ನೈಸ್ ಪುರಾಣ - 7 ನೈಸ್ ಜನನವೂ ಜನಕನೂ ಎಲ್ಲವೂ ಪ್ರಶ್ನಾರ್ಹವೇ!

ಕಳೆದ ಬಾರಿ ನಾವು ಫ್ರೇಂವರ್ಕ್ ಅಗ್ರೀಮೆಂಟಿನ ಅನೇಕ ಉಪ ಹಗರಣಗಳ ಬಗ್ಗೆ ತಿಳಿದುಕೊಂಡೆವು. ಹಾಗೆಯೇ ಇಡಿಯ ಫ್ರೇಂವರ್ಕ್  ಅಗ್ರೀಮೆಂಟಿನ ಪರಮ ನಿರ್ಲಜ್ಜ ಕ್ಲಾಸ್ ಆದ ಆರ್ಬಿಟ್ರೇಷನ್ ಬಗ್ಗೆಯೂ ಕೊಂಚ ತಿಳಿದುಕೊಂಡಿದ್ದೆವು. ಈ ಆರ್ಬಿಟ್ರೇಷನ್ನ ಕ್ಲಾಸ್ ಏನಿದೆ, ಅದೇ ಖೇಣಿ ಸಾಹೇಬರನ್ನು ಯಾವುದೇ ಸರಕಾರೀ ಕ್ರಮಗಳಿಂದ ಬಚಾವು ಮಾಡುತ್ತಿದೆ. ಆರ್ಬಿಟ್ರೇಷನ್ನ ಕ್ಲಾಸ್ ಇಷ್ಟು ಜಟಿಲವಾಗಿಲ್ಲದಿದ್ದರೆ ಯಾವತ್ತಿಗೋ ಈ ಬಿಎಂಐಸಿಪಿ ಪ್ರಾಜೆಕ್ಟ್ ಸರ್ಕಾರದ ವಶವಾಗುತ್ತಿತ್ತು, ಇಲ್ಲ ಇನ್ನೊಂದು ಕಂಪೆನಿಯ ಪಾಲಾಗುತ್ತಿತ್ತು. ಇದರಿಂದ ಆತನನ್ನು ಕಾಪಾಡುತ್ತಿರುವುದೇ ಈ ಕ್ಲಾಸ್.  ಆರ್ಟಿಕಲ್ 18 ಇದನ್ನು ವಿವರಿಸುತ್ತದೆ. ಇದರ ಪ್ರಕಾರ ಏನೇ ಡಿಸ್ಪ್ಯೂಟ್ಗಳು ಎದುರಾದರೂ 30 ದಿನಗಳೊಳಗೆ ಉಭಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಸರ್ಕಾರ ಮತ್ತು ಕಂಪೆನಿ ಇಬ್ಬರಿಗೂ ಒಪ್ಪಿಗೆಯಾಗತಕ್ಕಂತಹ ತಜ್ಞರ ಸಮಿತಿಗೆ ಅದನ್ನು ಒಪ್ಪಿಸಬೇಕು. ಅದಕ್ಕೆ 60 ದಿನಗಳ ಕಾಲಾವಕಾಶ. ಇನ್ನು ಈ ತಜ್ಞರ ಸಮಿತಿಯ ಶಿಫಾರಸನ್ನು ಕಂಪೆನಿ ಒಪ್ಪಬಹುದು ಇಲ್ಲ ತಿರಸ್ಕರಿಸಬಹುದು. ಹಾಗಾದರೆ ತಜ್ಞರ ಸಮಿತಿಯೇಕೋ? ಇಲ್ಲ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಆಬರ್ಿಟ್ರೇಶನ್ಗೆ ಹೋಗಬೇಕು. ಸರ್ಕಾರ ಮತ್ತು ಕಂಪೆನಿ ಇಬ್ಬರೂ ತಮ್ಮ ತಮ್ಮ ಪರವಾಗಿ ಒಬ್ಬರನ್ನು ಆರ್ಬಿಟ್ರೇಟರ್ ಆಗಿ ನೇಮಿಸತಕ್ಕದ್ದು. ನಂತರ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್, ಪ್ಯಾರಿಸ್ ಮೂರನೆಯ ನ್ಯೂಟ್ರಲ್ ಆರ್ಬಿಟ್ರೇಟರ್ ಅನ್ನು ನೇಮಿಸುತ್ತದೆ. ಈ ಆಬಿಟ್ರೇಷನ್ ನ್ಯೂ ಯಾರ್ಕ್ ಕನ್ವೆಂಷನ್ 1958ರಂತೆ ನಡೆಯುತ್ತದೆ. ಈ ಆರ್ಬಿಟ್ರೇಶೇನ್ ಕಮಿಟಿ ನೀಡುವ ತೀರ್ಪೇ ಅಂತಿಮ. ಅದನ್ನು ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ! ಈ ಆರ್ಬಿಟ್ರೇಷನ್ ನಡೆಸಬೇಕಾದ ಸ್ಥಳ ಯಾವುದು ಗೊತ್ತಾ - ಲಂಡನ್ ಕೋರ್ಟ್! ಅಂದರೆ ಹೆಮ್ಮಿಗೇಪುರ ಕುಂಬಳಗೋಡಿನ ರೈತ ಲಂಡನ್ ಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕು! ಇದಲ್ಲವೇ ಕುಚೋದ್ಯ?

ಇಂಥದೊಂದು ಆರ್ಬಿಟ್ರೇಷನ್ ಕ್ಲಾಸ್ ಯಾಕಾಗಿ ಬೇಕಿತ್ತು? ಮೂಲ ಒಪ್ಪಂದದ ಕಾಲದಲ್ಲೇ ಇದರ ಮಾತಾಗಿತ್ತು. ಹಾಗಾದರೆ ದೇವೇಗೌಡರು ಇದಕ್ಕೆ ಯಾಕೆ ಒಪ್ಪಿಕೊಂಡರು? ಅವರು ಅದಕ್ಕೂ ಒಂದು ಸಮರ್ಥನೆ ತಯಾರಿಟ್ಟುಕೊಂಡಿದ್ದಾರೆ. ಮೂಲ ಒಪ್ಪಂದ ನಡೆದದ್ದು Kalyani Group (Pune), SAB Engineering (Pennsylvania, USA) and Vanasse Hangen Brustlin (VHB) (Boston, USA) ಎಂಬ ಮೂರು ಕಂಪೆನಿಗಳನ್ನೊಳಗೊಂಡ ಒಂದು ಕನ್ಸಾರ್ಶಿಯಂನೊಂದಿಗೆ. ಇಲ್ಲಿ ಎರಡು ವಿದೇಶಿ ಕಂಪೆನಿಗಳಿವೆ. ಹಾಗಾಗಿ ಆರ್ಬಿಟ್ರೇಷನ್ ಅನ್ನು 3ನೇ ದೇಶವೊಂದಕ್ಕೆ ಸ್ಥಳಾಂತರಿಸುವುದರ ಮಾತಾಯಿತು ಎನ್ನುತ್ತಾರೆ ದೇವೇಗೌಡರು. ಇಂತಹ ಪರಿಸ್ಥಿತಿಯಲ್ಲಿ ಇಂತಹ ಆರ್ಬಿಟ್ರೇಷನ್ ಕ್ಲಾಸ್ಗಳ ಕರಾರಾಗುವುದು ಸಹ ಸಹಜ. ಇಂದಿಗೂ ಇದು ನಡೆಯುತ್ತಿದೆ. ಆದರೆ ಪ್ರಶ್ನೆ ಅದಲ್ಲ. ಏಪ್ರಿಲ್ 3 1997ರಂದು ಕರ್ನಾಟಕ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟ್ ಅಂತ ಮಾಡಿಕೊಂಡದ್ದು, ಈ ವಿದೇಶೀ ಕಂಪೆನಿಗಳೊಂದಿಗಲ್ಲ, ಬದಲಿಗೆ ನೈಸೆಲ್ ಲಿಮಿಟೆಡ್ ಎಂಬ ಕಂಪೆನಿಯೊಂದಿಗೆ! ಮೂಲ ಒಪ್ಪಂದದ ಕಾಲದಲ್ಲಿ ನೈಸ್ ಅನ್ನುವ ಕಂಪೆನಿಯೇ ಅಸ್ತಿತ್ವದಲ್ಲಿರಲಿಲ್ಲ. ಅದು ಜನ್ಮ ತಾಳಿದ್ದೇ ಸೆಪ್ಟೆಂಬರ್ 9, 1996ರಂದು! ಅಂದರೆ ಫ್ರೇಂವರ್ಕ್ ಅಗ್ರೀಮೆಂಟ್ ಆಗುವುದಕ್ಕೂ ಕೇವಲ 6 ತಿಂಗಳ ಮುಂಚೆ. ಈ ನೈಸ್ ಕಂಪೆನಿ ಯಾರದು? ಮೂಲ ಒಪ್ಪಂದ ಒಂದು ಕಂಪೆನಿಯೊಂದಿಗಾಗಿ, ಫ್ರೆಂವರ್ಕ್ ಅಗ್ರೀಮೆಂಟ್ ಮತ್ತೊಬ್ಬರೊಟ್ಟಿಗಾಗುತ್ತಾ?! 

ಫೆಬ್ರವರಿ 20, 1995ರಂದು ಮೆಸ್ಸಾಚುಟಸ್ ರಾಜ್ಯದ ಗವರ್ನರ್ರ `ದಿವ್ಯ ಸಾನ್ನಿಧ್ಯ'ದಲ್ಲಿ ಈ ಪ್ರಾಜೆಕ್ಟ್ನ ಕುರಿತಾಗಿ ಮೂಲ ಒಪ್ಪಂದ ಅಂತ ಆಗಿರುವುದು Kalyani Group (Pune), SAB Engineering (Pennsylvania, USA) and Vanasse Hangen Brustlin (VHB) (Boston, USA) ಎಂಬ ಮೂರು ಕಂಪೆನಿಗಳನ್ನೊಳಗೊಂಡ ಕನ್ಸಾರ್ಶಿಯಂನೊಂದಿಗೆ. ಆದರೆ ತದನಂತರ ಸೆಪ್ಟೆಂಬರ್ 9, 1996ರಂದು ಕನ್ಸಾರ್ಶಿಯಂನ ಮೂವರೂ ಸದಸ್ಯರೂ ಒಂದು ಒಪ್ಪಂದಕ್ಕೆ ಬಂದು consent and acknowledgement agreement ಎಂಬ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಅದರಂತೆ ವಿಎಚ್ಬಿ, ಸಬ್ ಇಂಜಿನಿಯರಿಂಗ್ ಮತ್ತು ಬಾಬಾ ಕಲ್ಯಾಣಿ ಸಂಸ್ಥೆಗಳು ಬಿಎಂಐಸಿ ಪ್ರಾಜೆಕ್ಟ್ ಅನ್ನು ಅನುಷ್ಠಾನಗೊಳಿಸಲೆಂದೇ ಒಂದು ಉಪ ಕಂಪೆನಿಯನ್ನು Special Purpose ವೆಹಿಕ್ಲೆ ಎಂದು ಇದಕ್ಕಾಗೇ ಹುಟ್ಟುಹಾಕಿದ್ದಾರೆ. ಈ ಕಂಪೆನಿಯನ್ನು ಅವರು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್ ಲಿಮಿಟೆಡ್ ಎಂದು ಕರೆದಿದ್ದಾರೆ. ಇದೇ NICEL. ಇಂತಿಪ್ಪ ಈ ಒಪ್ಪಂದಕ್ಕೆ ವಿಎಚ್ಬಿಯ ಉಪಾಧ್ಯಕ್ಷ, ಸಬ್ ಇಂಜಿನಿಯರಿಂಗ್ನ ಅಧ್ಯಕ್ಷ ಮತ್ತು ಕಲ್ಯಾಣಿ ಗ್ರೂಪ್ ಪರವಾಗಿ ಬಾಬಾ ಕಲ್ಯಾಣಿಯವರು ಸಹಿ ಹಾಕಿದ್ದಾರೆಂದು, ಅಶೋಕ ಖೇಣಿಯವರು ಹೇಳಿಕೊಳ್ಳುತ್ತಾರೆ. the Kalyani Group VHB and SAB shall agree to maintain at all times directly or indirectly a collective 15% beneficial equity interest in the company ಎಂಬ ಕರಾರು ಕೂಡ ಈ ಒಪ್ಪಂದದಲ್ಲಿದೆ. ಏಪ್ರಿಲ್ 27 1997ರ ಸರ್ಕಾರದ ಆದೇಶದಲ್ಲಿ ಸರ್ಕಾರ ಈ ಮೇಲ್ಕಂಡ ಒಪ್ಪಂದವನ್ನು ಅನುಮೋದಿಸಿ, ಆದೇಶ ಹೊರಡಿಸಿದೆ. ಅಂದರೆ, ಏಪ್ರಿಲ್ 27ರಂದು ಸರ್ಕಾರ ಈ ಒಪ್ಪಂದಕ್ಕೆ ತನ್ನ ಅನುಮೋದನೆ ಸೂಚಿಸಿದ್ದು, ಏಪ್ರಿಲ್ 3 1997ರಂದೇ ಇದೇ ನೈಸೆಲ್ ಕಂಪೆನಿಯೊಂದಿಗೆ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟಿಗೆ ಸಹಿ ಹಾಕುತ್ತದೆ!

ಹೀಗೆ ನೈಸೆಲ್ ಎಂಬ ಒಂದು ಹೊಸ ಕಂಪೆನಿಯನ್ನೇ ಹುಟ್ಟುಹಾಕುವ ಅವಶ್ಯಕತೆಯೇನಿತ್ತು? ಅಂತ ಕೇಳಿದರೆ ಖೇಣಿ ಸಾಹೇಬರದು ಸಿದ್ಧ ಉತ್ತರ. ವಿಎಚ್ಬಿ ಕಂಪೆನಿಯ ಕೇಂದ್ರ ಕಛೇರಿಯಿರುವುದು ಬಾಸ್ಟನ್ನಲ್ಲಿ, ಸಬ್ ಇಂಜಿನಿಯರಿಂಗ್ದು ಪೆನ್ಸೆಲ್ವೇನಿಯಾದಲ್ಲಿ, ಕಲ್ಯಾಣಿ ಗ್ರೂಪ್ನದು ಪುಣೆಯಲ್ಲಿ. ಹಾಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿದ್ದರೆ ಅನುಕೂಲವಾಗುತ್ತದೆಂದು ಮೂವರೂ ಸೇರಿ ಈ ಕಂಪೆನಿಯನ್ನು ಹುಟ್ಟು ಹಾಕಿರುವುದಾಗಿ ಉಲಿಯುತ್ತಾರೆ. ಹೀಗೆ Special Purpose Vehicleಗಳನ್ನು ರಚಿಸುವುದು ಏನು ಅಂಥ ವಿಶೇಷವೇನಲ್ಲ, ಇದು ಸಹಜ ವಾಡಿಕೆ. ಆದರೆ ಪ್ರಶ್ನೆ ಅದಲ್ಲ ಖೇಣಿ ಸಾಹೇಬರು ಹೇಳುವ ಈ "consent and acknowledgement agreement." ಏನಿದೆಯಲ್ಲ, ಅದರ ಸತ್ಯಾಸತ್ಯತೆಯ ಬಗ್ಗೆಯೇ ಹಲವಾರು ಅನುಮಾನಗಳಿವೆ. ದೇವೇಗೌಡರು ಅದನ್ನು ಒಂದು ಫೋಜ್ಡರ್್ ಡಾಕ್ಯುಮೆಂಟ್ ಎಂದು ಅನುಮಾನಿಸುತ್ತಾರೆ. ಅವರ ಮಾತು ಹಾಗೆ ಇರಲಿ ಬಿಡಿ. ಆದರೆ ಮಾರ್ಚ್ 2001ರಲ್ಲಿ ಬಿಎಂಐಸಿಪಿಯಲ್ಲಿ ವಿಎಚ್ಬಿ ಕಂಪೆನಿಯ ಪಾತ್ರದ ಕುರಿತು ಪ್ರಶ್ನಿಸಿದಾಗ ವಿಎಚ್ಬಿ ಕಂಪೆನಿಯ ಬೋರ್ಡ್ ಛೇರ್ಮನ್ ರಿಚರ್ಡ್ ಹ್ಯಾಂಗೆನ್ 1995ರಿಂದೀಚೆಗೆ ವಿಎಚ್ಬಿ ಕಂಪೆನಿಯು ಬಿಎಂಐಸಿ ಪ್ರಾಜೆಕ್ಟಿನಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇಷ್ಟೇ ಅಲ್ಲದೆ "We do not know of the existence of any scope defining a future role for [VHB]." ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಏನು ಹೇಳುವುದು? 

ಅಲ್ಲಿಗೆ ವಿಎಚ್ಬಿ ಕಂಪೆನಿ ಬಿಎಂಐಸಿ ಪ್ರಾಜೆಕ್ಟಿನಿಂದ 1995ರಷ್ಟು ಹಿಂದೆಯೇ ಹೊರನಡೆದಿದೆಯಾ? ವಿಎಚ್ಬಿಯ ಬೋರ್ಡ್ ಛೇರ್ಮನ್ ರಿಚರ್ಡ್  ಹ್ಯಾಂಗೆನ್ರ ಹೇಳಿಕೆ ನೋಡಿದರೆ ಹಾಗೇ ಅನ್ನಿಸುತ್ತದೆ. ಹಾಗಾದರೆ 1997ರ ಅಗ್ರೀಮೆಂಟು? ಅದೇ ಒಂದು ದೊಡ್ಡ ಮಿಸ್ಟರಿ! ಇವತ್ತಿಗೂ ಇನ್ನೂ ಅದರ ಪರದೆ ಸರಿದಿಲ್ಲ. ಆದರೆ 1999ರ ಪ್ರಾಜೆಕ್ಟ್ ಡಾಕ್ಯುಮೆಂಟ್ಗಳಲ್ಲಿ ಕೂಡ ವಿಎಚ್ಬಿ ಕಂಪೆನಿಯನ್ನು ನೈಸ್ನ ಒಬ್ಬ ಸದಸ್ಯನಾಗಿ ತೋರಿಸಲಾಗಿದೆ. ಇವತ್ತಿಗೂ ಸಹ ನೈಸ್ ಕಂಪೆನಿಯ ಅಫಿಷಿಯಲ್ ವೆಬ್ಸೈಟು ವಿಎಚ್ಬಿಯನ್ನು ಬಿಎಂಐಸಿ ಪ್ರಾಜೆಕ್ಟಿನ ಲೀಡ್ ಇಂಜಿನಿಯರ್ ಎಂದು ತೊರಿಸುತ್ತದೆ! ಇದೊಂದು ದೊಡ್ಡ ಫ್ರಾಡ್. ಸತತ ಬಂದ ಸರ್ಕಾರಗಳು ಇದನ್ನು ತನಿಖೆಗೊಳಪಡಿಸದೆ ಇರುವುದು ನಮ್ಮ ವ್ಯವಸ್ಥೆಯ ಕುಚೋದ್ಯ. ಇನ್ನು ಸಬ್ ಇಂಜಿನಿಯರಿಂಗ್. ಪೆನ್ಸಿಲ್ವೇನಿಯಾದಲ್ಲಿ ರಿಜಿಸ್ಟರ್ ಆಗಿರುವ ಸಬ್ ಇಂಜಿನಿಯರಿಂಗ್ ಎಂಬ ಕಂಪೆನಿಗೆ ನಮ್ಮ ಖೇಣಿ ಸಾಹೇಬರು ಮುಖ್ಯಸ್ಥರು. ಮೂಲ ಒಪ್ಪಂದದಲ್ಲೂ ಸಬ್ ಇಂಜಿನಿಯರಿಂಗ್ ಪರವಾಗಿ ಸಹಿ ಹಾಕಿರುವುದು ಖೇಣಿ ಸಾಹೇಬರೇ. ಇದೊಂದು ಷೆಲ್ ಕಂಪೆನಿ. ಇಂತಿಪ್ಪ ಈ ಪುಡಿಗಾಸು ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ ಇಂದು ನೈಸ್ಗೂ ಸಹ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಸಬ್ ಇಂಜಿನಿಯರಿಂಗ್ ಅನ್ನು ಇಂಡಿಯನ್ ಕಂಪೆನಿ ರಿಜಿಸ್ಟ್ರಾರ್ನಲ್ಲಿ ಡಿಫಾಲ್ಟರ್ ಎಂದು ಗುರತಿಸಲಾಗಿದೆ. ಇಂತಿಪ್ಪ ಈ ಕಂಪೆನಿಗೆ ಹಿಂದೆ ಯಾವುದೇ ಬೃಹತ್ ಪ್ರಾಜೆಕ್ಟ್ ಮಾಡಿದ ಅನುಭವವಿಲ್ಲ. ಆದರೆ ಇಂದು ಇದೇ ಸಬ್ ಇಂಜಿನಿಯರಿಂಗ್ ಎಂಬ ಷೆಲ್ ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ, ಸಹಸ್ರಾರು ಕೋಟಿಗಳ ಮೊತ್ತದ ನೈಸ್ ಸಾಮ್ರಾಜ್ಯಕ್ಕೆ ಅಧಿಪತಿ.

ಅಲ್ಲಿಗೆ ನೈಸ್ ಕಂಪೆನಿಯ ಜನನವೂ ಜನಕನೂ ಎಲ್ಲವೂ ಪ್ರಶ್ನಾರ್ಹವೇ ಆದಂತಾಯಿತು. ನೈಸ್ ಪುರಾಣದ ಮೂಲವೇ ಪ್ರಶ್ನಾರ್ಹ! ಇರಲಿ ನೈಸೆಲ್ ಕಂಪೆನಿಯ ಬಗ್ಗೆ ಇಷ್ಟೆಲ್ಲಾ ಯಾಕೆ ವಿವರಿಸಬೇಕಾಯಿತೆಂದರೆ ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ. 18 ವಿವರಿಸುವ ಆರ್ಬಿಟ್ರೇಷನ್ ಕ್ಲಾಸ್ನಲ್ಲಿನ ಹಗರಣವನ್ನು ಬಿಡಿಸಿಡುವುದಕ್ಕೆ. ಒಂದು ಹಗರಣದ ಮೂಲ ಹುಡುಕಹೊರಟರೆ ಮತ್ತೊಂದಿಷ್ಟು ಸಿಗುತ್ತವೆ ಈ ನೈಸ್ ಪುರಾಣದಲ್ಲಿ. ಇರಲಿ. ಆರ್ಬಿಟ್ರೇಷನ್ನ ಬಗ್ಗೆ ದೇವೇಗೌಡರೇನು ಹೇಳಿದರು - ಇಲ್ಲಿ ಎರಡು ವಿದೇಶಿ ಕಂಪೆನಿಗಳಿರುವುದರಿಂದ ಆರ್ಬಿಟ್ರೇಷನ್ ಅನ್ನು 3ನೇ ದೇಶವೊಂದಕ್ಕೆ ಸ್ಥಳಾಂತರಿಸುವುದರ ಮಾತಾಯಿತು ಎಂದರು. ಆದರೆ ಫ್ರೇಂವರ್ಕ್ ಅಗ್ರೀಮೆಂಟ್ ಆಗುವ ಹೊತ್ತಿಗೆ ಯಾವುದಿತ್ತು ಸ್ವಾಮಿ ವಿದೇಶೀ ಕಂಪೆನಿ? ಇದ್ದದ್ದು ನೈಸೆಲ್ ಒಂದೇ ಅಲ್ಲವೇ. ಅದರೊಟ್ಟಿಗೆಯೇ ಅಲ್ಲವೇ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟ್ ಮಾಡಿಕೊಂಡದ್ದು? ಮತ್ತೆ ಬೇರೊಂದು ದೇಶದಲ್ಲಿ ಆಬಿಟ್ರೇಷನ್ ಅನ್ನುವ ಕ್ಲಾಸ್ ಯಾಕೆ ಸ್ವಾಮಿ ಬೇಕು? ದುರ್ದೈವ ನಮ್ಮ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ, ಉತ್ತರ ಯಾರ ಬಳಿಯೂ ಇಲ್ಲ.

ಮೋದಿ ತರೂರ್ - ಒಬ್ಬರು ಹಿಟ್ ವಿಕೆಟ್, ಮತ್ತೊಬ್ಬರು ರನ್ ಔಟ್ !!!



ಟ್ವಿಟರ್ನಲ್ಲಿ ಲಲಿತ್ ಮೋದಿ ಎಬ್ಬಸಿದ ಬಂಡಾಯ, ಶಶಿ ತರೂರ್ ಮನಿಸ್ಟ್ರಿಯ ಕೊರಳಿಗೆ ಸುತ್ತಿಕೊಳ್ಳತೊಡಗಿದಾಗ ಇದನ್ನು ಬಹುತೇಕರು storm in the tea cup ಎಂತಲೇ ಭಾವಿಸಿದ್ದರು. ಆದರೆ ದಿನಗಳುರುಳಿದಂತೆ ಈ ವಿಷಯ ತನ್ನದೇ ಆದಂತಹ momentum ಅನ್ನು ಪಡೆದುಕೊಳ್ಳುತ್ತಾ ಸಾಗಿ ನಿಜವಾದ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಈ ಬಿರುಗಾಳಿಗೆ ಮೊದಲ ಬಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್. ಕಡೆಗೂ ಶಶಿ ತರೂರ್ ತಲೆದಂಡವಾಗಿದೆ. ಅದು ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಬಿಡಿ. ಕಡೆಯ ಪ್ರಯತ್ನೆವೆಂಬಂತೆ ಶಶಿ ತರೂರ್ನ ಮನದನ್ನೆ ಸುನಂದಾ ಪುಷ್ಕರ್ ತನಗೆ ದೊರೆತ ಸ್ವೆಟ್ ಈಕ್ವಿಟಿಯನ್ನು ವಾಪಸು ನೀಡಿ, ನೋಡಿ ತಮ್ಮದೇನೂ ಇಲ್ಲ, ಲಂಚವಾಗಿದ್ದರೆ ವಾಪಸು ನೀಡುತ್ತಿದ್ದವೇ ಎಂದು ಪ್ರಶ್ನಿಸುವಂತೆ ನಿಂತರು. ಇದರಲ್ಲೂ ಶಶಿ ತರೂರ್ನ ರಾಜಕೀಯ ಮೌಢ್ಯತೆ ಎದ್ದು ತೋರುತ್ತಿತ್ತು. ಸುನಂದಾ ತನ್ನ ಸ್ವೆಟ್ ಈಕ್ವಿಟಿಯನ್ನು ವಾಪಸ್ಸು ನೀಡಿದ್ದು ಸುನಂದಾ ಶಶಿಯ ಅಣತಿಯಂತೆ ನಡೆದುಕೊಳ್ಳುತ್ತಿದ್ದಾಳೆ ಎಂಬುದನ್ನು ಜಗಜ್ಜಾಹೀರುಗೊಳಿಸಿಬಿಟ್ಟಿತು. ಅಲ್ಲಿಗೆ ಶಶಿ ತರೂರ್ನ ಡಿಫೆನಸ್ಸಿಗೆ ಬೆಲೆಯಿಲ್ಲದಂತಾಯಿತು. ಸರ್ಕಾರಕ್ಕೆ  ಮತ್ತಷ್ಟು ಮುಜುಗರ ತಪ್ಪಿಸಲು ಪ್ರಧಾನಿ ಮನಮೋಹನ ಸಿಂಗರು ಶಶಿ ತರೂರ್ ಅವರ ರಾಜೀನಾಮೆ ಪಡೆದುಕೊಂಡರು.

ಎಲ್ಲರೂ ಇದು ಇಲ್ಲಿಗೆ ಮುಗಿಯುತ್ತದೆ ಎಂದುಕೊಂಡಿದ್ದರು, ಲಲಿತ್ ಮೋದಿಯೂ ಸೇರಿ. ಆದರೆ ಒಬ್ಬ ಕಾಂಗ್ರೆಸ್ ಸಚಿವನ ರಾಜೀನಾಮೆಗೆ ಕಾರಣವಾದ ಇಶ್ಯೂವನ್ನು ಕಾಂಗ್ರೆಸ್ ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತದೆಯೇ, ಅದೂ ಅದರಲ್ಲಿ ಬಿಜೆಪಿ ಮತ್ತು ಎನ್ಸಿಪಿ ಪಕ್ಷಗಳ ರಾಜಕೀಯ ದಾಳಗಳಾಗಿರುವಾಗ? ಸಾಧ್ಯವೇ ಇಲ್ಲ. ಅದರಲ್ಲೂ ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿರುವ, ಬಿಜೆಪಿ ಮತ್ತು ಎನ್ಸಿಪಿಯ ಪರವಾಗಿ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡುತ್ತಿರುವ ಲಲಿತ್ ಮೋದಿಯನ್ನು ಬಿಡುವುದುಂಟೆ? ಐಪಿಎಲ್ ಕೊಚ್ಚಿ ತಂಡದ ಮೂಲಗಳ ಬಗ್ಗೆ ಮೋದಿ ಎತ್ತಿದ ಪ್ರಶ್ನೆಗಳು ಈಗ ಇಡಿಯ ಐಪಿಎಲ್ನ ಕೊರಳಿಗೆ ಬಂದು ಸುತ್ತುವರೆದಿದೆ. ಐಪಿಎಲ್ನಲ್ಲಿ ಸದ್ಯಕ್ಕಂತೂ ಯಾವ ತಂಡವೂ ದುಡ್ಡು ಮಾಡುತ್ತಿಲ್ಲ, ಆದರೂ ಅದು ಹೇಗೆ ಇಷ್ಟು ಅಗಾಧ ಪ್ರಮಾಣದ ದುಡ್ಡು ಹರಿದು ಬರುತ್ತಿದೆ? ಈ ಐಪಿಎಲ್ ತಂಡಗಳ ನಿಜವಾದ ಒಡೆಯರಾರು? ಅವರ ಆದಾಯ ಮೂಲಗಳೇನು? ಇದರಲ್ಲಿ ಭೂಗತ ಜಗತ್ತಿನ ಪಾತ್ರವೇನು? ಇದರಲ್ಲಿ ಹವಾಲಾ ದುಡ್ಡಿದೆಯಾ? ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ನ ಆರೋಪಗಳು ಎಷ್ಟು ನಿಜ? ಇಂಥ ಹಲವಾರು ಪ್ರಶ್ನೆಗಳೆದ್ದಿವೆ ಈಗ. ಇಡಿಯ ಐಪಿಎಲ್ ಅನ್ನು ತನ್ನ ಫೀಫ್ಡಂ ಏನೋ ಎಂಬಂತೆ ನಡೆಸುತ್ತಿರುವ ಲಲಿತ್ ಮೋದಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಬಲ್ಲ!  ಈ ಎಲ್ಲ ಆರೋಪಗಳೂ ಆತನ ಮೇಲೂ ಇವೆ.

ಕಾಂಗ್ರೆಸ್ ಸಚಿವನೊಬ್ಬನ ತಲೆದಂಡ ಪಡೆದ ಲಲಿತ್ ಮೋದಿಯ ತಲೆದಂಡವೂ ಆಗಲೇಬೇಕು. ಸದ್ಯ ಅದು ಕಾಂಗ್ರೆಸ್ನ ಸಿಂಗಲ್ ಪಾಯಿಂಟ್ ಅಜೆಂಡಾ ಇದ್ದ ಹಾಗಿದೆ. ಹಿಂದಿನ ವರ್ಷ ಗೃಹ ಮಂತ್ರಿ ಚಿದಂಬರಂ ಅವರನ್ನು ಎದುರು ಹಾಕಿಕೊಂಡ ಲಲಿತ್ ಮೋದಿ, ಸರ್ಕಾರವನ್ನೇ ಕೇರ್ ಮಾಡದೇ ಐಪಿಎಲ್ ಅನ್ನು ದಕ್ಷಿಣಾಫ್ರಿಕಾಗೆ ಸ್ಥಳಾಂತರಿಸಿದಾಗಲೇ ಸರ್ಕಾರದ ಐಟಿ ಮತ್ತು ಇಡಿ ಖಾತೆಗಳು ಲಲಿತ್ ಮೋದಿಯ ಬೆನ್ನ ಹಿಂದೆ ಬಿದ್ದು, ಆತನ ಕರಾಳ ಸಾಮ್ರಾಜ್ಯದ ಒಂದು ವರದಿಯನ್ನು ತಯಾರು ಮಾಡಿಟ್ಟಿದೆ. ಆದರೆ ಅದರ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಇಂಥ ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆದು ಕಾಂಗ್ರೆಸ್ಗೆ ಮುಜುಗರ ಮಾಡಿದ್ದಕ್ಕಾಗಿ ಸರ್ಕಾರ ಈ ವರದಿಯನ್ನು ಕೋಲ್ಡ್ ಸ್ಟೋರೇಜ್ನಿಂದ ಹೊರತೆಗೆದಿದೆ! ಮೋದಿ ತರೂರ್ ಪ್ರಕರಣದಲ್ಲಿ ತಾನೇನೋ ವಿಷಲ್ ಬ್ಲೋವರ್ ಎಂಬಂತೆ ಪೋಸು ಕೊಟ್ಟ. ಆದರೆ ಒಬ್ಬ ವಿಷಲ್ ಬ್ಲೋವರ್ ಮೊದಲು ಎದುರಿಸಬೇಕಾದ್ದು ತನ್ನ ಸತ್ಯಾಸತ್ಯತೆಯ ಬಗೆಗಿನ ಅನುಮಾನ, ವಿಚಾರಣೆಗಳನ್ನು ಎಂಬುದು ಲಲಿತ್ ಮೋದಿಗೆ ತಿಳಿದಿರುವ ಹಾಗೆ ಕಾಣೆ! ಈಗ ಅನುಭವಿಸುತ್ತಿದ್ದಾರೆ. ಕೂಡಲೇ ಲಲಿತ್ ಮೋದಿಯ ಕಛೇರಿಯ ಮೇಲೆ ಐಟಿ ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯ ಲಲಿತ್ ಮೋದಿಯನ್ನು ಪ್ರಶ್ನಿಸಲು ಕಾಯುತ್ತಿದ್ದಾರೆ. ಸರ್ಕಾರ ಎಲ್ಲಾ ಐಪಿಎಲ್ ತಂಡಗಳ ಬಿಡ್ಗಳು, ಫ್ರಾಂಚೈಸಿ ಪೇಪರ್ಗಳು, ಪ್ಲೇಯರ್ ಕಾಂಟೃಆಕ್ಟುಗಳು, ಹೂಡಿಕೆದಾರರ ಸಂಪೂರ್ಣ ವಿವರ, ಬಿಸಿಸಿಐನ ಬ್ಯಾಲೆನ್ಸ್ ಷೀಟು ಎಲ್ಲವನ್ನೂ ವಶಪಡಿಸಿಕೊಂಡಿದೆ. ಇನ್ನುಳಿದಂತೆ ಜಾರಿ ನಿರ್ದೇಶನಾಲಯ ಐಪಿಎಲ್ಗೆ ಹರಿದು ಬರುತ್ತಿರುವ ದುಡ್ಡಿನ ಮೂಲಗಳನ್ನು ಅರಸುತ್ತಾ ಮಾರಿಷಸ್ಗೆ ಹೊರಟು ನೀಂತಿದೆ! ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆಯೆಂದರೆ ಹವಾಲಾ ಮುಖಾಂತರ ಮನಿ ಲಾಂಡ್ರಿಂಗ್ ನಡೆಯುತ್ತಿರುವ ಅನುಮಾನ ಇದೆಯೆಂತಲೇ ಅರ್ಥ!

ಇರಲಿ ಬಿಡಿ ಐಟಿ ಇಲಾಖೆಗಳು ಲಲಿತ್ ಮೋದಿಯ ಕರಾಳ ಸಾಮ್ರಾಜ್ಯದ ಬಗ್ಗೆ ತಯಾರು ಮಾಡಿರುವ ಆ ವರದಿಯಲ್ಲಿ ಇನ್ನೂ ಏನೇನಿದೆ? "ಏನೇ ಈವತ್ತು ಆತನನ್ನು ಬಿಸಿನೆಸ್ ಗುರು ಎಂದು ಕರೆದರೂ ಕಳೆದ ನಾಲ್ಕು ವರ್ಷಗಳವರೆಗೆ ಲಲಿತ್ ಮೋದಿಯದು ಎಲ್ಲ ಚಿತ್ರಾನ್ನದ ವೆಂಚರ್ಗಳೇ. ಆದರೆ ಐಪಿಎಲ್ಗೆ ಕೈಯಿಟ್ಟು ಕೂತ ಮೂರೇ ವರ್ಷಗಳಲ್ಲಿ ಆತನ ಲೈಫ್ಸ್ಟೈಲೇ ಬದಲಾಗಿ ಹೋಗಿದೆ. ಆತನ ಬಳಿ ಒಂದು ಪ್ರೈವೇಟು ಜೆಟ್ ವಿಮಾನ, ಲಕ್ಷುರಿ ಹಡಗು, ಅಸಂಖ್ಯ ಬಿಎಂಡಬ್ಲ್ಯೂ ಕಾರುಗಳು ಎಲ್ಲವೂ ಇವೆ. ಇವೆಲ್ಲವನ್ನೂ ಆತ ಕಳೆದ ಮೂರು ವರ್ಷಗಳಲ್ಲೇ ಕೊಂಡುಕೊಂಡಿದ್ದಾನೆ, ಮೂರು ವರ್ಷಗಳ ಹಿಂದೆ ಕೆಲವೇ ಕೆಲವು ಲಕ್ಷಗಳಷ್ಟು ಐಟಿ ಟ್ಯಾಕ್ಸ್ ಕಟ್ಟುತ್ತಿದ್ದ ಇದೇ ಲಲಿತ್ ಮೋದಿ ಈ ವರ್ಷ 11 ಕೋಟಿಗಳಷ್ಟು ಅಡ್ವಾನ್ಸ್ ಟ್ಯಾಕ್ಸ್ ಚೆಲ್ಲಿಸಿದ್ದಾನೆ." ಐಟಿ ವರದಿ ಶುರುವಾಗುವುದೇ ಈ ಸಾಲುಗಳಿಂದ. ಅಲ್ಲಿಗೆ ಈ ವರದಿಯ ಟೋನ್ ಎಂತಹುದು ಎಂಬುದು ನಿಮಗೆ ಅರ್ಥವಾಗಿರುತ್ತದೆ. ಇನ್ನೂ ಮುಂದುವರೆದು ಲಲಿತ್ ಮೋದಿ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿರುವ ಕುರಿತು ಅನುಮಾನಗಳಿರುವುದಾಗಿ ಹೇಳಿಕೊಳ್ಳುತ್ತದೆ. ಬ್ರಿಟನ್ನಲ್ಲಿ ಬೆಟ್ಟಿಂಗ್ ಕಾನೂನು ಬದ್ಧ. ಅಲ್ಲಿನ ಬೆಟ್ ಫೇರ್ ಎಂಬ ಕಂಪೆನಿಯಲ್ಲಿ ಮೋದಿ ಐಪಿಎಲ್ ಬೆಟ್ಟಿಂಗ್ ರಿಂಗ್ ನಡೆಸುತ್ತಿದ್ದಾರೆ ಎಂದಿದೆ ವರದಿ. ಸಮೀರ್ ತುಕ್ರಾಲ್ ಎಂಬ ಡೆಲ್ಲಿ ಮೂಲದ ಉದ್ಯಮಿ, 30 ವರ್ಷಗಳ ಮೋದಿಯ ಖಾಸಾ ಗೆಳೆಯ ಆತನ ಪರವಾಗಿ ಬೆಟ್ ಫೇರ್ನಲ್ಲಿ ಬೆಟ್ಟಿಂಗ್ ಮಾಡುತ್ತಿರುವದಕ್ಕೆ ಆಧಾರಗಳಿವೆ. ಆದೇನಾದರೂ ನಿಜವಾದಲ್ಲಿ ಲಲಿತ್ ಮೋದಿಗಿಂತಲೂ ಐಪಿಎಲ್ ಬಗ್ಗೆ ಇನ್ಸೈಡರ್ ಇನ್ಫರ್ಮೇಷನ್ ಬಲ್ಲ ಮತ್ತೊಬ್ಬನಿರಲಾರ. ಇದೇ ಕೋವಿನಲ್ಲಿ ಆತನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪಗಳೂ ಇವೆ. ಇದಲ್ಲದೆ ಆತನಿಗೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಇಲೆವೆನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಫ್ರಾಂಚೈಸುಗಳಲ್ಲಿ ಗುಪ್ತವಾಗಿ ಬೇನಾಮಿ ಹಿಡಿತಗಳಿವೆ ಎನ್ನುತ್ತದೆ ವರದಿ. ಮೋದಿಯ ಆಪ್ತರ ಕಂಪೆನಿಗಳಲ್ಲೊಂದಾದ ಐಎಂಜಿಗೆ ಐಪಿಎಲ್ನ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಟಿವಿ ರೈಟ್ಸ್ ಅನ್ನು ಬಿಕರಿ ಮಾಡಲಾಗಿದ್ದು, ಕಂಪೆನಿಗೆ ಶೇ.10ರಷ್ಟನ್ನು ಮ್ಯಾನೇಜ್ಮೆಂಟ್ ಫೀ ಎಂದು ನೀಡಲಾಗಿದೆ. ಇದೇ ಸುಮಾರು 80 ಮಿಲಿಯನ್ ಡಾಲರ್ಗಳಷ್ಟಾಗುತ್ತದೆ!

ಈ ಆರೋಪಗಳದು ಒಂದು ತೂಕವಾದರೆ ಮತ್ತೊಂದೆಡೆ ರಾಜಸ್ಥಾನದಲ್ಲೂ ಮೋದಿಗೆ ನೆಮ್ಮದಿಯಿಲ್ಲ. ಲಲಿತ್ ಮೋದಿ ರಾಜಸ್ಥಾನದ ಪದಚ್ಯುತ ಮುಖ್ಯಮಂತ್ರಿ, ಬಿಜೆಪಿಯ ವಸುಂಧರಾ ರಾಜೆ ಸಿಂಧ್ಯಾ ಅವರಿಗೆ ಪರಮಾಪ್ತರು. ಎಷ್ಟರಮಟ್ಟಿಗೆ ಎಂದರೆ ಆ ಅವಧಿಯಲ್ಲಿ ಮೋದಿಯನ್ನು ಬಹುತೇಕರು ಶಾಡೋ ಸಿಎಂ ಎಮದು ಕರೆಯುತ್ತಿದ್ದರು. ಆ ಹಯಾಮಿನಲ್ಲಿ ಆತ ಎಸ್ಇಜೆಡ್, ಇಂಡಸ್ಟ್ರಿ, ಅದೂ ಇದೂ ಅಂತ ಅನೇಕ ಭೂ ಹಗರಣಗಳನ್ನು ಮಾಡಿಕೊಂಡಿದ್ದಾನೆ. ಈಗ ಅಲ್ಲಿರುವುದು ಕಾಂಗ್ರೆಸ್ ಸಕರ್ಾರ. ಹಿರಿಯ ಅನುಭವಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದಾರೆ. ಅವರು ವಸುಂಧರಾ ಅವರ ಕಾಲದಲ್ಲಿ ನಡೆದಿದೆಯೆನ್ನಲಾದ ಎಲ್ಲ ಭೂ ಗಹರಣಗಳ ತನಿಖೆಗೆ ಮಾಥುರ್ ಕಮೀಷನ್ ಅನ್ನು ನೇಮಿಸಿದೆ. ಈಗ ಅದರ ವರದಿಯಲ್ಲೂ ಮೋದಿ ವಿಲನ್ ನಂ.1 ಆಗಿ ಹೊರಹೊಮ್ಮಿದ್ಧಾರೆ. ಒಟ್ಟಿನಲ್ಲಿ ಹೀಗೆ ಗಾಜಿನ ಮನೆಯಲ್ಲಿದ್ದು ಶಶಿಗೆ ಕಲ್ಲೆಸೆಯ ಹೋಗಿ, ಅದು ತಿರುಗಿ ಬಿದ್ದು ಆತನಿಗೇ ಬಡಿದ ಸ್ಥಿತಿ ಲಲಿತ್ ಮೋದಿಯದು.

ಈಗ ಲಲಿತ್ ಮೋದಿಯ ವಿಚಾರವಾಗಿ ಬಿಸಿಸಿಐನಲ್ಲಿ ರಾಜಕೀಯ ಗರಿಗೆದರಿದೆ. ತಾನು ಐಪಿಎಲ್ನ ಹರಿಕಾರ, ಬಿಸಿಸಿಐ ದುಡ್ಡು ನೋಡಿದ್ದೇ ತಾನು ಬಂದ ಮೇಲೆ, ಐಪಿಎಲ್ ಎನ್ನುವುದು ತನ್ನ ಸಾಮ್ರಾಜ್ಯ ಇಲ್ಲಿ ತನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಬೀಗುತ್ತಿದ್ದ ಲಲಿತ್ ಮೋದಿಗೆ ಊರೆಲ್ಲಾ ಶತ್ರುಗಳೇ. ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಶಶಾಂಕ್ ಮನೋಹರ್, ನಿರಂಜನ್ ಷಾ, ರಾಜೀವ್ ಶುಕ್ಲಾ, ರತ್ನಾಕರ್ ಶೆಟ್ಟಿ, ಎಂ.ಶ್ರೀನಿವಾಸನ್ ಎಲ್ಲರನ್ನೂ ಮೋದಿ ಒಂದಲ್ಲಾ ಒಂದು ಕಾರಣಕ್ಕೆ ಕೆರಳಿಸಿದವನೇ. ಆದರೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದಂತಹ ರಾಜಕಾರಣಿಗಳಾದ ಶರದ್ ಪವಾರ್, ಅರೂಣ್ ಜೇಟ್ಲಿ ಮತ್ತು ಫಾರೂಕ್ ಅಬ್ದುಲ್ಲಾರನ್ನು ತನ್ನ ಬೆನ್ನ ಹಿಂದೆ ನಿಲ್ಲಿಸಿಕೊಂಡಿದ್ದ ಬುದ್ಧಿವಂತ ಲಲಿತ್ ಮೋದಿ. ಆತನಿಗೆ ಅದೇ ಧೈರ್ಯ. ಆದರೆ ರಾಜಕೀಯದ ಚದುರಂಗದಾಟ ಲಲಿತ್ ಮೋದಿಯನ್ನು ಬಹಳ ಸುಲಭವಾಗಿ ಓವರ್ ಟೇಕ್ ಮಾಡಿಬಿಟ್ಟಿದೆ.

ಮೋದಿ ಕಛೇರಿ ಮೇಲೆ ಐಟಿ ದಾಳಿ ನಡೆದಾಗ, ಮಿಕ್ಕೆಲ್ಲಾ ಕಾಗದ ಪತ್ರಗಳು ಸಿಕ್ಕಿವೆಯಾದರೂ ಅನುಮಾನಕರ ರೀತಿಯಲ್ಲಿ ಕೊಚ್ಚಿ ತಂಡದ ಇತರೆ ಬಿಡ್ಡರ್ಗಳ ಅತಿಮುಖ್ಯ ಎರಡು ಫೈಲ್ಗಳು ಮಿಸ್ಸಿಂಗ್! ಸಿಸಿ ಟಿವಿ ಫುಟೇಜ್ನಲ್ಲಿ ಮೋದಿ ಆಫೀಸಿನಿಂದ ಒಬ್ಬ ಮಧ್ಯವಯಸ್ಕ ಹೆಂಗಸು ಐಟಿ ದಾಳಿ ನಡೆಯುವ ಕೆಲವೇ ನಿಮಿಷಗಳ ಹಿಂದೆ ಕೆಲವು ಫೈಲುಗಳನ್ನು ಹೊತ್ತೊಯ್ದಿರುವ ದೃಶ್ಯಗಳಿವೆ. ಆಕೆ ವಿಜಯ ಮಲ್ಯನ ಮಲ ಮಗಳು! ಆಕೆ ಮೋದಿ ಕಂಪೆನಿಯಲ್ಲಿ ಸಿಇಒ! ಈಗ ಬಯಲಾಗುತ್ತಿರುವ ಅಂಶವೆಂದರೆ ಐಪಿಎಲ್ ತಂಡ ಪಡೆಯಲು ವಿಫಲವಾದ ಆ ವಿಡಿಯೋಕಾನ್ ಮುನ್ನಡೆಸಿದ ಬಿಡ್ನಲ್ಲಿ ಶರದ್ ಪವಾರ್ ಅಳಿಯ, ಸುಪ್ರಿಯಾ ಸುಳೆಯ ಗಂಡ ಮತ್ತು ಎನ್ಸಿಪಿಯ ಮತ್ತೊಬ್ಬ ನಾಯಕ ಕೇಂದ್ರದ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರ ಪಾಲೂ ಇತ್ತು! ಇವರು ಅಹಮದಾಬಾದ್ ಇಲ್ಲ ನಾಗಪುರಕ್ಕೆ ಐಪಿಎಲ್ ತಂಡವನ್ನು ಹೊತ್ತೊಯ್ಯಬೇಕೆಂದು ಆಶಿಸಿದ್ದರು. ಲಲಿತ್ ಮೋದಿ ರಾನ್ದೆವೋ ಸ್ಪೋರ್ಟ್ಸ್ಗೆ 300 ಮಿಲಿಯನ್ ಡಾಲರ್ಗಳಿಗೆ ಬಿಡ್ ಮಾಡಿ ಸಾಕು, ಮಿಕ್ಕಿದ್ದು ತಾನು ನೊಡಿಕೊಳ್ಳುತ್ತೇನೆ ಎಂದು ಸಲಹೆ ಮಡಿದನೆನ್ನಲಾಗಿದೆ. ಆದರೆ ರಾನ್ದೆವೋ ಸ್ಪೋರ್ಟ್ಸ್ 333.33 ಮಿಲಿಯನ್ ಡಾಲರ್ಗಲಿಗೆ ಬಿಡ್ ಮಾಡಿತು. ವೀಡಿಯೋಕಾನ್ 319 ಮಿಲಿಯನ್ ಡಾಲರ್ ಕೋಟ್ ಮಾಡಿತ್ತು! ನಂತರ ಶರದ್ ಪವಾರ್ ರಾನ್ದೆವೋ ಸ್ಪೋರ್ಟ್ಸ್ ಅನ್ನು ಕರೆದು ಮಾತನಾಡಿದ್ದಾರೆ ಕೂಡ. ಈಗ ಅರ್ಥವಾಯಿತಲ್ಲ? ಲಲಿತ್ ಮೋದಿಯ ಕಾನ್ಫಿಡೆನ್ಸಿಗೆ ಕಾರಣ.

ಈ ಸೂಕ್ಷ್ಮವನ್ನರಿತ ಕಾಂಗ್ರೆಸ್ ಶರದ್ ಪವಾರ್ ಅವರನ್ನು ಕರೆಸಿ, ಮಾತನಾಡಿಸಿದೆ. ಈ ಮೀಟಿಂಗಿನಲ್ಲಿ ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ  ಶರದ್ ಪವಾರ್ ಅವರನ್ನು ತಾವೂ ಸಹ ರಾಜೀನಾಮೆ ನೀಡಬಹುದಲ್ಲವೆ ಎಂದು ಕೇಳಿದೆ. ಅಲ್ಲಿಗೆ ಸಂದೇಶ ಸ್ಪಷ್ಟ - ಲಲಿತ್ ಮೋದಿಯನ್ನು ಕಿತ್ತೊಗೆಯಿರಿ, ಇಲ್ಲದಿದ್ದರೆ ಇದು ತಮ್ಮ ಬುಡಕ್ಕೇ ಬರುತ್ತದೆ. ಶರದ್ ಪವಾರ ಅವರು ಲಲಿತ್ ಮೊದಿಯೊಂದಿಗೆ ನಡೆಸಿದರೆನ್ನಲಾದ ಟೆಲಿಫೋನ್ ಸಂಭಾಷಣೆಯನ್ನು ಸರ್ಕಾರ ಟ್ಯಾಪ್ ಮಾವಿಸಿ ರೆಕಾರ್ಡ್ ಮಾಡಿದ್ದು, ಅದನ್ನು ಬಳಸಿ ಪವಾರ್ ಅವರನ್ನು blackmail ಮಾಡಿದೆಯೆನ್ನುವ ಆರೋಪ ಕೇಳಿ ಬರುತ್ತಿದೆ. ಮೀಟಿಂಗ್ ಒಳಹೊಕ್ಕಾಗಲೂ ಮೋದಿಯನ್ನು ಸಮರ್ಥಿಸುತ್ತಿದ್ದ ಶರದ್ ಪವಾರ್, ಹೊರಬರುವಷ್ಟರಲ್ಲಿ ಮೋದಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಉಲಿಯ ತೊಡಗಿದ್ದಾರೆ. ಅಲ್ಲಿಗೆ ಲಲಿತ್ ಮೋದಿಗಿದ್ದ ಕಡೆಯ ಹುಲ್ಲು ಕಡ್ಡಿಯ ಆಸರೆಯೂ ಇಲ್ಲದಂತಾಯಿತು. ನಿನ್ನೆ ಅಂದರೆ ಏಪ್ರಿಲ್ 26ರಂದು ನಡೆದ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮೀಟಿಂಗಿನಲ್ಲಿ ಲಲಿತ್ ಮೋದಿಯನ್ನು ಐಪಿಎಲ್ ಕಮೀಷನರ್ ಹುದ್ದೆಯಿಂದ ಕಿತ್ತೊಗೆಯಲಾಯಿತು. ಆತನಿಗೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಕೂಡ ಅವಕಾಶವಿಲ್ಲದೆ!

ಆದರೆ ಮೋದಿಯನ್ನು ಹೊರಗೆಳೆಯುವುದು ಅಷ್ಟು ಸುಲಭದ ಮಾತಲ್ಲ. he is not going to go without a fight . ಈಗಾಗಲೇ ಮೋದಿ ವರ್ಸೆಸ್ ಥಿ ರೆಸ್ಟ್ ಎಂಬಂತಹ ಯುದ್ಧವೊಂದು ಚಾಲ್ತಿಯಲ್ಲಿದೆ. ಇದು ಬಿಚ್ಚಿಕೊಳ್ಳುತ್ತಿರುವುದು ಮೀಡಿಯಾದಲ್ಲಿ. ಶಶಿ ತರೂರ್ ಒಂದು ಲೀಕ್ ಕೊಟ್ಟರೆ, ಮೊದಿ ಕ್ಯಾಂಪಿನವರು ಎರಡು ಲೀಕ್ ಕೊಡುತ್ತಾರೆ. ಇತ್ತ ಕಾಂಗ್ರೆಸ್ ಮೋದಿ ವಿರುದ್ಧದ ಐಟಿ ವರದಿಯನ್ನು ಸೆಲೆಕ್ಟಿವ್ ಆಗಿ ಮೀಡಿಯಾಗೆ ಲೀಕ್ ಮಡುತ್ತಿದ್ದರೆ, ಅತ್ತ ಲಲಿತ್ ಮೋದಿ ಐಪಿಎಲ್ ಬಗ್ಗೆ ನಾನು ಕೆಲವು ಹಿರಿಯ ರಾಜಕಾರಣಿಗಳ ಜೊತೆ ನಡೆಸಿರುವ ಸಂಭಾಷಣೆಯನ್ನು ಟೇಪ್ ಮಾಡಿಟ್ಟುಕೊಂಡಿದ್ದೇನೆ, ಫೋನ್ ಮಾತುಕತೆ ರೆಕಾರ್ಡ್ ಆಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲಿಗೆ ಅವರು ಕೊಡುತ್ತಿರುವ ಸಂದೇಶ ಸ್ಪಷ್ಟ - ನಾನು ಮೂಳುಗುವುದೇ ನಿಜವಾದರೆ, ನಾನೊಬ್ಬನೇ ಯಾಕೆ, ಎಲ್ಲರನ್ನೂ ಜೊತೆಗೆಳೆದುಕೋಮಡೇ ಮೂಳುಗುತ್ತೇನೆ ಹುಷಾರ್! ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದೂ ಕೂಡ ಇದಾವುದನ್ನೂ ಈವರೆಗೂ ಪ್ರಶ್ನಿಸದ ಇವರು ಈಗ ಇದ್ದಕ್ಕಿದ್ದ ಹಾಗೇ ಪತಿವ್ರೆತೆಗಳಾಗ ಹೊರಟರೆ? ಇಷ್ಟು ದಿನ ಪ್ರಶ್ನಿಸದೇ ಉಳಿದರು ಎಂದರೆ ಇವರಿಗೂ ಅದರಿಂದ ಲಾಭವಿತ್ತು ಅಂತಲ್ಲವೇ? ಇದರ ಪುರಾವೆಗಳಿಲ್ಲದಿರುತ್ತವೆಯೇ ಲಲಿತ್ ಮೋದಿಯ ಬಳಿ? ಹಾಗಾಗಿ ಲಲಿತ್ ಮೋದಿಯನ್ನು ಕ್ರಿಕೆಟ್ನಿಂದ ಹೊರಹಾಕುವುದು ಅಷ್ಟು ಸುಲಭವಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಆತನನ್ನು ಐಪಿಎಲ್ ಕಮೀಷನರ್ ಹುದ್ದೆಯಿಂದ ಕೆಳಗಿಲಿಸಲಾಗಿದೆಯಾದರೂ ಆತನನ್ನು ಬಹುಶಃ  ಬಿಸಿಸಿಐನಡಿಯಲ್ಲಿ ಬರುವ ಯಾವುದಾದರೂ ಸಬ್ ಕಮಿಟಿಯನ್ನು ಮೋದಿಗೆ ಕೊಡಬಹುದು. ಆದರೆ ಇದನ್ನು ಲಲಿತ್ ಮೋದಿ ಹೇಗೆ ಸ್ವೀಕರಿಸುತ್ತಾನೋ ನೋಡಬೇಕು.

ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನ ಅನುಕರಣೆಯಾಗಿ, ಕಪಿಲ್ ದೇವ್ರ ಸಕಾರಣ ಬಂಡಾಯದಿಂದ ಉಗಮವಾದ ಐಸಿಎಲ್ಗೆ ಸೆಡ್ಡು ಹೊಡೆಯಲೋಸುಗ, ಬಿಸಿಸಿಐನ ಲಲಿತ್ ಮೋದಿ ಎಂಬ ಉದ್ಯಮಿಯ ಮಸ್ತಿಷ್ಕದಲ್ಲಿ ಮೂಡಿದ್ದೇ ಐಪಿಎಲ್ನ ಐಡಿಯಾ. ಇದು ಐ.ಸಿ.ಎಲ್ನ ಯಥಾವತ್ ನಕಲು. ಅಪಾರ ಪ್ರಮಾಣದ ಹಣದ ಠಿಠಣಜಟಿಣಚಿಟ ಇರುವ ಮಾರುಕಟ್ಟೆಯಾಗಿ ಕಂಡ ಇದನ್ನು ಬಿಸಿಸಿಐ ಜಾರಿಗೆ ತಂದಿತು ಅಷ್ಟೆ. ಆದರೆ ಮೀಡಿಯಾದ ಹುಚ್ಚು ಹೊಗಳು ಬಟ್ಟತನದಲ್ಲಿ ತೇಲಿ ಹೋದ ಲಲಿತ್ ಮೋದಿ ತಾನೇನೋ ಹೊಸದನ್ನು ಹುಟ್ಟು ಹಾಕಿಬಿಟ್ಟಿದ್ದೇನೆ. ತಾನೊಬ್ಬ ಜೀನಿಯಸ್ ಪಯನಿಯರ್ ಎಂಬುದನ್ನು ತಲೆಗೆ ಹಚ್ಚಿಕೊಂಡು ಬಿಟ್ಟ. ಆತನ ತಲೆ, ಕತ್ತಿನ ಮೇಲೆ ನಿಲ್ಲದಾಯಿತು. ಅದೇ ದುರಹಂಕಾರ, ಹಣದ ಮದ ಇಂದು ಆತನನ್ನು ಬೀದಿಗೆ ತಂದು ನಿಲ್ಲಿಸಿದೆ.

ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಲಲಿತ್ ಮೋದಿಯ ಕರಾಳ ಸಾಮ್ರಾಜ್ಯ, ಶರದ್ ಪವಾರ್ನ ರಾಜಕೀಯ  ಚದುರಂಗದಾಟಗಳ ನಡುವೆ ಜಾಗತಿಕ ಕ್ರಿಕೆಟ್ನ ಸಂಚಲನ ಐಪಿಎಲ್ ಮಸಿ ಬಳಿದುಕೊಂಡು ಕೂತಿದೆ. ಅದರ ವಿಶ್ವಾಸಾರ್ಹತೆ ಪಾತಾಳ ಮುಟ್ಟಿದೆ. ಹಿಂದೊಮ್ಮೆ ಮ್ಯಾಚ್ ಫಿಕ್ಸಿಂಗ್ನ ಬಿರುಗಾಳಿ ಬೀಸಿದಾಗ ಕ್ರಿಕೆಟ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಕ್ರಿಕೆಟ್ ಮರಳಿ ಒಂದು ರೆಸ್ಪೆಕ್ಟಬಲ್ ಗೇಮ್ ಆಗಲು ವರ್ಷಗಳೇ ಹಿಡಿಯಿತು. ಜಾಗತಿಕ ಕ್ರಿಕೆಟ್ ಮತ್ತೂ ಮುಖ್ಯವಾಗಿ ಐಪಿಎಲ್ ಇಂದು ಮರಳಿ ಅದೇ ಕವಲುದಾರಿಗೆ ಬಂದು ನೀಂತಿರುವುದು ವಿಷಾದನೀಯ.

ಐಪಿಎಲ್ ಮತ್ತು ಶಶಿ ತರೂರ್

ಕಳೆದೊಂದು ವಾರದಿಂದ ರಾಷ್ಟ್ರದ ಎಲ್ಲಾ ಮೀಡಿಯಾಗಳಿಗೂ ಸುಗ್ಗಿಯೋ ಸುಗ್ಗಿ! ಒಂದು ಕಡೆ ಗ್ಲಾಮರಸ್ ಆದ ಐಪಿಎಲ್, ಮತ್ತೊಂದೆಡೆ ಅತ್ಯಂತ ವಿವಾದಿತರಾದ ಶಶಿ ತರೂರ್ ಮತ್ತು ಲಲಿತ್ ಮೋದಿ, ಇವರಿಬ್ಬರ ಮಧ್ಯೆ ಸುನಂದಾ ಪುಷ್ಕರ್ ಎಂಬ ಲೇಡಿ. ಆಕೆ ಶಶಿಯ ಸ್ನೇಹಿತೆ ಬೇರೆ ಎಂಬ ಮಿರ್ಚಿ ಮಸಾಲ! ವ್ಹಾ...ಮೀಡಿಯಾಗೆ ಇದಕ್ಕಿಂತಲೂ ಇನ್ನೇನು ಬೇಕು? ಇದರಲ್ಲಿ ಒಂದು ಬಾಲಿವುಡ್ ಸಿನಿಮಾಗೆ  ಬೇಕಾದ ಎಲ್ಲ ಮಸಾಲ ಇದೆ. ಬಿಡುವುದುಂಟೆ? ವಾರದಿಂದ ಯಾವ ಛಾನೆಲ್ಲು ಹಾಕಿದರೂ, ಯಾವ ಪತ್ರಿಕೆ ಓದಿದರೂ ಇದೇ ಸುದ್ದಿ.

ಶಶಿ ತರೂರ್ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ, ಆತನ ರಾಜೀನಾಮೆಗೆ ಆಗ್ರಹ, ಕಾಂಗ್ರೆಸ್ ಕೂಡ ತರೂರ್ರನ್ನು ಸಮರ್ಥಿಸುತ್ತಿಲ್ಲ, ಲಲಿತ್ ಮೋದಿಯ ಕಛೇರಿಗಳ ಮೇಲೆ ಇಡಿ ದಾಳಿ,....ಹೀಗೆ ನಡೆಯುತ್ತಿದೆ ಸುದ್ದಿ ಸ್ಫೋಟಗಳು. ಇದೆಲ್ಲಾ ಸರಿ. ಅಸಲಿಗೆ ನಡೆದಿರುವುದಾದರೂ ಏನು? ಶಶಿ ತರೂರ್ಗೂ ಐಪಿಎಲ್ಗೂ ಏನು ಸಂಬಂಧ? ಈ ಸುನಂದಾ ಪುಷ್ಕರ್ ಯಾರು? ಲಲಿತ್ ಮೋದಿ ಮಾಡಿದ್ದು ತಪ್ಪಾ? ಸದ್ಯ ಎಲ್ಲವೂ ಗೊಂದಲದ ಗೂಡಿನಂತೆ ಕಾಣುತ್ತಿದ್ದರೂ ವಿಷಯ ಸರಳ, ಸ್ಪಷ್ಟ.

ಐಪಿಲ್ ಎಬ್ಬಸಿರುವ ರಾಡಿ ಎಲ್ಲರಿಗೂ ತಿಳಿದಿರುವುದೆ. ಮೊದಲಿಗೆ ಬಿಸಿಸಿಐ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನ ಅನುಕರಣೆಯಾಗಿ, ಕಪಿಲ್ ದೇವ್ರ ಸಕಾರಣ ಬಂಡಾಯದಿಂದ ಉಗಮವಾದ ಐಸಿಎಲ್ಗೆ ಸೆಡ್ಡು ಹೊಡೆಯಲೋಸುಗ, ಬಿಸಿಸಿಐನ ಉಪಾಧ್ಯಕ್ಷ ಲಲಿತ್ ಮೋದಿ ಎಂಬ ಉದ್ಯಮಿಯ ಮಸ್ತಿಷ್ಕದಲ್ಲಿ ಮೂಡಿದ್ದೇ ಐಪಿಎಲ್ನ ಐಡಿಯಾ. ಅಪಾರ ಪ್ರಮಾಣದ ಹಣದ ಠಿಠಣಜಟಿಣಚಿಟ ಇರುವ ಮಾರುಕಟ್ಟೆಯಾಗಿ ಕಂಡ ಇದನ್ನು ಬಿಸಿಸಿಐ ಜಾರಿಗೆ ತಂದಿತು. ಎಂಟು ತಂಡಗಳನ್ನು ಮಾಡಿ ಕೇವಲ ಆ ತಂಡಗಳ ಹರಾಜಿನಿಂದ ಸುಮಾರು 4000 ಕೋಟಿಗಳಷ್ಟು ಹಣವನ್ನು ಬಾಚಿಕೊಂಡಿತು. ಬಾಲಿವುಡ್ ಮತ್ತು ಇಂಡಿಯಾ ಇಂಕ್ನ ಅನೇಕರು ನೂರಾರು ಕೋಟಿ ಸುರಿದು ಈ ತಂಡಗಳ ಒಡೆಯರಾದರು. ನಂತರ ನಡೆದದ್ದೇ ಅಸಲಿ ತಮಾಷೆ ತಂಡದಲ್ಲಿ ಆಡಲು ಕ್ರಕೆಟಿಗರನ್ನು ಹರಾಜಿನ ಮೂಲಕ ಖರೀದಿಸಲಾಯಿತು. ಇದಕ್ಕೆ ಮೀಡಿಯಾ ಕೊಟ್ಟ ಸುದೀರ್ಘ ಕವರೇಜ್ನಿಂದಾಗಿ ಐಪಿಎಲ್ ತಕ್ಕ ಮಟ್ಟಿನ ಯಶಸ್ಸನ್ನೂ ಸಾಧಿಸುತ್ತಿದೆ. ಮೂರು ವರ್ಷಗಳ ಯಶಸ್ವಿ ಪ್ರದರ್ಶನದ ನಂತರ ಐಪಿಎಲ್ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಿತು. 2011ರ ಐಪಿಎಲ್ ಟೂರ್ನಿಗೆ ಮತ್ತೆರಡು ತಂಡಗಳನ್ನು ಸೇರಿಸುವ ಇರಾದೆಯೊಂದಿಗೆ 5 ನಗರಗಳನ್ನು ಪ್ರಪೋಸ್ ಮಾಡಲಾಯಿತು. ಅಹಮದಾಬಾದ್, ಲಕ್ನೌ, ನಾಗಪುರ, ಪುಣೆ ಮತ್ತು ಕೊಚ್ಚಿ. ಇದರಲ್ಲಿ ಕೇವಲ ಎರಡು ನಗರಗಳಿಗೆ ಐಪಿಎಲ್ ತಂಡದ ಗೌರವ ಸಿಗುವುದಿತ್ತು.

ಒಂದು 15 ದಿನಗಳ ಹಿಂದೆ ಚೆನ್ನೈನ ಐಟಿಸಿ ಪಾರ್ಕ್ ಶೆರಟಾನ್ ಹೋಟೆಲ್ನಲ್ಲಿ ಈ ತಂಡಗಳಿಗೆ ಬಿಡ್ಡಿಂಗ್ ಪ್ರಾಸೆಸ್ ನಡೆಯಿತು. ಅದೊಂದು ಕ್ಲೋಸ್ಡ್ ಎನ್ವಲಪ್ ಬಿಡ್ಡಿಂಗ್ ಪ್ರಾಸೆಸ್. ಅನೇಕ ಬಿಡ್ಡರ್ಗಳು ತಮಗಿಷ್ಟದ ತಂಡಗಳಿಗೆ ತಮ್ಮ ರೇಟ್ಗಳನ್ನು ಕೋಟ್ ಮಾಡಿದ್ದರು. ಅತಿ ಹೆಚ್ಚು ಬಿಡ್ ಮಾಡಿದವರ ಪಾಲಿಗೆ ತಂಡ! ಈ ವಿಧದಲ್ಲಿ ಸಹರ ಇಂಟರ್ನ್ಯಾಷನಲ್ ಸಂಸ್ಥೆಯು ಅಹಮದಾಬಾದ್, ಪುಣೆ ಮತ್ತು ನಾಗಪುರಗಳಿಗೆ ಬಿಡ್ ವಿನ್ನಿಂಗ್ ಪ್ರೈಸ್ ಅನ್ನು ಕೋಟ್ ಮಾಟ್ ಮಾಡಿತ್ತು. ಆದರೆ ಅವರು ಯಾವುದಾದರೂ ಒಂದು ತಂಡವನ್ನು ಮಾತ್ರ ಅವರ ಬಳಿ ಇಟ್ಟುಕೊಳ್ಳಬಹುದಿತ್ತು. ಅವರು ಪುಣೆಯನ್ನು ಆರಿಸಿಕೊಂಡರು. ಇನ್ನುಳಿದಂತೆ ರಾಂಡೆವೆಸ್ ಸ್ಪೋರ್ಟ್ಸ್ ಎಂಬ ಕಂಪೆನಿಯ ಸಮೂಹ ಕೇರಳದ ಕೊಚ್ಚಿ ತಂಡವನ್ನು ತನ್ನದಾಗಿಸಿಕೊಂಡಿತು. ಆಗ ಯಾವುದೇ ತಕರಾರುಗಳಿರಲಿಲ್ಲ. ಆದರೆ ವಾರ ಹತ್ತು ದಿನಗಳ ನಂತರ ಲಲಿತ್ ಮೋದಿ ತಮ್ಮ ಟ್ವಿಟರ್ ಅಕೌಂಟಿನಲ್ಲಿ ಕೆಲವು ಹೇಳಿಕೆಗಳನ್ನು ನೀಡುತ್ತಾ ಹೋದರು ಸತತವಾಗಿ. ವಿವಾದದ ಕಿಡಿ ಹೊತ್ತಿಸಿದ್ಧೇ ಅವರು.

ಈ ಕೊಚ್ಚಿ ತಂಡಕ್ಕೆ ಶಶಿ ತರೂರ್ ಮಾರ್ಗದರ್ಶಕ ಎಂದು ಕಂಪೆನಿ ಮತ್ತು ಸ್ವತಃ ಶಶಿಯೇ ಹೇಳಿಕೊಂಡಿದ್ದಾರೆ. ನೂತನ ಐಪಿಎಲ್ ತಂಡದ ಗೌರವ ಪಡೆಯಬಹುದಾದ ನಗರಗಳಲ್ಲಿ ಕೇರಳದ ಕೊಚ್ಚಿಯೂ ಇತ್ತು. ಕಮ್ಯೂನಿಸ್ಟರ ನಾಡು ಕೇರಳದಲ್ಲಿ ಮೊದಲಿಂದಲೂ ಹಾಕಿ, ಫುಟ್ಬಾಲ್ನದೇ ಪ್ರಾಬಲ್ಯ. ಅಲ್ಲಿ ಕ್ರಿಕೆಟ್ ಬಗೆಗೆ ಉತ್ಸಾಹ ಅಷ್ಟಕ್ಕಷ್ಟೆ. ಕಳೆದ 75 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಶಾಂತ್ ಒಬ್ಬನೇ ಕೇರಳ ಮೂಲದ ಕ್ರಿಕೆಟಿಗ. ಈ ನಡುವೆ ಕೇರಳದಲ್ಲೂ ಕ್ರಿಕೆಟ್ ಜ್ವರ ಏರುತ್ತಿದೆ. ಕೇರಳದ ರಾಜಧಾನಿ ತಿರುವನಂತಪುರದ ಸಂಸದನಾಗಿರುವ ಶಶಿ ತರೂರ್ ಮೊದಲಿಂದಲೂ ಕ್ರಿಕೆಟ್ ಉತ್ಸಾಹಿ. ಶಶಿ ಭಾರತೀಯ ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಅವರಿಗೆ ಕ್ರಿಕೆಟ್ನಲ್ಲಿ ಆ ಮಟ್ಟದ ಎಂಟ್ರಿ ಇದೆ. ತನ್ನ ರಾಜ್ಯಕ್ಕೊಂದು ಐಪಿಎಲ್ ತಂಡ ಬೇಕೆಂದು ಯೊಚಿಸಿದ ಶಶಿ ರಂದೆವಾಸ್ ಸ್ಪೋರ್ಟ್ಸ್ ಎಂಬ ಬಿಸಿನೆಸ್ ಕನ್ಸಾರ್ಶಿಯಂ ಒಂದನ್ನು ಕೊಚ್ಚಿ ತಂಡದ ಪರ ಬಿಡ್ ಮಾಡಲು ಮನವೊಲಿಸಿದ್ದಾನೆ. ಅವರೂ ಸಹ ಶಶಿಯ ಮಾತುಗಳಿಂದ ಕನ್ವಿನ್ಸ್ ಆಗಿ ಹಾಗೇ ಮಾಡಿದ್ದಾರಷ್ಟೇ ಅಲ್ಲದೆ, ಶಶಿ ತರೂರ್ರನ್ನು ತಮ್ಮ ಮಾರ್ಗದರ್ಶಕ ಎಂದು ಕರೆದಿದ್ದಾರೆ. ಸರಿ ಅದರಲ್ಲೇನಿದೆ ಅಂದಿರಾ? ವಿಷಯ ಇಷ್ಟೇ ಅಲ್ಲ.


ಶಶಿ ತರೂರ್ ತನ್ನ ಕೆನಡಿಯನ್ ಹೆಂಡತಿಗೆ ವಿಚ್ಛೇದನ ನೀಡುತ್ತಿದ್ದಾನೆ. ಆತನಿಗೊಬ್ಬ ಹೊಸ ಗೆಳತಿಯಿದ್ದಾಳೆ. ಸುನಂದಾ ಪುಷ್ಕರ್! ಇದನ್ನು ಆತನೂ ಅಲ್ಲಗಳೆದಿಲ್ಲ, ಮೇಲಾಗಿ ಆತನೇ ಅವರಿಬ್ಬರ ಸಂಬಂಧದ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ್ದಾನೆ. ಶಶಿ ಆಕೆಯನ್ನು ಇಷ್ಟರಲ್ಲೇ ಮದುವೆಯಾಗಲಿದ್ದಾನೆಂಬ ಸುದ್ದಿಗಳೂ ಇದೆ. ಇಂತಿಪ್ಪ ಸುನಂದಾ ಪುಷ್ಕರ್ಳಿಗೆ ಕೊಚ್ಚಿ ಐಪಿಎಲ್ ತಂಡದಲ್ಲಿ ಶೇ.4.7ರಷ್ಟು ಸ್ವೆಟ್ ಈಕ್ವಿಟಿಯಿದೆ! ಅದರ ಮೌಲ್ಯ ಅಂದಾಜು 76 ಕೋಟಿ ರೂ.ಗಳು! ಮಿಸ್ಟರ್ ಲಲಿತ್ ಮೋದಿಯ ಕಿವಿಗಳು ಕೂಡಲೇ ನೆಟ್ಟಗಾಗಿವೆ. ಆತನಿಗೆ ಆತನದೇ ಆದ ಅಜೆಂಡಾ ಇತ್ತು. ಅದರ ಅಮಲಿಗೆ ಇದು ಸಹಕಾರಿಯಾಗಲಿತ್ತು.

ಕೂಡಲೇ ಟ್ವಿಟರ್ನಲ್ಲಿ ಐಪಿಎಲ್ ಕೊಚ್ಚಿ ತಂಡದ ಹೂಡಿಕೆದಾರರ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳಿವೆ. ತಂಡಕ್ಕೆ ಶಶಿ ಮಾರ್ಗದರ್ಶಕನಾಗಿದ್ದು, ಆತನ ಆಪ್ತೆ ಸುನಂದಾ ಪುಷ್ಕರ್ಳಿಗೆ ಶೇ.4.7ರಷ್ಟು ಫ್ರೀ ಈಕ್ವಿಟಿ ನೀಡಲಾಗಿದೆ ಎಂದು ಬಹಿರಂಗ ಪಡಿಸಿದನಲ್ಲದೆ, ಐಪಿಎಲ್ ಕೊಚ್ಚಿ ತಂಡದ ಹೂಡಿಕೆಯ ಸಂಪೂರ್ಣ ಬ್ರೇಕ್ ಅಪ್ ಅನ್ನು ಪ್ರಕಟಿಸಿಬಿಟ್ಟಿದ್ದಾನೆ. ಧಿಗ್ಗನೇ ಎದ್ದು ಕೂತರು ರಂದೆವಾಸ್ ಸ್ಪೋರ್ಟ್ಸ್ನವರು. ಅಸಲಿಗೆ ಹೂಡಿಕೆಯ ಬ್ರೇಕ್ ಅಪ್ ಅನ್ನು ಗೌಪ್ಯವಾಗಿರಿಸಬೇಕೆಂದು ಎಲ್ಲ ತಂಡಗಳೂ ಐಪಿಎಲ್ ಗವರ್ನಿಂಗ್  ಬಾಡಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಸೂಚಿಸಲಾಗಿದೆ. ಅದರಂತೆಯೇ ಈ ವರೆಗೂ ಕೂಡ ಇನ್ನುಳಿದ ಐಪಿಲ್ ತಂಡಗಳ ಹೂಡಿಕೆಯ ಬ್ರೇಕ್ ಅಪ್ ಬಹಿರಂಗವಾಗಿಲ್ಲ. ಹಾಗಾದರೆ ನಮ್ಮದು ಮಾತ್ರ ಯಾಕೆ? ಕೂಡಲೇ ಬಿಸಿಸಿಐ ಕೂಡ ಲಲಿತ್ ಮೋದಿಯನ್ನು ಗದುರಿಕೊಂಡಿತು. ಆಗ ಲಲಿತ್ ಮೋದಿ ಕೊಚ್ಚಿ ತಂಡದಲ್ಲಿ ಭ್ರಷ್ಟಾಚಾರ ನಡೆದಿದ್ದು, ತಾನು ಅದನ್ನು ಎಕ್ಸಪೋಸ್ ಮಾಡುತ್ತಿರುವುದಾಗಿ ಹೇಳಿಕೊಂಡ. ಆತನ ಆರೋಪ ಸರಳ. ಶಶಿ ತರೂರ್ ಕೊಚ್ಚಿ ತಂಡದ ಮಾರ್ಗದರ್ಶಕ, ಆತ ಮದುವೆಯಾಗಲಿದ್ದಾನೆಂದು ಸುದ್ದಿಯಿರುವ ಸುನಂದಾ ಪುಷ್ಕರ್ಗೆ ಆಕೆ ಯಾವುದೇ ಹೂಡಿಕೆ ಮಾಡದೇ ಶೇ.4.7ರಷ್ಟು ಈಕ್ವಿಟಿಯಿದೆ. ಅಂದರೆ ಸುನಂದಾ ಪುಷ್ಕರ್ ಶಶಿ ತರೂರ್ಗೆ ಪ್ರಾಕ್ಸಿ! ಇದನ್ನು ಸಮರ್ಥಿಸಲು ಆತ ಶಶಿ ತನಗೆ ದೂರವಾಣಿಯ ಮೂಲಕ ಕೊಚ್ಚಿ ತಂಡದ ಹೂಡಿಕೆದಾರರ ಬಗ್ಗೆ ಪ್ರಶ್ನಿಸಬಾರದು ಎಂದು ತಾಕೀತು ಮಾಡಿದರು ಎಂದು ದೂರಿದ್ದಾರೆ. ಅಲ್ಲಿಗೆ ಶಶಿ ತರೂರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ! ಬಿಜೆಪಿ ಮತ್ತು ಕಮ್ಯೂನಿಸ್ಟರು ಧಿಗ್ಗನೆ ಎದ್ದು ಕೂತರು - ಶಶಿ ತರೂರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸ ತೊಡಗಿದರು.

ಅಸಲಿಗೆ ಸುನಂದಾ ಪುಷ್ಕರ್ ಪಡೆದಿರುವುದು ಫ್ರೀ ಈಕ್ವಿಟಿ ಅಲ್ಲ, ಅದು ಸ್ವೆಟ್ ಈಕ್ವಿಟಿ. ಅಂದರೆ ಈ ಬಿಸಿನೆಸ್ ಪರ್ತ್ನರಶಿಪ್ಗಳಲ್ಲಿ ಹಣ ಹೂಡದೇ ಕೆಲಸ ಮಾಡಿ ಲಾಭಾಂಶದ ಪಾಲು ಪಡೆಯುವ ವರ್ಕಿಂಗ್ ಪಾರ್ಟ್ನರ್ನಂತಹುದು . ಸುನಂದಾ ಪುಷ್ಕರ್ ಬರಿಯ ಶಶಿಯ ಸ್ನೇಹಿತೆಯಲ್ಲ, ಆಕೆ ಒಬ್ಬ ಸ್ವತಂತ್ರ್ಯ ಬಿಸಿನೆಸ್ ವುಮೆನ್. ದುಬೈ, ಕೆನಡಾಗಳಲ್ಲಿ ಆಕೆ ಬ್ರಾಂಡ್ ಮ್ಯಾನೇಜ್ಮೆಂಟ್, ಪಿಆರ್ಒ, ಕನ್ಸಲ್ಟೆಂಟ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವಾಕೆ. ಆಕೆ ಐಪಿಎಲ್ ಕೊಚ್ಚಿ ತಂಡದ ಬ್ರಾಂಡ್ ಮ್ಯಾನೇಜ್ಮೆಂಟ್, ಆಡ್ ರೆವಿನ್ಯೂ ಮತ್ತು ಪಿಆರ್ನ ಮುಖ್ಯಸ್ಥಳಾಗಿ ದುಡಿಯುತ್ತಿದ್ದಾಳೆ. ಆಕೆಯ ಕೆಲಸಕ್ಕೆ ಸಂಬಳದ ಬದಲಿಗೆ ತಂಡದ ಈಕ್ವಿಟಿಯಲ್ಲಿ ಶೇ.4.7ರಷ್ಟುನ್ನು ಸ್ವೆಟ್ ಈಕ್ವಿಟಿಯಾಗಿ ನೀಡಲಾಗಿದೆ ಎಂಬುದು ಶಶಿ ಮತ್ತು ತಂಡದ ಮಾಲೀಕರ ವಾದ. ಇದು ವಾಡಿಕೆ ಕೂಡ. ಇದೇ ಸುನಂದಾ ಪುಷ್ಕರ್ಳನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ರಾಂಡ್ ಮ್ಯಾನೇಜ್ಮೆಂಟ್ಗೆಂದು ಅಪ್ರೋಚ್ ಮಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.


ಆದರೆ ಇದು ನಾಣ್ಯದ ಒಂದು ಬದಿಯಷ್ಟೇ! ಮತ್ತೊಂದು ಬದಿಯಲ್ಲಿ ಲಲಿತ್ ಮೋದಿಯ ಕರಾಳ ಸಾಮ್ರಾಜ್ಯದ ದರ್ಶನವಾಗುತ್ತದೆ. ಮೋದಿಯ ಆರೋಪಗಳ ಬೆನ್ನ ಹಿಂದೆಯೇ ರಂದೆವಾಸ್ ಸ್ಪೋರ್ಟ್ಸ್ನ ಗಾಯಕ್ವಾಡ್ ಕೊಚ್ಚಿ ತಂಡದಿಂದ ಹಿಂದೆ ಸರಿಯಲು ಲಲಿತ್ ಮೋದಿ ತನಗೆ 50 ಕೋಟಿ ಲಂಚ ಕೊಡಲು ತಯಾರಿದ್ದ ಎಂದು ಸ್ಫೋಟಕ ಆರೋಪವನ್ನು ಮಾಡಿದ್ದಾರೆ. ಅವರ ಪ್ರಕಾರ ಲಲಿತ್ ಮೋದಿಗೆ ಬೇರೆಯದೇ ಆದ ಬಿಸಿನೆಸ್ ಇಂಟರೆಸ್ಟ್ಗಳಿದ್ದವು. ಆತನಿಗೆ ಕೊಚ್ಚಿ ನಗರ ಐಪಿಎಲ್ ತಂಡವನ್ನು ಗೆಲ್ಲುವುದು ಇಷ್ಟವಿರಲಿಲ್ಲ. ಆತನಿಗೆ ಅಹಮದಾಬಾದ್ ಗೆಲ್ಲಬೇಕಿತ್ತು. ಆತನಿಗೆ ಅಲ್ಲಿ ಕೆಲವು ಬಿಸಿನೆಸ್ ಇಂಟರೆಸ್ಟ್ಗಳಿದ್ದವು. ಹಾಗಾಗಿ ಕೊಚ್ಚಿ ತಂಡದ ಮಾಲೀಕತ್ವವನ್ನೇ ಪ್ರಶ್ನಾರ್ಹಗೊಳಿಸಿ ಅದನ್ನು ಸಾಧಿಸುವ ಹುನ್ನಾರ ಆತನದ್ದು ಎಂದು ದೂರಿದ್ದಾರೆ. ಹಾಗಾದರೆ ಶಶಿ ತರೂರ್ ಯಾಕೆ ಲಲಿತ್ ಮೋದಿಗೆ ಫೋನಾಯಿಸಿದ? ಅದು ತನ್ನ ಸಚಿವ ಪದವಿಯನ್ನು ದುರುಪಯೋಗ ಪಡಿಸಿಕೊಂಡಂತಲ್ಲವೇ? ಅದಕ್ಕೆ ಶಶಿಯ ಉತ್ತರ - ಲಲಿತ್ ಮೋದಿ ತಂಡದ ಫ್ರಾಂಚೈಸನ್ನು ನೀಡುವುದರಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದುದರಿಂದ ತಾನು ಫೋನಾಯಿಸಿ ವಿನಂತಿಸಿಕೊಂಡೆ ಅಷ್ಟೆ. ಹೂಡಿಕೆದಾರರ ಬಗ್ಗೆ ನಾನು ಮಾತನಾಡಲೇ ಇಲ್ಲ ಎನ್ನುತ್ತಾರೆ.

ಲಲಿತ್ ಮೋದಿ ಮೊದಲಿನಿಂದಲೂ ವಿವಾದಾತ್ಮಕ ವ್ಯಕ್ತಿಯೇ. ಈತ ಬಿಸಿಸಿಐ ಮತ್ತು ಐಪಿಎಲ್ ಸಂಸ್ಥೆಗಳಿಗಿಂತಲೂ larger than life ಆಗುತ್ತಿದ್ದಾನೆ, ಈತನ ರೆಕ್ಕೆ ಪುಕ್ಕ ಕತ್ತರಿಸಬೇಕು ಎಂದು ಬಿಸಿಸಿಐನಲ್ಲಿ ಅನೇಕರು ಕಾಯುತ್ತಿದ್ದಾರೆ. ಐಪಿಎಲ್ ಬಿಡ್ಡಿಂಗ್ ಒಂದು ಕ್ಲೋಸ್ಡ್ ಎನ್ವಲಪ್ ಪ್ರಾಸಸ್. ಅದನ್ನು ಶಶಿ ತರೂರ್ ಎಷ್ಟರ ಮಟ್ಟಿಗೆ ಪ್ರಭಾವಿಸಬಹುದು ಎಂಬುದು ಪ್ರಶ್ನಾರ್ಹವೇ. ಆದರೆ ಖಂಡಿತವಾಗಿಯೂ ಐಪಿಎಲ್ ಕಮೀಷನರ್ ಆಗಿರುವ ಲಲಿತ್ ಮೋದಿ ಪ್ರಭಾವಿಸಬಹುದು, ಅನುಮಾನವೇ ಇಲ್ಲ. ಈಗ ಆತನ ಮೇಲೂ ಇಂಥದೇ ಆರೋಪಗಳು ಬರುತ್ತಿವೆ. ಲಲಿತ್ ಮೋದಿ ರಾಜಸ್ಥಾನದವನು. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಲಲಿತ್ ಮೋದಿಯ ಹೆಂಡತಿ ತಂಗಿಯ ಗಂಡ ಆದಿತ್ಯ ಚೆಲ್ಲರಾಮ್ ಎಂಬಾತನಿಗೆ ಶೇ.33.33ರಷ್ಟು ಹಿಡಿತವಿದೆ! ಲಲಿತ್ ಮೋದಿ ಕೊಚ್ಚಿ ತಂಡದ ಹೂಡಿಕೆಯ ಬ್ರೇಕ್ ಅಪ್ ಅನ್ನು ಪ್ರಕಟಿಸಿದ ಹಾಗೆಯೇ ರಾಜಸ್ಥಾನ್ ತಂಡದ ಹೂಡಿಕೆಯ ಬ್ರೇಕ್ ಅಪ್ ಅನ್ನೂ ಪ್ರಕಟಿಸಲಿ. ಇದೊಂದು ಸುಸಂದರ್ಭ. ಐಪಿಎಲ್ ಮತ್ತು ಬಿಸಿಸಿಐ ಈ ಸಂದರ್ಭವನ್ನು ಬಳಸಿಕೊಂಡು ಎಲ್ಲಾ ಐಪಿಎಲ್ ತಂಡಗಳ ಹೂಡಿಕೆದಾರರು, ಅವರ ಹಿಡುವಳಿಗಳು, ಅವುಗಳ ರೆವಿನ್ಯೂ ಎಲ್ಲವನ್ನೂ ಜನರ ಮುಂದಿಟ್ಟು ಪಾರದರ್ಶಕತೆ ಮೆರೆಯಬೇಕು. ಕ್ರಿಕೆಟ್ ಆಟಕ್ಕೆ ಅದು ಉತ್ತಮ ಕೊಡುಗೆಯಾದೀತು. ಆಗಲೇ ಐಟಿ ಇಲಾಖೆ ಮತ್ತು enforcement directorate ಎಲ್ಲ ಐಪಿಎಲ್ ತಂಡದ ಹಿಡುವಳಿಗಳನ್ನು ತನಿಖೆಗೊಳಪಡಿಸುವ ಮಾತುಗಳು ಕೇಳಿ ಬರುತ್ತಿದೆ. ಆಗ್ಲೇ ಐಪಿಎಲ್ ಕೇಂದ್ರ ಕಚೇರಿ ಲಲಿತ್ ಮೋದಿಯ ಕಚೇರಿಯ ಮೇಲೆ ಐಟಿ ದಾಲಿಗಲಾಗಿವೆ. ಇದೊಂದು ಸ್ವಾಗತಾರ್ಹ ಬೆಳವಣಿಗೆಯೇ ಸರಿ.

ಇನ್ನು ಶಶಿ ತರೂರ್ ವಿಷಯ. ಶಶಿ ತರೂರ್ ಭಾರತೀಯ ರಾಜಕಾರಣಕ್ಕೆ ಒಬ್ಬ ಔಟ್ಸೈಡರ್. ಆತನಿಗೆ ರಾಜಕಾರಣ ತಿಳಿದಿಲ್ಲ ಎಂಬುದನ್ನು ಆತ ಬಾರಿ ಬಾರಿ ತೋರಿಸುತ್ತಿದ್ದಾನೆ. ಆತ ಈ ವಿಷಯದಲ್ಲಿ ಭ್ರಷ್ಟನೋ ಅಲ್ಲವೋ ಎಂದು ಸರ್ಕಾರ ತೀರ್ಮಾನಿಸಬೇಕು. ಭಾರತದ ರಾಜಕಾರಣ ಬಹಳ ಸೂಕ್ಷ್ಮ. ಇಲ್ಲಿ ನೈಜತೆಗಿಂತಲೂ perception ಬಹಳ ಮುಖ್ಯವಾಗುತ್ತದೆ. ಒಂದು ಇಮೇಜನ್ನು ರಾಜಕಾರಣಿ ಬಹಳ ಜಾಗರೂಕನಾಗಿ ಕಾಯ್ದುಕೊಂಡು ಬರಬೇಕಾಗುತ್ತದೆ. ಶಶಿ ತರೂರ್ ಅದರಲ್ಲಿ ಸ್ಪಷ್ಟವಾಗಿ ಎಡವಿದ್ದಾರೆ. ಕಾಂಗ್ರೆಸ್ನಲ್ಲೂ ಕೂಡ ಇವರೊಂದು ಎಂಬರಾಸ್ಮೆಂಟ್ ಆಗಿ ಮಾರ್ಪಟ್ಟಿದ್ದಾರೆ. ಅವರನ್ನು ಪಕ್ಷದಲ್ಲಿ ಏಕಾಂಗಿಯಾಗಿಸಲಾಗಿದೆ. ಆದರೆ ವಿದೇಶಾಂಗ ಖಾತೆಯ ಸಹಾಯಕ ಮಂತ್ರಿಯಾಗಿ ಶಶಿಯ ಕೆಲಸದ ಬಗ್ಗೆ ಕೆಮ್ಮಂಗಿಲ್ಲ. ಸದ್ಯ ಮನಮೋಹನ ಸಿಂಗರು ವಾಷಿಂಗ್ಟನ್ನಿಂದ ಹಿಂತಿರುಗಿದ ನಂತರ ಅವರ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ. ಕಾಂಗ್ರೆಸ್ ಅವರ ರಾಜೀನಾಮೆ ಪಡೆದದ್ದೇ ಆದರೆ, ಸಮಾಜದ ಇತರೆ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದವರು ರಾಜಕೀಯಕ್ಕೆ ಬರಬೇಕೆನ್ನುವ ಕೂಗಿನ ಸೊಲ್ಲಡಗುತ್ತದೆ. ಭಾರತೀಯ ನೇತಾ-ಬಾಬು ರಾಜ್ನಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ!

ನೈಸ್ ಪುರಾಣ - 6 - ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಮತ್ತಷ್ಟು ಹಗರಣಗಳು

ಬಿಬಿಎಂಪಿ ಫಲಿತಾಂಶ ಹೊರಬಿದ್ದಿದೆ. ಮೊದಲ ಬಾರಿಗೆ ಬೆಂಗಳೂರಿನ ಪುರಭವನದ ಮೇಲೆ ಕಮಲ ಅರಳಿ ನಿಂತಿದೆ. ಯಾವುದೇ ಸಮಸ್ಯೆಯಿಲ್ಲದೆ, ಇಂಡಿಪೆಂಡೆಂಟ್ಗಳ ಮುಲಾಜಿಲ್ಲದೆ, ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಬಹುದು, ಆ ಮಟ್ಟಿಗೆ ಅದು ಇತ್ತೀಚೆಗೆ ಬೆಂಗಳೂರಿನಲ್ಲಿ ಬೇರು ಬಿಟ್ಟಿರುವುದು ವಾಸ್ತವ ಎಂಬುದು ನಿಜವಾಯಿತು. ಬಿಬಿಎಂಪಿಯನ್ನು ಕಾಂಗ್ರೆಸ್ನ ಭಧ್ರಕೋಟೆ ಎಂದು ಎಲ್ಲರೂ ಹೇಳಿದ್ದೇ ಬಂತು, ಕಾಂಗ್ರೆಸ್ ಉಡಾಫೆಯಿಂದ ಕೆಲಸ ಮಡತೊಡಗಿತು. ತನ್ನ ಸ್ವಯಂಕೃತಾಪರಾಧಗಳಿಂದಾಗಿಯೇ ಸೋತು ಸುಣ್ಣವಾಗಿದೆ.

ಆದರೆ ಸುದ್ದಿ ಅದಲ್ಲ. ದೇವೇಗೌಡರ ಜೆಡಿಎಸ್ ಇನ್ನಿಲ್ಲದಂತೆ ಹೀನಾಯವಾಗಿ ಸೋಲುಂಡು ಅಧಃಪತನಕ್ಕೊಳಗಾಗಿರುವುದು. 198 ಸ್ಥಾನಗಳ ಬಿಬಿಎಂಪಿಯಲ್ಲಿ ಜೆಡಿಎಸ್ ಪಡೆದಿರುವುದು ಕೇವಲ 15 ಸ್ಥಾನಗಳು! ಬೆಂಗಳೂರಿನ ಹೊರವಲಯದಲ್ಲಿರುವ ಅನೇಕ ಮುನ್ಸಿಪಾಲಿಟಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲ್ಪಟ್ಟಿರುವುದು ಮತ್ತು ನೈಸ್ ಬಾಧಿತ ಪ್ರಾಂತ್ಯಗಳು ಬಿಬಿಎಂಪಿಯಡಿ ಬರುವುದರಿಂದ ಜೆಡಿಎಸ್ ಕನಿಷ್ಠ ಆ ಕ್ಷೇತ್ರಗಳಲ್ಲಾದರೂ ಉತ್ತಮ ಪ್ರದರ್ಶನ ನೀಡುತ್ತದೆಂಬ ನಿರೀಕ್ಷೆಯಿತ್ತು. ಇದನ್ನು ದೃಷ್ಟಿಯಲ್ಲಿಟ್ಟಕೊಂಡೇ ಶ್ರೀಮಾನ್ ದೇವೇಗೌಡರು ನೈಸ್ ಖೇಣಿ ಮತ್ತು ಯಡಿಯೂರಪ್ಪನವರ ವಿರುದ್ಧ ಪಂಚೆ ಎತ್ತಿಕಟ್ಟಿ ಹೋರಾಟಕ್ಕಿಳಿದದ್ದು. ನೈಸ್ ರಸ್ತೆಯಿಂದ ಬಧೀತ 27 ವಾರ್ಡ್ಗಳಿವೆ ಬಿಬಿಎಂಪಿಯಲ್ಲಿ. ಆದರೆ ಆಶ್ಚರ್ಯ ಈ 27 ವಾರ್ಡ್ಗಳಲ್ಲಿ ಕೇವಲ 2 ವಾರ್ಡ್ಗಳಲ್ಲಿ ಮಾತ್ರ ಜೆಡಿಎಸ್ ಗೆಲುವು ಸಾಧಿಸಿದೆ! ಕಾಂಗ್ರೆಸ್ 5ರಲ್ಲಿ ಗೆದ್ದಿದ್ದರೆ ಮಿಕ್ಕ 20 ಸ್ಥಾನಗಳಲ್ಲಿ ಬಿಜೆಪಿಯ ಕಮಲ ಅರಳಿ ನಿಂತಿದೆ.

ದೇವೇಗೌಡರು ಹೋರಾಟ ಶುರುವಿಟ್ಟುಕೊಂಡ, ಯಡಿಯೂರಪ್ಪನವರನ್ನು ಬಾಸ್ಟರ್ಡ್ ಎಂದು ಕರೆದ ಅದೇ ಹೆಮ್ಮಿಗೇಪುರದಲ್ಲಿ ಕಮಲ ಅರಳಿ ನಿಂತಿದೆ. ಹೆಮ್ಮಿಗೇಪುರ ಫ್ರೇಂವರ್ಕ್ ಅಗ್ರೀಮೆಂಟಿನ ಅಲೈನ್ಮೆಂಟಿನ ಪ್ರಕಾರ ನೈಸ್ ಟೌನ್ಷಿಪ್ಗೆ ಸೇರತಕ್ಕದುಲ್ಲ, ಆದರೆ ಹೆಮ್ಮಿಗೆಪುರವನ್ನು ಕೆಐಎಡಿಬಿ ಟೌನ್ಷಿಪ್ಗೆಂದು ನೋಟಿಫೈ ಮಾಡಿ ಕೂತಿದೆ. ಮೂಲ ಒಪ್ಪಂದದ ಪ್ರಕಾರ ಕೂಡ ಟೌನ್ಷಿಪ್ ಹೆಮ್ಮಿಗೆಪುರದಲ್ಲೇ ಬರಬೇಕು ಎಂದು ಸ್ವತಃ ಅಶೋಕ ಹಾರ್ನಳ್ಳಿ ಸರ್ಕಾರದ ಪರ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಇದನ್ನು ಪ್ರತಿಭಟಿಸಿಯೇ ದೇವೇಗೌಡರು ಪಂಚೆ ಎತ್ತಿ ಕಟ್ಟಿ ಬೀದಿಗಿಳಿದದ್ದು. ಆದರೆ ಸೋಜಿಗ ನೋಡಿ ಅದೇ ಹೆಮ್ಮಿಗೇಪುರದಲ್ಲಿ ಜೆಡಿಎಸ್ ಸೋತಿದೆ, ಬಿಜೆಪಿಯ ಕಮಲ ಅರಳಿ ನಿಂತಿದೆ.

ಧಿಗ್ಗನೆ ಎದ್ದು ಕೂತಿದ್ದಾರೆ ಯಡಿಯೂರಪ್ಪ. ಬಿಬಿಎಂಪಿ ಚುನಾವಣೆಯಲ್ಲಿ ಜನಾಭಿಪ್ರಾಯ ಹೊರಬಿದ್ದಿದೆ. ಜೆಡಿಎಸ್ನ ಸೋಲು ಮತ್ತು ಬಿಜೆಪಿಯ ಗೆಲುವು, ಮತ್ತೂ ಮುಖ್ಯವಾಗಿ ನೈಸ್ ಪ್ರಾಂತ್ಯಗಳಲ್ಲಿ ಜೆಡಿಎಸ್ನ ಸೋಲು ಜನ ನೈಸ್ ವಿವಾದವನ್ನು ಅದನ್ನು ಮುಂದಿಟ್ಟುಕೊಂಡು ದೇವೇಗೌಡರು ಆಡಿದ ಆಟವನ್ನು ಜನ ತಿರಸ್ಕರಿಸಿದ್ದಾರೆ. ಈಗಲಾದರೂ ದೇವೇಗೌಡರು ಎಚ್ಚೆತ್ತು ಬೆಂಗಳೂರಿನ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದನ್ನು ಬಿಡಬೇಕು. ನೈಸ್ ಹೋರಾಟವನ್ನು ಕೈಬಿಡಬೇಕು. ನಾವಂತೂ ಫ್ರೇಂವರ್ಕ್ ಅಗ್ರೀಮೆಂಟ್ ಮತ್ತು ಕೋರ್ಟ್ ಆದೇಶಗಳನ್ವಯ ನೈಸ್ ಕಾರಿಡಾರ್ ಅನ್ನು ಮಾಡಿಯೇ ತೀರುತ್ತೇವೆ. ಜನಾದೇಶ ನಮ್ಮ ಪರವಾಗಿದೆ ಎಂದು ಬೀಗಿದ್ದಾರೆ. ಬಿಬಿಎಂಪಿ ಫಲಿತಾಂಶ ಹೊರಬಿದ್ದ ಮಾರನೆಯ ದಿನವೇ ಯಡಿಯೂರಪ್ಪನವರ ಸರ್ಕಾರ ನೈಸ್ಗಾಗಿ ಪಡೆದುಕೊಂಡ ಭೂಮಿಗೆ ದರ ನಿಗದಿ ಮಾಡಲು ಸಭೆ ಕರೆದಿದೆ. ರೈತರ ಕೈಲಿ ಛೀಮಾರಿ ಹಾಕಿಸಿಕೊಂಡು ಸಬೆಯನ್ನು ಮುಂದೂಡಿದೆ.

ಯಾಕೆ ಯಡಿಯೂಪ್ಪನವರಿಗೆ ನೈಸ್ ವಿಚಾರದಲ್ಲಿ ಅಷ್ಟೊಂದು ಆಸಕ್ತಿಯೋ ತಿಳಿಯದಾಗಿದೆ. ಸ್ವಾಮಿ ಯಡಿಯೂರಪ್ಪನವರೆ ಜನಾದೇಶ ಇರುವುದು ತಮ್ಮ ಪಕ್ಷಕ್ಕೆ ಸ್ವಾಮಿ, ಅದೇನೋ ಈ ಬಿಬಿಎಂಪಿ ಚುನಾವಣೆ ನೈಸ್ ಕುರಿತಾಗಿ ನಡೆದ ರೆಫೆರೆಂಡಂ ಇದ್ದಂತೆ ಮಾತುನಾಡುತ್ತಿದ್ದೀರಲ್ಲ? ದೇವೇಗೌಡರ ಹೋರಾಟಕ್ಕೆ ಜನ ತಮ್ಮ ಬೆಂಬಲ ಸೂಚಿಸದೇ ಇರಬಹುದು. ಅವರಿಗದು `ಭೂತದ ಬಾಯಲ್ಲಿ ಭಗವದ್ಗೀತೆ' ಎಂಬಂತೆ ಕಂಡಿರಬಹುದು. ಆದರೆ ಅಷ್ಟು ಮಾತ್ರಕ್ಕೆ ತಾವು ಜನ ಬೆಂಬಲ ನೈಸ್ ಪರವಾಗಿದೆಯೆಂಬಂತೆ ಮಾತನಾಡುವುದು ಎಷ್ಟು ಸೂಕ್ತ? ಇದು ನೈಸ್ ಅನ್ನು ಒಂದು ನಾನ್ ಇಷ್ಯೂ ಮಾಡಿಬಿಡುವ ಹುನ್ನಾರ. ಇದನ್ನು ಪ್ರಾಜ್ಞರಾದವರೆಲ್ಲರೂ ವಿರೋಧಿಸಬೇಕಾಗುತ್ತದೆ. ದೇವೇಗೌಡರ ಹೋರಾಟ, ಹಾರಾಟ, ಅವರ ಸ್ವಾರ್ಥಗಳೇನೇ ಇರಲಿ ಅದು ನಮಗೆ ಅನಾವಶ್ಯಕ. ಇವುಗಳ ಲೆಕ್ಕಾಚಾರದಲ್ಲಿ ಇಶ್ಯೂ ಗೌಣವಾಗಬಾರದು.

ಈ ಫ್ರೇಂವರ್ಕ್ ಅಗ್ರೀಮೆಂಟ್ ಎಷ್ಟು ನಿರ್ಲಜ್ಜವಾಗಿ ನೈಸ್ ಕಂಪೆನಿಯ ಪರ ಇದೆ ಎಂಬುದನ್ನು ನಾವು ಕಳೆದೆರಡು ವಾರಗಳಿಂದ ನೋಡುತ್ತಲೇ ಬಂದಿದ್ದೇವೆ. ಈ ವಾರ ಮತ್ತೊಂದಷ್ಟು ಉಪಹಗರಣಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ ತೆರಿಗೆ ವಿನಾಯ್ತಿ. ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ.12 ಬಿಎಂಐಸಿಪಿ ಕಾರಿಡಾರ್ನ ಎಕ್ಸ್ಪ್ರೆಸ್ವೇ ಮತ್ತು ಟೌನ್ಷಿಪ್ಗಳಿಗೆ ಸರ್ಕಾರ 30 ವರ್ಷಗಳ ಈ ಕನ್ಸೆಷನ್ ಅವಧಿಯಲ್ಲಿ ಸಂಪೂರ್ಣ ಟ್ಯಾಕ್ಸ್ ಹಾಲಿಡೇ ನೀಡುತ್ತದೆ. ಇಷ್ಟೇ ಅಲ್ಲ. ಟೌನ್ಷಿಪ್ ಮತ್ತು ಇತರೆ ಭೂಮಿ ರಿಜಿಸ್ಟ್ರೇಷನ್ನ ಮೇಲೂ ಕೂಡ ರಿಜಿಸ್ಟ್ರೇಷನ್ ಫೀ, ಸ್ಟ್ಯಾಂಪ್ ಡ್ಯೂಟಿ, ಕನ್ವರ್ಷನ್ ಫೈನ್ ಮುಂತಾದ ಎಲ್ಲ ರೀತಿಯ ಫೀಗಳನ್ನು ಮಾಫಿ ಮಾಡಲಾಗಿದೆ. ಇದರ ಬಾಬ್ತೇ ನೂರಾರು ಕೋಟಿಗಳಷ್ಟಾಗುತ್ತದೆ. ಇದಕ್ಕೆ ಯಾವ ಲಾಜಿಕ್ಕೂ ಇಲ್ಲ. ಆತ ಸಾರ್ವಜನಿಕ ಹಿತಕ್ಕಾಗಿ ರಸ್ತೆ ಮಾಡಿಕೊಡುತ್ತಿದ್ದಾನೆ, ಅದಕ್ಕಾಗಿ ಈ ಎಲ್ಲ ವಿನಾಯ್ತಿಗಳು ಅಂತಾರೆ ಅಧಿಕಾರಸ್ಥರು. ಆದರೆ ನನೆಪಿಡಬೇಕು ಖೇಣಿ ಸಾಹೇಬರು ರಸ್ತೆಯನ್ನೇನು ಬಿಟ್ಟಿ ಮಾಡಿಕೊಡುತ್ತಿಲ್ಲ. ಇದೊಮದು ಬಿಸಿನೆಸ್ ಮಾಡೆಲ್. ಅವರು ಮಾಡುತ್ತರಿಉವುದು ವ್ಯಾಪಾರ, ಸೇವೆಯಲ್ಲ.

ಇಷ್ಟೇ ಆಗಿದ್ದರೆ ಚೆನ್ನಿತ್ತು. ಆದರೆ ಇದೇ ಆರ್ಟಿಕಲ್ 12ರಲ್ಲಿ ಮತ್ತೊಂದು ಅನಾಹುತಕಾರಿ ಕ್ಲಾಸ್ ಇದೆ. ಪ್ಯಾರಾ 12.4 ಏನು ಹೇಳುತ್ತದೆ?   GOK will use its best efforts to cause the infrastructure corridor project to be classified as an industry in accordance with Package scheme of incentives and Concessions 1996-2001 of Karnataka state and thereby qualify and extend to the company and the infrastructure corridor project to all of the benefits, incentives and concessions available to such industry under such scheme. 


 ಅಲ್ಲಿಗಾಯ್ತಲ್ಲ. ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳು! ಅಸಲಿಗೆ ಬಿಎಂಐಸಿಪಿ ಎನ್ನುವುದು ರಸ್ತೆ ಕಾಮಗಾರಿ. ಇದು ಬರಬೇಕಿರುವುದು ಲೋಕೋಪಯೋಗಿ ಇಲಾಖೆಯಡಿಯಲ್ಲಿ. ಆದರೆ ಇದನ್ನು ಇಂಡಸ್ಟ್ರಿ ಎಂದು ಪರಿಗಣಿಸಿಬಿಟ್ಟರೆ ಕಂಪೆನಿಗೆ ಹಲವಾರು ಲಾಭಗಳುಂಟು. ಮದಲಿಗೆ ಕೈಗಾರಿಕಾ ಸ್ಥಾಪನೆಗೆ ಸಿಗುವ ಎಲ್ಲ ಸೌಲಭ್ಯಗಳೂ, ವಿನಾಯ್ತಿಗಳೂ ಬಿಎಂಐಸಿಪಿಗೂ ಸೇರುತ್ತದೆ. ಇಷ್ಟೇ ಅಲ್ಲ ಒಮ್ಮೆ ಬಿಎಂಐಸಿಪಿಯನ್ನು ಕೈಗಾರಿಕೆ ಎಂದು ಪರಿಗಣಿಸದ ಮೇಲೆ ಮುಗಿಯಿತು. ಬಡ ರೈತರ ಭೂಮಿ ನುಂಗುವ ಹೆಬ್ಬಾವಿನಂತಿರುವ ಕೆಐಎಡಿಬಿ ಸೀನ್ಗೆ ಬರುತ್ತದೆ. ಮೂಲ ಒಪ್ಪಂದದ ಪ್ರಕಾರ ನೈಸ್ ಸಂಸ್ಥೆಯೇ ರೈತರಿಂದ ಜಮೀನನ್ನು ಕೊಂಡುಕೊಳ್ಳಬೇಕಿತ್ತು. ಅದಕ್ಕೂ ಸರ್ಕಾರಕ್ಕೂ ಸಂಬಂಧವೇ ಇರಲಿಲ್ಲ. ಆದರೆ ಒಮ್ಮೆ ಕೆಐಎಡಿಬಿ ಪಿಚ್ಚರ್ರಿಗೆ ಬಂದ ಮೇಲೆ ಖೇಣಿ ಸಾಹೇಬರಿಗೆ ಆ ತೊಂದರೆ ಕೂಡ ಇಲ್ಲ.  ಕಂಪೆನಿಗೆ ಸರ್ಕಾರ ತನ್ನ ಸಂಬಂಧಪಟ್ಟ ಇಲಾಖೆಗಳ ಮೂಲಕ ಬೇಕಾದ ಅಗತ್ಯ ಭೂಮಿಯನ್ನು ವಶಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸಬೇಕು. ಕಂಪೆನಿ ಈ ಮೊದಲೇ ಒಪ್ಪಿಗೆಯಾದಂತಹ ಪರಿಹಾರದ ಪ್ಯಾಕೇಜನ್ನು ಸರ್ಕಾರಕ್ಕೆ ಕಟ್ಟುತ್ತದೆ. ಇದನ್ನು ಸರ್ಕಾರ ಭೂಮಿ ಕಳೆದುಕೊಂಡ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಬೇಕು. ಅಲ್ಲಿಗೆ ಖೇಣಿ ಸಾಹೇಬರು ಏಕದಂ ಒಂದೇ ಏಟಿಗೆ ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳುವ ಎಲ್ಲ ತಲೆನೋವನ್ನೂ ಕಳೆದುಕೊಳ್ಳುತ್ತಾರೆ. ಅವರ ಬದಲಿಗೆ ಸರ್ಕಾರದ ಪರವಾಗಿ ಕೆಐಎಡಿಬಿ ಬ್ರೋಕರ್ ರೀತಿಯಲ್ಲಿ ಆ ಕೆಲಸ ಮಾಡಿಕೊಡಬೇಕು, ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಈ ಪ್ರಾಜೆಕ್ಟಿಗೆಂದು ವಶಪಡಿಸಿಕೊಂಡ ಭೂಮಿಯನ್ನು ಯಾರಾದರೂ ಅತಿಕ್ರಮಿಸಿದರೆ ಅದನ್ನು ತೆರವುಗೊಳಿಸಿ ಭೂಮಿಯನ್ನು ಸೇಫ್ ಆಗಿ ನೋಡಿಕೊಳ್ಳುವುದು ಕೂಡ ಇದರ ಕೆಲಸವೇ.

ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳು ಅಂದೆನಲ್ಲ, ಅದರಲ್ಲಿ ಒಂದೆರಡನ್ನಷ್ಟೇ ಮೇಲೆ ವಿವರಿಸಿದ್ದೇನೆ. ಮತ್ತೊಂದು ಮುಖ್ಯ ಪ್ರಮಾದ ಕೂಡ ಇದರಿಂದ ನಡೆದು ಹೋಯಿತು. ಈ ಕ್ಲಾಸ್ನಿಂದ ಇಡಿಯ ಬಿಎಂಐಸಿಪಿ ಪ್ರಾಜೆಕ್ಟಿನ ಮೇಲೆ ಕೈಗಾರಿಕಾ ಇಲಾಖೆಗೆ ಹಿಡಿತ ಸಿಕ್ಕಿ ಹೋಯಿತು. ಅಂದು ಜೆ.ಎಚ್.ಪಟೇಲರ ಸರ್ಕಾರದಲ್ಲಿ ಇಂಡಸ್ಟ್ರೀಸ್ ಮಿನಿಸ್ಟ್ರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿರುವಂತಹ ಆರ್.ವಿ.ದೇಶಪಾಂಡೆ! ನಂತರ ಎಸ್ಸೆಂ.ಕೃಷ್ಣರ ಸರ್ಕಾರದಲ್ಲೂ ಇವರೇ ಇಂಡಸ್ಟ್ರೀಸ್ ಮಿನಿಸ್ಟ್ರು! ಅಂದರೆ ಸತತ ಎರಡು ಅವಧಿಗೆ - 10 ವರ್ಷಗಳ ಕಾಲ ಆರ್.ವಿ.ದೇಶಪಾಂಡೆ ಈ ರಾಜ್ಯದ ಇಂಡಸ್ಟ್ರೀಸ್ ಮಿನಿಸ್ಟ್ರಾಗಿದ್ದರು. ಇವರು ಆ ಜಾಗದಾಗೆ ಕುಂತು ನೈಸ್ ಪರ ತೆಗೆದುಕೊಂಡ ನಿಲುವುಗಳು, ನಡೆಸಿದ ಹಗರಣಗಳು ಒಂದೇ ಎರಡೇ, ಸುವಿಸ್ತಾರವಾಗಿ ಬರೆದರೆ ಅದೇ ಒಂದು ಸೀರೀಸ್ ಆದೀತು. ಇದೇ ಸಮಯಕ್ಕೆ ಖೇಣಿಯವರ ಪರಮಾಪ್ತರಲ್ಲೊಬ್ಬರಾದ ಬಿ.ಎಸ್.ಪಾಟೀಲರು ಪ್ರಿನ್ಸಿಪಲ್ ಸೆಕ್ರೆಟರಿಗಳಾಗಿದ್ದರು, ನಂತರ ಎಸ್ಸೆಂ.ಕೃಷ್ಣರ ಅವಧಿಯಲ್ಲಿ ಇವರು ಚೀಫ್ ಸೆಕ್ರೆಟರಿಯಾಗಿದ್ದರು. ಮತ್ತೊಬ್ಬರು ಕ್ಯಾಪ್ಟನ್ ರಮೇಶ್, ಇವರು ಲೋಕೋಪಯೋಗಿ ಕಾರ್ಯದರ್ಶಿಗಳಾಗಿದ್ದರು. ಫ್ರೇಂವರ್ಕ್ ಅಗ್ರೀಮೆಂಟಿಗೆ ಸರ್ಕಾರದ ಪರವಾಗಿ ಇವರೇ ಸಹಿ ಹಾಕಿರುವುದು. ಅಲ್ಲಿಗೆ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಮೂವರು `ಮಹನೀಯರು' ಬಂದು ಕೂತರು. ಕಬ್ಬಿಣ ಕಾದಿತ್ತು. ಆಡಳಿತ ವ್ಯವಸ್ಥೆಯಲ್ಲಿ ಖೇಣಿಯ ಸುತ್ತಿಗೆಗಳು ಬಂದು ಕೂತವು. ಮಿಕ್ಕೆಲ್ಲವೂ ಯಾವುದೇ ಸದ್ದು ಸಪ್ಪಳವಿಲ್ಲದೆ ಸಾಂಗೋಪಾಂಗವಾಗಿ ನಡೆದು ಹೋದವು. 

ಇನ್ನು ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನ ಪರಮ ನಿರ್ಲಜ್ಜ ಕ್ಲಾಸ್ ಎಂದರೆ ಆರ್ಬಿಟ್ರೆಶನದು. ಆರ್ಟಿಕಲ್ 18 ಇದನ್ನು ವಿವರಿಸುತ್ತದೆ. ಇದರ ಪ್ರಕಾರ ಏನೇ ಡಿಸ್ಪ್ಯೂಟ್ಗಳು ಎದುರಾದರೂ 30 ದಿನಗಳೊಳಗೆ ಉಭಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಸರ್ಕಾರ ಮತ್ತು ಕಂಪೆನಿ ಇಬ್ಬರಿಗೂ ಒಪ್ಪಿಗೆಯಾಗತಕ್ಕಂತಹ ತಜ್ಞರ ಸಮಿತಿಗೆ ಅದನ್ನು ಒಪ್ಪಿಸಬೇಕು. ಅದಕ್ಕೆ 60 ದಿನಗಳ ಕಾಲಾವಕಾಶ. ಇನ್ನು ಈ ತಜ್ಞರ ಸಮಿತಿಯ ಶಿಫಾರಸನ್ನು ಕಂಪೆನಿ ಒಪ್ಪಬಹುದು ಇಲ್ಲ ತಿರಸ್ಕರಿಸಬಹುದು. ಹಾಗಾದರೆ ತಜ್ಞರ ಸಮಿತಿಯೇಕೋ? ಇಲ್ಲ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಆರ್ಬಿಟ್ರೆಶನ್ಗೆ ಹೋಗಬೇಕು. ಸರ್ಕಾರ ಮತ್ತು ಕಂಪೆನಿ ಇಬ್ಬರೂ ತಮ್ಮ ತಮ್ಮ ಪರವಾಗಿ ಒಬ್ಬರನ್ನು ಆರ್ಬಿಟ್ರೇಟರ್ ಆಗಿ ನೇಮಿಸತಕ್ಕದ್ದು. ನಂತರ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್, ಪ್ಯಾರಿಸ್ ಮೂರನೆಯ ನ್ಯೂಟ್ರಲ್ ಆರ್ಬಿಟ್ರೇಟರ್ ಅನ್ನು ನೇಮಿಸುತ್ತದೆ. ಈ ಆರ್ಬಿಟ್ರೇಷನ್, ನ್ಯೂ ಯಾರ್ಕ್ ಕನ್ವೆಂಷನ್ 1958ರಂತೆ ನಡೆಯುತ್ತದೆ. ಈ ಆರ್ಬಿಟ್ರೇಷನ್ ಕಮಿಟಿ ನೀಡುವ ತೀರ್ಪೇ ಅಂತಿಮ. ಅದನ್ನು ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ! ಈ ಆರ್ಬಿಟ್ರೇಷನ  ನಡೆಸಬೇಕಾದ ಸ್ಥಳ ಯಾವುದು ಗೊತ್ತಾ - ಲಂಡನ್ ಕೋರ್ಟ್! ಅಂದರೆ ಹೆಮ್ಮಿಗೇಪುರ ಕುಂಬಳಗೋಡಿನ ರೈತ ಲಂಡನ್ ಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕು!

ನೈಸ್ ಪುರಾಣ - 5 - ಫ್ರೇಂವರ್ಕ್ ಅಗ್ರೀಮೆಂಟ್ ಎಂಬ ಪೆಡಂಭೂತ!

ನೀವು ಸರ್ಕಾರವನ್ನಾಗಲೀ ನೈಸ್ ಕಂಪೆನಿಯನ್ನಾಗಲೀ ಯಾರನ್ನೇ ಈ ಪ್ರಾಜೆಕ್ಟಿನ ಬಗ್ಗೆ ಕೇಳಿ ನೋಡಿ, ಅವರು ಫ್ರೇಂವರ್ಕ್ ಅಗ್ರೀಮೆಂಟಿಗೆ ರೆಫರ್ ಮಾಡುತ್ತಾರೆ. ದೇವೇಗೌಡರು ಮತ್ತು ಸುಪ್ರೀಂ ಕೋರ್ಟ್ as orijinally concieved ಎಂಬ ಪದ ಬಳಸುತ್ತಾರಲ್ಲ, ಅದು ಇದಕ್ಕೇ. ಇವತ್ತು ಈ ನೈಸ್ ವಿಚಾರ ಲೀಗಲೀ ಕೂಡ ಏಕೆ ಇಷ್ಟು ಕಗ್ಗಂಟಾಗಿ ಕೂತಿದೆ, ಎಂದರೆ ಅದಕ್ಕೆ ಮತ್ತೆ ಇದೇ ಫ್ರೇಂವರ್ಕ್ ಅಗ್ರೀಮೆಂಟ್ ಕಾರಣ. ಇಡೀ ಪ್ರಾಜೆಕ್ಟಿನ ರೂಪುರೇಷೆಗಳನ್ನು ಈ ಅಗ್ರೀಮೆಂಟ್ ತಿಳಿಸುತ್ತದೆ.

ಹೋದ ವಾರ ನಾವು ಈ ಫ್ರೇಂವರ್ಕ್ ಅಗ್ರೀಮೆಂಟ್ ಎಂಬುದು ಇಡಿಯ ಬಿಎಂಐಸಿಪಿಗೆ ಹೇಗೆ ಇಂದು ಮೂಲಧಾತುವಾಗಿದೆ? ಹೇಗೆ ಅದು ನಿರ್ಲಜ್ಜವಾಗಿ ನೈಸ್ ಕಂಪೆನಿಯ ಪರವಾಗಿದೆ? ಹೇಗೆ ಅದು ಸಾವಿರಾರು ರೈತರ ಬದುಕಿನ ನೇಣುಗಂಬವಾಗಿದೆ? ಭೂಮಿಯ ವಿಷಯದಲ್ಲಿ ಎಂತೆಂತಹ ಹಗರಣಗಳು ನಡೆದಿವೆ ಎಂಬುದನ್ನು ಕೂಲಂಕುಷವಾಗಿ ನೋಡಿದ್ದೇವೆ. ಈ ವಾರ ಫ್ರೇಂವರ್ಕ್ ಅಗ್ರೀಮೆಂಟನ್ನು ಮತ್ತಷು ವಿಮರ್ಶೆಗೆ ಒಳಪಡಿಸೋಣಂತೆ.

ಮೊದಲಿಗೆ ಟೋಲ್ ರಸ್ತೆ - ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ.6 ರಸ್ತೆ ನಿರ್ಮಾಣ ಮತ್ತು ಅದರ ನಿರ್ವಹಣೆಯ ಕುರಿತು ಮಾತನಾಡುತ್ತದೆ. ಇದರಂತೆ ಕಂಪೆನಿಯು ಟೋಲ್ ಅಥಾರಿಟಿ ಎಂಬ ಒಂದು ಸಬ್ಸಿಡಿಯರಿಯನ್ನು ಸ್ಥಾಪಿಸತಕ್ಕದ್ದು. ಬಿಎಂಐಸಿಪಿಯ ಟೋಲ್ ರಸ್ತೆಯ ಸಂಪೂರ್ಣ ನಿರ್ವಹಣೆಯನ್ನು ಕಂಪೆನಿ ಈ ಟೋಲಿ ಅಥಾರಿಟಿಗೆ ವಹಿಸಬೇಕು. ಟೋಲ್ ಅಥಾರಿಟಿ ಚಾರ್ಟರ್ ಮತ್ತು ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ನ ನಿಯಮಗಳನುಸಾರವಾಗಿ 30 ವರ್ಷಗಳ ಕನಸೆಷನ್ ಅವಧಿ ಮುಗಿಯುವವರೆಗೆ ಕಂಪೆನಿ ಈ ರಸ್ತೆಯನ್ನು ನಿರ್ವಹಿಸುತ್ತದೆ. ಈ ರಸ್ತೆಯ ಮೇಲೆ ಚಲಿಸುವ ಎಲ್ಲಾ ವಾಹನಗಳಿಂದಲೂ ಇಂತಿಷ್ಟು ಅಂತ ಪೂರ್ವ ನಿಗದಿತ ಮೊತ್ತವನ್ನು ಟೋಲ್ ಆಗಿ ಸ್ವೀಕರಿಸುತ್ತದೆ. ಈ ಟೋಲ್ ಮೊತ್ತ ಸರ್ಕಾರ ಮತ್ತು ಕಂಪೆನಿಯು ಕೂತು ನಿರ್ಧರಿಸತಕ್ಕಂತಹ ಒಂದು ಮೊತ್ತವಾಗಿರುತ್ತದೆ. ಬಿಎಂಐಸಿಪಿ ರಸ್ತೆಯ ಸೆಕ್ಯುರಿಟಿ, ಟೋಲ್ ಡಿಫಾಲ್ಟರ್ಸ್ ಎಲ್ಲವನ್ನೂ ನಿಭಾಯಿಸುವ ಜವಾಬ್ದಾರಿಯನ್ನು ಈ ಟೋಲ್ ಅಥಾರಿಟಿಗೆ ವಹಿಸಲಾಗಿದೆ. ಈ 30 ವರ್ಷಗಳ ಮಧ್ಯದಲ್ಲಿ ಭಾರತದ ಸರ್ಕಾರ ಅಥವಾ ಕರ್ನಾಟಕದ ಸರ್ಕಾರ ಈ ರಸ್ತೆಯನ್ನು ಅಥವಾ ಈ ರಸ್ತೆಯ ಒಂದು ಭಾಗವನ್ನು ನ್ಯಾಷನಲ್ ಹೈವೇಸ್ ಆಕ್ಟ್ 1956ನ ಸೆಕ್ಷನ್ 2(2)ರಡಿಯಲ್ಲಿ ನ್ಯಾಷನಲ್ ಹೈವೇ ಎಂದು ಘೋಷಿಸದಂತೆ ನೋಡಿಕೊಳ್ಳಲಾಗುವುದೆಂದು ಸರ್ಕಾರ  ಆಶ್ವಾಸನೆ ನೀಡಿದೆ. ಇದೇ ಆರ್ಟಿಕಲ್ 6ರಲ್ಲಿ ಟೋಲ್ ರಸ್ತೆಯನ್ನು ಆರು ಫೇಸ್ಗಳಾಗಿ, ಮೂರು ಸೆಕ್ಷನ್ಗಳಾಗಿ ವಿಂಗಡಿಸಿದ್ದು, ಅದರ ಸ್ಪಷ್ಟ ರೂಪುರೇಖೆಗಳನ್ನು ದಾಖಲಿಸಲಾಗಿದೆ.

ಅಂತೆಯೇ ಈ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ಟೈಮ್ ಟೇಬಲ್ಲನ್ನು ಕೂಡ ಫ್ರೇಂವರ್ಕ್ ಅಗ್ರೀಮೆಂಟ್ ಕರಾರು ಮಾಡಿದೆ. ಇದರಂತೆ ಮೊದಲ ಫೈನಾನ್ಷಿಯಲ್ ಕ್ಲೋಸಿಂಗ್ ಆದ 8 ವರ್ಷಗಳಿಗೆ ಮೊದಲ ಸೆಕ್ಷನ್, 10 ವರ್ಷಗಳಿಗೆ 2 ಮತ್ತು 3ನೇ ಸೆಕ್ಷನ್ ರಸ್ತೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು. ಇನ್ನುಳಿದ 2 ವರ್ಷಗಳಲ್ಲಿ ಅಳಿದುಳಿದ ಕೆಲಸಗಳಾಗಬೇಕು. ಅಕಸ್ಮಾತ್ ರಸ್ತೆಯ ಯಾವುದೋ ಒಂದು ಭಾಗದ ನಿಮರ್ಾಣ ತೀರ ವಿಳಂಬವಾಗುತ್ತಿದ್ದರೆ, ಸರ್ಕಾರ ಅದನ್ನು ತುಂಡು ಗುತ್ತಿಗೆಯಂತೆ ಮತ್ತೊಂದು ಕಂಪೆನಿಗೆ ವರ್ಗಾಯಿಸಬಹುದಾಗಿದೆ. ಆದರೆ ಇದೆಲ್ಲವೂ ಅಗ್ರೀಮೇಂಟಿನ ಆರ್ಟಿಕಲ್ 2ರ ಎಲ್ಲಾ ಕರಾರುಗಳೂ ಪೂರ್ಣಗೊಂಡರೆ ಮಾತ್ರ.

ಇನ್ನು ರಸ್ತೆ 6 ಲೇನ್ಗಳದಾಗಿದ್ದು, 4 ಎಕ್ಸ್ಪ್ರೆಸ್ ಲೇನ್ ಮತ್ತು 2 ಸರ್ವೀಸ್ ರಸ್ತೆಗಳನ್ನೊಳಗೊಂಡಿದೆ. ಕಂಪೆನಿ ಬಯಸಿದಲ್ಲಿ ಚತುಷ್ಪಥ ರಸ್ತೆಯನ್ನು 6 ಲೇನ್ಗಳಿಗೆ ಹಿಗ್ಗಿಸಬಹುದು. ಕಂಪೆನಿಯು ಟೋಲ್ ರಸ್ತೆಯನ್ನು ಅಂತರಾಷ್ಟ್ರೀಯ ಪ್ರಮಾಣಗಳಿಗನುಗುಣವಾಗಿ ಕಾಂಕ್ರೀಟಿನಲ್ಲಿ ಕಟ್ಟತಕ್ಕದ್ದು! ಆಶ್ಚರ್ಯ ಅಲ್ಲವೇ ನಮ್ಮ ಈಗಿನ ನೈಸ್ ರಸ್ತೆ ನಮ್ಮ ಮನೆಯ ಮುಂದಿನ ಟಾರ್ ರಸ್ತೆಯೇ ಅಲ್ಲವೇ ಅಂದಿರಾ? ಹೌದು ಇದು ನೈಸ್ ಪುರಾಣದಲ್ಲಿ ಮತ್ತೊಂದು ಉಪಕಥೆ, ಒಂದು ಉಪ ಹಗರಣ! ಈಗಲೂ ನೀವು ಖೇಣಿಯವರನ್ನು ಕೇಳಿ ನೋಡಿ, ಅದೇನೋ ಮೊದಲೇ ಕಾಂಕ್ರೀಟು ಹಾಕಿದರೆ ರಸ್ತೆಯಲ್ಲಿ ಬಿರುಕು ಬಿಟ್ಟುಕೊಂಡುಬಿಡುತ್ತದಂತೆ, ಆದ್ದರಿಂದ ಅವರು ಈಗ ಟಾರು ರಸ್ತೆ ಹಾಕಿದ್ದಾರಂತೆ, ಮುಂದೆ(?) ಅವರು ಕಾಂಕ್ರೀಟು ರಸ್ತೆ ಮಾಡುವವರಿದ್ದಾರಂತೆ!

ಟೌನ್ಷಿಪ್ಗಳು - ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಲ್ಲಿ 7 ಟೌನ್ಷಿಪ್ಗಳನ್ನು ಸ್ಥಾಪಿಸಲು ಉದ್ದೇಶಿಸಿತ್ತಾದರೂ ಕೊನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಕೇವಲ 5 ಟೌನ್ಷಿಪ್ಗಳಿಗೆ. ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ 7 ಈ ಕುರಿತು ಮಾತನಾಡುತ್ತದೆ. ಟೌನ್ಷಿಪ್ಗಳು ಬಿಎಂಐಸಿಪಿಯ ಅವಿಭಾಜ್ಯ ಅಂಗ ಎಂದು ಮೊದಲಿಗೇ ಸಾರುವ ಈ ಆರ್ಟಿಕಲ್ ಇನ್ನೂ ಮುಂದೆ ಹೋಗಿ ಕಂಪೆನಿ ಬೆಂಗಳೂರು ಮತ್ತು ಮೈಸೂರಿನ ಕೈಗಾರಿಕೆಗಳು, ವಾಣಿಜ್ಯ ವ್ಯವಹಾರ ಮತ್ತು ಟೂರಿಸಮ ಅನ್ನು ಅಬೀವೃದ್ಧಿಪಡಿಸಲು ರೂಪಿಸುತ್ತಿರುವ ಈ ಟೌನ್ಷಿಪ್ಗಲನ್ನು ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಿಂದ ಡೀವಿಯೇಟ್ ಆಗಿ ಕೂಡ ನಿರ್ಮಿಸಬಹುದು ಎಂದು ಸ್ಪಷ್ಟವಾಗಿ ತಿಳಿಸುತ್ತದೆ. ಇನ್ನು ಈ ಟೌನ್ಷಿಪ್ಗಳ ನಿರ್ವಹಣೆ. ಟೌನ್ಷಿಪ್ಗಳ ನಿಮರ್ಾಣದ ಒಂದನೇ ವಾರ್ಷಿಕೋತ್ಸವದಂದು ಕಂಪೆನಿ ಈ ಟೌನ್ಷಿಪ್ಗಳ ಆಡಳಿತವನ್ನು ಸರ್ಕಾರಕ್ಕೆ ಒಪ್ಪಿಸತಕ್ಕದ್ದು ಎಂಬುದು ನಿಯಮ. ಈ ಟೌನ್ಷಿಪ್ಗಳಲ್ಲಿ ಶೇ.55ರಷ್ಟು ಭೂಮಿಯನ್ನು ಕಮರ್ಷಯಲಿ ಬಳಸಬಹುದಾಗಿದ್ದು, ಇನ್ನುಳಿದ ಶೇ45ರಷ್ಟು ಭೂಮಿಯನ್ನು ಸಿವಿಕ್ ಅಮೆನಿಟಿಗಳಾದ ಶಾಲೆ, ರಸ್ತೆ, ಗುಡಿ, ಗೋಪುರ, ಪೋಲೀಸ್ ಠಾಣೆ, ಅಗ್ನಿಶಾಮಕದಳ ಮುಂತಾದ ಸವಕರ್ಯಗಳನ್ನೊದಗಿಸಲು ಬಳಸಬೇಕು. ಮತ್ತು ಒಂದು ವರ್ಷದ ನಂತರ ಟೌನ್ಷಿಪ್ನ ಆಡಳಿತದ ಜೊತೆಗೆ ಈ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇದಲ್ಲದೆ ಸರ್ಕಾರ  ಅನೇಕ ಇತರ ಷರತ್ತುಗಳನ್ನು ವಿಧಿಸುತ್ತದೆ. ಈಗಾಗಲೇ ಬೆಂಗಳೂರು ಸಾಕಷ್ಟು ಬೆಳೆದಿದ್ದು, ಇದರ ಮೇಲೆ 5 ಬೃಹತ್ ಟೌನ್ಷಿಪ್ಗಳನ್ನು ಸೇರಿಸುವುದು ಬೆಂಗಳೂರಿನ ಮೂಲಭೂತ ಸೌಕರ್ಯಗಳ ಮೇಲೆ ಇನ್ನಷ್ಟು ಹೊರೆಯಾಗುವುದರಿಂದ, ಕಂಪೆನಿಯೇ ಪ್ರಾಸ್ತಾಪಿಸಿದಂತೆ ಈ ಟೌನ್ಷಿಪ್ಗಳಲ್ಲಿನ ಸಿವಿಕ್ ಅಮೆನಿಟಿಗಳು ಮತ್ತು ಈ ಟೌನ್ಷಿಪ್ಗಳಿಗೆ ವಿದ್ಯುತ್ತು ಮತ್ತು ನೀರಿನ ಸರಬರಾಜು ಹೊನೆಯನ್ನೂ ಸಹ ಕಂಪೆನಿಗೇ ಒಪ್ಪಿಸಲಾಗಿದೆ. ಇದರಂತೆ ಬೆಂಗಳೂರಿನ ಸೀವೇಜ್ ನೀರನ್ನು ರಿಸೈಕಲ್ ಮಾಡಿ ಇತರೆ ಅವಶ್ಯಕತೆಗಳಿಗೆ ಉಪಯೋಗಿಸಲು ಅನುಕೂಲವಾಗುವಂತೆ ಒಂದು ವಾಟರ್ ರೀಸೈಕ್ಲಿಂಗ್ ಯೂನಿಟ್ ಮತ್ತು ವಿದ್ಯುತ್ ಸರಬರಾಜಿಗೆಮದು 400 ಮೆಗಾವ್ಯಾಟ್ಗಳ ಸಾಮಥ್ರ್ಯದ ವಿದ್ಯುತ್ ಯೂನಿಟ್ಗಳನ್ನೂ ಕಂಪೆನಿ ಸ್ಥಾಪಿಸಬೇಕು. ಟೌನ್ಷಿಪ್ಗಳಿಗೆ ಆಗಿ ಇನ್ನುಳಿದ ವಿದ್ಯುತ್ತನ್ನು ಸರ್ಕಾರಕ್ಕೆ ಕಂಪೆನಿ ಮಾರಬೇಕು. ಇದು ಕರಾರು.

ಇನ್ನು ಈ ಫ್ರೇಂವರ್ಕ್ ಅಗ್ರೀಮೆಂಟಿನ ಬಹುಮುಖ್ಯ ಅಂಶವೆಂದರೆ ಇದು ಬಿಎಂಐಸಿಪಿ ಯೋಜನೆಯ ಶೀಘ್ರ ಮತ್ತು ಸಾದ್ಯಂತ ಅನುಷ್ಠಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಒಂದು ಉನ್ನತಾಧಿಕಾರ ಸಮಿತಿಯನ್ನು  ರಚಿಸುತ್ತದೆ ಎಂಬುದು. ಇದು ಇಡಿಯ ಬಿಎಂಐಸಿಪಿ ಪ್ರಾಜೆಕ್ಟಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಕಾರ್ಯನಿರ್ವಹಿಸಬೇಕಿರುವುದು ಇದರ ಮ್ಯಾಂಡೇಟ್. ಇಂತಿಪ್ಪ ಉನ್ನತಾಧಿಕಾರ ಸಮಿತಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ. ಇನ್ನುಳಿದಂತೆ ಪ್ರಿನ್ಚಿಪಲ್ ಸೆಕ್ರೆಟರಿ, ಫೈನಾನ್ಸ್ ಆಫೀಸರ್, ಕೈಗಾರಿಕೆ, ಕಂದಾಯ, ವಸತಿ, ನಗರಾಭಿವೃದ್ಧಿ, ಅರಣ್ಯ ಮತ್ತು ಪರಿಸರ, ಇಂಧನ, ಕಾನೂನು, ಲೋಕೋಪಯೋಗಿ, ಮೂಲಭೂತ ಸೌಕರ್ಯ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಕೆಯೆಡಿಬಿಯ ಅಧ್ಯಕ್ಷರು ಈ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಕಮಿಟಿಯು ಬಿಎಂಐಸಿಪಿ ಯೋಜನೆಯ ಅನುಷ್ಠಾನವನ್ನು ಅದರ ಪ್ರಗತಿಯನ್ನೂ ಎಂದಾದರೂ ಸರಿ ಪರಿಶೀಲಿಸಬಹುದಾಗಿದೆ. ಇಂತಿಪ್ಪ ಉನ್ನತಾಧಿಕಾರ ಸಮಿತಿಯ ನಿರ್ಧಾರ ನಿಲುವುಗಳು ಸರ್ಕಾರದ ನಿಲುವುಗಳು ಕೂಡ ಎಂದೂ ತಿಳಿಸಲಾಗಿದೆ. ಇದು ಬಹಳ ಮುಖ್ಯ. ಮುಂದೆ ಈ ನೈಸ್ ಪುರಾಣ ಅನೇಕ ಉಪಥೆಗಳನ್ನು ತನ್ನೊಡಲಲ್ಲಿ ಸೇರಿಸಕೊಂಡು ಹೆಮ್ಮರವಾಗಿ ಬೆಳೆಯಿತು, ಇನ್ನೂ ಬೆಳೆಯುತ್ತಲೇ ಇದೆ. ಈ ಮಧ್ಯೆ ಇದೇ ಉನ್ನತಾಧಿಕಾರ ಸಮಿತಿಯು ರಾಜ್ಯ ಹೈಕೋರ್ಟ್ನಲ್ಲಿ ಇಡೀ ಬಿಎಂಐಸಿಪಿ ಯೋಜನೆಯು 30 ಸಾವಿರ ಕೋಟಿ ರುಪಾಯಿಗಳ ಹಗರಣ ಎನ್ನುವುದಾಗಿ ಅಫಿಡವಿಟ್ ಸಲ್ಲಿಸಿದೆ. ಬಿಎಂಐಸಿಪಿ ಯೋಜನೆಯ ಅನುಷ್ಠಾನಕ್ಕಾಗಿ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅದೇ ಉನ್ನತಾಧಿಕಾರ ಸಮಿತಿ ಇಡೀ ಯೋಜನೆಯನ್ನು 30 ಸಾವಿರ ಕೋಟಿ ರೂ.ಗಳ ಹಗರಣ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುತ್ತದೆ ಎಂದರೆ? ಹಗರಣದ ಮೊತ್ತದ ಬಗ್ಗೆ ವಾದಗಳಿರಬಹುದು ಆದರೆ ಇದೊಂದು ಹಗರಣವೆನ್ನುವುದರ ಬಗ್ಗೆ ಬಹುಶಃ ಇರುವ ಎಲ್ಲ ಅನುಮಾನಗಳಿಗೆ ಈ ಅಫಿಡವಿಟ್ ತೆರೆ ಎಲೆಯುತ್ತದೆ. ಇದನ್ನು ಮುಂದೆ ಬರೆಯುವವನಿದ್ದೇನೆ.

ಫ್ರೇಂವರ್ಕ್ ಅಗ್ರೀಮೆಂಟ್ನಲ್ಲಿ ಇಷ್ಟೇ ಅಲ್ಲ ಇನ್ನೂ ಹಲವಾರು ಆಸಕ್ತಿಕರ ಮಾಹಿತಿಗಳಿವೆ. ಇನ್ನೂ ಹಲವಾರು ಹಗರಣಗಳಿವೆ. ಅದರ ಕುರಿತ ಚರ್ಚೆ ಮುಂದಿನ ವಾರ.

ರಾಜ್ಯ ಏನು ಇವರಪ್ಪನ ಮನೆ ಜಹಗೀರಾ......?

ತಮಿಳುನಾಡಿನ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಸಹಜವಾಗಿ ಎಲ್ಲರ ಮನಸ್ಸಿನಲ್ಲೂ ಮೂಡುವ ಪ್ರಶ್ನೆ ಇದು. ಕರುಣಾನಿಧಿಯ ನಂತರ ಯಾರು? ಅನ್ನುವುದು ಇಡಿಯ ತಮಿಳುನಾಡಿಗೇ ಬೃಹದಾಕಾರವಾಗಿ ಬೆಳೆದು ನಿಂತಿರುವ ಪ್ರಶ್ನೆ. ಆದರೆ ದುರದೃಷ್ಟವಶಾತ್ ಇಲ್ಲಿ ಚರ್ಚೆಯಾಗುತ್ತಿರುವುದು ನಾಯಕತ್ವ ಲಕ್ಷಣಗಳ ಬಗ್ಗೆ ಅಲ್ಲವೇ ಅಲ್ಲ, ಬದಲಿಗೆ ಕರುಣಾನಿಧಿಯ ನಂತರ ಆ ಜಾಗದಲ್ಲಿ ಕೂಡಬೇಕಿರುವುದು ಹಿರಯ ಮಗ ಅಳಗಿರಿಯೋ ಇಲ್ಲ ಕಿರಿಯ ಮಗ ಸ್ಟಾಲಿನ್ನೋ ಅನ್ನೋದು ಅಷ್ಟೆ! ಈ ಇಬ್ಬರು ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ರಾಷ್ಟರಮಟ್ಟದಲ್ಲಿ ನ್ಯೂಸ್ ವ್ಯಾಲ್ಯೂ!


ಅಂಗೈ ಮೇಲಿನ ರೇಖೆಗಳಂತೆ ಪರಿಚಿತ ತಮಿಳುನಾಡನ್ನು 5ನೇ ಬಾರಿಗೆ ಆಳುತ್ತಿರುವ ಈ ಕರುಣಾನಧಿಗೆ ಸದ್ಯ ಕಾಡುತ್ತಿರುವ ಸಮಸ್ಯೆ ರಾಜ್ಯದ್ದಲ್ಲ, ಬದಲಿಗೆ ತನ್ನವೇ ಕುಟುಂಬಗಳದ್ದು! ಹೌದು ಕರುಣಾನಿಧಿಗೆ ಮೂವರು ಹೆಂಡತಿಯರು. ಮೊದಲ ಹೆಂಡತಿ ಪದ್ಮಾವತಿಯ ಮಗ ಎಂ .ಕೆ.ಮುತ್ತುನನ್ನು ತನ್ನ ಒಂದು ಕಾಲದ ಗೆಳೆಯ ರಾಜಕೀಯ ವೈರಿ ಎಂ.ಜಿ.ಆರ್.ಗೆ ಉತ್ತರವಾಗಿ ಬೆಳೆಸಲು ಪ್ರಯತ್ನಿಸಿದನಾದರೂ ಅದು ಆಗಲಿಲ್ಲ. ನಂತರ ಈತ ಏನಾದನೋ ಕೂಡ ಬಲ್ಲವರಿಲ್ಲ. ಎರಡನೆಯ ಹೆಂಡತಿ ದಯಾಳು ಅಮ್ಮಾಳ್ಗೆ ನಾಲ್ವರು ಮಕ್ಕಳು ಅಳಗಿರಿ, ಸ್ಟಾಲಿನ್, ತಮಿಳರಸು ಮತ್ತು ಸೆಲ್ವಿ. ಮೂರನೆಯ ಹೆಂಡತಿ ರಜತಿ ಅಮ್ಮಾಳ್ಗೆ ಒಬ್ಬಳೇ ಮಗಳು ಕನಿಮೊಳಿ. ತಮಿಳುನಾಡಿನ ದ್ರಾವಿಡ ರಾಜಕಾರಣದ ಆದ್ಯ ಪ್ರವರ್ತಕ ಸಂಸ್ಥಾಪಕರಲ್ಲಿ ಈಗ ಉಳಿದಿರುವುದು `ಕಲೈಗ್ನರ್' ಕರುಣಾನಿಧಿಯೊಬ್ಬರೆ. ಇನ್ನು ಮಿಕ್ಕವರೆಲ್ಲಾ ಎರಡನೇ, ಮೂರನೇ ತಲೆಮಾರಿನವರು, `ಪುರಚ್ಚಿ ತಲೈವಿ' ಜಯಲಲಿತಾ ಕೂಡ ಎರಡನೇ ತಲೆಮಾರಿನವಳು. ಕರುಣಾನಿಧಿಗೂ ವಯಸ್ಸಾಯಿತು, ಆತನಿಗೀಗ 86ರ ಆಸುಪಾಸು. ಈ ಜೀವನ ಸಂಧ್ಯಾಕಾಲದಲ್ಲೂ ಆತ 5ನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾನೆ. ಅರೋಗ್ಯ ಕೈಕೊಟ್ಟು ಶಾನೆ ಕಾಲವಾಗಿದೆ. ಸದ್ಯ ಆತ ವೀಲ್ ಛೇರ್ನಲ್ಲಿ ಬಂಧಿ. ಈಗ ಶುರುವಾಗಿದೆ ಸಮಸ್ಯೆ ಕರುಣಾನಿಧಿಯ ನಂತರ ಯಾರು? ಶುರುವಾಗಿದೆ ಮದಗಜಗಳ ಕಾದಾಟ.


ದ್ರಾವಿಡ ಚಳುವಳಿಯ ಮೂಸೆಯಿಂದ ಸಹಜವಾಗಿ ಒಡಮೂಡಿದ ಪಕ್ಷ ಡಿಎಂಕೆ - ದ್ರಾವಿಡ ಮುನ್ನೇಟ್ರ ಕಚಘಂ. ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೂಲಧಾತುವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು ಅಣ್ಣಾದೊರೈ. ಆದರೆ ಅಣ್ಣಾದೊರೈರ ಸಾವಿನ ನಂತರ ಈಗ ಎದ್ದಿರುವಂಥದ್ದೇ ಪ್ರಶ್ನೆ ಉದ್ಭವಿಸಿತ್ತು. ಅಣ್ಣಾರ ನಂತರ ಯಾರು? ಕರುಣಾನಿಧಿ ಇಲ್ಲ ಎಂ.ಜಿ.ಆರ್? ಆಗ ಗೆದ್ದವರು ಕರುಣಾನಿಧಿ. ಇದಾದ ಕೆಲವೇ ವರ್ಷಗಲಲ್ಲಿ ಕರುಣಾನಿಧಿ ಮತ್ತು ಎಂಜಿಆರ್ ಈರ್ವರ ನಡುವೆಯೂ ಭಿನ್ನಾಭಿಪ್ರಾಯಗಳು ತಲೆದೋರಿದವು. ದ್ರಾವಿಡ ಚಳುವಳಿ ಒಡೆದು ಹೋಯಿತು, ಎಂಜಿಆರ್ ಎಐಎಡಿಎಂಕೆ ಸ್ಥಾಪಿಸಿದರು. ಅಲ್ಲಿಗೆ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳೂ ವ್ಯಕ್ತಿ ಕೇಂದ್ರಿತ ಪಕ್ಷಗಳಾಗಿ ಹೋದವು. ಇದು ತಮಿಳುನಾಡು ರಾಜಕೀಯದ ಮಹಾ ದುರಂತವೇ ಸರಿ. ಒಮ್ಮೆ ಪಕ್ಷಗಳು ವ್ಯಕ್ತಿ ಕೇಂದ್ರಿತವಾದ ಮೇಲೆ ಇನ್ನು ಅಲ್ಲಿ ಕುಟುಂಬ ರಾಜಕಾರಣ ತಲೆದೋರುವುದು ಎಷ್ಟು ಹೊತ್ತಿನ ಮಾತು?

ಅತ್ತ ಎಐಎಡಿಎಂಕೆಯಲ್ಲಿ ಪುರಚ್ಚಿ ತಲೈವಿ ಸ್ಥಾಪನೆಯಾದಳು. ಇತ್ತ ಕಲೈಗ್ನರ್ ದರ್ಬಾರ್ ಶುರುವಾಯಿತು. ಕರುಣಾರ ಜೊತೆಜೊತೆಗೇ ಹೆಜ್ಜೆ ಹಾಕಿದಾತ ಆತನ ಭಾವಮೈದುನ ಮುರಸೋಳಿ ಮಾರನ್. ನಂತರ ರಾಜಕೀಯದಂಗಳಕ್ಕೆ ಕಾಲಿರಿಸಿದ್ದು ಕರುಣರ ಕಿರಿಯ ಮಗ ಸ್ಟಾಲಿನ್. ಆಗ ಡಿಎಂಕೆ ಪಕ್ಷದಲ್ಲಿ ಎರಡು ಯುವ ತಾರೆಗಳು ಅತ್ತ ವೈಕೋ ಇತ್ತ ಸ್ಟಾಲಿನ್! ಆದರೆ ಎಲ್ಲಿ ವೈಕೋ ತನ್ನ ಮಗ ಸ್ಟಾಲಿನ್ಗೆ ಅಡ್ಡಿಯಾಗುತ್ತಾನೋ ಎಂಬ ಆತಂಕದಲ್ಲಿ ಕರುಣಾನಿಧಿ ಆತನನ್ನು ಪಕ್ಷದಿಂದ ಉಚ್ಛಾಟಿಸಿದರು. ಅದು ರಾಜ್ಯದ ಜನತೆ, ಪಕ್ಷದ ಕಾರ್ಯಕರ್ತರಿಗೆ ಕರುಣಾ ಕೊಟ್ಟ ಮೊದಲ ಸಂದೇಶ - ನನ್ನ ನಂತರ ಕಲೈಗ್ನರ್ - ಸ್ಟಾಲಿನ್! ಆತ ಹಂತ ಹಂತವಾಗಿ ಮೇಲೇರತೊಡಗಿದ. 4 ಬಾರಿ ಎಮೆಲ್ಲೆಯಾದ, ಮದ್ರಾಸಿಗೆ ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಮೇಯರ್ ಆದ. ಎಮ್ಮೆಲ್ಲೆಯಾದ 20 ವರ್ಷಕ್ಕೆ ತಂದೆಯ ಕ್ಯಾಬಿನೆಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವನಾದ. ಅಷ್ಟೆ ಆತ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಬಹುಪಾಲು ಎಲ್ಲ ಪ್ರಮುಖ ಖಾತೆಗಳನ್ನೂ ನಿರ್ವಹಿಸಿ ಅನುಭವ ಪಡೆದ. ಈಗ ತಮಿಳ ನಾಡಿನ ಉಪಮುಖ್ಯಮಂತ್ರಿಯಾಗಿದ್ದಾನೆ. ಅದು ಕರುಣಾನಿಧಿ ಸ್ಪಷ್ಟವಾಗಿ ಕೊಟ್ಟ ಎರಡನೆಯ ಸಂದೇಶ - ನನ್ನ ನಂತರ ಕಲೈಗ್ನರ್ ಸ್ಟಾಲಿನ್! ಸ್ಟಾಲಿನ್ ಅನ್ನು ಜನ ಕೂಡ ಹಾಗೆ ಗುರುತಿಸಲಾರಂಭಿಸಿ ದಸಕಗಳೇ ಕಳೆದಿವೆ. ಒಬ್ಬ ಉತ್ತಮ ಆಡಳಿತಗಾರನಾಗಿ ವಿರೋಧ ಪಕ್ಷಗಳು ಮೆಚ್ಚುವಂತೆ ಹೆಸರು ಮಾಡಿದ್ದಾನೀತ. ಎಲ್ಲವೂ ಸರಿಯಾಗೇ ಇತ್ತು, ಮೊನ್ನೆ ಮೊನ್ನೆಯ ತನಕ.

ಆದರೆ ಅಪಸ್ವರ ಮೂಡಲಾರಂಭಿಸಿದೆ. ಕರುಣಾನಿಧಿಯ ಹಿರಯ ಮಗ ಎಂ.ಕೆ.ಅಳಗಿರಿ ತನ್ನ ಗಂಟಲು ದೊಡ್ಡದು ಮಾಡಲಾರಂಭಿಸಿದ್ದಾನೆ. ಆತನಿಗೆ ಮೊದಲಿಂದಲೂ ಒಂದು ಅಸಮಾಧಾನ ಇದ್ದೇ ಇತ್ತು. ತನಗಿಂತ ಕಿರಿಯ ಸ್ಟಾಲಿನ್ನನ್ನು ತಾನು ಕಲೈಗ್ನರ್ ಎಂದು ಒಪ್ಪುವುದಾದರೂ ಹೇಗೆ? ಆಗ ಕರುಣಾನಿಧಿ ಪರಮ ನಾಚಿಗೆಗೇಡು ನ್ಯಾಯ ಪಂಚಾಯಿತಿಯೊಂದನ್ನು ಮಾಡಿದ್ದರು. ಎಂ.ಕೆ.ಅಳಗಿರಿಯನ್ನು ತಮಿಳುನಾಡಿನ ದಕ್ಷಿಣದಲ್ಲಿರುವ ಮಧುರೈ ಪಟ್ಟಣಕ್ಕೆ ಕಳಿಸಿಕೊಟ್ಟು ಅಲ್ಲಿ ಆತನನ್ನು ಮೇಯರ್ ಮಾಡಿದರು. ಸ್ಟಾಲಿನ್ನನ್ನು ಮದ್ರಾಸಿನ ಮೇಯರ್ ಮಾಡಿದರು. ಕರುಣಾ ಸಂದೇಶ ಕೊಡುವುದೇ ಹೀಗೆ - ಸ್ಟಾಲಿನ್ಗೆ ಉತ್ತರ ತಮಿಳುನಾಡು, ಅಳಗಿರಿಗೆ ದಕ್ಷಿಣ ತಮಿಳುನಾಡು! ಅಳಗಿರಿ ಅಲ್ಲಿ ಯಾವ ಮಟ್ಟಕ್ಕೆ  ಬೆರೂರಿದನೆಂದರೆ ಇಡಿಯ ದಕ್ಷಿಣ ತಮಿಳುನಾಡು ಆತನ ಹಿಡಿತದಲ್ಲಿತ್ತು. he was and is an extra constitutional authority. ಆತನನ್ನು ಡಿಎಂಕೆಯ ಕಾರ್ಯಕರ್ತರು `ತೆನ್ಮಾವಟ್ಟ ತಲೈವರ್' ಎಂದು ಕರೆಯುತ್ತಾರೆ ಪ್ರೀತಿಯಿಂದ. ಅಂದರೆ ದಕ್ಷಿಣ ಜಿಲ್ಲೆಗಳ ಮುಖ್ಯಮಂತ್ರಿ ಅಂತ!  ರಾಜ್ಯ ಏನು ಇವರಪ್ಪನ ಮನೆ ಜಹಗೀರಾ? ಈ ಒಪ್ಪಂದ ಕಳೆದ ಕೆಲ ದಿನಗಳವರೆಗೂ ಯಾವುದೇ ತೊಂದರೆಗಳಿಲ್ಲದೆ ಜಾರಿಯಲ್ಲಿತ್ತು. ಅದನ್ನು ಮತ್ತೆ ಹೊತ್ತಿಸಿದವರು ಮುರಸೋಳಿ ಮಾರನ್ರ ಮಕ್ಕಳು, ಸನ್ ನೆಟ್ವರ್ಕ್ ಮತ್ತು ದಿನಕರನ್ ಪತ್ರಿಕೆಯ ಕಲಾನಿಧಿ ಮತ್ತು ದಯಾನಿಧಿ ಸೋದರರು. ದಿನಕರನ್ ಪತ್ರಿಕೆ ರಾಜ್ಯವ್ಯಾಪಿ ಒಂದು ಸರ್ವೇ ನಡೆಸಿ ಕರುನರ ನಂತರ ನಿಮಗೆ ಯಾರು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಸ್ಟಾಲಿನ್ನೋ, ಅಳಗಿರಿಯೋ? ಎಂದು ಪ್ರಶ್ನಿಸಿತ್ತು. ಸ್ಟಾಲಿನ್ ಜನರ ಮನಸೂರೆಗೊಂಡಿದ್ದಾರೆಂದೂ, ಅಳಗಿರಿಗೆ ಬೆಲೆಯೇ ಇಲ್ಲವೆಂದೂ ಅದು ಪ್ರಕಟಿಸಿತ್ತು. ಆಗ ಹುಟ್ಟಿಕೊಂಡಿತು ಕರುಣರ ಕುಟುಂಬದಲ್ಲಿ ದಾವಾನಿಲ! ಕೂಡಲೇ ದಯಾನಿಧಿಯನ್ನು ಕೇಂದ್ರ ಮಂತ್ರಿಯ ಸ್ಥಾನದಿಂದ ಕಿತ್ತೊಗೆಯಲಾಯಿತು. ಕರುಣ ಈ ಸೋದರರನ್ನು ಇನ್ನೂ ಕ್ಷಮಿಸಿಲ್ಲ. ನಂತರ ಯುಪಿಎ2ರಲ್ಲಿ ಎಂ.ಕೆ.ಅಳಗಿರಿಯನ್ನು ಕೆಮಿಕಲ್ ಅಂಡ್ ಫಟಿಲೈಸರ್ ಮಂತ್ರಿಯನ್ನಾಗಿ ಮಾಡಲಾಯಿತು. ಸ್ಟಾಲಿನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅಲ್ಲಿಗೆ ಮತ್ತೊಮ್ಮೆ ಕರುಣರ ಸಂದೇಶ ಸ್ಪಷ್ಟವಿತ್ತು. ನನ್ನ ನಂತರ ಕಲೈಗ್ನರ್ ಸ್ಟಾಲಿನ್, ದೆಹಲೀ ಪ್ರತಿನಿಧಿ ಅಳಗಿರಿ. ಈ ಬಾರಿ ಕರುಣ ತಮ್ಮ ಮಕ್ಕಳಿಗೆ ದೇಶವನ್ನೇ ಹಂಚಿ ಕೊಟ್ಟಿದ್ದರು. ಒಬ್ಬರಿಗೆ ದೆಹಲಿ ಮತ್ತೊಬ್ಬರಿಗೆ ಮದರಾಸು.

ಎಲ್ಲವೂ ಸರಿಯಾಗೇ ನಡೆದಿತ್ತು. ಆದರೆ ಅಳಗಿರಿಯ ಮಸ್ತಿಷ್ಕದೊಳಗೆ ಒಂದು ದೂರಾಲೋಚನೆಯ ಬೀಜಾಂಕುರವಾಗಿದ್ದೇ ತಡ, ಅಳಗಿರಿ ಅಂತಿಮ ಹಣಾಹಣಿಗಿಳಿದುಬಿಟ್ಟರು, ಸಹಜವಾಗಿ ಅವರ ಗಂಟಲು ದೊಡ್ಡದಾಯಿತು. ಏನು ಆ ಯೋಚನೆ ಅಂದಿರಾ? ಸರಳ. ಕರುಣಾನಿಧಿ ಬದುಕಿರುವವರೆಗೆ ತನಗೆ ಈ ಕೇಂದ್ರ ಮಂತ್ರಿಯ ಸ್ಥಾನ ಗ್ಯಾರೆಂಟಿಯೇ, ಆದರೆ ಕರುಣರ ನಂತರ ಪಕ್ಷ ಮತ್ತು ರಾಜ್ಯದ ಚುಕ್ಕಾಣಿ ಹಿಡಯುವವನು ತನ್ನ ತಮ್ಮ ಸ್ಟಾಲಿನ್. ಆತನೊಂದಿಗೆ ತನ್ನ ಸಂಬಂಧ ಅಷ್ಟಕ್ಕಷ್ಟೆ ಎಂಬಂತಿದೆ. ಹೀಗಿರುವಾಗ ಕರುಣರ ನಂತರ ಪಕ್ಷದ ಮಟ್ಟದಲ್ಲಿ ಎಲ್ಲವೂ ಸ್ಟಾಲಿನ್ನೇ ಎಂಬಂತಾದರೆ ತನ್ನ ಗತಿ? ಕೂಡಲೇ ಎಚ್ಚೆತ್ತಿರುವ ಅಳಗಿರಿ ಅಂತಿಮ ಕಾರ್ಯಾಚರಣೆಗಿಳಿದುಬಿಟ್ಟಿದ್ದಾರೆ. ಅದೇನೋ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದಂತೆ ಅವರು ಸ್ಟಾಲಿನ್ ಮುಖ್ಯಮಂತ್ರಿಯಾಗುವುದಾದರೆ, ಸರಿ ಆಗಲಿ. ಆದರೆ ಡಿಎಂಕೆ ಪಕ್ಷದ ಅಧ್ಯಕ್ಷಗಿರಿ ತನಗೆ ಬಿಟ್ಟುಕೊಡಲಿ. ಕರುಣಾನಿಧಿಯ ಹಿರಯ ಮಗನಿಗೆ ಆ ಸ್ಥಾನವೂ ಬೇಡವೇ? ಅಂತ ಕೇಳುತ್ತಿದ್ದಾರೆ. ಅವರ ದೂ(ದು)ರಾಲೋಚನೆ ಸರಳ. ತಂದೆ ಬದುಕಿರುವಾಗಲೇ ತಾನು ಪಕ್ಷದ ಅಧ್ಯಕ್ಷನಾಗಿಬಿಟ್ಟರೆ, ಪಕ್ಷ ಒಂದು ಹಂತಕ್ಕೆ ತನ್ನ ಹಿಡಿತಕ್ಕೆ ಸಿಕ್ಕುಬಿಡುತ್ತದೆ. ಅಷ್ಟಾದರೆ ಸಾಕು ಸ್ಟಾಲಿನ್ನೇ ಏಕಾಗಬೇಕು ಆಮೇಲೆ? ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅಳಗಿರಿ ಪಕ್ಷಾಧ್ಯಕ್ಷನ ಸ್ಥಾನಕ್ಕೆ ಚುನಾವಣೆಗಳು ನಡೆಯುವುದೇ ಆದರೆ, ಅದಕ್ಕೆ ತಾನು ಸ್ಪರ್ಧಿಸುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿರುವುದು. ಇದಕ್ಕುತ್ತರವಾಗಿ ಚಾಣಾಕ್ಷ ಕರುಣಾನಿಧಿ ಪಕ್ಷದ ಅಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುವುದು ಪಕ್ಷ, ತಾನಲ್ಲ ಎಂದುತ್ತರಿಸಿ ಜಾರಿಕೊಂಡಿದ್ದಾರೆ.

ಹೆಣದ ಮುಂದೆ ಮಕ್ಕಳು ಆಸ್ತಿಗಾಗಿ ಕಿತ್ತಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ತಂದೆ ಎನ್ನುವವನು ಬದುಕಿದ್ದಾಗಲೇ `ಏ ಮುದುಕ, ನೀನೇ ತೀರ್ಮಾನ ಮಾಡಿ ಹೋಗು, ಇಲ್ಲದಿದ್ದರೆ ನೀನು ಹೋದ ಮೇಲೆ ಸುಮ್ಮನೆ ಗಲಾಟೆ' ಎಂಬಂತೆ ಮಕ್ಕಳೇ ಕೇಳುತ್ತಿದ್ದಾರೆ. ಇಲ್ಲಿ ಎರಡು ದುರಂತಗಳಿವೆ. ಒಂದು ಕರುಣಾನಿಧಿಯೆಂಬ ಸತ್ವಯುತ ನಾಯಕನೋರ್ವನ ಸಾವನ್ನು ಎಲ್ಲರೂ ಅಸ್ಯೂಮ್ ಮಾಡಿಕೊಂಡುಬಿಟ್ಟಿದ್ದಾರೆ. ಎರಡನೆಯದು ಮಹಾ ದುರಂತ, ನಮ್ಮ ದೇಶದ್ದು. ಜಾತ್ಯಾತೀತತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಸ್ವಜನ ಪಕ್ಷಪಾತವೆನ್ನುವುದೇ ಮಹಾ ಪಾಪ. ಆದರೆ ಕನಿಷ್ಠ ಪಕ್ಷ ಅಲ್ಲಿ ಸ್ವಜಾತಿಯ ದೊಡ್ಡ ಸಮೂಹವಾದರೂ ಇರುತ್ತದೆ, ಆದರೆ ಕುಟುಂಬ ರಾಜಕಾರಣ ಅದಕ್ಕಿಂತಲೂ ಹೇಯವಾದದ್ದು. ಕಾಂಗ್ರೆಸ್ ಅನ್ನು ಕುಟುಂಬ ರಾಜಕಾರಣದ ಕಾರಣವಾಗಿ ವಿರೋಧಿಸಿಕೊಂಡುಬಂದ ಅನೇಕ ಪಕ್ಷಗಳು ಇಂದು ಫ್ಯಾಮಿಲೀ ಟ್ರಸ್ಟ್ಗಳಾಗಿರುವುದು ದುರಾದೃಷ್ಟಕರ. ತೀರಾ ಕರುಣಾನಿಧಿಯವರ ಪ್ರಸ್ತುತ ಎಪಿಸೋಡ್ನಲ್ಲಂತೂ ಆತ ಬದುಕಿರುವಾಗಲೇ, ಆತನ ಸಾವನ್ನು ಮಕ್ಕಳು ಅಸ್ಯೂಮ್ ಮಾಡಿಕೊಂಡು ಆಸ್ತಿ ಹಂಚಿಕೆಗಾಗಿ ಕಿತ್ತಾಡುತ್ತಿದ್ದಾರೆ. ಆದರೆ ಅದೇನೂ ಪಿತ್ರಾರ್ಜಿತ  ಆಸ್ತಿಯಲ್ಲ, ಬದಲಿಗೆ ತಮಿಳುನಾಡೆಂಬ ಸಂಪದ್ಭರಿತ ರಾಜ್ಯ. ಅದೇನು ಇವರಪ್ಪನ ಮನೆ ಜಹಗೀರಾ ಹಂಚಿಕೊಳ್ಳೋಕೆ?

Proudly powered by Blogger
Theme: Esquire by Matthew Buchanan.
Converted by LiteThemes.com.