ಬಿಕನಾಸಿ ಜನ, ಪುಟಗೋಸಿ ಜನಾಭಿಪ್ರಾಯ..........ಒಡೆದ ದೋಣಿಯಂತಾಗಿದ್ದ ರಾಜ್ಯ ಬಿಜೆಪಿಗೆ ತೇಪೆ ಹಾಕಲಾಗಿದೆಯೋ ಇಲ್ಲ, ಒಂದು ತೂತಿನಿಂದ ಒಳಬಂದಿರುವ ನೀರನ್ನು ಮತ್ತೊಂದು ತೂತು ಮಾಡಿ ಹೊರಬಿಡಲಾಗುತ್ತಿದೆಯೋ ಅನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಯಡ್ಡಿ-ರೆಡ್ಡಿ ಒಂದಾಗಿದ್ದಾರಂತೆ, ಅವರಿಬ್ಬರೂ ಇನ್ನು ಮುಂದೆ ಅಣ್ಣ ತಮ್ಮಂದಿರಂತೆ! ನೋಡಬೇಕಿತ್ತು ಅವರನ್ನು ಮೊನ್ನೆ ದೆಹಲಿಯಲ್ಲಿ ಕೈಗಳೆತ್ತಿ ಆ ಗ್ರೂಪ್ ಫೋಟೋ ಏನು, ಒಬ್ಬರಿಗೊಬ್ಬರು ಕೇಕು ತಿನ್ನಿಸಿದ್ದೇನು? ಆಹಾ ಏನು ಅನುಬಂಧ ಏನು ಕಥೆ. ನಾಚಿಗೆಯೇ ಇಲ್ಲದೆ ಎಲ್ಲರೂ ಒಂದು ಎಂಬಂತೆ ಪೋಸು ಕೊಡುತ್ತಾ ಈ ಹದಿನಾಲ್ಕುದಿನಗಳ ಬೃಹನ್ನಾಟಕಕ್ಕೆ ತೆರೆ ಎಳೆದಿದ್ದಾರೆ. ಈ ಎಲ್ಲಾ ಪ್ರಹಸನದಲ್ಲಿ ನಮ್ಮನ್ನಾಳುವವರ ಕೆಲವು ನಡವಳಿಕೆಗಳನ್ನು ನಾವು ಗಮನಿಸಬೇಕಿದೆ.

ಇಂದು ಕರ್ನಾಟಕ ಅನೇಕ ಸಮಸ್ಯೆಗಳಿಂದ ಬಳಲಿ ಬೆಂಡಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಸ್ಥಿತಿಯಂತೂ ದೇವರಿಗೇ ಪ್ರೀತಿ. ಮೊದಲಿಗೆ ಭೀಕರ ಕ್ಷಾಮದಿಂದ ತತ್ತರಿಸಿದ್ದ ಜನ ಧಿಢೀರನೇ ಬಂದ ನೆರೆಯಲ್ಲಿ ಕೊಚ್ಚಿಕೊಂಡು ಹೋದರು. ಇಂದು ಕರ್ನಾಟಕದ ಮೂರನೇ ಒಂದು ಭಾಗದಷ್ಟು ಜನ ಸಂತ್ರಸ್ತರಾಗಿದ್ದಾರೆ. ಅಲ್ಲಿ ಅವರ ಬದುಕು ಮೂರಾಬಟ್ಟೆಯಾಗಿದೆ. ಉಣ್ಣಲಿಕ್ಕೆ ಅನ್ನವಿಲ್ಲ, ಕುಡಿಯಲು ನೀರಿಲ್ಲ, ತಲೆಮ್ಯಾಗೊಂದು ಸೂರಿಲ್ಲ, ಬೆಳೆಯೆಲ್ಲವೂ ಸರ್ವನಾಶವಾಗಿದೆ, ಹೊಲ-ಗದ್ದೆಗಳಲ್ಲಿ 6-7 ಅಡಿಗಳ ಮಟ್ಟಕ್ಕೆ ಮಣ್ಣು ನಿಂತಿದೆ. ಆ ಕುಗ್ರಾಮಗಳಲ್ಲಿ ಗಂಜೀ ಕೇಂದ್ರಗಳನ್ನು ಕೂಡ ಸರಿಯಾಗಿ ನಡೆಸುತ್ತಿಲ್ಲ ಸರ್ಕಾರ. ಇವತ್ತು ಉತ್ತರ ಕರ್ನಾಟಕವನ್ನು ಮತ್ತೆ ಕಟ್ಟುವ ಕೆಲಸವಾಗಬೇಕಿದೆ.

ಸರ್ಕಾರವೇನೋ ಅತ್ಯುತ್ಸಾಹದಲ್ಲೇ ಈ ಕೆಲಸಕ್ಕೆ ಕೈಹಾಕಿತು. ಆದರೆ ಅವರ ಉದ್ದೇಶ ಪ್ರಾಮಾಣಿಕದ್ದಾಗಿರಲಿಲ್ಲ. ಇಲ್ಲಿ ಯಾರಿಗೂ ಜನರಿಗೆ ಬದುಕು ಕಟ್ಟಿಕೊಡುವ ಕರುಳ ಕಾಳಜಿಯಿರಲಿಲ್ಲ. ನೆರೆ ಪರಿಹಾರದಲ್ಲಿ ಹೆಸರು ಮಾಡಬೇಕು, ಆ ಭಾಗದಲ್ಲಿ ತನ್ನ ರಾಜಕೀಯ ಪ್ರಾಬಲ್ಯವನ್ನು ಪ್ರತಿಷ್ಠಾಪಿಸಬೇಕು ಅಂತಲೇ ಹೊರಟರು ಯಡ್ಡಿ-ರೆಡ್ಡಿ. ಅವರಿಬ್ಬರಿಗೂ ಇದು ರಾಜಕೀಯ ಅಷ್ಟೆ. ಬಳ್ಳಾರಿ, ರಾಯಚೂರು, ಗದಗ, ಕೊಪ್ಪಳಗಳನ್ನೊಳಗೊಂಡ ಪ್ರದೇಶವನ್ನು ರೆಡ್ಡಿಗಳು ತಮ್ಮ ಸಾಮ್ರಾಜ್ಯ ಅಂತ ಅಂದುಕೊಂಡು ಬಿಟ್ಟಿದ್ದಾರೆ. ಅದಕ್ಕೇ ಯಡ್ಯೂರಪ್ಪ ಈ ಜಿಲ್ಲೆಗಳ ನೆರೆ ಪರಿಹಾರದಲ್ಲಿ ಸಕ್ರಿಯರಾಗುತ್ತಿದ್ದಂತೆ ಅತಿಕ್ರಮ ಪ್ರವೇಶ ಎಂದು ರೆಡ್ಡಿಗಳು ದಂಗೆಯೆದ್ದಿದ್ದಾರೆ. ರೆಡ್ಡಿಗಳು ಮತ್ತು ಬಳ್ಳಾರಿಯ ಗಣಿಧಣಿಗಳು ಸೇರಿ ಸ್ವಂತವಾಗಿ 54 ಸಾವಿರ ಮನೆಗಳನ್ನು ಕಟ್ಟಿಸಿಕೊಡಲು ಹೊರಟಿರುವುದೂ ಇದಕ್ಕೇ, ಇದನ್ನು ನೋಡಿ ಧಿಗ್ಗನೆದ್ದು ಕೂತ ಯಡ್ಡಿ ಬಳ್ಳಾರಿ ಸಾಮ್ರಾಜ್ಯದಲ್ಲಿ ಗಿರಗಿಟ್ಲೆ ತಿರುಗಿದ್ದೂ ಇದಕ್ಕೇ. ಉರಿಯುತ್ತಿರುವ ಮನೆಯಲ್ಲಿ ಗಳ ಹಿರಿಯುವವರಿವರು. ಬಿಜೆಪಿಯಲ್ಲಿ ಭಿನ್ನಮತ ದಂಗೆ ಪ್ರಾರಂಭವಾಗುತ್ತಿದ್ದಂತೆಯೇ ಶುರುವಾಗಿದ್ದು ಶಾಸಕರ resort ಯಾತ್ರೆ. ಇರೋ 117 ಜನರಲ್ಲಿ ಸುಮಾರು 70 ಶಾಸಕರು ರೆಡ್ಡಿಗಳ ಆತಿಥ್ಯದಲ್ಲಿ ಗೋವಾ ಹೈದರಾಬಾದ್ನ ಹೈಟೆಕ್ ಹೋಟೆಲ್ಗಳಲ್ಲಿ ಕುಂತು ಬಿಟ್ಟರು, ಅದೂ ಏನು ಹದಿನೈದು ದಿನಗಳು. ಉತ್ತರ ಕರ್ನಾಟಕ ಅನಾಥವಾಗಿ ಹೋಯಿತು. ಎರಡೂ ಬಣಗಳವರು ಉತ್ತರ ಕರ್ನಾಟಕದ ಹೆಸರನ್ನು ತಮ್ಮ ರಾಜಕೀಯ ಸ್ವಲಾಭಕ್ಕಾಗಿ ಜಪಿಸುತ್ತಿದ್ದರೇ ಹೊರತು ಒಬ್ಬರೂ ಅತ್ತ ಮುಖ ಮಾಡಲಿಲ್ಲ. ಇವರ ಜಗಳ ರಾಜಕೀಯ ಲೇವಾದೇವಿಯೆಲ್ಲವೂ ಮುಗಿದ ಕೂಡಲೇ ಇಬ್ಬರಿಗೂ ಉತ್ತರ ಕರ್ನಾಟಕದ ಜನ ನೆನಪಾಗಿದ್ದಾರೆ. ಈಗಲೂ ಅಷ್ಟೆ ಇಬ್ಬರಲ್ಲಿ ಯಾರಿಗೂ ಆ ಕರುಳ ಕಾಳಜಿ ಅನ್ನುವುದಿಲ್ಲ. ಈಗಲೂ ಕೂಡ ಅದೊಂದು ರಾಜಕೀಯ ದಾಳ ಅಷ್ಟೆ! ಇದು ನಮ್ಮ ನಾಡಿನ ದುರ್ದೈವ .


ಇನ್ನು ಈ ಇಡೀ ಪ್ರಹಸನದಲ್ಲಿ ಜಗಜ್ಜಾಹೀರಾಗಿದ್ದು ನಮ್ಮನಾಳುವವರ ನೀಚ ಭಂಡತನ. ಮುಖ್ಯಮಂತ್ರಿ ಯಡ್ಯೂರಪ್ಪನವರ ಮುಖ ಕೂಡ ನೋಡುವುದಿಲ್ಲ ಎಂದಿದ್ದ ರೆಡ್ಡಿಗಳು ಈಗ ಮತ್ತೆ ಅವರ ಕ್ಯಾಬಿನೆಟ್ಟಿನಲ್ಲಿ ಕೂತು ಕೆಲಸ ಮಾಡಲಿದ್ದಾರೆ. ಮುಖ್ಯಮಂತ್ರಿಗಳನ್ನು ಏಕವಚನವೊಂದರಲ್ಲಿ ಬಿಟ್ಟು ಮಿಕ್ಕೆಲ್ಲಾ ರೀತಿಯಲ್ಲೂ, ಕಂಸ, ಜರಾಸಂಧ, ಅಂತೆಲ್ಲಾ ಬೈದಾಡಿದವರೂ ಕೂಡ ಮತ್ತೆ ಯಡ್ಯೂರಪ್ಪನವರ ನಾಯಕತ್ವದಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಯಡ್ಯೂರಪ್ಪ ಕೂಡ ಯಾವುದೇ ಮುಜುಗರವಿಲ್ಲದೇ ಇವರನ್ನು ಸ್ವಿಕರಿಸಿದ್ದಾರೆ. ಇವರಿಗೆ ಸ್ವಾಭಿಮಾನವೇ ಇಲ್ಲವೇ? ಇಷ್ಟು ಭಂಡತನವೇ? ಭಂಡತನದ ಪರಮಾವಧಿಯೆಂದರೆ ಅದು `ಸನ್ಮಾನ್ಯ' ರೇಣುಕಾಚಾರ್ಯರದ್ದು. ದೆಹಲೀ ಪ್ರಹಸನ ಜರಿಯಲ್ಲಿದ್ದಾಗ ಯಡ್ಯೂರಪ್ಪನವರ ವಿರುದ್ಧ ವಾಚಾಮಗೋಚರ ಮಾತನಾಡುತ್ತಿದ್ದ ರೇಣುಕಾಚಾರ್ಯ, ಪ್ರಾಣ ಹೋದರೂ ಸರಿ ನಾಯಕತ್ವ ಬದಲಾವಣೆ ಮಾಡಿಯೇ ಸಿದ್ಧ ಅಂದ ಬೆಳ್ಳುಬ್ಬಿಗಳು ಅಲ್ಲಿ ರಾಜಿ ಸಂಧಾನ ಆಯಿತು ಅಂತ ಒಂದು ಸಿಗ್ನಲ್ಲು ಬಂದ ಕೂಡಲೇ ಯಡ್ಯೂರಪ್ಪನವರೇ ನಮ್ಮ ನಾಯಕರು. ಅವರು ನನಗೆ ತಂದೆ ಸಮಾನ ಅಂತ ವಟಗುಟ್ಟಲಾರಂಭಿಸಿದರು. ಅಸಲಿಗೆ ಇಲ್ಲೇನೂ ನಡೆದೇ ಇಲ್ಲವೇನೋ ಎನ್ನುವಂತೆ ಭಂಡತನದ ಆಟ ಆಡಲಾರಂಭಿಸಿದರು. ಏನೂ ಆಗಿಲ್ಲವೆಂದರೆ ಮತ್ಯಾಕೆ ರೇಣುಕಾಚಾರ್ಯರೇ ತಾವೆಲ್ಲಾ ಹೈದರಾಬಾದಿನಲ್ಲಿ ಹೋಗಿ ಕೂತುಬಿಟ್ಟಿದ್ದೀರಿ ಅಂತ ಸುವರ್ಣಾದ ರಂಗನಾಥರು ಪ್ರಶ್ನಿಸಿದರೆ, ಭಂಡ ರೇಣುಕಾರವರು - ಇಲ್ಲಿ ತಾವ್ಯಾರೂ ರಾಜಕೀಯ ಮಾಡಲು ಬಂದಿಲ್ಲ, ಆಂಧ್ರದಲ್ಲಿ ಗ್ರಾಮೀಣಾಭಿವೃದ್ಧಿಯನ್ನು ಅಭ್ಯಸಿಸಲು ಬಂದಿದ್ದಾಗಿ, ದಿನಾಲೂ ತಾವೆಲ್ಲರೂ ಹಳ್ಳಿಗಳಿಗೆ ತೆರಳಿ ಅಧ್ಯಯನ ನಡೆಸಿರುವುದಾಗಿ ಬಡಬಡಿಸಿದರು. ಮಾಡಿದ್ದನ್ನು ಒಪ್ಪಿಕೊಳ್ಳಲೂ ಧೈರ್ಯವಿಲ್ಲದ ಇಂತಹ ಹೇಡಿಗಳೇ ನಮ್ಮನ್ನಾಳುವವರು? ಅಲ್ಲ ಈ 24 ಘಂಟೆಗಳ ಮೀಡಿಯಾದ ಕಾಲದಲ್ಲೂ ನಮ್ಮ ರೇಣುಕಾಚಾರ್ಯರು ಇಂಥದೊಂದು ಹೇಳಿಕೆಯನ್ನು ಕೊಡುತ್ತಾರಲ್ಲ, ಅವರು ಜನರನ್ನೇನು ಅಂತ ತಿಳಿದುಕೊಂಡಿದ್ದಾರೆ? ಹುಚ್ಚರಾ, ಬೆಪ್ಪರಾ ಇಲ್ಲ ಗುಗ್ಗುಗಳಾ?


ಇನ್ನು ಇಡೀ ಪ್ರಹಸನದ ಹೈಲೈಟೆಂದರೆ ಯಡ್ಯೂರಪ್ಪನವರು ಕಣ್ಣೀರು ಹಾಕಿದ್ದು. ಮೀಡಿಯಾದವರಿಗಂತೂ ಸುಗಿಯೋ ಸುಗ್ಗಿ. ಒಂದು ಕಾಲಕ್ಕೆ ಇದೇ ಯಡ್ಡಿ, ಪಟೇಲರ ಕಾಲದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ `ಯಡ್ಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು' ಅಂತ ಹೆಸರು ತೆಗೆದುಕೊಂಡಿದ್ದವರು. ಇದೇ ಯಡ್ಡಿ ಮೊನ್ನೆ ದೆಹಲಿಯಲ್ಲಿ ಸುವರ್ಣಾ ಕ್ಯಾಮೆರಾದ ಮುಂದೆ ಗದ್ಗದಿತರಾಗಿ ಗಳಗಳನೆ ಅತ್ತುಬಿಟ್ಟರು. ಅದೂ ಏನಂತ? ರಾಜಕೀಯ ಸ್ವಾರ್ಥಕ್ಕಾಗಿ ನಾನು ನನ್ನನ್ನ ನಂಬಿದವರೆನ್ನೆಲ್ಲಾ ಕೈಬಿಟ್ಟುಬಿಟ್ಟೆ, ಶೋಭಾ, ಬಳಿಗಾರ್.....ಊಊ.....ದೇವರು ನನ್ನನ್ನು ಕಡೇ ತನಕ ಕ್ಷಮಿಸೋದಿಲ್ಲಾ....ಊಊಊ.....ಅಂತ ಮಕ್ಕಳತ್ತ ಹಾಗೆ ಅತ್ತು ಬಿಟ್ಟರು. ಇವರು ನೆರೆ ಸಂತ್ರಸ್ತರ ಕಷ್ಟ ನೋಡಿ ಅಳಲಿಲ್ಲ, ಹೋಗಲೀ ತಾನು ಕಟ್ಟಿ ಬೆಳೆಸಿದ ಪಕ್ಷದಲ್ಲಿ ತನಗೇ ಹೀಗಾಯಿತಲ್ಲಾ ಅಂತ ಕೂಡ ಅಳಲಿಲ್ಲ. ಯಃಕಶ್ಚಿತ್ ಒಬ್ಬ ಐಎಎಸ್ ಅಧಿಕಾರಿ ಮತ್ತೊಬ್ಬರು ಮಹಿಳಾ ಸಚಿವೆಯನ್ನು ಕೈಬಿಡಲು ಯಡ್ಯೂರಪ್ಪ ಈ ಪರಿ ಸಾರ್ವಜನಿಕವಾಗಿ ಅಳಬೇಕಿತ್ತೇ? ಹಾಗಾದರೆ ಯಡ್ಯೂರಪ್ಪ ಮತ್ತು ಇವರಿಬ್ಬರ ನಡುವಿನ ಸಂಬಂಧವಾದರೂ ಎಂಥದಿತ್ತು? ಒಬ್ಬ ಮುಖ್ಯಮಂತ್ರಿ ಇಬ್ಬರ ಮೇಲೆ ಈ ಪರಿ ಆಡಳಿತಾತ್ಮಕವಾಗಿಯಾಗಲೀ ಎಮೋಷನಲ್ ಆಗಿ ಆಗಲೀ ಡಿಪೆಂಡ್ ಆಗಿರುವುದುಂಟೇ? ಜನರ ಮನಸ್ಸಿನಲ್ಲಿ ಚಿಕ್ಕವರಾಗಿಬಿಟ್ಟರು ಯಡ್ಯೂರಪ್ಪ. ಕಣ್ಣೀರಾಕಿದರೆ ಕೆಲಸ ಆಗುತ್ತೆ ಅಂತ ಯಾರು ಹೇಳಿದರೋ ಏನೋ ಪಾಪ? ಇಂಥವರೆಲ್ಲರೂ ಹೀಗೇ, ಇವರು ಬೇಕಿದ್ದರೆ ಅಳುತ್ತಾರೆ, ನಗೋದಿಲ್ಲ.

ಈ ನಾಟಕದಲ್ಲಿ ನಾವು ಮತ್ತೊಂದನ್ನು ಗಮನಿಸಬೇಕು. ಅದು ಯಡ್ಡಿ-ರೆಡ್ಡಿ-ಕಡ್ಡಿ ಎಲ್ಲರೂ ಮಾಡಿದ್ದೆಲ್ಲಾ ಮಾಡಿ ಬಿಟ್ಟು ಜನರ ಮುಖದ ಮೇಲೆ ಮೂರು ಕಾಸಿನ ಕಿಮ್ಮತ್ತಿಲ್ಲದ ಒಂದು ಸಾರಿಯನ್ನು ವಗಾಯಿಸಿಬಿಟ್ಟರು. ಯಡ್ಯೂರಪ್ಪನವರನ್ನು ನೀವು ಈ ನಡುವೆ ಏನೇ ಕೇಳಿ ನೋಡಿ, ಇನ್ನೂ ನೀವು ನಿಮ್ಮ ಪ್ರಶ್ನೆಯನ್ನೇ ಪೂರ್ತಿ ಕೇಳಿರೋದಿಲ್ಲ, ಹೌದು ಸಾರ್ ....ಸಾರೀ..ಸಾರೀ....ಅಂದು ಬಿಡುತ್ತಾರೆ. ರೆಡ್ಡಿಗಳನ್ನು ಕದಲಿಸಿ ನೋಡಿ ಅವರೂ ನಿಮ್ಮ ಮುಖದ ಮೇಲೊಂದು ಸಾರಿ ಬಿಸಾಕುತ್ತಾರೆ. ಅಂದರೆ ಅದರರ್ಥ ನಾವು ಸಾರೀ ಕೇಳಾಯ್ತಲ್ಲ ಇನ್ನು ಉತ್ತರ ಕರ್ನಾಟಕ, ನೆರೆ, ಜವಾಬ್ದಾರಿ ಊಹೂಂ ಯಾವುದರ ಬಗ್ಗೆಯೂ ಮಾತನಾಡುವಂತಿಲ್ಲ, ಸಾರಿ ಕೇಳಿದ ಮೇಲೆ ಮುಗೀತು! ದುಸರಾ ಮಾತಿಲ್ಲ. ಒಬ್ಬ ಮುಖ್ಯಮಂತ್ರಿ ಜನರ ಕ್ಷಮೆ ಕೇಳಿದ ಅಂದರೆ, ಆತನ ನಡವಳಿಕೆಯಿಂದ ಜನಕ್ಕೆ ತೀವ್ರ ಸಂಕಷ್ಟವಾಗಿರುವುದು, ಅದಕ್ಕೆ ಮುಖ್ಯಮಂತ್ರಿಯೂ ಸೇರಿದಂತೆ ಇಡಿಯ ಸರ್ಕಾರ ಹೊಣೆಯಾಗಿರುವುದೂ, ಅದನ್ನು ಅವರು ಗುರುತಿಸಿರುವುದೂ ಸುಸ್ಪಷ್ಟ. ಹಾಗಾದರೆ ಅವರೊಂದು ಕ್ಷಮೆ ಕೇಳಿಬಿಟ್ಟರೆ ಎಲ್ಲವನ್ನೂ ಜನ ಮರೆಯಲಾದೀತೆ? ಮರೆಯಬೇಕೇಕೆ? ಸಾರೀ ಅನ್ನುವುದು ವಿರಳವಾದಷ್ಟೂ ಅದಕ್ಕೆ ಬೆಲೆ ಹೆಚ್ಚು, ಮಾತು ಮುಗಿಸುವಷ್ಟರಲ್ಲಿ ಒಂದು ಬಾರಿ ಸಾರೀ ಕೇಳಿದರೆ ಮುಗೀತು ಅನ್ನೋದಾದರೆ ಅದಕ್ಕೆ ಬೆಲೆಯೆಲ್ಲಿಯದು?

ಇಂದಿನ ರಾಜಕೀಯದ ಮೂಲ ಸಮಸ್ಯೆಯೇ ಇದು. ನಾವಾರಿಸಿಕಳಿಸಿದವರಿಗೆ ನಮ್ಮನ್ನು ಕಂಡರೆ ಭಯವಿಲ್ಲ. ಬಿಕನಾಸಿ ಜನ, ಪುಟಗೋಸಿ ಜನಾಭಿಪ್ರಾಯ. ಜನ ಮರುಳೋ ಜಾತ್ರೆ ಮರುಳೋ.... ಎಡಗೈಲಿ ದುಡ್ಡು ಚೆಲ್ಲಿ ಬಲಗೈಲಿ ಎತ್ತಿಕೊಂಡು ಬರಬಹುದು ಜನಾಭಿಪ್ರಾಯವನ್ನು, ಅದೇನು ಮಹಾ? ಇದು ನಮ್ಮನ್ನಾಳುವವರ ಇಂದಿನ ಮನಸ್ಥಿತಿ. ಇದಕ್ಕೆ ನಾವೇ ಕಾರಣ, ಈಗ ಬೇರೆಯವರನ್ನಂದು ಪ್ರಯೊಜನವಿಲ್ಲ. ಜನ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಇಲ್ಲಿ ನಾನು ಬಿಜೆಪಿಗರನ್ನ ಪ್ರತ್ಯೇಕಿಸಿ ಮಾತನಾಡುತ್ತಿಲ್ಲ, as a class ಈ ರಾಜಕಾರಣಿಗಳೆಲ್ಲರೂ ಒಂದೆಯಾ. ಇವತ್ತು ಬಿಜೆಪಿಗರಿಗೆ ಟೈಮು ಸರಿಯಿಲ್ಲ, ಹೀಗಾಯಿತು, ನಾಳೆ ಕಾಂಗ್ರೆಸ್, ನಾಡಿದ್ದು ಜೆಡಿಎಸ್. ರಾಜಕಾರಣಿಗಳು ಜನರ ನಿರೀಕ್ಷೆಗಳನ್ನು ತಲುಪದಾದಾಗ ಮೊದಲಿಗೆ ಜನರಲ್ಲಿ ಒಂದು ಕೋಪವಿತ್ತು, ನಂತರ ಒಂದು ಬೇಜಾರು, ನಿಟ್ಟುಸಿರು ಮನೆ ಮಾಡಿತು, ಈಗ ಅವೆಲ್ಲವೂ ಸಣ್ಣವಾಗಿ ಒಂದು ಅಸಹ್ಯ ಹುಟ್ಟಿದೆ. ಸದ್ಯ ಜನ ಸಿನಿಕರಾಗಿದ್ದಾರೆ. ಅವರ ಮೆಟ್ಟಲ್ಲಿ ಅವರೇ ಹೊಡೆದುಕೊಳ್ಳುತ್ತಿದ್ದಾರೆ, ಆ ಮೆಟ್ಟು ಇವರೆಡೆಗೆ ತಿರುಗುವಷ್ಟು ಸಮಯ ಮಾತ್ರ ಉಳಿದಿದೆ ಈ ನಮ್ಮ ರಾಜಕಾರಣಿಗಳಿಗೆ. And the clock is ticking.

5 thoughts on “ಬಿಕನಾಸಿ ಜನ, ಪುಟಗೋಸಿ ಜನಾಭಿಪ್ರಾಯ..........

Dr. B.R. Satynarayana said...

ಈಗ ಭಾರೀ ಜಗಳದ ಪಕ್ಷವಾಗಿರುವ ಬಿ.ಜೆ.ಪಿ.ಯ ಬಿಕನಾಸಿ ನಾಯಕರ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ? ಅದರಿಂದ ಫಲವೂ ಇಲ್ಲ. ಅವರದೆಲ್ಲಾ ಎಮ್ಮೆಯ ಚರ್ಮ! (ಸುಮ್ಮನೆ ಎಮ್ಮೆಗ್ಯಾಕೆ ಅವಮಾನ ಮಾಡುವುದು)
ಒಬ್ಬ ಮು.ಮಂ.ಯ ಮಾತುಗಳನ್ನು ಗಮನಿಸಿ.
* ಅರಣ್ಯ ಮತ್ತು ಖನಿಜ ಸಂಪತ್ತು ಲೂಟಿಯಾಗುತ್ತಿದೆ.
* ನಾನು ಯಾರಿಗೂ ಬಗದ್ಗುವುದಿಲ್ಲ.
* ಶೋಭಾ ನಿರಪರಾಧಿ, ರಾಜಿನಾಮೆ ಪಡೆದು ತಪ್ಪು ಮಾಡಿದೆ.
* ನಾನು ಯಾರ ತೋಳ್ಬಲಕ್ಕೂ ಹಣಬಲಕ್ಕೂ ಎದರಿ ರಾಜನಾಮೆ ಪಡೆದಿಲ್ಲ. ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ.
* ನಾನು ಅಸಹಾಯಕ.

ಇದಕ್ಕಿಂತ ಅಸಹಾಯಕ ಮುಖ್ಯಂಮತ್ರಿ ಕರ್ನಾಟಕಕ್ಕೆಂದೂ ಸಿಗದಿರಲಿ ಎಂದು ನಾನುನಂಬದಿರುವ ದೇವರಲ್ಲಿ ಪ್ರಾರ್ಥಿಸುತ್ತೇನೆ!

NADIPREETI said...

ಪ್ರಿಯ ಆದಿತ್ಯ
ಕರ್ನಾಟಕದ ರಾಜಕೀಯ ಹೇಳಲಾಗದಷ್ಟು, ಕೇಳಲಾಗದಷ್ಟು ಹೊಲಸೆದ್ದು ಹೋಗಿದೆ. ನಾಯಿಗಳಂತೆ ಕಚ್ಚಾಡಿದ್ದವರು ಕೊನೆಗೆ ಭಾಯಿ ಭಾಯಿ ಅಂತ ತಬ್ಬಿಕೊಂಡದ್ದು ಹೇಸಿಗೆಯಲ್ಲದೆ ಮತ್ತೇನು. ಇದಕ್ಕೆಲ್ಲ ಪರಿಹಾರವೇ ಇಲ್ಲವೇ?
ಇದೆ...ಜನ ಮಾತ್ರ ಇದಕ್ಕೆ ಉತ್ತರ ಕೊಡಬಲ್ಲರು.ಕೆಲಸ ಮಾಡದ, ಸೊಕ್ಕಿನ ಮಾತಾಡುವ,ಉಡಾಫೆ ಮಾಡುವ, ಥರ್ಡ್ ಕ್ಲಾಸ್ ರಾಜಕೀಯ ಮಾಡುವವರನ್ನ ವಿಧಾನ ಸೌಧದ ಪಡಸಾಲೆಯಿಂದ ಎಳೆದುಕೊಂಡು ಒದೆಯಬೇಕು. ಆಗಲಾದರೂ ಬುದ್ಧಿ ಬಂದೀತೇನೋ? ಆ ದಿನಗಳು ಬರಬಹುದು... ನಾನಂತೂ ಕಾಯುತ್ತಿದ್ದೇನೆ.
ಶುಭವಾಗಲಿ.
ರವಿ ಅಜ್ಜೀಪುರ

umesh desai said...

ದುಡ್ದು ಎಲ್ಲ ಮಾಡಿಸುತ್ತದೆ ಮುಂದಿನಸಾರಿ ವೋಟ್ ಹಾಕುವಾಗ ವಿಚಾರಮಾಡಬೇಕಾದ ಸ್ಥಿತಿ ಯಾಕೆಂದರೆ ಈ ಕತ್ತಲೆಗೆ
ಬೆಳಕು ಇಲ್ಲ ಹಾಗಂತ ಕತ್ತಲೆಗೆ ಬೆಳಕಿದ್ದೆಡೆಗೆ ಹೊರಳುವ ಚೈತನ್ಯವೂ ಇಲ್ಲ.

ಲೋದ್ಯಾಶಿ said...

ಹೇಳೋಕ್ಕೆ ಏನೂ ಉಳಿಸಿಲ್ಲ, ಪೂರ್ತಿ ನೀವೇ ಹೇಳಿದ್ದೀರ. ಇದ್ರ ಬಗ್ಗೆ ಅತೀ ಹೆಚ್ಚು ತಲೆ ಕೆಡಿಸ್ಕೋಂಡ್ರೆ ನಮ್ಮ ಕೆಲಸ, ಸಮಯ ಎಲ್ಲ ಹಾಳಾಗುತ್ತೆ.
ಯಾವುದೇ ಪಕ್ಷ ಇರ್ಲಿ, ಯಾವುದೇ ಮಂತ್ರಿ ಇರ್ಲಿ ಇಲ್ಲಿ ರಾಜಕೀಯದಲ್ಲಿ ಉಳಿಬೇಕು ಅಂದ್ರೆ ಮೊದ್ಲು ತಮ್ಮ ಮನುಷ್ಯತ್ವವನ್ನ ಮಾರಿ ಬಿಟ್ಟು ಬರ್ಬೇಕು.
ಎಲ್ಲೋ ಕೋಟಿಗೊಬ್ರು ಗುಜರಾತ್ "ಮೋದಿ" ಯಂತವ್ರು ಸಿಗ್ತಾರೆ ಅಷ್ಟೆ.

ಈ ರಾಜಕೀಯ ವಿಷ್ಲೇಶಣೆಗಳನ್ನ ಓದಿ, ಓದಿ, ನೋಡಿ, ನೋಡಿ, ಜನ ಸಮಾನ್ಯರೂ ಸಹ ಸಣ್ಣ ಸಣ್ಣ ವಿಷ್ಯಕ್ಕೆಲ್ಲ ಅಸಹ್ಯದ ರಾಜ್ಕೀಯ ಮಾಡೋದು ಕಲಿತಿದಾರೆ.ಅಷ್ಟೆ.

shruts said...

nice :)
i liked the caption very much

Proudly powered by Blogger
Theme: Esquire by Matthew Buchanan.
Converted by LiteThemes.com.