ನೈಸ್ ಪುರಾಣ - 4 - ಫ್ರೇಮ್ ವರ್ಕ್ ಅಗ್ರೀಮೆಂಟ್ ಎಂಬ ನೇಣುಗಂಬ!


ನೈಸ್ ಕುರಿತ ಚರ್ಚೆಯದೇ ದೊಡ್ಡ ಚರ್ಚೆ ನಮ್ಮಲ್ಲಿ. ಶ್ರೀಮಾನ್ ಯಡಿಯೂರಪ್ಪನವರು, ಸದನದ ಕಲಾಪದ ಕಡೆಯ ದಿನ ನೈಸ್ ಕುರಿತು ಚರ್ಚೆಗೆ ಸಮಯ ನಿಗದಿಗೊಳಿಸಿ, ವಿರೋಧ ಪಕ್ಷಗಳನ್ನು ಅಲ್ಲೀತನಕ ತಣಿಸಿದ್ದರು. ಅವತ್ತು ಆಡಳಿತ ಪಕ್ಷ ವಿರೋಧ ಪಕ್ಷಗೆಳೆರಡೂ ಕೂಡ ಕಾವೇರಿದ ಚರ್ಚೆಗೆ ಸಿದ್ಧವಾಗೇ ಬಂದಿದ್ದವು. ಸರ್ಕಾರಕ್ಕೆ ನೈಸ್ ಮಂಜುನಾಥ್ ನೇರವಾಗಿ ವಿಧಾನಸೌಧದ ಆಡಳಿತಪಕ್ಷದ ಲಾಬಿಗೆ ಬಂದು ಏನೇನು ದಾಖಲಾತಿಗಳು ಬೇಕೋ ಅದೆಲ್ಲವನ್ನೂ ಸರ್ಕಾರಕ್ಕೆ ಕೊಟ್ಟು ಹೋಗಿದ್ದರು. ಸರ್ಕಾರ ಕೂಡ ಅದನ್ನು ಹಿಡಿದು, ಝಾಡಿಸಲು ರೆಡಿ ಇದ್ದಂತಿತ್ತು. ಆದರೆ ಅಷ್ಟರಲ್ಲಿ ಏನೋ ಆಯಿತು. ಸರ್ಕಾರ ಗೋ ಹತ್ಯಾ ನಿಷೇಧ ಕಾನೂನನ್ನು ಮಂಡಿಸಿತು. ವಿರೋಧ ಪಕ್ಷಗಳು ಧರಣಿಗೆ ನಿಂತರು. ಅಷ್ಟೆ ಇದನ್ನೇ ಬಳಸಿಕೊಂಡು, ಸದನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಸಿಬಿಟ್ಟಿತು ಸರ್ಕಾರ! ನೈಸ್ ಚರ್ಚೆಗೆ ಬೆನ್ನು ತೋರಿದ್ದರು ಯಡಿಯೂರಪ್ಪ. ಈಗ ಎಲ್ಲಾ ಆದಮೇಲೆ ಮತ್ತೆ ಯಡಿಯೂರಪ್ಪನವರು ಗೆಜ್ಜೆ ಕಟ್ಟಿ ತಾಂಡವ ಆಡುತ್ತಿದ್ದಾರೆ. ನಾನು ಮುಖಂಡರ ಸಭೆ ಕರೆಯುತ್ತೀನಿ, ನೈಸ್ ಕಾಲದಲ್ಲಿದ್ದ ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನೂ ಆ ಸಭೆಗೆ ಕರೆತರುತ್ತೀನಿ, ಇಲ್ಲ ನೈಸ್ಗಾಗಿಯೇ ಒಂದು ವಿಶೇಷ ಅಧಿವೇಶನ ನಡೆಸೋಣಂತೆ, ಅಂತ ಈಗ ಬಣ್ಣದ ವೇಷ ಕಟ್ಟುತ್ತಿದ್ದಾರೆ. ನೈಸ್ ಚರ್ಚೆ ಆಗಬೇಕಿರುವುದು ವಿಧಾನಸಭೆಯಲ್ಲಿ, ಯಡಿಯೂರಪ್ಪನವರ ಮನೆಯಲ್ಲಲ್ಲ. ಇರುವ ಕಲಾಪದಲ್ಲೇ ಚರ್ಚೆಗೆ ಹಿಂದಡಿಯಿಟ್ಟ ಇವರು ಅದಕ್ಕೆಂದೇ ವಿಶೇಷ ಕಲಾಪ ಕರೆಯುವರೇ? ಇರಲಿ. 

ಈ ಮಧ್ಯೆ ನೈಸ್ ವಿಚಾರವಾಗಿ ಮತ್ತೆರಡು ಬೆಳವಣಿಗೆಗಳಾಗಿವೆ. ಒಂದು ಸದನದಲ್ಲಿ ಟಿ.ಬಿ.ಜಯಚಂದ್ರ ಅವರ ಪ್ರಶ್ನೆಗಳಿಗುತ್ತರಿಸುತ್ತಾ ಯಡಿಯೂರಪ್ಪನವರು ನೈಸ್ಗಾಗಿ 25 ಸಾವಿರ ಎಕೆರೆಗಳನ್ನು ಕೆಐಎಡಿಬಿಯಿಂದ ನೋಟಿಫೈ ಮಾಡಿಸಲಾಗಿದೆಯೆಂದು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಫ್ರೇಮ್ ವರ್ಕ್ ಅಗ್ರೀಮೆಂಟಿನ ಪ್ರಕಾರ ನೈಸ್ಗೆ ಅಗತ್ಯ ನೀಡಬೇಕಿರುವ ಭೂಮಿ ಬರಿಯ 20,193 ಎಕೆರೆಗಳು. ಅಲ್ಲಿಗೆ ಸುಮಾರು 3800 ಎಕರೆ ನೈಸ್ಗೆ ಬೋನಸ್! ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ ಕೊಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇನ್ನು ಮತ್ತೊಂದು ಬೆಳವಣಿಗೆಯೆಂದರೆ ಯಡಿಯೂರಪ್ಪನವರ ನೈಸ್ ಪರ ಧೋರಣೆಯನ್ನು ಟೀಕಿಸುತ್ತಾ ಅವರನ್ನು ಛಾಲೆಂಜ್ ಮಾಡುತ್ತಾ ದೇವೇಗೌಡರು ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಇದು ಅವರ ಎಷ್ಟನೆಯ ಪತ್ರವೋ? ಇರಲಿ.

ಫೆಬ್ರವರಿ 20, 1995 ರಂದು ರಾಜ್ಯ ಸರ್ಕಾರ ಮತ್ತು ಈ ಕಂಪೆನಿಗಳ ಕನ್ಸಾರ್ಶಿಯಂನ ನಡುವೆ ಎಂಒಯು ಆಗಿತ್ತು. ನಂತರ ಸರ್ಕಾರ ಇದಕ್ಕಾಗಿಯೇ ಒಂದು ಹೈ ಲೆವೆಲ್ ಕಮಿಟಿಯನ್ನು ರಚಿಸಿತ್ತು. ಈ ಕನ್ಸಾರ್ಶಿಯಂ ಆಗಸ್ಟ್ 26 1995ರಂದು ಸರ್ಕಾರಕ್ಕೆ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಸಲ್ಲಿಸುತ್ತದೆ. ಇದನ್ನು ಪರಿಶೀಲಿಸಿದ ಹೈ ಲೆವೆಲ್ ಕಮಿಟಿ ಅದರ ಯಥಾವತ್ ಜಾರಿಗೆ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಆದರೆ ಸರ್ಕಾರ ಟೌನ್ಷಿಪ್ಗಳ ಸಂಖ್ಯೆಯನ್ನು 7 ರಿಂದ 5ಕ್ಕೆ ಇಳಿಸಿ, ಮಿಕ್ಕಿದ್ದನ್ನು ಒಪ್ಪಿ ನವೆಂಬರ್ 20 1995ರಂದು ಒಂದು ಜಿಒ ಪಾಸು ಮಾಡುತ್ತದೆ. ಅದರಂತೆ ಪಿಡಬ್ಲ್ಯೂಡಿ ಇಲಾಖೆ ಸರ್ಕಾರದ ಪರವಾಗಿ ಈ ಕನ್ಸಾರ್ಶಿಯಂನೊಂದಿಗೆ ಮೆಮೊರಾಂಡಂ ಆಫ್ ಅಗ್ರೀಮೆಂಟ್ - ಫೈನಲ್ ಒಪ್ಪಂದವನ್ನು ಮಾಡಿಕೊಳ್ಳಬೇಕು. ಆದರೆ ಇದಾಗುವಷ್ಟರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನ ಮಂತ್ರಿಯಾಗಿಬಿಟ್ಟಿದ್ದರು. ಇಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾದರು. ನೈಸ್ ಖೇಣಿಯ ಪರಮಾಪ್ತರಾದ ಬಿ.ಎಸ್.ಪಾಟೀಲರು ಪಟೇಲರ ಹಯಾಮಿನಲ್ಲಿ ಸರ್ವಶಕ್ತ ಪ್ರಿನ್ಸಿಪಲ್ ಸೆಕ್ರೆಟರಿ ಹುದ್ದೆಯನ್ನಲಂಕರಿಸಿದರು. ಕ್ಯಾಪ್ಟನ್ ರಮೇಶ್ ಲೋಕೋಪಯೋಗಿ ಕಾರ್ಯದರ್ಶಿಗಳಾದರು. ಪಟೇಲರು ಬಿ.ಎಸ್ ಪಾಟೀಲರನ್ನು ಎಷ್ಟು ನಂಬಿದ್ದರು ಎಂದರೆ ಅವರು ಇಡುತ್ತಿದ್ದ ಫೈಲುಗಳನ್ನು ಕಣ್ಣು ಮುಚ್ಚಿ ಸಹಿ ಹಾಕುತ್ತಿದ್ದರು ಎಂಬ ಮಾತಿದೆ. ಕಬ್ಬಿಣ ಕಾದ ಸರಿಯಾದ ಸಮಯಕ್ಕೆ ಆಡಳಿತ ವ್ಯವಸ್ಥೆಯ ಆಯಾಕಟ್ಟಿನ ಸ್ಥಳಗಳಲ್ಲಿ ನೈಸ್ ಸುತ್ತಿಗೆಗಳು ಕಾಣಿಸಿಕೊಳ್ಳತೊಡಗಿದವು! ಖೇಣಿ ಸಾಹೇಬರ ಮುಖದಲ್ಲಿ ಮಂದಹಾಸ ಮಿನುಗಿತ್ತು. 

ನೀವು ಸರ್ಕಾರವನ್ನಾಗಲೀ ನೈಸ್ ಕಂಪೆನಿಯನ್ನಾಗಲೀ ಯಾರನ್ನೇ ಈ ಪ್ರಾಜೆಕ್ಟಿನ ಬಗ್ಗೆ ಕೇಳಿ ನೋಡಿ, ಅವರು ಫ್ರೇಮ್ ವರ್ಕ್  ಅಗ್ರೀಮೆಂಟಿಗೆ ರೆಫರ್ ಮಾಡುತ್ತಾರೆ. ದೇವೇಗೌಡರು ಮತ್ತು ಸುಪ್ರೀಂ ಕೋರ್ಟ್  As originally conceived ಎಂಬ ಪದ ಬಳಸುತ್ತಾರಲ್ಲ, ಅದು ಇದಕ್ಕೇ. ಇವತ್ತು ಈ ನೈಸ್ ವಿಚಾರ ಲೀಗಲೀ ಕೂಡ ಏಕೆ ಇಷ್ಟು ಕಗ್ಗಂಟಾಗಿ ಕೂತಿದೆ, ಎಂದರೆ ಅದಕ್ಕೆ ಮತ್ತೆ ಇದೇ ಫ್ರೇಮ್ ವರ್ಕ್ ಅಗ್ರೀಮೆಂಟ್ ಕಾರಣ. ನೈಸ್ ಸಂಸ್ಥೆಯವರನ್ನ ನೀವು ಯಾವುದೇ ವಿಚಾರವಾಗಿ ಕೇಳಿ ನೊಡಿ - ಅವರು ಫ್ರೇಮ್ ವರ್ಕ್ ಅಗ್ರೀಮೆಂಟನ್ನು ನಿಮ್ಮ ಮುಖಕ್ಕೆ ಹಿಡಿಯುತ್ತಾರೆ. ಫ್ರೇಮ್ ವರ್ಕ್ ಅಗ್ರೀಮೆಂಟಿನ ಹಿಂದಿನ ಯಾವುದೇ ವಿದ್ಯಮಾನಗಳ ಬಗ್ಗೆ ಅವರು ತುಟಿ ಎರಡು ಮಾಡುವುದಿಲ್ಲ. ಸರ್ಕಾರ  ಅವರೊಂದಿಗೆ ಒಂದು ಒಪ್ಪಂದ ಅಂತ ಮಾಡಿಕೊಂಡ ಮೇಲೆ ಅವರಿಗದೇ ಬೈಬಲ್ ಬಿಡಿ. ಇದರ ಹೊರತಾಗಿ ನಾವೇನಾದರೂ ಮಾಡಿದ್ದರೆ ತೋರಿಸಿ ಅದು ತಪ್ಪು ಎನ್ನುತ್ತಾರೆ. ಅದೂ ಬಹಳಷ್ಟಿದೆ ಬಿಡಿ, ಅದರ ಮಾತು ಆಮೇಲೆ. ಇಲ್ಲಿ ತಪ್ಪಿರುವುದು ನೈಸ್ ಕಂಪೆನಿಯದಲ್ಲ, ಅದು ಒಂದು ಬಿಸಿನೆಸ್ ಫರ್ಮ್, ಅದು ಅದರ ಹಿತಾಸಕ್ತಿಗಳನ್ನಷ್ಟೇ ಗಮನಿಸುತ್ತದೆ. ತಪ್ಪು ಜನರ ಹಿತ ಕಾಯಬೇಕಿದ್ದ ನಮ್ಮ ಸರ್ಕಾರ ಮತ್ತು ರಾಜಕಾರಣಿಗಳು ಈ ಒಪ್ಪಂದಕ್ಕೆ ಸಹಿ ಹಾಕಿ ಕೊಟ್ಟಿರುವುದು. ನೈಸ್ನಂದೇನು ಪ್ರಯೋಜನ? ಏಪ್ರಿಲ್ 3, 1997ರಂದು ಸರ್ಕಾರ ಮತ್ತು ನೈಸ್ ಕಂಪೆನಿಯ ನಡುವೆ ಒಪ್ಪಂದವಾಯಿತು. ಅದೇ ಫ್ರೇಮ್ ವರ್ಕ್ ಅಗ್ರೀಮೆಂಟ್. ಇದರಲ್ಲಿ ಸರ್ಕಾರದ ಪರ ಅಂದಿನ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ರಮೇಶ್ ಮತ್ತು ನೈಸ್ ಕಂಪೆನಿಯ ಪರವಾಗಿ ಅಶೋಕ್ ಖೇಣಿಯ ಅಣ್ಣ ಶಿವಕುಮಾರ್ ಖೇಣಿ ಸಹಿ ಹಾಕಿರುತ್ತಾರೆ. ಇರಲಿ ಅಸಲಿಗೆ ಈ ಫ್ರೇಮ್ ವರ್ಕ್ ಅಗ್ರೀಮೆಂಟ್ ಏನು ಹೇಳುತ್ತದೆ? ಇಡೀ ಪ್ರಾಜೆಕ್ಟಿನ ರೂಪುರೇಷೆಗಳನ್ನು ಈ ಅಗ್ರೀಮೆಂಟ್ ತಿಳಿಸುತ್ತದೆ. ನಾವು ಈಗ ಇದರ ಎಲ್ಲ ವಿವರಗಳಿಗೆ ಹೋಗುವುದು ಬೇಡ. ಕೆಲವು ಪ್ರಮುಖಾಂಶಗಳನ್ನು ಮಾತ್ರ ತೆಗೆದುಕೊಳ್ಳೋಣ. 

ಭೂಮಿ - ದೇವೇಗೌಡರ ಕಾಲದಲ್ಲಿ ಆಗಿದ್ದ ಕರಾರಿನ ಪ್ರಕಾರ ರೈತರಿಂದ ಕಂಪೆನಿಯೇ ಭೂಮಿಯನ್ನು ಪಡೆಯಬೇಕು. ಅದರಲ್ಲಿ ಸರ್ಕಾರದ ಪಾತ್ರವೇನೂ ಇರಲಿಲ್ಲ. ಮಾರುಕಟ್ಟೆ ಬೆಲೆ ಮತ್ತು ಒಂದು ಉದ್ಯೋಗ, ಮಾರುಕಟ್ಟೆ ಬೆಲೆ ಮತ್ತು ರಿಯಾಯಿತಿ ದರದಲ್ಲಿ ಮನೆ, ಇಲ್ಲ ಪರ್ಯಾಯ ಭೂಮಿ ಮತ್ತು ಕೊಂಚ ಪರಿಹಾರ ಹೀಗೆ ಮೂರರಲ್ಲೊಂದು ವಿಧಾನದಂತೆ ಖಾಸಗಿಯವರಿಂದ ಅವರ ಸಮ್ಮತಿಯ ಮೇರೆಗೆ ಭೂಮಿಯನ್ನು ಪಡೆದುಕೊಳ್ಳಬೇಕಿತ್ತು. ಅದರಲ್ಲೂ ಕೂಡ ರೈತರ ಫಲವತ್ತಾದ ಭೂಮಿ ಹೆಚ್ಚು ಹೋಗದಂತೆ, ಜಾಗ್ರತೆ ವಹಿಸಬೇಕೆನ್ನುವ ಕರಾರಿತ್ತು. ಆದರೆ ನೀವು ಫ್ರೇಮ್ ವರ್ಕ್ ಅಗ್ರೀಮೆಂಟನ್ನು ಒಮ್ಮೆ ಓದಿ ನೊಡಿ - ಎಲ್ಲವೂ ತಲೆಕೆಳಗು. ಒಪ್ಪಂದದ ಆರ್ಟಿಕಲ್ 3ರ ಪ್ಯಾರಾ ನಂ. 3.2 ಮತ್ತು ಆರ್ಟಿಕಲ್ 5ಅನ್ನು ಗಮನಿಸಬೇಕು. ಇವೆರಡೂ ಪ್ರಾಜೆಕ್ಟಿಗೆ ಬೇಕಾದ ಭೂಮಿ ಮತ್ತು ಅದರ ಅಕ್ವಿಸಿಷನ್ನ ಬಗ್ಗೆ ಮಾತನಾಡುತ್ತದೆ. ಆರ್ಟಿಕಲ್ 5ರ ಮೊದಲಿಗೇ ಇದೆ - ಕಂಪೆನಿಗೆ ಸರ್ಕಾರ ತನ್ನ ಸಂಬಂಧಪಟ್ಟ ಇಲಾಖೆಗಳ ಮೂಲಕ ಬೇಕಾದ ಅಗತ್ಯ ಭೂಮಿಯನ್ನು ವಶಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸಬೇಕು. ಕಂಪೆನಿ ಈ ಮೊದಲೇ ಒಪ್ಪಿಗೆಯಾದಂತಹ ಪರಿಹಾರದ ಪ್ಯಾಕೇಜನ್ನು ಸರ್ಕಾರಕ್ಕೆ ಕಟ್ಟುತ್ತದೆ. ಇದನ್ನು ಸರ್ಕಾರ ಭೂಮಿ ಕಳೆದುಕೊಂಡ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಬೇಕು. ಅಲ್ಲಿಗೆ ಖೇಣಿ ಸಾಹೇಬರು ಏಕದಂ ಒಂದೇ ಏಟಿಗೆ ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳುವ ಎಲ್ಲ ತಲೆನೋವನ್ನೂ ಕಳೆದುಕೊಳ್ಳುತ್ತಾರೆ. ಅವರ ಬದಲಿಗೆ ಸರ್ಕಾರ ಬ್ರೋಕರ್ ರೀತಿಯಲ್ಲಿ ಆ ಕೆಲಸ ಮಾಡಿಕೊಡಬೇಕು, ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಈ ಪ್ರಾಜೆಕ್ಟಿಗೆಂದು ವಶಪಡಿಸಿಕೊಂಡ ಭೂಮಿಯನ್ನು ಯಾರಾದರೂ ಅತಿಕ್ರಮಿಸಿದರೆ ಅದನ್ನು ತೆರವುಗೊಳಿಸಿ ಭೂಮಿಯನ್ನು ಸೇಫ್ ಆಗಿ ನೋಡಿಕೊಳ್ಳುವುದು ಕೂಡ ಸರ್ಕಾರದ ಕೆಲಸವೇ. ಇಷ್ಟೇ ಆಗಿದ್ದರೆ ಚೆನ್ನಿತ್ತು, ಆದರೆ ಮತ್ತೊಂದು ಮಹಾ ಹಗರಣ ಇಲ್ಲಿ ಮೊಳಕೆಯೊಡೆಯುತ್ತದೆ. ರಸ್ತೆಗೆ ಅಗತ್ಯ ಬೇಕಾದ ಭೂಮಿಯನ್ನು 30 ವರ್ಷಗಳ ಕಾಲ ಕಂಪೆನಿಗೆ ಲೀಸ್ ಮೇಲೆ ಕೊಡುವುದೆಂದು ಮಾತಾಗಿತ್ತು. ಆದರೆ ಆರ್ಟಿಕಲ್  5ರ ಪ್ಯಾರಾ ನಂ. 5.1.1.2 ಮತ್ತು ಆರ್ಟಿಕಲ್ 3ರ ಪ್ಯಾರಾ ನಂ. 3.2.4ರಲ್ಲಿ ಸ್ಪಷ್ಟವಾಗಿ Sale of acquired land to the company ಎಂದು ದಾಖಲಾಗಿದೆ. ಎಂದರೆ ಭೂಮಿಯ ವಿಕ್ರಯಕ್ಕೆ ಸರ್ಕಾರ ಸಹಿ ಹಾಕಿ ಕೂತಿದೆ! ಇದಲ್ಲದೆ ಆರ್ಟಿಕಲ್ 3ರ ಪ್ಯಾರಾ ನಂ.3.2.3ರಲ್ಲಿ ಈ ರೀತಿ ಇದೆ - GOK covenants that it will not restrict the use of land in any way and that the company shall have full freedom and descrtion to industrially and commercially develop and use the land ಅಂದರೆ ಕಂಪೆನಿ ಭೂಮಿಯನ್ನು ರಿಯಲ್ ಎಸ್ಟೇಟ್ಗೆ ಬಳಸಿಕೊಳ್ಳುವುದನ್ನು ಸರ್ಕಾರ  ಒಪ್ಪಿ ಸಹಿ ಹಾಕಿಕೊಟ್ಟಿದೆ! 

ಭೂಮಿಯ ಬಗ್ಗೆ ಮಾತಾಡುವಾಗಲೇ ಮತ್ತೊಂದು ವಿಚಾರವನ್ನೂ ಇಲ್ಲಿ ಪ್ರಸ್ತಾಪಿಸಿ ಬಿಡಬೇಕು. ಇದು ಇಡಿಯ ಫ್ರೇಮ್ ವರ್ಕ್  ಅಗ್ರೀಮೆಂಟಿನಲ್ಲೇ ಅತಿ ದೊಡ್ಡ ಹಗರಣ. ನಿಮಗೆ ನೆನಪಿರುವುದೇ ಆದರೆ ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಟೇಬಲ್ 6.7ರಲ್ಲಿ ಸ್ಪಷ್ಟವಾಗಿ ದಾಖಲಿಸಿತ್ತು, ರಸ್ತೆಗೆ 5119.37 ಎಕರೆಗಳು ಅಗತ್ಯ ಎಂದು. ಇದಲ್ಲದೆ 7 ಟೌನ್ಷಿಪ್ಗಳಿಗೆ 20,092 ಎಕರೆಗಳು ಅಗತ್ಯವೆಂದು ತಿಳಿಸಿತ್ತು. ಆದರೆ ಸರ್ಕಾರ  ಟೌನ್ಷಿಪ್ಗಳನ್ನು 7ರಿಂದ 5ಕ್ಕೆ ಇಳಿಸಿದ್ದರಿಂದ ಇದಕ್ಕಾಗಿ 13,194 ಎಕರೆಗಳು ಸಾಕೆಂದು ಹೈಲೆವೆಲ್ ಕಮಿಟಿ ಶಿಫಾರಸಿನ ಹಿನ್ನಲೆಯಲ್ಲಿ ಹೊರಡಿಸಿದ ಆದೇಶದಲ್ಲಿ ಸರ್ಕಾರ ಹೇಳಿಕೊಂಡಿದೆ. ಅಲ್ಲಿಗೆ ರಸ್ತೆ ಮತ್ತು ಟೌನ್ಷಿಪ್ಗಳೆರಡಕ್ಕೂ ಸೇರಿ ಮೂಲದಲ್ಲಿ ಅಗತ್ಯವಿದ್ದದ್ದು ಬರಿಯ 18,313 ಎಕರೆಗಳು. 

ಆದರೆ ಫ್ರೇಮ್ ವರ್ಕ್ ಅಗ್ರೀಮೆಂಟಿನಲ್ಲಿ ಆಶ್ಚರ್ಯ ಕಾದಿತ್ತು. ಫ್ರೇಮ್ ವರ್ಕ್ ಅಗ್ರೀಮೆಂಟಿನ ಷೆಡ್ಯೂಲ್ 1ರಲ್ಲಿ ಪ್ರಾಜೆಕ್ಟಿಗೆ ಅಗತ್ಯ ಬೇಕಾದ ಭೂಮಿಯ ಪ್ರಮಾಣವನ್ನು ನಮೂದಿಸಲಾಗಿದೆ. ಅಲ್ಲಿ ಮಿಕ್ಕೆಲ್ಲವೂ ಮೊದಲಿನಂತೆಯೇ ಇದ್ದರೂ ರಸ್ತೆಗೆ 5119.37 ಎಕರೆಗಳ ಬದಲಿಗೆ 6999 ಎಕರೆಗಳು ಎಂದು ನಮೂದಾಗಿದೆ! ಅಂದರೆ ಕೇವಲ(!) 1880 ಎಕರೆಗಳಷ್ಟು ಹೆಚ್ಚುವರಿ ಭೂಮಿಯನ್ನು ಸರ್ಕಾರ ಕಂಪೆನಿಗೆ ಬಿಟ್ಟುಕೊಟ್ಟಿದೆ. ಆದರೆ ಯಾಕೆ? ಅದು ಉತ್ತರವೇ ಇಲ್ಲದ ಪ್ರಶ್ನೆ. ಹೀಗೆ ಹೆಚ್ಚುವರಿ ಭೂಮಿ ನೀಡುವುದರ ಪ್ರಸ್ತಾಪ ಇಡಿಯ ಫ್ರೇಮ್ ವರ್ಕ್  ಅಗ್ರೀಮೆಂಟಿನಲ್ಲಿ ಬೇರೆಲ್ಲೂ ಬರುವುದಿಲ್ಲ. ಷೆಡ್ಯೂಲ್ನಲ್ಲಿ ಕೂಡ ಈ ಹೆಚ್ಚುವರಿ ಭೂಮಿಗೆ ಯಾವುದೇ ವಿವರಣೆಗಳಿಲ್ಲ. ಅದಕ್ಕೊಂದು ಕಾರಣ, ಸವರ್ೆ, ಅನುಮೋದನೆಗಳು....ಊಹುಂ ಅದ್ಯಾವುದೂ ಇಲ್ಲ, ಸುಮ್ಮನೆ ಗಿಫ್ಟ್ ಏನೋ ಅನ್ನುವಂತೆ 1880 ಎಕರೆ ಹೆಚ್ಚುವರಿ ಭೂಮಿಯನ್ನು ಕಂಪೆನಿಗೆ ಕೊಡುವಂತಿರುವ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿದೆ. ಖೇಣಿಯವರನ್ನೇ ಕೇಳಿ ನೋಡಿ, ಅವರ ಬಳಿಯೂ ಇದರ ಕುರಿತು ಸ್ಪಷ್ಟವಾದ ಒಂದು ವಿವರಣೆ ಇಲ್ಲ. ಈ ಪ್ರಶ್ನೆಗೆ ಅವರದು ಮರುಪ್ರಶ್ನೆಯ ವಿತಂಡವಾದ. ನೀವು ಇದನ್ನು ಪ್ರಶ್ನಿಸುವುದೇ ಆದರೆ, ಸರಿ ಹಾಗಾದರೆ ನನಗೆ ನನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಪ್ರಕಾರ 7 ಟೌನ್ಷಿಪ್ ಮತ್ತು ರಸ್ತೆಗೆ ಸೇರಿದಂತೆ 25,211.37 ಎಕರೆಗಳನ್ನು ಕೊಡಬೇಕಿತ್ತಲ್ಲ, ನೀವದನ್ನು ಯಾಕೆ ಕೇಳುವುದಿಲ್ಲ? ಅಂತ ತಲೇಲಿ ಹುಳ ಬಿಡಕ್ಕೆ ನೋಡುತ್ತಾರೆ. ಆದರೆ ಜನ ಅಷ್ಟು ದಡ್ಡರಲ್ಲ. ಸರ್ಕಾರ 7 ಟೌನ್ಷಿಪ್ಗಳನ್ನು 5ಕ್ಕೆ ಮಿತಿಗೊಳಿಸಿ ಆದೇಶ ಹೊರಡಿಸಿದೆ. ರಸ್ತೆಗೆ ನೀವು ಕೇಳಿರುವುದೇ 5119.37 ಎಕರೆಗಳು. 2 ಟೌನ್ಷಿಪ್ಗಳಿಗೆ ಸರ್ಕಾರ ಅನುಮತಿ ನಿರಾಕರಿಸಿದ್ದಕ್ಕೆ 1880 ಎಕರೆ ಹೆಚ್ಚುವರಿ ಭೂಮಿ ನಷ್ಟ ಪರಿಹಾರ ಎಂಬಂತೆ ಮಾತಾಡುತ್ತಾರೆ ಖೇಣಿ ಸಾಹೇಬರು. ತಪ್ಪು ಅವರದಲ್ಲ ಬಿಡಿ. ನಮ್ಮ ಸರ್ಕಾರದ ರಾಜಕಾರಣಿಗಳು ಮತ್ತು ಕಡುಭ್ರಷ್ಟ ನೈಸ್ ಊಳಿಗಮಾನ್ಯ ಅಧಿಕಾರಿಗಳ ಬೆಂಬಲವಿಲ್ಲದೆ ಖೇಣಿ ಅವರೇನು ಮಾಡಲಿಕ್ಕಾಗುತ್ತಿತ್ತು ಹೇಳಿ. ನಾವು ದೂಷಿಸಬೇಕಿರುವುದು ನಮ್ಮವರನ್ನ, ಅಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾಗಿದ್ದು, ಈ ಫ್ರೇಮ್ ವರ್ಕ್ ಅಗ್ರೀಮೆಂಟಿಗೆ ಸರ್ಕಾರದ ಪರ ಸಹಿ ಹಾಕಿದ ಕ್ಯಾಪ್ಟನ್ ರಮೇಶ್, ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ಬಿ.ಎಸ್.ಪಟೀಲ್ ಮತ್ತು ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರನ್ನು. 

ಹಾಗಾದರೆ ಸರಿ ಫ್ರೇಮ್ ವರ್ಕ್ ಅಗ್ರೀಮೆಂಟಿನ ಪ್ರಕಾರ ಬಿಎಂಐಸಿಪಿಗೆ ಅಗತ್ಯವಾದ ಭೂಮಿ ಎಷ್ಟು? ರಸ್ತೆಗೆ 6,999 ಎಕರೆಗಳು, ಟೌನ್ಷಿಪ್ 1ಕ್ಕೆ 2,775 ಎಕರೆಗಳು, 2ಕ್ಕೆ 1,836 ಎಕರೆಗಳು, 4ಕ್ಕೆ 1,615 ಎಕರೆಗಳು 5ಕ್ಕೆ 2,682 ಎಕರೆಗಳು ಮತ್ತು ಆರ್ಥಿಕ ಇಲಾಖೆಯ ಅನುಮೋದನೆಯೇ ಇಲ್ಲದ 7ನೇ ಟೌನ್ಷಿಪ್ಗೆಂದು  4286 ಎಕರೆಗಳು! ಒಟ್ಟು ಅಗತ್ಯ ಭೂಮಿ 20,193 ಎಕರೆಗಳು. ಇದರಲ್ಲಿ 6,956 ಎಕರೆಗಳು ಸರ್ಕಾರಕ್ಕೆ ಸೇರಿದ್ದಾಗಿದ್ದು, ಇನ್ನುಳಿದ 13,237 ಎಕರೆಗಳು ಖಸಗೀ ಭೂಮಿಯಾಗಿದೆ. ಇದರಲ್ಲೇ 1880 ಎಕರೆಗಳು ಹೆಚ್ಚುವರಿ ಅಂತ ಜನ ಬಾಯಿ ಬಡಕೊಳ್ಳುತ್ತಿದ್ದರೆ ಯಡಿಯೂರಪ್ಪ ಸದನದಲ್ಲಿ 25 ಸಾವಿರ ಎಕರೆಗಲನ್ನು ನ್ಯಸ್ಗಾಗಿ ನೋಟಿಫೈ ಮಾಡಲಾಗಿದೆ ಎಂದು ಘಂಟಾಘೋಷವಾಗಿ ಹೇಳುತ್ತಾರೆ! ನ್ಯಸ್ ಎಂದರೆ ಅದು. 

ಯಾಕೋ ರಾಮನೆಂದರೆ ಭಯವಾಗ್ತದೆ........?!!

ಇವತ್ತು ರಾಮನವಮಿ. ಅದೇನು ರಾಮನಿಗಿಷ್ಟ ಅಂತಲೋ ಮತ್ತೊಂದೋ ತಿಳಿದಿಲ್ಲ. ಆದರೆ ನಮ್ಮ ಪೂರ್ವಜರಂತೂ ಭಲೇ ಬುದ್ಧಿವಂತರು. ರಾಮನ ಹೆಸರಿನಲ್ಲಿ ಬಿಸಿಲ ಬೇಗೆಯಿಂದ ದಣಿವಾರಿಸಿಕೊಳ್ಳಲು ಕರಬೂಜ ಹಣ್ಣಿನ ಬೆಲ್ಲದ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಟ್ಟುಬಿಟ್ಟಿದ್ದಾರೆ. ಅದಕ್ಕೆ ಅವರಿಗೆ ಅನಂತ ವಂದನೆಗಳು. ಇರಲಿ ಈಗ ವಿಷಯಕ್ಕೆ ಬರೋಣ. ರಾಮ ನವಮಿ ಅಂದರೆ ಏನು? ಹೇ...ಅಷ್ಟು ಗೊತ್ತಿಲ್ಲವಾ ಚಿಕ್ಕ ಮಗುವನ್ನು ಕೇಳಿದರೂ ಹೇಳುತ್ತದೆ..ರಾಮ ನವಮಿ - ರಾಮ ಹುಟ್ಟಿದ ದಿನ ಕಣಯ್ಯ. ಹೌದು ಅದು ನನಗೂ ಗೊತ್ತು ಆದರೆ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮ ಇದೇ ದಿನ, ಇಂಥದೇ ಜಾಗದಲ್ಲಿ ಹುಟ್ಟಿದನೆಂದು ನಿಮಗೆ ತಿಳಿಸಿದವರಾದರೂ ಯಾರು? ತಲೆ ಕೆರೆದುಕೊಳ್ಳಬೇಡಿ....


ರಾಮನೆಂದರೆ ಯಾಕೋ ಭಯ ಅಂದಾಗ ನನ್ನ ಮನಸ್ಸಿನಲ್ಲಿದದ್ದು ಇದೇ! ನಮ್ಮ ಇಂದಿನ ಅನೇಕ ದುರಂತಗಳಿಗೂ ಕಾರಣ ಇದೇ. ಪುರಾಣದ ಶ್ರೀರಾಮಚಂದ್ರನನ್ನು ಇತಿಹಾಸ ಪುರುಷನನ್ನಾಗಿಸಿಬಿಡುವ ಹುನ್ನಾರ. ಹೌದು ಭಾರತದಲ್ಲಿ ಇಂದು ಅತ್ಯಂತ ಶಕ್ತ ಪೊಲಿಟಿಕಲ್ ಫೋರ್ಸ್  ಯಾರು ಗೊತ್ತಾ? ಅನುಮಾನವೇ ಬೇಡ - ಆತ ಶ್ರೀರಾಮ! ಹೌದು ಇಂದು ಶ್ರೀರಾಮನನ್ನು ಹಿಂದುತ್ವವಾದಿಗಳು ಗುತ್ತಿಗೆ ಪಡೆದುಕೊಂಡುಬಿಟ್ಟದ್ದಾರೆ. ಶ್ರೀರಾಮನನ್ನು ಇತಿಹಾಸ ಪುರುಷನನ್ನಾಗಿ ಮಾಡಿ, ಆತನನ್ನು ತಮ್ಮ ಧರ್ಮದ ಅಫೀಮಿನೊಳಕ್ಕೆ ಬೆರೆಸಿ ಇವರು ಮಾಡಿದ ದುರಂತ ಒಂದೇ, ಎರಡೇ? 

ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಎರಡು ಮಹಾ ದುರಂತಗಳು. ಒಂದು ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ತುಳಿದು ಎಮರ್ಜೆನ್ಸಿ ಹೇರಿದ್ದು. ಮತ್ತೊಂದು ಬಾಬ್ರಿ ಮಸೀದಿ ಧ್ವಂಸ. ಇವೆರಡೂ ಮಹಾದುರಂತಗಳೇ ಆಧಾರವಾಗಿ ಅನೇಕ ನಾಯಕರು ಹುಟ್ಟಿಕೊಂಡರು, ಇಡೀ ದೇಶದ ರಾಜಕೀಯ ಧೃವೀಕರಣಕ್ಕೊಳಗಾಯಿತು. ಎಮರ್ಜೆನ್ಸಿ ದೇಶದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ನಾಂದಿ ಹಾಡಿ, ಜನತಾ ಉದಯಕ್ಕೆ ಕಾರಣವಾಯಿತು. ಬಾಬ್ರಿ ಮಸೀದಿಯ ಧ್ವಂಸ ಕೂಡ ಅಷ್ಟೆ. ಭಾರತದ ರಾಜಕೀಯದಲ್ಲಿ ಅಪಾರ ಪ್ರಮಾಣದ ಧೃವೀಕರಣಕ್ಕೆ ಕಾರಣವಾಯಿತು. ಕಾಂಗ್ರೆಸ್ ವಿರೋಧಿ ರಾಜಕೀಯ ವೇದಿಕೆಗಳು ಹೋಗಿ, ಬಿಜೆಪಿಯನ್ನು ಕೋಮುವಾದಿಯನ್ನಾಗಿ ಜರಿದು ಅದರ ವಿರುದ್ಧ ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗತೊಡಗಿದವು. ಜನತಾ ಪಕ್ಷದ ಅನೇಕ ಹೋಳುಗಳು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳತೊಡಗಿದವು. ಇಂದಿಗೂ ನಮ್ಮ ದೇಶದ ರಾಜಕಾರಣದಲ್ಲಿ ಇದು ತಥ್ಯ. ಎಮರ್ಜೆನ್ಸಿ ಇಂದು ಒಂದು ಕರಾಳ ನೆನಪು ಮಾತ್ರ. ಅದರ ಆಫ್ಟರ್ effects ಅನ್ನು ನಾವಿಂದು ಅನುಭವಿಸುತ್ತಿಲ್ಲ. ಶಾರದಾ ಪ್ರಸಾದರು ಹೇಳಿದಂತೆ ಇಂದಿರಾ ಹೇರಿದ ಎಮರ್ಜೆನ್ಸಿ, ಮತ್ಯಾರೂ ಅತ್ತ ಯೋಚಿಸದಂತೆ ಮಾಡಿಟ್ಟಿದೆ. ಆದರೆ ಬಾಬ್ರಿ ಮಸೀದಿ ಧ್ವಂಸ ಹಾಗಲ್ಲ. ಅದು ಭಾರತದ ಜಾತ್ಯಾತೀತ ಮನಸ್ಸಿನ ಮೇಲಾಗಿರುವ ಗಾಯ. ಅದು ಇನ್ನೂ ಮಾಗಿಲ್ಲ. ಭಾರತದ ಮನಸ್ಸು ಮೊದಲಿಂದಲೂ ಜಾತ್ಯಾತೀತ ಮತ್ತು ಪರಧರ್ಮ ಸಹಿಷ್ಣು. ದೇವರು ಒಬ್ಬನೆ, ಆತನ ನಾಮ ಹಲವು, ಆತನನ್ನು ತಲುಪುವ ಮಾರ್ಗಗಳೂ ಹಲವು ಎಂಬ ನಂಬಿಕೆಯ ಮೇಲೆ ನಿಂತಿರುವ ಸಮಾಜ ನಮ್ಮದು. ಬಾಬ್ರಿ ಮಸೀದಿ ಧ್ವಂಸ ನಮ್ಮ ಸಮಾಜದ ಈ ತಳಹದಿಯನ್ನೇ ಸಾರಾಸಗಟಾಗಿ ತಿರಸ್ಕರಿಸುತ್ತದೆ. ಇದು ಮಹಾ ದುರಂತ ಅನ್ನಿಸಿಕೊಳ್ಳುವುದೇ ಈ ಕಾರಣಕ್ಕೆ. ಭಾರತದ ಮನಸ್ಸಿಗೆ ಆಗಿರುವ ಈ ಹುಣ್ಣು ಇನ್ನೂ ಮಾಗಿಲ್ಲ ಅಷ್ಟೇ ಅಲ್ಲ, ಈ ಹುಣ್ಣಿನಿಂದ ಇನ್ನೂ ಕೀವು ಸೊರುತ್ತಲೇ ಇದೆ. ಭಾರತದಲ್ಲಿ ಇಸ್ಲಾಮಿಕ್ ಜಿಹಾದ್ನ ಭಯೋತ್ಪಾದನೆ ಕಾಶ್ಮೀರದ ಗಡಿ ದಾಟಿದ್ದೇ ಬಾಬ್ರಿ ಮಸೀದಿ ಧ್ವಂಸಕ್ಕೆ ಉತ್ತರವಾಗಿ. ಅವತ್ತು ದಾವೂದ್ ಇಬ್ರಾಹಿಂ ಪಾಕಿಸ್ತಾನದ ಐಎಸ್ಐನ ಸಹಾಯದೊಂದಿಗೆ 1993ರ ಮಾರ್ಚ್ನಲ್ಲಿ ಬಾಂಬೆಯಲ್ಲಿ ಸರಣಿ ಸ್ಫೋಟ ನಡೆಸುತ್ತಾನೆ. 257 ಮಂದಿ ಬಲಿಯಾಗುತ್ತಾರೆ. ಎಲ್ಲೋ ಕಾಶ್ಮೀರದ ಕೊಳ್ಳಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ನಡೆದ ದಾಳಿಗಳದೆಷ್ಟೋ? ಸತ್ತವರೆಷ್ಟೋ? ಲೆಕ್ಕವಿಟ್ಟವರಿಲ್ಲ.
6 ಡಿಸೆಂಬರ್, 1992. ಅದು ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದು ಕರಾಳ ದಿನ. ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯತ್ತ ಧಾವಿಸಿ ಬಂದ ಸಾವಿರಾರು ಕಾರಸೇವಕರು, ನೋಡನೋಡುತ್ತಲೇ ಇಡಿಯ ಬಾಬ್ರಿ ಮಸೀದಿಯನ್ನು ನೆಲಕ್ಕೆ ಕೆಡವಿ ಬಿಟ್ಟರು. ಅದ್ವಾನಿಯವರ ರಾಮರಥಯಾತ್ರೆ ಹಾಗೆ ಪರ್ಯಾವಸಾನಗೊಂಡಿತ್ತು. ರಾಮಜನ್ಮಭೂಮಿ ಚಳುವಳಿಯ ನಾಯಕರು, ಪೋಲೀಸರು, ಉತ್ತರ ಪ್ರದೇಶದ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಬೆಪ್ಪರಂತೆ(?) ನೋಡುತ್ತಾ ನಿಂತು ಬಿಟ್ಟಿದ್ದರು.


ಎಲ್ಲವೂ ಶ್ರೀರಾಮನ ಹೆಸರಿನಲ್ಲಿ! ಇವತ್ತಿಗೂ ರಾಮಜನ್ಮಭೂಮಿ ಅಯೋಧ್ಯೆ ಭಾರತದ ರಾಜಕಾರಣದಲ್ಲಿ ಅಗ್ಗಿಷ್ಟಿಕೆಯಿದ್ದಂತೆ. ಇನ್ನು ರಾಮನ ಹೆಸರಿನಲ್ಲಿ ತಮಿಳುನಾಡಿನಲ್ಲಿ ಸೇತು ಸಮುದ್ರಂಗೆ ಅಡ್ಡಗಾಲು. ಒಂದೇ ಎರಡೇ ಎಷ್ಟು ಸಮಸ್ಯೆಗಳು. ಈ ದೇಶದಲ್ಲಿ ರಾಮನಾಮಕ್ಕೆ ಮೆತ್ತಿಕೊಂಡಿರುವಷ್ಟು ರಕ್ತ ಇನ್ನಾವುದೇ ಹೆಸರಿಗಿಲ್ಲ. `ಜೈ ಶ್ರೀರಾಮ್' ಎನ್ನುವುದು ಇಂದು ವಾರ್ ಕ್ರೈ ಆಗಿ ಕೇಳುತ್ತದೆ. ಶ್ರೀರಾಮ ಸೇನೆಯನ್ನು ನೆನೆಸಿಕೊಂಡೂ ಭಯವಾಗದೇ ಇರುವುದುಂಟೇ? ಶ್ರೀರಾಮ ಇಂದು ಒಂದು ಸಂಕುಚಿತ ಸಿದ್ಧಾಂತ, ಅಸಹಿಷ್ಣುತೆಗೆ ಪ್ರತೀಕನಾಗಿದ್ದಾನೆ.  ರಾಮನೆಂದರೆ ಈತನೇನಾ? ಈತನಷ್ಟೆ ಅಲ್ಲ. ಅನಂತಮೂರ್ತಿಗಳು ಹೇಳಿದ ಹಾಗೆ ನೆನಪು. ಹಿಂದುತ್ವವಾದಿಗಳ ಈ ಶ್ರೀರಾಮನಿಗೂ, ನಮ್ಮ ಮನೆಗಳ ಹಿರಿಯರು ಮಾತಿಗೊಮ್ಮೆ ನೆನಪಿಸಿಕೊಳ್ಳುವ ರಾಮಪ್ಪನಿಗೂ ಯಾವುದೇ ಸಂಬಂಧವಿಲ್ಲ, ಇವರಿಬ್ಬರೂ ಬೇರೆ ಬೇರೆ ಎಂದು. ನಿಜ ನಮ್ಮಲ್ಲಿ ಇಬ್ಬರು ರಾಮರಿದ್ದಾರೆ. ಒಬ್ಬ ರಾಮ ಅಯೋಧ್ಯೆಯಲ್ಲಿ ಇಂತಿಂತಹ ತಾರೀಖಿನಂದು ಹುಟ್ಟಿದ ಇತಿಹಾಸ ಪುರುಷ. ಜೈ ಶ್ರೀರಾಮ್ ಎಂಬ ವಾರ್ ಕ್ರೈಗೆ ಸ್ಫೂರ್ತಿಧಾತ. ಈತನ ಹೆಸರಿಗೇ ರಕ್ತ ಮೆತ್ತಿಕೊಂಡಿರುವುದು. 


ನಮ್ಮಲ್ಲೇ ಇನ್ನೊಬ್ಬ ರಾಮನಿದ್ದಾನೆ. ನಮ್ಮ ಅಜ್ಜಿಯರು ಒಂದು ಮೂಲೆಯಲ್ಲಿ ಕೂತು ಜಪಿಸುವ, ರಾಮಕೋಟಿ ಬರೆಸಿಕೊಳ್ಳುವ ರಾಮ. ಈ ರಾಮಪ್ಪನನ್ನು ನಾವು ಮನುಷ್ಯನಾಗಿದ್ದು ತನ್ನ ಕತೃತ್ವ ಶಕ್ತಿಯಿಂದ ದೈವತ್ವಕ್ಕೇರಿದವನಾಗಿ ನೋಡುತ್ತೇವೆ. ಈತನೊಂದಿಗೆ ನಮ್ಮದೊಂದು ನಿರಂತರ ಸಂವಾದ ಜಾರಿಯಲ್ಲಿರುತ್ತದೆ. ಅಲ್ಲ ಸೀತೆಯನ್ನು ಅಷ್ಟು ಬಾಧಿಸಿದ ರಾಮ ಸ್ತ್ರೀದ್ವೇಷಿಯಾ? ವಾಲಿಯನ್ನು ಮರದ ಮರೆಯಲ್ಲಿ ಹೊಡೆದದ್ದು ಸರಿಯಾ? ಹೀಗೆ ಆತನೊಂದಿಗೆ ನಮಗೊಂದು ಸಾಮೀಪ್ಯವಿದೆ. ಆದರೆ ಆಯೋಧ್ಯೆಯ ಆ ರಾಮನೊಂದಿಗೆ ಇಂತಹುದೊಂದು ಸಾಮೀಪ್ಯವಾಗಲೀ, ಭಕ್ತಿಯಾಗಲೀ ಹುಟ್ಟುವುದೇ ಇಲ್ಲ. ಆತನೇನಿದ್ದರೂ ಬೀದಿ ದೊಂಬಿಯ ವಾರ್ ಕ್ರೈ ಅಷ್ಟೆ! ಈತನೇ ಬೇರೆ ಆತನೇ ಬೇರೆ. ರಾಮಜನ್ಮಭೂಮಿಯ ಗದ್ದಲ ತಾರಕಕ್ಕೇರಿದಾಗ, ಯಾರೋ ಅಂದಿನ ಕೇರಳದ ಮುಖ್ಯಮಂತ್ರಿ ನಯನಾರ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ 'ಅರೆರೆ ರಾಮ ಹುಟ್ಟಿದ್ದು ಕೇರಳದಲ್ಲಿ ಅಂತ ತಿಳಿದಿದ್ದೆ......' ಎಂದು ಮಾರುತ್ತರ ಕೊಟ್ಟಿದ್ದರು. ಯಾರ್ಯಾರು ರಾಮ ಹುಟ್ಟಿದ್ದು ತಮ್ಮೂರಿನಲ್ಲಿ ಎಂದು ಭಾವಿಸುತ್ತಾರೋ ಅವರು ರಾಮನನ್ನು ನಿಜವಾಗಿಯೂ ಪಡೆದವರು ಎಂದು ಅನಂತಮೂರ್ತಿಗಳು ಈ ಮೇಲಿನ ಹೇಳಿಕೆಯನ್ನು ವ್ಯಾಖ್ಯಾನಿಸುತ್ತಾರೆ. 


ಈ ನಮ್ಮ ರಾಮದ್ವಯರ ಕುರಿತಾಗಿ ಇನ್ನೊಂದು ಅದ್ಭುತ ಉಪಮೆ ಇದೆ. ಅದು ಗಾಂಧೀಜಿಯ ಹತ್ಯೆಯ ಸನ್ನಿವೇಶ. ಇಂಥದೇ ಅಫೀಮನ್ನು ನೆತ್ತಿಗೇರಿಸಕೊಂಡಿದ್ದ ಘೋಡ್ಸೆ ಗಾಂಧೀಜಿ ಪ್ರಾರ್ಥನಾ ಸಭೆಗೆ ಬರುತ್ತಿದ್ದಾಗ ಗುಂಡಿಟ್ಟು ಕೊಲ್ಲುತ್ತಾನೆ. ಗಾಂಧಿಯ ಬಾಯಿಂದ ಹೊರಬಿದ್ದ ಒಂದೇ ಮಾತು `ಹೇ ರಾಮ್'. ಅದು ಗಾಂಧಿಯ ರಾಮನ ನೆನಹೇ, ಇಲ್ಲ ಇವರನ್ನು ಕ್ಷಮಿಸು ಎಂಬ ಮೊರೆಯೇ? ಇಲ್ಲಿದ್ದಾರೆ ನೋಡಿ ರಾಮದ್ವಯರು. (ಗೊತ್ತು ಗೊತ್ತು ಗಾಂಧಿ ಹೇ ರಾಮ್ ಅಂದಿಲ್ಲ, ಅಂತೀರಿ ಅದು ಡಿಬೆಟಬಲ್, ಅದಕ್ಕೇ ನಾನದನ್ನು ಒಂದು ಉಪಮೆ ಅಂದದ್ದು.) ನಮ್ಮ ಇಂದಿನ ಅನೇಕ ಸಮಸ್ಯೆಗಳಿಂದ ಹೊರಬರಲು ಯಾವುದೇ ಅಂಜಿಕೆಗಳನ್ನು ತೋರ್ಪಡಿಸದೇ ಗಾಂಧಿಯ, ರಾಮಕೋಟಿ ಬರೆಸಿಕೊಳ್ಳುವ ಆ ರಾಮನನ್ನು ನಾವು reclaim ಮಾಡಿಕೊಳ್ಳಬೇಕಿದೆ. ಶ್ರೀರಾಮಚಂದ್ರ ಈ ಬೀದಿಯ ಕೋಲೆ ಬಸವರ ಸ್ವತ್ತಲ್ಲ, ನಾವು ರಾಮನನ್ನು ಇವರಿಗೆ ಗುತ್ತಿಗೆ ನೀಡಿಲ್ಲ. ನೀಡ ಕೂಡದು ಕೂಡ. 


ಯಾಕೋ ರಾಮನವಮಿ ಅಂದಾಗ ಇದೆಲ್ಲಾ ಆಲೋಚನೆಗಳು ನನ್ನ ಮಸ್ತಿಷ್ಕದಲ್ಲಿ.....

ಹಿಡನ್ ಅಜೆಂಡಾ - ಖುಲ್ಲಂಖುಲ್ಲಾ!


ಬಿಜೆಪಿಯದು ಹಿಡನ್ ಅಜೆಂಡಾ ಹಿಡನ್ ಅಜೆಂಡಾ ಅಂತ ಬಾಯಿ ಬಡಕೊಂಡಿದ್ದೇ ಬಂತು, ಬಿಜೆಪಿ ಯಾವುದನ್ನೂ ಹಿಡನ್ ಆಗಿರಸದೇ ಎಲ್ಲವನ್ನೂ ಖುಲ್ಲಂಖುಲ್ಲಾ ಆಗಿ ಮಾಡಿ ಮುಗಿಸಿದೆ. ಮೊನ್ನೆ ಶುಕ್ರವಾರ ಒಂದೇ ದಿನ ತೀವ್ರ ವಿರೋಧದ ನಡುವೆಯೂ ಅತ್ಯಂತ ವಿವಾದಾತ್ಮಕವಾದ ಗೋ ಹತ್ಯಾ ನಿಷೇಧ ಕಾನೂನನ್ನೂ ಮತ್ತು ಸಂಸ್ಕೃತ ವಿವಿ ಬಿಲ್ಲನ್ನೂ ಅಂಜದೆ ವಿಧಾನಸಭೆಯಲ್ಲಿ ಪಾಸು ಮಾಡಿಬಿಟ್ಟಿದೆ.

ಗೋ ಹತ್ಯೆ ಅನ್ನುವಂತಹುದ್ದು ನಮ್ಮ ದೇಶದಲ್ಲಿ ಬಾಬರ್, ಅಕ್ಬರ್, ಔರಂಗಜೇಬ್ ಕಾಲದಿಂದಲೂ ಮೊದಲಾಗಿ ಇವತ್ತಿನವರೆಗೂ ಪ್ರಚಲಿತದಲ್ಲಿರುವ ಅತ್ಯಂತ ಸೂಕ್ಷ್ಮ ವಿವಾದಾತ್ಮಕ ವಿಷಯ. ಗೋ ಹತ್ಯೆ ಅಂದ ಕೂಡಲೇ ಹಿಂದೂ ಮುಸ್ಲಿಮರ ಬಣಗಳು ಕಣ್ಣ ಮುಂದೆ ಸುಳಿದಾಡುತ್ತವೆ. ಗೋವನ್ನು ಹಿಂದೂಗಳು ದೈವವೆಂದು ಪೂಜಿಸುತ್ತಾರೆ. ಮುಸ್ಲಿಮರು ಅದರ ಭಕ್ಷಕರು. ಬಿಜೆಪಿಗೆ ಇದಕ್ಕಿಂತಲೂ ಸುವರ್ಣಾವಕಾಶ ಇನ್ನೊಂದುಂಟೆ? ಆರ್ಎಸ್ಎಸ್ ಮೊದಲಿನಿಂದಲೂ ಸಂಪೂರ್ಣ ಗೋ ಹತ್ಯಾ ನಿಷೇಧಕ್ಕೆ ಆಗ್ರಹಿಸುತ್ತಲೇ ಇದೆ. ಹಿಂದೂ ಸಮಾಜದ ಅನೇಕ ಸ್ವಾಮಿಗಳು ಕೂಡ ಧ್ವನಿಗೂಡಿಸುತ್ತಲೇ ಬಂದಿದ್ದಾರೆ. ಬಿಜೆಪಿ ದೇಶದ ಹಿಂದೂ ಜನಮಾನಸಕ್ಕೆ ಇದೊಂದು ಎಮೋಟಿವ್ ಇಶ್ಯೂ ಆಗುವಂತೆ ಇದನ್ನು ಸದಾ ಜೀವಂತವಾಗಿಟ್ಟಿದೆ. ಸದ್ಯ ಕರ್ನಾಟಕ ಸರ್ಕಾರ ಗೋ ಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಇದರ ಪ್ರಕಾರ, `ಗೋವನ್ನು' ಕೊಲ್ಲುವುದು, ಆ ಉದ್ದೇಶದಿಂದ ಸಾಗಿಸುವುದು, ಗೋ ಮಾಂಸವನ್ನು ಇಟ್ಟುಕೊಳ್ಳುವುದು, ಇದರಲ್ಲಿ ಯಾವುದೇ ಅಪರಾಧಕ್ಕೆ(?) 7 ವರ್ಷಗಳ ತನಕ ಶಿಕ್ಷೆಯಾಗಬಹುದು!

ಇದರಲ್ಲಿ ಹಲವಾರು ಅಪಾಯಗಳಿವೆ. ಮೊದಲನೆಯದು ಗೋ ಹತ್ಯಾ ನಿಷೇಧದಿಂದ ತೊಂದರೆಗೀಡಾಗುವವರು ಬರಿಯ ಮುಸ್ಲಿಮರಲ್ಲ! ಅದು ಶುದ್ಧಾನುಶುದ್ಧ ತಪ್ಪು ಕಲ್ಪನೆ. ಈ ಕಾನೂನು ಗುರಿಯಾಗಿಸಿಕೊಳ್ಳುವುದು ದಲಿತರನ್ನ ಕೂಡ! ನಮ್ಮ ಹಿಂದೂಗಳಲ್ಲೇ ಅನೇಕ ಜಾತಿಗಳವರು ದನ, ಎಮ್ಮೆ, ಮಾಂಸವನ್ನು ತಿನ್ನುವುದುಂಟು. ಗೋ ಹತ್ಯಾ ನಿಷೇಧ ಅವರನ್ನು ಟಾರ್ಗೆಟ್ ಮಾಡುತ್ತದೆ. ಇದರ ಬಗ್ಗೆ ಸ್ವಲ್ಪ ರಿಸರ್ಚ್  ಮಾಡಿದಾಗ ನನಗೆ ತಿಳಿದ ವಿಷಯವೆಂದರೆ ಕೋಳಿ, ಮೇಕೆ, ಕುರಿ ಮತ್ತಿತರ ಮಾಂಸಗಳು ಅತ್ಯಂತ ದುಬಾರಿಯಾಗಿದ್ದು, ದನದ ಮಾಂಸ ಅಗ್ಗ! ನಮ್ಮ ಬಡವರ ಕೈಗೆಟುಕುವುದು ಅದೇ! ಈ ಕಾನೂನಿನಲ್ಲಿ ಮತ್ತೊಂದು ಆಘಾತಕಾರಿಯಾದ ಕ್ಲಾಸ್ ಇದೆ. ಇದು ನಮ್ಮ ಕರಾವಳಿಯನ್ನು ಹೊತ್ತಿ ಉರಿಸುವುದರಲ್ಲಿ ಅನುಮಾನವಿಲ್ಲ. ಹೀಗೆ ಈ ಕಾನೂನನ್ನು ಉಲ್ಲಂಘಿಸಿದವರನ್ನು ಪೋಲೀಸರೇ ಬಂದು ಹಿಡಿಯಬೇಕೆಂದೇನೂ ಇಲ್ಲ! ಯಾವುದೇ ಸ್ವಯಂ ಸೇವಾ ಸಂಘ ಸಂಸ್ಥೆಗಳು ಇದನ್ನು ಕೈಗೆತ್ತಿಕೊಳ್ಳಬಹುದು! ಇನ್ನು ಭಜರಂಗ ದಳ, ಶ್ರೀ ರಾಮ ಶೇನೆಗೆಲ್ಲಾ ಲೈಸೆನ್ಸ್ ಸಿಕ್ಕ ಹಾಗೇ. ಕರಾವಳಿಯ ಪರಿಸ್ಥಿತಿಯನ್ನು ನೆನೆಸಿಕೊಂಡರೆ ದಿಗಿಲಾಗುತ್ತದೆ.

ಈ ಕಾನೂನು impractical ಕೂಡ. ಹರಿ ಹರಿ ಗೋವು ನಾನು, ಕಾಮಧೇನು...ನೀನಾರಿಗಾದೆಯೋ ಎಲೆ ಮಾನವ? ಅನ್ನುವ ಗೋವನ್ನು ಕೊಲ್ಲುವುದೇ? ಶಾಂತಂ ಪಾಪಂ ಎನ್ನುವ ಸರ್ಕಾರ ಪ್ರಾಕ್ಟಿಕಲ್ ಆಗಿ ಕೂಡ ಯೋಚಿಸಬೇಕು. ರೈತ ಆಗಲೇ ಬಸವಳಿದಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಮುದಿ ಗೊಡ್ಡು ದನಗಳು ಮತ್ತು ಗಂಡು ಕರುಗಳನ್ನು ಸಾಕುವ ಸ್ಥೈರ್ಯ ಆತನಿಗಿದಿಯೇ? ನಾವು ಆತನಿಂದ ಅದನ್ನು ನಿರೀಕ್ಷಿಸುವುದು ಸಹ ತಪ್ಪಲ್ಲವೇ? ಅದಕ್ಕೆ ಸರ್ಕಾರ ಪರಿಹಾರ ಸೂಚಿಸಿದೆ, ಗೋಶಾಲೆಗೆ ತಂದು ಬಿಟ್ಟರೆ ಸರ್ಕಾರವೇ ಅವುಗಳನ್ನು ನೋಡಿಕೊಳ್ಳುತ್ತದಂತೆ. ಹಾಗಾದರೆ ಇನ್ನೇನು ಸಮಸ್ಯೆಯಿಲ್ಲ ಅಂತೀರಾ? ಒಂದೇ ಸಮಸ್ಯೆ - ಅದರ ಆಲನೆ-ಪಾಲನೆಗೆ ರೈತ ಸರ್ಕಾರಕ್ಕೆ  ದುಡ್ಡು ಕಟ್ಟಬೇಕಂತೆ! ಇದು ನಮ್ಮ ಸರ್ಕಾರದ ಪರಿಹಾರ ಸೂತ್ರ. ಇನ್ನು ಭಾರತದಲ್ಲಿ ಗೋ ಹತ್ಯೆಯೇ ನಡೆದಿಲ್ಲವೇನೋ ಎಂದು ಅನೇಕರು ಸೋಗು ಹಾಕುತ್ತಿದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಆರ್ಯರು ಗೋ ಭಕ್ಷಕರಾಗಿದ್ದರು, ಈಗಲೂ ಕೆಲವು ಯಜ್ಞ ಯಾಗಾದಿಗಳಲ್ಲಿ ಗೋ ಪ್ರಸಾದವುಂಟು ಅದೂ ಬ್ರಾಹ್ಮಣರಲ್ಲಿ! ಮತ್ತೊಂದು ಮಾತು ಭಾರತ ಇಡಿಯ ವಿಶ್ವಕ್ಕೇ ಎರಡನೇ ಅತಿ ದೊಡ್ಡ ಬೀಫ್ ಪ್ರಡ್ಯೂಸರ್! ಅದೊಂದು ದೊಡ್ಡ ಇಂಡಸ್ಟ್ರಿ.

ಮೊನ್ನೆ ಲಂಕೇಶ್ 75' ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಮಾತನಾಡುತ್ತಿದ್ದರು. ಒಬ್ಬ ದಲಿತ ತಾನು ಬ್ರಾಹ್ಮಣನಾಗಬೇಕೆಂದು ಸರ್ಕಾರಕ್ಕೆ ಅರ್ಜಿ ಹಾಕಿಕೊಂಡರೆ, ಅದು ಏನೆಂದು ಉತ್ತರಿಸುತ್ತದೆ ಅಂತ ಒಂದು ಪ್ರಶ್ನೆ ಎಸೆದರು. ಇದ್ದವರೆಲ್ಲಾ ತಲೆ ಕೆರೆದುಕೊಳ್ಳುವಷ್ಟರಲ್ಲಿ ಅವರೇ ಉತ್ತರ ಕೂಡ ಕೊಟ್ಟರು. ಇದು ತನ್ನ ವ್ಯಾಪ್ತಿಗೆ ಬರದ ವಿಷಯ ಅಂತ ಸರ್ಕಾರ ಜಾರಿಕೊಳ್ಳುತ್ತದೆ. ಹಾಗಾದರೆ ದೇವನೂರರದು ಮತ್ತೊಂದು ಪ್ರಶ್ನೆ - ತನ್ನ ವ್ಯಾಪ್ತಿಗೆ ಬರದ ಇಂತಹ ವಿಷಯಗಳ ಕುರಿತು ಸರ್ಕಾರಗಳು ಯಾಕೆ ಕಾನೂನುಗಳನ್ನು ಮಾಡುತ್ತವೆ? ಜಾತಿಯಾಯಿತು ಈಗ ಊಟದ ತಟ್ಟೆಗೂ ಕೈ ಹಾಕಿ ಕೂತಿದೆ ಸರ್ಕಾರ! ಬಹುಶಃ ಗೋ ಹತ್ಯಾ ನಿಷೇಧಕ್ಕೆ ಇದು ತಕ್ಕ ಉತ್ತರವಾದೀತು. the best government is that which governs the least. ಯಡಿಯೂರಪ್ಪನವರೂ ಸೇರಿದಂತೆ ನಮ್ಮ ದೇಶವನ್ನಾಳುತ್ತಿರುವವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಇನ್ನು ಸಂಸ್ಕೃತ ವೇದ ವಿವಿ ಕಥೆ. ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಂದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚಿವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸರ್ಕಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಸಂಸ್ಕೃತ ವಿವಿಯದೂ ಇದೇ ಗೋಳು. ಅಸಲಿಗೆ ಇರುವ ವಿವಿಗಳ ಸಂಸ್ಕೃತ ವಿಭಾಗಗಳಲ್ಲಿ ಹುಡುಗರಿಲ್ಲದೆ ನೊಣ ಹೊಡೆಯುತ್ತಿರಬೇಕಾದರೆ ಸಂಸ್ಕೃತಕ್ಕೆಂದೇ ಹೊಸದೊಂದು ವಿವಿ! ಇದರಲ್ಲೂ ಕೂಡ ಬ್ರಾಹ್ಮಣಶಾಹಿಯನ್ನು ಮೆಚ್ಚಿಸುವ ಚೀಪ್ ರಾಜಕೀಯವೇ ಇಣುಕುತ್ತಿದೆ. ಕನ್ನಡ ನಾಡಿನ ದುರ್ದೈವ..ಎಡಬಿಡಂಗಿ ಸರ್ಕಾರ, ಕಿಮ್ಮತ್ತಿಲ್ಲದ ವಿರೋಧ ಪಕ್ಷಗಳು ಎರಡನ್ನೂ ನೋಡಬೇಕಿದೆ.

ನೈಸ್ ಪುರಾಣ - 3 - ಹಗರಣದ ಬೀಜಾಂಕುರವಾಗಿದ್ದೇ ಗೌಡಪ್ಪನ ಕಾಲದಲ್ಲಿ!

ಬೆಂಗಳೂರು - ಮೈಸೂರು ಹೆದ್ದಾರಿ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕಾಗಿಯೂ ಅದಕ್ಕಾಗಿ ಒಂದು ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಕೆಲಸ ಮಾಡಬೇಕಾಗಿಯೂ ಈ ಹೈ ಲೆವೆಲ್ ಕಮಿಟಿಗೆ ಮ್ಯಾಂಡೇಟ್ ನೀಡಲಾಗಿತ್ತು. 14 ಜೂನ್ 1995ರಂದು ಸರ್ಕಾರದ ಹೈ ಲೆವೆಲ್ ಕಮಿಟಿಯ ಮೊದಲ ಸಭೆ ನಡೆಯುತ್ತದೆ. ಅಂದಿನ ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಕನ್ಸಾರ್ಶಿಯಂನ ಪರವಾಗಿ ಶಿವಕುಮಾರ ಖೇಣಿ ಮತ್ತು ಅಶೋಕ್ ಖೇಣಿ ಸಹೋದರರು ಭಾಗವಹಿಸುತ್ತಾರೆ. ಇವತ್ತು ದೇವೇಗೌಡರೇನು ಖೇಣಿ ಬೆಂಗಳೂರು ಸುತ್ತಮುತ್ತಲಿನ ಅಮೂಲ್ಯ ಭೂಮಿಯ ಲೂಟಿ ಮಾಡುತ್ತಿದ್ದಾರೆ ಎಂದು ಬೊಬ್ಬಿಡುತ್ತಿದ್ದಾರೆ ಅದಕ್ಕೆ ಖೇಣಿ ಸಾಹೇಬರಿಗೆ ಲೈಸೆನ್ಸ್ ಸಿಕ್ಕಿದ್ದೇ ಈ ಸಭೆಯಲ್ಲಿ!


ಹೌದು, ಹೈ ಲೆವೆಲ್ ಕಮಿಟಿಯ ಮೊದಲ ಸಭೆಯಲ್ಲಿಯೇ ಅಶೋಕ್ ಖೇಣಿಯ ವರಾತ ಶುರುವಾಗುತ್ತದೆ. ತಮ್ಮ ಕಂಪೆನಿಗಳ ಒಕ್ಕೂಟ ಇಡಿಯ ಪ್ರಾಜೆಕ್ಟಿನ ಕಮರ್ಷಿಯಲ್ ಮತ್ತು ಫೀಸಿಬಲಿಟಿ ಸರ್ವೇ ಕೈಗೊಂಡಿದ್ದು, ಈಗಿರುವಂತೆ ಮಾಡುವುದಾದರೆ ಕಂಪೆನಿಗಳಿಗೆ ಏನೂ ಗಿಟ್ಟುವುದಿಲ್ಲ, ಇದು ಆರ್ಥಿಕವಾಗಿ ಮಾಡಲೋಗ್ಯವಲ್ಲ ಎಂದು ಶರಾ ಬರೀತಾರೆ. ನಂತರ ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ. ಇಡಿಯ ಪ್ರಾಜೆಕ್ಟನ್ನು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಗೆ ಸೀಮಿತಗೊಳಿಸುವ ಬದಲಿಗೆ ಇದನ್ನು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಅನುಮತಿ ಕೊಡಬೇಕೆಂದೂ, ವಿನಂತಿಸಿಕೊಳ್ಳುತ್ತಾರೆ. ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿನ ಭೂಮಿಯನ್ನು ಕಮರ್ಷಿಯಲ್ ಆಗಿ ಬಳಸಿಕೊಂಡು, ಒಂದು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವುದೆಂದೂ, ಇದರ ಭಾಗವಾಗಿ ಬೆಂಗಳೂರ ಮೇಲಿನ ಒತ್ತಡ ಕಡಿತಗೊಳಿಸಲು ಅರ್ಬನ್ ಟೌನ್ಷಿಪ್ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಅಗ್ರೋಬೇಸ್ಡ್ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ರೆಸಾರ್ಟ್ಗಳನ್ನು ಕಟ್ಟಬಹುದೆಂದು ಕನಸು ಬಿತ್ತಿದರು, ಖೇಣಿ! ಇದಲ್ಲದೆ ಎಕ್ಸ್ಪ್ರೆಸ್ ವೇ ಮತ್ತು ಎನ್ಎಚ್ 7ರ ನಡುವೆ ಎನ್ಎಚ್ 4ರ ಮೂಲಕ ಒಂದು ಲಿಂಕ್ ರಸ್ತೆ ಮತ್ತು ಬೆಂಗಳೂರಿನ ಒಳ ಭಾಗಗಳಿಗೂ ರಸ್ತೆಯ ವಿಸ್ತಾರದ ಕುರಿತು ಮಾತನಾಡಿದರು. ಈ ಟೌನ್ಷಿಪ್ಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನೂ ಕಂಪೆನಿಯೇ ಮಾಡಿಕೋಳ್ಳುವುದಾಗಿಯೂ ಖೇಣಿ ಹೇಳುತ್ತಾರೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಎಂಬ ಹೆಸರನ್ನು ಬದಲಿಸಿ ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್  ಪ್ರಾಜೆಕ್ಟ್ ಎಂದು ಮರುನಾಮಕರಣಗೊಳಿಸಿ, ನಂದಿಯನ್ನು ಪ್ರಾಜೆಕ್ಟಿನ ಲಾಂಛನವಾಗಿ ಬಳಸಬೇಕೆಂದು ಖೇಣಿ ಒತ್ತಾಯಿಸುತ್ತಾರೆ. ಸರ್ಕಾರ  ಮತ್ತು ಕಂಪೆನಿ ನಡುವಿನ ಎಂಒಯುನ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತೊಂದು ಎಂಒಯುವನ್ನು ಮಾಡಿಕೊಳ್ಳಬೇಕೆಂದೂ ಹೇಳುತ್ತಾರೆ. 


ಆಶ್ಚರ್ಯ! ಖೇಣಿ ಹತ್ತಿಸಿದ ಅಮಲಿನಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಂತೆ ಕಂಡು ಬಂದ ಇಡೀ ಸಭೆ ಯಾವುದೇ ಪ್ರಶ್ನೆಗಳಿಲ್ಲದೆ ಖೇಣಿ ಹೇಳಿದ ಎಲ್ಲವನ್ನೂ ಮರುಮಾತಿಲ್ಲದೆ ಒಪ್ಪಿಕೊಂಡು ಅಸ್ತು ಎಂದಿತು. ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಜೆ. ವಾಸುದೇವನ್ ಇಡಿಯ ಪ್ರಪೋಸಲ್ಲಿಗೆ ಒಪ್ಪಿಗೆ ಸೂಚಿಸುತ್ತಾರೆ. ಈ ಹೈ ಲೆವೆಲ್ ಕಮಿಟಿಯ ಸಭೆಯ ಮಿನಟ್ಸ್ ಅನ್ನು ತೆಗೆದು ನೋಡಿದವರಿಗೆ ತುಂಬಾ ಸ್ಪಷ್ಟವಾಗಿ ಅರ್ಥವಾಗುವ ಮೊದಲ ವಿಷಯವೆಂದರೆ, ಈ ಸಭೆಯ ಎಲ್ಲ ನಿರ್ಣಯಗಳೂ ಪೂರ್ವ ನಿರ್ಧಾರಿತ. ಸಭೆ ಒಂದು ಸ್ಟೇಜ್ ಶೋ ಅಷ್ಟೆ, ಎಂಬುದು. 


ಇಡೀ ಬಿಎಂಐಸಿಪಿಯನ್ನು ನಾವು ಇಂದು ಹಗರಣವೆನ್ನುವುದೇ ಆದರೆ ಅದರ ಬೀಜಾಂಕುರವಾಗಿದ್ದೇ ಇಲ್ಲಿ. ರೈತ ನಾಯಕನೆಂದು ಕೊಚ್ಚಿಕೊಳ್ಳುವ ದೇವೇಗೌಡರು ಆತನಲ್ಲಿ ರಸ್ತೆ ಕಟ್ಟಲು ಹಣವಿಲ್ಲವೆಂದು 20 ಸಾವಿರ ಎಕರೆ ರೈತರ ಭೂಮಿಯನ್ನು ಆತನಿಗೆ ಕಮರ್ಷಿಯಲ್  ಆಗಿ ಬಳಸಿಕೊಳ್ಳಲು ಅನುಮತಿ ನೀಡುತ್ತಾರೆ! ಗೌಡರು ಖೇಣಿಯನ್ನು ಈಗ ಬರಿಗೈ ಫಕೀರ ಎಂದು ಅಣಕಿಸುವುದುಂಟು, ಆದರೆ ತಿಳಿದಿರಬೇಕು ಖೇಣಿ ಅಂದೂ ಸಹ ಬರಿಗೈ ಫಕೀರರೇ. ಅಂತಹ ಬರಿಗೈ ಫಕೀರರು ಈ ಬೃಹತ್ ಪ್ರಾಜೆಕ್ಟನ್ನು ಮಾಡಲು ಅನುವು ಮಾಡಿಕೊಟ್ಟದ್ದು ತಾವೇ ಸ್ವಾಮಿ! ಖೇಣಿ ಸರ್ಕಾರಕ್ಕೆ ಕೊಟ್ಟ ಪ್ರಪೋಸಲ್ಲು ಬಹಳ ಸರಳ - ಕ್ರಾಸ್ ಸಬ್ಸಿಡಿ! ಏನು ಹಾಗಂದರೆ? ಖೇಣಿ ಸಾಹೇಬರು ಐಡ್ಯಾ ಮಾಡ್ಯಾರ, ಸರಳ ಸ್ವಾಮಿ, ಪ್ರತಿಪಾದಿತ ರಸ್ತೆಯ ಇಕ್ಕೆಲಗಳ ಭೂಮಿಯನ್ನು ಕೊಳ್ಳುವ ಕಂಪೆನಿ ಅದನ್ನು ಕಮರ್ಶಿಯಲಿ (ರಿಯಲ್ ಎಸ್ಟೇಟ್) ಎಕ್ಸ್ಪ್ಲಾಯಿಟ್ ಮಾಡುತ್ತದೆ. ಟೌನ್ಷಿಪ್ಗಳನ್ನು ಕಟ್ಟುತ್ತದೆ, ಪ್ರವಾಸೋದ್ಯಮ ರೆಸಾರ್ಟ್ಗಳನ್ನು ಕಟ್ಟತ್ತದೆ. ಅದರಿಂದ ಬರುವ ಅಪಾರ ಹಣವನ್ನು ವ್ಯಯಿಸಿ ರಸ್ತೆ ನಿರ್ಮಾಣ ಮಾಡುತ್ತದೆ. ಹೀಗೆ ನಿರ್ಮಿಸಿದ ರಸ್ತೆ ಮೇಲೆ ಜನ ಓಡಾಡೋದಿಕ್ಕೆ ಟೋಲ್ ಅನ್ನು ಕೂಡ ಸಂಗ್ರಹಿಸುತ್ತದೆ. ಅದೂ 30 ವರ್ಷಗಳ ಕಾಲ! ಇಂತಹುದೊಂದು ಯೋಜನೆಗೆ ಗೌಡರೇ ಒಪ್ಪಿದ್ದರಲ್ಲ? ಇದನ್ನು ಗೌಡರು ಸಮರ್ಥಿಸಿಕೊಳ್ಳದೇ ಬಿಡುವುದಿಲ್ಲ. ಆಗ ದೇಶದ ಆರ್ಥಿಕ  ಪರಿಸ್ಥಿತಿ ಹದಗೆಟ್ಟತ್ತು, ಉದಾರೀಕರಣ ಆಗಷ್ಟೆ ಜಾರಿಗೆ ಬರುತ್ತಿತ್ತು, ಆದ್ದರಿಂದ ಹೂಡಿಕೆಗೆ ಹಣ ಸಂಗ್ರಹಿಸುವುದು ಅಷ್ಟು ಸುಲಭವಿರಲಿಲ್ಲ. ಮೇಲಾಗಿ ಈ ಪ್ರಾಜೆಕ್ಟ್ನ ಫೀಸಬಿಲಿಟಿ ಸರ್ವೇ ನಡೆಸಿದ್ದ ಎಡಿಬಿ ಸಂಸ್ಥೆಯು ಸರ್ಕಾರ ಕ್ಯಾಪಿಟಲ್ನ ಶೇ.20ರಷ್ಟನ್ನು ಸಬ್ಸಿಡಿ ರೂಪದಲ್ಲಿ ಕೊಡದ ಹೊರತು ಈ ಪ್ರಾಜೆಕ್ಟ್ ಆರ್ಥಿಕವಾಗಿ ಯೋಗ್ಯವಲ್ಲ ಎಂದಿದ್ದನ್ನು ನೆನಪಿಸುತ್ತಾರೆ. ಇರಲಿ. 


ಆಗಸ್ಟ್ 26, 1995ರಂದು ಕಂಪೆನಿಗಳು ಈ ಮೇಲ್ಕಂಡಂತೆ ನಿರ್ಧಾರಿತವಾಗಿದ್ದ ರೂಪುರೇಷೆಗಳಂತೆ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಇದರಲ್ಲಿ ಕಂಪೆನಿ ಸ್ಪಷ್ಟವಾಗಿ ಬೆಂಗಳೂರು - ಮೈಸುರು ಹೆದ್ದಾರಿಗೆ 5119.37 ಎಕರೆಗಳು ಮತ್ತು ಏಳು ಟೌನ್ಷಿಪ್ಗಳಿಗೆ 20, 092 ಎಕರೆಗಳು ಬೇಕಾಗುತ್ತದೆಂದೂ ಗುರುತಿಸುತ್ತದೆ. ಬೆಂಗಳೂರು - ಮೈಸೂರು ಹೆದ್ದಾರಿಗಾಗಿ ಅಂದಾಜು 1568 ಮಿಲಯನ್ ರೂ.ಗಳು ಖರ್ಚಾಗಬಹುದೆಂದು ತಿಳಿಸಲಾಗಿದೆ. ಈ ವರದಿ ಬೆಂಗಳೂರು ಮೈಸೂರಿನ ನಡುವೆ ಏಳು ಟೌನ್ಷಿಪ್ಗಳ ಸ್ಥಾಪನೆಯನ್ನು ಪ್ರತಿಪಾದಿಸುತ್ತದೆ. ಅದರಂತೆ ಬಿಡದಿ ಬಳಿ ಕಾರ್ಪರೇಟ್ ಸೆಂಟರ್ (1) ಮತ್ತು ಕಮರ್ಷಿಯಲ್ ಸೆಂಟರ್ (2), ರಾಮನಗರದ ಬಳಿ ಹೆರಿಟೇಜ್ ಸೆಂಟರ್ (3), ಫಾರ್ಮಿಂಗ್ ಅಂಡ್ ಮಾರ್ಕೆಟಿಂಗ್ ಸೆಂಟರ್(4) ಮತ್ತು ಇಂಡಸ್ಟರಿಯಲ್ ಸೆಂಟರ್ (5), ಮಂಡ್ಯ ಮತ್ತು ಶ್ರೀರಂಗಪಟ್ಟಣದ ನಡುವೆ ಅಗ್ರೀಕಲ್ಚರಲ್ ಸೆಂಟರ್(6), ಮತ್ತು ಶ್ರೀರಂಗಪಟ್ಟಣದ ಬಳಿ ಇಕೋ-ಟೂರಿಸಂ ಸೆಂಟರ್(7) ಎಂಬ ಏಳು ಟೌನ್ಷಿಪ್ಗಳನ್ನು ಕಂಪೆನಿ ಪ್ರತಿಪಾದಿಸುತ್ತದೆ. ಸೆಪ್ಟೆಂಬರ್ 13, 1995ರಮದು ಮತ್ತೆ ಸಭೆ ಸೇರುವ ಹೈ ಲೆವೆಲ್ ಕಮಿಟಿಯು ಕಂಪೆನಿ ಸಲ್ಲಿಸಿದ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಅಂಗೀಕರಿಸಿ, ಕಂಪೆನಿಯಿಂದ ಹಲವಾರು ಸ್ಪಷ್ಟನೆಗಳನ್ನು ಬಯಸುತ್ತದೆ. ಖೇಣಿಯವರು ಕೊಡುವ ವಿವರಣೆಗಳನ್ನು ದಾಖಲಿಸಿ ಸಭೆ ಮುಕ್ತಾಯವಾಗುತ್ತದೆ. 


ಅಕ್ಟೋಬರ್ 12,1995ರಂದು ಈ ಹೈ ಲೆವೆಲ್ ಕಮಿಟಿಯು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ. ಖೇಣಿ ಕೊಟ್ಟ ರಿಪೋರ್ಟ್ಗೂ ಹೈ ಲೆವೆಲ್ ಕಮಿಟಿಯ ರಿಪೋರ್ಟ್ಗೂ ಅಂತಹ ಫರಕ್ಕೇನೂ ಇಲ್ಲ. ವ್ಯವಸ್ಥೆ ಖೇಣಿ ಸಾಹೇಬರೊಂದಿಗೆ ಅಷ್ಟು ಅನ್ಯೋನ್ಯವಾಗಿತ್ತು ಅಂತಾತು! ಈ ಹೈ ಲೆವೆಲ್ ಕಮಿಟಿಯ ರಿಪೋರ್ಟ್ರಿನಲ್ಲಿ ದಾಖಲಾಗಿರುವ ಕೆಲವು ಟರ್ಮ್ಸ್ ಅಂಡ್ ಕಂಡೀಷನ್ಸ್ ಮುಂದೆ ಹಗರಣವನ್ನು ಅರ್ಥ ಮಾಡಿಕೊಳ್ಳಲು ಇರುವ ಏಕೈಕ ರೆಫೆರೆನ್ಸ್ ಪಾಯಿಂಟ್. ಇದಕ್ಕೆ ನಂತರ ಬರೋಣ. ಹೈ ಲೆವೆಲ್ ಕಮಿಟಿಯ ಶಿಫಾರಸುಗಳ ಪರಾಮರ್ಶೆಗೆ ಸರ್ಕಾರದ  ಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಂದು ಸಬೆ ನಡೆಯುತ್ತದೆ. ಎಲ್ಲ ವಿಷಯಗಳ ಕೂಲಂಕುಷ ಚಿಂತನೆಯ ನಂತರ ಸರ್ಕಾರ ಒಂದು  ಆದೇಶ ಹೊರಡಿಸುತ್ತದೆ. ಈ ಆದೇಶ ಟೌನ್ಷಿಪ್ಗಳನ್ನು 7ರ ಬದಲು 5ಕ್ಕೆ ಮಿತಿಗೊಳಿಸುತ್ತದೆ ಎಂಬುದನ್ನು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ರಾಮನಗರದ ಬಳಿಯ ಹೆರಿಟೇಜ್ ಸೆಂಟರ್(3) ಮತ್ತು ಮಂಡ್ಯ ಶ್ರೀರಂಗಪಟ್ಟಣದ ನಡುವಿನ ಅಗ್ರೀಕಲ್ಚರ್ ಸೆಂಟರ್ (6)ಗೆ ಸರ್ಕಾರ  ಅನುಮತಿ ನಿರಾಕರಿಸುತ್ತದೆ. ಇವೆರಡರ ಹೊರತಾಗಿಯೂ ಕೂಡ ಪ್ರಾಜೆಕ್ಟ್ ಲಾಭದಾಯಕವಾಗಿರಲಿದೆ ಎಂಬುದು ಸರ್ಕಾರದ ವಾದ. ಇದರಂತೆ ರಸ್ತೆಗೆ 5119 ಎಕರೆ ಮತ್ತು ಐದು ಟೌನ್ಷಿಪ್ಗಳಿಗೆ 13, 194 ಎಕರೆ ಭೂಮಿ ಅಗತ್ಯವೆಂದು ಗುರುತಿಸುತ್ತದೆ. ಇದರಂತೆ ಸರ್ಕಾರದ  ಲೋಕೋಪಯೋಗಿ ಇಲಾಖೆಯು ಕಂಪೆನಿಗಳ ಕನ್ಸಾರ್ಶಿಯಂನೊಂದಿಗೆ  ಸೂಕ್ತ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚಿಸುತ್ತದೆ. 


ಇಲ್ಲಿ ಮತ್ತೊಂದು ಸಣ್ಣ ಸ್ಕ್ಯಾಮಿದೆ. ಇಂತಹ ಯಾವುದೇ ಪ್ರಾಜೆಕ್ಟಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಕು. ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಪರಿಶೀಲಿಸಿದ ಆರ್ಥಿಕ ಇಲಾಖೆ ಎರಡು ಆಯ್ಕೆಗಳನ್ನು ನೀಡುತ್ತದೆ. ಒಂದು - ಟೌನ್ಷಿಪ್ 1+2+4 = 6227 ಎಕೆರೆಗಳು, ಎರಡು - ಟೌನ್ಷಿಪ್ 1+2+4+5 = 8909 ಎಕೆರೆಗಳು. ಅಲ್ಲಿಗೆ ಗರಿಷ್ಠ 4 ಟೌನ್ಷಿಪ್ಗಳಿಗೆ ಮಾತ್ರ ಆರ್ಥಿಕ ಇಲಾಖೆ ಅಸ್ತು ಅಂದಿತ್ತು. ಆದರೆ ಸರ್ಕಾರದ  ಆದೇಶದಲ್ಲಿ 5 ಟೌನ್ಷಿಪ್ಗಳಿಗೆ ಅನುಮತಿ ನೀಡಲಾಗಿದೆ. ಅದು ಟೌನ್ಷಿಪ್ ನಂ.7 ಶ್ರೀರಂಗಪಟ್ಟಣದ ಬಳಿ ಇಕೋ ಟೂರಿಸಂಗಾಗಿ ರೆಸಾರ್ಟ್. ಇದಕ್ಕೆ ಆರ್ಥಿಕ ಇಲಾಖೆ ತನ್ನ ಒಪ್ಪಿಗೆ ಸೂಚಿಸಿಲ್ಲ, ಆದರೆ ಇದಕ್ಕಾಗಿ 4285 ಎಕರೆಗಳನ್ನು ತೆಗೆದಿರಿಸಲಾಗಿದೆ! ಆರ್ಥಿಕ ಇಲಾಖೆಯ ಅನುಮೋದನೆಯೇ ಇಲ್ಲದೆ 4285 ಎಕರೆಗಳು ಖೇಣಿ ಕೈ ಸೇರುತ್ತವೆ, ದೇವೇಗೌಡರ ಹಯಾಮಿನಲ್ಲಿ! 


ನಂತರ ಗೌಡರದ್ದೋ ದೇಶದ್ದೋ ಯಾರ ಅದೃಷ್ಟವೋ ತಿಳಿಯದು, ಅತ್ಯಂತ ಸಿನಿಮೀಯ ರೀತಿಯಲ್ಲಿ ಕೇವಲ 16 ಸಂಸದರನ್ನು ಬೆನ್ನಿಗೆ ಕಟ್ಟಕೊಂಡು ದೇವೇಗೌಡರು ದೆಹಲಿಗೆ ಹಾರುತ್ತಾರೆ, ಈ ದೇಶದ ಪ್ರಧಾನಿಯಾಗುತ್ತಾರೆ. ಅಲ್ಲಿಗೆ ಈ ನೈಸ್ ಪುರಾಣದಲ್ಲಿ ದೇವೇಗೌಡರ ಪಾತ್ರದ ಮೊದಲ ಅಂಕ ಮುಕ್ತಾಯವಾಗುತ್ತದೆ. ಇಲ್ಲಿ ನಮ್ಮ ನಾಡಿನಲ್ಲಿ ಬಹು ತರ್ಜನ ಭರ್ಜನದ ಬಳಿಕ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗುತ್ತಾರೆ. ನೈಸ್ ಪುರಾಣದಲ್ಲಿ ಒಂದು ಅಂಕಕ್ಕೆ ತೆರೆ ಬಿದ್ದು, ಮತ್ತೊಂದು ಅಂಕದ ತೆರೆಯೇಳುತ್ತದೆ. 
(ಮುಂದುವರಿಯುವುದು)

ನೈಸ್ ಪುರಾಣ - 2

ನೈಸ್ ವಿರುದ್ಧ ಗೌಡರ ಗುಡುಗು ಅವ್ಯಾಹತವಾಗಿ ಮುಂದುವರಿಯುತ್ತಲೇ ಇತ್ತಾದರೂ ಎದುರು ಕೋಟೆಯಿಂದ ಒಂದೇ ಒಂದು ಸೊಲ್ಲಿರಲಿಲ್ಲ! ಖೇಣಿ ಸಾಹೇಬರು ಎದೆಲ್ಲೋ ನಾಪತ್ತೆಯಾಗಿಬಿಟ್ಟಿದ್ದರು. ನಮ್ಮ ಪತ್ರಕರ್ತರಿಗೆಲ್ಲರಿಗೂ ಅವರ ಮಾತುಗಳ ಮನರಂಜನೆಯಿಲ್ಲದೆ ಬೋರೋ ಬೋರು...ಇದನ್ನರಿತೋ ಏನೋ ಮೊನ್ನೆ ಖೇಣಿ ಸಾಹೇಬರು ಧುತ್ತನೆ ಅಶೋಕ ಹೋಟೆಲ್ನಲ್ಲಿ ಪ್ರತ್ಯಕ್ಷರಾದರು. ಎಲ್ಲ ಪತ್ರಕರ್ತರನ್ನೂ ಕಲೆ ಹಾಕಿ ದೇವೇಗೌಡರ ಎಲ್ಲ ಆಪಾದನೆಗಳಿಗೂ ಅವರಿಗೆ ತೋಚಿದಂತೆ ಉತ್ತರ ಕೊಟ್ಟರು. ಇವರೂ ಕೆಲವು ಆಪಾದನೆಗಳನ್ನು ಮಾಡಿದರಾದರೂ ಪೂರಕ ದಾಖಲೆಗಳಿಲ್ಲದೆ ತಬ್ಬಿಬ್ಬಾದರು. ಅತ್ತ ಗೌಡರು ನೈಸ್ ಬಾಧಿತ 1500 ರೈತರ ಗುಂಪು ಕಟ್ಟಿಕೊಂಡು ದೆಹಲೀ ಛಲೋ ಅಂದಿದ್ದಾರೆ. ಪಾರ್ಲಿಮೆಂಟ್ ಮುಂದೆ ಈ ರೈತರು ಧರಣಿ ಕೂತರು. ಸರ್ಕಾರದ ಮಾನ ದೆಹಲೀಲಿ ಹರಾಜ್! ಇರಲಿ ಬಿಡಿ.

ಖೇಣಿ ಸಾಹೇಬರು ಬೇರೆ ಏನೇ ಹೇಳಲಿ ಒಂದನ್ನಂತೂ ಸರಿಯಾಗಿ ಹೇಳಿದರು. ಈ ನೈಸ್ ಪ್ರಾಜೆಕ್ಟ್ ಒಂದು ಆನೆ. ಅದನ್ನು ಒಬ್ಬೊಬ್ಬ ಕುರುಡ ಒಂದೊಂದು ಬದಿಯಿಂದ ಮುಟ್ಟುತ್ತಾ ತಡವುತ್ತಾ ಇದು ಹೀಗೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆ. ಹೌದು ನಿಜ. ನೈಸ್ ಕಾಮಗಾರಿಯೆಂಬ ಆನೆಯನ್ನು ಸವಾ ಲಕ್ಷ ಮಂದಿ ಕುರುಡರು ಸವಾ ಲಕ್ಷ ರೀತಿ ವರ್ಣಿಸುತ್ತಿದ್ದಾರೆ. ಒಬ್ಬೊಬ್ಬರದೂ ಒಂದೊಂದು ಇಂಟರ್ಪ್ರೆಟೇಷನ್ಗಳು, ರಾಜಕೀಯ ವಾದಗಳು. ಅದಕ್ಕೇ ಜನರಲ್ಲಿ ಈ ಕುರಿತು ಎಲ್ಲವೂ ಗೊಂದಲಪುರ. ಯಾರದು ಸತ್ಯವೋ? ಯಾರದು ಮಿಥ್ಯವೋ? ಅಸಲಿಗೆ ಈ ಪ್ರಾಜೆಕ್ಟ್ ಗೌಡರು ಅಡ್ಡಗಾಲಾಕಿ ಕೂತಿರೋ ಬೆಂಗಳೂರು ಅಭಿವೃದ್ಧಿಯ ಹೆಬ್ಬಾಗಿಲೋ ಇಲ್ಲ, ಅಗಣಿತ ಪ್ರಮಾಣದ ಹಗರಣವೋ? ಇವೇ ಪ್ರಶ್ನೆಗಳು ಜನರ ಮನಸ್ಸಿನಲ್ಲಿ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕೆಂದರೆ ನಾವು ಇಡಿಯ ನೈಸ್ ಪುರಾಣವನ್ನು ಒಮ್ಮೆ ಪೂರ್ಣ ವಾಚಿಸಬೇಕಾಗುತ್ತದೆ.

ನೈಸ್ ಹಗರಣದ ಬಗ್ಗೆ ದೇವೇಗೌಡರು ದನಿಯೆತ್ತಿದಾಗಲೆಲ್ಲಾ, ಅವರ ವಿರೋಧಿಗಳದು ಒಕ್ಕರಲ ಕೂಗು - ನೈಸ್ ಮೂಲತಃ ಗೌಡರ ಪಾಪದ ಕೂಸು! ಹೌದು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಅನ್ನು ಶುರು ಮಾಡಿದ್ದೇ ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರು. ಆದರೆ ನಂತರ ಈ ಪ್ರಾಜೆಕ್ಟ್ ಅನೇಕ ರೂಪಾಂತರಗಳನ್ನು ಪಡೆದುಕೊಂಡಿದೆ. ಈ ರೂಪಾಂತರಗಳೇ ನೈಸ್ ಹಗರಣದ ರೂಪುರೇಖೆಗಳು ಎನ್ನುವುದು ಗೌಡರ ವಾದ. ಸ್ವಾಮಿ ಇದು ನಿಮ್ಮದೆ ಪಾಪದ ಕೂಸು ಅಂದ ಕೂಡಲೇ ಗೌಡರು ಮಾತಿಗೊಮ್ಮೆ ಈ ನೈಸ್ ಪ್ರಾಜೆಕ್ಟ್ ಮೂಲ ಒಪ್ಪಂದದ ಪ್ರಕಾರ - as originally concieved - ನಡೆಯಬೇಕು. ಅದೊಂದೆ ಇದಕ್ಕೆ ಪರಿಹಾರ ಎಂದು ಬೊಬ್ಬಿಡುತ್ತಾರೆ. ಹಾಗಾದರೆ ಈ ಮೂಲ ಒಪ್ಪಂದದಲ್ಲೇನಿದೆ? How was it arrived at?

ಅದೇ ಒಂದು ದೊಡ್ಡ ಕಥೆ. ದೇವೇಗೌಡರು ರಾಮಕೃಷ್ಣ ಹೆಗಡೆ ಕ್ಯಾಬಿನೆಟ್ಟಿನಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗಲೇ ಇಂಥದೊಮದು ಎಕ್ಸ್ಪ್ರೆಸ್ ವೇ ಪರಿಕಲ್ಪನೆ ನಡೆದಿತ್ತು. ಅದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿತ್ತಾದರೂ ಅಷ್ಟರಲ್ಲಿ ಹೆಗಡೆ ಮತ್ತು ಗೌಡರ ನಡುವೆ ಮನಸ್ತಾಪವುಂಠಾಗಿ ಗೌಡರು ಕ್ಯಾಬಿನೆಟ್ನೀಂದ ಹೊರನಡೆದರು. ಆ ಯೋಜನೆ ಅಲ್ಲಿಗೇ ಮುರಿದುಬಿತ್ತು. ಮುಂದೆ ಗೌಡರು ಮುಖ್ಯಮಂತ್ರಿಯಾದಾಗ ಈ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡರು. ಆಗ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. ಉದಾರೀಕರಣದ ಬಿಸ ಬಿಸಿ ಚರ್ಚೆ ನಡೆದಿತ್ತಾದರೂ ಅದನ್ನು ಎಲ್ಲರೂ ಇನ್ನೂ ಒಪ್ಪಿಕೊಂಡಿರಲಿಲ್ಲ. ಅಂಥ ಕಾಲಘಟ್ಟದಲ್ಲಿ ಗೌಡರು ಒಂದು ಕ್ರಾಂತಿಕಾರಕ ಎನ್ನಬಹುದಾದ ಹೆಜ್ಜೆಯನ್ನಿಡುತ್ತಾರೆ. ಪ್ರೈವೇಟು ಕಂಪೆನಿಗೆ ಈ ರಸ್ತೆ ನಿರ್ಮಾಣದ ಕಾಮಗಾರಿಯನ್ನೊಪ್ಪಿಸುವುದು, ಸರ್ಕಾರ ಯಾವುದೇ ರೀತಿ ಹಣ ತೊಡಗಿಸುವುದಿಲ್ಲ. ಬದಲಿಗೆ ಆ ಕಂಪೆನಿಯೇ ಹಣ ತೊಡಗಿಸಿ ರಸ್ತೆ ಕಟ್ಟಬೇಕು. ನಂತರ 30 ವರ್ಷಗಳ ಕಾಲ ಆ ಕಂಪೆನಿ ಆ ರಸ್ತೆಯನ್ನು ನಿರ್ವಹಿಸಬಹುದು. ಈ ಅವಧಿಯಲ್ಲಿ ಆ ರಸ್ತೆ ಮೇಲೆ ಸಂಚರಿಸುವವರಿಗೆಲ್ಲರಿಗೂ ಇಂತಿಷ್ಟು ಅಂತ ಟೋಲ್ ವಿಧಿಸಿ ತನ್ನ ಬಂಡವಾಳವನ್ನು ಹಿಂತೆಗೆದುಕೊಳ್ಳಬೇಕು. 30 ವರ್ಷಗಳ ನಂತರ ಈ ರಸ್ತೆಯನ್ನು ಸರ್ಕಾರಕ್ಕೆ ಮರು ಹಸ್ತಾಂತರಿಸಬೇಕು. ಇದನ್ನು BOOT - Build, Own, Operate and Transferನ ಪರಿಕಲ್ಪನೆಯಲ್ಲಿ ಸಿದ್ಧಪಡಿಸಲಾಗಿತ್ತು.

ಇದೇ ಪರಿಕಲ್ಪನೆಯಡಿಯಲ್ಲಿ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ಅಮೆರಿಕಾದ ಒಂದು ಕಂಪೆನಿ ಮತ್ತು ಭಾರತದ ಪ್ರತಿಷ್ಠಿತ ಬಾಬಾ ಕಲ್ಯಾಣಿ ಗ್ರೂಪ್ ಅವರನ್ನೊಳಗೊಂಡ ಒಂದು ಕನ್ಸಾರ್ಶಿಯಂ ಮುಂದೆ ಬರುತ್ತದೆ. ಅದೇ ಕಾಲಕ್ಕೆ ಮುಖ್ಯಮಂತ್ರಿ ದೇವೇಗೌಡರು ದಾವೋಸ್ನಲ್ಲಿ ನಡೆದ ಜಾಗತಿಕ ಸಮ್ಮೇಳನಕ್ಕೆಂದು ಅಮೆರಿಕಕ್ಕೆ ಹೋಗುತ್ತಾರೆ. ಅಲ್ಲಿ ಮೆಸ್ಸಾಚುಟಸ್ ಗವರ್ನರ್ ವಿಲಿಯಮ್ .ಎಫ್. ವೆಲ್ಡ್ ನ `ದಿವ್ಯ ಸಾನ್ನಿಧ್ಯದಲ್ಲಿ' ಮಸ್ಸಾಚುಟಸ್ನ ಕಂಪೆನಿಗಳಾದ ವಿಎಚ್ಬಿ ಇಂಕ್., ಸಬ್ ಇಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಷನ್ಸ್ ಮತ್ತು ಭಾರತದ ಕಲ್ಯಾಣಿ ಗ್ರೂಪ್ ಅವರನ್ನೊಳಗೊಂಡ ಕನ್ಸಾರ್ಶಿಯಂನೊಂದಿಗೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿಗಾಗಿ ಒಪ್ಪಂದ ಮಾಡಿಕೊಳ್ಳಲಾಯಿತು. ಎಂಒಯುಗೆ ಸಹಿ ಹಾಕಲಾಯಿತು. ಅಂದು ತಾರೀಖು - ಫೆಬ್ರವರಿ 20 1995. ಈ ಒಪ್ಪಂದದಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಅನ್ನು ಈ ಕಂಪೆನಿಗಳ ಕನ್ಸಾರ್ಶಿಯಂ BOOT ಆಧಾರವಾಗಿ ವಹಿಸಿಕೊಳ್ಳುತ್ತದೆ. ಇನ್ನು ಮಿಕ್ಕ ವಿಚಾರಗಳನ್ನು, ವಿವರಗಳನ್ನು ಸರ್ಕಾರ ಕಂಪೆನಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸುತ್ತದೆ ಎಂದಷ್ಟೇ ಇದೆ. ಕಂಪೆನಿಗಳು ಈ ಕೂಡಲೇ ಪ್ರಾಜೆಕ್ಟಿನ ಕಮರ್ಷಿಯಲ್ ಮತ್ತು ಫೀಸಿಬಿಲಿಟಿ ಸರ್ವೇಯನ್ನು ನಡೆಸಿ, ಪ್ರಾಜೆಕ್ಟಿನ ಪ್ರಿಲಿಮಿನರಿ ಟೆಕ್ನಿಕಲ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದಿದೆ. ಮಿಕ್ಕ ಯಾವುದೇ ವಿವರಗಳಿಲ್ಲ. ಈ ಒಪ್ಪಂದವಿರುವುದೇ ಎರಡು ಪುಟ! ಈ ಒಪ್ಪಂದದಲ್ಲಿ ಸಬ್ ಇಂಜಿನಿಯರಿಂಗ್ ಎನ್ನುವ ಕಂಪೆನಿಯ ಪರವಾಗಿ ಅಶೋಕ ಖೇಣಿ ಸಹಿ ಹಾಕಿದ್ದಾರೆ. ಗಮನಿಸಿ ಈ ಒಪ್ಪಂದದಲ್ಲಿ ನೈಸ್ ಎನ್ನುವ ಪದವೇ ಇಲ್ಲ. ಏಕೆಂದರೆ ಆಗಿನ್ನೂ ಆ ಕಂಪೆನಿಯ ಜನನವೇ ಆಗಿರಲಿಲ್ಲ!

ಇಲ್ಲೇ ಒಂದು ಸೂಕ್ಷ್ಮವೂ ಇದೆ. ಈ ಪ್ರಾಜೆಕ್ಟ್ನ ಮುಂದುವರಿಕೆಗಾಗಿ ಅನೇಕ ಕಾನೂನು ತೊಡಕುಗಳಿದ್ದವು. ಅರಸು ಕಾಲದಲ್ಲಿ ಜಾರಿಗೊಂಡಿದ್ದ ಭೂ ಸುಧಾರಣಾ ಕಾಯ್ದೆಗೆ ಕಠಿಣ ತಿದ್ದುಪಡಿ ತರಲಾಗಿತ್ತಲ್ಲದೆ ಅದನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಿ, ನ್ಯಾಯಾಲಯದಲ್ಲೂ ಪ್ರಶ್ನಿಸದ ಹಾಗೆ ಮಾಡಲಾಗಿತ್ತು. ಹೀಗಾಗಿ ಕೃಷಿಯೇತರ ಚಟುವಟಿಕೆಗಳಿಗೆ ಒಂದು ಗುಂಟೆ ಕೃಷಿ ಭೂಮಿಯನ್ನೂ ನೀಡುವ ಹಾಗಿರಲಿಲ್ಲ. ಇದಲ್ಲದೆ ಬೆಂಗಳೂರಿನ ಸುತ್ತ ಮುತ್ತ ಹಸಿರು ವಲಯವನ್ನು ನಿಗದಿಗೊಳಿಸಲಾಗಿತ್ತಾದ್ದರಿಂದ ಅಲ್ಲಿ ಈ ಪ್ರಾಜೆಕ್ಟ್ ನಡೆಯುವುದು ಕಷ್ಟ ಸಾಧ್ಯವಾಗಿತ್ತು. ಖಾಸಗಿ ಟೋಲ್ ರಸ್ತೆಗೆ ಕಾನೂನಿನಲ್ಲಿ ಅವಕಾಶವೇ ಇರಲಿಲ್ಲ! ಇದಲ್ಲದೆ ಕೆಐಎಡಿಬಿ ಮತ್ತು ಬಿಎಂಆರ್ರ್ಡಿಎ ಕಾನೂನುಗಳಿಗೂ ಕೂಡ ತಿದ್ದುಪಡಿ ತರಬೇಕಿತ್ತು. ಗೌಡರು ಈ ಪ್ರಾಜೆಕ್ಟ್ ಗಾಗಿ ಇದೆಲ್ಲವನ್ನೂ ಒಪ್ಪಿಕೊಂಡರು. ರೈತ ನಾಯಕ ದೇವೇಗೌಡರು ಈ ಪ್ರಾಜೆಕ್ಟ್ಗಾಗಿ ರೈತರ ಹಿತ ಕಾಯುತ್ತಿದ್ದ ಭೂ ಸುಧಾರಣಾ ಕಾಯ್ದೆಯನ್ನು ಸಡಿಲಗೊಳಿಸಿದರು. ಇಂದಿನ ಎಲ್ಲಾ ಕೃಷಿ ಭೂಮಿ ಒತ್ತುವರಿಗಲಿಗೆ ಇದೇ ಲೈಸೆನ್ಸ್! ಬೆಂಗಳೂರಿನ ಸುತ್ತ ಮುತ್ತ ಹಸಿರು ವಲಯವನ್ನು 10 ವರ್ಷಗಳಿಗೊಮ್ಮೆ ನಿಗದಿಗೊಳಿಸಬೇಕಾಗಿ ಮಾಡಿದರು. ಹೊಸ ಕಾನೂನಿ ಮೂಲಕ ಖಾಸಗೀ ಟೋಲ್ ರಸ್ತೆಗೆ ಅವಕಾಶ ಮಾಡಿಕೊಟ್ಟರು. ಕೆಐಎಡಿಬಿ ಮತ್ತು ಬಿಎಂಆರ್ಡಿಎ ಕಾನೂನುಗಲನ್ನು ತಿದ್ದಿ ತೀಡಿಬಿಟ್ಟರು! ಹೀಗೆ ಖೇಣಿಗೆ ಗೌಡರೇ ಕೆಂಪು ಹಾಸು ಹಾಸಿ ಸ್ವಾಗತಿಸಿದ್ದರು. ಆತನಿಗೆ ಬೇಕಾದಂತೆ ನಮ್ಮ ಕಾನೂನುಗಳನ್ನು ಗೌಡರೂ ಸೇರಿದಂತೆ ಮುಂದಿನ ಎಲ್ಲ ಸರ್ಕಾರಗಳೂ ತಿದ್ದಿ ತೀಡಿಬಿಟ್ಟು, ಅಗ್ರೀಮೆಂಟಿಗೆ ಸಹಿ ಹಾಕಿಕೊಟ್ಟು, ನ್ಯಾಯಾಲಯದಲ್ಲಿ ನಾವು ಕೇಸು ಗೆಲ್ಲಲಿಕ್ಕಾಗುವುದಿಲ್ಲವೋ ಅಂತ ಬೊಂಬಡಾ ಬಜಾಯಿಸಿದರೇನು ಪ್ರಯೋಜನ? ಖೇಣಿ ಸದ್ಯ 400 ಕೇಸುಗಳನ್ನು ಎದುರಿಸಿದ್ದಾರೆ, 400 ಕೇಸುಗಳನ್ನು ಗೆದ್ದಿದ್ದಾರೆ! ಯಾಕೆ ಗೆಲ್ಲೋದಿಲ್ಲಾ ಹೇಳಿ ಹೀಗೆ ಹರಿವಾಣದಲ್ಲಿಟ್ಟುಕೊಟ್ಟರೆ ?

21-4-1995ರಂದು ಮುಖ್ಯಮಂತ್ರಿ ದೇವೇಗೌಡರ ನೇತೃತ್ವದಲ್ಲಿ ಸರ್ಕಾರದ ಒಂದು ಸಭೆ ನಡೆಯುತ್ತದೆ. ಅದರಲ್ಲಿ ಈ ಹೆದ್ದಾರಿ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕಾಗಿಯೂ ಅದಕ್ಕಾಗಿ ಒಂದು ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಒಂದು ಹೈ ಲೆವೆಲ್ ಕಮಿಟಿಯನ್ನು ರಚಿಸಲು ತೀರ್ಮಾನಿಸಿ , ಅಂತೆಯೇ ರಚಿಸಲಾಯಿತು. ಲೋಕೋಪಯೋಗಿ ಸಚಿವರ ನೇತೃತ್ವದ ಈ ಕಮಿಟಿಯಲ್ಲಿ ಲೋಕೋಪಯೋಗಿ, ನಗರಾಭಿವೃದ್ಧಿ, ಇಂಡಸ್ಟ್ರೀಸ್ ಸಚಿವಾಲಯಗಳ ಕಾರ್ಯದರ್ಶಿಗಳು, ಕೆಎಸ್ಐಐಡಿಸಿಯ ಅಧ್ಯಕ್ಷರು, ಮತ್ತು ನೀರಾವರಿಯ ಟೆಕ್ನಿಕಲ್ ಅಡ್ವೈಸರಿ ಕಮಿಟಿಯ ಅಧ್ಯಕ್ಷರಾದ ಶ್ರೀ ಕೆ.ಸಿ.ರೆಡ್ಡಿಯವರನ್ನೊಳಗೊಂಡಂತೆ ಈ ಕಮಿಟಿಯನ್ನು ರಚಿಸಲಾಯಿತು.
(ಮುಂದುವರಿಯುವುದು)

ಭಾರತದ ಹಾಕಿ - ತಿಪ್ಪೆಗೆ ಹಾಕಿ!!!!!?

ಈ ಬಾರಿಯ ಹಾಕಿ ವಿಶ್ವಕಪ್ ದೆಹಲಿಯಲ್ಲಿ ನಡೆಯುತ್ತೆ ಅಂದಾಗಲೇ ಏನೋ ರೋಮಾಂಚನ. ಭಾರತದ ಹಾಕಿ ಚರಿತ್ರೆಯ ಸುವರ್ಣ ಘಟ್ಟಗಳು ನೆನಪಿಗೆ ಬಂದು ಏನೋ ಒಂದು ರೀತಿಯ ಖುಷಿ, ಬೆಟದಷ್ಟು ನಿರೀಕ್ಷೆ. ಆದರೆ ಎಲ್ಲವೂ ಮಣ್ಣುಪಾಲಾಗಿದೆ. ಕಳೆದ 30 ವರ್ಷಗಳಂತೆ ಭಾರತ ಈ ಬಾರಿಯ ವಿಶ್ವಕಪ್ನಲ್ಲಿ ತಾನು ಟಾಪ್ 8ನಲ್ಲಿ ಉಳಿಯುತ್ತೇನಾ ಇಲ್ಲ, ಅದಕ್ಕೂ ಮೇಲ್ಪಟ್ಟ ರಾನ್ಕಿಂಗಾ ನಮ್ಮದು? ಅಂತ ಕಾದು ಕುಳಿತಿರುವ ಕರುಣಾಜನಕ ಸ್ಥಿತಿ. ಈ ಬಾರಿ ದೆಹಲಿಯಲ್ಲಿ ವಿಶ್ವಕಪ್ ನಡೆಯುವುದರಿಂದ ದೇಶದಲ್ಲಿ ಹಾಕಿಗೆ ಹೆಚ್ಚು ಪ್ರಚಾರ, ಪ್ರೋತ್ಸಾಹ ಸಿಗಲಿದೆ. ನಮ್ಮವರು ಹೋಂಗ್ರೌಂಡ್ನಲ್ಲಿ ಆಡುತ್ತಾರಾದ್ದರಿಂದ ಎಲ್ಲೋ ಮನಸ್ಸಿನ ಮೂಲೆಯಲ್ಲೊಂದು ಗೆಲುವಿನ ಆಶಾದೀಪ ಸಣ್ಣಗೆ ಬೆಳಗುತ್ತಿತ್ತು. ಭಾರತ ಪಾಕಿಸ್ತಾನವನ್ನು 4-1 ಗೋಲ್ಗಳ ಅಂತರದಿಂದ ಬಗ್ಗು ಬಡಿದಾಗ ಈ ಸಣ್ಣ ಆಶಾದೀಪ ಜ್ಯೋತಿಯಾಗಿ ಬೆಳಗಿತು. ಓಹ್!..ಇಂಡಿಯನ್ ಹಾಕಿ ಈಸ್ ಬ್ಯಾಕ್ ಇನ್ ಫಾರ್ಮ್ ಅಂತ ಉದ್ಗರಿಸಿದವರೆಷ್ಟೋ? ಆದರೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ನಾವು ಕಂಡದ್ದು ಭಾರತ ಹಾಕಿ ತಂಡದ ಎಡೆಬಿಡದ ಅವನತಿ. ಇಂಗ್ಲೆಂಡ್, ದಕ್ಷಿಣಾಫ್ರಿಕಾ...ವಿರುದ್ಧ ಆಡಿದ ನಂತರದ ಎಲ್ಲ ಪಂದ್ಯಗಳನ್ನೂ ಭಾರತ ಯಾವುದೇ ಪ್ರಬಲ ಪ್ರತಿರೋಧ ಒಡ್ಡದೆ ಹೀನಾಯವಾಗಿ ಸೋತಿತು. ಎಲ್ಲರ ನಿರೀಕ್ಷೆಗಳು ಮಣ್ಣುಪಾಲಾಯಿತು.

ಭಾರತ ಹಾಕಿಯ ಚರಿತ್ರೆ ಎಂತಹುದಿದೆ. ಅದು ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥದ್ದು! ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ, ಹಿಂದೊಮ್ಮೆ ಭಾರತ ಹಾಕಿಯ ತವರುಮನೆಯಂತಿತ್ತು. ಇತರೆ ಎಲ್ಲ ದೇಶಗಳಿಗೂ ಇದು ಮಾದರಿಯಾಗಿತ್ತು. ಆರಂಭದ ದಿನಗಳಲ್ಲಿ ವಿಶ್ವ ಹಾಕಿಯಲ್ಲಿ ಭಾರತದ್ದು ಆಲ್ಮೋಸ್ಟ್ ಮನೋಪಲಿ - ಏಕಚಕ್ರಾಧಿಪತ್ಯ! 1928ರಿಂದ ಆರಂಭವಾಗಿ ಭಾರತ ಸತತ 6 ಒಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಚಿನ್ನದ ಪದಕ ಪಡೆದಿತ್ತು. 1928, 1932, 1936, 1948, 1952, 1956! ಆದರೆ 1960ರ ರೋಮ್ ಒಲಂಪಿಕ್ಸ್ನಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಭಾರತದ ಮನೋಪಲಿ ಮೊದಲ ಬಾರಿಗೆ ಸಡಿಲವಾಗಿತ್ತು. ಮತ್ತೆ 1964ರಲ್ಲಿ ಚಿನ್ನ, ನಂತರದ ಎರಡು ಒಲಂಪಿಕ್ಸ್ನಲ್ಲಿ ಕಂಚು, ಮತ್ತೆ 1980ರಲ್ಲಿ ಚಿನ್ನ! ಅಷ್ಟೆ ಅದೇ ಕೊನೆ, ನಂತರ ಭಾರತ ಹಾಕಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದೇ ಒಂದು ಪದಕವೂ ಬಂದಿಲ್ಲ. ಅತ್ಯಂತ ಅವಮಾನಕರ ಸಂಗತಿಯೆಂದರೆ, ಹೀಗೆ ಒಂದು ಕಾಲಕ್ಕೆ ವಿಶ್ವ ಹಾಕಿಯನ್ನು ಮೇಲಾಗಿ ಒಲಂಪಿಕ್ಸ್ ಅನ್ನು ಒಂದೇ ಕೈಯಲ್ಲಿ ಆಳಿದ್ದ ಭಾರತ 2008ರ ಬೀಜಿಂಗ್ ಒಲಂಪಿಕ್ಸ್ನಲ್ಲಿ ಆಡಲು ಅರ್ಹತೆಯನ್ನೇ ಪಡೆಯಲಿಲ್ಲ! ಅರ್ಹತಾ ಸುತ್ತಿನಲ್ಲೇ ಭಾರತ ಸೋತು ಮನೆಗೆ ಮರಳಿತು! ಏತನ್ಮಧ್ಯೆ ಹಾಕಿ ವಿಶ್ವಕಪ್ ಅನ್ನು ಭಾರತ ಒಮ್ಮೆ ಮಾತ್ರ ಅದೂ 1975ರಲ್ಲಿ ತನ್ನದಾಗಿಸಿಕೊಂಡಿತ್ತು. ಮತ್ತೆ ಈಗ ಹಾಕಿ ವಿಶ್ವಕಪ್ನ ಆತಿಥ್ಯ ನಮಗೆ ಬಂದಿದ್ದರಿಂದ ಸಣ್ಣ ನಿರೀಕ್ಷೆಯೊಂದು ಜನ್ಮ ತಾಳಿತ್ತು. ಆದರೆ ಅದೆಲ್ಲವೂ ನದಿಯಲ್ಲಿ ಹುಣಿಸೆಹಣ್ಣು ತೊಳೆದಂತಾಯಿತು!

ಒಂದರ್ಥದಲ್ಲಿ ಇದೂ ಕೂಡ ನಿರೀಕ್ಷಿತವೇ! ಹೌದು ಭಾರತ ಹಾಕಿಯ ಅಧಃಪತನ ಇಂದು ನಿನ್ನೆಯದಲ್ಲ, ನಿನ್ನೆ ಮೊನ್ನೆಯ ತಪ್ಪುಗಳಿಂದಲ್ಲ, ಈ ಅಧಃಪತನಕ್ಕೇ ಸುಮಾರು ದಶಕಗಳ ಇತಿಹಾಸವಿದೆ. ಹಾಕಿ ಭಾರತದ ರಾಷ್ಟ್ರ ಕ್ರೀಡೆ. ಇಂದು ಹಲವರಿಗೆ ಇದು ತಿಳಿದಿರುವಂತಿಲ್ಲ. ಎಲ್ಲರೂ ಕ್ರಿಕೆಟ್ಟೇ ನಮ್ಮ ರಾಷ್ಟ್ರ ಕ್ರೀಡೆ ಎಂದು ಭಾವಿಸಿರುವಂತಿದೆ. ಅದೇ ಹಾಕಿಯ ಸಮಸ್ಯೆ ಕೂಡ. ಮೊದಲಿಗೆ ನಮ್ಮಲ್ಲಿ ಕ್ರಿಕೆಟ್ ಅಷ್ಟು ಗ್ಲಾಮರಸ್ ಆಗಿಯೂ ಇರಲಿಲ್ಲ, ಅದಕ್ಕೆ ಇಷ್ಟು ಮನ್ನಣೆಯೂ ಇರಲಿಲ್ಲ. ಆಗ ಹಾಕಿಯದ್ದೇ ಮೇಲುಗೈ. ಆದರೆ ಅದೂ ಸಹ ಒಂದು ಕಾಲಘಟ್ಟ ಅಷ್ಟೆ. 70ರ ದಶಕದ ಕೊನೆಯ ದಿನಗಳು ಮತ್ತು 80ರ ದಶಕದಲ್ಲಿ ವಿಶ್ವದಾದ್ಯಂತ ಕ್ರಿಕೆಟ್ ಮನೆಮಾತಾಯಿತು. ಅಷ್ಟರಲ್ಲಿ ಭಾರತದ ಹಾಕಿಯ ಸುವರ್ಣ ಅಧ್ಯಾಯವೂ ಮುಗಿದಿತ್ತು. 1980 ಅದು ಭಾರತ ಹಾಕಿಯ ಕಡೆಯ ದಿಗ್ವಿಜಯ. ಜನಕ್ಕೆ ಥ್ರಿಲ್ ಕೊಡಬಹುದಾದ ಒಂದು ಆಟ ಬೇಕಿತ್ತು. ಅದೇ ಸಂಧಿಗ್ಧ ಸಮಯದಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಅನ್ನು ತನ್ನ ಮುಡಿಗೇರಸಿಕೊಂಡಿತು. ಭಾರತದಲ್ಲಿ ಕ್ರಿಕೆಟ್ ಇನ್ನಿಲ್ಲದಂತೆ ಮನೆಮಾತಾಯಿತು. ಹಾಕಿ ತೆರೆ ಮರೆಗೆ ಸರಿಯಿತು. ಇಂದಿಗೂ ಅದು ತೆರೆಯ ಮರೆಯಲ್ಲೇ ಇದೆ. ನಮ್ಮ ಮೀಡಿಯಾಗಳು ಕೂಡ ಕ್ರಿಕೆಟ್ನ ಹುಚ್ಚು ಅಮಲಿನಲ್ಲಿ ಮಿಂದೇಳುತ್ತಿವೆಯೇ ಹೊರತು ಹಾಕಿಯೆಡೆಗೆ ಒಮದು ಪರೀಕ್ಷಣಾರ್ಥ ಚಿಕಿತ್ಸಕ ದೃಷ್ಟಿಯನ್ನು ಬೀರಲೇ ಇಲ್ಲ. ಭಾರತದ ಹಾಕಿಯನ್ನು ಒಂದು ಪಾಸಿಟಿವ್ ಕ್ರಿಟಿಸಿಸಂನಿಂದ ಕೂಡ ವಂಚಿಸಲಾಯಿತು.

ಮೊದಲೇ ಬಳಲುತ್ತಿದ್ದ ಭಾರತೀಯ ಹಾಕಿಗೆ ಗೆದ್ದಲು ಹಿಡಿಸಿದ್ದು, ನಮ್ಮ ಕ್ರೀಡಾ ವ್ಯವಸ್ಥೆ. ಹೌದು ಇದರಲ್ಲಿ ಅನುಮಾನವೇ ಇಲ್ಲ. ಹಾಕಿ ಫೆಡರೇಶನ್ ಆಫ್ ಇಂಡಿಯಾಗೆ ಹಲವು ದಶಕಗಳಿಂದ ಸೂಪರ್ ಕಾಪ್ ಎನಿಸಿದ್ದ ಕೆಪಿಎಸ್ ಗಿಲ್ ಅಧ್ಯಕ್ಷ. ಯಾವುದೇ ರೀತಿಯಲ್ಲಿ ಎಣಿಸಿ ನೋಡಿದರೂ ಹಾಕಿ ಆಟಕ್ಕೆ ಸಂಬಂಧವೇ ಇಲ್ಲದ ಈ ಮನುಷ್ಯನನ್ನು ಈತನ ಎಲ್ಲಾ ತುಘಲಕ್ ದರ್ಬಾರುಗಳೊಂದಿಗೆ ಬಾರತೀಯ ಹಾಕಿ ಇನ್ನೂ ಸಾಕುತ್ತಿದೆ. ಈತನಿಗೆ ಇದೊಂದು ಪ್ರೆಸ್ಟೀಜ್ ಇಲ್ಲವೇ ವೈಯಕ್ತಿಕ ತೆವಲು ಅಷ್ಟೆ. ಆದರೆ ಇದರಲ್ಲಿ ಬಲಿಯಾದದ್ದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ! ಯಾವ ಮಟ್ಟಿಗೆ ಭಾರತೀಯ ಹಾಕಿಗೆ ಗೆದ್ದಲು ಹಿಡಿಸಲಾಗಿದೆಯೆಂದರೆ, ಮೊನ್ನೆ ದೆಹಲಿಯ ಹಾಕಿ ವಿಶ್ವಕಪ್ಗೂ ಮುನ್ನಾ ದಿನಗಳಲ್ಲಿ ಭಾರತೀಯ ಹಾಕಿ ಟೀಂನ ಎಲ್ಲಾ ಆಟಗಾರರೂ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಆ ತರಬೇತಿ ಶಿಬಿರದಲ್ಲಿ ಆಟಗಾರರು ಬಂಡೆದ್ದರು. ತಮಗೆ ಮ್ಯಾಚ್ ಫೀಸ್ ಅನ್ನು ಕೂಡ ಕೊಡುತ್ತಿಲ್ಲ, ನಮ್ಮ ಬಾಕಿಗಳನ್ನು ಹಾಗೆ ಉಳಿಸಿ ಕೊಳ್ಳಲಾಗಿದೆ, ನಮಗೂ ಸಂಸಾರಗಳಿವೆ, ಅದೆಲ್ಲವನ್ನೂ ಬಿಟ್ಟು ಸೋಷಿಯಲ್ ಸರ್ವೀಸ್ಗಾಗಿ ನಾವಿಲ್ಲಿ ಅಡುತ್ತಿಲ್ಲ. ನಮ್ಮ ಮ್ಯಾಚ್ ಫೀಸ್ ಕೊಡುವವರೆಗೆ ನಾವು ಯಾವುದೇ ಪಂದ್ಯದಲ್ಲಿ ಆಡುವುದಿಲ್ಲ. ವಿಶ್ವಕಪ್ ಅನ್ನು ಕೂಡ ಬಹಿಷ್ಕರಿಸುತ್ತೇವೆ ಎಂದು ಭೀಷ್ಮಿಸಿ ಕೂತು ಬಿಟ್ಟರು! ಆಗಲೇ ಭಾರತ ಹಾಕಿಯ ಎಲ್ಲಾ ಹುಳುಕುಗಳೂ ಹೊರಜಗತ್ತಿಗೆ ಅರಿವಾಗಲಾರಂಭಿಸಿದ್ದು. ನಂತರ ನಡೆದದ್ದು ಆಟಗಾರರು ಮತ್ತು ಹಾಕಿ ಫೆಡರೇಷನ್ ನಡುವಿನ ಹದಿನೈದು ದಿನಗಳ ಜಟಾಪಟಿ. ನ್ಯಾಯವಾಗಿ ಅವರಿಗೆ ಬರಬೇಕಾದ್ದನ್ನು ಕೇಳಿದ್ದಕ್ಕೆ, ಆಟಗಾರರನ್ನು ಇವರು ಬೆದರಿಸಿದ್ದೇನು? ಅದಾಗದಿದ್ದಾಗ ಮುದ್ದಿಸಲು ಪ್ರಯತ್ನಿಸಿದ್ದೇನು? ಕಡೆಗೆ ಇಂಡಿಯನ್ ಒಲಂಪಿಕ್ ಫೆಡೆರೆಶನ್ನ ಸುರೇಶ ಕಲ್ಮಾಡಿ ಇಳಿದು ಬಂದು ರಾಜಿ ಮಾಡಿಸಿ, ಆಟಗಾರರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣ ಸಂದಾಯವಾಗುವಂತೆ ನೋಡಿಕೊಂಡರು. ಇಲ್ಲದಿರೆ ದೆಹಲಿಯಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ಗೆ ಬಾರತದ ಹಾಕಿ ತಂಡ ಬಹಿಷ್ಕಾರ ಹಾಕುತ್ತಿತ್ತು!

ಯಾಕೆ ಹೀಗೆ? ಹಾಕಿ ಫೆಡರೇಶನ್ ಆಫ್ ಇಂಡಿಯಾವನ್ನು ಕೇಳಿ ನೋಡಿ, ಅವರು ಬರಿಗೈಯನ್ನು ತೊರಿಸುತ್ತಾರೆ. ಇಂದು ಹಾಕಿಯ ಬಗ್ಗೆ ನಮ್ಮ ಜನರಲ್ಲಿ ಹೆಚ್ಚು ಆಸಕ್ತಿಯಿಲ್ಲ, ಎಲ್ಲರೂ ಕ್ರಿಕೆಟ್ನ ಅಂಗಳದಲ್ಲಿ ಮುಳುಗಿ ಹೋಗಿದ್ದಾರೆ. ಆದ್ದರಿಂದ ರೆವಿನ್ಯೂ ಜೆನರೇಷನ್ ಎನ್ನುವುದು ಕನಸಿನ ಮಾತು. ಮತ್ತೊಂದೆಡೆ ಸರ್ಕಾರ ಕೂಡ ಇದೇ ಬುದ್ದಿಗೇಡಿ ಕೆಲಸವನ್ನು ಮಾಡುತ್ತಿದೆ. ಅದೂ ಕೂಡ ಕ್ರಿಕೆಟ್ನಲ್ಲೇ ಮುಳುಗಿಹೋಗಿದೆ. ಇನ್ನು ಮೀಡಿಯಾಗಳ ವಿಷಯ ಹೇಳುವುದೇ ಬೇಡ. ಹಾಕಿಯಲ್ಲಿ ಭಾರತ ಚಿನ್ನದ ಪದಕ ತಮದರೂ, ಅಸಲಿಗೆ ಅದು ಒಲಂಪಿಕ್ಸ್ಗೆ ಅದು ಅರ್ಹತೆಯೇ ಪಡೆಯದಿದ್ದರೂ ಅದರದು ಒಂದೇ ಪ್ರತಿಕ್ರಿಯೆ - ಕಡೆಯ ಪೇಜಿನಲ್ಲೊಂದು ಬಾಕ್ಸ್ ಐಟಂ! ಇದೇ ಭಾರತದ ಹಾಕಿಯನ್ನು ಕೊಂದಿರುವುದು.

ಇನ್ನು ಈ ವಿಶ್ವಕಪ್ನ ನಂತರ ಶುರುವಾಗಲಿದೆ ನೋಡಿ ಫೈರಿಂಗ್! ಆಗಲೇ ಭಾರತ ಹಾಕಿ ತಂಡದ ಕೋಚ್ ಬಾಸ್ರಾ ತನ್ನ ಬ್ಯಾಗುಗಳು ಯಾವಾಗಲೂ ಪ್ಯಾಕ್ ಆಗೇ ಇರುತ್ತವೆ ಎನ್ನುವ ಮೂಲಕ ತಾನು ಮಾನಸಿಕವಾಗಿ ಫ್ಯರಿಂಗ್ ಆರ್ಡರ್ಸ್ಗೆ ಸಿದ್ಧ ಎನ್ನುವುದನ್ನು ತಿಳಿಸಿದ್ದಾನೆ. ಆದರೆ ಸಮಸ್ಯೆ ಇದಲ್ಲ. ವಿಶ್ವ ಹಾಕಿ ಮುಂದೆ ಮುಂದೆ ಹೋಗುತ್ತಿದ್ದರೂ ಭಾರತದ ಹಾಕಿ ಮಾತ್ರ ಅದಕ್ಕೆ ಒಗ್ಗಿಕೊಳ್ಳದೆ ಇನ್ನೂ ತನ್ನ ಪಾಸ್ಟ್ ಗ್ಲೋರಿಯಲ್ಲೇ ಬದುಕುತ್ತಿದೆ. ಇನ್ನೂ ಭಾರತದ ಹಾಕಿ ಸಿಂಥಟಿಕ್ ಪಿಚ್ ಅನ್ನು ಒಪ್ಪಿಲ್ಲವೆಂದರೆ ಲೆಕ್ಕ ಹಾಕಿ. ಹಾಕಿಯಂಗಳಲದಲಿ ಹುಲ್ಲುಗಾವಲು ಮಾಯವಾಗಿ 30 ವರ್ಷಗಳಾಗುತ್ತಾ ಬಂದವು!

ಸಮಸ್ಯೆಯೆಂದರೆ ಪ್ರತಿ ಬಾರಿ ನಾವು ಆಮೂಲಾಗ್ರ ಬದಲಾವಣೆ ಅಂತ ಮಾತು ಶುರು ಮಾಡಿದರೂ, ಅದೇ ಗೆದ್ದಲು ಹತ್ತಿದ ವ್ಯವಸ್ಥೆ ಕೋಚ್ ಮತ್ತು ಆಟಗಾರರ ಮೇಲೆ ಕ್ರಮಕ್ಕೆ ಮುಂದಾಗುತ್ತದೆ. ಸಮಸ್ಯೆ ಕೋಚೂ ಅಲ್ಲ ಅಟಗಾರರೂ ಅಲ್ಲ, ಸಮಸ್ಯೆ ಅದೇ ವ್ಯವಸ್ಥೆ! ಯಾವುದೇ ಬದಲಾವಣೆ ಟಾಪ್ ಟು ಬಾಟಂ ಆಗಬೇಕು, ಅಭಿವೃದ್ಧಿ ಗ್ರಾಸ್ ರೂಟ್ ಲೆವಲ್ನಲ್ಲಿ ಆಗಬೇಕು. ನಮ್ಮಲ್ಲಿ ಬದಲಾಗಬೇಕಿರುವುದು ಈ ಗೆದ್ದುಲು ಹಿಡಿದ ವ್ಯವಸ್ಥೆ! ಅದಾದರೆ ಮಾತ್ರ ಭಾರತದ ಹಾಕಿಗೆ ಭವಿಷ್ಯವುಂಟು, ಇಲ್ಲದಿರೆ.......?!!

ನೈಸ್ ಪುರಾಣ - 1

ದೇವೇಗೌಡರು ಮತ್ತೆ ಪಂಚೆ ಎತ್ತಿ ಕಟ್ಟಿ ಬೀದಿಗಿಳಿದಿದ್ದಾರೆ. ಯಡ್ಯೂರಪ್ಪನವರ ಸರ್ಕಾರವನ್ನು ಉರುಳಿಸಿಯೇ ಸಿದ್ಧ ಎಂದು ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡಿರುವ ಅಖಾಡ ಖೇಣಿಯ ನೈಸ್ ಹಗರಣ! ಪ್ರತಿ ಬಾರಿ ಗೌಡರು ಹೀಗೆ ಪಂಚೆ ಎತ್ತಿ ಕಟ್ಟಿದಾಗಲೂ ಆಜುಬಾಜಿನಲ್ಲೊಂದು ಚುನಾವಣೆಯಿರುತ್ತದೆ, ಅದರಲ್ಲಿ ಜೆಡಿಎಸ್ ಗೆಲ್ಲುತ್ತದೆ, ಹಾಗಾಗಿ ಗೌಡರು ಸಾಂಧರ್ಭಿಕ ಸಮರ ವೀರರು ಎನ್ನುತ್ತಾರೆ ನಮ್ಮ ಮೈಸೂರಿನ ಸಂಸದ ಎಚ್. ವಿಶ್ವನಾಥರು. ಆದರೆ ಈ ಬಾರಿ ಗೌಡರು ಸುಮ್ಮನೆ ಚುನಾವಣೆಗೆ ಪಂಚೆ ಎತ್ತಿ ಕಟ್ಟಿದ ಹಾಗಿಲ್ಲ. ಸುಮಾರು ವರ್ಷಗಳಿಂದ ಅವರು ಎದುರು ಹಾಕಿಕೊಂಡು ಬಂದಿರುವ ನೈಸ್ ಖೇಣಿಯ ಎಲ್ಲ ಅಕ್ರಮಗಳನ್ನು ಜನತಾ ನ್ಯಾಯಾಲಯದ ಮುಂದಿರಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಹಾಕ್ಯಾಟದ ಭರದಲ್ಲೇ ತಾನೊಬ್ಬ ಮಾಜಿ ಪ್ರಧಾನಿ, ನಾಡಿನ ಹಿರಿಯ ರಾಜಕಾರಣಿ ಎಂಬುದನ್ನೂ ಮರೆತು ಯಡ್ಯೂರಪ್ಪನವರನ್ನು ಆಡಬಾರದ ಮಾತುಗಳನ್ನೆಲ್ಲಾ ಆಡಿ, ರಾಡಿ ಮಾಡಿಕೊಂಡು ಬಿಟ್ಟರು. ನಂತರ ಯಡ್ಯೂರಪ್ಪನವರೊಡನೆ ಸಂವಾದವೂ ಆಯಿತು, ಹೋರಾಟವೂ ಮುಂದುವರೆದಿದೆ.

ನೈಸ್ ಎಂಬುದು ಅಂದಾಜು 30 ಸಾವಿರ ಕೋಟಿಗಳ ಸ್ಕ್ಯಾಮೆಂದೂ, ಇದು ಸತ್ಯಂ ಹಗರಣಕ್ಕಿಂತಲೂ ದೊಡ್ಡ ಹಗರಣವೆಂದೂ, ಅಶೋಕ್ ಖೇಣಿ ದಾವೂದ್ಗಿಂತಲೂ ದೊಡ್ಡ ಡಾಕು ಎಂದೂ ದೇವೇಗೌಡರು ಹೇಳುತ್ತಿದ್ದಾರೆ. ಯಡ್ಯೂರಪ್ಪನವರನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ನೈಸ್ ಹೋರಾಟವನ್ನು ದೇವೇಗೌಡರು ರಾಜ್ಯಾದ್ಯಂತ ವಿಸ್ತರಿಸಿ ಎಲ್ಲ ಭೂ ಒತ್ತುವರಿಗಳ ವಿರುದ್ಧ ರೈತರಿಗೆ ದನಿಯಾಗುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕಂತೂ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಇಶ್ಯೂ ಎಂದರೆ ಅದು ಈ ಬಿಎಂಐಸಿಪಿ ವಿವಾದವೇ. ಬೆಂಗಳೂರಿನ ಪುರಭವನದಲ್ಲಿ ರಾಜಕಾರಣಿಗಳು ಕೂಡೋ ದಿನಾನೂ ಹತ್ತಿರಾದಂತಿದೆ. ಬರುವ ದಿನಗಳಲ್ಲಿ ನೈಸ್ ವಿವಾದವೂ ಮತ್ತಷ್ಟು ಗರಿಗೆದರುವುದು ಗ್ಯಾರೆಂಟಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರಿಸಲ್ಪಟ್ಟಿರುವ ನಗರದ ಹೊರವಲಯದ ಪ್ರದೇಶಗಳಲ್ಲಿ ಇದೇ ಬರ್ನಿಂಗ್ ಇಶ್ಯೂ.

ನೀವು ಸಾಮಾನ್ಯರನ್ನ ಯಾರನ್ನೇ ನೈಸ್ ಬಗ್ಗೆ ಕೇಳಿ ನೋಡಿ, ಇಲ್ಲ ಅದು ದೇವೇಗೌಡರು ಅಡ್ಡ ಹಾಕಿ ಕೂತಿರೋ ಬೆಂಗಳುರಿನ ಅಭಿವೃದ್ಧಿಯ ಹೆಬ್ಬಾಗಿಲಿನಂತಲೋ, ಇಲ್ಲ ಯಡ್ಯೂರಪ್ಪನವರ ಲೇಟೆಸ್ಟ್ ಹಗರಣವೆಂತಲೋ, ಸ್ವಲ್ಪ ಬಲ್ಲವರಾದರೆ ಹೈಟೆಕ್ ಕೃಷ್ಣರ ಹೈಟೆಕ್ ದರೋಡೆಯೆಂತಲೋ ಇಲ್ಲ ರೈತರ ಭೂಮಿಗೆ ಕೈ ಹಾಕಿ ಕೂತಿರುವ ರಿಯಲ್ ಎಸ್ಟೇಟ್ ಹೆಬ್ಬಾವು ಅಂತಲೋ ಇನ್ನೂ ಏನೇನೋ....ಅಂತ ವಿವರಿಸುತ್ತಾರೆ. ನೈಸ್ ವಾದ-ವಿವಾದಗಳು ಎಷ್ಟು ಜಟಿಲ ಕಾನನವಾಗಿದೆಯೆಂದರೆ ನಮ್ಮಲ್ಲಿ ಬಹುತೇಕರಿಗೆ ಅದರ ಪೂರ್ಣ ವಿವರಗಳು ಗೊತ್ತೇ ಇಲ್ಲ. ಅದಕ್ಕೆ ಕಾರಣಗಳು ಇಲ್ಲದಿಲ್ಲ. ಒಂದು - ಹಗರಣದ ಸಂಕೀರ್ಣತೆ ಮತ್ತು ಕಾಲದಿಂದ ಕಾಲಕ್ಕೆ ಊಸರವಳ್ಳಿಯಂತೆ ಅದು ಬಣ್ಣ ಬದಲಾಯಿಸುತ್ತಿರುವುದು, ಎರಡು - ಯೋಜನೆ ಪೂರಾ ರಾಜಕೀರಣಗೊಂಡು ಅದರ ಎಲ್ಲ ಇಂಟರ್ಪ್ರೆಟೇಷನ್ಗಳೂ ರಾಜಕೀಯದ ಸಮಯಸಾಧಕ ಲೆನ್ಸ್ನ ಮೂಲಕವೇ ನಡೆಯುತ್ತಿರುವುದು. ಜನ ಯಾರನ್ನೂ ನಂಬದಾಗಿದ್ದಾರೆ. ದೇವೇಗೌಡರ ಹೋರಾಟಕ್ಕೆ ರಾಜಕೀಯ ಸ್ವಾರ್ಥವನ್ನು ಆರೋಪಿಸುವ ಜನ, ಅದೇ ಕಾಲಕ್ಕೆ ಯಡ್ಯೂರಪ್ಪನವರ ಕ್ರಮಕ್ಕೆ 'ದುರದ್ದೇಶ'ಗಳನ್ನು ಆರೋಪಿಸುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ಚಚರ್ಿತವಾಗುತ್ತಿದ್ದರೂ ಈ ಇಶ್ಯೂನ ಆಳ ಅಗಲ ಇನ್ನೂ ಬಹುಜನರ ಅರಿವಿಗೆ ಬಂದಿಲ್ಲ. ಎಲ್ಲವೂ ಗೊಂದಲಪುರ.

ಹೌದು ಬಿಎಂಐಸಿಪಿ ಅಂದರೆ ಏನು? ಇದರ ಮೂಲ ಇರುವುದೆಲ್ಲಿ? ಇದು ಎಷ್ಟರ ಮಟ್ಟಿಗೆ ಬೆಂಗಳೂರಿನ ಅಭಿವೃದ್ಧಿಗೆ ಪೂರಕ ಮತ್ತು ಅನಿವಾರ್ಯ? ಇಡಿಯ ಯೋಜನೆ ಮೂಲದಿಂದಲೇ ಗೋಲಮಾಲಾ? ಹಾಗಾದರೆ ಇಷ್ಟು ವರ್ಷಗಳ ಕಾಲ ಬಂದ ಎಲ್ಲಾ ಸರ್ಕಾರಗಳೂ ಆತನೊಂದಿಗೆ ಕೈಜೋಡಿಸದ್ದವಾ? ಈಗಿನ ಸರ್ಕಾರ?....ಹತ್ತಾರು ಪ್ರಶ್ನೆಗಳು. ದೇವೇಗೌಡ ಮತ್ತು ಯಡ್ಯೂರಪ್ಪನವರ ಗುದ್ದಾಟವನ್ನೇ ತೆಗೆದುಕೊಳ್ಳಿ. ಇಲ್ಲೇ ವಿರೋಧಾಭಾಸಗಳಿವೆ. ಅಸಲಿಗೆ ಬಿಎಂಐಸಿ ಯೋಜನೆಯನ್ನು ಪ್ರಾರಂಭಿಸಿದವರೆ ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರು. ಅಂದಿನಿಂದಲೂ ಯಡ್ಯೂರಪ್ಪನವರು ವಿರೋಧ ಪಕ್ಷದ ಸಾಲಿನಲ್ಲಿ ಕೂತು ಈ ಯೋಜನೆಯ ವಿರುದ್ಧ ದೊಡ್ಡ ದನಿಯಲ್ಲಿ ಹೋರಾಟ ಮಾಡಿಕೊಂಡು ಬಂದವರು. ಇದನ್ನು 1997ರಲ್ಲೇ ಸುಮಾರು 10 ಸಾವಿರ ಕೋಟಿಗಳ ಸ್ಕ್ಯಾಮು ಅಂತ ಜರಿದವರು ಯಡ್ಯೂರಪ್ಪ! ಇಂದು ಅದೇ ದೇವೇಗೌಡರು ಯಡ್ಯೂರಪ್ಪನವರು ಖೇಣಿ ಪರ ಎಂದು ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ! ಆದರೆ ಗೌಡರ ಹೋರಾಟ ಸಮರ್ಥನೀಯವೆಂಬುದು ಈ ಇಶ್ಯೂವನ್ನು ಮತ್ತಷ್ಟು ಜಟಿಲವಾಗಿಸುತ್ತದೆ. ಗೌಡರ ನಂತರ ಬಂದ ಸರ್ಕಾರಗಳು ಮಾಡಿದ್ದೇನು? ಈ ವಿಷಯದಲ್ಲಿ ಯಡ್ಯೂರಪ್ಪನವರ ತಪ್ಪಾದರೂ ಏನು? ಉತ್ತರಗಳು ಅಷ್ಟು ಸರಳವಲ್ಲ.

ಈ ಯೋಜನೆಗೆ ಶ್ರೀಕಾರ ಹಚ್ಚಿದ ದೇವೇಗೌಡರ ಬಾಯಲ್ಲೇ ಆ ಸಂದರ್ಭವನ್ನು ಕೇಳುವುದಾದರೆ - "ಸಿಎಂ ಆಗೋದಿಕ್ಕೆ ಮೊದಲು ನಾನು ಪಿಡಬ್ಲೂಡಿ ಮಿನಿಸ್ಟ್ರಾಗಿದ್ದೆ. ಆಗಿನ್ನೂ ಬೆಂಗಳೂರು - ಮೈಸೂರು ಹೆದ್ದಾರಿ ಯೋಜನೆಯ ಚಿಂತನೆ ನಡೆದಿರಲಿಲ್ಲ. ಆಗೊಂದು ದಿನ ಬಿಡದಿ ಬಳಿ ಆಕಸಿಡೆಂಟ್ ಆಗಿ ಹನ್ನೆರಡು ಜನ ಶಾಲಾ ಮಕ್ಕಳು ಮೃತಪಟ್ಟರು. ಆ ಜಾಗಕ್ಕೆ ಕೆ.ಸಿ.ರೆಡ್ಡಿ ಅವರನ್ನು ಕರೆದುಕೊಂಡು ಹೋಗಿದ್ದೆ. ಅಂಕು ಡೊಂಕಾಗಿದ್ದ ರಸ್ತೆಯನ್ನು ನೇರ ಮಡಿ, ಎರಡು ಪಥಗಳಾಗಿ ಮೇಲ್ದಜರ್ೆಗೇರಿಸಲು ಚಿಂತನೆ ನಡೆಸಿದವಿ. ಆ ಕಾಲಕ್ಕೆ ವಾಹನ ದಟ್ಟಣೆ 12 ಸಾವಿರದಷ್ಟಿತ್ತು. 2020ನೇ ವರ್ಷಕ್ಕೆ ಅದು 50 ಸಾವಿರದಷ್ಟಾಗಬಹುದು. ಹೀಗಾಗಿ ನಾಲ್ಕು ಪಥಗಳ ರಸ್ತೆ ನಿರ್ಮಿಸಬೇಕು ಎಂದು ನಿರ್ಧರಿಸಿ ಟೆಂಡರ್ ಕರೆಯಲಾಗಿತ್ತು. ಐದು ಕಂಪೆನಿಗಳು ಟೆಂಡರ್ ಪಡೆಯಲು ಮುಂದೆ ಬಂದವು. ಆದರೆ ಅಷ್ಟರಲ್ಲಿ ನಾನು ಯಾವುದೋ ಕಾರಣಕ್ಕೆ ಹೆಗಡೆಯವರ ಕ್ಯಾಬಿನೆಟ್ಟಿನಿಂದ ಹೊರಬಂದೆ. ಯೋಜನೆ ಅಲ್ಲಿಗೇ ನೆನೆಗುದಿಗೆ ಬಿತ್ತು. ಮುಂದೆ ನಾನು ಮುಖ್ಯಮಂತ್ರಿಯಾದಾಗ ಹಲವು ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದರು. ಆಗಲೇ ಈ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಗೆ ಚಾಲನೆ ಸಿಕ್ತು. ಅಮೆರಿಕಾದ ವಿಎಚ್ಬಿ, ಸ್ಯಾಬ್ ಇಂಜಿನಿಯರಿಂಗ್ ಮತ್ತು ಭಾರತದ ಕಲ್ಯಾಣಿ ಗ್ರೂಪ್ಗಳನೊಳಗೊಂಡ ಕಂಪೆನಿಗಳ ಒಕ್ಕೂಟದೊಂದಿಗೆ ಒಪ್ಪಂದ ಆಯಿತು." ಎನ್ನುತ್ತಾರೆ.

ಹೀಗೆ ಬೆಂಗಳೂರಿನ ದಟ್ಟಣೆಯನ್ನು ಕಡಿತಗೊಳಿಸುವ ಸದಾಶಯದೊಂದಿಗೆ ಪ್ರಾರಂಭವಾದ ಒಂದು ಉತ್ತಮ ಅಭಿವೃದ್ಧಿ ಪೂರಕ ಯೋಜನೆ ಈ ಬಿಎಂಐಸಿಪಿ - ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಕ್ಸ್ಪ್ರೆಸ್ವೇ ಪ್ರಾಜೆಕ್ಟ್! ಇದು 1995ರ ಕಾಲಕ್ಕಂತೂ ಅತ್ಯಂತ ಮಹತ್ವಾಕಾಂಕ್ಷಿಯೂ ರೆವಲ್ಯೂಷನರಿಯೂ ಆದ ಯೋಜನೆಯಾಗಿತ್ತು. ದೇಶ ಆಗ ತಾನೆ ಆರ್ಥಿಕ ಸಂಕಷ್ಟದಿಂದ ಹೊರಬರಲಾರಂಭಿಸಿತ್ತು. ಆರ್ಥಿಕ ಉದಾರೀಕರಣವನ್ನು ಜನ ಇನ್ನೂ ಸಂಪೂರ್ಣ ಒಪ್ಪದಿದ್ದರೂ ಕೊಂಚ ಕೊಂಚವಾಗಿ ಎಣ್ಣೆ ತಲೆಗಿಳಿಯುತ್ತಿತ್ತು. ಇಂತಹ ಕಾಲ ಘಟ್ಟದಲ್ಲಿ ಒಂದು ಪ್ರೈವೇಟು ಕಂಪೆನಿಗೆ ರಸ್ತೆ ಪ್ರಾಜೆಕ್ಟನ್ನೂ ನೀಡುವುದು, ಅದೂ 30 ವರ್ಷಗಳ ಕಾಲ ಅವರು ಅದನ್ನು ನಿಯಂತ್ರಿಸಿ, ಅದರ ಮೇಲೆ ಓಡಾಡಬೇಕೆಂದರೆ ಅದಕ್ಕೆ ಶುಲ್ಕ ಕಟ್ಟಬೇಕೆನ್ನುವ ಕಾನ್ಸೆಪ್ಟೇ ಆಗ ಹೊಸತು. ಇರಲಿ.

ಬಿಎಂಐಸಿಪಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಡೀ ರಸ್ತೆ ಬೆಂಗಳೂರು ನಗರವನ್ನು ಹೆಬ್ಬಾವಿನಂತೆ ಸುತ್ತುವರೆದಿದೆ. ನಾಲ್ಕು ಚತುಷ್ಪಥಗಳ 6ಕ್ಕೇರಸಿಬಹುದಾದ ಎಕ್ಸ್ಪ್ರೆಸ್ ವೇ, ಲಿಂಕ್ ರೋಡ್ಗಳು, ಪೆರಿಫೆರಲ್ ರಸ್ತೆ, ಅಪಘಾತ ಸಂಭವಿಸಿದರೆ ಚಿಕಿತ್ಸೆಗೆ ಆಸ್ಪತ್ರೆಗಳು, ಜಾನುವಾರು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಂಡರ್ಪಾಸ್ಗಳು, ಓವರ್ ಬ್ರಿಡ್ಜ್ಗಳು, 6 ಪಥದ ರಸ್ತೆಯಲ್ಲಿ ಮುಖ್ಯ ನಾಲ್ಕು ಪಥಗಲನ್ನು ಕಾಂಕ್ರೀಟಿನಲ್ಲಿಯೂ ಮಿಕ್ಕ ಎರಡು ಸವರ್ೀಸ್ ರೊಡ್ಗಳನ್ನು ಢಾಂಬರಿನಲ್ಲಿಯೂ ನಿರ್ಮಿಸುವುದು, ಬೆಂಗಳೂರು ಮೈಸೂರಿನ ನಡುವೆ 5 ಸುಜ್ಜಿತ ಟೌನ್ಷಿಪ್ಗಳು..ಅಬ್ಬಬ್ಬಾ....ಈ ಬಿಎಂಐಸಿಪಿಯ ಒಟ್ಟು ಉದ್ದ 111 ಕಿಲೋಮಿ.ಗಳು. ಇದು ಬೆಂಗಳುರು - ಮೈಸೂರು ನಡುವಿನ ಎಕ್ಸ್ಪ್ರೆಸ್ವೇನ ಉದ್ದ. ಇನ್ನು 41 ಕಿಲೋಮೀ.ಗಳ ಬೆಂಗಳೂರನ್ನು ಸುತ್ತುವರಿಯುವ ಪೆರಿಫೆರಲ್ ರೋಡ್, 9.1ಕಿಲೋಮೀ.ಗಳ ಲಿಂಕ್ ರೋಡ್, 12 ಕಿಲೋಮೀ.ಗಳ ಬಿಡದಿ ಎಕ್ಸ್ಪ್ರೆಸ್ ವೇ, ಲಿಂಕ್ ರೋಡ್, ಹೊಸೂರು ರೋಡ್ ಮತ್ತು ತುಮಕೂರು ರೋಡ್ ಬಳಿ ಕ್ಲೋವರ್ ಎಲೆಯಾಕಾರದಲ್ಲಿ ಒಂದು ಎಕ್ಸಛೇಂಜ್ ರೋಡ್. ಇವಿಷ್ಟೂ ರಸ್ತೆಯ ವಿಷಯವಾದರೆ, ಬೆಂಗಳೂರು ಮೈಸೂರಿನ ನಡುವೆ 5 ಆಧುನಿಕ ಸುಸಜ್ಜಿತ ಟೌನ್ಷಿಪ್ಗಳನ್ನು ನಿರ್ಮಿಸುವ ಕೆಲಸವೂ ಇದೇ ಪ್ರಾಜೆಕ್ಟಿನಲ್ಲಿ ಅಡಕವಾಗಿದೆ. ಟೋಲ್ ರಸ್ತೆಗಾಗಿ 5119 ಎಕೆರೆ ಭೂಮಿಯನ್ನೂ ಮತ್ತು 5 ಟೌನ್ಷಿಪ್ಗಳಿಗಾಗಿ 13,194 ಎಕೆರೆಗಳನ್ನು ಈ ಕಂಪೆನಿಗೆ ನೀಡಬೇಕೆಂದೂ, ಈ ಕಂಪೆನಿಯು ರೈತರಿಂದ ನೇರವಾಗಿ ಮಾರುಕಟ್ಟೆ ಬೆಲೆಗೆ ಈ ಭೂಮಿಯನ್ನು ಕೊಳ್ಳಬೇಕೆಂದೂ, ರಸ್ತೆ ನಿಮಿಸಿದ ನಂತರ 30 ವರ್ಷಗಳವರೆಗೆ ಕಂಪೆನಿ ಈ ರಸ್ತೆಯ ನಿರ್ವಹಣೆಯನ್ನು ಮಾಡಬಹುದು, ಟೋಲ್ ಮೂಲಕ ತಾನು ಹಾಕಿದ್ದ ಬಂಡವಾಳವನ್ನು ಹಿಂಪಡೆದು ನಂತರ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂಬುದು ಕರಾರು. ಈ ಇಡೀ ಯೋಜನೆಯನ್ನು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಸಿಟಿ ಆಫ್ ಕೊಲಂಬಿಯಾದ ಮಾದರಿಯಲ್ಲಿ ಮಾಡಲಾಗಿದೆ. ಈ ಒಪ್ಪಂದ ಆಗಿರುವುದೂ ಅಮೆರಿಕದ ಮೆಸ್ಸಾಚುಟಸ್ ಪ್ರಾಂತ್ಯದ ಗವರ್ನರ್ನ `ದಿವ್ಯ ಸಾನ್ನಿಧ್ಯ'ದಲ್ಲಿ!

ಈ ಪ್ರಾಜೆಕ್ಟಿನಿಂದ ಬೆಂಗಳೂರು - ಮೈಸೂರುಗಳಿಗಾಗುವ ಲಾಭವಾದರೂ ಏನು? ಈ ಎಕ್ಸಪ್ರೆಸ್ ವೇ ಬೆಂಗಳೂರು ಹಾಗೂ ಕರ್ನಾಟಕದ ಮೂರು ಪ್ರಮುಖ ಔದ್ಯಮಿಕ ಪ್ರದೇಶಗಳನ್ನು ಇಂಟರ್ಲಿಂಕ್ ಮಾಡುತ್ತದೆ. ಒಂದು ಕಡೆ ಸಾಫ್ಟವೇರ್ನ ಕಾಶಿ ಎಲೆಕ್ಟ್ರಾನಿಕ್ ಸಿಟಿ, ಇನ್ನೊಂದೆಡೆ ನಮ್ಮ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬಿಡದಿ ಮತ್ತು ದಕ್ಷಿಣ ಬೆಂಗಳೂರು! ಒಂದೊಂದರ ನಡುವಿನ ಪ್ರಯಾಣ ಸಮಯ ಕೇವಲ 10-15 ನಿಮಿಷಗಳಿಗೆ ಇಳಿದುಬಿಡುತ್ತದೆ. ಇನ್ನು ಎಕ್ಸ್ಪ್ರೆಸ್ ವೇ ಪೂರ್ಣಗೊಂಡ ನಂತರ ಹಳೇ ಮೈಸೂರು ಪ್ರಾಂತ್ಯದ ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬೆಂಗಳೂರು ಮತ್ತು ಮೈಸೂರಿನ ನಡುವಿನ ಪ್ರಯಾಣ ಸಮಯ ಕೇವಲ ಒಂದು ಘಂಟೆ! ಸದ್ಯ 3 ಘಂಟೆ. ಎಲ್ಲೇ ಆಗಲೀ ಉದ್ಯಮಗಳು ಬೆಳೆಯಬೇಕೆಂದರೆ ರಸ್ತೆ ಸಂಪರ್ಕ ಅದಕ್ಕೆ ಪೂರಕವಾಗಿರಬೇಕು. ಆ ದೃಷ್ಟಿಯಿಂದ ಈ ಯೋಜನೆ ಬೆಂಗಳೂರು - ಮೈಸೂರು ಎರಡೂ ನಗರಗಳ ಅಭಿವೃದ್ಧಿಗೆ ಅವಶ್ಯವೂ ಹೌದು.

ಆದರೆ ಇಂದೇನಾಗಿದೆ? 1995ರ ನಂತರ ಈ ಯೋಜನೆಯ ಪ್ರತಿ ಹೆಜ್ಜೆಯೂ ಸಾರ್ವಜನಿಕ ಹಿತದ ವಿರುದ್ಧದ ನಡೆಯೇ! ಬೆಂಗಳೂರು ಸುತ್ತಮುತ್ತಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದರೆ ರೈತ ನಿಗೆ ನೆಮ್ಮದಿಯೆಂಬುದು ಮರೀಚಿಕೆಯಾಗಿದೆ. ಆತನ ಭೂಮಿ ನೈಸ್ ಹೆಸರಿನಲ್ಲಿ `ಕಬ್ಜಾ' ಆಗಿಬಿಟ್ಟಿದೆ. ರೈತ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ, ಕೈಲಿ ಚಿಕ್ಕಾಸೂ ಇಲ್ಲದೆ! ರಸ್ತೆಗೆ, ಟೌನ್ಷಿಪ್ಗೆ ಎಲ್ಲ ಸೇರಿ ಬೇಕಿರುವುದು ಒಟ್ಟು 18313 ಎಕೆರೆ ಭೂಮಿ. ಆದರೆ ಇಂದು ಖೇಣಿ ಕೈಲಿ ಸುಮಾರು 29 ಸಾವಿರ ಎಕರೆ ಭೂಮಿಯಿದೆ! ಆತ ಈ ಪ್ರಾಜೆಕ್ಟ್ಗಾಗಿ ತನ್ನ ಪಾಕೆಟ್ನಿಂದ ಒಂದು ಬಿಡಿಗಾಸನ್ನೂ ಹಾಕಿಲ್ಲ, ಆತ ಬರಿಗೈಯ ಫಕೀರ! ಆದರೆ ಇಂದು ಸಾವಿರಾರು ಎಕರೆಗಳ ಚಿನ್ನದ ಬೆಲೆಯ ಬಂಗಾರದ ಭೂಮಿಯ ಚಕ್ರಾಧಿಪತ್ಯ! ಎಲ್ಲವೂ ನೈಸ್ನ ಹೆಸರಿನಲ್ಲಿ. ಹೇಗೆ ಸಾರ್ವಜನಿಕ ಹಿತದ ಸದಾಶಯದೊಂದಿಗೆ ಪ್ರಾರಂಭವಾದ ಒಂದು ಅಭಿವೃದ್ಧಿ ಪರ ಯೋಜನೆ ನಮ್ಮನ್ನಾಳುವವರ ಕೈಗೊಂಬೆಯಾಗಿ ಇಂದು ಒಂದು ರಿಯಲ್ ಎಸ್ಟೇಟ್ ಸ್ಕ್ಯಾಮಿನ ಮಟ್ಟಕ್ಕೆ ಬಂದು ನಿಂತಿದೆ ಎನ್ನುವ ಸುದೀರ್ಘ ಕಥೆಯು ನಮ್ಮ ಇಂದಿನ ಅನೇಕ ದುರಂತಗಳ ಪ್ರತಿಫಲನವೇ ಆಗಿದೆ.

ನೈಸ್ ಹುತ್ತವನ್ನೊಮ್ಮೆ ತಡುಕಿದರೆ ಸಾಕು ಹತ್ತಾರು ಸಂಧೀಗ್ಧ ಪ್ರಶ್ನೆಗಳು ನಮ್ಮ ಮುಂದೆ ಬೃಹದಾಕಾರವಾಗಿ ಬಂದು ನಿಲ್ಲುತ್ತವೆ. ಉತ್ತರಗಳಿಗಾಗಿ ಇಡಿಯ ನೈಸ್ ಪುರಾಣವನ್ನೊಮ್ಮೆ ವಾಚಿಸಬೇಕಾಗುತ್ತದೆ! ಈ ನೈಸ್ ಪುರಾಣದಲ್ಲಿ ಅನೇಕ ವಿಲನ್ಗಳು, ಸಂತ್ರಸ್ತರ ಕರುಣಾಜನಕ ಕಥೆಗಳು, ಖೇಣಿ ಎಂಬ ದರೋಡೆಕೋರನೂ ಬರುತ್ತಾನೆ. ಈ ಪುರಾಣದಲ್ಲಿ ಹೀರೋ ಪಾತ್ರದ ಪ್ರವೇಶ ಇನ್ನೂ ನಡೆದಿಲ್ಲದಿರುವುದು ಜನರ ದುರ್ದೈವ! ಈಗ ದೇವೇಗೌಡರು ನೈಸ್ ವಿರುದ್ಧ ಹೋರಾಟಕ್ಕೆ ಪಂಚೆ ಎತ್ತಿ ಕಟ್ಟಿದ್ದಾರೆ. ಅದರ ಹಿಂದೆ ಒಂದು ರಾಜಕೀಯ ಸ್ವಾರ್ಥವಿದೆ, ಇಲ್ಲವೆಂದಲ್ಲ. ನಮಗೆ ಅವರ ರಾಜಕೀಯ ಸ್ವಾರ್ಥದ ಲೆಕ್ಕಾಚಾರಗಳು ಬೇಕಿಲ್ಲ. ಅವರು ಒಂದು ಜ್ವಲಂತ ಸಮಸ್ಯೆಯನ್ನು ಜನರ ಮುಂದಿಡುತ್ತಿದ್ದಾರೆ. ರೈತರ ಶೋಷಣೆಯನ್ನು, ಸಾವಿರಾರು ಕೋಟಿ ರೂ.ಗಳ ಹಗರಣವನ್ನು ಎಳೆಎಳೆಯಾಗಿ ಬಯಲು ಮಾಡುತ್ತಿದ್ದಾರೆ. ನಮ್ಮ ಗಮನ ಆ ಇಶ್ಯುವಿನ ಮೇಲೆ. ಅವರ ರಾಜಕೀಯ ಸ್ವಾರ್ಥದ ಲೆಕ್ಕಾಚಾರಗಳಲ್ಲಿ ಇಶ್ಯೂ ಗೌಣವಾಗಬಾರದು.

ಈ ನಿಟ್ಟಿನಲ್ಲಿ ನಿಮ್ಮ `ಭಾನುವಾರ' ದಿಟ್ಟ ಹೆಜ್ಜೆ ಇಟ್ಟಿದೆ. ಈ ವಾರದಿಂದ ಪ್ರಾರಂಭವಾಗಿ ಇಡಿಯ ನೈಸ್ ಪುರಾಣವನ್ನು ನಿಮ್ಮ ಮುಂದಿಡಲಿದೆ. ನಾವು ಅತ್ತ ಗೌಡರ ಬಾಲಂಗೋಚಿಗಳೂ ಅಲ್ಲ, ಇತ್ತ ಯಡ್ಯೂರಪ್ಪನವರ ಆಸ್ಥಾನದವರೂ ಅಲ್ಲ, ಮಧ್ಯೆ ಬಂದ ಕೃಷ್ಣರ ವಾಲಗದವರೂ ಅಲ್ಲ. ಇದರಲ್ಲಿ ನಮ್ಮ ಆಸಕ್ತಿ ಒಂದೇ - ಒಂದು ಸಾರ್ವಜನಿಕ ಹಿತದ ಯೋಜನೆಯೊಂದು ಖೇಣಿ ಎಂಬ ಡಕಾಯಿತ ಮತ್ತು ದಗಾಕೋರ ರಾಜಕಾರಣಿಗಳ ಸಹಯೋಗದಲ್ಲಿ ಹೇಗೆ ಡಿಜೆನರೇಟ್ ಆಗುತ್ತಾ ಇಂದು ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶಗಳ ರೈತರ ಬದುಕನ್ನು ಗುಳುಂ ಮಡುತ್ತಿರುವ ಹೆಬ್ಬಾವಾಗಿದೆ, ಸಾವಿರಾರು ಕೋಟಿ ರೂ.ಗಳ `ಅಗಣಿತ' ಹಗರಣವಾಗಿದೆ ಎಂಬುದನ್ನು ನಮ್ಮ ಓದುಗರಿಗೆ ಎಳೆಎಳೆಯಾಗಿ ಬಿಡಿಸಿಡುವುದು. ಇದರಲ್ಲಿ ನಾವು ದಾಖಲೆ ಸಮೇತ ಫ್ಯಾಕ್ಟ್ಸ್ ಅನ್ನು ಮಾತ್ರ ಪ್ರಸ್ತಾಪಿಸುತ್ತೇವೆಯೇ ಹೊರತು ಯಾವುದೋ ಶಂಖದ ತೀರ್ಥವನ್ನಲ್ಲ. ಬಿಬಿಎಂಪಿ ಚುನಾವಣೆಗಳು ಕಣ್ಣಳತೆಯಲ್ಲಿರುವ ಈ ಅವಧಿಯಲ್ಲಿ `ಭಾನುವಾರ'ದ ಸಂದರ್ಭೋಚಿತ ಪ್ರಯತ್ನ - ನೈಸ್ ಪುರಾಣಂ!

Proudly powered by Blogger
Theme: Esquire by Matthew Buchanan.
Converted by LiteThemes.com.