ನೇತಾಜಿ: ಹಿಸ್ಟರಿಯೋ? ಮಿಸ್ಟರಿಯೋ?

ಇಂದು ನಾವು ನಮ್ಮ 63ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸಹ ಸಂಪದಿಗ ಶ್ರೀಯುತ ರಾಕೇಶ್ ಶೆಟ್ಟಿಯವರು `1947ರ ಸ್ವಾತಂತ್ರ್ಯದ ಸೂರ್ಯ ನೋಡಲು ಅವರು ಬದುಕಿದ್ದರಾ?' ಎಂಬ ಲೇಖನ ಮಾಲಿಕೆಯ ಮೂಲಕ ಸುಭಾಷ್ ಚಂದ್ರ ಬೋಸರ ಸಾವಿನ ನಿಗೂಢತೆ ಮತ್ತು ವಿವಾದಗಳನ್ನು ಚರ್ಚೆಗೊಡ್ಡಿದ್ದಾರೆ. ಅದು ಸ್ವಾಗತಾರ್ಹವೇ ಸರಿ. ನೇತಾಜಿ ವಿಮಾನಾಪಘಾತದಲ್ಲಿ ಸಾಯಲಿಲ್ಲವಂತೆ, ಅವರು ಸ್ವಾತಂತ್ರ್ಯ ಬಂದ ಮೇಲೂ ಬದುಕಿದ್ದರಂತೆ, ಸನ್ಯಾಸಿಯಾಗಿದ್ದರಂತೆ, ಅವರೂ ಇನ್ನೂ ಇದ್ದಾರಂತೆ.. ಇತ್ಯಾದಿ, ಇತ್ಯಾದಿ ಅನೇಕ ವದಂತಿ, ಪುಕಾರುಗಳಿಗೆ ಲೆಕ್ಕವಿಲ್ಲ. ಇದನ್ನೇ ವಸ್ತುವಾಗಿಟ್ಟುಕೊಂಡು ಕೊಂಚ ಹಿಂದೆ ನಾನು ಬರೆದ ಕಿರು ಲೇಖನವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು ನೇತಾಜಿಯವರ ಸಾವಿನ ಕುರಿತ ಎಲ್ಲ ವಿವಾದಗಳನ್ನೂ ಮುಟ್ಟುತ್ತದಾದರೂ ವಿಸ್ತೃತವಾಗಿ ಚರ್ಚಿಸುವುದಿಲ್ಲ. ಆದರೆ ನೇತಾಜಿ ಸಾವಿನ ಕುರಿತ ನಿಗೂಢತೆ ಮತ್ತು ವಿವಾದಗಳ ಕುರಿತು ಒಂದು ವಿಹಂಗಮ ನೋಟವನ್ನಂತೂ ನೀಡುತ್ತದೆ. ತಮಗಿಷ್ಟವಾದೀತೆಂದು ಇಲ್ಲಿ ಪ್ರಕಟಿಸುತ್ತಿದ್ದೇನೆ.

ನೇತಾಜಿ ಸುಭಾಷ್ ಚಂದ್ರ ಬೋಸ್. ಆ ಹೆಸರು ಕೇಳದರೇನೆ ಏನೋ ಒಂದು ರೋಮಾಂಚನ. ನಮ್ಮ ಪೀಳಿಗೆಯ ಅನೇಕರಿಗೆ ಅವರ ಕುರಿತು ಹೆಚ್ಚು ತಿಳಿದೇ ಇಲ್ಲ. ಅವರು ಗೋಡೆಯ ಮೇಲಿನ ಚಿತ್ರವಷ್ಟೆ. ಆದರೆ ನೇತಾಜಿಯವರ ಕುರಿತು ಓದುತ್ತಾ ಹೋದಂತೆ ಅವರ ವ್ಯಕ್ತಿತ್ವದ ಅನೇಕ ಮುಖಗಳು ಮತ್ತು ನಮ್ಮ ಸ್ವತಂತ್ರ್ಯ ಸಂಗ್ರಾಮದಲ್ಲಿ ಅವರು ವಹಿಸಿದ ನಿರ್ಣಾಯಕ ಪಾತ್ರದ ಕುರಿತು ತಿಳಿಯುತ್ತದೆ. ಅವರ ಶೌರ್ಯ ಸಾಹಸದ ಅನೇಕ ಕಥೆಗಳು ಮೈನವಿರೇಳಿಸುತ್ತವೆ. ಅವರು 1941ರಲ್ಲಿ ಬ್ರಿಟಿಷರ ಗೃಹಬಂಧನದಿಂದ ತಪ್ಪಿಸಿಕೊಂಡು ನಂತರ ಅವರು ನಡೆಸಿದ ಸ್ವತಂತ್ರ್ಯ ಹೋರಾಟ ಭಾರತ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕದ್ದು. ಆದರೆ ಸುಭಾಷರಿಗೆ ಸಲ್ಲಬೇಕಾದ ಗೌರವವನ್ನು ಅವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. ಇದು ನಮ್ಮ ದೇಶದ ದುರ್ದೈವ . ಸುಭಾಷರು 1897ರ ಜನವರಿ 23ರಂದು ಕಟಕ್ನಲ್ಲಿ ಜನಿಸಿದರು. ಕಾಂಗ್ರೆಸ್ ಸೇರಿ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಅವರು ನಂತರ ಅಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ ತೊರೆದು ಫಾರ್ವಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದರು. ತಮ್ಮ ರಾಷ್ಟ್ರೀಯವಾದ, ಸ್ಪಷ್ಟ ಚಿಂತನೆ ಮತ್ತು ಬ್ರಿಟಿಷರಿಗೆ
ಬಂದೂಕಿನ ನಳಿಕೆಯಿಂದಲೇ ಉತ್ತರಕೊಡಬೇಕೆಂಬ ಅವರ ವಿಚಾರಧಾರೆ ಅಪಾರ ಜನಮನ್ನಣೆ ಗಳಿಸಿದ್ದವು. ಎರಡನೇ ವಿಶ್ವ ಯುದ್ಧದಲ್ಲಿ ಭಾರತವನ್ನು ಪಾಲ್ಗೊಳ್ಳುವಂತೆ ಮಾಡಿದ ಬ್ರಿಟಿಷರ ಕ್ರಮವನ್ನು ವಿರೋಧಿಸಿದ ಸುಭಾಷರನ್ನು ಗೃಹಬಂಧನದಲ್ಲಿರಿಸಲಾಯಿತು. ಆದರೆ 41ರ ಜನವರಿ 17ರಂದು ಅಲ್ಲಿಂದ ತಪ್ಪಿಸಿಕೊಂಡ ಸುಭಾಷರು ನಂತರ ಜರ್ಮನಿ, ಜಪಾನ್ಗಳ ಸಹಾಯದಿಂದ ಭಾರತ ಸ್ವತಂತ್ರಕ್ಕಾಗಿ ಹೋರಾಡಿದರು. ಅವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿ ಜಪಾನ್ ಸೇನೆಯೊಡಗೂಡಿ ಬರ್ಮ ಮತ್ತು ಭಾರತದ ಈಶಾನ್ಯ ಪ್ರದೇಶದ ಬಹುತೇಕ ಭಾಗವನ್ನು ಆಕ್ರಮಿಸಿಕೊಂಡಿದ್ದರು. ಇದೇ ಅಲ್ಲದೇ ಭಾರತದ ಹಂಗಾಮಿ ಸರ್ಕಾರವನ್ನೂ ಅವರು ಸ್ಥಾಪಿಸಿದ್ದರು. ಆದರೆ 1945ರ ಆಗಸ್ಟ್ 18ರಂದು ತೈವಾನ್ನ ತೈಪೆಯಲ್ಲಿ ನಡೆದಿದೆಯೆನ್ನಲಾದ ವಿಮಾನಾಪಘಾತವೊಂದರಲ್ಲಿ ಅವರು ಮರಣವನ್ನಪ್ಪಿದರೆಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಆದರೆ ಇದನ್ನು ಬಹುತೇಕರು ನಂಬಲೇ ಇಲ್ಲ. ಇದು ಸುಭಾಷರು ಭೂಗತರಾಗಿದ್ದಾಗ ಅವರ ಸಹವರ್ತಿಗಳು ತೇಲಿಬಿಟ್ಟ ಸುದ್ದಿಯೆಂದೇ ಭಾವಿಸಲಾಯಿತು. ಅವರ ವ್ಯಕ್ತಿತವವೇ ಹಾಗೆ - ನಿಗೂಢ. ಅವರ ಪ್ರತಿ ಹೆಜ್ಜೆಯ ಹಿಂದೆಯೂ ಒಂದು ದೂರದರ್ಶಿತ್ವ, ನಿಗೂಢತೆ ಇರುತಿತ್ತು. ಇದು ಕೂಡ ಅಂತಹುದೇ ಒಂದು ಸುದ್ದಿಯೆಂದು ಅನೇಕರು ಭಾವಿಸಿದರು. ಆದರೆ ಅಂದೇ ಕೊನೆ ನಂತರ ಸುಭಾಷರು `ಅವರಾಗಿ' ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸುಭಾಷರ ಕುರಿತು ಈಗಲೂ

ಹೊಗೆಯಾಡುತ್ತಿರುವ ವಿವಾದವೆಂದರೆ ಅದು ಅವರ ಸಾವಿನ ಕುರಿತಾದ್ದೇ. ಸರ್ಕಾರದ ದಾಖಲೆಗಳ ಪ್ರಕಾರ ಸತ್ತನೆಂದು ಘೋಷಿಸಲಾದ ಮನುಷ್ಯನ ಸಾವಿನ ಬಗ್ಗೆ 64 ವರ್ಷಗಳ ನಂತರವೂ ವಿವಾದಗಳಿರುವುದು ಇದೇ ಮೊದಲಿರಬೇಕು.

ಇದುವರೆಗೂ ಮೂರು ತನಿಖಾ ಆಯೋಗಗಳು ಇದರ ಕುರಿತು ತನಿಖೆ ನಡೆಸಿವೆ. ಆದರೂ ಜನರಿಗೆ ತಮ್ಮ ರಾಷ್ಟ್ರನಾಯಕನೊಬ್ಬನ ಅಂತ್ಯದ ಸತ್ಯಾಂಶಗಳನ್ನು ತಿಳಿಸಲಾಗಿಲ್ಲ. ಆರಂಭದ ಎರಡು ವಿಚಾರಣಾ ಆಯೋಗಗಳಾದ ಷಾ ನವಾಜ್ ಖಾನ್ ಆಯೋಗ (1956) ಮತ್ತು ಜೆ.ಡಿ.ಖೋಸ್ಲಾ (1970)ಆಯೋಗಗಳು - ಸುಭಾಷರು ಜಾಪಾನೀಯರು ಹೇಳುವಂತೆ ವಿಮಾನಾಪಘಾತದಲ್ಲಿ ಸತ್ತಿರುವುದು ನಿಜವೆಂದೂ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮವು ಅವರದೇ ಎಂದು ವರದಿ ನೀಡಿದವು. ಆದರೆ ಇವು ಪೂರ್ವಾಗ್ರಹ ಪೀಡಿತವಾಗಿದ್ದವೆಂಬುದು ಎಲ್ಲರೂ ಬಲ್ಲ ವಿಚಾರವೆ. ನರಸಿಂಹರಾಯರ ಅವಧಿಯಲ್ಲಿ ಮರುಜೀವ ಪಡೆದ ಈ ವಿವಾದವು ಕಲ್ಕತ್ತೆಯ ಹೈಕೋರ್ಟ್ ವಿಚಾರಣೆಗೆ ಆದೇಶಿಸುವುದರೊಂದಿಗೆ, 1999ರಲ್ಲಿ ಏಕಸದಸ್ಯ ಮುಖರ್ಜಿ ಆಯೋಗದ ರಚನೆಗೆ ದಾರಿ ಮಾಡಿಕೊಟ್ಟಿತು. ಅದು 2005ರ ನವೆಂಬರ್ 8ರಂದು ತನ್ನ ವರದಿ ಸಲ್ಲಿಸಿತು. ಹಲವಾರು ಅಡ್ಡಿ ಆತಂಕಗಳ ನಡುವೆ ತನ್ನ ತನಿಖೆ ನಡೆಸಿದ ಸಮಿತಿಯು ಸುಭಾಷರು ಈಗ ಬದುಕಿಲ್ಲವಾದರೂ, ಹಲವರು ತಿಳಿದಿರುವಂತೆ ಅವರು 45ರ ವಿಮಾನಾಪಘಾತದಲ್ಲಿ ಮರಣವನ್ನಪ್ಪಲಿಲ್ಲವೆಂದೂ, ರೆಂಕೋಜಿ ದೇವಾಲಯದಲ್ಲಿರುವುದು ಅವರ ಚಿತಾಭಸ್ಮವಲ್ಲವೆಂದು ವರದಿ ನೀಡಿದೆ. ಆದರೆ ಕೇಂದ್ರದ ಯು.ಪಿ.ಎ ಸರ್ಕಾರವು ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಕಾರಣ? - ಆ ದೇವರೇ ಬಲ್ಲ. ಇದೇ ನಿಜವಾದರೆ 1945ರ ವಿಮಾನಾಪಘಾತದ ನಂತರ ಸುಭಾಷರು ಏನಾದರು? ಅವರೇಕೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ? ಅಷ್ಟಕ್ಕೂ ಸುಭಾಷರು ವಿಮಾಣಾಪಘಾತದಲ್ಲಿ ಸಾಯಲಿಲ್ಲವೆಂದು ವರದಿ ನೀಡಿರುವ ಮುಖರ್ಜಿ ಆಯೋಗವು ಅದಕ್ಕೆ ಪೂರಕವಾಗಿ ಸಂಗ್ರಹಿಸಿರುವ ಸಾಕ್ಷಿಗಳಾದರೂ ಯಾವುವು?

ಜನಜನಿತ ವೃತ್ತಾಂತದಂತೆ 1945ರ ಆಗಸ್ಟ್ 18ರಂದು ತೈವಾನ್ನ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಸುಭಾಷರು ತೀರಿಕೊಂಡಿದ್ದರು. ಆದರೆ ಆಶ್ಚರ್ಯಕರ ವಿಚಾರವೆಂದರೆ ತೈವಾನ್ನ ಸಕರ್ಾರವು 45ರ ಆಗಸ್ಟ್ 18ರಂದು ತೈಪೆಯಲ್ಲಿ ಯಾವುದೇ ವಿಮಾನಾಪಘಾತ ನಡೆದಿಲ್ಲವೆಂದು ಹೇಳಿಕೆ ನೀಡಿದೆ. ಈ ಹೇಳಿಕೆಯನ್ನು ಹಿಂದಿನ ಯಾವುದೇ ಆಯೋಗವು ದಾಖಲಿಸಿರಲಿಲ್ಲ. ಹೀಗೆ ಮುಂದುವರಿದು 1945ರ ನಂತರವೂ ವಿಶ್ವದ ಅನೇಕ ದೇಶಗಳ ಸರ್ಕಾರಗಳು ಸುಭಾಷರ ಚಟುವಟಿಕೆಗಳ ಕುರಿತಾಗಿ ಚರ್ಚೆ ನಡೆಸಿರುವುದರ ದಾಖಲೆಗಳನ್ನು ಮುಂದಿರುಸುತ್ತಾರೆ. ಇದರಲ್ಲಿ ಪ್ರಮುಖವಾಗಿರುವವರೆಂದರೆ ಗ್ರೇಟ್ ಬ್ರಿಟನ್, ಅಮೇರಿಕಾ ಮತ್ತು ರಷಿಯಾ(ಯು.ಎಸ್.ಎಸ್.ಆರ್). ಹಾಗಾದರೆ ಅವರು ಏನು ಮಾಡುತ್ತಿದ್ದರು. ಅವರ `ಸಾವಿನ' ನಂತರದ ಬದುಕಿನ ಯಾವುದೇ ವಿವರಗಳು ಲಭ್ಯವಿಲ್ಲವೇ? ಒಂದು ಕಥಾನಕದ ಪ್ರಕಾರ ಎರಡನೇ ಪ್ರಪಂಚ ಯುದ್ಧದಲ್ಲಿ ಸುಭಾಷರು ಗುರುತಿಸಿಕೊಂಡಿದ್ದ ಆಕ್ಸಿಸ್ ಶಕ್ತಿಗಳು ಸೋಲುವುದರೊಂದಿಗೆ, ಸುಭಾಷರು ತಮ್ಮ ಮುಂದಿನ ಕಾರ್ಯತಂತ್ರದಂತೆ ರಷಿಯಾದ ಸಹಾಯ ಬೇಡಲು ಮಂಚೂರಿಯಾಕ್ಕೆ ಹೊರಟರೆನ್ನಲಾಗಿದೆ. ಇಲ್ಲಿ ನಡೆದ ಕುಖ್ಯಾತ ಉಗಐಉ ಆಪರೇಶನ್ನ ಭಾಗವಾಗಿ ರಷಿಯಾದ ಸ್ಟಾಲಿನ್ ಸಕರ್ಾರ ಸುಭಾಷರನ್ನು ಬಂಧಿಸಿ ಸೈಬೀರಿಯಾದ ಬಂದೀಖಾನೆಯಲ್ಲಿಟ್ಟಿದ್ದರು. ಇದಕ್ಕೂ ಪೂರಕ ಸಾಕ್ಷಿಗಳಿಲ್ಲದಿಲ್ಲ. 1946ರಲ್ಲಿ ತನ್ನ ಸಚಿವ ಸಂಪುಟದ ಸಭೆಯಲ್ಲಿ ನೇತಾಜಿಯವರ ಜೊತೆ ಹೇಗೆ ವ್ಯವಹರಿಸಬೇಕು? ಅವರನ್ನು ಏನು ಮಾಡಬೇಕೆಂದು ಚರ್ಚಿಸಿರುವುದರ ಕುರಿತ ದಾಖಲೆಗಳು ರಷಿಯಾದ ಪತ್ರಾಗಾರದಲ್ಲಿವೆಯೆಂದು ಅಲೆಕ್ಸಾಂಡರ್ ಕೊಲೆಷ್ನಿಕೋವ್ ತಿಳಿಸಿದ್ದಾರೆ. ಇದೇ ಅಲ್ಲದೇ ಸ್ವಲ್ಪ ಕಾಲ ರಷಿಯಾದ ರಾಯಭರಿಯಾಗಿದ್ದ ಎಸ್. ರಾಧಾಕೃಷ್ಣನ್ರವರು ರಷಿಯಾದಲ್ಲಿ ಸುಭಾಷರನ್ನು ಬೇಟಿಯಾದರೆಂಬ ಪ್ರತೀತಿಯಿದೆ. ಇದನ್ನು ಅವರೇ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರೆಂಬುದಾಗಿ ಹೇಳುತ್ತಾರೆ. ಇದರ ಮುಂದಕ್ಕೆ ಒಂದು ಕಥಾನಕವು ಸುಭಾಷರು ಸೈಬೀರಿಯಾದ ಸರೆವಾಸದ ಸಂದರ್ಭದಲ್ಲೆ ತೀರಿಕೊಂಡರೆಂದು ಹೇಳಿದರೆ, ಮಗದೊಂದು ಕಥಾನಕದ ಪ್ರಕಾರ ಸುಭಾಷರು ಸೈಬೀರಿಯಾದ ಸೆರೆವಾಸದಿಂದ ಬಿಡುಗಡೆಗೊಂಡು ಭಾರತಕ್ಕೆ ಮರಳಿ ಬಂದರು. ಅಷ್ಟರಲ್ಲಿ ಭಾರತಕ್ಕೆ ಸ್ವತಂತ್ರ್ಯ ದಕ್ಕಿಸಿಕೊಡುವ ಅವರ ಆಶಯ ಈಡೇರಿದ್ದರಿಂದ ಸನ್ಯಾಸಿಯ ಜೀವನ ನಡೆಸಿದರೆಂದು ಹೇಳುಲಾಗುತ್ತದೆ.

ಉತ್ತರಪ್ರದೇಶದಲ್ಲಿ ಗುಮ್ನಾಮಿ ಬಾಬಾ ಎಂಬ ಹೆಸರಿನಲ್ಲಿ ಅವರು ಅಜ್ಞಾತವಾಸದಲ್ಲಿದ್ದರೆಂಬ ಪ್ರತೀತಿ ಇದೆ. ಕುತೂಹಲ ಕೆರಳಿಸುವ ವಿಚಾರಗಳೆಂದರೆ - ಗುಮ್ನಾಮಿ ಬಾಬಾ ತಮ್ಮ ಮುಖವನ್ನು ಯಾರಿಗೂ ತೋರಿಸದೇ ಇರುತ್ತಿದ್ದುದು, ಸುಭಷರಿಗೆ ಪರಿಚಯವಿದ್ದ ಹಲವಾರು ಜನ ಬಾಬಾಗೂ ಪರಿಚಯವಿದ್ದುದು, ಬಾಬಾ ಮತ್ತು ಸುಭಾಷರ ಜನ್ಮದಿನ ಮತ್ತು ಕೈಬರಹ ಒಂದೇ ಆಗಿದ್ದುದು, ಬಾಬಾ ಸೈಬೀರಿಯಾದಲ್ಲಿ ತಾನು ಕಳೆದ ಸೆರೆವಾಸದ ಕುರಿತು ಮಾತನಾಡುತ್ತಿದ್ದುದು ಮತ್ತು 1985ರ ಸೆಪ್ಟೆಂಬರ್ 16ರಂದು ಗುಮ್ನಾಮಿ ಬಾಬಾ ತೀರಿಕೊಂಡ ನಂತರ ಉತ್ತರ ಪ್ರದೇಶದ ಹೈಕೋಟರ್್ ಆದೇಶದ ಮೇರೆಗೆ ಅವರ ವಸ್ತುಗಳನ್ನು ಜಪ್ತಿ ಮಾಡಿ ಸಕರ್ಾರದ ಖಜಾನೆಗೆ ತುಂಬಿದಾಗ ಸುಭಾಷರಿಗೆ ಸೇರಿದ್ದೆನ್ನಲಾದ ಅನೇಕ ವಸ್ತುಗಳು ಅದರಲ್ಲಿದ್ದುದು. ಇವೆಲ್ಲವುಗಳ ಕುರಿತು ತನಿಖೆ ನಡೆಯಬೇಕಿದೆ. ನಡೆಯುತ್ತದಾ?

ಪ್ರಧಾನಿಗಳ ಕಾರ್ಯಾಲಯದಲ್ಲಿ ಸುಭಾಷರಿಗೆ ಸಂಬಂಧಿಸಿದಂತೆ 11 ಕಡತಗಳಿದ್ದು, ಅವೆಲ್ಲವೂ `ಕ್ಲಾಸಿಫೈಡ್' ಆಗಿವೆ. ಇನ್ನುಳಿದ ಈ ಕುರಿತ ಕೆಲವು ಕಡತಗಳು ಕಳುವಾಗಿವೆಯಂತೆ! ಈ ಕ್ಲಾಸಿಫೈಡ್ ಆದ ಕಡತಗಳಲ್ಲಿ ಅಂತಹುದ್ದೇನಿದೆಯೋ ನಾನಂತೂ ಕಾಣೆ. ಸುಭಾಷರ ಕುರಿತು, ಅವರ ಸಾವಿನ ಕುರಿತ ಸತ್ಯದ ಕುರಿತು ತೀರ ಪ್ಯಾಷನೇಟ್ ಆಗಿ ಮಾತನಾಡಿದವರು ಅನೇಕರಿದ್ದರು. ಇದರಲ್ಲಿ ಹಲವರು ಪ್ರಧಾನಿಗಳೂ ಆದರು. ಆದರೆ ಅಲ್ಲಿ ಹೋಗಿ ಕೂತು ಆ ಫೈಲಿನ ಮೇಲೆ ಕೈಯಿಡುತ್ತಿದ್ದಂತೆಯೇ ಅದೇನಾಗುತ್ತದೋ ಎಲ್ಲರೂ ಗಪ್ಚುಪ್! ಬಿಜೆಪಿಯ ವಾಜಪೇಯಿಯವರು ಅಂಥವರಲ್ಲಿ ಒಬ್ಬರು. ವಾಜಪೇಯಿ ಅಧಿಕಾರಕ್ಕೆ ಬಂದ ಕೂಡಲೇ ಅವರು ಸುಭಾಷ್ರ ಸಾವಿನ ಕುರಿತು ನೂತನವಾಗಿ ತನಿಖೆ ನಡೆಸಲು ಮುಖಜರ್ಿ ಆಯೋಗವನ್ನು ನೇಮಿಸಿದರು. ನಾನ್-ಕಾಂಗ್ರೆಸ್ ಸರ್ಕಾರವೊಂದು ಮುತುವರ್ಜಿ ವಹಿಸಿ ನೇಮಿಸಿದ್ದ ಆಯೋಗವಾದ್ದರಿಂದ ಈ ಬಾರಿ ಸತ್ಯ ಹೊರಬೀಳುತ್ತದೆಂದೇ ಎಲ್ಲರೂ ಆಸೆ ಪಟ್ಟಿದ್ದರು. ಆದರೆ ಅದೇನೇಯಿತೋ ಏನೋ ಅಪ್ಪ, ಮುಖರ್ಜಿ ಆಯೋಗ ಪ್ರಧಾನಿ ಕಛೇರಿಯಲ್ಲಿ ಕ್ಲಾಸಿಫೈಡ್ ಆಗಿರುವ ಕಡತಗಳನ್ನು ಪರಿಶೀಲನೆಗೆ ಕೊಡಬೇಕೆಂದು ಸರ್ಕಾರವನ್ನು ವಿನಂತಿಸಿದಾಗ, ಸರ್ಕಾರ ವಿಚಿತ್ರವಾಗಿ ಸ್ಪಂದಿಸಿತು. ಆ ಕಡತಗಳನ್ನು ಬಹಿರಂಗಗೊಳಿಸುವುದರಿಂದ ಭಾರತ ಮತ್ತಿತರ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ಬರುವುದೆಂದೂ ಮತ್ತು ಸುಭಾಷರ ವ್ಯಕ್ತಿತ್ವದ ಮೇಲೆಯೂ ಇದು ಕಪ್ಪು ಮಚ್ಚೆಯೇಳಿಸಬಹುದು. ಆದ್ದರಿಂದ ಇದನ್ನು ಆಯೋಗಕ್ಕೆ ನೀಡಲಾಗುವುದಿಲ್ಲ ಎಂದಿತು ಸರ್ಕಾರ . ಅಲ್ಲ ಈ ಕಡತಗಳಲ್ಲಿ ಅಂತದ್ದೇನಿದೆ ಅಂತ? ದೇವರೇ ಬಲ್ಲ.

ಇದಲ್ಲದೆ ಇತ್ತೀಚೆಗೆ, ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿಕೊಂಡು ಈ ಕಡತಗಲನ್ನು ಬೆಳಕಿಗೆ ತರುವ ಹೋರಾಟಗಳು ನಡೆದಿದೆ. ಈ ವಿಷಯದಲ್ಲಿ ದೆಹಲಿಯ ಪತ್ರಕರ್ತ ಅನುಜ್ ಧರ್ ಕಳೆದ ಕೆಲವಾರು ವರ್ಷಗಳಿಂದ ಅವಿಷ್ರಾಂತವಾಗಿ ದುಡಿಯುತ್ತಿದ್ದಾರೆ. ಆದರೆ ಫಲ ಮಾತ್ರ ಸೊನ್ನೆ. ಎಲ್ಲ ಕ್ಲಾಸಿಫೈಡ್ ಕಡತಗಳನ್ನು ವಿಶೇಷವೆಂದು ತಿಳಿಸಿ ಮಾಹಿತಿ ಹಕ್ಕಿನಡಿಯಲ್ಲಿ ನಿರಾಕರಿಸಲಾಗಿದೆ. ಅವರು ಇದಕ್ಕಾಗಿ `ಮಿಷನ್ ನೇತಾಜಿ' (missionnetaji.org) ಎಂಬ ಎನ್ಜಿಒ ಒಂದನ್ನು ಕೂಡ ಹುಟ್ಟು ಹಾಕಿದ್ದಾರೆ. ಇವರು ಈ ವಿಷಯವಾಗಿ back from dead - inside subhash bose mystery ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಸುಭಾಷರ ಸಾವಿನ ಕುರಿತ ಎಲ್ಲ ಮಾಹಿತಿಗಳ ಎನ್ಸೈಕ್ಲೋಪೀಡಿಯಾ ಇದ್ದಂತಿದೆ ಈ ಪುಸ್ತಕ. ಇನ್ನು ಕನ್ನಡದಲ್ಲಿ ಸದ್ಯ ಟಿವಿ9ನ ದೆಹಲಿ ಬ್ಯೂರೋ ಚೀಫ್ ಆಗಿರುವ ಶಿವಪ್ರಸಾದ್ ಅವರು `ಸುಭಾಷ್ ಸಾವಿನ ಸುತ್ತ?!' ಎಂಬ ಚೆಂದನೆಯ ಪುಸ್ತಕವೊಂದನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ಹಾಗೆ ಸುಭಾಷರ ಸಾವಿನ ಸತ್ಯ ಬಯಲಿಗೆ ಬಂದಿಲ್ಲ, ಬರುತ್ತದಾ? ನನಗಂತೂ ನಂಬಿಕೆಯಿಲ್ಲ. ನಾವಿರುವ ರಾಜಕೀಯ ವ್ಯವಸ್ಥೆ ಅಂತಹುದ್ದು.

ಭಾರತ ಮೈಮರೆತಾಗ - `62 ಮತ್ತು `99 - ನಾವು ಯುದ್ಧಗಳಿಂದ ಪಾಠ ಕಲಿಯಲಿಲ್ಲ

ಕಾರ್ಗಿಲ್ಗೆ ದಶಮಾನೋತ್ಸವಾದರೂ ಅದರ ರೋಮಾಂಚನವಿನ್ನೂ ಇಳಿದಿಲ್ಲ್ಲ. ಭಾರತದಲ್ಲಿ ಟಿವಿ ಕ್ರಾಂತಿಯ ನಂತರ ನಡೆದ ಮೊದಲ ಯುದ್ಧವಿದು. ಮೀಡಿಯಾ ಇದನ್ನು ದೇಶದ ನಡುಮನೆಗಳಿಗೆ ಕೊಂಡೊಯ್ಯಿತು. ದೇಶಕ್ಕೆ ದೇಶವೇ ಒಂದಾಯಿತು, ದೇಶ ಅಕ್ಷರಶಃ ದೇಶಪ್ರೇಮದ ಅಮಲಿನಲ್ಲಿ ಮುಳುಗಿತು. ಕಾರ್ಗಿಲ್ ದಿಗ್ವಿಜಯದ ನೆನಪು ಇನ್ನೂ ಮಾಸಿಲ್ಲ. ಅಂತಹದರಲ್ಲಿ ಕಾರ್ಗಿಲ್ಲನ್ನು ಹಿಮಾಲಯನ್ ಬ್ಲಂಡರ್ ಎಂದೇ ಪರಿಗಣಿಸಲ್ಪಡುವ 62ರ ಚೀನಾ ಯುದ್ಧದೊಂದಿಗೆ ಹೋಲಿಸುವುದೇ ಹಲವರನ್ನು ಕೆರಳಿಸಿರಬಹುದು. ಆದರೆ ಇತಿಹಾಸದ ಪುಟಗಳೆಡಗಿನ ಬೆರಗುಗಣ್ಣಿನ ನೋಟ ಇವೆರಡರ ನಡುವಿನ ಸಾಮ್ಯತೆಗಳನ್ನು ಗುರುತಿಸುತ್ತವೆ. ಈ ಸಾಮ್ಯತೆಗಳನ್ನು ಕಂಡು ಯಾರಾದರೂ ಅವಾಕ್ಕಾಗಿ ನಿಲ್ಲಬೇಕಾದದ್ದೇ!


62 ಮತ್ತು 99ರಲ್ಲಿ ಭಾರತ ಶಾಂತಿಯ ಭ್ರಮೆಯಲ್ಲಿತ್ತು, ರಾಜತಾಂತ್ರಿಕ ಶಾಂತಿಹೆಜ್ಜೆಯನ್ನು ಮಿಲಿಟರಿಗೂ ಪಸರಿಸಿ ಮೈಮರೆತಿತ್ತು. 62ರಲ್ಲಿ ಭಾರತ ನೆಹರೂರ ಹಿಂದೀ ಚೀನೀ ಭಾಯಿ ಭಾಯಿ ಘೋಷಣೆಯ ಮಾರ್ದನಿಯಲ್ಲಿ ಕಳೆದುಹೋಗಿತ್ತು. ಚೀನಾ ಎಂದಿಗೂ ಭಾರತದ ಮೇಲೆ ದಾಳಿ ಮಾಡುವುದಿಲ್ಲವೆಂಬ ನೆಹರೂರ ಭ್ರಮೆಯನ್ನು ವೃತ್ತಿಪರರೂ ಹಂಚಿಕೊಂಡಿದ್ದರು. ಭಾರತವೇ ಮೈಮರೆತಿತ್ತು. ಚೀನಾ ಬೆನ್ನ ಹಿಂದೆ ಚೂರಿ ಹಾಕಿತು. ಕಾರ್ಗಿಲ್ನ್ನು ಗಮನಿಸಿ. ಪೋಖ್ರಾನ್ನ ನಂತರ ವಾಜಪೇಯಿಯವರು ಲಾಹೋರ್ ಬಸ್ ಯಾತ್ರೆ ಕೈಗೊಂಡರು. ಶಾಂತಿಯಾಕಾಂಕ್ಷಿಯಾಗಿ ಪಾಕಿಸ್ತಾನ ನೀಡಿದ ಪೋಸನ್ನು ಎಲ್ಲರೂ ನಿಜವೆಂದೇ ನಂಬಿದರು. ಸೈನ್ಯವೂ ಸೇರಿ ಎಲ್ಲರೂ ಲಾಹೋರಿನ ಹೊಸ ನೀರಿನಲ್ಲಿ ಮುಳುಗಿದ್ದರು. ಪಾಕಿಸ್ತಾನದ ದೋಖಾದ ವಾಸನೆ ಯಾರ ಮೂಗಿಗೂ ಬಡಿಯಲೇ ಇಲ್ಲ. ರಾಷ್ಟ್ರೀಯ ಬಧ್ರತಾ ಸಲಹೆಗಾರರ ತಂಡವು ಶತ್ರು ರಾಷ್ಟ್ರಗಳಿಂದ ಎದುರಾಗಬಹುದಾದ ಸದ್ಯ, ಮಧ್ಯಮ ಮತ್ತು ದೀರ್ಘಕಾಲೀನ ಅಪಾಯಗಳನ್ನು ಅಳೆದು ಅವುಗಳನ್ನೆದುರಿಸಲು ಕಾರ್ಯವ್ಯೂಹವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. 62ರಲ್ಲಿ ಇಂಥದೊಂದು ವ್ಯವಸ್ಥೆಯೇ ಇರಲಿಲ್ಲ! 99ರಲ್ಲಿ ಇತ್ತಾದರೂ ಲಾಹೋರದ ಕಲರವದಲ್ಲಿ ಕಳೆದು ಹೋಗಿತ್ತು.

ಇನ್ನು 62 ಮತ್ತು 99ರ ಯುದ್ಧಗಳಲಿ ನಮ್ಮ ಕಣ್ಣಿಗೆ ರಾಚುವುದು, ಭಾರತದ ಗುಪ್ತಚರ ವಿಫಲತೆ, ಶತ್ರು ರಾಷ್ಟ್ರ ಯುದ್ಧ ಸನ್ನದ್ಧವಾಗುತ್ತಿರುವುದನ್ನು ಮನಗಾಣದ ದುಸ್ಥಿತಿ, ದಾಳಿಯ ಅನಿರೀಕ್ಷಿತತೆ. 62ರಲ್ಲಿ ಚೀನಾ ಗಡಿಯವರೆಗೂ ರೋಡು, ಬಂಕರುಗಳನ್ನು ನಿರ್ಮಿಸುತಿತ್ತು. ಚೀನಾ ಈ ಸಿದ್ಧತೆಗಳಿಗೆ ಕನಿಷ್ಠ ಎಂಟು ತಿಂಗಳು ತೆಗೆದುಕೊಂಡಿತ್ತು. ಇವ್ಯಾವೂ ಭಾರತದ ಅರಿವಿಗೆ ಬರಲೇ ಇಲ್ಲ. ಕಾರ್ಗಿಲ್ನಲ್ಲಿ? ಚಳಿಗಾಲದಲ್ಲಿ ಭಾರತದೊಳಕ್ಕೆ ನುಸುಳಿದ ಪಾಕ್ ಸೈನಿಕರು, ಬೆಟ್ಟ ಸಾಲಿನ ಪಾಕಿಸ್ತಾನ ಬದಿಯಲ್ಲಿ ಸಪ್ಲೈಲೈನ್ಗಳನ್ನು ನಿರ್ಮಿಸಿದರು, ಸ್ಕರ್ದುವಿನಲ್ಲಿ ಹೆಲಿಪ್ಯಾಡೊಂದನ್ನು ಕಟ್ಟಿಕೊಂಡರು. ಈ ಸಿದ್ಧತೆಗಳಿಗೆ ಪಾಕಿಸ್ತಾನ ತೆಗೆದುಕೊಂಡದ್ದು ಭರ್ಜರಿ ಏಳು ತಿಂಗಳುಗಳು. ಮತ್ತೊಂದು ಅವಮಾನವೆಂದರೆ ಹೀಗೆ ಆಕ್ರಮಿಸಿಕೊಂಡಿದ್ದ ಭಾರತೀಯ ನೆಲದ ಮೇಲೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುಷರಫ್ ಬಂದು ಹೋಗಿದ್ದರೆಂದು ಹೇಳಲಾಗಿದೆ! ಇದ್ಯಾವುದೂ ಭಾರತಕ್ಕೆ ತಿಳಿದಿರಲಿಲ್ಲ, ಹಾಗಿತ್ತು ನಮ್ಮ ಇಂಟೆಲಿಜೆನ್ಸ್! ಮೊದಲ ಬಾರಿಗೆ ಕಾರ್ಗಿಲ್ನಲ್ಲಿ ಪಾಕಿಗಳ ಇರುವಿಕೆಯನ್ನು ಗುರುತಿಸಿದ್ದು ಒಬ್ಬ ಕುರಿ ಕಾಯುವವನು!
62 ಮತ್ತು 99ರಲ್ಲಿ ಸತತ ನಿರ್ಲಕ್ಷ್ಯದಿಂದಾಗಿ ನಮ್ಮ ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಯೋಧರಿಗೆ ಕನಿಷ್ಠ ಸವಲತ್ತುಗಳನೂ ನೀಡದೆ ಯುದ್ಧಭೂಮಿಗೆ ಕಳಿಸಲಾಗಿತ್ತು. ದೇಶ ಕಟ್ಟುವ ಉತ್ಸುಕತೆಯಲ್ಲಿದ್ದ ನೆಹರೂ ಸೈನಿಕ ವೆಚ್ಚವನ್ನು ಅನವಸರವೆಂದು ಭಾವಿಸಿದ್ದರು. 62ರಲ್ಲಿ ಭಾರತದ ಸೈನಿಕನಿಗೆ ಶೈತ್ಯ ಪ್ರದೇಶಗಳಲ್ಲಿ ಬೇಕಾದ ಹಿಮ-ಬೂಟುಗಳು, ಬೈನಾಕ್ಯುಲರ್ಗಳೂ ಇರಲಿಲ್ಲ. ಮಂಜಿನ ಕನ್ನಡಕವಿಲ್ಲದೇ ಯೋಧರು ಕುರುಡಾಗಿ ಹೋದರು, ಹಿಮ-ಬೂಟುಗಳಿಲ್ಲದೆ ಫ್ರಾಸ್ಟ್ಬೈಟ್ಗೆ ಕಾಲು ಕಳೆದುಕೊಂಡರು. ಚೈನಾ ಯುದ್ಧದ ನಂತರ ನೆಹರೂ ಭಾರತದ ಉಳಿವಿಗೆ ಸೈನ್ಯದ ಅವಶ್ಯಕತೆಯನ್ನು ಮನಗಂಡು, ಸೈನ್ಯವೆಚ್ಚವನ್ನು ಹಿಗ್ಗಿಸಿದರಾದರೂ 80ರ ದಶಕದ ಉತ್ತರಾರ್ಧದಲ್ಲಿ ಮತ್ತೆ ಸೈನ್ಯ ನಿರ್ಲಕ್ಷ್ಯಕ್ಕೊಳಗಾಯಿತು. ಸೈನ್ಯ ಕೌಂಟರ್ ಇನ್ಸರ್ಜೆನ್ಸಿ ಆಪರೇಷನ್ಗಳಲ್ಲೇ ಮುಳುಗಿಹೋಗಿತ್ತ್ತು. ಅಂದಿಗೆ ಪೂರ್ಣಮಟ್ಟದ ಯುದ್ದ ಮಾಡಿ 28 ವರ್ಷಗಳಾಗಿದ್ದವು. ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಆಗ ಧುತ್ತನೆ ಎದುರಾದದ್ದು ಕಾರ್ಗಿಲ್. ಅಲ್ಲಿ ಶತ್ರು ಸೈನಿಕರು ಅಸಲಿಗೆ ನಮ್ಮವರಿಗೆ ಕಾಣಿಸುತ್ತಲೇ ಇರಲಿಲ್ಲ. ಶತ್ರುಗಳು ಬೆಟ್ಟವೇರಿ ಕೂತಿದ್ದರೆ, ನಮ್ಮವರು ಅವರಿಗೆ ಕಾಣಬಾರದೆಂದು ರಾತ್ರಿಗಳಲಿ ಮಾತ್ರ ಸಂಚರಿಸುತ್ತಿದ್ದರು! ಆದರೆ ನೈಟ್ ವಿಷನ್ ಬೈನಾಕ್ಯುಲರ್ಗಳಿರಲಿಲ್ಲ. ಕಾರ್ಯಾಚರಣೆ ನಡೆಸಬೇಕಾದ ಪ್ರಾಂತ್ಯಗಳ ನಕ್ಷೆಗಳು ಕೂಡ ಸರಿಯಿರಲಿಲ್ಲ, ಎಲ್ಲವೂ ಕೈಬರಹ ನಕ್ಷೆಗಳ ಜೆರಾಕ್ಸು! ಆ ಹಿಮಾಚ್ಛಾಧಿತ ಪರ್ವತಗಳಲ್ಲಿ ಬೇಕಾದ ಹಿಮ-ಬೂಟುಗಳ ಕೊರತೆಯಿತ್ತು, ಆಧುನಿಕ ಕಮ್ಯೂನಿಕೇಷನ್ ಸಾಧನಗಳ ಕೊರತೆಯಿತ್ತು. ಕಾರ್ಗಿಲ್ನಲ್ಲಿ ಭಾರತದ ಸೈನ್ಯದ ವಿಜಯಕ್ಕೆ ಬೋಫೋರ್ಸನದು ಪ್ರಮುಖ ಕೊಡುಗೆ.ಯುದ್ಧ ಮುಂದುವರೆಯುತ್ತಿದ್ದಂತೆ ಬೋಫೋರ್ಸ ಫಿರಂಗಿಗಳ ಕೊರತೆ ಕಾಡಿತು. ಬೋಫೋರ್ಸ ಹಗರಣದಿಂದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತಾದರೂ, ಕೂಡಲೆ ಅದನ್ನು ಕೈಬಿಟ್ಟು ಕೊರತೆ ನೀಗಿಸಿಕೊಳ್ಳಲಾಯಿತು. ಪೂರ್ಣ ಪ್ರಮಾಣದ ಯುದ್ಧ ಅನಿವಾರ್ಯವೆನಿಸತೊಡಗಿದಾಗ ಸರ್ಕಾರ ವೆಪನ್ ಶಾಪಿಂಗ್ಗೆ ಹೊರಟಿತ್ತು!

62 ಮತ್ತು 99ರ ಯುದ್ಧಕ್ಕೂ ಇಷ್ಟೊಂದು ಸಾಮ್ಯತೆಗಳಿದ್ದಾಗ್ಯೂ, ಯುದ್ಧಕ್ಕೆ ಎಡೆ ಮಾಡಿಕೊಟ್ಟ ಪರಿಸ್ಥಿತಿಗಳು ಏಕರೂಪವಾಗಿದ್ದವಾದರೂ, ಮುಖ್ಯವಾದುದೊಂದು ವ್ಯತ್ಯಸವಿದೆ. ಅದು ಯುದ್ಧವನ್ನು ನಿರ್ವಹಿಸಿದ ರೀತಿ. ಇದು ಯುದ್ಧದ ರಿಜಲ್ಟುಗಳನ್ನೇ ಬದಲಾಯಿಸಿಬಿಟ್ಟಿತು. ಯುದ್ಧ ನಿರ್ವಹಣೆ ಹೇಗೆ ಮಾಡಬಾರದೆಂಬುದಕ್ಕೆ 62 ಅತ್ಯುತ್ತಮ ಉದಾಹರಣೆಯಾದರೆ, ಕಾರ್ಗಿಲ್ ಯುದ್ಧವೊಂದನ್ನು ಹೇಗೆ ನಿರ್ವಹಿಸಬೇಕೆನ್ನುವುದಕ್ಕೊಂದು ಉತ್ತಮ ಉದಾಹರಣೆ.

ಇತ್ತ ಯುದ್ಧ ನಡೆಯುತ್ತಿದ್ದರೆ ನೆಹರೂ, ಮುರಾರ್ಜಿ, ರಕ್ಷಣಾ ಸಚಿವ ಮೆನನ್ ಎಲ್ಲರೂ ವಿದೇಶ ಪ್ರಯಾಣದಲ್ಲಿದ್ದರು, ಬಿ.ಎಂ.ಕೌಲ್ ರಜೆಯ ಮೇಲಿದ್ದರು. ಚೀನೀಯರು ಪೂರ್ವೋತ್ತರ ಭಾರತದ ಮೇಲೆ ದಾಳಿ ಮಾಡುವ ಅನುಮಾನಗಳಿದ್ದಾಗ, ನೆಹರೂ ರೇಡಿಯೋದಲ್ಲಿ, ಅಸ್ಸಾಂನನ್ನು ಬಿಟ್ಟುಕೊಡಬೇಕಾಗಬಹುದೆಂಬರ್ಥದ ಭಾಷಣ ಮಾಡುತ್ತಾರೆ, ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆ. ಅರ್ಹತೆಗೂ ಮೀರಿ, ನೆಹರೂ ಸೈನ್ಯದ ಚೀಫ್ ಆಗಿ ನೇಮಿಸಿದ ಬಿ.ಎಂ.ಕೌಲ್ರ ತಿಕ್ಕಲು ಸ್ಟ್ರಾಟಜಿಗಳಿಂದಾಗಿ ಭಾರತ ಸಾಕಷ್ಟು ಅನುಭವಿಸಬೇಕಾಯಿತು. ದಾಳಿ ಮಾಡಿದ್ದು ಚೀನಾ, ಇದನ್ನು ಬಳಸಿ ಅಂತರಾಷ್ಟ್ರೀಯಒತ್ತಡ ತಂದು ಯುದ್ಧಕ್ಕೆ ಬ್ರೇಕ್ ಹಾಕಬಹುದಾದ ಕೆಲಸ ಆಗಲೇ ಇಲ್ಲ. ಚೈನಾ ವಶಪಡಿಸಿಕೊಂಡ ಭಾರತದ ನೆಲದ ಕುರಿತು ಪ್ರಶ್ನಿಸಿದಾಗ, ಅಲ್ಲಿ ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ, ಅದಕ್ಕೇಕೆ ಇಷ್ಟು ಗದ್ದಲ ಎಂಬರ್ಥದ ಮಾತುಗಳನ್ನಾಡಿದರು ನೆಹರೂ. ಅವರು ಭ್ರಮನಿರಸನಗೊಂಡಿದ್ದರು, ಭಾರತದ ಸತ್ಪ್ರಜೆಗಳೂ ಕೂಡ. ಎಲ್ಲರೂ ಅವರನ್ನು, ಪ್ರಶ್ನಿಸುವವರಾದರು, ನೆಹರೂ ಸಹಿಸದಾದರು. 64ರಲ್ಲಿ ನೆಹರೂ ದುರಂತ ನಾಯಕರಾಗಿ ಕಣ್ಣುಮುಚ್ಚಿದರು. ನೆಹರೂರನ್ನು ಇದೇ ಕಾರಣಕ್ಕಾಗಿ ವಿಲನ್ನಂತೆ ಚಿತ್ರಿಸುವರುಂಟು. ಆದರೆ ಬರಿಯ ಇದೊಂದರಿಂದ ನಾವು ನೆಹರೂರನ್ನು ಜಡ್ಜ್ ಮಾಡುವುದು ತಪ್ಪಾಗುತ್ತದೆ.

ಆದರೆ ಕಾರ್ಗಿಲ್ನಲ್ಲಿ, ಮೊದಲ ಕೆಲ ದಿನಗಳಲ್ಲಿ ಪರಿಸ್ಥಿತಿಯ ಅಗಾಧತೆಯ ಅರಿವಿಲ್ಲದೆ, ಕೆಲವು ಬಾಲಿಶ ನಡವಳಿಕೆಗಳು ಕಂಡುಬಂದವಾದರೂ, ಸ್ವಲ್ಪದರಲ್ಲೇ ಎಚ್ಚೆತ್ತ ಸರ್ಕಾರ ನಂತರ ಪ್ರದರ್ಶಿಸಿದ್ದು ಮುತ್ಸದ್ಧಿತನವನ್ನು. ಭಾರತದ ನೆಲದ ಮೇಲೆ ಕಟ್ಟಕಡೆಯ ಪಾಕಿ ಇರುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲಿಸುವುದಿಲ್ಲವೆಂಬ ನಿಲುವು ತಾಳಿ, ಸೈನಿಕರ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿ ಕೊಂಡ ಸರ್ಕಾರ ಇತ್ತ ರಾಜತಾಂತ್ರಿಕ ದಾಳಿಗೆ ಮುಂದಾಯಿತು. ವಿಶ್ವದ ಮುಂದೆ ಪಾಕಿಸ್ತಾನವನ್ನು ನಗ್ನಗೊಳಿಸಿತು. ಸೈನಿಕ ದೃಷ್ಟಿಯಿಂದ ಸರಿದೋರಿದ್ದ ಎಲ್ಓಸಿ ದಾಟುವುದನ್ನು ತಡೆಹಿಡಿದು ಭಾರತದ ವಾದವನ್ನು ಬಲಪಡಿಸಿತು. ಅಮೆರಿಕಾ, ರಷಿಯಾ, ಫ್ರಾನ್ಸ್, ಚೈನಾ, ಜಪಾನ್ ಹೀಗೆ ಎಲ್ಲರೂ ಭಾರತದ ಪರವಾಗಿ ನಿಂತರು. ಬಹುಶಃ ಅದು ಸ್ವತಂತ್ರ್ಯ ಭಾರತದ ಅತಿ ದೊಡ್ಡ ರಾಜತಾಂತ್ರಿಕ ಸಾಧನೆಯಾಗಿತ್ತು. ಇದು ಪಾಕಿಸ್ತಾನದ ಮೇಲೆ ಇನ್ನಿಲ್ಲದ ಒತ್ತಡ ಹೇರಿತು. ಆದರೆ ರಾಜಿಯೇನೂ ಆಗಲಿಲ್ಲ, ತನ್ನ ನೆಲದ ಮೇಲಿನ ಕಡೆಯ ಪಾಕಿಯನ್ನು ಓಡಿಸುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲಿಸಲಿಲ್ಲ. ಕಾರ್ಗಿಲ್ ದಿಗ್ವಿಜಯವಾಯಿತು.

62ರ ಯುದ್ಧ ಇಂದಿಗೂ ನಮ್ಮನ್ನು ಚುಚ್ಚುತ್ತಿರುವ ಅವಮಾನವಾದರೆ, ಕಾರ್ಗಿಲ್ ಒಂದು ಹೆಮ್ಮೆಯ ದಿಗ್ವಿಜಯ. 62ರ ಯುದ್ಧವನ್ನು ಹಿಮಾಲಯನ್ ಬ್ಲಂಡರ್ ಆಗಿಯೂ ಕಾರ್ಗಿಲ್ಲನ್ನು ದಿಗ್ವಿಜಯವಾಗಿಯೂ ವರ್ಣಿಸುತ್ತದೆ ಇತಿಹಾಸ. ಇತಿಹಾಸ ಎಂದಿಗಾದರೂ ಗೆದ್ದೆತ್ತಿನ ಬಾಲವೇ. ಕಾರ್ಗಿಲ್ನ ವೀರಗಾಥೆಗಳ ಹರಿಕತೆ ನಡೆದಿದೆಯಾದರೂ ದೇಶಭಕ್ತಿಯ, ದಿಗ್ವಿಜಯದ ಆಡಂಬರದಲ್ಲಿ ಒಂದು ಮಾತು ಕೇಳದೆಯೇ ಉಳಿಯಿತು. ಅಸಲಿಗೆ ನೂರಾರು ಸೈನಿಕರ ಬಲಿ ತೆಗೆದುಕೊಂಡ ಕಾರ್ಗಿಲ್ಲನ್ನು ತಪ್ಪಿಸಬಹುದಿತ್ತಾ? ಸಂಶಯವೇ ಬೇಡ ಕಾರ್ಗಿಲ್ ದೇಶ ತಪ್ಪಿಸಬಹುದಿದ್ದ ಒಂದು ಎಂಬರಾಸ್ಮೆಂಟ್! ಕಾರ್ಗಿಲ್ನ ಪೋಸ್ಟ್ಮಾರ್ಟಮ್ ನಡೆಯಬೇಕಿತ್ತು, ಆದರೆ ಅಂತಹುದಕ್ಕೆ ಹುಸಿ ದೇಶಭಕ್ತಿಯ ಆಡಂಬರ ಅವಕಾಶ ಮಾಡಿಕೊಡಲಿಲ್ಲ. ಸರ್ಕಾರ ಸುಬ್ರಮಣ್ಯಮ್ ಕಮಿಟಿಯನ್ನು ನೇಮಿಸಿತಾದರೂ ಅದು ಹೆಕ್ಕಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ಕಾರ್ಗಿಲ್ನ ವಿಷಯದಲ್ಲಿ ಕರ್ತವ್ಯಲೋಪವೆಸಗಿದವರಾರ ತಲೆಗಳೂ ಉರುಳಲಿಲ್ಲ. ಕಾರ್ಗಿಲ್ನ ಪ್ರಮುಖ ದೋಷ ಗುಪ್ತಚರ ವಿಫಲತೆ. ಆದರೆ ಅಂದಿನ ಗುಪ್ತಚರ ಮುಖ್ಯಸ್ಥನನ್ನು ಅರುಣಾಚಲದ ರಾಜ್ಯಪಾಲರನ್ನಾಗಿ ನೇಮಿಸಿ ಐದು ವರ್ಷಗಳ ರಕ್ಷಣೆಯನ್ನೊದಗಿಸಲಾಯಿತು. 62ರ ಗುಪ್ತಚರ ವಿಫಲತೆಯಿಂದ ಪಾಠ ಕಲಿತಿದ್ದರೆ, ಕಾಗರ್ಿಲ್ ಅನ್ನು ತಪ್ಪಿಸಬಹುದಿತ್ತು, ಕಾರ್ಗಿಲ್ನಲ್ಲಿ ಪಾಠ ಕಲಿತಿದ್ದರೆ 26/11ನನ್ನು ತಪ್ಪಿಸಬಹುದಿತ್ತು. ದುರ್ದೈವವೆಂದರೆ ಇಂತಹ ಸಂದರ್ಭಗಳಲ್ಲಿ ದೇಶಭಕ್ತಿಯ ಅಮಲು ಭಾವನಾತ್ಮಕವಲ್ಲದ ತುಲನೆಗೆ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಆದರೆ ಇತಿಹಾಸದಿಂದ ಪಾಠ ಕಲಿಯದ ಹೊರತಾಗಿ ಇಂತಹ ಭೀಭತ್ಸ ಘಟನಾವಳಿಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಕಾಲ ಮತ್ತು ಇತಿಹಾಸ ಮನುಷ್ಯನ ಅತ್ಯುತ್ತಮ ಗುರುಗಳು. ಅವುಗಳನ್ನು ನಿರ್ಲಕ್ಷಿಸಿ ಜೀವನವಿಲ್ಲ. 62ರ ಪೋಸ್ಟ್ಮಾರ್ಟಮ್ ಸರಿಯಾಗಿ ನಡೆಯದಿದ್ದರಿಂದಲೇ ಕಾರ್ಗಿಲ್ನಲ್ಲಿ ಅದು ಪುನರಾವರ್ತನೆಯಾಯ್ತು. ಕಾರ್ಗಿಲ್ನ ಪೋಸ್ಟ್ಮಾರ್ಟಮ್ ಆಗಲಿಲ್ಲವಾದ್ದರಿಂದಲೇ 26/11 ಮುಂಬೈ ನರಮೇಧವಾಯಿತು. ಈಗ 26/11....
(ತಾ-೨೭/೦೭/೨೦೦೯ ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ)

ಕಾರ್ಗಿಲ್ ಕದನದ ತಲ್ಲಣದ ಕ್ಷಣಗಳು


ಟೋಲೋಲಿಂಗ್ ಮತ್ತು ಟೈಗರ್ ಹಿಲ್

ಟೋಲೋಲಿಂಗ್! ಹೆಸರೇ ವಿಚಿತ್ರವಾಗಿದೆ. ಜಾಗ ಇನ್ನೂ ವಿಚಿತ್ರವಾಗಿದೆ. 16 ಸಾವಿರ ಅಡಿ ಎತ್ತರದ ಹುಲ್ಲು ಕಡ್ಡಿಯೂ ಬೆಳೆಯದ ಬರಡು ಹಿಮ ಶಿಖರ. ಅಲ್ಲಿ ಅದರ ನೆತ್ತಿಯ ಮೇಲೆ ಕೂತಿದ್ದರು ಪಾಕಿಗಳು. ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳಲು ಮೇ 14ರಂದು ಹೋದ ಒಂದು ಕಂಪೆನಿ ತಿರುಗಿ ಬರಲೇ ಇಲ್ಲ. ಹಾಗೆ ಶುರುವಾದ ಯುದ್ಧ ಕಾರ್ಗಿಲ್ಲ್ನಲ್ಲಿ ಭಾರತದ ಸೈನ್ಯಕ್ಕೆದುರಾದ ಅತಿಪ್ರಮುಖ ಸವಾಲು. ಕಾರ್ಗಿಲ್ಲ್ನಲ್ಲಿ ಮರಣವನ್ನಪ್ಪಿದ ಅರ್ಧದಷ್ಟು ಭಾರತೀಯ ಯೋಧರು ಟೋಲೋಲಿಂಗ್ ಯುದ್ಧದಲ್ಲೇ ಪ್ರಾಣತೆತ್ತರು. ಅಷ್ಟಕ್ಕೂ ಟೋಲೋಲಿಂಗ್ ಯಾಕಿಷ್ಟು ಪ್ರಮುಖವಾಗಿತ್ತು. ಅದು ಲ್ಹೇದ ಎನ್ಎಚ್ 1 ಹೈವೇಯ ಶಿಖರದಲ್ಲಿತ್ತು. ಅದರ ಮೇಲೆ ಕೂತು 200 ಕಿಲೋಮೀಟರುಗಳುದ್ದಕ್ಕೂ ನರಮಾನವನೂ ಮಿಸುಕಾಡದಂತೆ ಡಾಮಿನೇಟ್ ಮಾಡಬಹುದಿತ್ತು. ಆ ದುರ್ಗಮ ಪ್ರದೇಶದಲ್ಲಿದದ್ದು ಅದೊಂದೇ ರಸ್ತೆ. ಆ ವೀಥೀಯಲ್ಲೊರಟ ಎಲ್ಲ ಸೈನಿಕರೂ ಶವವಾಗಿ ಮರಳಿದ್ದರು. ಹಾಗಾಗಿ ಸೈನ್ಯ ಮುಂದುವರಿಯುವುದಕ್ಕಿಂತಲೂ ಮೊದಲು ಈ ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಕಡೆಗೂ ಟೋಲೋಲಿಂಗ್ ಭಾರತದ ಮಡಿಲಿಗೆ ಬೀಳುವಷ್ಟರಲ್ಲಿ ಜೂನ್ 12! ಅಂದು 2 ರಜಪುತಾನಾ ರೈಫಲ್ಸ್ನ ಕಮಾಂಡರ್ ರವೀಂದ್ರನಾಥ್ ಟೋಲೋಲಿಂಗ್ ಅನ್ನು ವಶಪಡಿಸಿಕೊಂಡು ಮೆಸೇಜು ಕಳಿಸಿದಾಗ, ಖುದ್ದು ಆರ್ಮಿ ಚೀಫ್ ವಿ.ಪಿ.ಮಲಿಕ್ ಅವರನ್ನು ಅಭಿನಂದಿಸಿದ್ದರು. ಆದರೆ ಆ ಭೀಕರ ಹೋರಾಟದಲ್ಲಿ ಮೊದಲಿಗೆ ಬೆಟ್ಟದ ಮೇಲೆ ಫಿರಂಗಿಗಳ ದಾಳಿ ನಡೆಸಿದ ಆರ್ಮಿ ಅದು ಫಲಿಸದಾದಾಗ ವಾಯುದಳವನ್ನೂ ಬಳಸಿತ್ತು. ಆದರೆ ಕಡೆಗೆ ಇಂಚಿಂಚೇ ತೆವಳುತ್ತಾ ಹೋದ ಭಾರತದ ಸೈನ್ಯ ಕಡೆಗೆ ಶಿಖರದ ನೆತ್ತಿಯನ್ನು ತಲುಪಿ ಅಳಿದುಳಿದ ಪಾಕಿಗಳನ್ನು `ಮಲ್ಲಯುದ್ಧದಲ್ಲಿ' ಮುಗಿಸಿಹಾಕಿತ್ತು. ಅಂದು ಭಾರತದವರ ಆಯುಧಗಳು ಕಿಸೆಯಲ್ಲಿದ್ದ ಡ್ಯಾಗರ್ ಮತ್ತು ಹಿಮಬಂಡೆಗಳು! ಟೋಲೋಲಿಂಗ್ ಭಾರತದ ಕೈವಶವಾದ ಕೇವಲ ಆರು ದಿನಗಳಿಗೆ ಭಾರತ ನಾಲ್ಕು ದಿಗ್ವಿಜಯಗಳನ್ನು ಸಾಧಿಸಿತ್ತು - ಪಾಯಿಂಟ್ 4590, 5140, ರಾಕಿ ನಾಬ್ ಮತ್ತು ಹಂಪ್, ಎಲ್ಲವೂ ಭಾರತದ ಕೈವಶವಾಗಿತ್ತು. ಇನ್ನುಳಿದದ್ದು ಅದೊಂದೇ ಡ್ರಾಸ್ ಸೆಕ್ಟರನ ಭಾರೀ ಪರ್ವತ ಟೈಗರ್ ಹಿಲ್! ಅದು ಟೋಲೋಲಿಂಗ್ನಷ್ಟೆ ಪ್ರಾಮುಖ್ಯತೆಯದ್ದಾಗಿತ್ತು. ಅದು ಯುದ್ಧವನ್ನು ಭಾಗಶಃ ಮುಗಿಸಲಿತ್ತು! ಟೋಲೋಲಿಂಗ್ ಅನ್ನು ವಶಪಡಿಸಿಕೊಂಡ 2 ರಜಪುತಾನಾ ರೈಫಲ್ಸ್ ಬಟಾಲಿಯನ್ಗೇ ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಉತ್ಸುಕವಾಗಿ ಮುನ್ನುಗ್ಗಿದ ಇಡೀ ತಂಡವನ್ನು ಮುಂದೆ ಪಾಕಿಸ್ತಾನದ ಫೌಜಿಗಳು ಹೊಡೆದುರುಳಿಸಿದ್ದರು, ಒಬ್ಬ ಯೋಗೇಂದರ್ ಸಿಂಗ್ರ ಹೊರತಾಗಿ. ಅವರ ಕಿಸೆಯಲ್ಲಿದ್ದ ಕಾಯಿನ್ ಗುಂಡಿಗೆ ಅಡ್ಡವಾಗಿ ನಿಂತು ಅವರನ್ನು ರಕ್ಷಿಸಿತ್ತು! ಮೊದಲ ಪ್ರಯತ್ನ ಕೈಕೊಟ್ಟ ನಂತರ ಎರಡನೇ ಬಾರಿ 18 ಗ್ರೆನೇಡ್ಸ್ ಬೆಟಾಲಿಯನ್ ಅಪಾರ ಕಷ್ಟದ ಬ
ಳಿಕ ಟೈಗರ್ ಹಿಲ್ನ ಮೇಲೆ ಭಾರತದ ಪತಾಕೆಯನ್ನು ಹಾರಿಸಿತು. ಅದು ಇಂದಿಗೂ ಕಾಗರ್ಿಲ್ ಯುದ್ಧದ ಆಜಜಿಟಿಟಿರ ಟಚಿರಜ. ಯುದ್ಧದ ಪರಿಸಮಾಪ್ತಿಯ ಸಿಂಬಲ್ ಅದಾಗಿತ್ತು. ಇಂದು ಟೋಲೋಲಿಂಗ್ ಮತ್ತು ಟೈಗರ್ ಹಿಲ್ಗಳು ಪಕ್ಷಿಗಳೂ ಹಾರಾಡಲಾಗದಂತಹ ಅಭೇಧ್ಯ ಕೋಟೆಯಾಗಿದೆ.

ಫುಡ್ಡು ಬದಲು ಬುಲೆಟ್ಟು

ಕಾರ್ಗಿಲ್ ಯುದ್ಧ ನಡೆಯಿತಲ್ಲ ಅದರಷ್ಟು ದುರ್ಗಮ ಪ್ರದೇಶ ಭಾರತದಲ್ಲೇ ಇಲ್ಲ ಅನ್ನಿಸುತ್ತೆ. ಆ ಡ್ರಾಸ್-ಬತಾಲಿಕ್ ಸೆಕ್ಟರುಗಳು, ಕಾರ್ಗಿಲ್, ಟೈಗರ್ ಹಿಲ್ ಎಲ್ಲವೂ ಅತ್ಯಂತ ದುರ್ಗಮ, ಹುಲ್ಲು ಕಡ್ಡಿಯೂ ಬೆಳೆಯದ ಬರಡು ಪ್ರದೇಶ. ಅಲ್ಲಿ ರಸ್ತೆಗಳೇ ಇರಲಿಲ್ಲ. ಇಡಿಯ ಪ್ರದೇಶ ಹಿಮಾಚ್ಛಾದಿತ ಗಿರಿಶೃಂಗಗಳ ತವರು. ಒಂದೊಂದು ಪರ್ವತವೂ 15-18 ಸಾವಿರ ಅಡಿ ಎತ್ತರ. ಈ ಎತ್ತರವನ್ನು ಯೋಧರು ಕಾಲ್ನಡಿಗೆಯಲ್ಲೇ ಹತ್ತಬೇಕಿತ್ತು.
ಅದು ಅಕ್ಷರಶಃ ಟ್ರೆಕ್ಕಿಂಗ್! ಟೈಗರ್ ಹಿಲ್ನ ತುದಿ ತಲುಪಲು ಒಬ್ಬ ಆರೋಗ್ಯವಂತ ಶಕ್ತ ಯೋಧನಿಗೆ ಕನಿಷ್ಟವೆಂದರೂ 11 ಘಂಟೆ ಹಿಡಿಯುತ್ತಿತ್ತು. ಅದೂ ಏನು ಖಾಲಿಕೈಯ ನಡಿಗೆಯಲ್ಲವದು ಹೆಣಭಾರದ ಬಂದೂಕು, ಇತರ ವೆಪನ್ನುಗಳು, ಅವರವರ ಆಹಾರವನ್ನೂ ಬೆನ್ನ ಮೇಲೆ ಹೊತ್ತು ಹೋಗಬೇಕಿತ್ತು. ಆಗ ಪ್ರತಿಯೊಂದು ಗ್ರಾಮು ಭಾರವೇ! ಬಟಾಲಿಯನ್ನ ಕಮಾಂಡರ್ ಒಬ್ಬರು ತಮ್ಮ ಯೋಧರು ಯುದ್ಧಕ್ಕೆ ಹೊರಡುವ ಮುಂಚೆ ತಮ್ಮ ಪಾಲಿನ ಆಹಾರ ಪದಾರ್ಥಗಳನ್ನು ತೆಗೆದಿಡುವುದು ಕಾಣಿಸಿತು. ಚಕಿತರಾದ ಅವರು ವಿಚಾರಿಸಲಾಗಿ ಯೋಧರ ಉತ್ತರ ಸಿದ್ಧವಿತ್ತು - ` ಸರ್ ಆಹಾರಕ್ಕಿಂತಲೂ ಬುಲ್ಲೆಟ್ಟುಗಳು ಮುಖ್ಯ. ಎರಡು ಕೇಜಿಯ ಆಹಾರದ ಬದಲಿಗೆ 100-150 ಬುಲ್ಲೆಟ್ಟುಗಳು ಗ್ರೆನೇಡುಗಳು ಹಿಡಿಸುತ್ತವೆ ಸಾರ್. ಅದಕ್ಕೇ....' ಕಮಾಂಡರ್ನ ಕಣ್ಣು ತೇವಗೊಂಡಿದ್ದವು. ನಂತರ ಇದು ಎಲ್ಲ ಬಟಾಲಿಯನ್ಗಳಿಗೂ ಹಬ್ಬಿ ಎಲ್ಲರೂ ಪಾಲಿಸಹತ್ತಿದರು. ಭಾರತೀಯ ಯೋಧನೆಂದರೆ ಅದು!




ಬೋಫೋರ್ಸ





ಭಾರತ ರಾಜಕೀಯ ಇತಿಹಾಸದಲ್ಲಿ ತಲ್ಲ
ಣಗಳನ್ನು ಸೃಷ್ಟಿಸಿದ ಬೋಫೋರ್ಸನ ಹೆಸರೇ - ಪ್ರಧಾನಿ ರಾಜೀವ್ ಗಾಂಧಿಯವರ ಮೇಲೆ ಭ್ರಷ್ಟಾಚಾರದ ಆರೋಪ, ವಿ.ಪಿ.ಸಿಂಗರ ದಿಟ್ಟತನ, ಘಾಸಿಗೊಂಡ ಸೈನ್ಯದ ಇಮೇಜು, ತಪ್ಪಿಸಿಕೊಂಡ ಕ್ವಟ್ರೋಚಿ- ಹೀಗೆ ಅನೇಕ ಕರಾಳ ನೆನಪುಗಳನ್ನು ಮರುಕಳಿಸುತ್ತದೆ. ಬೋಫೋರ್ಸ ಹಗರಣದಿಂದ ಅನ್ಯಾಯವಾಗಿದ್ದು ಮಾತ್ರ ನಮ್ಮ ಸೈನ್ಯಕ್ಕೆ. ರಾಜೀವ್ರ ತರುವಾಯ ಬಂದ ಎಲ್ಲ ಪ್ರಧಾನಿಗಳೂ ಸೈನ್ಯದ ವಿಷಯಗಳಿಲ್ಲಿ `ಜಾಗರೂಕವಾಗಿದ್ದರು', ಅಂದರೆ ಸೈನ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದೆ ದೂರವೇ ಉಳಿದರು. ಇತ್ತ ಸೈನ್ಯ ಕೌಂಟರ್ ಇನ್ಸರ್ಜೆನ್ಸಿ ಆಪರೇಷನ್ಗಳಲ್ಲೇ ಮುಳುಗಿಹೋಗಿತ್ತು. ಅಂದಿಗೆ ಪೂರ್ಣಮಟ್ಟದ ಯುದ್ದ ಮಾಡಿ 28 ವರ್ಷಗಳಾಗಿದ್ದವು. ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಆಗ ಸೈನ್ಯ ಅನಿರೀಕ್ಷಿತವಾಗಿ ಕಾರ್ಗಿಲ್ ಅನ್ನು ಎದುರಿಸಬೇಕಾಯಿತು. ಆಗ ಸೈನ್ಯದ ಬಳಿಯಿದ್ದ ಫಿರಂಗಿ ಅದೇ ಬೋಫೋರ್ಸ! ಕಾರ್ಗಿಲ್ಲ್ನಲ್ಲಿ ಭಾರತದ ಸೈನ್ಯದ ವಿಜಯಕ್ಕೆ ಬೋಫೋರ್ಸನದು ಪ್ರಮುಖ ಕೊಡುಗೆ. ಡೀಲು ಅರ್ಧ ಕುದಿರಿತ್ತಲ್ಲ, ಅದರ ಭಾಗವಾಗಿ ಪಡೆದ ಫಿರಂಗಿಗಳಲ್ಲೇ ಯುದ್ಧ ನಡೆಸಲಾಗುತ್ತಿತ್ತು. ಆದರೆ ಯುದ್ಧ ಮುಂದುವರೆಯುತ್ತಿದ್ದಂತೆ ಬೋಫೋರ್ಸ ಫಿರಂಗಿಗಳ ಕೊರತೆ ಕಾಡಿತು. ಬೋಫೋರ್ಸ ಹಗರಣದಿಂದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಇನ್ನು ಬೇರೆ ಗತ್ಯಂತರವಿಲ್ಲದೇ ಸರ್ಕಾರ ಆ ಕ್ಷಣದಲ್ಲಿ ಬೋಫೋರ್ಸ ಕಂಪೆನಿಯ ಹೆಸರನ್ನು ಕಪ್ಪು ಪಟ್ಟಿಯಿಂದ ಕೈಬಿಟ್ಟು ಕೊರತೆ ನೀಗಿಸಿಕೊಳ್ಳಲಾಯಿತು.

ಆ ಕುರಿ ಕಾಯುವವನು
ಆತನ ಹೆಸರು ತಶಿ ನಂಗ್ಯಾಲ್, ಕುರಿ ಕಾಯುವವನು. ಅಂದು ಮೇ 3, 1999. ಫರ್ಕೂನ್ ಹಳ್ಳಿಯ ಈತ ಕುರಿ ಮೇಯಿಸಲು ಗಿರಿಗಳನೇರಿ ಹೊರಟಾಗ ಆತ ಮೊದಲ ಬಾರಿಗೆ ಬೆಟ್ಟ ಶಿಖರದಲ್ಲಿ ಗಾಢ ಬಣ್ಣದ ಬಟ್ಟೆ ಧರಿಸಿವರನೇಕರನ್ನು ನೋಡುತ್ತಾನೆ. ಈತನಿಗೆ ಇವರು ಮೊದಲಿಗೆ ಭಾರತದ ಸೈನ್ಯದವರೇ ಇರಬೇಕೆನ್ನಿಸಿತಾದರೂ, ಅವರ ಬಟ್ಟೆಯ ರಂಗು ಈತನ ಗಮನ ಸೆಳೆಯಿತು. ಅದು ಭಾರತ ಸೈನ್ಯದ ಯೂನಿಫಾರ್ಮಲ್ಲ! ಕೂಡಲೇ ಈತ ಭಾರತ ಸೈನ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ. ಮೊದಲಿಗಿದು ಸಾಮಾನ್ಯ ಇನ್ಸಿಡೆಂಟಿದೆಂದು ಭಾವಿಸಿದ ಅಧಿಕಾರಿ, ಒಂದು ಕಂಪೆನಿಯನ್ನು ಕಳುಹಿಸಿದ. ಆದರೆ ಅವರಾರೂ ಜೀವಂತವಾಗಿ ಮರಳಲೇ ಇಲ್ಲ. ಆಗ ಪರಿಸ್ಥಿತಿಯ ಅಗಾಧತೆಯನ್ನರಿತ ಅಧಿಕಾರಿ ಸರ್ವೇ ನಡೆಸಿದಾಗ ತಿಳಿಯಿತು. ಇದು ಯುದ್ಧ! ಹೀಗೆ ಇಂಟೆಲಿಜೆನ್ಸ್ ಮಾಡಬೇಕಾದ ಕೆಲಸವನ್ನು ಒಬ್ಬ ಕುರಿ ಕಾಯುವವನು ಮಾಡಿದ್ದ. ಆತನಿಗೆ ಇಂದಿಗೂ ಈ ಪ್ರಾಂತ್ಯದ ಸೈನ್ಯ ಋಣಿಯಾಗಿದೆ. ಅಂದು 50 ಸಾವಿರ ರೂ. ನೀಡಿ ಈತನನ್ನು ಗೌರವಿಸಲಾಯಿತು. ನಂತರ ಕೂಡ ಈತನಿಗೆ ಸೈನ್ಯ ಹಣವೂ ಸೇರಿದಂತೆ ಎಲ್ಲ ರೀತಿಯ ನೆರವು ನೀಡಿದೆ. ಈತ ಈ ಭಾಗದಲ್ಲಿ ನಡೆಯುವ ಅನೇಕ ಸೈನಿಕ ಕಾರ್ಯಕ್ರಮಗಳಿಗೆ ಇಂದಿಗೂ ಗೆಸ್ಟ್ ಆಫ್ ಹಾನರ್!

ಪ್ರೈಸ್ ಕ್ಯಾಚ್!

ವಾಯುದಳದ ದಾಳಿ ಆರಂಭವಾದ ಮೊದಲ ದಿನವೇ ಭಾರತಕ್ಕೆ ಆಘಾತ ಕಾದಿತ್ತು. ಶತ್ರುವಿನ ಮೇಲೆ ದಾಳಿ ಮಾಡಲು ಹೊರಟ ಮೊದಲ ವಿಮಾನವೇ ಅಪಘಾತಕ್ಕೀಡಾಗಿ ವಿಮಾನದ ಪೈಲಟ್ ಪಾಕಿಗಳ ಕೈಗೆ ಜೀವಂತ ಸೆರೆಸಿಕ್ಕಿದ್ದ. ನಚಿಕೇತ, ಆತ ಹಾರಿಸುತ್ತಿದ್ದ ವಿಮಾನದಲ್ಲಿ ಅಪಘಾತವಾದಾಗ ಪ್ಯಾರಚೂಟ್ನಿಂದ ಕೆಳಗಿಳಿದ. ಶತ್ರು ಸೈನಿಕರ ನಡುವೆ ಲ್ಯಾಂಡ್ ಆದಾಗ ಬಂದೂಕಿನಿಂದ ಫೈರ್ ಮಾಡಿದನಾದರೂ ಸ್ವಲ್ಪ ಹೊತ್ತಿನಲ್ಲೇ ಬುಲ್ಲೆಟ್ಟುಗಳು ಮುಗಿದು ಹೋದವು! ಆತ ಜೀವಂತ ಸೆರೆ ಸಿಕ್ಕಿದ್ದ. ಸ್ಕರ್ದುವಿನ ಸೆರೆಮನೆಯಲ್ಲಿ ಈತನನ್ನು ಒಂದು ವಾರದ ಕಾಲ ಇರಿಸಲಾಯಿತು. ನಂತರ ಜೂನ್ 3 ರಂದು ಈತನನ್ನು ಬಿಡುಗಡೆ ಮಾಡಿತು. ಸದ್ಯ ನಚಿಕೇತ ವಾಯುದಳದ ಸಂಪರ್ಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಗಿಲ್ನಲ್ಲಿರುವುದು ನಮ್ಮ ಸೈನ್ಯವೇ ಅಲ್ಲ ಅವರೆಲ್ಲ ಮುಜಾಹಿದ್ದೀನರು ಎಂದು ಬುಡಬುಡಿಕೆ ಆಡಿಸುತ್ತಿತ್ತು ಪಾಕಿಸ್ತಾನ. ಆಗಲೇ ನಮ್ಮ ಯೋಧರಿಗೆ ಹೊಸದೊಂದು ಡಿಮ್ಯಾಂಡ್ ಇಟ್ಟಿತು ನಮ್ಮ ಮಿಲಿಟರಿ ನಾಯಕತ್ವ. ಜೀವಂತ ಪಾಕಿಸ್ತಾನೀ ಸೈನಿಕನೊಬ್ಬನ ಸೆರೆ! ಜುಲೈ ಆರು, ಬತಾಲಿಕ್ ಸೆಕ್ಟರ್ನಲ್ಲಿ ನಮ್ಮವರು ಮೊಟ್ಟಮೊದಲ ಬಾರಿಗೆ ಶತ್ರು ಸೈನಿಕನೊಬ್ಬನನ್ನು ಜೀವಂತ ಸೆರೆ ಹಿಡಿದೇ ಬಿಟ್ಟರು. 12 ಜಾಕ್ ಇನ್ಫೆಂಟ್ರಿ ಈ ವಿಕ್ರಮವನ್ನು ಸಾಧಿಸಿತ್ತು. ಆತನ ಹೆಸರು ಇನಾಯತ್ ಅಲಿ, ಆತನ ಬಳಿಯಿದ್ದ ಗುರುತು ಪತ್ರಗಳು ಆತ ನಾರ್ಥನ್ ಲೈಟ್ ಇನ್ಫೆಂಟ್ರಿಯ ಯೋಧನೆಂಬುದನ್ನು ಖಚಿತ ಪಡಿಸಿತು. ಮಿಲಿಟರಿ ಇಂಟೆಲಿಜೆನ್ಸ್ನವರು ಆತನನ್ನು ಕೂಡಲೆ ಏರ್ಲಿಫ್ಟ್ ಮಾಡಿದರು. ಆತ ಘಟ್ಟ ತಲುಪುವ 6 ಘಂಟೆಗಳ ಕಾಲವೂ ಆ ವಿಮಾನದ ಪ್ರತಿ ಕದಲಿಕೆಯನ್ನೂ ಪರಿಶೀಲಿಸುತ್ತಿದ್ದರು. ಆತನನ್ನು ಸರಿಯಾಗಿಯೇ ಬಳಸಿಕೊಂಡ ಭಾರತ ಪಾಕಿಸ್ತಾನವನ್ನು ಜಗತ್ತಿನೆದುರು ನಗ್ನಗೊಳಿಸಿತು. ಇದು ಭಾರತದವರ ಎಲ್ಲ ವಾದಗಳಿಗೂ ಪುರಾವೆಯಾಗಿತ್ತು. ಮುಂದೆ ಆತನೂ ಸೇರಿ ಜೀವಂತ ಸೆರೆಸಿಕ್ಕ 8 ಪಾಕಿಸ್ತಾನಿ ಸೈನಿಕರನ್ನು ಶಾಂತಿ ಒಪ್ಪಂದದಂತೆ ಆಗಸ್ಟ್ 13ರಂದು ಬಿಟ್ಟುಬಿಡಲಾಯಿತು.

ಸಮಚಿತ್ತದ ಕಟ್ಟೆಯೊಡೆದಾಗ
ಕಾರ್ಗಿಲ್ನಲ್ಲಿ ಭಾರತದ ಸೈನಿಕರು ಪಾಕ್ ಒಪ್ಪಿಕೊಳ್ಳದ ಅವರದೇ ಸೈನಿಕರ ಮೃತದೇಹಗಳಿಗೆ ಗೌರವಯುತ ಅಂತ್ಯಸಂಸ್ಕಾರವೊದಗಿಸಿದ್ದನ್ನು ಎಲ್ಲರೂ ಓದಿರುತ್ತರೆ. ಆದರೆ ಅತ್ತ ಪಾಕ್ ಭಾರತೀಯ ಸೈನಿಕರ ಮೃತದೇಹಗಳನ್ನು ವಿಕೃತಗೊಳಿಸಿ ಗೋಣೀಚೀಲಗಳಲ್ಲಿ ಹಾಕಿ ಕಳಿಸುತ್ತಿತ್ತು. ಮೃತ ಸೈನಿಕನ ಕಳೆಬರವನ್ನು ಚೀಲದಿಂದ ತೆಗೆದಾಗ ಒಳಗಿರಿಸಿದ್ದ ಬಾಂಬು ಸಿಡಿದು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು (ಬೂಬಿ ಟ್ರಾಪ್). ಇದೆಲ್ಲವೂ ಭಾರತೀಯ ಸೈನಿಕನ ಮನಸ್ಸಿನ ಮೇಲೆ ಮಾಗದ ಗಾಯ ಮಾಡಹತ್ತಿತು. ಭಾರತೀಯ ಯೋಧ ವಯಲೆಂಟ್ ಆಗಿ ನಡೆದುಕೊಳ್ಳಲಾರಂಭಿಸಿದ. ಪಾಯಿಂಟ್ 4700 ಅನ್ನು ವಶಪಡಿಸಿಕೊಂಡ 18 ಘರವಾಲ್ ಬೆಟಾಲಿಯನ್ನ ಯೋಧರು ವಿಜಯದ ಬಳಿಕ ಕ್ರೂರವಾಗಿ ಪ್ರವರ್ತಿಸಿದರು. ಅವರ ಸಮಚಿತ್ತದ ಕಟ್ಟೆಯೊಡೆದಿತ್ತು. ಮೃತ ಪಾಕ್ ಸೈನಿಕನೊಬ್ಬನ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ ಆ ತಲೆಯನ್ನು ಟ್ರೋಫಿಯಂತೆ ಹಿಡಿದೆತಿದರು. ಆ ತಲೆಯನ್ನು ಕೆಳಗೆ ಎಲ್ಲರಿಗೂ ಕಾಣಿಸುವಂತೆ ಮರವೊಂದಕ್ಕೆ ಚುಚ್ಚಲಾಗಿತ್ತು. ಪರಮ ವಿಕಾರವಾದ ದೃಶ್ಯವಾಗಿತ್ತದು. ಅದು ಭಾರತೀಯ ಯೋಧನ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿತ್ತು. ಶತ್ರು ಅಜೇಯನಲ್ಲನೆಂಬ ಭಾವನೆ ತಳವೂರಿ ಕೂರಲಾರಂಭಿಸಿತು. ಆ ತಲೆಯನ್ನು ಮೂರ್ನಾಲ್ಕು ದಿನಗಳ ನಂತರ ಅಲ್ಲಿಂದ ತೆಗೆದು ಹಾಕಲಾಯಿತು. ಅದು ಅಲ್ಲಿದ್ದವರೆಗೂ ಯೋಧರಿಗದೊಂದು ಪ್ರೇಕ್ಷಣೀಯ ಸ್ಥಳವಾಗಿತ್ತು. ಈಗ ನೆನೆಸಿಕೊಂಡರೆ, ಇದು ವಿಕೃತವೆನಿಸುತ್ತದಾದರೂ ಅಂದು ಅದು ಯುದ್ಧಭೂಮಿಯಾಗಿತ್ತು!


ಯೋಧನ ಶವಹೊತ್ತ ಕಾಫಿನ್ನಲ್ಲೂ ಹಗರಣ
ದೇಶಭಕ್ತಿಯ ಆಡಂಬರವೆಲ್ಲವೂ ಮುಗಿದು ಜನ ಕಾರ್ಗಿಲ್ಲನ್ನು ನಿಧಾನವಾಗಿ ಮರೆಯತೊಡಗಿದ್ದಾಗ ಬೆಳಕಿಗೆ ಬಂತು ಆ ಹಗರಣ. ಕಾರ್ಗಿಲ್ನಲ್ಲಿ ವೀರ ಮರಣವನ್ನಪ್ಪಿದ ಯೋಧರ ಮೃತದೇಹಗಳನ್ನು ಯುದ್ಧಭೂಮಿಯಿಂದ ಅವರ ಸ್ವಗೃಹಗಳಿಗೆ ತೆರಳಿಸಲು ಬಳಸಲಾದ ಕಾಫಿನ್ಗಳ ಕಾಂಟ್ರಾಕ್ಟಿನಲ್ಲಿ ದೊಡ್ಡ ಹಗರಣವೊಂದು ನಡೆದಿತ್ತು. ಈ ಪ್ರಕರಣ ಎಬ್ಬಿಸಿದ ಗಲಾಟೆ ಅಷ್ಟಿಷ್ಟಲ್ಲ. ಯೋಧನ ಶವ ಹೊತ್ತ ಕಾಫಿನ್ನಲ್ಲೂ ಹಗರಣ - ಇದು ಸೂಕ್ಷ್ಮಗ್ಞರೆಲ್ಲರ ಮನಸ್ಸನ್ನೂ ಘಾಸಿಗೊಳಿಸಿತು. ಭಾರತಾಂಬೆಯ ರಕ್ಷಣೆಗೆ ಪ್ರಾಣಾರ್ಪಣಗೈದ ಅಮರಜವಾನರ ಮೃತದೇಹವೂ ಭ್ರಷ್ಟ ರಾಜಕಾರಣ-ಅಧಿಕಾರಗಣಕ್ಕೆ ದುಡ್ಡು ಮಡುವ ದಂಧೆಯಾಗಿ ಕಂಡದ್ದು ಅವರು ತಲುಪಿರುವ ಹಂತದ ಪ್ರತೀಕ. ಕಾರ್ಗಿಲ್ ಸಮಯದಲ್ಲಿ ಯೋಧರ ಮೃತದೇಹಗಳನ್ನು ಹೊರಲು ಹೊರದೇಶಗಳಿಂದ ಕಾಫಿನ್ಗಳನ್ನು ತರಿಸಲಾಗಿತ್ತು. ಪಬ್ಲಿಕ್ ಅಕೌಂಟ್ಸ್ ಕಮಿಟಿ ವರದಿಯು ಇದರಲ್ಲಿ ಹಗರಣವನ್ನು ಎತ್ತಿ ತೋರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದಕ್ಕೆ 172$ಗಳಿದ್ದ ಕಾಫಿನ್ ಅನ್ನು 2000$ಗಳು ಕೊಟ್ಟು ತರಿಸಲಾಗಿತ್ತು. ಇದರಲ್ಲಿ ದುಡ್ಡಿನ ವ್ಯವಹಾರ ನಡೆದಿಲ್ಲ ಎನ್ನುತ್ತೀರ? ಈ ಪ್ರಕರಣ ಜಾರ್ಜ್ ಫರನಂಡೀಸ್ ಅವರನ್ನು ತೀವ್ರ ಮುಜುಗರಕ್ಕೊಳಪಡಿಸಿತಾದರೂ ಪ್ರಕರಣದ ತನಿಖೆ ಅದೇನಾಯಿತೋ ಆ ದೇವರೇ ಬಲ್ಲ.
(ಈ ಭಾನುವಾರ ಪತ್ರಿಕೆಯಲ್ಲಿ ಪ್ರಕಟಿತ)

ಕಾರ್ಗಿಲ್ ಆ ದಿನಗಳು

ಕಾರ್ಗಿಲ್ - ಆ ಪದವೇ ಭಾರತೀಯರೆದೆಯಲ್ಲಿ ರೋಮಾಂಚನ ಮೂಡಿಸುತ್ತದೆ. ಇಂದಿಗೆ ಕಾರ್ಗಿಲ್ಲ್ನ ದಿಗ್ವಿಜಯಕ್ಕೆ ದಶಕದ ಸಂಭ್ರಮ. ಅಂದು ದೇಶಭಕ್ತಿಯ ಅಲೆಯೊಂದು ಭಾರತದಾದ್ಯಂತ ವ್ಯಾಪಿಸಿತ್ತು. ದೇಶಕ್ಕೆ ದೇಶವೇ ಒಂದಾಯಿತು - ಜಾತಿ, ಮತ, ವರ್ಣ, ಪ್ರಾಂತ್ಯಗಳನ್ನು ಮೀರಿ. ಆದರೆ ಈ ದೇಶಪ್ರೇಮ ತೀರ ಅಲ್ಪಕಾಲದ ಅಫೇರ್ ಆಯಿತೆಂಬುದು ವಿಷಾದನೀಯ.

ಭಾರತಾಂಬೆಯ ರಕ್ಷಣೆಗೆ ನಿಂತು ಪ್ರಾಣಾರ್ಪಣಗೈದ ವೀರಪುತ್ರರನ್ನು ಅಂದು ಸೆಲಿಬ್ರೇಟ್ ಮಾಡಿದ ನಾವೇ ಇಂದು ಅವರೆಲ್ಲರನೂ ಮರೆತಿದ್ದೇವೆ. ಅಜಯ್ ಅಹುಜಾ, ವಿಜಯ್ ಕುಮಾರ್, ಸೌರಭ್ ಕಾಲಿಯಾ..... ಎನ್ಡಿಎ ಆಡಳಿತಾವಧಿಯಲ್ಲಿ ನಡೆದ ಕಾರ್ಗಿಲ್ವರ್ಷಾಚರಣೆ ಎಲ್ಲಿ ಬಿಜೆಪಿಯನ್ನು ಹಿಗ್ಗಿಸಿಬಿಡುತ್ತದೋ ಎಂದು ಇಂದಿನ ಕಾಂಗ್ರೆಸ್ ಸರ್ಕಾರ ಕಾರ್ಗಿಲ್ಲ್ನ ದಶಮಾನೋತ್ಸವವನ್ನು ಆಚರಿಸುತ್ತಿಲ್ಲ! ಛೇ ನಾಚ್ಚಿಗ್ಗೇಡು! ಕಾರ್ಗಿಲ್ಲ್ನ ಕಲಿಗಳ ತ್ಯಾಗ ಬಲಿದಾನಗಳನ್ನು ನಾವು ಅವಮಾನಿ
ಸುತ್ತಿದ್ದೇವೆಂಬ ಭಾವ ಕಿತ್ತು ತಿನ್ನಬೇಕು ಇವರನ್ನು. ನಾವೂ ಈ ಕೃತಘ್ನರ ಸಾಲಿನಲ್ಲಿ ನಿಲ್ಲುವುದು ತರವಲ್ಲ. ಕಾರ್ಗಿಲ್ಲ್ನ ಆ ದಿನಗಳ ಒಂದು ಮೆಲುಕು ನಾವು ಈ ಸಂದರ್ಭದಲ್ಲಿ ಆ
ವೀರಪುತ್ರರ ನೆನಪಿಗೆ ಸಲ್ಲಿಸಬಹುದಾದ ಕನಿಷ್ಠ ಗೌರವ. ಆ ನಿಟ್ಟಿನಲ್ಲಿ ಇದೊಂದು ಕಿರು
ಲೇಖನ.
99ರಲ್ಲಿ ಭಾರತ ಶಾಂತಿಯ ಭ್ರಮೆಯಲ್ಲಿ ಮೈಮರೆತಿತ್ತು. 98ರಲ್ಲಿ ಪೋಖ್ರಾನ್ ಅಣು ಪರೀಕ್ಷೆ ನಡೆಸಿದ ಸರ್ಕಾರ ಪಾಕಿಸ್ತಾನದ ಮಿಲಿಟರಿಯ ಮೇಲೆ ನಾವು ಶಾಶ್ವತ ಮೇಲ್ಗೈ ಸಾಧಿಸಿದ್ದೇವೆಂದು ಬೀಗಿತು. ಆದರೆ ಕೂಡಲೆ ಪಾಕಿಸ್ತಾನ ಕೂಡ ಅಣು ಪರೀಕ್ಷೆ ನಡೆಸಿ ಭಾರತಕ್ಕೆ ಸವಾಲೆಸೆಯಿತು. ಪರಿಸ್ಥಿತಿ ಕೈಮಿರುತ್ತಿರುವುದನ್ನು ಮನಗಂಡ ವಾಜಪೇಯಿಯವರು ಶಾಂತಿ ಪ್ರತಿಪಾದಕರಾಗಿ ಲಾಹೋರ್ ಬಸ್ ಯಾತ್ರೆ ಕೈಗೊಂಡರು. ಇತಿಹಾಸ ಬಾಧಿತ ಭಾರತ-ಪಾಕಿಸ್ತಾನ ಸಂಬಂಧಗಳನು ಸರಿದೂಗಿಸಲು ಒಂದು ಯಾತ್ರೆ ಸಾಕಾಗುವುದಿಲ್ಲವೆನ್ನುವುದನ್ನು ಭಾರತ ಮರೆತಂತಿತ್ತು. ಶಾಂತಿಯಾಕಾಂಕ್ಷಿಯಾಗಿ ಪಾಕಿಸ್ತಾನ ನೀಡಿದ ಪೋಸನ್ನು ಎಲ್ಲರೂ ನಿಜವೆಂದೇ ನಂಬಿದ್ದರು, ಸೈನ್ಯವೂ ಸೇರಿ. ಪಾಕಿಸ್ತಾನದ ದೋಖಾದ ವಾಸನೆ ಯಾರ ಮೂಗಿಗೂ ಬಡಿಯಲೇ ಇಲ್ಲ. ಆಗ ಮಾಡಿತ್ತು ಪಾಕಿಸ್ತಾನ ಭಾರತಕ್ಕೆ ಕಪಾಳ ಮೋಕ್ಷ. ನಂತರ ನಿದ್ದೆಯಿಂದೆಚ್ಚೆತ್ತ ಭಾರತ ಪಾಕಿಸ್ತಾನದ ಎ
ರಡೂ ಕೆನ್ನೆಗಳಿಗೆ ಬಾರಿಸಿದ್ದು ಬೇರೆಯ ಮಾತಾದರೂ ಅದಕ್ಕೆ ತೆ
ತ್ತ ಬೆಲೆ ಅಪಾರ. ರಾಷ್ಟ್ರೀಯ ಬಧ್ರತಾ ಸಲಹೆಗಾರರ ತಂಡವು ವಿವಿಧ ಶತ್ರು ರಾಷ್ಟ್ರಗಳಿಂದ ಎದು
ರಾಗಬಹುದಾದ ಸದ್ಯ, ಮಧ್ಯಮ ಮತ್ತು ದೀರ್ಘಕಾಲೀನ ಅಪಾಯಗಳನ್ನು ಅಸೆಸ್ ಮಾಡಿ ಅವುಗಳನ್ನು ಎದುರಿಸಲು ಕಾರ್ಯವ್ಯೂಹವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಲಾಹೋರದ ಕಲರವದಲ್ಲಿ ಕಳೆದು ಹೋಗಿದ್ದ ವ್ಯವಸ್ಥೆ ಇದ್ಯಾವುದನ್ನೂ ಮಾಡಿರಲಿಲ್ಲ. ವಾಜಪೇಯಿಯರ ಕಾಲದಲ್ಲಿದದ್ದು ಪಾರ್ಟ್ಟೈಂ ರಾಷ್ಟ್ರೀಯ ಬಧ್ರತಾ ಸಲಹೆಗಾರ!
ಅತ್ತ ಪಾಕಿಸ್ತಾನದಲ್ಲಿ ನೂತನ ನೇಮಿತ ಸೇನಾ ಮುಖ್ಯಸ್ಥ ಮುಷರಫ್ ತಮ್ಮ ಕಾಲಾವಧಿಯಲ್ಲಿ ಏನಾದರೂ `ಸಾಧಿಸಬೇಕೆಂಬ' ಹು
ಮ್ಮಸ್ಸಿನಲ್ಲಿದ್ದಾಗ ಅವರಿಗೆ ಸಿಕ್ಕಿದ್ದು ಸೈನ್ಯ ಹಿಂದೆ ಭಾರತದ ವಿರುದ್ಧ ದಾಳಿಗೆ ರೂಪಿಸಿದ್ದ ಒಂದು ಮಾಸ್ಟರ್ಪ್ಲಾನ್. ಅದನ್ನವರು ತಕ್ಷಣವೇ ಅಮಲು ಮಾಡಿಬಿಟ್ಟರು. ಅದರಂತೆ ಪಾಕಿಸ್ತಾನವು ಭಾರತ ಚಳಿಗಾಲದಲ್ಲಿ ತೆರವುಗೊಳಿಸಿದ್ದ ಪೊಸಿಷನ್ಗಳನ್ನು ಮತ್ತು ಕಾರ್ಗಿಲ್ಲ್ನ ದುರ್ಗಮ ಹಿಮಶಿಖರಗಳನ್ನು ವಶಪಡಿಸಿಕೊಂಡು ಕೂತರು. ಆ ಬೆಟ್ಟಸಾಲುಗಳ ಮೇಲೆ ಕುಂತು ಕಾಶ್ಮೀರ ಲ್ಹೇದ ಎನ್ಎಚ್ 1 ಹೈವೇಯನ್ನು ನಿಯಂತ್ರಿಸಬಹುದಿತ್ತು. ಇದರಿಂದಾಗಿ ಸಿಯಾಚಿನ್ ಮತ್ತು ಕಾಶ್ಮೀರದ ಬಹುತೇಕ ಭಾಗವನ್ನು ಭಾರತದ ಸಂಪರ್ಕದಿಂದ ಕಡಿತಗೊಳಿಸಬಹುದಿತ್ತು. ಹೀಗೇನಾದರೂ

ಆಗಿದ್ದಲ್ಲಿ ಪಿಒಕೆ
ಗೆ ಇನ್ನರ್ಧ ಕಾಶ್ಮೀರ ಸೇರಿ
ಹೋಗುತ್ತಿತ್ತು. ಪಾಕ್ನ ಯೋಜನೆ ಬಲಿಷ್ಠವಾಗೇ ಇತ್ತಾದರೂ ನಮ್ಮವರು ಅದನ್ನು ಆಗಗೊಡಿಸಲಿಲ್ಲ.
ಹೀಗೆ ಬಂದು ಬೆಚ್ಚಗೆ ಕುಂತ ಪಾಕಿಸ್ತಾನೀಯರು, ಬೆಟ್ಟ ಸಾಲಿನ ಆ ಬದಿಯಲ್ಲಿ ಸಪ್ಲೈಲೈನ್ಗಳನ್ನು ನಿರ್ಮಿಸಿದರು, ಸ್ಕರ್ದುವಿನಲ್ಲಿ ಹೆಲಿಪ್ಯಾಡೊಂದನ್ನು ಕಟ್ಟಿಕೊಂಡಿದ್ದರು, ಕಮ್ಯೂನಿಕೇಷನ್ ಸಾಧನಗಳಿಗಾಗಿ ಲೈನ್ಗಳನ್ನೆಳದಿದ್ದರು. ಈ ಎಲ್ಲ ಸಿದ್ಧತೆಗಳಿಗೆ ಪಾಕಿಸ್ತಾನ ಏಳು ತಿಂಗಳು ತೆಗೆದುಕೊಂಡಿತ್ತು ಇವ್ಯಾವುವೂ ಭಾರತೀಯರಿಗೆ ತಿಳಿದಿರಲಿಲ್ಲ. ಹಾಗಿತ್ತು ನಮ್ಮ ಇಂಟೆಲಿಜೆನ್ಸ್! ಮೊದಲ ಬಾರಿಗೆ ಕಾರ್ಗಿಲ್ ಸೆಕ್ಟರ್ನಲ್ಲಿ ಪಾಕಿಗಳ ಇರುವಿಕೆಯನ್ನು ಗುರುತಿಸಿದ್ದು ಒಬ್ಬ ಕುರಿ ಕಾಯುವವನು! ದಾಳಿ ಶುರುವಾದಾಗ ಶತ್ರು ಶಕ್ತಿಯ ಒಂದು ಅಂದಾಜಿರಲಿಲ್ಲ ಭಾರತದ ಸೈನಿಕನಿಗೆ. ಅದು ಅವನ ಮೊದಲ ಹಿನ್ನಡೆಯಾಗಿತ್ತು. ಅಲ್ಲಿ ಶತ್ರು ಸೈನಿಕರು ಅಸಲಿಗೆ ನಮ್ಮವರಿಗೆ ಕಾಣಿಸುತ್ತಲೇ ಇರಲಿಲ್ಲ. ಆದರೆ ಅವರಿಗೆ ಇವರು ಸುಸ್ಪಷ್ಟ. ಅದಕ್ಕಾಗಿ ನಮ್ಮವರು ರಾತ್ರಿಗಳಲಿ ಮಾತ್ರ ಸಂಚರಿಸುತ್ತಿದ್ದರು! ಇದು ಭಾರತದ ಕಡೆ ಸಾವು ನೋವನ್ನು ನೂರ್ಮಡಿಸಿತು. ಕಾರ್ಗಿಲ್ಲ್ನ ದುರಂತವಿದು. ಶತ್ರು ಪಡೆಗಳು ಸ್ಟ್ರಾಟಜಿಕ್ ಪೊಸಿಷನ್ಗಳನ್ನು ತೆಗೆದುಕೊಂಡ ನಂತರ ಅವರನ್ನು ಸೆದೆಬಡಿಯುವುದು ದುಪ್ಪಟ್ಟು ಕಷ್ಟವಾಗುತ್ತಿತ್ತು. ನೆನಪಿರಲಿ ಇದೆಲ್ಲವೂ ನಡೆಯುತ್ತಿದದ್ದು 15-18 ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ. ಹೋರಾಡುತ್ತಿದ್ದವರು

ಸಾಮಾನ್ಯ ಫೌಜಿಗಳು! ಇಂತಹ ವಿಷಮ ಪರಿಸ್ಥಿತಿಗಳಲ್ಲಿಯೂ ದೇಶದ ಸಮಗ್ರತೆಯ ರಕ್ಷಣೆಗೆ ಕಾಲೂರಿ ನಿಂತು ಬಡಿದಾಡಿದ ಆ ಭರತಮಾತೆಯ ವೀರಪುತ್ರನಿಗೆ ನಾವು ಒಂದು ಮನಃಪೂರ್ವಕ ಸಲಾಂ ಬಿಟ್ಟರೆ ಬೇರೇನನ್ನು ಕೊಡಲಾಗುವುದಿಲ್ಲ. ಸಲಾಂ!
ಅತ್ತ ಕಾರ್ಗಿಲ್ಲ್ನಲ್ಲಿ ಯುದ್ಧ ನಡೆಯುತ್ತಿದ್ದರೆ, ಇತ್ತ ಹಸ್ತಿನೆಯಲ್ಲಿದದ್ದು ವಾಜಪೇಯಿಯವರ ಹಂಗಾಮಿ ಸರ್ಕಾರ. ಲೋಕಸಭೆ ವಿಸರ್ಜಿತವಾಗಿತ್ತು. ಮೊದಲ ಕೆಲ ದಿನಗಳಲ್ಲಿ ಇದು ಬಿಂಬಿತವೂ ಆಯಿತು. ಪರಿಸ್ಥಿತಿಯ ಅಗಾಧತೆಯ ಅರಿವಿಲ್ಲದೆ, ಕೆಲವು ಬಾಲಿಶ ನಡವಳಿಕೆಗಳು ಕಂಡುಬಂದವಾದರೂ, ಸ್ವಲ್ಪದರಲ್ಲೇ ಎಚ್ಚೆತ್ತಿತು ಸರ್ಕಾರ. ಭಾರತದ ನೆಲದ ಮೇಲೆ ಕಟ್ಟಕಡೆಯ ಪಾಕಿ ಇರುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲುಸುವುದಿಲ್ಲವೆಂಬ ದಿಟ್ಟ ನಿಲುವು ತಾಳಿದ ಸರ್ಕಾರ ಎಲ್ಲೂ ಬಾಗಲೇ ಇಲ್ಲ. ದೇಶದ ರಾಜಕೀಯವೇ ಈ ನಿಲುವಿಗೆ ಬದ್ಧವಾಗಿತ್ತು. (ಆ ಕೆಚ್ಚು, ಒಗ್ಗಟ್ಟು ಈಗೆಲ್ಲಿ ಹೋಯಿತೋ?) ಮೊದಲಿಗೆ ಭಾರತದ ಸೈನ್ಯಕ್ಕೆ ಹೇಳಿಕೊಳ್ಳುವಂತಹ ಜಯಗಳಾವೂ ಸಿಗಲಿಲ್ಲ. ಬದಲಿಗೆ ಯೋಧರ ಅಸಂಖ್ಯ ಮೃತದೇಹಗಳು ಯುದ್ಧಭೂಮಿಯಿಂದ ತಿರುಗಿ ಬರುತ್ತಿದ್ದವು. ಆದರೆ ಮೇ 26ರಂದು ವಾಯುದಳ ರಂಗಕ್ಕಿಳಿಯಿತು. ಪಾಕಿಸ್ತಾನೀಯರು ಅಡಗಿ ಕುಳಿತಿದ್ದ ಬೆಟ್ಟಗಳ ಮೇಲೆ ವೈಮಾನಿಕ ದಾಳಿ ನಡೆಸಲಾರಂಭಿಸಿತು. ಭಾರತ ನಿಧಾನವಾಗಿ ಯುದ್ಧರಂಗದಲ್ಲಿ ಮೇಲ್ಗೈ ಸ್ಥಾಪಿಸಲಾರಂಭಿಸಿತು. ಜೂನ್ ಹನ್ನೆರಡರಂದು ಟೊಲೊಲಿಂಗ್ ಭಾರತದ ಕೈವಶವಾಗುವುದರೊಂದಿಗೆ ಯುದ್ಧದ ಚಿತ್ರಣವೇ ಬದಲಾಗಿ ಹೋಯಿತು. ನಂತರದಲ್ಲೆವೂ ಭಾರತ ಸೈನ್ಯದ ವರಸೆ ದಿಗ್ವಿಜಯಗಳು. ಪಾಯಿಂಟ್ 5140, 4590, ತ್ರೀ ಪಿಂಪಲ್ಸ್, ಟೈಗರ್ ಹಿಲ್...ಎಲ್ಲವೂ ಸುಲಭವಾಗಿ ಭಾರತದ ಕೈವಶವಾಗುತ್ತಾ ಹೋದಂತೆ ಪಾಕಿಗಳು ದಿಕ್ಕಾಪಾಲಾಗಿ ಓಡತೊಡಗಿದರು.
ಇತ್ತ ಸರ್ಕಾರ ರಾಜತಾಂತ್ರಿಕ ದಾಳಿಗೆ ಮುಂದಾಯಿತು. 98ರ ಅಣು ಪರೀಕ್ಷೆಯ ನಂತರ ಹಳಸಿದ್ದ ಸಂಬಂಧಗಳೆಲ್ಲವನ್ನೂ ಸರಿದೂಗಿಸಿಕೊಂಡು, ವಿಶ್ವದ ಮುಂದೆ ಪಾಕಿಸ್ತಾನವನ್ನು ನಗ್ನಗೊಳಿಸಿತು. ಮೊದಲಿಗೆ ಪಾಕಿಸ್ತಾನ ಇದರೊಂದಿಗೆ ಯಾವುದೇ ಸಂಬಂಧವಿಲ್ಲವೆಂದೂ ಕಾರ್ಗಿಲ್ನಲ್ಲಿರುವುದು ಮುಜಾಹಿದ್ದೀನರೆಂದೂ ಪುಂಗಿ ಊದಲಾರಂಭಿಸಿತಾದರೂ ಭಾರತ ಸಾಕ್ಷಿ ಸಮೇತ ಪಾಕ್ನ ಸುಳ್ಳನ್ನು ಜಗಜ್ಜಾಹೀರುಗೊಳಿಸಿತು. ಶಾಂತಿಯ ಮರುಸ್ಥಾಪನೆಗೆ ಅಮೆರಿಕಾ ಮತ್ತಿತರ ಪಶ್ಚಿಮದ ದೇಶಗಳು ಮುಂದೆ ಬಂದು ರಾಜಿ ಮಡಿಸುತ್ತವೆ. ಆಗ ತಾವು ಆಕ್ರಮಿಸಿಕೊಂಡಿದ್ದಷ್ಟು ತಮಗೆ ಬಿಟ್ಟುಕೊಡುವಂತೆ ರಾಜಿ ಮಾಡಿಸಿಕೊಂಡು ಕಾಶ್ಮೀರದ ಇನ್ನಷ್ಟು ಭಾಗ ಮತ್ತು ಸಿಯಾಚಿನ್ ಅನ್ನು ಕಬಳಿಸಿ ಭಾರತಕ್ಕೆ ಮುಖಭಂಗ ಮಾಡಬಹುದೆಂದೆಣಿಸಿದ್ದ ಪಾಕಿಸ್ತಾನದ ಆಟವನ್ನು ಭಾರತ ಆಗಗೊಳಿಸಲಿಲ್ಲ. ಪಶ್ಚಿಮದ ಮಧ್ಯಸ್ಥಿಕೆಯನ್ನು ಜರೂರಾಗಿಸಲು ಪಾಕಿಸ್ತಾನ ಅಣು ದಾಳಿಯ ಬೆದರಿಕೆಯನ್ನೂಡ್ಡಿತಾದರೂ, ಅದೂ ಕೆಲಸಕ್ಕೆ ಬರಲಿಲ್ಲ. ಸೈನಿಕ ದೃಷ್ಟಿಯಿಂದ ಎಲ್ಓಸಿ ದಾಟುವುದು ಸರಿದೋರಿತ್ತು. ಆದರೆ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಾದವನ್ನು ಟೊಳ್ಳಾಗಿಸುತ್ತಿತ್ತಾದ್ದರಿಂದ ಅದನ್ನು ತಡೆಹಿಡಿಯಲಾಯಿತು. ಪಾಕಿಸ್ತಾನ ತನ್ನ ಪರವಾಗಿ ನೆಚ್ಚಿಕೊಂಡಿದ್ದ ಅಮೆರಿಕಾ ಮತ್ತು ಚೈನಾ ದೇಶಗಳು ಭಾರತದ ಪರ ನಿಂತವು. ಇನ್ನು ರಷಿಯಾ, ಫ್ರಾನ್ಸ್, ಜಪಾನ್ ಹೀಗೆ ಎಲ್ಲರೂ ಭಾರತದ ಪರವಾಗಿ ನಿಂತರು. ಇದು ಪಾಕಿಸ್ತಾನದ ಮೇಲೆ ಇನ್ನಿಲ್ಲದ ಒತ್ತಡ ಹೇರಿತು. ಅವರು ಮುಖಭಂಗದಿಂದ ಪಾರಾಗಲು ಒಂದು ಹುಲ್ಲುಕಡ್ಡಿಯ ಆಸರೆ ಬೇಕಾಗಿತ್ತು. ಅಮೆರಿಕಾ ಅದನ್ನು ನೀಗಿಸಿತು. ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ಘೋಷಣೆಯೊಂದಿಗೆ ಯುದ್ಧ ಅಂತ್ಯವಾಯಿತಾದರೂ, ಭಾರತವೇನೂ ರಾಜಿಯಾಗಿರಲಿಲ್ಲ. ಅಷ್ಟರಲ್ಲಿ ಭಾರತ ತನ್ನ ನೆಲದ ಮೇಲಿನ ಕಡೆಯ ಪಾಕಿಯನ್ನು ಓಡಿಸಿಯಾಗಿತ್ತು. ಹಾಗಾಗಿ ಕಾರ್ಗಿಲ್ ನಮ್ಮ ಸೈನ್ಯಕ್ಕೆ ಸಂದ ದಿಗ್ವಿಜಯ.
ದೇಶಭಕ್ತಿಯ, ದಿಗ್ವಿಜಯದ ಆಡಂಬರದಲ್ಲಿ ಒಂದು ಮಾತು ಕೇಳದೆಯೇ ಉಳಿಯಿತು. ಅಸಲಿಗೆ ಕಾರ್ಗಿಲ್ ಅನ್ನು ತಪ್ಪಿಸಬಹುದಿತ್ತಾ? ಸಂಶಯವೇ ಬೇಡ - ಕಾರ್ಗಿಲ್ ಅನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು! ಕಾರ್ಗಿಲ್ಲ್ನ ಪೋಸ್ಟ್ಮಾರ್ಟಮ್ ನಡೆಯಬೇಕಿತ್ತು, ಆದರೆ ಅಂತಹುದಕ್ಕೆ ಅವಕಾಶವಾಗಲಿಲ್ಲ. ಸರ್ಕಾರ ಸುಬ್ರಮಣ್ಯಮ್ ಕಮಿಟಿಯನ್ನು ನೇಮಿಸಿತಾದರೂ ಅದು ಹೆಕ್ಕಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ಕಾರ್ಗಿಲ್ಲ್ನ ವಿಷಯದಲ್ಲಿ ಕರ್ತವ್ಯಲೋಪವೆಸಗಿದವರಾರ ತಲೆಗಳೂ ಉರುಳಲಿಲ್ಲ. ಕಾಗರ್ಿಲ್ನ ಪ್ರಮುಖ ದೋಷ ಗುಪ್ತಚರ ವಿಫಲತೆ. ಆದರೆ ಅಂದಿನ ಗುಪ್ತಚರ ಮುಖ್ಯಸ್ಥನನ್ನು ಅರುಣಾಚಲದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಕಾರ್ಗಿಲ್ಲ್ನಲ್ಲಿ ಪಾಠ ಕಲಿತಿದ್ದರೆ 26/11ನನ್ನು ತಪ್ಪಿಸಬಹುದಿತ್ತು.ದುರ್ದೈವವೆಂದರೆ ಇಂತಹ ಸಂದರ್ಭಗಳಲ್ಲಿ ದೇಶಭಕ್ತಿಯ ಅಮಲು ಭಾವನಾತ್ಮಕವಲ್ಲದ ತುಲನೆಗೆ ಅವಕಾಶವನ್ನೀಯುವುದಿಲ್ಲ. ಆದರೆ ಇತಿಹಾಸದಿಂದ ಪಾಠ ಕಲಿಯದ ಹೊರತಾಗಿ ಇಂತಹ ಭೀಭತ್ಸ ಘಟನಾವಳಿಗಳು ಪುನರಾವರ್ತನೆಯಾಗುತ್ತಲೇ ಇರುತ್ತದೆ.
ಏನೇ ಆಗಲಿ 18 ಸಾವಿರ ಅಡಿ ಎತ್ತರದ ಹಿಮಶಿಕರಗಳ ಮೇಲೆ ನಿಂತು ಭಾರತಾಂಬೆಯ ಮಡಿಲ ರಕ್ಷಿಸಲು ರಕ್ತ ಚೆಲ್ಲಿದ ಆ ವೀರ ಯೋಧರೆಲ್ಲರಿಗೂ ಇದುವೇ ನಮ್ಮ ನಮನ!
(ಈ ಭಾನುವಾರ ಪತ್ರಿಕೆಯಲ್ಲಿ ಪ್ರಕಟಿತ)





Proudly powered by Blogger
Theme: Esquire by Matthew Buchanan.
Converted by LiteThemes.com.