ಮೂಲ ಒಪ್ಪಂದದ ಆಧಾರದ ಮೇಲೆ 20-11-1995ರಂದು ಅಂದಿನ ಮುಖ್ಯಮಂತ್ರಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸೇರಿದ್ದ ಹೈಲೆವೆಲ್ ಕಮಿಟಿಯು 7 ಟೌನ್ಷಿಪ್ಗಳನ್ನು 5ಕ್ಕೆ ಮಿತಿಗೊಳಿಸಿ, ಮಿಕ್ಕಂತೆ ಇನ್ನುಳಿದ ಎಲ್ಲ ಪ್ರಸ್ತಾಪಗಳನ್ನು ಅನುಮೋದಿಸಿ, ಅದಕ್ಕೆ ಸಂಬಂಧ ಪಟ್ಟ ಹಾಗೆ, ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಇಲಾಖೆಗೆ ಆದೇಶಿಸಿದ್ದ, ಜಿ.ಒ. ಪಿಡಬ್ಲ್ಯೂ 32 ಸಿಎಸ್ಆರ್ 95 ರ ಪ್ರಕಾರ ನೈಸ್ ಕಾಮಗಾರಿಗೆ ಅಗತ್ಯ ಬೇಕಾದ ಭೂಮಿಯ ವಿವರಗಳನ್ನು ಕೋರಿ 8-02-1996ರಂದು ಅಂದಿನ ಲೋಕೋಪಯೋಗಿ ಕಾರ್ಯದರ್ಶಿ ಬಿ.ಪಿ.ನಿತ್ಯಾನಂದ ನೈಸೆಲ್ಗೆ ಒಂದು ಪತ್ರ ಬರೆಯುತ್ತಾರೆ. ಈ ಪತ್ರಕ್ಕುತ್ತರವಾಗಿ ಭಾರತ್ ಫೋರ್ಜ್ ಲೆಟೆರ್ ಹೆಡ್ನ ಮೇಲೆ ಶಿವಕುಮಾರ ಖೇಣಿಯವರು ಒಂದು ಪತ್ರ ಬರೆದು ಬೆಂಗಳೂರು ಅರ್ಬನ್ ಮತ್ತು ರೂರಲ್ ಜಿಲ್ಲೆಗಳಲ್ಲಿ, ನೈಸ್ ಪ್ರಾಜೆಕ್ಟ್ಗೆ ಬೇಕಾದ ಭೂಮಿಯ ವಿವರವನ್ನು ಸರ್ವೇ ನಂ.ಗಳ ಸಹಿತ ಸಲ್ಲಿಸುತ್ತಾರೆ. ಹೀಮದೆಯೇ ಮಾರ್ಚ್ 11, 18, 29, ಏಪ್ರಿಲ್ 24, 1996ರಂದು ಬರೆದ ಸತತ ಪತ್ರಗಳಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಟೌನ್ಷಿಪ್, ಇಂಟರ್ಛೇಂಜ್, ಕ್ಲೋವರ್ ಲೀಫ್, ಪೆರಿಫೆರಲ್ ರೋಡ್ ಮತ್ತಿತರ ಎಲ್ಲ ಕಾಮಗಾರಿಗೂ ಅಗತ್ಯ ಬೇಕಾದ ಭೂಮಿಯ ವಿವರವನ್ನು ಸರ್ವೇ ನಂ.ಗಳ ಸಹಿತ ಸಲ್ಲಿಸುತ್ತಾರೆ. ಎಲ್ಲಾ ಶೇರಿ ಈ ಭೂಮಿಯ ವಿವರ ನೈಸೆಲ್ ಸಲ್ಲಿಸಿರುವ 12 ಬುಕ್ಲೆಟ್ಗಳಲ್ಲಿ ಅಡಗಿದೆ.
ಇವತ್ತು ಖೇಣಿ ಸಾಹೇಬರು ನಾವು ಸರ್ಕಾರಕ್ಕೆ ಸಲ್ಲಿಸರುವುದೇ ಒಂದು ಅಲೈನ್ಮೆಂಟು ಅದರಂತೆಯೇ ನಾವು ಒಮ್ಮೆ ಮಾತ್ರ ಅಗತ್ಯ ಭೂಮಿಯ ಸರ್ವೇ ನಂ.ಗಳನ್ನು ಸಲ್ಲಿಸಿದ್ದೇವೆ ಎನ್ನುತ್ತಾರಲ್ಲ? ಅದು ಇದೇ. ಆದರೆ ನೀವು ಇವತ್ತು ನೈಸ್ ರಸ್ತೆ ಹಾದು ಹೋಗುತ್ತಿರುವುದು ಈ ಪ್ರಾಂತ್ಯದಲ್ಲಲ್ಲವೇ ಅಲ್ಲ. ಇರಲಿ, ಅದು ಇನ್ನೊಂದು ದೊಡ್ಡ ಕಥೆ. ಅದಕ್ಕೆ ನಂತರ ಬರೋಣ. ಹೀಗೆ ಖೇಣಿ ಸಾಹೇಬರು ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಲ್ಲಿರುವ , ಸರ್ಕಾರದಿಂದ ಅನುಮೋದನೆ ಪಡೆದಿರುವ ಅಲೈನ್ಮೆಂಟಿಗೆ ಅನುಗುಣವಾಗಿ ಬಿಎಂಐಸಿಪಿಗೆ ಅಗತ್ಯ ಬೇಕಾದ ಭೂಮಿಯ ವಿವರಗಳನ್ನು ಸಲ್ಲಿಸಿದ್ದಾರೆ. ಅಲ್ಲಿಗೆ ಅವರೇ ಒಪ್ಪಿಕೊಂಡಂತೆ ನೈಸ್ ಯೋಜನೆಗೆ ಬೇಕಾಗಿರುವುದು ಇದೇ ಭೂಮಿ.
ರ್ನಯಸೆಲ್ ಕಂಪೆನಿ ನೀಡಿರುವ ಈ ಮಾಹಿತಿಯ ಆಧಾರದ ಮೇಲೆ ಸರ್ಕಾರದ ಮಟ್ಟದಲ್ಲಿ ಕೆಲಸ ಶುರುವಾಯಿತು. ಲೋಕೋಪಯೋಗಿ ಕಾರ್ಯದರ್ಶಿಗಳು ತಮಗೆ ಸಲ್ಲಿಸಲ್ಪಟ್ಟ ಈ ಮಾಹಿತಿಯ ಆಧಾರದ ಮೇಲೆ ಲೋಕೋಪಯೋಗಿ ಚೀಫ್ ಇಂಜಿನಿಯರ್ ಅವರಿಗೆ 16-03-1996ರಂದು ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಕೊಡುವಂತೆ ಕೋರಿ ಪತ್ರ ಬರೆಯುತ್ತಾರೆ. ಅವರು ಇನ್ ಟರ್ನ್ ಲೋಕೋಪಯೋಗಿ ಇಲಾಖೆಯ ಡೆಪ್ಯೂಟಿ ಕಮೀಶನರ್ ಅವರಿಗೆ ಪತ್ರ ಬರೆಯುತ್ತಾರೆ. ಇದೇ ವಿಷಯವಾಗಿ ಅಶೋಕ ಖೇಣಿಯವರು 20 ಮೇ, 1996ರಂದು ಕೆಎಸ್ಐಐಡಿಸಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯುತ್ತಾರೆ. ಕೆಎಸ್ಐಐಡಿಸಿಯಲ್ಲಿ ಮೇ 22ರಂದು ಈ ವಿಷಯವಾಗಿ ಒಮದು ಕೋರ್ ಗ್ರೂಪ್ ಮೀಟಿಂಗ್ ನಡೆಯುತ್ತದೆ. ಅಲ್ಲಿ ಬಿಎಂಐಸಿಪಿ ಯೋಜನೆಯನ್ನು ಕೆಎಸ್ಐಐಡಿಸಿಗಿಂತಲೂ, ಕೆಐಎಡಿಬಿ ಕಾಯ್ದೆಯನ್ವಯ ಜಾರಿ ಮಾಡಿದರೆ ಸುಲಭವಾಗುತ್ತದೆ ಎಂದು ಕೈ ತೊಳೆದುಕೊಳ್ಳುತ್ತದೆ.
ನವೆಂಬರ್ 22 ಮತ್ತು 26ರಂದು ಅಶೋಕ ಖೇಣಿ ಸಾಹೇಬರು ಲೋಕೋಪಯೋಗಿ ಕಾರ್ಯದರ್ಶಿಗಳಾದ ಸಿ.ಆರ್. ರಮೇಶ್ ಅವರಿಗೆ ಮತ್ತೆರಡು ಪತ್ರಗಳನ್ನು ಬರೆದು, ಬಿಎಂಐಸಿಪಿಗೆ ಅಗತ್ಯ ಬೇಕಾದ 6956 ಎಕರೆ ಸರಕಾರೀ ಭೂಮಿಯ ಹಸ್ತಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತಾರೆ. ಇದರ ಜೊತೆಗೆ ಬಿಎಂಐಸಿಪಿಗೆ ಅಗತ್ಯ ಬೇಕಾದ ಸರಕಾರೀ ಭೂಮಿಯ ಸಂಪೂರ್ಣ ವಿವರ ಸರ್ವೇ ನಂ.ಗಳ ಸಹಿತ ಸಲ್ಲಿಸಿರುತ್ತಾರೆ. ಅದೇ ದಿನ ಅಂದರೆ ನವೆಂಬರ್ 26, 1996 ರಂದು ಸಿ.ಆರ್.ರಮೇಶ್ ಅವರು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಕೂಡಲೇ ಅಗತ್ಯ ಬೇಕಾದ ಸರಕಾರೀ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿ ಬರೆಯುತ್ತಾರೆ. ಈ ಕೂಡಲೇ ಸರ್ಕಾರದ ಮಟ್ಟದಲ್ಲಿ ಈ ಕುರಿತು ಒಂದು ಸಭೆ ನಡೆಯುತ್ತದೆ. ಲೋಕೋಪಯೋಗಿ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಕೆಎಸ್ಐಐಡಿಸಿ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಬಿಎಂಐಸಿಪಿ ಯೋಜನೆಗೆ ಅಗತ್ಯ ಬೇಕಾದ 6956 ಎಕರೆ ಸರಕಾರೀ ಭೂಮಿಯನ್ನು ಕಂಪೆನಿಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು. ಈ ಸಂಬಂಧ ಫೈನಾನ್ಸ್ ಡಿಪಾರ್ಟ್ಮೆಂಟಿನ ಒಪ್ಪಿಗೆಯನ್ನೂ ಪಡೆದು 20-1-1997ರಂದು ಸರಕಾರೀ ಆದೇಶವೊಂದನ್ನು ಕೂಡ ಹೊರಡಿಸಲಾಯಿತು.
ಇದಾದ ಕೆಲವೇ ದನಗಳಲ್ಲಿ, ಅಂದರೆ ಏಪ್ರಿಲ್ 3, 1997 ರಂದು ಸರ್ಕಾರ ನ್ಯಸೆಲ್ ಕಂಪೆನಿಯ ಜೊತೆ ಫ್ರೇಂವರ್ಕ್ ಅಗ್ರೀಮೆಂಟಿಗೆ ಸಹಿ ಹಾಕಿತು. ಬಹುತೇಕ ಬದಲಾವಣೆಗಳು ನಡೆದದ್ದೇ ಆಗ. ನಾವು ಈ ಕುರಿತು ಕೂಲಂಕುಷವಾಗಿ ತಿಳಿದುಕೊಂಡಿದ್ದೇವೆ. ಆದ್ದರಿಂದ ಎಲ್ಲವನ್ನೂ ಮೆಲುಕು ಹಾಕುವುದು ಅನಾವಶ್ಯಕವಾದರೂ, ಭೂಮಿಯ ವಿಷಯದಲ್ಲಿ ಆದ ಬದಲಾವಣೆಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕುವುದು ಉತ್ತಮ. ನಿಮಗೆ ನೆನಪಿರುವುದೇ ಆದರೆ ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಟೇಬಲ್ 6.7ರಲ್ಲಿ ಸ್ಪಷ್ಟವಾಗಿ ದಾಖಲಿಸಿತ್ತು, ರಸ್ತೆಗೆ 5119.37 ಎಕರೆಗಳು ಅಗತ್ಯ ಎಂದು. ಇದಲ್ಲದೆ 7 ಟೌನ್ಷಿಪ್ಗಳಿಗೆ 20,092 ಎಕರೆಗಳು ಅಗತ್ಯವೆಂದು ತಿಳಿಸಿತ್ತು. ಆದರೆ ಸರ್ಕಾರ ಟೌನ್ಷಿಪ್ಗಳನ್ನು 7ರಿಂದ 5ಕ್ಕೆ ಇಳಿಸಿದ್ದರಿಂದ ಇದಕ್ಕಾಗಿ 13,194 ಎಕರೆಗಳು ಸಾಕೆಂದು ಹೈಲೆವೆಲ್ ಕಮಿಟಿ ಶಿಫಾರಸಿನ ಹಿನ್ನಲೆಯಲ್ಲಿ ಹೊರಡಿಸಿದ ಆದೇಶದಲ್ಲಿ ಸರ್ಕಾರ ಹೇಳಿಕೊಂಡಿದೆ. ಅಲ್ಲಿಗೆ ರಸ್ತೆ ಮತ್ತು ಟೌನ್ಷಿಪ್ಗಳೆರಡಕ್ಕೂ ಸೇರಿ ಮೂಲದಲ್ಲಿ ಅಗತ್ಯವಿದ್ದದ್ದು ಬರಿಯ 18,313 ಎಕರೆಗಳು.
ಆದರೆ ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಆಶ್ಚರ್ಯ ಕಾದಿತ್ತು. ಫ್ರೇಂವರ್ಕ್ ಅಗ್ರೀಮೆಂಟಿನ ಷೆಡ್ಯೂಲ್ 1ರಲ್ಲಿ ಪ್ರಾಜೆಕ್ಟಿಗೆ ಅಗತ್ಯ ಬೇಕಾದ ಭೂಮಿಯ ಪ್ರಮಾಣವನ್ನು ನಮೂದಿಸಲಾಗಿದೆ. ಅಲ್ಲಿ ಮಿಕ್ಕೆಲ್ಲವೂ ಮೊದಲಿನಂತೆಯೇ ಇದ್ದರೂ ರಸ್ತೆಗೆ 5119.37 ಎಕರೆಗಳ ಬದಲಿಗೆ 6999 ಎಕರೆಗಳು ಎಂದು ನಮೂದಾಗಿದೆ! ಅಂದರೆ ಕೇವಲ(!) 1880 ಎಕರೆಗಳಷ್ಟು ಹೆಚ್ಚುವರಿ ಭೂಮಿಯನ್ನು ಸರ್ಕಾರ ಕಂಪೆನಿಗೆ ಬಿಟ್ಟುಕೊಟ್ಟಿದೆ. ಆದರೆ ಯಾಕೆ? ಅದು ಉತ್ತರವೇ ಇಲ್ಲದ ಪ್ರಶ್ನೆ. ಹೀಗೆ ಹೆಚ್ಚುವರಿ ಭೂಮಿ ನೀಡುವುದರ ಪ್ರಸ್ತಾಪ ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಬೇರೆಲ್ಲೂ ಬರುವುದಿಲ್ಲ. ಷೆಡ್ಯೂಲ್ನಲ್ಲಿ ಕೂಡ ಈ ಹೆಚ್ಚುವರಿ ಭೂಮಿಗೆ ಯಾವುದೇ ವಿವರಣೆಗಳಿಲ್ಲ. ಅದಕ್ಕೊಂದು ಕಾರಣ, ಸರ್ವೇ, ಅನುಮೋದನೆಗಳು....ಊಹುಂ ಅದ್ಯಾವುದೂ ಇಲ್ಲ, ಸುಮ್ಮನೆ ಗಿಫ್ಟ್ ಏನೋ ಅನ್ನುವಂತೆ 1880 ಎಕರೆ ಹೆಚ್ಚುವರಿ ಭೂಮಿಯನ್ನು ಕಂಪೆನಿಗೆ ಕೊಡುವಂತಿರುವ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿದೆ.
ಇಲ್ಲಿಂದ ಶುರುವಾಯಿತು ಸ್ವಾಮಿ ಬಿಎಂಐಸಿಪಿ ಯೋಜನೆಯು ಒಂದು ರಿಯಲ್ ಎಸ್ಟೇಟ್ ದಂಧೆಯಾಗಿ, ಡಿಜೆನರೇಟ್ ಆಗುವುದು. ಇನ್ನು ಮುಂದಕ್ಕೆ, ಬಿಎಂಐಸಿಪಿ ಯೋಜನೆಯ ಈ ನೈಸ್ ಪುರಾಣದಲ್ಲಿ ಕೇಳಿ ಬರುವುದೆಲ್ಲವೂ ಭೂಮಿ ನುಂಗುವ ಹೆಬ್ಬಾವಿನ ಉಪಮೆಯೇ! ಆ ಮಟ್ಟಿಗೆ ಯೋಜನೆ ಅಡ್ಡದಾರಿ ಹಿಡಿದುಬಿಟ್ಟಿತ್ತು.
ಮೇ 15 1997ರಂದು ಲೋಕೋಪಯೋಗಿ ಕಾರ್ಯದರ್ಶಿ ಸಿ.ಆರ್.ರಮೇಶ್ ಅವರು ವಿಶೇಷ ಆಸಕ್ತಿ ವಹಿಸಿ ಕೆಐಎಡಿಬಿಗೆ ಒಂದು ಪತ್ರ ಬರೆದು ಎಕ್ಸ್ಪ್ರೆಸ್ ವೇನ ದಾರಿಯಲ್ಲಿ ಇನ್ನೂ ಅನೇಕರು ತಮ್ಮ ತಮ್ಮ ಪ್ರಾಜೆಕ್ಟ್ಗಳನ್ನು ಸ್ಥಾಪಿಸಲು ಹವಣಿಸುತ್ತಿದ್ದಾರೆ, ಮತ್ತು ಇದೇ ಪರಿಧಿಯಲ್ಲಿ ಅನೇಕ ಒತ್ತುವರಿಗಳಾಗುತ್ತಿವೆ. ಇದನ್ನು ಕೆಐಎಡಿಬಿ ತಡೆಯಬೇಕು ಎಂದು ಮನವಿ ಮಾಡಿಕೋಳ್ಳುತ್ತಾರೆ. ಜೂನ್ 3, 1997ರಂದು ಇದೇ ಕ್ಯಾಪ್ಟನ್ ರಮೇಶ್ ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿ ಗಳಿಗೆ ಹೀಗೊಂದು ಪತ್ರ ಬರೆಯುತ್ತಾರೆ.
I am enclosing herewith a copy of the survey nos. covering the Bangalore - Mysore infrastructure Corridor Project alignment. This alignment has been approved by the state government.
In view of the government decision, it is required that the aforementioned survey nos. should not be alienated. It is required that action must be initiated immediately in the matter.
ಇದರ ಜೊತೆಗೆ ಬಿಎಂಐಸಿಪಿ ಯೋಜನೆಗೆ ಅಗತ್ಯ ಬೇಕಾದ ಭೂಮಿಯ ವಿವರವನ್ನೂ ಸರ್ವೇ ನಂ.ಗಳ ಸಹಿತ ಲಗತ್ತಿಸುತ್ತಾರೆ. ಫ್ರೇಂವರ್ಕ್ ಅಗ್ರೀಮೆಂಟ್ ಆದ ಬಳಿಕ ಅದರ ಅನುಷ್ಠಾನಕ್ಕೆಂದು ಒಂದು ಎಂಪವರ್ಡ್ ಕಮಿಟಿಯನ್ನು ರಚಿಸಲಾಗಿತ್ತು. ಅದರ ಮೊದಲ ಸಬೆ ನಡೆದದ್ದು, ಏಪ್ರಿಲ್ 29, 1997ರಂದು. ಈ ಸಬೆಗೆ ಅಂದಿನ ಮೂಖ್ಯ ಕಾರ್ಯದರ್ಶಿ ಬಿ.ಆರ್.ಪ್ರಭಾಕರರವರು ಅಧ್ಯಕ್ಷತೆ ವಹಿಸಿದ್ದರು. ಸಂಬಂಧಪಟ್ಟ ಇಲಾಖೆಗಳ ಎಲ್ಲಾ ಕಾರ್ಯದಶರ್ಿಗಳೂ ಹಾಜರಿದ್ದ ಈ ಸಭೆಗೆ ಅಶೋಕ ಖೇಣಿಯವರು ವಿಶೇಷ ಆಹ್ವಾನಿತರಾಗಿದ್ದರು. ಈ ಸಭೆಯಲ್ಲಿ ಅಶೋಕ ಖೇಣಿಯವರು ಅಗತ್ಯ ಭೂಮಿಯ ಸರ್ವೇ ನಂ.ಗಳ ಹೊಸ ಲಿಸ್ಟ್ ಒಂದನ್ನು ಸಲ್ಲಿಸಿದರಲ್ಲದೆ, ಈ ಲಿಸ್ಟ್ ಅನ್ನು ಮುಖ್ಯ ಕಾರ್ಯದರ್ಶಿ ಗಳು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ರವಾನಿಸಬೇಕು ಎಂದು ನಿರ್ಧಾರ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಸಭೆಯ ನಿರ್ಧಾರದಂತೆ 31-07-1997ರಂದು ಮುಖ್ಯ ಕಾರ್ಯದರ್ಶಿಗಳ ಕಛೇರಿಯಿಂದ ಸರಕಾರೀ ಆದೇಶವೊಂದನ್ನು ಹೊರಡಿಸಲಾಯಿತು. PWD 155 CRM 95. ಇದು ಹೇಗೆ ಹಗರಣವಾದೀತು? ಎಂದು ನೀವು ಕೇಳಬಹುದು.
ಅಸಲಿಗೆ ಹಗರಣವಿರುವುದೇ ಇಲ್ಲಿ. ಅಶೋಕ ಖೇಣಿಯವರು ಪುನಃ ಸಲ್ಲಿಸಿದ್ದ ಸರ್ವೇ ನಂ.ಗಳ ಲಿಸ್ಟ್ ಏನಿತ್ತು, ಅದು ಖೊಟ್ಟಿಯಾಗಿತ್ತು. ಹೌದು ಈ ಹೊಸ ಲಿಸ್ಟ್ನಲ್ಲಿ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅಥವಾ ಫ್ರೇಂವರ್ಕ್ ಅಗ್ರೀಮೆಂಟಿನಿಂದ ಹೊರಹೊಮ್ಮುವ ರಸ್ತೆಯ ಅಲೈನ್ಮೆಂಟಿಗಿಂತ ಹೊರತಾದ ಸುಮಾರು 17 ಹಳ್ಳಿಗಳನ್ನು ಬಿಎಂಐಸಿಪಿ ಪರಿಧಿಗೆ ಸೇರಿಸಲಾಗಿತ್ತು. ಅದು ಹೇಗೆ? ಅದಕ್ಕೆ ಖೇಣಿ ಸಾಹೇಬರು ಮಾತ್ರ ಉತ್ತರವಾಗಬಲ್ಲರು. ಈ ಹೊಸ ಲಿಸ್ಟ್ನಲ್ಲಿ 17 ಹೊಸ ಹಳ್ಳಿಗಳನ್ನು ಸೇರಿಸಿರುವುದನ್ನು ನಾವೇ ಹಳೆಯ ಸರ್ವೇ ನಂ.ಗಳು ಮತ್ತು ಈ ಲಿಸ್ಟ್ನಲ್ಲಿರುವ ಸರ್ವೇ ನಂ.ಗಳನ್ನು ತಾಳೆ ಹಾಕಿ ನೋಡಿದಾಗ ತಿಳಿಯುತ್ತದೆ. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೇಗೆ ಇದನ್ನು ವೆರಿಫೈ ಕೂಡ ಮಾಡಿಸದೇ ಆದೇಶ ಹೊರಡಿಸಿಬಿಟ್ಟರು. ಅದೂ ಕೂಡ ಮಿಸ್ಟರಿಯೇ. ಅದಕ್ಕೂ ಸಹ ಅವರೊಬ್ಬರು ಮಾತ್ರ ಉತ್ತರವಾಗಬಲ್ಲರು. ಮುಖ್ಯ ಕಾರ್ಯದರ್ಶಿಗಳ ಕಛೇರಿಯಿಂದ ಹೊರಬಿದ್ದಿರುವ ಈ ಆದೇಶ ಇವತ್ತಿಗೂ ಜಾರಿಯಲ್ಲಿದೆ. ಈ ಆದೇಶ ಸ್ಪಷ್ಟವಾಗಿ ಸರ್ಕಾರದ ಹಿಂದಿನ ಅನೇಕ ಆದೇಶಗಳ ಉಲ್ಲಂಘನೆಯಾಗಿದೆಯಾದರೂ ಅದನ್ನು ಪ್ರಶ್ನಿಸುವವರಿಲ್ಲ. ಇಂದಿಗೂ ಹೀಗೆ ಅಕ್ರಮವಾಗಿ ವಶಪಡಿಸಿಕೊಂಡಿರುವ 17 ಹಳ್ಳಿಗಳ ಭೂಮಿ ಅಶೋಕ ಖೇಣಿಯವರ ಕಪಿ ಮುಷ್ಠಿಯಲ್ಲಿ ಭಧ್ರವಾಗಿದೆ.
Showing posts with label ನೈಸ್ ಪುರಾಣ. Show all posts
ನೈಸ್ ಪುರಾಣ - 8 - ರೈತರ ಭೂಮಿಯ ನುಂಗುತ್ತಿರುವ ಹೆಬ್ಬಾವು ನೈಸ್
ನೈಸ್ ಪುರಾಣ - 7 ನೈಸ್ ಜನನವೂ ಜನಕನೂ ಎಲ್ಲವೂ ಪ್ರಶ್ನಾರ್ಹವೇ!
ಕಳೆದ ಬಾರಿ ನಾವು ಫ್ರೇಂವರ್ಕ್ ಅಗ್ರೀಮೆಂಟಿನ ಅನೇಕ ಉಪ ಹಗರಣಗಳ ಬಗ್ಗೆ ತಿಳಿದುಕೊಂಡೆವು. ಹಾಗೆಯೇ ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನ ಪರಮ ನಿರ್ಲಜ್ಜ ಕ್ಲಾಸ್ ಆದ ಆರ್ಬಿಟ್ರೇಷನ್ ಬಗ್ಗೆಯೂ ಕೊಂಚ ತಿಳಿದುಕೊಂಡಿದ್ದೆವು. ಈ ಆರ್ಬಿಟ್ರೇಷನ್ನ ಕ್ಲಾಸ್ ಏನಿದೆ, ಅದೇ ಖೇಣಿ ಸಾಹೇಬರನ್ನು ಯಾವುದೇ ಸರಕಾರೀ ಕ್ರಮಗಳಿಂದ ಬಚಾವು ಮಾಡುತ್ತಿದೆ. ಆರ್ಬಿಟ್ರೇಷನ್ನ ಕ್ಲಾಸ್ ಇಷ್ಟು ಜಟಿಲವಾಗಿಲ್ಲದಿದ್ದರೆ ಯಾವತ್ತಿಗೋ ಈ ಬಿಎಂಐಸಿಪಿ ಪ್ರಾಜೆಕ್ಟ್ ಸರ್ಕಾರದ ವಶವಾಗುತ್ತಿತ್ತು, ಇಲ್ಲ ಇನ್ನೊಂದು ಕಂಪೆನಿಯ ಪಾಲಾಗುತ್ತಿತ್ತು. ಇದರಿಂದ ಆತನನ್ನು ಕಾಪಾಡುತ್ತಿರುವುದೇ ಈ ಕ್ಲಾಸ್. ಆರ್ಟಿಕಲ್ 18 ಇದನ್ನು ವಿವರಿಸುತ್ತದೆ. ಇದರ ಪ್ರಕಾರ ಏನೇ ಡಿಸ್ಪ್ಯೂಟ್ಗಳು ಎದುರಾದರೂ 30 ದಿನಗಳೊಳಗೆ ಉಭಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಸರ್ಕಾರ ಮತ್ತು ಕಂಪೆನಿ ಇಬ್ಬರಿಗೂ ಒಪ್ಪಿಗೆಯಾಗತಕ್ಕಂತಹ ತಜ್ಞರ ಸಮಿತಿಗೆ ಅದನ್ನು ಒಪ್ಪಿಸಬೇಕು. ಅದಕ್ಕೆ 60 ದಿನಗಳ ಕಾಲಾವಕಾಶ. ಇನ್ನು ಈ ತಜ್ಞರ ಸಮಿತಿಯ ಶಿಫಾರಸನ್ನು ಕಂಪೆನಿ ಒಪ್ಪಬಹುದು ಇಲ್ಲ ತಿರಸ್ಕರಿಸಬಹುದು. ಹಾಗಾದರೆ ತಜ್ಞರ ಸಮಿತಿಯೇಕೋ? ಇಲ್ಲ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಆಬರ್ಿಟ್ರೇಶನ್ಗೆ ಹೋಗಬೇಕು. ಸರ್ಕಾರ ಮತ್ತು ಕಂಪೆನಿ ಇಬ್ಬರೂ ತಮ್ಮ ತಮ್ಮ ಪರವಾಗಿ ಒಬ್ಬರನ್ನು ಆರ್ಬಿಟ್ರೇಟರ್ ಆಗಿ ನೇಮಿಸತಕ್ಕದ್ದು. ನಂತರ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್, ಪ್ಯಾರಿಸ್ ಮೂರನೆಯ ನ್ಯೂಟ್ರಲ್ ಆರ್ಬಿಟ್ರೇಟರ್ ಅನ್ನು ನೇಮಿಸುತ್ತದೆ. ಈ ಆಬಿಟ್ರೇಷನ್ ನ್ಯೂ ಯಾರ್ಕ್ ಕನ್ವೆಂಷನ್ 1958ರಂತೆ ನಡೆಯುತ್ತದೆ. ಈ ಆರ್ಬಿಟ್ರೇಶೇನ್ ಕಮಿಟಿ ನೀಡುವ ತೀರ್ಪೇ ಅಂತಿಮ. ಅದನ್ನು ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ! ಈ ಆರ್ಬಿಟ್ರೇಷನ್ ನಡೆಸಬೇಕಾದ ಸ್ಥಳ ಯಾವುದು ಗೊತ್ತಾ - ಲಂಡನ್ ಕೋರ್ಟ್! ಅಂದರೆ ಹೆಮ್ಮಿಗೇಪುರ ಕುಂಬಳಗೋಡಿನ ರೈತ ಲಂಡನ್ ಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕು! ಇದಲ್ಲವೇ ಕುಚೋದ್ಯ?
ಇಂಥದೊಂದು ಆರ್ಬಿಟ್ರೇಷನ್ ಕ್ಲಾಸ್ ಯಾಕಾಗಿ ಬೇಕಿತ್ತು? ಮೂಲ ಒಪ್ಪಂದದ ಕಾಲದಲ್ಲೇ ಇದರ ಮಾತಾಗಿತ್ತು. ಹಾಗಾದರೆ ದೇವೇಗೌಡರು ಇದಕ್ಕೆ ಯಾಕೆ ಒಪ್ಪಿಕೊಂಡರು? ಅವರು ಅದಕ್ಕೂ ಒಂದು ಸಮರ್ಥನೆ ತಯಾರಿಟ್ಟುಕೊಂಡಿದ್ದಾರೆ. ಮೂಲ ಒಪ್ಪಂದ ನಡೆದದ್ದು Kalyani Group (Pune), SAB Engineering (Pennsylvania, USA) and Vanasse Hangen Brustlin (VHB) (Boston, USA) ಎಂಬ ಮೂರು ಕಂಪೆನಿಗಳನ್ನೊಳಗೊಂಡ ಒಂದು ಕನ್ಸಾರ್ಶಿಯಂನೊಂದಿಗೆ. ಇಲ್ಲಿ ಎರಡು ವಿದೇಶಿ ಕಂಪೆನಿಗಳಿವೆ. ಹಾಗಾಗಿ ಆರ್ಬಿಟ್ರೇಷನ್ ಅನ್ನು 3ನೇ ದೇಶವೊಂದಕ್ಕೆ ಸ್ಥಳಾಂತರಿಸುವುದರ ಮಾತಾಯಿತು ಎನ್ನುತ್ತಾರೆ ದೇವೇಗೌಡರು. ಇಂತಹ ಪರಿಸ್ಥಿತಿಯಲ್ಲಿ ಇಂತಹ ಆರ್ಬಿಟ್ರೇಷನ್ ಕ್ಲಾಸ್ಗಳ ಕರಾರಾಗುವುದು ಸಹ ಸಹಜ. ಇಂದಿಗೂ ಇದು ನಡೆಯುತ್ತಿದೆ. ಆದರೆ ಪ್ರಶ್ನೆ ಅದಲ್ಲ. ಏಪ್ರಿಲ್ 3 1997ರಂದು ಕರ್ನಾಟಕ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟ್ ಅಂತ ಮಾಡಿಕೊಂಡದ್ದು, ಈ ವಿದೇಶೀ ಕಂಪೆನಿಗಳೊಂದಿಗಲ್ಲ, ಬದಲಿಗೆ ನೈಸೆಲ್ ಲಿಮಿಟೆಡ್ ಎಂಬ ಕಂಪೆನಿಯೊಂದಿಗೆ! ಮೂಲ ಒಪ್ಪಂದದ ಕಾಲದಲ್ಲಿ ನೈಸ್ ಅನ್ನುವ ಕಂಪೆನಿಯೇ ಅಸ್ತಿತ್ವದಲ್ಲಿರಲಿಲ್ಲ. ಅದು ಜನ್ಮ ತಾಳಿದ್ದೇ ಸೆಪ್ಟೆಂಬರ್ 9, 1996ರಂದು! ಅಂದರೆ ಫ್ರೇಂವರ್ಕ್ ಅಗ್ರೀಮೆಂಟ್ ಆಗುವುದಕ್ಕೂ ಕೇವಲ 6 ತಿಂಗಳ ಮುಂಚೆ. ಈ ನೈಸ್ ಕಂಪೆನಿ ಯಾರದು? ಮೂಲ ಒಪ್ಪಂದ ಒಂದು ಕಂಪೆನಿಯೊಂದಿಗಾಗಿ, ಫ್ರೆಂವರ್ಕ್ ಅಗ್ರೀಮೆಂಟ್ ಮತ್ತೊಬ್ಬರೊಟ್ಟಿಗಾಗುತ್ತಾ?!
ಫೆಬ್ರವರಿ 20, 1995ರಂದು ಮೆಸ್ಸಾಚುಟಸ್ ರಾಜ್ಯದ ಗವರ್ನರ್ರ `ದಿವ್ಯ ಸಾನ್ನಿಧ್ಯ'ದಲ್ಲಿ ಈ ಪ್ರಾಜೆಕ್ಟ್ನ ಕುರಿತಾಗಿ ಮೂಲ ಒಪ್ಪಂದ ಅಂತ ಆಗಿರುವುದು Kalyani Group (Pune), SAB Engineering (Pennsylvania, USA) and Vanasse Hangen Brustlin (VHB) (Boston, USA) ಎಂಬ ಮೂರು ಕಂಪೆನಿಗಳನ್ನೊಳಗೊಂಡ ಕನ್ಸಾರ್ಶಿಯಂನೊಂದಿಗೆ. ಆದರೆ ತದನಂತರ ಸೆಪ್ಟೆಂಬರ್ 9, 1996ರಂದು ಕನ್ಸಾರ್ಶಿಯಂನ ಮೂವರೂ ಸದಸ್ಯರೂ ಒಂದು ಒಪ್ಪಂದಕ್ಕೆ ಬಂದು consent and acknowledgement agreement ಎಂಬ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಅದರಂತೆ ವಿಎಚ್ಬಿ, ಸಬ್ ಇಂಜಿನಿಯರಿಂಗ್ ಮತ್ತು ಬಾಬಾ ಕಲ್ಯಾಣಿ ಸಂಸ್ಥೆಗಳು ಬಿಎಂಐಸಿ ಪ್ರಾಜೆಕ್ಟ್ ಅನ್ನು ಅನುಷ್ಠಾನಗೊಳಿಸಲೆಂದೇ ಒಂದು ಉಪ ಕಂಪೆನಿಯನ್ನು Special Purpose ವೆಹಿಕ್ಲೆ ಎಂದು ಇದಕ್ಕಾಗೇ ಹುಟ್ಟುಹಾಕಿದ್ದಾರೆ. ಈ ಕಂಪೆನಿಯನ್ನು ಅವರು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್ ಲಿಮಿಟೆಡ್ ಎಂದು ಕರೆದಿದ್ದಾರೆ. ಇದೇ NICEL. ಇಂತಿಪ್ಪ ಈ ಒಪ್ಪಂದಕ್ಕೆ ವಿಎಚ್ಬಿಯ ಉಪಾಧ್ಯಕ್ಷ, ಸಬ್ ಇಂಜಿನಿಯರಿಂಗ್ನ ಅಧ್ಯಕ್ಷ ಮತ್ತು ಕಲ್ಯಾಣಿ ಗ್ರೂಪ್ ಪರವಾಗಿ ಬಾಬಾ ಕಲ್ಯಾಣಿಯವರು ಸಹಿ ಹಾಕಿದ್ದಾರೆಂದು, ಅಶೋಕ ಖೇಣಿಯವರು ಹೇಳಿಕೊಳ್ಳುತ್ತಾರೆ. the Kalyani Group VHB and SAB shall agree to maintain at all times directly or indirectly a collective 15% beneficial equity interest in the company ಎಂಬ ಕರಾರು ಕೂಡ ಈ ಒಪ್ಪಂದದಲ್ಲಿದೆ. ಏಪ್ರಿಲ್ 27 1997ರ ಸರ್ಕಾರದ ಆದೇಶದಲ್ಲಿ ಸರ್ಕಾರ ಈ ಮೇಲ್ಕಂಡ ಒಪ್ಪಂದವನ್ನು ಅನುಮೋದಿಸಿ, ಆದೇಶ ಹೊರಡಿಸಿದೆ. ಅಂದರೆ, ಏಪ್ರಿಲ್ 27ರಂದು ಸರ್ಕಾರ ಈ ಒಪ್ಪಂದಕ್ಕೆ ತನ್ನ ಅನುಮೋದನೆ ಸೂಚಿಸಿದ್ದು, ಏಪ್ರಿಲ್ 3 1997ರಂದೇ ಇದೇ ನೈಸೆಲ್ ಕಂಪೆನಿಯೊಂದಿಗೆ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟಿಗೆ ಸಹಿ ಹಾಕುತ್ತದೆ!
ಹೀಗೆ ನೈಸೆಲ್ ಎಂಬ ಒಂದು ಹೊಸ ಕಂಪೆನಿಯನ್ನೇ ಹುಟ್ಟುಹಾಕುವ ಅವಶ್ಯಕತೆಯೇನಿತ್ತು? ಅಂತ ಕೇಳಿದರೆ ಖೇಣಿ ಸಾಹೇಬರದು ಸಿದ್ಧ ಉತ್ತರ. ವಿಎಚ್ಬಿ ಕಂಪೆನಿಯ ಕೇಂದ್ರ ಕಛೇರಿಯಿರುವುದು ಬಾಸ್ಟನ್ನಲ್ಲಿ, ಸಬ್ ಇಂಜಿನಿಯರಿಂಗ್ದು ಪೆನ್ಸೆಲ್ವೇನಿಯಾದಲ್ಲಿ, ಕಲ್ಯಾಣಿ ಗ್ರೂಪ್ನದು ಪುಣೆಯಲ್ಲಿ. ಹಾಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿದ್ದರೆ ಅನುಕೂಲವಾಗುತ್ತದೆಂದು ಮೂವರೂ ಸೇರಿ ಈ ಕಂಪೆನಿಯನ್ನು ಹುಟ್ಟು ಹಾಕಿರುವುದಾಗಿ ಉಲಿಯುತ್ತಾರೆ. ಹೀಗೆ Special Purpose Vehicleಗಳನ್ನು ರಚಿಸುವುದು ಏನು ಅಂಥ ವಿಶೇಷವೇನಲ್ಲ, ಇದು ಸಹಜ ವಾಡಿಕೆ. ಆದರೆ ಪ್ರಶ್ನೆ ಅದಲ್ಲ ಖೇಣಿ ಸಾಹೇಬರು ಹೇಳುವ ಈ "consent and acknowledgement agreement." ಏನಿದೆಯಲ್ಲ, ಅದರ ಸತ್ಯಾಸತ್ಯತೆಯ ಬಗ್ಗೆಯೇ ಹಲವಾರು ಅನುಮಾನಗಳಿವೆ. ದೇವೇಗೌಡರು ಅದನ್ನು ಒಂದು ಫೋಜ್ಡರ್್ ಡಾಕ್ಯುಮೆಂಟ್ ಎಂದು ಅನುಮಾನಿಸುತ್ತಾರೆ. ಅವರ ಮಾತು ಹಾಗೆ ಇರಲಿ ಬಿಡಿ. ಆದರೆ ಮಾರ್ಚ್ 2001ರಲ್ಲಿ ಬಿಎಂಐಸಿಪಿಯಲ್ಲಿ ವಿಎಚ್ಬಿ ಕಂಪೆನಿಯ ಪಾತ್ರದ ಕುರಿತು ಪ್ರಶ್ನಿಸಿದಾಗ ವಿಎಚ್ಬಿ ಕಂಪೆನಿಯ ಬೋರ್ಡ್ ಛೇರ್ಮನ್ ರಿಚರ್ಡ್ ಹ್ಯಾಂಗೆನ್ 1995ರಿಂದೀಚೆಗೆ ವಿಎಚ್ಬಿ ಕಂಪೆನಿಯು ಬಿಎಂಐಸಿ ಪ್ರಾಜೆಕ್ಟಿನಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇಷ್ಟೇ ಅಲ್ಲದೆ "We do not know of the existence of any scope defining a future role for [VHB]." ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಏನು ಹೇಳುವುದು?
ಅಲ್ಲಿಗೆ ವಿಎಚ್ಬಿ ಕಂಪೆನಿ ಬಿಎಂಐಸಿ ಪ್ರಾಜೆಕ್ಟಿನಿಂದ 1995ರಷ್ಟು ಹಿಂದೆಯೇ ಹೊರನಡೆದಿದೆಯಾ? ವಿಎಚ್ಬಿಯ ಬೋರ್ಡ್ ಛೇರ್ಮನ್ ರಿಚರ್ಡ್ ಹ್ಯಾಂಗೆನ್ರ ಹೇಳಿಕೆ ನೋಡಿದರೆ ಹಾಗೇ ಅನ್ನಿಸುತ್ತದೆ. ಹಾಗಾದರೆ 1997ರ ಅಗ್ರೀಮೆಂಟು? ಅದೇ ಒಂದು ದೊಡ್ಡ ಮಿಸ್ಟರಿ! ಇವತ್ತಿಗೂ ಇನ್ನೂ ಅದರ ಪರದೆ ಸರಿದಿಲ್ಲ. ಆದರೆ 1999ರ ಪ್ರಾಜೆಕ್ಟ್ ಡಾಕ್ಯುಮೆಂಟ್ಗಳಲ್ಲಿ ಕೂಡ ವಿಎಚ್ಬಿ ಕಂಪೆನಿಯನ್ನು ನೈಸ್ನ ಒಬ್ಬ ಸದಸ್ಯನಾಗಿ ತೋರಿಸಲಾಗಿದೆ. ಇವತ್ತಿಗೂ ಸಹ ನೈಸ್ ಕಂಪೆನಿಯ ಅಫಿಷಿಯಲ್ ವೆಬ್ಸೈಟು ವಿಎಚ್ಬಿಯನ್ನು ಬಿಎಂಐಸಿ ಪ್ರಾಜೆಕ್ಟಿನ ಲೀಡ್ ಇಂಜಿನಿಯರ್ ಎಂದು ತೊರಿಸುತ್ತದೆ! ಇದೊಂದು ದೊಡ್ಡ ಫ್ರಾಡ್. ಸತತ ಬಂದ ಸರ್ಕಾರಗಳು ಇದನ್ನು ತನಿಖೆಗೊಳಪಡಿಸದೆ ಇರುವುದು ನಮ್ಮ ವ್ಯವಸ್ಥೆಯ ಕುಚೋದ್ಯ. ಇನ್ನು ಸಬ್ ಇಂಜಿನಿಯರಿಂಗ್. ಪೆನ್ಸಿಲ್ವೇನಿಯಾದಲ್ಲಿ ರಿಜಿಸ್ಟರ್ ಆಗಿರುವ ಸಬ್ ಇಂಜಿನಿಯರಿಂಗ್ ಎಂಬ ಕಂಪೆನಿಗೆ ನಮ್ಮ ಖೇಣಿ ಸಾಹೇಬರು ಮುಖ್ಯಸ್ಥರು. ಮೂಲ ಒಪ್ಪಂದದಲ್ಲೂ ಸಬ್ ಇಂಜಿನಿಯರಿಂಗ್ ಪರವಾಗಿ ಸಹಿ ಹಾಕಿರುವುದು ಖೇಣಿ ಸಾಹೇಬರೇ. ಇದೊಂದು ಷೆಲ್ ಕಂಪೆನಿ. ಇಂತಿಪ್ಪ ಈ ಪುಡಿಗಾಸು ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ ಇಂದು ನೈಸ್ಗೂ ಸಹ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಸಬ್ ಇಂಜಿನಿಯರಿಂಗ್ ಅನ್ನು ಇಂಡಿಯನ್ ಕಂಪೆನಿ ರಿಜಿಸ್ಟ್ರಾರ್ನಲ್ಲಿ ಡಿಫಾಲ್ಟರ್ ಎಂದು ಗುರತಿಸಲಾಗಿದೆ. ಇಂತಿಪ್ಪ ಈ ಕಂಪೆನಿಗೆ ಹಿಂದೆ ಯಾವುದೇ ಬೃಹತ್ ಪ್ರಾಜೆಕ್ಟ್ ಮಾಡಿದ ಅನುಭವವಿಲ್ಲ. ಆದರೆ ಇಂದು ಇದೇ ಸಬ್ ಇಂಜಿನಿಯರಿಂಗ್ ಎಂಬ ಷೆಲ್ ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ, ಸಹಸ್ರಾರು ಕೋಟಿಗಳ ಮೊತ್ತದ ನೈಸ್ ಸಾಮ್ರಾಜ್ಯಕ್ಕೆ ಅಧಿಪತಿ.
ಅಲ್ಲಿಗೆ ನೈಸ್ ಕಂಪೆನಿಯ ಜನನವೂ ಜನಕನೂ ಎಲ್ಲವೂ ಪ್ರಶ್ನಾರ್ಹವೇ ಆದಂತಾಯಿತು. ನೈಸ್ ಪುರಾಣದ ಮೂಲವೇ ಪ್ರಶ್ನಾರ್ಹ! ಇರಲಿ ನೈಸೆಲ್ ಕಂಪೆನಿಯ ಬಗ್ಗೆ ಇಷ್ಟೆಲ್ಲಾ ಯಾಕೆ ವಿವರಿಸಬೇಕಾಯಿತೆಂದರೆ ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ. 18 ವಿವರಿಸುವ ಆರ್ಬಿಟ್ರೇಷನ್ ಕ್ಲಾಸ್ನಲ್ಲಿನ ಹಗರಣವನ್ನು ಬಿಡಿಸಿಡುವುದಕ್ಕೆ. ಒಂದು ಹಗರಣದ ಮೂಲ ಹುಡುಕಹೊರಟರೆ ಮತ್ತೊಂದಿಷ್ಟು ಸಿಗುತ್ತವೆ ಈ ನೈಸ್ ಪುರಾಣದಲ್ಲಿ. ಇರಲಿ. ಆರ್ಬಿಟ್ರೇಷನ್ನ ಬಗ್ಗೆ ದೇವೇಗೌಡರೇನು ಹೇಳಿದರು - ಇಲ್ಲಿ ಎರಡು ವಿದೇಶಿ ಕಂಪೆನಿಗಳಿರುವುದರಿಂದ ಆರ್ಬಿಟ್ರೇಷನ್ ಅನ್ನು 3ನೇ ದೇಶವೊಂದಕ್ಕೆ ಸ್ಥಳಾಂತರಿಸುವುದರ ಮಾತಾಯಿತು ಎಂದರು. ಆದರೆ ಫ್ರೇಂವರ್ಕ್ ಅಗ್ರೀಮೆಂಟ್ ಆಗುವ ಹೊತ್ತಿಗೆ ಯಾವುದಿತ್ತು ಸ್ವಾಮಿ ವಿದೇಶೀ ಕಂಪೆನಿ? ಇದ್ದದ್ದು ನೈಸೆಲ್ ಒಂದೇ ಅಲ್ಲವೇ. ಅದರೊಟ್ಟಿಗೆಯೇ ಅಲ್ಲವೇ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟ್ ಮಾಡಿಕೊಂಡದ್ದು? ಮತ್ತೆ ಬೇರೊಂದು ದೇಶದಲ್ಲಿ ಆಬಿಟ್ರೇಷನ್ ಅನ್ನುವ ಕ್ಲಾಸ್ ಯಾಕೆ ಸ್ವಾಮಿ ಬೇಕು? ದುರ್ದೈವ ನಮ್ಮ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ, ಉತ್ತರ ಯಾರ ಬಳಿಯೂ ಇಲ್ಲ.
ನೈಸ್ ಪುರಾಣ - 6 - ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಮತ್ತಷ್ಟು ಹಗರಣಗಳು
ಬಿಬಿಎಂಪಿ ಫಲಿತಾಂಶ ಹೊರಬಿದ್ದಿದೆ. ಮೊದಲ ಬಾರಿಗೆ ಬೆಂಗಳೂರಿನ ಪುರಭವನದ ಮೇಲೆ ಕಮಲ ಅರಳಿ ನಿಂತಿದೆ. ಯಾವುದೇ ಸಮಸ್ಯೆಯಿಲ್ಲದೆ, ಇಂಡಿಪೆಂಡೆಂಟ್ಗಳ ಮುಲಾಜಿಲ್ಲದೆ, ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಬಹುದು, ಆ ಮಟ್ಟಿಗೆ ಅದು ಇತ್ತೀಚೆಗೆ ಬೆಂಗಳೂರಿನಲ್ಲಿ ಬೇರು ಬಿಟ್ಟಿರುವುದು ವಾಸ್ತವ ಎಂಬುದು ನಿಜವಾಯಿತು. ಬಿಬಿಎಂಪಿಯನ್ನು ಕಾಂಗ್ರೆಸ್ನ ಭಧ್ರಕೋಟೆ ಎಂದು ಎಲ್ಲರೂ ಹೇಳಿದ್ದೇ ಬಂತು, ಕಾಂಗ್ರೆಸ್ ಉಡಾಫೆಯಿಂದ ಕೆಲಸ ಮಡತೊಡಗಿತು. ತನ್ನ ಸ್ವಯಂಕೃತಾಪರಾಧಗಳಿಂದಾಗಿಯೇ ಸೋತು ಸುಣ್ಣವಾಗಿದೆ.
ಆದರೆ ಸುದ್ದಿ ಅದಲ್ಲ. ದೇವೇಗೌಡರ ಜೆಡಿಎಸ್ ಇನ್ನಿಲ್ಲದಂತೆ ಹೀನಾಯವಾಗಿ ಸೋಲುಂಡು ಅಧಃಪತನಕ್ಕೊಳಗಾಗಿರುವುದು. 198 ಸ್ಥಾನಗಳ ಬಿಬಿಎಂಪಿಯಲ್ಲಿ ಜೆಡಿಎಸ್ ಪಡೆದಿರುವುದು ಕೇವಲ 15 ಸ್ಥಾನಗಳು! ಬೆಂಗಳೂರಿನ ಹೊರವಲಯದಲ್ಲಿರುವ ಅನೇಕ ಮುನ್ಸಿಪಾಲಿಟಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲ್ಪಟ್ಟಿರುವುದು ಮತ್ತು ನೈಸ್ ಬಾಧಿತ ಪ್ರಾಂತ್ಯಗಳು ಬಿಬಿಎಂಪಿಯಡಿ ಬರುವುದರಿಂದ ಜೆಡಿಎಸ್ ಕನಿಷ್ಠ ಆ ಕ್ಷೇತ್ರಗಳಲ್ಲಾದರೂ ಉತ್ತಮ ಪ್ರದರ್ಶನ ನೀಡುತ್ತದೆಂಬ ನಿರೀಕ್ಷೆಯಿತ್ತು. ಇದನ್ನು ದೃಷ್ಟಿಯಲ್ಲಿಟ್ಟಕೊಂಡೇ ಶ್ರೀಮಾನ್ ದೇವೇಗೌಡರು ನೈಸ್ ಖೇಣಿ ಮತ್ತು ಯಡಿಯೂರಪ್ಪನವರ ವಿರುದ್ಧ ಪಂಚೆ ಎತ್ತಿಕಟ್ಟಿ ಹೋರಾಟಕ್ಕಿಳಿದದ್ದು. ನೈಸ್ ರಸ್ತೆಯಿಂದ ಬಧೀತ 27 ವಾರ್ಡ್ಗಳಿವೆ ಬಿಬಿಎಂಪಿಯಲ್ಲಿ. ಆದರೆ ಆಶ್ಚರ್ಯ ಈ 27 ವಾರ್ಡ್ಗಳಲ್ಲಿ ಕೇವಲ 2 ವಾರ್ಡ್ಗಳಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದೆ! ಕಾಂಗ್ರೆಸ್ 5ರಲ್ಲಿ ಗೆದ್ದಿದ್ದರೆ ಮಿಕ್ಕ 20 ಸ್ಥಾನಗಳಲ್ಲಿ ಬಿಜೆಪಿಯ ಕಮಲ ಅರಳಿ ನಿಂತಿದೆ.
ದೇವೇಗೌಡರು ಹೋರಾಟ ಶುರುವಿಟ್ಟುಕೊಂಡ, ಯಡಿಯೂರಪ್ಪನವರನ್ನು ಬಾಸ್ಟರ್ಡ್ ಎಂದು ಕರೆದ ಅದೇ ಹೆಮ್ಮಿಗೇಪುರದಲ್ಲಿ ಕಮಲ ಅರಳಿ ನಿಂತಿದೆ. ಹೆಮ್ಮಿಗೇಪುರ ಫ್ರೇಂವರ್ಕ್ ಅಗ್ರೀಮೆಂಟಿನ ಅಲೈನ್ಮೆಂಟಿನ ಪ್ರಕಾರ ನೈಸ್ ಟೌನ್ಷಿಪ್ಗೆ ಸೇರತಕ್ಕದುಲ್ಲ, ಆದರೆ ಹೆಮ್ಮಿಗೆಪುರವನ್ನು ಕೆಐಎಡಿಬಿ ಟೌನ್ಷಿಪ್ಗೆಂದು ನೋಟಿಫೈ ಮಾಡಿ ಕೂತಿದೆ. ಮೂಲ ಒಪ್ಪಂದದ ಪ್ರಕಾರ ಕೂಡ ಟೌನ್ಷಿಪ್ ಹೆಮ್ಮಿಗೆಪುರದಲ್ಲೇ ಬರಬೇಕು ಎಂದು ಸ್ವತಃ ಅಶೋಕ ಹಾರ್ನಳ್ಳಿ ಸರ್ಕಾರದ ಪರ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಇದನ್ನು ಪ್ರತಿಭಟಿಸಿಯೇ ದೇವೇಗೌಡರು ಪಂಚೆ ಎತ್ತಿ ಕಟ್ಟಿ ಬೀದಿಗಿಳಿದದ್ದು. ಆದರೆ ಸೋಜಿಗ ನೋಡಿ ಅದೇ ಹೆಮ್ಮಿಗೇಪುರದಲ್ಲಿ ಜೆಡಿಎಸ್ ಸೋತಿದೆ, ಬಿಜೆಪಿಯ ಕಮಲ ಅರಳಿ ನಿಂತಿದೆ.
ಧಿಗ್ಗನೆ ಎದ್ದು ಕೂತಿದ್ದಾರೆ ಯಡಿಯೂರಪ್ಪ. ಬಿಬಿಎಂಪಿ ಚುನಾವಣೆಯಲ್ಲಿ ಜನಾಭಿಪ್ರಾಯ ಹೊರಬಿದ್ದಿದೆ. ಜೆಡಿಎಸ್ನ ಸೋಲು ಮತ್ತು ಬಿಜೆಪಿಯ ಗೆಲುವು, ಮತ್ತೂ ಮುಖ್ಯವಾಗಿ ನೈಸ್ ಪ್ರಾಂತ್ಯಗಳಲ್ಲಿ ಜೆಡಿಎಸ್ನ ಸೋಲು ಜನ ನೈಸ್ ವಿವಾದವನ್ನು ಅದನ್ನು ಮುಂದಿಟ್ಟುಕೊಂಡು ದೇವೇಗೌಡರು ಆಡಿದ ಆಟವನ್ನು ಜನ ತಿರಸ್ಕರಿಸಿದ್ದಾರೆ. ಈಗಲಾದರೂ ದೇವೇಗೌಡರು ಎಚ್ಚೆತ್ತು ಬೆಂಗಳೂರಿನ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದನ್ನು ಬಿಡಬೇಕು. ನೈಸ್ ಹೋರಾಟವನ್ನು ಕೈಬಿಡಬೇಕು. ನಾವಂತೂ ಫ್ರೇಂವರ್ಕ್ ಅಗ್ರೀಮೆಂಟ್ ಮತ್ತು ಕೋರ್ಟ್ ಆದೇಶಗಳನ್ವಯ ನೈಸ್ ಕಾರಿಡಾರ್ ಅನ್ನು ಮಾಡಿಯೇ ತೀರುತ್ತೇವೆ. ಜನಾದೇಶ ನಮ್ಮ ಪರವಾಗಿದೆ ಎಂದು ಬೀಗಿದ್ದಾರೆ. ಬಿಬಿಎಂಪಿ ಫಲಿತಾಂಶ ಹೊರಬಿದ್ದ ಮಾರನೆಯ ದಿನವೇ ಯಡಿಯೂರಪ್ಪನವರ ಸರ್ಕಾರ ನೈಸ್ಗಾಗಿ ಪಡೆದುಕೊಂಡ ಭೂಮಿಗೆ ದರ ನಿಗದಿ ಮಾಡಲು ಸಭೆ ಕರೆದಿದೆ. ರೈತರ ಕೈಲಿ ಛೀಮಾರಿ ಹಾಕಿಸಿಕೊಂಡು ಸಬೆಯನ್ನು ಮುಂದೂಡಿದೆ.
ಯಾಕೆ ಯಡಿಯೂಪ್ಪನವರಿಗೆ ನೈಸ್ ವಿಚಾರದಲ್ಲಿ ಅಷ್ಟೊಂದು ಆಸಕ್ತಿಯೋ ತಿಳಿಯದಾಗಿದೆ. ಸ್ವಾಮಿ ಯಡಿಯೂರಪ್ಪನವರೆ ಜನಾದೇಶ ಇರುವುದು ತಮ್ಮ ಪಕ್ಷಕ್ಕೆ ಸ್ವಾಮಿ, ಅದೇನೋ ಈ ಬಿಬಿಎಂಪಿ ಚುನಾವಣೆ ನೈಸ್ ಕುರಿತಾಗಿ ನಡೆದ ರೆಫೆರೆಂಡಂ ಇದ್ದಂತೆ ಮಾತುನಾಡುತ್ತಿದ್ದೀರಲ್ಲ? ದೇವೇಗೌಡರ ಹೋರಾಟಕ್ಕೆ ಜನ ತಮ್ಮ ಬೆಂಬಲ ಸೂಚಿಸದೇ ಇರಬಹುದು. ಅವರಿಗದು `ಭೂತದ ಬಾಯಲ್ಲಿ ಭಗವದ್ಗೀತೆ' ಎಂಬಂತೆ ಕಂಡಿರಬಹುದು. ಆದರೆ ಅಷ್ಟು ಮಾತ್ರಕ್ಕೆ ತಾವು ಜನ ಬೆಂಬಲ ನೈಸ್ ಪರವಾಗಿದೆಯೆಂಬಂತೆ ಮಾತನಾಡುವುದು ಎಷ್ಟು ಸೂಕ್ತ? ಇದು ನೈಸ್ ಅನ್ನು ಒಂದು ನಾನ್ ಇಷ್ಯೂ ಮಾಡಿಬಿಡುವ ಹುನ್ನಾರ. ಇದನ್ನು ಪ್ರಾಜ್ಞರಾದವರೆಲ್ಲರೂ ವಿರೋಧಿಸಬೇಕಾಗುತ್ತದೆ. ದೇವೇಗೌಡರ ಹೋರಾಟ, ಹಾರಾಟ, ಅವರ ಸ್ವಾರ್ಥಗಳೇನೇ ಇರಲಿ ಅದು ನಮಗೆ ಅನಾವಶ್ಯಕ. ಇವುಗಳ ಲೆಕ್ಕಾಚಾರದಲ್ಲಿ ಇಶ್ಯೂ ಗೌಣವಾಗಬಾರದು.
ಈ ಫ್ರೇಂವರ್ಕ್ ಅಗ್ರೀಮೆಂಟ್ ಎಷ್ಟು ನಿರ್ಲಜ್ಜವಾಗಿ ನೈಸ್ ಕಂಪೆನಿಯ ಪರ ಇದೆ ಎಂಬುದನ್ನು ನಾವು ಕಳೆದೆರಡು ವಾರಗಳಿಂದ ನೋಡುತ್ತಲೇ ಬಂದಿದ್ದೇವೆ. ಈ ವಾರ ಮತ್ತೊಂದಷ್ಟು ಉಪಹಗರಣಗಳ ಬಗ್ಗೆ ತಿಳಿದುಕೊಳ್ಳೋಣ.
ಮೊದಲಿಗೆ ತೆರಿಗೆ ವಿನಾಯ್ತಿ. ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ.12 ಬಿಎಂಐಸಿಪಿ ಕಾರಿಡಾರ್ನ ಎಕ್ಸ್ಪ್ರೆಸ್ವೇ ಮತ್ತು ಟೌನ್ಷಿಪ್ಗಳಿಗೆ ಸರ್ಕಾರ 30 ವರ್ಷಗಳ ಈ ಕನ್ಸೆಷನ್ ಅವಧಿಯಲ್ಲಿ ಸಂಪೂರ್ಣ ಟ್ಯಾಕ್ಸ್ ಹಾಲಿಡೇ ನೀಡುತ್ತದೆ. ಇಷ್ಟೇ ಅಲ್ಲ. ಟೌನ್ಷಿಪ್ ಮತ್ತು ಇತರೆ ಭೂಮಿ ರಿಜಿಸ್ಟ್ರೇಷನ್ನ ಮೇಲೂ ಕೂಡ ರಿಜಿಸ್ಟ್ರೇಷನ್ ಫೀ, ಸ್ಟ್ಯಾಂಪ್ ಡ್ಯೂಟಿ, ಕನ್ವರ್ಷನ್ ಫೈನ್ ಮುಂತಾದ ಎಲ್ಲ ರೀತಿಯ ಫೀಗಳನ್ನು ಮಾಫಿ ಮಾಡಲಾಗಿದೆ. ಇದರ ಬಾಬ್ತೇ ನೂರಾರು ಕೋಟಿಗಳಷ್ಟಾಗುತ್ತದೆ. ಇದಕ್ಕೆ ಯಾವ ಲಾಜಿಕ್ಕೂ ಇಲ್ಲ. ಆತ ಸಾರ್ವಜನಿಕ ಹಿತಕ್ಕಾಗಿ ರಸ್ತೆ ಮಾಡಿಕೊಡುತ್ತಿದ್ದಾನೆ, ಅದಕ್ಕಾಗಿ ಈ ಎಲ್ಲ ವಿನಾಯ್ತಿಗಳು ಅಂತಾರೆ ಅಧಿಕಾರಸ್ಥರು. ಆದರೆ ನನೆಪಿಡಬೇಕು ಖೇಣಿ ಸಾಹೇಬರು ರಸ್ತೆಯನ್ನೇನು ಬಿಟ್ಟಿ ಮಾಡಿಕೊಡುತ್ತಿಲ್ಲ. ಇದೊಮದು ಬಿಸಿನೆಸ್ ಮಾಡೆಲ್. ಅವರು ಮಾಡುತ್ತರಿಉವುದು ವ್ಯಾಪಾರ, ಸೇವೆಯಲ್ಲ.
ಇಷ್ಟೇ ಆಗಿದ್ದರೆ ಚೆನ್ನಿತ್ತು. ಆದರೆ ಇದೇ ಆರ್ಟಿಕಲ್ 12ರಲ್ಲಿ ಮತ್ತೊಂದು ಅನಾಹುತಕಾರಿ ಕ್ಲಾಸ್ ಇದೆ. ಪ್ಯಾರಾ 12.4 ಏನು ಹೇಳುತ್ತದೆ? GOK will use its best efforts to cause the infrastructure corridor project to be classified as an industry in accordance with Package scheme of incentives and Concessions 1996-2001 of Karnataka state and thereby qualify and extend to the company and the infrastructure corridor project to all of the benefits, incentives and concessions available to such industry under such scheme.
ಅಲ್ಲಿಗಾಯ್ತಲ್ಲ. ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳು! ಅಸಲಿಗೆ ಬಿಎಂಐಸಿಪಿ ಎನ್ನುವುದು ರಸ್ತೆ ಕಾಮಗಾರಿ. ಇದು ಬರಬೇಕಿರುವುದು ಲೋಕೋಪಯೋಗಿ ಇಲಾಖೆಯಡಿಯಲ್ಲಿ. ಆದರೆ ಇದನ್ನು ಇಂಡಸ್ಟ್ರಿ ಎಂದು ಪರಿಗಣಿಸಿಬಿಟ್ಟರೆ ಕಂಪೆನಿಗೆ ಹಲವಾರು ಲಾಭಗಳುಂಟು. ಮದಲಿಗೆ ಕೈಗಾರಿಕಾ ಸ್ಥಾಪನೆಗೆ ಸಿಗುವ ಎಲ್ಲ ಸೌಲಭ್ಯಗಳೂ, ವಿನಾಯ್ತಿಗಳೂ ಬಿಎಂಐಸಿಪಿಗೂ ಸೇರುತ್ತದೆ. ಇಷ್ಟೇ ಅಲ್ಲ ಒಮ್ಮೆ ಬಿಎಂಐಸಿಪಿಯನ್ನು ಕೈಗಾರಿಕೆ ಎಂದು ಪರಿಗಣಿಸದ ಮೇಲೆ ಮುಗಿಯಿತು. ಬಡ ರೈತರ ಭೂಮಿ ನುಂಗುವ ಹೆಬ್ಬಾವಿನಂತಿರುವ ಕೆಐಎಡಿಬಿ ಸೀನ್ಗೆ ಬರುತ್ತದೆ. ಮೂಲ ಒಪ್ಪಂದದ ಪ್ರಕಾರ ನೈಸ್ ಸಂಸ್ಥೆಯೇ ರೈತರಿಂದ ಜಮೀನನ್ನು ಕೊಂಡುಕೊಳ್ಳಬೇಕಿತ್ತು. ಅದಕ್ಕೂ ಸರ್ಕಾರಕ್ಕೂ ಸಂಬಂಧವೇ ಇರಲಿಲ್ಲ. ಆದರೆ ಒಮ್ಮೆ ಕೆಐಎಡಿಬಿ ಪಿಚ್ಚರ್ರಿಗೆ ಬಂದ ಮೇಲೆ ಖೇಣಿ ಸಾಹೇಬರಿಗೆ ಆ ತೊಂದರೆ ಕೂಡ ಇಲ್ಲ. ಕಂಪೆನಿಗೆ ಸರ್ಕಾರ ತನ್ನ ಸಂಬಂಧಪಟ್ಟ ಇಲಾಖೆಗಳ ಮೂಲಕ ಬೇಕಾದ ಅಗತ್ಯ ಭೂಮಿಯನ್ನು ವಶಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸಬೇಕು. ಕಂಪೆನಿ ಈ ಮೊದಲೇ ಒಪ್ಪಿಗೆಯಾದಂತಹ ಪರಿಹಾರದ ಪ್ಯಾಕೇಜನ್ನು ಸರ್ಕಾರಕ್ಕೆ ಕಟ್ಟುತ್ತದೆ. ಇದನ್ನು ಸರ್ಕಾರ ಭೂಮಿ ಕಳೆದುಕೊಂಡ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಬೇಕು. ಅಲ್ಲಿಗೆ ಖೇಣಿ ಸಾಹೇಬರು ಏಕದಂ ಒಂದೇ ಏಟಿಗೆ ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳುವ ಎಲ್ಲ ತಲೆನೋವನ್ನೂ ಕಳೆದುಕೊಳ್ಳುತ್ತಾರೆ. ಅವರ ಬದಲಿಗೆ ಸರ್ಕಾರದ ಪರವಾಗಿ ಕೆಐಎಡಿಬಿ ಬ್ರೋಕರ್ ರೀತಿಯಲ್ಲಿ ಆ ಕೆಲಸ ಮಾಡಿಕೊಡಬೇಕು, ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಈ ಪ್ರಾಜೆಕ್ಟಿಗೆಂದು ವಶಪಡಿಸಿಕೊಂಡ ಭೂಮಿಯನ್ನು ಯಾರಾದರೂ ಅತಿಕ್ರಮಿಸಿದರೆ ಅದನ್ನು ತೆರವುಗೊಳಿಸಿ ಭೂಮಿಯನ್ನು ಸೇಫ್ ಆಗಿ ನೋಡಿಕೊಳ್ಳುವುದು ಕೂಡ ಇದರ ಕೆಲಸವೇ.
ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳು ಅಂದೆನಲ್ಲ, ಅದರಲ್ಲಿ ಒಂದೆರಡನ್ನಷ್ಟೇ ಮೇಲೆ ವಿವರಿಸಿದ್ದೇನೆ. ಮತ್ತೊಂದು ಮುಖ್ಯ ಪ್ರಮಾದ ಕೂಡ ಇದರಿಂದ ನಡೆದು ಹೋಯಿತು. ಈ ಕ್ಲಾಸ್ನಿಂದ ಇಡಿಯ ಬಿಎಂಐಸಿಪಿ ಪ್ರಾಜೆಕ್ಟಿನ ಮೇಲೆ ಕೈಗಾರಿಕಾ ಇಲಾಖೆಗೆ ಹಿಡಿತ ಸಿಕ್ಕಿ ಹೋಯಿತು. ಅಂದು ಜೆ.ಎಚ್.ಪಟೇಲರ ಸರ್ಕಾರದಲ್ಲಿ ಇಂಡಸ್ಟ್ರೀಸ್ ಮಿನಿಸ್ಟ್ರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿರುವಂತಹ ಆರ್.ವಿ.ದೇಶಪಾಂಡೆ! ನಂತರ ಎಸ್ಸೆಂ.ಕೃಷ್ಣರ ಸರ್ಕಾರದಲ್ಲೂ ಇವರೇ ಇಂಡಸ್ಟ್ರೀಸ್ ಮಿನಿಸ್ಟ್ರು! ಅಂದರೆ ಸತತ ಎರಡು ಅವಧಿಗೆ - 10 ವರ್ಷಗಳ ಕಾಲ ಆರ್.ವಿ.ದೇಶಪಾಂಡೆ ಈ ರಾಜ್ಯದ ಇಂಡಸ್ಟ್ರೀಸ್ ಮಿನಿಸ್ಟ್ರಾಗಿದ್ದರು. ಇವರು ಆ ಜಾಗದಾಗೆ ಕುಂತು ನೈಸ್ ಪರ ತೆಗೆದುಕೊಂಡ ನಿಲುವುಗಳು, ನಡೆಸಿದ ಹಗರಣಗಳು ಒಂದೇ ಎರಡೇ, ಸುವಿಸ್ತಾರವಾಗಿ ಬರೆದರೆ ಅದೇ ಒಂದು ಸೀರೀಸ್ ಆದೀತು. ಇದೇ ಸಮಯಕ್ಕೆ ಖೇಣಿಯವರ ಪರಮಾಪ್ತರಲ್ಲೊಬ್ಬರಾದ ಬಿ.ಎಸ್.ಪಾಟೀಲರು ಪ್ರಿನ್ಸಿಪಲ್ ಸೆಕ್ರೆಟರಿಗಳಾಗಿದ್ದರು, ನಂತರ ಎಸ್ಸೆಂ.ಕೃಷ್ಣರ ಅವಧಿಯಲ್ಲಿ ಇವರು ಚೀಫ್ ಸೆಕ್ರೆಟರಿಯಾಗಿದ್ದರು. ಮತ್ತೊಬ್ಬರು ಕ್ಯಾಪ್ಟನ್ ರಮೇಶ್, ಇವರು ಲೋಕೋಪಯೋಗಿ ಕಾರ್ಯದರ್ಶಿಗಳಾಗಿದ್ದರು. ಫ್ರೇಂವರ್ಕ್ ಅಗ್ರೀಮೆಂಟಿಗೆ ಸರ್ಕಾರದ ಪರವಾಗಿ ಇವರೇ ಸಹಿ ಹಾಕಿರುವುದು. ಅಲ್ಲಿಗೆ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಮೂವರು `ಮಹನೀಯರು' ಬಂದು ಕೂತರು. ಕಬ್ಬಿಣ ಕಾದಿತ್ತು. ಆಡಳಿತ ವ್ಯವಸ್ಥೆಯಲ್ಲಿ ಖೇಣಿಯ ಸುತ್ತಿಗೆಗಳು ಬಂದು ಕೂತವು. ಮಿಕ್ಕೆಲ್ಲವೂ ಯಾವುದೇ ಸದ್ದು ಸಪ್ಪಳವಿಲ್ಲದೆ ಸಾಂಗೋಪಾಂಗವಾಗಿ ನಡೆದು ಹೋದವು.
ಇನ್ನು ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನ ಪರಮ ನಿರ್ಲಜ್ಜ ಕ್ಲಾಸ್ ಎಂದರೆ ಆರ್ಬಿಟ್ರೆಶನದು. ಆರ್ಟಿಕಲ್ 18 ಇದನ್ನು ವಿವರಿಸುತ್ತದೆ. ಇದರ ಪ್ರಕಾರ ಏನೇ ಡಿಸ್ಪ್ಯೂಟ್ಗಳು ಎದುರಾದರೂ 30 ದಿನಗಳೊಳಗೆ ಉಭಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಸರ್ಕಾರ ಮತ್ತು ಕಂಪೆನಿ ಇಬ್ಬರಿಗೂ ಒಪ್ಪಿಗೆಯಾಗತಕ್ಕಂತಹ ತಜ್ಞರ ಸಮಿತಿಗೆ ಅದನ್ನು ಒಪ್ಪಿಸಬೇಕು. ಅದಕ್ಕೆ 60 ದಿನಗಳ ಕಾಲಾವಕಾಶ. ಇನ್ನು ಈ ತಜ್ಞರ ಸಮಿತಿಯ ಶಿಫಾರಸನ್ನು ಕಂಪೆನಿ ಒಪ್ಪಬಹುದು ಇಲ್ಲ ತಿರಸ್ಕರಿಸಬಹುದು. ಹಾಗಾದರೆ ತಜ್ಞರ ಸಮಿತಿಯೇಕೋ? ಇಲ್ಲ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಆರ್ಬಿಟ್ರೆಶನ್ಗೆ ಹೋಗಬೇಕು. ಸರ್ಕಾರ ಮತ್ತು ಕಂಪೆನಿ ಇಬ್ಬರೂ ತಮ್ಮ ತಮ್ಮ ಪರವಾಗಿ ಒಬ್ಬರನ್ನು ಆರ್ಬಿಟ್ರೇಟರ್ ಆಗಿ ನೇಮಿಸತಕ್ಕದ್ದು. ನಂತರ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್, ಪ್ಯಾರಿಸ್ ಮೂರನೆಯ ನ್ಯೂಟ್ರಲ್ ಆರ್ಬಿಟ್ರೇಟರ್ ಅನ್ನು ನೇಮಿಸುತ್ತದೆ. ಈ ಆರ್ಬಿಟ್ರೇಷನ್, ನ್ಯೂ ಯಾರ್ಕ್ ಕನ್ವೆಂಷನ್ 1958ರಂತೆ ನಡೆಯುತ್ತದೆ. ಈ ಆರ್ಬಿಟ್ರೇಷನ್ ಕಮಿಟಿ ನೀಡುವ ತೀರ್ಪೇ ಅಂತಿಮ. ಅದನ್ನು ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ! ಈ ಆರ್ಬಿಟ್ರೇಷನ ನಡೆಸಬೇಕಾದ ಸ್ಥಳ ಯಾವುದು ಗೊತ್ತಾ - ಲಂಡನ್ ಕೋರ್ಟ್! ಅಂದರೆ ಹೆಮ್ಮಿಗೇಪುರ ಕುಂಬಳಗೋಡಿನ ರೈತ ಲಂಡನ್ ಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕು!
ನೈಸ್ ಪುರಾಣ - 5 - ಫ್ರೇಂವರ್ಕ್ ಅಗ್ರೀಮೆಂಟ್ ಎಂಬ ಪೆಡಂಭೂತ!
ಹೋದ ವಾರ ನಾವು ಈ ಫ್ರೇಂವರ್ಕ್ ಅಗ್ರೀಮೆಂಟ್ ಎಂಬುದು ಇಡಿಯ ಬಿಎಂಐಸಿಪಿಗೆ ಹೇಗೆ ಇಂದು ಮೂಲಧಾತುವಾಗಿದೆ? ಹೇಗೆ ಅದು ನಿರ್ಲಜ್ಜವಾಗಿ ನೈಸ್ ಕಂಪೆನಿಯ ಪರವಾಗಿದೆ? ಹೇಗೆ ಅದು ಸಾವಿರಾರು ರೈತರ ಬದುಕಿನ ನೇಣುಗಂಬವಾಗಿದೆ? ಭೂಮಿಯ ವಿಷಯದಲ್ಲಿ ಎಂತೆಂತಹ ಹಗರಣಗಳು ನಡೆದಿವೆ ಎಂಬುದನ್ನು ಕೂಲಂಕುಷವಾಗಿ ನೋಡಿದ್ದೇವೆ. ಈ ವಾರ ಫ್ರೇಂವರ್ಕ್ ಅಗ್ರೀಮೆಂಟನ್ನು ಮತ್ತಷು ವಿಮರ್ಶೆಗೆ ಒಳಪಡಿಸೋಣಂತೆ.
ಮೊದಲಿಗೆ ಟೋಲ್ ರಸ್ತೆ - ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ.6 ರಸ್ತೆ ನಿರ್ಮಾಣ ಮತ್ತು ಅದರ ನಿರ್ವಹಣೆಯ ಕುರಿತು ಮಾತನಾಡುತ್ತದೆ. ಇದರಂತೆ ಕಂಪೆನಿಯು ಟೋಲ್ ಅಥಾರಿಟಿ ಎಂಬ ಒಂದು ಸಬ್ಸಿಡಿಯರಿಯನ್ನು ಸ್ಥಾಪಿಸತಕ್ಕದ್ದು. ಬಿಎಂಐಸಿಪಿಯ ಟೋಲ್ ರಸ್ತೆಯ ಸಂಪೂರ್ಣ ನಿರ್ವಹಣೆಯನ್ನು ಕಂಪೆನಿ ಈ ಟೋಲಿ ಅಥಾರಿಟಿಗೆ ವಹಿಸಬೇಕು. ಟೋಲ್ ಅಥಾರಿಟಿ ಚಾರ್ಟರ್ ಮತ್ತು ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ನ ನಿಯಮಗಳನುಸಾರವಾಗಿ 30 ವರ್ಷಗಳ ಕನಸೆಷನ್ ಅವಧಿ ಮುಗಿಯುವವರೆಗೆ ಕಂಪೆನಿ ಈ ರಸ್ತೆಯನ್ನು ನಿರ್ವಹಿಸುತ್ತದೆ. ಈ ರಸ್ತೆಯ ಮೇಲೆ ಚಲಿಸುವ ಎಲ್ಲಾ ವಾಹನಗಳಿಂದಲೂ ಇಂತಿಷ್ಟು ಅಂತ ಪೂರ್ವ ನಿಗದಿತ ಮೊತ್ತವನ್ನು ಟೋಲ್ ಆಗಿ ಸ್ವೀಕರಿಸುತ್ತದೆ. ಈ ಟೋಲ್ ಮೊತ್ತ ಸರ್ಕಾರ ಮತ್ತು ಕಂಪೆನಿಯು ಕೂತು ನಿರ್ಧರಿಸತಕ್ಕಂತಹ ಒಂದು ಮೊತ್ತವಾಗಿರುತ್ತದೆ. ಬಿಎಂಐಸಿಪಿ ರಸ್ತೆಯ ಸೆಕ್ಯುರಿಟಿ, ಟೋಲ್ ಡಿಫಾಲ್ಟರ್ಸ್ ಎಲ್ಲವನ್ನೂ ನಿಭಾಯಿಸುವ ಜವಾಬ್ದಾರಿಯನ್ನು ಈ ಟೋಲ್ ಅಥಾರಿಟಿಗೆ ವಹಿಸಲಾಗಿದೆ. ಈ 30 ವರ್ಷಗಳ ಮಧ್ಯದಲ್ಲಿ ಭಾರತದ ಸರ್ಕಾರ ಅಥವಾ ಕರ್ನಾಟಕದ ಸರ್ಕಾರ ಈ ರಸ್ತೆಯನ್ನು ಅಥವಾ ಈ ರಸ್ತೆಯ ಒಂದು ಭಾಗವನ್ನು ನ್ಯಾಷನಲ್ ಹೈವೇಸ್ ಆಕ್ಟ್ 1956ನ ಸೆಕ್ಷನ್ 2(2)ರಡಿಯಲ್ಲಿ ನ್ಯಾಷನಲ್ ಹೈವೇ ಎಂದು ಘೋಷಿಸದಂತೆ ನೋಡಿಕೊಳ್ಳಲಾಗುವುದೆಂದು ಸರ್ಕಾರ ಆಶ್ವಾಸನೆ ನೀಡಿದೆ. ಇದೇ ಆರ್ಟಿಕಲ್ 6ರಲ್ಲಿ ಟೋಲ್ ರಸ್ತೆಯನ್ನು ಆರು ಫೇಸ್ಗಳಾಗಿ, ಮೂರು ಸೆಕ್ಷನ್ಗಳಾಗಿ ವಿಂಗಡಿಸಿದ್ದು, ಅದರ ಸ್ಪಷ್ಟ ರೂಪುರೇಖೆಗಳನ್ನು ದಾಖಲಿಸಲಾಗಿದೆ.
ಅಂತೆಯೇ ಈ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ಟೈಮ್ ಟೇಬಲ್ಲನ್ನು ಕೂಡ ಫ್ರೇಂವರ್ಕ್ ಅಗ್ರೀಮೆಂಟ್ ಕರಾರು ಮಾಡಿದೆ. ಇದರಂತೆ ಮೊದಲ ಫೈನಾನ್ಷಿಯಲ್ ಕ್ಲೋಸಿಂಗ್ ಆದ 8 ವರ್ಷಗಳಿಗೆ ಮೊದಲ ಸೆಕ್ಷನ್, 10 ವರ್ಷಗಳಿಗೆ 2 ಮತ್ತು 3ನೇ ಸೆಕ್ಷನ್ ರಸ್ತೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು. ಇನ್ನುಳಿದ 2 ವರ್ಷಗಳಲ್ಲಿ ಅಳಿದುಳಿದ ಕೆಲಸಗಳಾಗಬೇಕು. ಅಕಸ್ಮಾತ್ ರಸ್ತೆಯ ಯಾವುದೋ ಒಂದು ಭಾಗದ ನಿಮರ್ಾಣ ತೀರ ವಿಳಂಬವಾಗುತ್ತಿದ್ದರೆ, ಸರ್ಕಾರ ಅದನ್ನು ತುಂಡು ಗುತ್ತಿಗೆಯಂತೆ ಮತ್ತೊಂದು ಕಂಪೆನಿಗೆ ವರ್ಗಾಯಿಸಬಹುದಾಗಿದೆ. ಆದರೆ ಇದೆಲ್ಲವೂ ಅಗ್ರೀಮೇಂಟಿನ ಆರ್ಟಿಕಲ್ 2ರ ಎಲ್ಲಾ ಕರಾರುಗಳೂ ಪೂರ್ಣಗೊಂಡರೆ ಮಾತ್ರ.
ಇನ್ನು ರಸ್ತೆ 6 ಲೇನ್ಗಳದಾಗಿದ್ದು, 4 ಎಕ್ಸ್ಪ್ರೆಸ್ ಲೇನ್ ಮತ್ತು 2 ಸರ್ವೀಸ್ ರಸ್ತೆಗಳನ್ನೊಳಗೊಂಡಿದೆ. ಕಂಪೆನಿ ಬಯಸಿದಲ್ಲಿ ಚತುಷ್ಪಥ ರಸ್ತೆಯನ್ನು 6 ಲೇನ್ಗಳಿಗೆ ಹಿಗ್ಗಿಸಬಹುದು. ಕಂಪೆನಿಯು ಟೋಲ್ ರಸ್ತೆಯನ್ನು ಅಂತರಾಷ್ಟ್ರೀಯ ಪ್ರಮಾಣಗಳಿಗನುಗುಣವಾಗಿ ಕಾಂಕ್ರೀಟಿನಲ್ಲಿ ಕಟ್ಟತಕ್ಕದ್ದು! ಆಶ್ಚರ್ಯ ಅಲ್ಲವೇ ನಮ್ಮ ಈಗಿನ ನೈಸ್ ರಸ್ತೆ ನಮ್ಮ ಮನೆಯ ಮುಂದಿನ ಟಾರ್ ರಸ್ತೆಯೇ ಅಲ್ಲವೇ ಅಂದಿರಾ? ಹೌದು ಇದು ನೈಸ್ ಪುರಾಣದಲ್ಲಿ ಮತ್ತೊಂದು ಉಪಕಥೆ, ಒಂದು ಉಪ ಹಗರಣ! ಈಗಲೂ ನೀವು ಖೇಣಿಯವರನ್ನು ಕೇಳಿ ನೋಡಿ, ಅದೇನೋ ಮೊದಲೇ ಕಾಂಕ್ರೀಟು ಹಾಕಿದರೆ ರಸ್ತೆಯಲ್ಲಿ ಬಿರುಕು ಬಿಟ್ಟುಕೊಂಡುಬಿಡುತ್ತದಂತೆ, ಆದ್ದರಿಂದ ಅವರು ಈಗ ಟಾರು ರಸ್ತೆ ಹಾಕಿದ್ದಾರಂತೆ, ಮುಂದೆ(?) ಅವರು ಕಾಂಕ್ರೀಟು ರಸ್ತೆ ಮಾಡುವವರಿದ್ದಾರಂತೆ!
ಟೌನ್ಷಿಪ್ಗಳು - ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಲ್ಲಿ 7 ಟೌನ್ಷಿಪ್ಗಳನ್ನು ಸ್ಥಾಪಿಸಲು ಉದ್ದೇಶಿಸಿತ್ತಾದರೂ ಕೊನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಕೇವಲ 5 ಟೌನ್ಷಿಪ್ಗಳಿಗೆ. ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ 7 ಈ ಕುರಿತು ಮಾತನಾಡುತ್ತದೆ. ಟೌನ್ಷಿಪ್ಗಳು ಬಿಎಂಐಸಿಪಿಯ ಅವಿಭಾಜ್ಯ ಅಂಗ ಎಂದು ಮೊದಲಿಗೇ ಸಾರುವ ಈ ಆರ್ಟಿಕಲ್ ಇನ್ನೂ ಮುಂದೆ ಹೋಗಿ ಕಂಪೆನಿ ಬೆಂಗಳೂರು ಮತ್ತು ಮೈಸೂರಿನ ಕೈಗಾರಿಕೆಗಳು, ವಾಣಿಜ್ಯ ವ್ಯವಹಾರ ಮತ್ತು ಟೂರಿಸಮ ಅನ್ನು ಅಬೀವೃದ್ಧಿಪಡಿಸಲು ರೂಪಿಸುತ್ತಿರುವ ಈ ಟೌನ್ಷಿಪ್ಗಲನ್ನು ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಿಂದ ಡೀವಿಯೇಟ್ ಆಗಿ ಕೂಡ ನಿರ್ಮಿಸಬಹುದು ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಇನ್ನು ಈ ಟೌನ್ಷಿಪ್ಗಳ ನಿರ್ವಹಣೆ. ಟೌನ್ಷಿಪ್ಗಳ ನಿಮರ್ಾಣದ ಒಂದನೇ ವಾರ್ಷಿಕೋತ್ಸವದಂದು ಕಂಪೆನಿ ಈ ಟೌನ್ಷಿಪ್ಗಳ ಆಡಳಿತವನ್ನು ಸರ್ಕಾರಕ್ಕೆ ಒಪ್ಪಿಸತಕ್ಕದ್ದು ಎಂಬುದು ನಿಯಮ. ಈ ಟೌನ್ಷಿಪ್ಗಳಲ್ಲಿ ಶೇ.55ರಷ್ಟು ಭೂಮಿಯನ್ನು ಕಮರ್ಷಯಲಿ ಬಳಸಬಹುದಾಗಿದ್ದು, ಇನ್ನುಳಿದ ಶೇ45ರಷ್ಟು ಭೂಮಿಯನ್ನು ಸಿವಿಕ್ ಅಮೆನಿಟಿಗಳಾದ ಶಾಲೆ, ರಸ್ತೆ, ಗುಡಿ, ಗೋಪುರ, ಪೋಲೀಸ್ ಠಾಣೆ, ಅಗ್ನಿಶಾಮಕದಳ ಮುಂತಾದ ಸವಕರ್ಯಗಳನ್ನೊದಗಿಸಲು ಬಳಸಬೇಕು. ಮತ್ತು ಒಂದು ವರ್ಷದ ನಂತರ ಟೌನ್ಷಿಪ್ನ ಆಡಳಿತದ ಜೊತೆಗೆ ಈ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇದಲ್ಲದೆ ಸರ್ಕಾರ ಅನೇಕ ಇತರ ಷರತ್ತುಗಳನ್ನು ವಿಧಿಸುತ್ತದೆ. ಈಗಾಗಲೇ ಬೆಂಗಳೂರು ಸಾಕಷ್ಟು ಬೆಳೆದಿದ್ದು, ಇದರ ಮೇಲೆ 5 ಬೃಹತ್ ಟೌನ್ಷಿಪ್ಗಳನ್ನು ಸೇರಿಸುವುದು ಬೆಂಗಳೂರಿನ ಮೂಲಭೂತ ಸೌಕರ್ಯಗಳ ಮೇಲೆ ಇನ್ನಷ್ಟು ಹೊರೆಯಾಗುವುದರಿಂದ, ಕಂಪೆನಿಯೇ ಪ್ರಾಸ್ತಾಪಿಸಿದಂತೆ ಈ ಟೌನ್ಷಿಪ್ಗಳಲ್ಲಿನ ಸಿವಿಕ್ ಅಮೆನಿಟಿಗಳು ಮತ್ತು ಈ ಟೌನ್ಷಿಪ್ಗಳಿಗೆ ವಿದ್ಯುತ್ತು ಮತ್ತು ನೀರಿನ ಸರಬರಾಜು ಹೊನೆಯನ್ನೂ ಸಹ ಕಂಪೆನಿಗೇ ಒಪ್ಪಿಸಲಾಗಿದೆ. ಇದರಂತೆ ಬೆಂಗಳೂರಿನ ಸೀವೇಜ್ ನೀರನ್ನು ರಿಸೈಕಲ್ ಮಾಡಿ ಇತರೆ ಅವಶ್ಯಕತೆಗಳಿಗೆ ಉಪಯೋಗಿಸಲು ಅನುಕೂಲವಾಗುವಂತೆ ಒಂದು ವಾಟರ್ ರೀಸೈಕ್ಲಿಂಗ್ ಯೂನಿಟ್ ಮತ್ತು ವಿದ್ಯುತ್ ಸರಬರಾಜಿಗೆಮದು 400 ಮೆಗಾವ್ಯಾಟ್ಗಳ ಸಾಮಥ್ರ್ಯದ ವಿದ್ಯುತ್ ಯೂನಿಟ್ಗಳನ್ನೂ ಕಂಪೆನಿ ಸ್ಥಾಪಿಸಬೇಕು. ಟೌನ್ಷಿಪ್ಗಳಿಗೆ ಆಗಿ ಇನ್ನುಳಿದ ವಿದ್ಯುತ್ತನ್ನು ಸರ್ಕಾರಕ್ಕೆ ಕಂಪೆನಿ ಮಾರಬೇಕು. ಇದು ಕರಾರು.
ಇನ್ನು ಈ ಫ್ರೇಂವರ್ಕ್ ಅಗ್ರೀಮೆಂಟಿನ ಬಹುಮುಖ್ಯ ಅಂಶವೆಂದರೆ ಇದು ಬಿಎಂಐಸಿಪಿ ಯೋಜನೆಯ ಶೀಘ್ರ ಮತ್ತು ಸಾದ್ಯಂತ ಅನುಷ್ಠಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸುತ್ತದೆ ಎಂಬುದು. ಇದು ಇಡಿಯ ಬಿಎಂಐಸಿಪಿ ಪ್ರಾಜೆಕ್ಟಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಕಾರ್ಯನಿರ್ವಹಿಸಬೇಕಿರುವುದು ಇದರ ಮ್ಯಾಂಡೇಟ್. ಇಂತಿಪ್ಪ ಉನ್ನತಾಧಿಕಾರ ಸಮಿತಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ. ಇನ್ನುಳಿದಂತೆ ಪ್ರಿನ್ಚಿಪಲ್ ಸೆಕ್ರೆಟರಿ, ಫೈನಾನ್ಸ್ ಆಫೀಸರ್, ಕೈಗಾರಿಕೆ, ಕಂದಾಯ, ವಸತಿ, ನಗರಾಭಿವೃದ್ಧಿ, ಅರಣ್ಯ ಮತ್ತು ಪರಿಸರ, ಇಂಧನ, ಕಾನೂನು, ಲೋಕೋಪಯೋಗಿ, ಮೂಲಭೂತ ಸೌಕರ್ಯ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಕೆಯೆಡಿಬಿಯ ಅಧ್ಯಕ್ಷರು ಈ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಕಮಿಟಿಯು ಬಿಎಂಐಸಿಪಿ ಯೋಜನೆಯ ಅನುಷ್ಠಾನವನ್ನು ಅದರ ಪ್ರಗತಿಯನ್ನೂ ಎಂದಾದರೂ ಸರಿ ಪರಿಶೀಲಿಸಬಹುದಾಗಿದೆ. ಇಂತಿಪ್ಪ ಉನ್ನತಾಧಿಕಾರ ಸಮಿತಿಯ ನಿರ್ಧಾರ ನಿಲುವುಗಳು ಸರ್ಕಾರದ ನಿಲುವುಗಳು ಕೂಡ ಎಂದೂ ತಿಳಿಸಲಾಗಿದೆ. ಇದು ಬಹಳ ಮುಖ್ಯ. ಮುಂದೆ ಈ ನೈಸ್ ಪುರಾಣ ಅನೇಕ ಉಪಥೆಗಳನ್ನು ತನ್ನೊಡಲಲ್ಲಿ ಸೇರಿಸಕೊಂಡು ಹೆಮ್ಮರವಾಗಿ ಬೆಳೆಯಿತು, ಇನ್ನೂ ಬೆಳೆಯುತ್ತಲೇ ಇದೆ. ಈ ಮಧ್ಯೆ ಇದೇ ಉನ್ನತಾಧಿಕಾರ ಸಮಿತಿಯು ರಾಜ್ಯ ಹೈಕೋರ್ಟ್ನಲ್ಲಿ ಇಡೀ ಬಿಎಂಐಸಿಪಿ ಯೋಜನೆಯು 30 ಸಾವಿರ ಕೋಟಿ ರುಪಾಯಿಗಳ ಹಗರಣ ಎನ್ನುವುದಾಗಿ ಅಫಿಡವಿಟ್ ಸಲ್ಲಿಸಿದೆ. ಬಿಎಂಐಸಿಪಿ ಯೋಜನೆಯ ಅನುಷ್ಠಾನಕ್ಕಾಗಿ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅದೇ ಉನ್ನತಾಧಿಕಾರ ಸಮಿತಿ ಇಡೀ ಯೋಜನೆಯನ್ನು 30 ಸಾವಿರ ಕೋಟಿ ರೂ.ಗಳ ಹಗರಣ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುತ್ತದೆ ಎಂದರೆ? ಹಗರಣದ ಮೊತ್ತದ ಬಗ್ಗೆ ವಾದಗಳಿರಬಹುದು ಆದರೆ ಇದೊಂದು ಹಗರಣವೆನ್ನುವುದರ ಬಗ್ಗೆ ಬಹುಶಃ ಇರುವ ಎಲ್ಲ ಅನುಮಾನಗಳಿಗೆ ಈ ಅಫಿಡವಿಟ್ ತೆರೆ ಎಲೆಯುತ್ತದೆ. ಇದನ್ನು ಮುಂದೆ ಬರೆಯುವವನಿದ್ದೇನೆ.
ಫ್ರೇಂವರ್ಕ್ ಅಗ್ರೀಮೆಂಟ್ನಲ್ಲಿ ಇಷ್ಟೇ ಅಲ್ಲ ಇನ್ನೂ ಹಲವಾರು ಆಸಕ್ತಿಕರ ಮಾಹಿತಿಗಳಿವೆ. ಇನ್ನೂ ಹಲವಾರು ಹಗರಣಗಳಿವೆ. ಅದರ ಕುರಿತ ಚರ್ಚೆ ಮುಂದಿನ ವಾರ.
ನೈಸ್ ಪುರಾಣ - 4 - ಫ್ರೇಮ್ ವರ್ಕ್ ಅಗ್ರೀಮೆಂಟ್ ಎಂಬ ನೇಣುಗಂಬ!
ನೈಸ್ ಪುರಾಣ - 3 - ಹಗರಣದ ಬೀಜಾಂಕುರವಾಗಿದ್ದೇ ಗೌಡಪ್ಪನ ಕಾಲದಲ್ಲಿ!
ಹೌದು, ಹೈ ಲೆವೆಲ್ ಕಮಿಟಿಯ ಮೊದಲ ಸಭೆಯಲ್ಲಿಯೇ ಅಶೋಕ್ ಖೇಣಿಯ ವರಾತ ಶುರುವಾಗುತ್ತದೆ. ತಮ್ಮ ಕಂಪೆನಿಗಳ ಒಕ್ಕೂಟ ಇಡಿಯ ಪ್ರಾಜೆಕ್ಟಿನ ಕಮರ್ಷಿಯಲ್ ಮತ್ತು ಫೀಸಿಬಲಿಟಿ ಸರ್ವೇ ಕೈಗೊಂಡಿದ್ದು, ಈಗಿರುವಂತೆ ಮಾಡುವುದಾದರೆ ಕಂಪೆನಿಗಳಿಗೆ ಏನೂ ಗಿಟ್ಟುವುದಿಲ್ಲ, ಇದು ಆರ್ಥಿಕವಾಗಿ ಮಾಡಲೋಗ್ಯವಲ್ಲ ಎಂದು ಶರಾ ಬರೀತಾರೆ. ನಂತರ ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ. ಇಡಿಯ ಪ್ರಾಜೆಕ್ಟನ್ನು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಗೆ ಸೀಮಿತಗೊಳಿಸುವ ಬದಲಿಗೆ ಇದನ್ನು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಅನುಮತಿ ಕೊಡಬೇಕೆಂದೂ, ವಿನಂತಿಸಿಕೊಳ್ಳುತ್ತಾರೆ. ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿನ ಭೂಮಿಯನ್ನು ಕಮರ್ಷಿಯಲ್ ಆಗಿ ಬಳಸಿಕೊಂಡು, ಒಂದು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವುದೆಂದೂ, ಇದರ ಭಾಗವಾಗಿ ಬೆಂಗಳೂರ ಮೇಲಿನ ಒತ್ತಡ ಕಡಿತಗೊಳಿಸಲು ಅರ್ಬನ್ ಟೌನ್ಷಿಪ್ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಅಗ್ರೋಬೇಸ್ಡ್ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ರೆಸಾರ್ಟ್ಗಳನ್ನು ಕಟ್ಟಬಹುದೆಂದು ಕನಸು ಬಿತ್ತಿದರು, ಖೇಣಿ! ಇದಲ್ಲದೆ ಎಕ್ಸ್ಪ್ರೆಸ್ ವೇ ಮತ್ತು ಎನ್ಎಚ್ 7ರ ನಡುವೆ ಎನ್ಎಚ್ 4ರ ಮೂಲಕ ಒಂದು ಲಿಂಕ್ ರಸ್ತೆ ಮತ್ತು ಬೆಂಗಳೂರಿನ ಒಳ ಭಾಗಗಳಿಗೂ ರಸ್ತೆಯ ವಿಸ್ತಾರದ ಕುರಿತು ಮಾತನಾಡಿದರು. ಈ ಟೌನ್ಷಿಪ್ಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನೂ ಕಂಪೆನಿಯೇ ಮಾಡಿಕೋಳ್ಳುವುದಾಗಿಯೂ ಖೇಣಿ ಹೇಳುತ್ತಾರೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಎಂಬ ಹೆಸರನ್ನು ಬದಲಿಸಿ ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ಎಂದು ಮರುನಾಮಕರಣಗೊಳಿಸಿ, ನಂದಿಯನ್ನು ಪ್ರಾಜೆಕ್ಟಿನ ಲಾಂಛನವಾಗಿ ಬಳಸಬೇಕೆಂದು ಖೇಣಿ ಒತ್ತಾಯಿಸುತ್ತಾರೆ. ಸರ್ಕಾರ ಮತ್ತು ಕಂಪೆನಿ ನಡುವಿನ ಎಂಒಯುನ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತೊಂದು ಎಂಒಯುವನ್ನು ಮಾಡಿಕೊಳ್ಳಬೇಕೆಂದೂ ಹೇಳುತ್ತಾರೆ.
ಆಶ್ಚರ್ಯ! ಖೇಣಿ ಹತ್ತಿಸಿದ ಅಮಲಿನಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಂತೆ ಕಂಡು ಬಂದ ಇಡೀ ಸಭೆ ಯಾವುದೇ ಪ್ರಶ್ನೆಗಳಿಲ್ಲದೆ ಖೇಣಿ ಹೇಳಿದ ಎಲ್ಲವನ್ನೂ ಮರುಮಾತಿಲ್ಲದೆ ಒಪ್ಪಿಕೊಂಡು ಅಸ್ತು ಎಂದಿತು. ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಜೆ. ವಾಸುದೇವನ್ ಇಡಿಯ ಪ್ರಪೋಸಲ್ಲಿಗೆ ಒಪ್ಪಿಗೆ ಸೂಚಿಸುತ್ತಾರೆ. ಈ ಹೈ ಲೆವೆಲ್ ಕಮಿಟಿಯ ಸಭೆಯ ಮಿನಟ್ಸ್ ಅನ್ನು ತೆಗೆದು ನೋಡಿದವರಿಗೆ ತುಂಬಾ ಸ್ಪಷ್ಟವಾಗಿ ಅರ್ಥವಾಗುವ ಮೊದಲ ವಿಷಯವೆಂದರೆ, ಈ ಸಭೆಯ ಎಲ್ಲ ನಿರ್ಣಯಗಳೂ ಪೂರ್ವ ನಿರ್ಧಾರಿತ. ಸಭೆ ಒಂದು ಸ್ಟೇಜ್ ಶೋ ಅಷ್ಟೆ, ಎಂಬುದು.
ಇಡೀ ಬಿಎಂಐಸಿಪಿಯನ್ನು ನಾವು ಇಂದು ಹಗರಣವೆನ್ನುವುದೇ ಆದರೆ ಅದರ ಬೀಜಾಂಕುರವಾಗಿದ್ದೇ ಇಲ್ಲಿ. ರೈತ ನಾಯಕನೆಂದು ಕೊಚ್ಚಿಕೊಳ್ಳುವ ದೇವೇಗೌಡರು ಆತನಲ್ಲಿ ರಸ್ತೆ ಕಟ್ಟಲು ಹಣವಿಲ್ಲವೆಂದು 20 ಸಾವಿರ ಎಕರೆ ರೈತರ ಭೂಮಿಯನ್ನು ಆತನಿಗೆ ಕಮರ್ಷಿಯಲ್ ಆಗಿ ಬಳಸಿಕೊಳ್ಳಲು ಅನುಮತಿ ನೀಡುತ್ತಾರೆ! ಗೌಡರು ಖೇಣಿಯನ್ನು ಈಗ ಬರಿಗೈ ಫಕೀರ ಎಂದು ಅಣಕಿಸುವುದುಂಟು, ಆದರೆ ತಿಳಿದಿರಬೇಕು ಖೇಣಿ ಅಂದೂ ಸಹ ಬರಿಗೈ ಫಕೀರರೇ. ಅಂತಹ ಬರಿಗೈ ಫಕೀರರು ಈ ಬೃಹತ್ ಪ್ರಾಜೆಕ್ಟನ್ನು ಮಾಡಲು ಅನುವು ಮಾಡಿಕೊಟ್ಟದ್ದು ತಾವೇ ಸ್ವಾಮಿ! ಖೇಣಿ ಸರ್ಕಾರಕ್ಕೆ ಕೊಟ್ಟ ಪ್ರಪೋಸಲ್ಲು ಬಹಳ ಸರಳ - ಕ್ರಾಸ್ ಸಬ್ಸಿಡಿ! ಏನು ಹಾಗಂದರೆ? ಖೇಣಿ ಸಾಹೇಬರು ಐಡ್ಯಾ ಮಾಡ್ಯಾರ, ಸರಳ ಸ್ವಾಮಿ, ಪ್ರತಿಪಾದಿತ ರಸ್ತೆಯ ಇಕ್ಕೆಲಗಳ ಭೂಮಿಯನ್ನು ಕೊಳ್ಳುವ ಕಂಪೆನಿ ಅದನ್ನು ಕಮರ್ಶಿಯಲಿ (ರಿಯಲ್ ಎಸ್ಟೇಟ್) ಎಕ್ಸ್ಪ್ಲಾಯಿಟ್ ಮಾಡುತ್ತದೆ. ಟೌನ್ಷಿಪ್ಗಳನ್ನು ಕಟ್ಟುತ್ತದೆ, ಪ್ರವಾಸೋದ್ಯಮ ರೆಸಾರ್ಟ್ಗಳನ್ನು ಕಟ್ಟತ್ತದೆ. ಅದರಿಂದ ಬರುವ ಅಪಾರ ಹಣವನ್ನು ವ್ಯಯಿಸಿ ರಸ್ತೆ ನಿರ್ಮಾಣ ಮಾಡುತ್ತದೆ. ಹೀಗೆ ನಿರ್ಮಿಸಿದ ರಸ್ತೆ ಮೇಲೆ ಜನ ಓಡಾಡೋದಿಕ್ಕೆ ಟೋಲ್ ಅನ್ನು ಕೂಡ ಸಂಗ್ರಹಿಸುತ್ತದೆ. ಅದೂ 30 ವರ್ಷಗಳ ಕಾಲ! ಇಂತಹುದೊಂದು ಯೋಜನೆಗೆ ಗೌಡರೇ ಒಪ್ಪಿದ್ದರಲ್ಲ? ಇದನ್ನು ಗೌಡರು ಸಮರ್ಥಿಸಿಕೊಳ್ಳದೇ ಬಿಡುವುದಿಲ್ಲ. ಆಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟತ್ತು, ಉದಾರೀಕರಣ ಆಗಷ್ಟೆ ಜಾರಿಗೆ ಬರುತ್ತಿತ್ತು, ಆದ್ದರಿಂದ ಹೂಡಿಕೆಗೆ ಹಣ ಸಂಗ್ರಹಿಸುವುದು ಅಷ್ಟು ಸುಲಭವಿರಲಿಲ್ಲ. ಮೇಲಾಗಿ ಈ ಪ್ರಾಜೆಕ್ಟ್ನ ಫೀಸಬಿಲಿಟಿ ಸರ್ವೇ ನಡೆಸಿದ್ದ ಎಡಿಬಿ ಸಂಸ್ಥೆಯು ಸರ್ಕಾರ ಕ್ಯಾಪಿಟಲ್ನ ಶೇ.20ರಷ್ಟನ್ನು ಸಬ್ಸಿಡಿ ರೂಪದಲ್ಲಿ ಕೊಡದ ಹೊರತು ಈ ಪ್ರಾಜೆಕ್ಟ್ ಆರ್ಥಿಕವಾಗಿ ಯೋಗ್ಯವಲ್ಲ ಎಂದಿದ್ದನ್ನು ನೆನಪಿಸುತ್ತಾರೆ. ಇರಲಿ.
ಆಗಸ್ಟ್ 26, 1995ರಂದು ಕಂಪೆನಿಗಳು ಈ ಮೇಲ್ಕಂಡಂತೆ ನಿರ್ಧಾರಿತವಾಗಿದ್ದ ರೂಪುರೇಷೆಗಳಂತೆ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಇದರಲ್ಲಿ ಕಂಪೆನಿ ಸ್ಪಷ್ಟವಾಗಿ ಬೆಂಗಳೂರು - ಮೈಸುರು ಹೆದ್ದಾರಿಗೆ 5119.37 ಎಕರೆಗಳು ಮತ್ತು ಏಳು ಟೌನ್ಷಿಪ್ಗಳಿಗೆ 20, 092 ಎಕರೆಗಳು ಬೇಕಾಗುತ್ತದೆಂದೂ ಗುರುತಿಸುತ್ತದೆ. ಬೆಂಗಳೂರು - ಮೈಸೂರು ಹೆದ್ದಾರಿಗಾಗಿ ಅಂದಾಜು 1568 ಮಿಲಯನ್ ರೂ.ಗಳು ಖರ್ಚಾಗಬಹುದೆಂದು ತಿಳಿಸಲಾಗಿದೆ. ಈ ವರದಿ ಬೆಂಗಳೂರು ಮೈಸೂರಿನ ನಡುವೆ ಏಳು ಟೌನ್ಷಿಪ್ಗಳ ಸ್ಥಾಪನೆಯನ್ನು ಪ್ರತಿಪಾದಿಸುತ್ತದೆ. ಅದರಂತೆ ಬಿಡದಿ ಬಳಿ ಕಾರ್ಪರೇಟ್ ಸೆಂಟರ್ (1) ಮತ್ತು ಕಮರ್ಷಿಯಲ್ ಸೆಂಟರ್ (2), ರಾಮನಗರದ ಬಳಿ ಹೆರಿಟೇಜ್ ಸೆಂಟರ್ (3), ಫಾರ್ಮಿಂಗ್ ಅಂಡ್ ಮಾರ್ಕೆಟಿಂಗ್ ಸೆಂಟರ್(4) ಮತ್ತು ಇಂಡಸ್ಟರಿಯಲ್ ಸೆಂಟರ್ (5), ಮಂಡ್ಯ ಮತ್ತು ಶ್ರೀರಂಗಪಟ್ಟಣದ ನಡುವೆ ಅಗ್ರೀಕಲ್ಚರಲ್ ಸೆಂಟರ್(6), ಮತ್ತು ಶ್ರೀರಂಗಪಟ್ಟಣದ ಬಳಿ ಇಕೋ-ಟೂರಿಸಂ ಸೆಂಟರ್(7) ಎಂಬ ಏಳು ಟೌನ್ಷಿಪ್ಗಳನ್ನು ಕಂಪೆನಿ ಪ್ರತಿಪಾದಿಸುತ್ತದೆ. ಸೆಪ್ಟೆಂಬರ್ 13, 1995ರಮದು ಮತ್ತೆ ಸಭೆ ಸೇರುವ ಹೈ ಲೆವೆಲ್ ಕಮಿಟಿಯು ಕಂಪೆನಿ ಸಲ್ಲಿಸಿದ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಅಂಗೀಕರಿಸಿ, ಕಂಪೆನಿಯಿಂದ ಹಲವಾರು ಸ್ಪಷ್ಟನೆಗಳನ್ನು ಬಯಸುತ್ತದೆ. ಖೇಣಿಯವರು ಕೊಡುವ ವಿವರಣೆಗಳನ್ನು ದಾಖಲಿಸಿ ಸಭೆ ಮುಕ್ತಾಯವಾಗುತ್ತದೆ.
ಅಕ್ಟೋಬರ್ 12,1995ರಂದು ಈ ಹೈ ಲೆವೆಲ್ ಕಮಿಟಿಯು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ. ಖೇಣಿ ಕೊಟ್ಟ ರಿಪೋರ್ಟ್ಗೂ ಹೈ ಲೆವೆಲ್ ಕಮಿಟಿಯ ರಿಪೋರ್ಟ್ಗೂ ಅಂತಹ ಫರಕ್ಕೇನೂ ಇಲ್ಲ. ವ್ಯವಸ್ಥೆ ಖೇಣಿ ಸಾಹೇಬರೊಂದಿಗೆ ಅಷ್ಟು ಅನ್ಯೋನ್ಯವಾಗಿತ್ತು ಅಂತಾತು! ಈ ಹೈ ಲೆವೆಲ್ ಕಮಿಟಿಯ ರಿಪೋರ್ಟ್ರಿನಲ್ಲಿ ದಾಖಲಾಗಿರುವ ಕೆಲವು ಟರ್ಮ್ಸ್ ಅಂಡ್ ಕಂಡೀಷನ್ಸ್ ಮುಂದೆ ಹಗರಣವನ್ನು ಅರ್ಥ ಮಾಡಿಕೊಳ್ಳಲು ಇರುವ ಏಕೈಕ ರೆಫೆರೆನ್ಸ್ ಪಾಯಿಂಟ್. ಇದಕ್ಕೆ ನಂತರ ಬರೋಣ. ಹೈ ಲೆವೆಲ್ ಕಮಿಟಿಯ ಶಿಫಾರಸುಗಳ ಪರಾಮರ್ಶೆಗೆ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಂದು ಸಬೆ ನಡೆಯುತ್ತದೆ. ಎಲ್ಲ ವಿಷಯಗಳ ಕೂಲಂಕುಷ ಚಿಂತನೆಯ ನಂತರ ಸರ್ಕಾರ ಒಂದು ಆದೇಶ ಹೊರಡಿಸುತ್ತದೆ. ಈ ಆದೇಶ ಟೌನ್ಷಿಪ್ಗಳನ್ನು 7ರ ಬದಲು 5ಕ್ಕೆ ಮಿತಿಗೊಳಿಸುತ್ತದೆ ಎಂಬುದನ್ನು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ರಾಮನಗರದ ಬಳಿಯ ಹೆರಿಟೇಜ್ ಸೆಂಟರ್(3) ಮತ್ತು ಮಂಡ್ಯ ಶ್ರೀರಂಗಪಟ್ಟಣದ ನಡುವಿನ ಅಗ್ರೀಕಲ್ಚರ್ ಸೆಂಟರ್ (6)ಗೆ ಸರ್ಕಾರ ಅನುಮತಿ ನಿರಾಕರಿಸುತ್ತದೆ. ಇವೆರಡರ ಹೊರತಾಗಿಯೂ ಕೂಡ ಪ್ರಾಜೆಕ್ಟ್ ಲಾಭದಾಯಕವಾಗಿರಲಿದೆ ಎಂಬುದು ಸರ್ಕಾರದ ವಾದ. ಇದರಂತೆ ರಸ್ತೆಗೆ 5119 ಎಕರೆ ಮತ್ತು ಐದು ಟೌನ್ಷಿಪ್ಗಳಿಗೆ 13, 194 ಎಕರೆ ಭೂಮಿ ಅಗತ್ಯವೆಂದು ಗುರುತಿಸುತ್ತದೆ. ಇದರಂತೆ ಸರ್ಕಾರದ ಲೋಕೋಪಯೋಗಿ ಇಲಾಖೆಯು ಕಂಪೆನಿಗಳ ಕನ್ಸಾರ್ಶಿಯಂನೊಂದಿಗೆ ಸೂಕ್ತ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚಿಸುತ್ತದೆ.
ಇಲ್ಲಿ ಮತ್ತೊಂದು ಸಣ್ಣ ಸ್ಕ್ಯಾಮಿದೆ. ಇಂತಹ ಯಾವುದೇ ಪ್ರಾಜೆಕ್ಟಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಕು. ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಪರಿಶೀಲಿಸಿದ ಆರ್ಥಿಕ ಇಲಾಖೆ ಎರಡು ಆಯ್ಕೆಗಳನ್ನು ನೀಡುತ್ತದೆ. ಒಂದು - ಟೌನ್ಷಿಪ್ 1+2+4 = 6227 ಎಕೆರೆಗಳು, ಎರಡು - ಟೌನ್ಷಿಪ್ 1+2+4+5 = 8909 ಎಕೆರೆಗಳು. ಅಲ್ಲಿಗೆ ಗರಿಷ್ಠ 4 ಟೌನ್ಷಿಪ್ಗಳಿಗೆ ಮಾತ್ರ ಆರ್ಥಿಕ ಇಲಾಖೆ ಅಸ್ತು ಅಂದಿತ್ತು. ಆದರೆ ಸರ್ಕಾರದ ಆದೇಶದಲ್ಲಿ 5 ಟೌನ್ಷಿಪ್ಗಳಿಗೆ ಅನುಮತಿ ನೀಡಲಾಗಿದೆ. ಅದು ಟೌನ್ಷಿಪ್ ನಂ.7 ಶ್ರೀರಂಗಪಟ್ಟಣದ ಬಳಿ ಇಕೋ ಟೂರಿಸಂಗಾಗಿ ರೆಸಾರ್ಟ್. ಇದಕ್ಕೆ ಆರ್ಥಿಕ ಇಲಾಖೆ ತನ್ನ ಒಪ್ಪಿಗೆ ಸೂಚಿಸಿಲ್ಲ, ಆದರೆ ಇದಕ್ಕಾಗಿ 4285 ಎಕರೆಗಳನ್ನು ತೆಗೆದಿರಿಸಲಾಗಿದೆ! ಆರ್ಥಿಕ ಇಲಾಖೆಯ ಅನುಮೋದನೆಯೇ ಇಲ್ಲದೆ 4285 ಎಕರೆಗಳು ಖೇಣಿ ಕೈ ಸೇರುತ್ತವೆ, ದೇವೇಗೌಡರ ಹಯಾಮಿನಲ್ಲಿ!
ನಂತರ ಗೌಡರದ್ದೋ ದೇಶದ್ದೋ ಯಾರ ಅದೃಷ್ಟವೋ ತಿಳಿಯದು, ಅತ್ಯಂತ ಸಿನಿಮೀಯ ರೀತಿಯಲ್ಲಿ ಕೇವಲ 16 ಸಂಸದರನ್ನು ಬೆನ್ನಿಗೆ ಕಟ್ಟಕೊಂಡು ದೇವೇಗೌಡರು ದೆಹಲಿಗೆ ಹಾರುತ್ತಾರೆ, ಈ ದೇಶದ ಪ್ರಧಾನಿಯಾಗುತ್ತಾರೆ. ಅಲ್ಲಿಗೆ ಈ ನೈಸ್ ಪುರಾಣದಲ್ಲಿ ದೇವೇಗೌಡರ ಪಾತ್ರದ ಮೊದಲ ಅಂಕ ಮುಕ್ತಾಯವಾಗುತ್ತದೆ. ಇಲ್ಲಿ ನಮ್ಮ ನಾಡಿನಲ್ಲಿ ಬಹು ತರ್ಜನ ಭರ್ಜನದ ಬಳಿಕ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗುತ್ತಾರೆ. ನೈಸ್ ಪುರಾಣದಲ್ಲಿ ಒಂದು ಅಂಕಕ್ಕೆ ತೆರೆ ಬಿದ್ದು, ಮತ್ತೊಂದು ಅಂಕದ ತೆರೆಯೇಳುತ್ತದೆ.
ನೈಸ್ ಪುರಾಣ - 2

ನೈಸ್ ಪುರಾಣ - 1


