ಆಯೋಗ ರಾಷ್ಟ್ರದಲ್ಲೇ ಮೊಟ್ಟಮೊದಲಬಾರಿಗೆ ರಾಜ್ಯದ ಸಮಸ್ತ ಜನತೆಯ ಜಾತಿವಾರು ಸಾಮಾಜಿಕ-ಆರ್ಥಿಕ ಗಣತಿಯನ್ನು ನಡೆಸಲು ಮುಂದಾಗಿತ್ತು. ಇದಕ್ಕಾಗಿಯೇ ಕೇಂದ್ರ ಸರ್ಕಾರ 20.05 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದ ಪರವಾಗಿ 1 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರು. ಈ ಜಾತಿವಾರು ಜನಗಣತಿ ಮಾಡಿದ್ದರೆ, ರಾಜ್ಯದ ನೈಜ ಸ್ಥಿತಿಗತಿಗಳ ಸ್ಪಷ್ಟ ಪರಿಚಯವಾಗುತ್ತಿತ್ತು. ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಯೂ ಆಗುತ್ತಿತ್ತು. 1931ರ ಜನಗಣತಿಯ ಆಧಾರದ ಮೇಲೆಯೇ ನಾವಿನ್ನೂ ನಮ್ಮ ಮೀಸಲಾತಿಯನ್ನು ನಿಗದಿಗೊಳಿಸುತ್ತಿದ್ದೇವೆ. ಇದನ್ನು ಪರಿಷ್ಕರಿಸಲೇ ಈಗ ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ನಡೆಸಲು ಹೊರಟದ್ದು. ಆದರೆ ಪಟ್ಟಭಧ್ರ ಹಿತಾಸಕ್ತಿಗಳು ಇದನ್ನು ಒಳಗಿನಿಂದಲೇ ಬೆನ್ನಿಗೆ ಚೂರಿ ಹಾಕಿಬಿಟ್ಟವು. ಈಗ ಅಲ್ಲಿ ನಡೆಯುತ್ತಿರುವುದು ಜಾತಿ ಗಣತಿಯೇ ಹೊರತು ಜಾತಿವಾರು ಸಾಮಾಜಿಕಾರ್ಥಿಕ ಗಣತಿಯಲ್ಲ. ಅದನ್ನು ಮೊಟ್ಟಮೊದಲಬಾರಿಗೆ ಮಾಡಲು ಹೊರಟದ್ದು ಕರ್ನಾಟಕ. ಅದರ ನೇತೃತ್ವ ವಹಿಸಿದ್ದು ಆಯೋಗ. ಆದರೆ ಯಡಿಯೂರಪ್ಪನವರ ಸರ್ಕಾರ ಇದನ್ನು ಆಗಗೊಡಿಸಲೇ ಇಲ್ಲ. ಒಮ್ಮೆ ಈ ಗಣತಿಯನ್ನು ಖಾಸಗೀ ಕಂಪೆನಿಗೆ ವಹಿಸುವುದೆಂದರು. ಮತ್ತೊಮ್ಮೆ ಮಗದೊಂದು. ಒಟ್ಟಾರೆ ಆಗಗೊಡಿಸಲಿಲ್ಲ. ಕಳೆದ 9 ತಿಂಗಳುಗಳಿಂದ ಆಯೋಗವೇ ಇಲ್ಲ, ಇನ್ನು ಇದೆಲ್ಲಿ ಮುಂದುವರೆಯುತ್ತದೆ? ವಾಸ್ತವದ ಬೆಳಕಿಗಂಜುವ ಪಟ್ಟಭಧ್ರ ಹಿತಾಸಕ್ತಿಯಾಗಿ ಹೋಯಿತು ಸರ್ಕಾರ.
ಯಡಿಯೂರಪ್ಪನವರು ಅಧಿಕಾರಕ್ಕೆ ಬರುತ್ತಿದ್ದ ಹಾಗೆ, ತಮ್ಮ ಬೆನ್ನೆಲುಬಾಗಿದ್ದ ಲಿಂಗಾಯತರಿಗೆ ಕೃತಜ್ಞತೆ ಸಲ್ಲಿಸುವ ಹುಕಿ ಹುಟ್ಟಿಕೊಂಡಿತು. ವೃತ್ತಿಯಾಧಾರಿತ ಕೆಳವರ್ಗದ ಜಾತಿಗಳಿಗೆ ಮೀಸಲಾದ 2ಎ ವರ್ಗಕ್ಕೆ ಮತ್ತಷ್ಟು ಜಾತಿಗಳನ್ನು ಸೇರಿಸಿದರು. ಹಿಂದೂ ಸಾದರ, ಸಾದುಗೌಡರ್, ಸಾದುಕುಲ..ಮತ್ತಿತರರ ಜೊತೆ ಸಾದರ ಲಿಂಗಾಯತರನ್ನೂ ಹಿಂದೂ ಸಾದರರ ಕೆಳಗೆ ಸೇರಿಸಿಬಿಟ್ಟರು. ಸಾದರ ಲಿಂಗಾಯತರೇನೂ ವೃತ್ತಿಯಾಧಾರಿತ ಜಾತಿಯಲ್ಲ. ಮೇಲ್ಜಾತಿಯವರನ್ನು ಈ ರೀತಿ ಹಿಂಬಾಗಿಲಿನಿಂದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿ ದೊರಕಿಸಿಕೊಡುವ ರಾಜಕೀಯ ಹುನ್ನಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಈ ವಿಷಯವಾಗಿ ಆಯೋಗವನ್ನು ಮಾತಿಗಾದರೂ ಕೇಳದೆ ಏಕಮುಖಿ ನಿರ್ಧಾರ ಕೈಗೊಂಡ ಯಡಿಯೂರಪ್ಪನವರನ್ನು ದ್ವಾರಕಾನಾಥ್ ಬಹಿರಂಗವಾಗಿ ವಿರೋಧಿಸಿದರು. ಇದರೊಂದಿಗೆ ಯಡಿಯೂರಪ್ಪನವರ ಪಿತ್ಥ ನೆತ್ತಿಗೇರಿತು. ದ್ವಾರಕಾನಾಥ್ ಅವರನ್ನು ಕಿತ್ತೊಗೆಯುವ ಪ್ರಯತ್ನಗಳು ಉಧೃತಗೊಂಡವು.
1995ರ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಗೆ ತಿದ್ದುಪಡಿ ತರುತ್ತಾರೆ. ಈ ತಿದ್ದುಪಡಿಯಲ್ಲಿ ಆಯೋಗದ ಅಧ್ಯಕ್ಷರ ಸ್ಥಾನವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ಸಚಿವನ ಸ್ಥಾನಕ್ಕಿಳಿಸಲಾಗಿದೆ. ಜೊತೆಗೆ ಈ ಹಿಂದೆ ಅಧ್ಯಕ್ಷರ ಕೈಲಿದ್ದ ಆಯೋಗದ ಹಣಕಾಸು ಮತ್ತು ಆಡಳಿತವನ್ನು ಸದಸ್ಯ ಕಾರ್ಯದರ್ಶಿಗೊಪ್ಪಿಸಲಾಗಿದೆ. ಅಲ್ಲಿಗೆ ಆಯೋಗದ ಅಧ್ಯಕ್ಷರು ಕೂಡ ಒಬ್ಬ ಐಎಎಸ್ ಅಧಿಕಾರಿಯ ಕೈಕೆಳಗೆ ಕಾರ್ಯನಿರ್ವಹಿಸಬೇಕು. ಇದರೊಂದಿಗೆ ಒಂದೇ ಏಟಿಗೆ ಆಯೋಗದ ಎಲ್ಲ ನ್ಯಾಯಾಂಗಿಕ ಕೋನಗಳನ್ನೂ ಒಡೆದು ಹಾಕಲಾಗಿದೆ. ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗಗಳಂತೆ ಸಾರ್ವಜನಿಕರ ಸಾಕ್ಷಿಪ್ರಜ್ಞೆಯಂತಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ಹಲ್ಲು ಕಿತ್ತ ಹಾವಾಗಿಸಿ ಸರ್ಕಾರವೆಂಬ ಹಾವಾಡಿಗ ತನ್ನ ಬುಟ್ಟಿಯೊಳಗಿಟ್ಟುಕೊಳ್ಳಲು ಹೊರಟಿದೆ. ಕಡೆಗೆ ಇದು ಮತ್ತೊಂದು ನಿಗಮ ಮಂಡಳಿಯಾಗಿಬಿಡುತ್ತದೆ. ಅದಕ್ಕೊಬ್ಬ ರಾಜಕೀಯ ಪುಢಾರಿ ಅಧ್ಯಕ್ಷನಾಗುತ್ತಾನೆ. ಮುಖ್ಯಮಂತ್ರಿಗಳ ಈ ಪ್ರಸಾದಕ್ಕೆ ಕೃತಾರ್ಥನಾಗಿ ಸರ್ಕಾರದ ಬೂಟು ನೆಕ್ಕುತ್ತಾ ಕಾಲ ದೂಡುತ್ತಾನೆ. ಅಲ್ಲಿಗೆ ಹಾವನೂರರಿಂದ ದ್ವಾರಕಾನಾಥ್ ಅವರವರೆಗಿನ ಒಂದು ಪ್ರಜ್ವಲ ಜನಪರ ಪರಂಪರೆ ಸರ್ಕಾರದ `ಬೂಟಿಗೆ' ಆಹುತಿಯಾಗುತ್ತದೆ. ನಾಡಿನ ಎಲ್ಲ ಪ್ರಜ್ಞಾವಂತರೂ ಇದನ್ನು ವಿರೋಧಿಸಬೇಕಿದೆ.
ಈ ತಿದ್ದುಪಡಿಯನ್ನು ತಂದಾಗ ಇನ್ನೂ ದ್ವಾರಕಾನಾಥ್ ಆಯೋಗದ ಅಧ್ಯಕ್ಷರಾಗಿದ್ದರು. ಅವರು ಈ ತಿದ್ದುಪಡಿಯನ್ನು ಹೈ ಕೋರ್ಟ್ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ಇನ್ನೂ ಜಾರಿಯಲ್ಲಿದೆ. ಆದರೆ ಕಳೆದ ಜುಲೈನಲ್ಲಿ ದ್ವಾರಕಾನಾಥ್ ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಸರ್ಕಾರ ತನ್ನ ತಿದ್ದುಪಡಿಯನ್ನು ಒಂದು ನೋಟಿಫಿಕೇಷನ್ ಮೂಲಕ ಜಾರಿಗೊಳಿಸಿದೆ. ಇದರನ್ವಯ ನೂತನ ಅಧ್ಯಕ್ಷರನ್ನು ಅರಸಲು ಹೊರಟಿದೆ. ಆದರೆ ಈ ಹಲ್ಲು ಕಿತ್ತ ಹಾವಿನ ನಿರುಪಯುಕ್ತ ಹೆಡೆಯಾಗಿ ಕಂಗೊಳಿಸಲು ಯಾವ ಯೋಗ್ಯರೂ ತಯಾರಿಲ್ಲ. ಅವರನ್ನು ಹುಡುಕುವ ತೀವ್ರ ಪ್ರಯತ್ನವನ್ನೇನೂ ಸರ್ಕಾರ ಮಾಡಿಲ್ಲ. ಅಧ್ಯಕ್ಷರೇ ಇಲ್ಲದ ಆಯೋಗ ಸರ್ಕಾರಕ್ಕೆ ಇನ್ನೂ ಹಿತ. ಸರ್ಕಾರದ್ದು ಒಂದು ದಿವ್ಯ ಅವಜ್ಞೆ. ಹೈ ಕೋರ್ಟ್ನ ತಡೆಯಾಜ್ಞೆ ಇನ್ನೂ ತೆರವಾಗಿಲ್ಲ. ಆಗಲೇ ಸರ್ಕಾರ ತನ್ನ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಇದು ನ್ಯಾಯಾಂಗ ನಿಂದನೆಯಲ್ಲವೇ? ಹೌದು. ಆದರೆ ಸರ್ಕಾರದ ವಾದವೇ ವಿಚಿತ್ರ. ದ್ವಾರಕಾನಾಥ್ ಅವರು ಅರ್ಜಿ ಹಾಕಿ ಇದನ್ನು ಅಮಲುಗೊಳಿಸದಿರಲು ತಡೆಯಾಜ್ಞೆ ತಂದರು. ಇಂದು ಅವರ ಅಧಿಕಾರಾವಧಿಯೇ ಮುಗಿದಿದೆ. ಹಾಗಾಗಿ ತಂತಾನೇ ಈ ತಡೆಯಾಜ್ಞೆ ತೆರವಾಗಿದೆಯಂತೆ! ಆದರೆ ಈ ತಿದ್ದುಪಡಿಯನ್ನು ಪ್ರಶ್ನಿಸಿದ್ದ ದ್ವಾರಕಾನಾಥ್ ಅವರ ಮುಖ್ಯ ಅರ್ಜಿಗಿನ್ನೂ ಜೀವವಿದೆ. ವಾದ ಪ್ರತಿ ವಾದಗಳು ನಡೆಯುತ್ತಿವೆ. ಕಳೆದ ವಾರ ಕೂಡ ಆಯೋಗದ ಹಿಂದಿನ ಅಧ್ಯಕ್ಷ ಪ್ರೊ. ರವಿವರ್ಮಕುಮಾರ್ ಸರ್ಕಾರದ ವಿರುದ್ಧ ತಮ್ಮ ವಾದ ಮಂಡಿಸಿದರು. ಇಷ್ಟರಲ್ಲೇ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕೇಸನ್ನು ಹಾಕುವುದಾಗಿ ಸಿ.ಎಸ್. ದ್ವಾರಕಾನಾಥ್ ಹೇಳುತ್ತಾರೆ. ಅದರ ತಯಾರಿ ನಡೆದಿದೆ.













