುಗಿ ಹೋಯಿತು. ಯಾರಿಗೂ ವಿಷ್ಣು ನಮ್ಮನ್ನಗಲಿದ್ದಾರೆಂಬುದು ಸರಿಯಾಗಿ ಮನಸ್ಸಿನಲ್ಲಿ ನಾಟುತ್ತಲೇ ಇರಲಿಲ್ಲ. ಇಂದಿಗೂ ಬಹುತೇಕರಿಗಿದು ನಿಜವೇ ಸರಿ. ಏನು ವಿಷ್ಣು ಹೋಗಿಬಿಟ್ಟರಾ? ಅದು ಹೇಗೆ ಸಾಧ್ಯ? ಆದರೆ ವಿಧಿಯಾಟದ ಮುಂದೆ ಇದೆಲ್ಲವೂ ಯಾವ ಲೆಕ್ಕ. ವಿಷ್ಣು ಪಂಚಭೂತಗಳಲ್ಲಿ ಲೀನವಾಗೇ ಹೋದರು. ರಾಜಕುಮಾರ್ರನ್ನು ಕಳೆದುಕೊಂಡದ್ದನ್ನು ಇನ್ನೂ ಅರಿಗಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗ ಯಜಮಾನನ್ನು ಕಳೆದುಕೊಂಡುಬಿಟ್ಟಿತು. ಇರುವ ಸಂಕಷ್ಟಗಳ ಸರಮಾಲೆಗೆ ಸೂತಕದ ಹಾರ.
ಎರಡೇ ದಿನಗಳ ಅಂತರದಲ್ಲಿ ಕನ್ನಡ ಕಲಾ ರಸಿಕರ ಹೃದಯ ಸಿಂಹಾಸನವೇರಿದ್ದ ಇಬ್ಬರು ಅಪ್ಪಟ ಕಲಾವಿದರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ನಿಸ್ತೇಜಗೊಂಡು ಬಿಟ್ಟದೆ. ನಾಡು ಬಡವಾಯಿತು, ಅವರು ಹಾಗಿದ್ದರು ಹೀಗಿದ್ದರು, ಎಂದು ತುತ್ತೂರಿಯೂದುವುದಕ್ಕಿಂತಲೂ ಅವರು ಹಾಕಿಕೊಟ್ಟ ದಾರಿಯಲ್ಲಿ ಮುಂದಿನ ಪೀಳಿಗೆಯವರು ನಡೆದು, ಅವರ ಪರಂಪರೆಯನ್ನು ಮುಂದುವರೆಸುವುದು ಅವರಿಗೆ ನಾವು ಸಲ್ಲಿಸುವ ಸಾರ್ಥಕ ನಿವಾಳಿಯಾಗುತ್ತದೆ.
2009 ಮಗುಚಿ ಬಿದ್ದಿದೆ. 2010ರ ಸೂರ್ಯನಿಗೂ ಸೂತಕದ ಛಾಯೆ. ಅಲ್ಲ 2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೆ?
ಇನ್ನೂ ಜಾಕ್ಸನ್ ಮೇನಿಯಾ!
ಮೈಖೇಲ್ ಜಾಕ್ಸನ್! ಆ ಹೆಸರಿನಲ್ಲೇ ಏನೋ ಒಂದು ರೀತಿಯ ಶಕ್ತಿಯಿತ್ತು, ಇನ್ನೂ ಇದೆ. ಅಮೆರಿಕಾದ ಬಡ ಕರಿಯರ ಕುಟುಂಬದಲ್ಲಿ ಜನಿಸಿದ ಜಾಕ್ಸನ್, ತನ್ನ ಐದನೇ ವಯಸ್ಸಿನಿಂದಲೇ ಪಾಪ್ ಗಾಯನದೆಡೆಗೆ ಆಕರ್ಷಿತನಾದ. ತನ್ನ ಹನ್ನೆರಡನೇ ವಯಸ್ಸಿಗೆ ತನ್ನ ಸೋದರರೊಡಗೂಡಿ ಒಂದು ಪಾಪ್ ಆಲ್ಬಮ್ ಅನ್ನು ಕೂಡ ಮಾಡಿದ. ನಂತರ ಈತ ಬೆಳೆದ ರೀತಿ ಅಗಾಧ. ಅಮೆರಿಕಾ ಅಷ್ಟೇ ಏಕೆ ಇಡೀ ಜಗತ್ತನ್ನು ತನ್ನ ಪಾಪ್ ಸಂಗೀತ ಮತ್ತು ಚಿತ್ರ ವಿಚಿತ್ರ ಡ್ಯಾನ್ಸ್ನಿಂದ ಹಿಡಿದಿಟ್ಟುಕೊಂಡಿದ್ದ, ಆಬಾಲವೃದ್ಧರನ್ನು ತನ್ನ ಕಲೆಯಿಂದ ಹುಚ್ಚೆದ್ದು ಕುಣಿಸಿದ. ಮೈಖೇಲ್ ಜಾಕ್ಸನ್ ಒಂದು ಜೀವಂತ ದಂತಕಥೆಯಾಗಿದ್ದ. ಯಾರೇ ಮಕ್ಕಳು ಹಂಗೂ ಹಿಂಗೂ ಕೈಕಾಲು ಅಲ್ಲಾಡಿಸಿದರೆ, ಏನೋ ಮೈಖೇಲ್ ಜಾಕ್ಸನ್ನ?
ಅಂತೀವಿ. ಇಡೀ ವಿಶ್ವವನ್ನು ಮೈಖೇಲ್ ಜಾಕ್ಸನ್ ಹಿಡಿದಿಟ್ಟುಕೊಂಡ ರೀತಿಯದು. ಸಮಾಜದ ಏಣಿಯೇರುತ್ತಾ ಹೋದ ಮೈಖೇಲ್ ಮೇಲೆ ಒಬ್ಬಂಟಿಯಾಗಿಬಿಟ್ಟ. ಆತನಿಗೆ ಸಿಕ್ಕಿದ್ದು ಏಕಾಂತವಲ್ಲ, ಒಬ್ಬಂಟಿತನ! ಆತನ ಬಾಲ್ಯದ ಎಲ್ಲ ಕಹಿ ಘಟನಾವಳಿಗಳೂ ಕಲಸುಮೇಲೋಗರವಾಗಿ ಆತನ ಜೀವನದ ಮೇಲೆ ಪ್ರಭಾವ ಬೀರಲಾರಂಭಿಸಿದವು. ಕೌಟಂಬಿಕ ಜೀವನ ಮೂರಾಬಟ್ಟೆಯಾಯಿತು. ಕರಿಯ ಜಾಕ್ಸನ್ ಬಿಳಿಯನಾದ. ಪ್ರೀತಿಯ ಮಕ್ಕಳನ್ನು ದೂರ ಮಾಡಿಕೊಂಡ. ಅನೇಕ ವಿವಾದಗಳು ಆತನ ಬೆನ್ನುಬಿಡದೆ ಕಾಡಿದವು. ಮನುಷ್ಯ ಜರ್ಜರಿತವಾಗಿ ಹೋಗಿದ್ದ. ಆತ ಡ್ಯಾನ್ಸ್ ಮಾಡಲು, ಆತನ ದೇಹವನ್ನು ಹುರಿಗೊಳಿಸಿಕೊಳ್ಳಲು ಅಪಾರ ಪ್ರಮಾಣದ ಮೆಡಿಕೇಶನ್ಗೆ ಒಳಗಾಗಿದ್ದ, ಅದೂ ದಶಕಗಳ ಕಾಲ. ಹಲವಾರು ಡ್ರಗ್ಸ್ಗೆ ಆತ ದಾಸನಾಗಿದ್ದ. ಇಂತಿಪ್ಪ ದೇಹವನ್ನು ಸತತ 50 ದಿನಗಳ concertಗಾಗಿ ಹುರಿಗೊಳಿಸಲು ಹೋಗಿ ವಿಫಲನಾದ. ಮೊನ್ನೆ ಜೂನ್ 25 2009ರಂದು ಆ ದೇಹ ಇನ್ನು ತಡೆಯದಾಯಿತು. ಜಾಕ್ಸನ್ ಸತ್ತುಹೋದ! ಇಡೀ ಜಗತ್ತು ಶೋಕ ಶಾಗರದಲ್ಲಿ ಮುಳುಗಿಹೋಯಿತು. ಆತನ ಅಭಿಮಾನಿಗಳು ಆತ ತೀರಿಕೊಂಡಿದ್ದಾನೆಂಬುದನ್ನು ಒಪ್ಪಲು ಇನ್ನೂ ತಯಾರಿಲ್ಲ. That is ಮೈಖೇಲ್ ಜಾಕ್ಸನ್!
ಜಾಕ್ಸನ್ ಈ ವರ್ಷದ ನವೆಂಬರ್ ನಿಂದ ಬರುವ marchವರೆಗೆ ಲಂಡನ್ ಮತ್ತು ಇಂಗ್ಲೆಂಡಿನ ಅನೇಕ ಕಡೆಗಳಲ್ಲಿ 50 ಕಾರ್ಯಕ್ರಮಗಳನ್ನು ನೀಡಬೇಕಿತ್ತು. ಎಲ್ಲಾ ತಯಾರಿಗಳೂ ಆಗಿತ್ತು. ಐವತ್ತೂ ಕಾರ್ಯಕ್ರಮಗಳ ಟಿಕೆಟ್ಗಳು ಕಡಲೆಪುರಿಯಂತೆ ಬಿಕರಿಯಾಗಿ ಹೋಗಿದ್ದವು. ಜನ ಆ ದಿನಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದರು. ಆದರೆ ಆತನ ಅಕಾಲ ಮರಣ ಅದೆಲ್ಲವನ್ನೂ ಸ್ಥಬ್ಧವಾಗಿಸಿಬಿಟ್ಟಿತು. ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಎಇಜಿ ಲೈವ್ ಮತ್ತು ಲಂಡನ್ನ ಒ2 ಅರೆನಾ ಕಂಪೆನಿಗಳು ಮುಳುಗಿ ಹೋಗುವ ಹಂತಕ್ಕೆ ಬಂದುಬಿಟ್ಟವು. ಈಗಲೂ ಎಇಜಿ ಲೈವ್ ಮೇಲೆ ಕೋರ್ಟಿನಲ್ಲಿ 300 ಮಿಲಿಯನ್ ಪೌಂಡ್ಗಳಿಗೆ ಲಯಾಬಿಲಿಟಿ ಸೂಟ್ ಇದೆ.

ಈಗ ಇವರು ಹಾಕಿದ ದುಡ್ಡನ್ನು ವಾಪಸು ಪಡೆಯಲೇ ಬೇಕು, ಬೇರೆ ಗತ್ಯಂತರವಿಲ್ಲ.ಆಗ ಅವರಿಗೆ ಹೊಳೆದಿದ್ದೇ ಈ ಸಿನಿಮಾ ಐಡಿಯಾ. ಲಂಡನ್ನ concertಗಳಿಗಾಗಿ ಮೈಖೇಲ್ ಜಾಕ್ಸನ್ ಕಾರ್ಯಕ್ರಮ ಆಯೋಜಕರೊಂದಿಗೆ ನಡೆಸಿದ ರಿಹರ್ಸಲ್ಗಳ ನೂರು ಘಂಟೆಗಳ ವೀಡಿಯೋ ರೆಕಾರ್ಡಿಂಗ್ ಇತ್ತು ಇವರ ಬಳಿ. ಸರಿ ಜಾಕ್ಸನ್ ಜೊತೆ ಕ್ರಿಯೇಟಿವ್ ಅಸೊಸಿಯೇಟ್ ಆಗಿ ಕೆಲಸ ಮಾಡಿದ ಕೆನ್ನಿ ಆರ್ಟೆಗ ಮತ್ತು ಜಾಕ್ಸನ್ ಎಸ್ಟೇಟ್ನೊಂದಿಗೆ ಒಪ್ಪಂದ ಮಾಡಿಕೊಂಡ ಎಇಜಿ ಲೈವ್ ಈ ನೂರು ಘಂಟೆಗಳ ಫುಟೇಜನ್ನು ಹಿಡಿದು ಜಾಕ್ಸನ್ ಕಡೆಯ ದಿನಗಳ ಬಗ್ಗೆ ಸಿನಿಮಾ, ಇಲ್ಲ ಸಿನಿಮಾ ಮಾದರಿಯ ಸಾಕ್ಷ್ಯಚಿತ್ರ ಮಾಡಲು ನಿರ್ಧರಿಸಿತು. ಅದೇ ಈಗ ತೆರೆಕಂಡಿರುವ ಜಾಕ್ಸನ್ ಚಿತ್ರ - `this is it'. ಈ ಸಿನಿಮಾದಿಂದ ಬರುವ ಲಾಭಾಂಶದ ಶೇ.90ರಷ್ಟನ್ನು ಜಾಕ್ಸನ್ ಎಸ್ಟೇಟಿಗೂ, ಮಿಕ್ಕ ಶೇ.10ರಷ್ಟು ತಮಗೆಂದೂ ಕೋರ್ಟನ್ನೂ ಕೂಡ ಒಪ್ಪಿಸಿ ಈಗ ವಿಶ್ವದ ಮೂಂದೆ ಈ ಸಿನಿಮಾವನ್ನು ಇಟ್ಟದೆ. ಜಾಕ್ಸನ್ ನಡೆಸಿದ ರಿಹರ್ಸಲ್ಗಳು, ಐದಾರು ಹಾಡುಗಳ ಪೂರ performence, ಕೆಲವು ಖಾಸಗೀ ಕ್ಷಣಗಳು, ಆತನ ಸಂದರ್ಶನಗಳ ಸಂಕಲನವೇ ಈ ಸಿನಿಮಾ. ಮೊನ್ನೆ ಅಕ್ಟೋಬರ್ 28ರಂದು ಈ ಸಿನಿಮಾ ಇಡಿಯ ವಿಶ್ವದಲ್ಲಿ ತೆರೆಕಂಡಿದೆ. ಈ ಸಿನಿಮಾ ಕೇವಲ ಎರಡು ವಾರ ಒಡಲಿದೆ. ಭಾರತದಲ್ಲಿ ಸುಮಾರು 120 ಪ್ರಿಂಟ್ಗಳೊಂದಿಗೆ ಇದು ತೆರೆಕಂಡಿದೆ. ಮೈಖೇಲ್ ಜಾಕ್ಸನ್ನ ಅಭಿಮಾನಿಗಳು ಮತ್ತೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಮೊನ್ನೆ ಲಾಸ್ ಏಂಜಲೀಸ್ನಲ್ಲಿ ಈ ಸಿನಿಮಾದ ಪ್ರೀಮಿಯರ್ ಷೋ ಅನ್ನು ನೋಡಿ ಹೊರಬಂದ ಜಾಕ್ಸನ್ ಸೋದರರೆಲ್ಲರೂ ಮಾತೇ ಬಾರದವರಂತೆ ಮೌನಕ್ಕೆ ಮೊರೆ ಹೋಗಿಬಿಟ್ಟಿದ್ದರು, ಆ ಪ್ರೀಮಿಯರ್ ನೋಡಿ ಹೊರಬಂದ ಪ್ರತಿಯೊಬ್ಬರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ವಿಶ್ವದಾದ್ಯಂತ ಈ ಚಿತ್ರಕ್ಕೆ ಅಮೋಘ ಎನ್ನುವಂತಹ ಸ್ಪಂದನೆ ಲಭಿಸಿದೆ, ಅತ್ಯುತ್ತಮ ಎನ್ನಬಹುದಾದ ಓಪನಿಂಗ್ ಸಿಕ್ಕಿದೆ. ಆಗಲೇ ಎರಡು ವಾರಗಳ ಎಲ್ಲಾ ಟಿಕೇಟುಗಳೂ ಸೇಲ್ ಆಗಿ ಹೋಗಿವೆ.
ನೀವೇ ಊಹಿಸಿ ಇದು ಸಿನಿಮಾ ಅಲ್ಲ, ಒಂದು ಸಾಕ್ಷ್ಯಚಿತ್ರ. ಆದರೆ ಜಗತ್ತಿನ ನಾನಾಕಡೆ ಜನ ಇದನ್ನು ಥಿಯೇಟರ್ನಲ್ಲಿ ನೋಡಲು ಮುಗಿ ಬೀಳುತ್ತಿದ್ದಾರೆ, ನಾವು ಅದರ ಬಾಕ್ಸಾಫೀಸು, ಓಪನಿಂಗ್ ಬಗ್ಗೆ ಮಾತನಾಡುತ್ತಿದ್ದೇವೆಂದರೆ ಜಾಕ್ಸನ್ ಮೇನಿಯಾ ಎಷ್ಟಿದೆಯೆಂದು ನೀವೇ ಊಹಿಸಿ. ಅದು ಕಲಾವಿದನೊಬ್ಬನ ಶಕ್ತಿ. ಬೇರಾರಿಗೂ ಅದು ಸಾಧ್ಯವಿಲ್ಲದ್ದು. ಜಾಕ್ಸನ್ ಒಬ್ಬ ಅಪ್ಪಟ ಕಲಾವಿದ.
