ವಿವಿಗಳಲಿ ಛಾನ್ಸೆಲರ್ ಪಾತ್ರವೇನು?

ಹಿಂದಿನ ವಾರಚಷ್ಟೆ ನಾವು ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡುತ್ತಾ ಅಲ್ಲಿನ ಶಶಿಧರ ಪ್ರಸಾದ್ ಹಗರಣ, ಹಾಗೂ ಅವರು ಹೇಗೆ ಪೀನಲ್ ಆಕ್ಷನ್ನಿಂದ ಪಾರಾಗಿದ್ದಾರೆ ಎಂದು ವಿಸ್ತೃತವಾಗಿ ಚರ್ಚಿಸಿದ್ದಿವಿ. ಅದರಲ್ಲಿ ನಮ್ಮ ರಾಜ್ಯಪಾಲರ ಪಾತ್ರವೇನು ಅನ್ನುವುದನ್ನು ಬರೆದಿದ್ದೆ. ರಾಜ್ಯಪಾಲರು ಎಲ್ಲ ವಿವಿಗಳ ಕುಲಪತಿಗಳು. ಅವರು ಜೂನ್ 24ರಂದು ಶಶಿಧರ ಪ್ರಸಾದ್ ಅವರ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆ ಕೊಟ್ಟಿದ್ದಾರೆ. ಇದೇ ವಿಚಾರವಾಗಿ ಜುಲೈ 14, 2010ರಂದು ಒಮದು ಪತ್ರ ಬರೆದಿದ್ದಾರೆ. ಅದರಲ್ಲಿ ಅವರ ಕ್ರಮವನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ 2000, ಸೆಕ್ಷನ್ 8ರ ಪ್ರಕಾರ ಯಾವುದೇ ವಿವಿಯ ವಿಶ್ರಾಂತ ಉಪಕುಲಪತಿಗಳ ವಿರುದ್ಧ ಕ್ರಿಮಿನಲ್ ಕೇಸು ಹೂಡುವಂತಿಲ್ಲ! ಅಷ್ಟೇ ಅಲ್ಲ ಇನ್ನೂ ಮುಂದುವರೆದು ಅವರು ಸೆಕ್ಷನ್ 53(6)ರಡಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳೂ ಸಿಂಧುವಾಗಿದೆ ಎಂದು ಶರಾ ಬರೆದುಬಿಟ್ಟಿದ್ದಾರೆ. ಅಲ್ಲಿಗೆ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ವರದಿ ಕಸದ ಬುಟ್ಟಿ ಸೇರಿದೆ. ಮೈಸೂರು ವಿವಿಯಲ್ಲಿ ನಡೆದ ಅಖಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾನೂನು ಬಾಹಿರ ನೇಮಕಾತಿ, ಹಿಂದುಳಿದ ವರ್ಗಗಳಿಗೆ ನಡೆದ ಅನ್ಯಯ ಎಲ್ಲಕ್ಕೂ ರಾಜ್ಯಪಾಲರ ಮೊಹರು ಬಿದ್ದಾಗಿದೆ. ಸಕರ್ಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ರಾಜ್ಯಪಾಲರು ಒಬ್ಬ ಕಳಂಕಿತನನ್ನು ಹೀಗೆ ಬಹಿರಂಗವಾಗಿ ರಕ್ಷಿಸುವುದು ಎಷ್ಟು ಸರಿ? ನ್ಯಾಯಮೂರ್ತಿ ರಂಗವಿಠಲಾಚಾರ್ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗ ಶಶಿಧರಪ್ರಸಾಧ್ ಅವರನ್ನು ತಪ್ಪಿತಸ್ಥರು ಎಂದು ಸ್ಪಷ್ಟವಾಗಿ ಹೇಳಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿಫಾರಸು ಮಾಡಿದೆ. ಶಶಿಧರ ಪ್ರಸಾದ್ ಅವರು ನ್ಯಾಯಾಲಯದಲ್ಲಿ ಬಡಿದಾಡಲಿ ಬಿಡಿ. ಮಾಜಿ ಉಪಕುಲಪತಿಗಳು ಹಾಗೆಲ್ಲಾ ಜೈಲಿಗೆ ಹೋಗಬಾರದು ಅಂತಾರಲ್ಲ ನಮ್ಮ ಭಾರಧ್ವಾಜರು. ಉಪಕುಲಪತಿಗಳೇನು ಕಾನೂನಿಗಿಂತ ದೊಡ್ಡವರೇ? ಇದು ಕೇಂದ್ರ ಕಾನೂನು ಸಚಿವರಾಗಿದ್ದ ಭಾರಧ್ವಾಜರಿಗೆ ಗೊತ್ತಿಲ್ಲವೇ?

ರಜ್ಯಪಾಲರ ಈ ನಡೆಯೇ ಖಂಡನೀಯ ಅಂದರೆ ಮೊನ್ನೆ ಮೈಸೂರಿಗೆ ಹೋದಾಗ ಅವರು ನಡೆದುಕೊಂಡ ರೀತಿಯಿದೆಯಲ್ಲ, ಅದನ್ನು ಏನನ್ನಬೇಕೋ ತಿಳಿಯದಾಗಿದೆ. ಬಾಲಿಶವೋ? ಪಾಳೆಗಾರಿಕೆಯೋ?  ಅವರೇ ಹೇಳಬೇಕು. ಮೊನ್ನೆ ಅನೇಕ ಕಾರ್ಯಕ್ರಮಗಳ ನಿಮಿತ್ತ ರಾಜ್ಯಪಾಲರು ಮೈಸುರಿಗೆ ಬಂದಿಳಿದರು. ಅವರನ್ನು ಸ್ವಾಗತಿಸಲು ಮೈಸೂರು ವಿವಿಯ ಕುಲಪತಿಗಳಾದ ಪ್ರೊ.ವಿ.ಜಿ.ತಳವಾರ್ ಅವರು ಅತಿಥಿ ಗೃಹಕ್ಕೆ ಹೋಗಿದ್ದಾರೆ. ರಾಜ್ಯಪಾಲರು ಕಾರಿಳಿಯುತ್ತಿದ್ದಂತೆಯೇ ಹಾರ ಹಿಡಿದು ಎದುರುಗೊಂಡಿದ್ದಾರೆ. ಅಷ್ಟೆ ರಾಜ್ಯಪಾಲರು ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಸ್ಫೋಠಿಸಿದ್ದಾರೆ. There is no sanctity for my order in your university. What do you think of yourselves? You are trying to put up students against me! As soon as I get back to Bangalore I will write about you to the chief minister. Henceforth I will not enter mysore university. Do whatever you want. . I will also talk about this with the prime minister and ask him to stop the funds for the university….ಹೀಗೇ ಸಾಗಿತ್ತು ರಾಜ್ಯಪಾಲರ ಆಟಾಟೋಪ. ಅದಕ್ಕೆ ಪಾಪ ತಳವಾರ್ ಅವರು ಸಾರಿ ಸರ್, ಸರಿಮಾಡಿಕೊಳ್ತೀನಿ ಸರ್...ಸಾರಿ ಸರ್ ಅಂತ ಉಲಿಯುತ್ತಿದ್ದರು ಅಷ್ಟೆ. ರಾಜ್ಯಪಾಲರ ಈ ನಡವಳಿಕೆ ಖಂಡನೀಯವಷ್ಟೇ ಅಲ್ಲ, ಅವರು ಅವತ್ತು ಎಲ್ಲೆ ಮೀರಿ ಪ್ರವರ್ತಿಸಿದ್ದರು. ಅಸಲಿಗೆ ರಾಜ್ಯಪಾಲರ ಕೋಪಾತಾಪಕ್ಕೆ ಕಾರಣವಾದರೂ ಏನು? ಶಶಿಧರ ಪ್ರಸಾದ್ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಬೇಡಿ ಎಂದು ಇವರೇನೋ ತಾಕೀತು ಮಾಡಿಬಿಟ್ಟರು. ಆದರೆ ವಿವಿಯಲ್ಲಿ ಈ ವಿಷಯವಾಗಿ ಮೈಸೂರು ವಿಶ್ವವಿದ್ಯಾಲಯ ಉಳಿಸಿ ಎಂಬ ನಿನಾದದೊಂದಿಗೆ ಒಂದು ಚಳುವಳಿಯೇ ಆರಂಭವಾಗಿದೆ. ಇದರಲ್ಲಿ ವಿವಿಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಸಂಘಟನೆಗಳು, ದಲಿತ ಸಂಘಟನೆಗಳು ಎಲ್ಲರೂ ಭಾಗವಹಿಸುತ್ತಿದ್ದಾರೆ. ಶಶಿಧರ ಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಈ ಪ್ರೆಷರ್ ಅನ್ನು ತಡೆಯದಾದ ಪ್ರೊ. ತಳವಾರ್ ಅವರು ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿದ್ಯಾರ್ಥಿ ನಾಯಕರಿಗೆ ಆಶ್ವಾಸನೆ ನೀಡಿದ್ದಾರೆ. ಇದೇ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ. ರಾಜ್ಯಪಾಲರಿಗೆ ಸುದ್ದಿ ಮುಟ್ಟಿದೆ. ವಿದ್ಯಾರ್ಥಿಗಳ ಮುಂದೆ ತಮ್ಮನ್ನು ದೋಷಿಯಂತೆ ನಿಲ್ಲಿಸುತ್ತಿದ್ದಾರೆ ತಳವಾರ್ ಅವರು ಎಂದು ಕೆಂಡ ಕಾರಿದ್ದಾರೆ. ಇದು ಸರ್ವಥಾ ಖಂಡನೀಯ. Wasn't the governor exceeding his brief in behaving so? ಖಂಡಿತ ಹೌದು. ಹಾಗಾದರೆ ವಿಶ್ವವಿದ್ಯಾಲಯಗಳಲಿ ರಾಜ್ಯಪಾಲರ ಪಾತ್ರವಾದರೂ ಏನು? ಅವರನ್ನು ಛಾನ್ಸೆಲರ್ ಅಂತ ಕರೀತಾರಲ್ಲ, ಆ ಸ್ಥಾನದ ಮಹತ್ವವೇನು? ಅಧಿಕಾರಗಳೇನು? ಒಟ್ಟಾರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಛಾನ್ಸೆಲರ್ನ ಪಾತ್ರವೇನು ಎಂಬುದರ ಕುರಿತು ಕೂಲಂಕುಷ ಚರ್ಚೆಗೆ ಇದು ಸಕಾಲ. 

ವಿಶ್ವವಿದ್ಯಾನಿಲಯಗಳು ಯಾವತ್ತೂ ಸರ್ಕಾರದ ಅಡಿಯಾಳುಗಳಲ್ಲ. ಅವು ಸ್ವಾಯತ್ತ ಸಂಸ್ಥೆಗಳು. ಅವುಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಹಾಗಾಗಿ ನಮ್ಮ ವಿಶ್ವವವಿದ್ಯಾನಿಲಯಗಳನ್ನು ಸರ್ಕಾರದ ಕೆಳಗಿರಿಸದೆ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರ ಕೆಳಗಿರಿಸಲಾಗಿದೆ. ಇದು ಭಾರತದ ಎಲ್ಲ ವಿವಿಗಳಿಗೂ ಅನ್ವಯಿಸುತ್ತದೆ. ಆ ರಾಜ್ಯದ ರಾಜ್ಯಪಾಲರು, ಅಲ್ಲಿನ ಎಲ್ಲ ವಿವಿಗಳ ಕುಲಪತಿಗಳಾಗಿರುತ್ತಾರೆ. ವಿವಿಗಳು ಮತ್ತು ಅವುಗಳ ಆಡಳಿತದಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರಗಳಿವೆ. ಇಲ್ಲಿ ಅವರು ಬರಿಯ ರಬ್ಬರ್ ಸ್ಟಾಂಪ್ ಅಲ್ಲ. ವಿವಿಯ ಉಪಕುಲಪತಿ, ರಿಜಿಸ್ಟ್ರಾರ್ಗಳ ನೇಮಕದಿಂದ ಹಿಡಿದು ವಿವಿಯ ಆಡಳಿತದಲ್ಲೂ ಅವರಿಗೆ ಅಪಾರ ಅಧಿಕಾರಗಳಿವೆ. ಅದನ್ನು ಈ ಹಿಂದಿನ ಎಲ್ಲ ರಾಜ್ಯಪಾಲರೂ ಕೂಡ ಚಲಾಯಿಸುತ್ತಲೇ ಬಂದಿದ್ದಾರೆ. ಒಂದು ವಿವಿಯಲ್ಲಿ ಏನೇ ವಿವಾದಗಳಾದರೂ ಅವರು ಸರ್ಕಾರದ ಬಳಿ ಹೋಗುವುದಿಲ್ಲ, ಬದಲಿಗೆ ರಾಜ್ಯಪಾಲರ ಬಳಿ ದೂರು ಕೊಂಡೊಯ್ಯುತ್ತಾರೆ. ರಾಜ್ಯಪಾಲರಿಗೆ ವಿವಿಗಳ ಬಗ್ಗೆ ಯಾವುದೇ ತನಿಖೆಗೆ ಆದೇಶಿಸುವ ಅಧಿಕಾರವಿದೆ. ರಿಜಿಸ್ಟ್ರಾರ್ ಮತ್ತಿತರರನ್ನು ವಜಾಗೊಳಿಸುವ ಅಧಿಕಾರವಿದೆ. ವಿವಿ ಸಿಂಡಿಕೇಟ್ಗೆ ರಾಜ್ಯಪಾಲರು ತಮ್ಮ ಇಬ್ಬರು ಪ್ರತಿನಿಧಿಗಳನ್ನು ನೇಮಿಸುತ್ತಾರೆ. ಸಿಂಡಿಕೇಟ್ ಸಭೆ ನಡೆಸಲು ಅವರು ಆದೇಶಿಸಬಹುದು. ರಾಜ್ಯಪಾರು ಸುವೋ ಮೋಟೋ ವಿವಿಯ ಆಡಳಿತ, ಕಾರ್ಯನಿರ್ವಹಣೆ, ಆರ್ಥಿಕ ನಿರ್ವಹಣೆ ಮುಂತಾದ ಎಲ್ಲ ವಿಷಯಗಳ ಕುರಿತಾಗಿ ಡೈರೆಕ್ಷನ್ಗಳನ್ನು ನೀಡಬಹುದು. ಇದಲ್ಲದೆ ಯಾವಾಗ ಬೇಕಾದರೂ ಕಮೀಷನ್ ಆಫ್ ಎನ್ಕ್ವೈರಿಯ ಮೂಲಕ ವಿವಿಯ ಇನ್ಸ್ಪೆಕ್ಷನ್ ನಡೆಸಿ ತಮ್ಮ ಶಿಫಾರಸುಗಳನ್ನು ಸರ್ಕಾರಕ್ಕೆ ಕಳಿಸಕೊಡಬಹುದಾಗಿದೆ. ಇವುಗಳ ಅನುಷ್ಠಾನದ ಹೊರತು ಸರ್ಕಾರಕ್ಕೆ ಬೇರೆ ದಾರಿಯಿಲ್ಲ. 

ವಿವಿಗಳ ಸ್ವಾಯತ್ತತೆಯನ್ನು ಕಾಪಾಡುವ ದೃಷ್ಟಿಯಿಂದ ಸೃಷ್ಟಿಯಾದದ್ದು ಕುಲಾಧಿಪತಿಗಳ ಕಾನ್ಸೆಪ್ಟು. ಇದು ಬಹುಮಟ್ಟಿಗೆ ಯಶಸ್ವಿ ಕೂಡ ಆಗಿದೆ. ಸರ್ಕಾರದ ಮರ್ಜಿಗೆ ಕಾಯುವ ಅವಶ್ಯಕತೆ ಇವತ್ತಿಗೂ ವಿವಿಗಳಿಗಿಲ್ಲ. ಈ ಪದವಿ ವಿವಾದಕ್ಕೊಳಗಾಗಿರುವುದು ಕೆಲವೊಮ್ಮೆ ಮಾತ್ರ. ರಾಜ್ಯ ಸರ್ಕಾರದ ರಬ್ಬರ್ ಸ್ಟಾಂಪ್ಗಳಾಗದೇ ತಮ್ಮ ಅಧಿಕಾರಗಳನ್ನು ಚಲಾಯಿಸಿದಾಗ, ಅಂದಿನ ಸರ್ಕಾರಗಳು ಅದನ್ನು ಒಪ್ಪಿಕೊಳ್ಳಬೇಕು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಅಲ್ಲಿ ತಮ್ಮ ಹಸ್ತಕ್ಷೇಪ ಸಲ್ಲದು ಎಂಬುದನ್ನೇ ಅವರು ಅಂಗೀಕಾರ ಯೋಗ್ಯವಲ್ಲ ಎಂದು ತಿರಸ್ಕರಿಸುತ್ತಾರೆ. ಹಿಂದೆ ಹಲಾರು ಬಾರಿ ಇದನ್ನು ಜೀರ್ಣಿಸಿಕೊಳ್ಳದ  ರಾಜಕಾರಣಿಗಳು ಮತ್ತು ಅವರ ವೊಡ್ಡೋಲಗಗಳು ಈ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೆಲವೊಮ್ಮೆ ಇದು ಸರ್ಕಾರ ಮತ್ತು ರಾಜಭವನದ ನಡುವೆ ತೀವ್ರತಮ ತಿಕ್ಕಾಟಗಳಿಗೂ ಎಡೆ ಮಾಡಿಕೊಟ್ಟಿದೆ. 

ಹಿಂದೊಮ್ಮೆ ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಂದರ್ಭ. ವಿವಿಗಳಲ್ಲಿ ಯಾವುದೂ ತಮಗೆ ಬೇಕಾದಂತೆ ಆಗುತ್ತಿಲ್ಲ. ತಮಗೆ ಬೇಕಾದವರನ್ನು ವಿವಿಗಳ ಉಪಕುಲಪತಿಗಳಾಗಿ ನೇಮಿಸಲಾಗುತ್ತಿಲ್ಲ, ಅವುಗಳ ಆಡಳಿತ ತಮ್ಮ ಹಿಡಿತದಲ್ಲಿಲ್ಲ ಎಂಬ ಅಸಮಾಧಾನವಿತ್ತು ಅವರಿಗೆ. ಯಾವುದೋ ಒಂದು flashpointನಲ್ಲಿ ಸಿಡಿದೆದ್ದೆರು. ಕೂಡಲೇ ಒಂದು ಸುಗ್ರೀವಾಜ್ಞೆಯನ್ನು ತಂದರು. ಈ ಸುಗ್ರೀವಾಜ್ಞೆಯು ವಿವಿಗಳಲ್ಲಿ ರಾಜ್ಯಪಾಲರ ಪಾತ್ರವನ್ನು ಶೂನ್ಯಗೊಳಿಸಿದಲ್ಲದೆ, ಅವರಿಂದ ವಿವಿಗಳ ಛಾನ್ಸೆಲರ್ ಹುದ್ದೆಯನ್ನು ಕಿತ್ತುಕೊಂಡು ಅದನ್ನು ಮುಖ್ಯಮಂತ್ರ್ರಿಗಳ ತಲೆಗೆ ಕಿರೀಟವಾಗಿಟ್ಟಿತ್ತು! ಅಲ್ಲಿಗೆ ವಿವಿಗಳೆಲ್ಲವೂ ರಾಜಕೀಯ ಅಡ್ಡೆಗಳಾಗಿಬಿಡುತ್ತಿದ್ದವು. ಆದರೆ ಅಂದಿನ ತಮಿಳುನಾಡಿನ ರಾಜ್ಯಪಾಲರು ತಮ್ಮ ಅಂಕಿತಕ್ಕೆ ಬಂದ ಈ ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿಗಳಿಗೆ ವರ್ಗಾಯಿಸಿಬಿಟ್ಟರು. ರಾಷ್ಟ್ರಪತಿಗಳು ಇದು ಅಸಾಂವಿಧಾನಿಕ ಎಂದು ಈ ಸುಗ್ರೀವಾಜ್ಞೆಗೆ ಋಜು ಹಾಕದೆ ಹಿಂತಿರುಗಿಸಿಬಿಟ್ಟರು. ವಿವಿಗಳ ಸ್ವಾಯತ್ತತೆಯನ್ನು ಕಾಪಾಡಿದ್ದರು. ಇದೇ ಪ್ರಯತ್ನ ಹಿಂದೊಮ್ಮೆ ಆಂಧ್ರದಲ್ಲೂ ಆಗಿತ್ತು. ಎನ್.ಟಿ.ರಾಮರಾಯರ ಕಾಲದಲ್ಲಿ ಹೀಗೆ ವಿವಿಗಳಲಿ ತಮ್ಮ ಹಿಡಿತವಿಲ್ಲ ಎಂದು ಯಾರೋ ಕಿವಿ ಕಚ್ಚಿದ್ದನ್ನು ನೆಚ್ಚಿ ಮುಖ್ಯಮಂತ್ರಿಯನ್ನೇ ವಿವಿಗಳ ಕುಲಪತಿಗಳಾಗಿಸುವ ವಿಧೇಯಕವನ್ನು ತರುವ ಉಮ್ಮೇದಿನಲ್ಲಿದ್ದರು ರಾಯರು. ಆದರೆ ಅನೇಕರು ಇದರ ವಿರುದ್ಧ ಸಲಹೆ ನೀಡಿದ್ದರಿಂದ ಈ ಪ್ರಯತ್ನದಿಂದ ಅವರು ವಿರಮಿಸಿಕೊಂಡಿದ್ದರು. ಕರ್ನಾಟಕದಲ್ಲೂ ಇಂಥದೊಂದು ಪ್ರಸಂಗ ನಡೆಯಿತು. ಎಸ್ಸೆಂ. ಕೃಷ್ಣರ ಕಾಲದಲ್ಲಿ ಅವರ ಆಪ್ತೇಷ್ಟರನ್ನು ವಿವಿಯೊಂದರ ಉಪಕುಲಪತಿಗಳಾಗಿ ನೇಮಿಸ ಹೊರಟರು. ಆದರೆ ರಾಜ್ಯಪಾಲರು ಇದನ್ನು ಒಪ್ಪಲಿಲ್ಲ. ಕೆಂಡಾಮಂಡಲರಾದ ಕೃಷ್ಣ ಯೂನಿವಸರ್ಿಟಿ ಆಕ್ಟ್ ಗೆ ಒಂದು ತಿದ್ದುಪಡಿ ತಂದು ಉಪಕುಲಪತಿಗಳ ನೇಮಕವನ್ನು ರಾಜ್ಯಪಾಲರೇ ಮಾಡುತ್ತಾರಾದರೂ But it has to be in concurrence of the state government ಅಂತ ಮಾಡಿಬಿಟ್ಟರು. ಅವತ್ತಿನಿಂದ ಕರ್ನಾಟಕದ ವಿವಿಗಳ ಉಪಕುಲಪತಿಗಳ ನೇಮಕ ರಾಜಕೀಯದಿಂದ ರಾಡಿಯೆದ್ದು ಹೋಗಿದೆ. ಇದು ಬಿಟ್ಟರೆ ವಿವಿಗಳ ಛಾನ್ಸೆಲರ್ ಪದವಿ ವಿವಾದಾಸ್ಪದವಾದದ್ದು ಕಡಿಮೆ. ವಿವಿಯ ಉಪಕುಲಪತಿ, ರಿಜಿಸ್ಟ್ರಾರ್, ಫೈನಾನ್ಸ್ ಆಫೀಸರ್ ಮತ್ತಿತರ ಹುದ್ದೆಗಳಿಗೆ ನಡೆಯುವ ನೇಮಕಾತಿಗಳಲ್ಲಿ ರಾಜಕೀಯ ಹಣ ಎಲ್ಲವೂ ನಡೆಯುತ್ತವೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆಯಾದರೂ ಅವೆಲ್ಲವೂ ಅಂತೆ ಕಂತೆಗಳು, ಬಜಾರ್ ಗಾಸಿಪ್ ಅಷ್ಟೆ. ಎಲ್ಲೂ ಅಂಥದೊಂದು ಪ್ರಕರಣ ಬೆಳಕಿಗೆ ಬಂದು ರಾಡಿಯಾದ್ದಂತಿಲ್ಲ. 

ಒಂದು ಉತ್ತಮ ಆಶಯಕ್ಕಾಗಿ ವಿವಿಗಳನ್ನು ರಾಜ್ಯಪಾಲರ ಮೇಲುಸ್ತುವಾರಡಿಯಲ್ಲಿ ಇರಿಸಲಾಗಿದೆ. ಅದನ್ನು ಅರ್ಥಮಾಡಿಕೊಂಡು ನಮ್ಮ ರಾಜಕಾರಣಿಗಳು ಮತ್ತು ರಾಜ್ಯಪಾಲರೂ ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಮಧ್ಯೆ ಶಶಿಧರ ಪ್ರಸಾದ್ ಅವರ ಪರವಾಗಿ ಅವರ `ಪೂಜ್ಯ ತಂದೆಯವರಾದ ಕರ್ನಾಟಕ ರತ್ನ' ದೇಜಗೌ ಅವರು ತಮ್ಮ ಕಳಂಕಿತ ಪುತ್ರನ ವಿರುದ್ಧ ಕ್ರಮ ತೆಗೆದು ಕೊಳ್ಳಬಾರದು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕೂತಿದಾರೆ. ಇದಕ್ಕೆ ಸರಿಯಾದ ಉತ್ತರ ಕೊಟ್ಟವರು ನಮ್ಮ ಚಂಪಾ ಒಬ್ಬರೇ. ದೇಜಗೌ ಅವರು ಒಂದು ಅನೈತಿಕ ಉದ್ದೇಶಕ್ಕಾಗಿ ನೈತಿಕ ಅಸ್ತ್ರವನ್ನು ಪ್ರಯೋಗಿಸಿ ಚಿಕ್ಕವರಾಗಿದ್ದಾರೆ. - ಚಂಪಾ. ಎಷ್ಟು ನಿಜ ಅಲ್ಲವೇ. ದೊಡ್ಡವರ ಸಣ್ಣತನಗಳು


ಐತಿಹಾಸಿಕ ಮೈಸೂರು ವಿವಿಲಿ ಜಾತಿ ಹಣದ ಗಲೀಜು


ವಿವಿ ವಿಶ್ವದರ್ಶನ ಮಾಲಿಕೆಯನ್ನು ಹಿಂದಿನ ವಾರದಿಂದಷ್ಟೇ ಪ್ರಾರಂಭಿಸಿಲಾಗಿದೆ. ಕರ್ನಾಟಕದ ಎಲ್ಲ 16 ವಿವಿಗಳು ಮತ್ತು ಒಟ್ಟಾರೆಯಾಗಿ ಉನ್ನತ ಶಿಕ್ಷಣ ಕ್ಷೇತ್ರದ ಬಗೆಗೆ ಬೆಳಕು ಚೆಲ್ಲುವ ಈ ಲೇಖನಮಾಲೆಯಲ್ಲಿ ಮೊದಲಿಗೆ ಮೈಸೂರು ವಿಶ್ವವಿದ್ಯಾಲಯವನ್ನು ಕೈಗೆತ್ತಿಕೊಳ್ಳುವುದು ಎಲ್ಲ ರೀತಿಯಲ್ಲಿಯೂ ಸೂಕ್ತ.

ಮೈಸೂರು ವಿವಿಗೆ ಒಂದು ದೈತ್ಯ ಇತಿಹಾಸವಿದೆ. ಮೈಸೂರು ವಿಶ್ವವಿದ್ಯಾಲಯ ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ. ಭಾರತದ 6ನೇ ವಿಶ್ವವಿದ್ಯಾಲಯ. ಅದು 1916 ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಳ್ವಿಕೆ ನಡೆಸುತ್ತಿದ್ದ ಕಾಲ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಸುವರ್ಣಯುಗ. ಅಂದಿನ ಮೈಸೂರು ಸಂಸ್ಥಾನದ ಪ್ರಖ್ಯಾತ ಶಿಕ್ಷಣ ತಜ್ಞರಾದಂಥ ಸಿ.ಆರ್.ರೆಡ್ಡಿ ಮತ್ತು ಡೆನಹ್ಯಾಮ್ ಎಂಬುವವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶ್ವದಾದ್ಯಂತ ಉನ್ನತ ಶಿಕ್ಷಣವನ್ನು ಅಭ್ಯಸಿಸಿ ವರದಿ ಸಲ್ಲಿಸಲು ನೇಮಿಸುತ್ತಾರೆ. ಇವರೀರ್ವರೂ 5 ವರ್ಷಗಳ ಕಾಲ ವಿಶ್ವದಾದ್ಯಂತ ಸಂಚರಿಸಿ ಕೇಂಬ್ರಿಡ್ಜ್, ಆಕ್ಸ್ಫಾರ್ಡ್, ವಿಸ್ಕಿನ್ಸನ್, ಚಿಕಾಗೋ ಮತ್ತಿತರ ಯೂನಿವರ್ಸಿಟಿಗಳನ್ನು ಅಭ್ಯಸಿಸಿ ತಮ್ಮ ವರದಿ ಸಲ್ಲಿಸುತ್ತಾರೆ. ಈ ವರದಿಯ ಆಧಾರದ ಮೇಲೆ ಜುಲೈ 16, 1916ರಂದು ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಜುಲೈ 17ರಂದು ಮೈಸೂರಿನ ವಿಧಾನಸಭಾದಲ್ಲಿ ನಿರ್ಣಯವನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇಡಿಯ ಮೈಸೂರು ಸಂಸ್ಥಾನಕ್ಕೆ ಈ ವಿಶ್ವವಿದ್ಯಾಲಯ. ಇದು ಅಂದಿನ ಭಾರತದಲ್ಲಿ ಬ್ರಿಟಿಷ್ ವ್ಯವಸ್ಥೆಯ ಹೊರಗೆ ನಿಂತ ಮೊದಲ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯದ ಸ್ಥಾಪನೆಯ ಹಿಂದೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಕನಸು ಮತ್ತು ಶ್ರಮ ಕೂಡ ಅಡಗಿತ್ತು.

1956ರಲ್ಲಿ ಕರ್ನಾಟಕ ಏಕೀಕರಣದ ನಂತರ ಮೈಸೂರು ವಿವಿಯನ್ನು ಸ್ವಾಯತ್ತ ಸಂಸ್ಥೆಯಾಗಿ ಘೋಷಿಸಲಾಯಿತು. ಇದೇ ವರ್ಷ ರಾಷ್ಟ್ರಕವಿ ಕುವೆಂಪು ಅವರು ವಿವಿಯ ಉಪಕುಲಪತಿಗಳಾಗಿ ಬಂದರು. ಕುಕ್ಕರಳ್ಳಿ ಕೆರೆಯ ಬದಿಯಲ್ಲಿ 739 ಎಕರೆಗಳ ವಿಸ್ತೀರ್ಣದಲ್ಲಿ ಅದ್ಭುತವಾದ ಕ್ಯಾಂಪಸ್ಸನ್ನು ನಿರ್ಮಿಸಲಾಯಿತು. ಅದಕ್ಕೆ ಕುವೆಂಪು ಅವರು ಮಾನಸಗಂಗೋತ್ರಿ ಎಂದು ಹೆಸರಿಟ್ಟರು. 1964ರಲ್ಲಿ ಸೆಂಟ್ರಲ್ ಕಾಲೇಜ್ ಕೇಂದ್ರಿತವಾಗಿ ಬೆಂಗಳೂರು ವಿಶ್ವವಿದ್ಯಾಲಯವನ್ನು, 1980ರಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನೂ 1987ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವನ್ನೂ, 1996ರಲ್ಲಿ ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿಯನ್ನೂ carve out ಮಾಡಲಾಯಿತು. ಹಾಗೆ ನೋಡಿದರೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗೆ ತಾಯಿಯಂಥದು ಮೈಸೂರು ವಿಶ್ವವಿದ್ಯಾಲಯ. ಮೈಸೂರು ವಿವಿಯ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ ಅಲ್ಲಿ ಕಾರ್ಯ ನಿರ್ವಹಿಸಿದ ಮಹಾಮಹಿಮರು ಅನೇಕ. ಅತ್ಯುತ್ತಮ ಶಿಕ್ಷಕ ಎಂದೇ ಖ್ಯಾತರಾಗಿದ್ದ ಭಾರತದ ಮೊದಲ ಉಪರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್, ಆರ್.ಕೆ.ನಾರಾಯಣ್, ಕುವೆಂಪು ಅವರಂಥವರು ಪಾಠ ಮಾಡಿದ ಜಾಗೆಯಿದು. ಇವತ್ತಿನ ಮಟ್ಟಿಗೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳು ಬರುತ್ತವೆ. ಸದ್ಯ ಮೈಸುರು ವಿವಿಯಡಿಯಲ್ಲಿ  122 affiliated colleges, 5 Constituent Colleges, (with an aggregate of 53,000 students), 37 post graduate departments, 8 specialised research & training centres and 2 post graduate centres 55 regular academic programs ಬರುತ್ತವೆ ಎಂದು ಸಾರುತ್ತದೆ ಮೈಸೂರು ವಿವಿಯ ವೆಬ್ಸೈಟು. ನ್ಯಾಕ್ ತಂಡದಿಂದ 5 ಸ್ಟಾರ್ ಎಂದು ಅಕ್ರೆಡಿಟ್ ಆಗಿರುವ ಯೂನಿವರ್ಸಿಟಿ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತದೆ. ಸದ್ಯ ಮೈಸುರು ವಿವಿಯಲ್ಲಿಯೇ ಲೈಬ್ರರಿ ಸೈನ್ಸಸ್ ಪ್ರೊಫೆಸರ್ ಆಗಿ ಸುದೀರ್ಘ ಸೇವೆ ಸಲ್ಲಿಸಿರುವ ಈ ಹಿಂದೆ ರಿಜಿಸ್ಟ್ರಾರ್ ಕೂಡ ಆಗಿದ್ದ ಪ್ರೊ..ವಿ.ಜಿ.ತಳವಾರ್ ಅವರು ಉಪಕುಲಪತಿಗಳಾಗಿದ್ದು, ಪ್ರೊ.ಪಿ.ಎಸ್.ನಾಯಕ್ ಅವರು ರಿಜಿಸ್ಟ್ರಾರ್ ಆಡಳಿತ ಮತ್ತು ಬಿ.ರಾಮು ರಿಜಿಸ್ಟ್ರಾರ್ ಇವಾಲ್ಯುಏಷನ್ ಆಗಿದ್ದಾರೆ. ಒಂದು ಕಾಲಕ್ಕೆ centre for academic excellence ಎಂದೇ ಖ್ಯಾತವಾಗಿದ್ದದು ಮೈಸೂರು ವಿಶ್ವವಿದ್ಯಾಲಯ. ಇಂದೂ ಕೂಡ ಅದು ಹಾಗೆಯೇ ಉಳಿದಿದೆಯೇ? ಮೈಸೂರಿಗರು ಕೇಳಿದರೆ ನಕ್ಕುಬಿಟ್ಟಾರು. ನೆನಪಿರಲಿ ಅದು ವಿಷಾದದ ನಗು.

ಮೈಸೂರು ವಿವಿಯಲ್ಲಿ ಮೊದಲಿನಿಂದಲೂ ಕೆಟ್ಟ ಜಾತಿ ರಾಜಕಾರಣ. ಯಾವ ಮಟ್ಟದಲ್ಲೆಂದರೆ ಇಲ್ಲಿ ಆಡಳಿತ ವರ್ಗ, ಬೋಧಕ ವರ್ಗ ಮತ್ತು ಬೋಧಕೇತರ ವರ್ಗಗಳಲ್ಲಿ ಪ್ರತಿ ಜಾತಿಗೊಂದು ಗುಂಪಿದೆ. ಸಹಜವಾಗಿಯೇ ತಿಕ್ಕಾಟಗಳು, ಮೇಲಾಟಗಳೂ ಸಹ ಇವೆ. ಕರ್ನಾಟಕದ ಅಷ್ಟೇ ಏಕೆ ಭಾರತದ ಎಲ್ಲ ವಿವಿಗಳ ಗೋಳೂ ಇದೆ. ಆದರೆ ಮೈಸೂರು ವಿವಿಯಲ್ಲಿ ಇದು ತೀರಾ ಕೆಳಮಟ್ಟದವರೆಗೂ ತಲುಪಿ ಬಿಟ್ಟಿದೆ ಮತ್ತು ಇದು ಈಗಿನ ಬೆಳವಣಿಗೆಯಲ್ಲ, ಹಲವಾರು ದಶಕಗಳಿಂದ ಇದು ನಡೆದುಕೊಂಡು ಬಂದಿದೆ. ಒಂದು ಕಾಲಕ್ಕೆ ಮೈಸೂರು ವಿವಿಯನ್ನು ಒಕ್ಕಲಿಗರ ವಿವಿ ಎಂದು ಗುರುತಿಸುತ್ತಿದ್ದರಂತೆ! ವಿವಿ ಉಪಕುಲಪತಿಗಳು ರಿಜಿಸ್ಟ್ರಾರ್ಗಳ ನೇಮಕಾತಿಯಿಂದ ಹಿಡಿದು ಸಿಬ್ಬಂದಿ ನೇಮಕ ಮತ್ತು ವಿವಿಯ ದೈನಂದಿನ ಕಾರ್ಯಚಟುವಟಿಕೆಗಳನ್ನೂ ಕೂಡ ನಿರ್ಧರಿಸುವುದು ಜಾತಿ ಮತ್ತು ಜಾತಿ ಮಾತ್ರ. ಸದ್ಯ ಒಕ್ಕಲಿಗರು ಮತ್ತು ಹಿಂದುಳಿದ ವರ್ಗಗಳ ಗುಂಪುಗಳು ಪ್ರಬಲವಾಗಿವೆ.

ಇದೇ ಕೋವಿನಲ್ಲಿ ಇತ್ತೀಚೆಗೆ ಮೈಸೂರು ವಿವಿಯಲ್ಲಿ ನಡೆದ ಅತ್ಯಂತ ದೊಡ್ಡ ಹಗರಣ ಮತ್ತು ಅದರ ಸುತ್ತ ಹಬ್ಬಿರುವ ವಿವಾದವನ್ನು ಗಮನಿಸಿಬಿಟ್ಟರೆ ಮೈಸೂರು ವಿವಿಯಷ್ಟೇ ಅಲ್ಲ ನಮ್ಮ ಇತರ ವಿವಿಗಳ ಸ್ಥಿತಿಗತಿಗಳ ಬಗ್ಗೆ ನಿಮಗೆ ಒಂದು ಚಿತ್ರ ಮೂಡಿಬಿಡುತ್ತದೆ. ನೀವು ಕೇಳೇ ಇರಬಹುದು. ಪ್ರೊ.ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕೆಂದು ಸರ್ಕಾರ ಹೇಳಿದ್ದರೆ, ವಿವಿಗಳ ಕುಲಪತಿ ರಾಜ್ಯಪಾಲ ಭಾರಧ್ವಾಜ್ ಅವರು ಇದನ್ನು ತಳ್ಳಿ ಹಾಕಿ ಶಶಿಧರ ಪ್ರಸಾದ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು. ಅಸಲಿಗೆ ಏನಿದು ಗಲಾಟೆ? ಎಂದು ಕೆದಕುತ್ತಾ ಹೋದರೆ ಐತಿಹಾಸಿಕ ಮೈಸೂರು ವಿವಿಯಲ್ಲಿ ಸಿಗುವುದು ಜಾತಿ ಮತ್ತು ಹಣದ ಗಲೀಜು! ಈಗ ಪ್ರೊ.ತಳವಾರ್ ಅವರು ಉಪಕುಲಪತಿಗಳಾಗಿದ್ದಾರಲ್ಲ, ಅವರ ಹಿಂದೆ ಉಪಕುಲಪತಿಗಳಾಗಿದ್ದವರು ಅದೇ ವಿವಿಯ ಫಿಸಿಕ್ಸ್ ವಿಭಾಗದ ಹಿರಿಯ ಪ್ರೊಫೆಸರ್ ಆದ ಪ್ರೊ. ಶಶಿಧರ ಪ್ರಸಾದ್ ಅವರು. ಇವರು ಕನ್ನಡದ ಹಿರಿಯ ಸಾಹಿತಿ ದೇ. ಜವರೇ ಗೌಡ ಅವರ ಮಗ. ನೆನಪಿರಲಿ ದೇಜಗೌ ಅವರು ಕೂಡ ಮೈಸೂರು ವಿವಿಯ ಉಪಕುಲಪತಿಗಳಾಗಿದ್ದವರು. ಅವರ ಕಾಲದಲ್ಲಿ ಅತ್ಯಂತ ಪ್ರೊಲಿಫಿಕ್ ಆಗಿ ಜಾತೀಯತೆ ನಡೆಸಿದವರು, ಒಕ್ಕಲಿಗರನ್ನು ಅನವಶ್ಯಕವಾಗಿ ಪ್ರೋತ್ಸಾಹಿಸಿದವರು ಎಂಬ ಆರೋಪ ಹೊತ್ತವರು. ಅವರ ಕಾಲದಲ್ಲಿ ಅನೇಕ ಒಕ್ಕಲಿಗರನ್ನು ವಿವಿಗೆ ತುಂಬಿದರು ಎಂದೂ ಹೇಳುವವರಿದ್ದಾರೆ. ಅವರೆಲ್ಲರೂ ಈಗ ನಿವೃತ್ತಿಯಂಚಿನಲ್ಲಿರಬಹುದು, ಇಲ್ಲ ಕೆಲವರು ನಿವೃತ್ತಿಯಾಗಿರಬಹುದು. ಅಷ್ಟರಲ್ಲಿ ಅವರ ಮಗ ಪ್ರೊ. ಶಶಿಧರ ಪ್ರಶಾದ್ ಅವರು ವಿವಿ ಉಪಕುಲಪತಿಗಳಾದರು. ಆ ಜಾಗಗಳಿಗೆ ಮತ್ತೆ ಕುಲಬಾಂಧವರನ್ನು ತುಂಬಿದರು!

ಯಾವುದೇ ಸರಕಾರೀ ನೇಮಕಾತಿಯಲ್ಲಿ ನಮಗೆಲ್ಲರಿಗೂ ಅರಿವಿರುವಂತೆ ಮೀಸಲಾತಿಯಿರುತ್ತದೆ. ಅದು ಸಾಂವಿಧಾನಿಕ ಮತ್ತು ಅದನ್ನು ಪಾಲಿಸತಕ್ಕದ್ದು ಎಲ್ಲರ ಕರ್ತವ್ಯ. ಅಕಸ್ಮಾತ್ ಮೀಸಲಾದ ಪಂಗಡದವರು ಆ ಹುದ್ದೆಗೆ ಯಾರೂ ಬರಲಿಲ್ಲವೆಂದರೆ ಅದು ಮತ್ಯಾವ ವರ್ಗಕ್ಕೆ ಹೋಗಬೇಕು ಎಂಬುದೂ ಕೂಡ ಸ್ಪಷ್ಟವಿದೆ. ಇದನ್ನು ರೂಸ್ಟರ್ ಸಿಸ್ಟಮ್ ಎಂದು ಕರೆಯುತ್ತಾರೆ. ಸನ್ಮಾನ್ಯ ಶಶಿಧರ ಪ್ರಶಾದ್ ಅವರು ಉಪಕುಲಪತಿಗಳಾಗಿದ್ದಾಗ 169 ಹುದ್ದೆಗಳಿಗೆ ನೇಮಕಾತಿ ಆಗಿದೆ. ಈ ನೇಮಕಾತಿಯಲ್ಲಿ ಈ ರೂಸ್ಟರ್ ಸಿಸ್ಟಮ್ ಅನ್ನು ಪಾಲಿಸೇ ಇಲ್ಲ. ಹಾಗಾಗಿ ಮೀಸಲಾತಿಗೆ ಸಿಗಬೇಕಿದ್ದ ಹುದ್ದೆಗಳೆಲ್ಲವೂ ಉಪಕುಲಪತಿಗಳು ಕುಲಬಾಂಧವರಿಗೆ ತಾಂಬೂಲವಾಗಿದೆ. ಈ ನೇಮಕಾತಿಯಲ್ಲಿ ಹಣದ ಪ್ರಭಾವ ಕೂಡ ಎಗ್ಗುಸಿಗ್ಗಲ್ಲದೆ ನಡೆದು ಹೋಗಿದೆ. ಮೈಸೂರು ವಿವಿ ಅಧ್ಯಾಪಕರ ಒಕ್ಕೂಟ ಈ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಹೈಕೋರ್ಟ್ಗೆ ಮೊರೆ ಹೋದರು. ಕೂಡಲೇ ಸರ್ಕಾರ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಅದೇಶಿಸಿದ್ದರು. ರಂಗವಿಠಲಾಚಾರ್ ಅವರು ವರದಿ ಸಲ್ಲಿಸಿದ್ದು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ irregularity ಗಳಿರುವುದಾಗಿಯೂ ಹೇಳಿದ್ದಾರಲ್ಲದೆ, ಪ್ರೊ.ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆಯೂ ಈ ನೇಮಕಾತಿಯನ್ನು ಅಸಿಂಧುಗೊಳಿಸಬೇಕೆಂದೂ ಶಿಫಾರಸು ಮಾಡಿದ್ದಾರೆ. ಯಡಿಯೂರಪ್ಪನವರು ಈ ವರದಿಯನ್ನು ಕ್ಯಾಬಿನೆಟ್ಟಿನಲ್ಲಿಟ್ಟು ಒಪ್ಪಿಗೆ ಪಡೆದುಕೊಂಡರು. ಮೈಸೂರು ವಿವಿಯ ಆಡಳಿತ ವರ್ಗಕ್ಕೆ ಪ್ರೊ.ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಸೂಚಿಸಲಾಯಿತು. ಆಗ ಶುರುವಾಯಿತು ನೋಡಿ ದೊಡ್ಡ ಸರ್ಕಸ್. ಅಲ್ಲಿ ತಮ್ಮ ಮಗನನ್ನು ಕಾಪಾಡಿಕೋಳ್ಳಲು ಧಿಗ್ಗನೆ ಎದ್ದು ಕೂತರು ವೃದ್ಧ ದೇಜಗೌ. ಎಲ್ಲ ಒಕ್ಕಲಿಗ ನಾಯಕರ ಮನೆ ಬಾಗಿಲು ತಟ್ಟುತ್ತಾ ಹೋದರು. ಎಸ್ಸೆಂ.ಕೃಷ್ಣ, ದೇವೇಗೌಡ ಎಲ್ಲರೂ ಆದರು. ಕಡೆಗೆ ವೀರಪ್ಪ ಮೊಯಿಲಿ ಅವರ ಬಳಿಯೂ ಹೋಗಿದ್ದರು ಎಂಬ ಮಾತಿದೆ. ಅಂತೂ ಮಗನನ್ನು ಉಳಿಸಿಕೊಳ್ಳಲು ಶತಪ್ರಯತ್ನವನ್ನೇ ನಡೆಸುತ್ತಿದ್ದರು.

ಅವರ ಈ ಪ್ರಯತ್ನ ಸಫಲವಾಗುವವರೆಗೆ ಶಶಿಧರ ಪ್ರಸಾದ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ತಡೆಯಬೇಕಿತ್ತು. ಅವರಿಗೆ ಆ ಕುರಿತು ಅಷ್ಟಾಗಿ ಯೋಚನೆ ಇರಲಿಲ್ಲ. ವಿವಿಯ ಹಾಲಿ ಉಪಕುಲಪತಿಗಳಾದ ಪ್ರೊ.ವಿ.ಜಿ.ತಳವಾರ್ ಅವರು ಅದನ್ನು ಹೇಳದಯೇ ಶಿರಸಾ ವಹಿಸಿ ನಡೆಸಿಕೊಟ್ಟಿದ್ದರು. ಜೂನ್ 14, 2010ಕ್ಕೆ ನಿಗದಿಯಾಗಿದ್ದ ಸಿಂಡಿಕೇಟ್ ಸಭೆಯನ್ನು ಯಾವುದೇ ಕಾರಣ ಕೂಡ ನೀಡದೇ 18ಕ್ಕೆ ಮುಂದೂಡಿದರು. 18 ಬರುತ್ತಿದ್ದಂತೆಯೇ ಮತ್ತೆ 24ಕ್ಕೆ ಮುಂದೂಡಿಬಿಟ್ಟರು. ಅಷ್ಟರೊಳಗೆ ಆಗಬೇಕಾದ್ದು ಆಗಿ ಹೋಗಿತ್ತು. ಹಾಲಿ ಉಪಕುಲಪತಿಗಳಾದ ಪ್ರೊ.ವಿ.ಜಿ.ತಳವಾರ್ ಅವರು ಯಾಕೆ ಶಶಿಧರ ಪ್ರಸಾದ್ ಅವರನ್ನು ರಕ್ಷಿಸಲು ಆ ಪರಿ ಉತ್ಸುಕತೆ ತೋರಿದರು? ಯಾಕೆಂದರೆ ಶಶಿಧರ ಪ್ರಸಾದ್ ಅವರ ವಿರುದ್ಧ ಕೇಸು ಬಿದ್ದರೆ, ಅವರ ಜೊತೆಯಲ್ಲಿ ತಳವಾರ್ ಅವರೂ ಜೈಲಿಗೆ ಹೋಗಬೇಕಾಗುತ್ತದೆ! ಹೌದು ಪ್ರೊ.ವಿ.ಜಿ.ತಳವಾರ್ ಅವರು ಪ್ರೊ.ಶಶಿಧರ ಪ್ರಸಾದ್ ಅವರ ಕಾಲದಲ್ಲಿ ವಿವಿಯ ರಿಜಿಸ್ಟ್ರಾರ್ ಆಗಿದ್ದರು, ಸಿಂಡಿಕೇಟ್ ಸದಸ್ಯರಾಗಿದ್ದರು ಮತ್ತೂ ಮುಖ್ಯವಾಗಿ ಈ ನೇಮಕಾತಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಅವರೂ ಏನು ಗಾಂಧಿ ಅಲ್ಲ. ಶಶಿಧರ ಪ್ರಸಾದ್ ಅವರ ಮೇಲೆ ಅದಕ್ಕೇ ಅಷ್ಟು ಕಕ್ಕುಲಾತಿ.

ಈಗಿರುವ ಸುದ್ದಿಯ ಪ್ರಕಾರ ದೇಜಗೌ ಅವರು ಸತ್ಯ ಸಾಯಿಬಾಬಾ ಅವರಿಂದ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರಿಗೆ ಫೋನು ಮಾಡಿಸಿದ್ದಾರೆ. ಅಲ್ಲಿಗೆ ಪ್ರೊ.ಶಶಿಧರ ಪ್ರಸಾದ ಅವರು ಬಚಾವ್! ರಾಜ್ಯಪಾಲರು ಎಲ್ಲ ವಿವಿಗಳ ಕುಲಪತಿಗಳು. ಅವರು ಜೂನ್ 24ರಂದು ಶಶಿಧರ ಪ್ರಸಾದ್ ಅವರ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆ ಕೊಟ್ಟಿದ್ದಾರೆ. ಇದೇ ವಿಚಾರವಾಗಿ ಜುಲೈ 14, 2010ರಂದು ಒಮದು ಪತ್ರ ಬರೆದಿದ್ದಾರೆ. ಅದರಲ್ಲಿ ಅವರ ಕ್ರಮವನ್ನು ಈ ರೀತಿ ಸಮಥರ್ಿಸಿಕೊಂಡಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯ ಅಧಿನಿಯಮ 2000, ಸೆಕ್ಷನ್ 8ರ ಪ್ರಕಾರ ಯಾವುದೇ ವಿವಿಯ ವಿಶ್ರಾಂತ ಉಪಕುಲಪತಿಗಳ ವಿರುದ್ಧ ಕ್ರಿಮಿನಲ್ ಕೇಸು ಹೂಡುವಂತಿಲ್ಲ! ಅಷ್ಟೇ ಅಲ್ಲ ಇನ್ನೂ ಮುಂದುವರೆದು ಅವರು ಸೆಕ್ಷನ್ 53(6)ರಡಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳೂ ಸಿಂಧುವಾಗಿದೆ ಎಂದು ಶರಾ ಬರೆದುಬಿಟ್ಟಿದ್ದಾರೆ. ಅಲ್ಲಿಗೆ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ವರದಿ ಕಸದ ಬುಟ್ಟಿ ಸೇರಿದೆ. ಮೈಸೂರು ವಿವಿಯಲ್ಲಿ ನಡೆದ ಅಖಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾನೂನು ಬಾಹಿರ ನೇಮಕಾತಿ, ಹಿಂದುಳಿದ ವರ್ಗಗಳಿಗೆ ನಡೆದ ಅನ್ಯಯ ಎಲ್ಲಕ್ಕೂ ರಾಜ್ಯಪಾಲರ ಮೊಹರು ಬಿದ್ದಾಗಿದೆ.

ವಿದ್ಯಾದೇಗುಲಗಳು ಹೊಲಸೆದ್ದು ಹೋದಾಗ...

ಇಂದು ಪ್ರತಿ ಹತ್ತು ಭಾರತೀಯ ವಿದ್ಯಾರ್ಥಿಗಳಲಿ ಒಬ್ಬ ಮಾತ್ರ ಯೂನಿವರ್ಸಿಟಿಯ ಮೆಟ್ಟಿಲು ಹತ್ತುತ್ತಿದ್ದಾನೆ. ಆದರೂ ಭಾರತೀಯ ವಿಶ್ವವಿದ್ಯಾಲಯ ವ್ಯವಸ್ಥೆ ಇಡಿಯ ವಿಶ್ವದಲ್ಲೇ ಮೂರನೇ ಅತಿ ದೊಡ್ಡದು. ಮೊದಲಿಗೆ ಚೈನಾ, ನಂತರ ಅಮೆರಿಕಾ, ನಂತರ ಭಾರತವೇ. ಒಂದು ದೇಶ ಕಟ್ಟುವ ಕೆಲಸಕ್ಕೆ ಅಡಿಪಾಯ ಬೀಳುವುದು ಅಲ್ಲಿನ ಯೂನಿವರ್ಸಿಟಿಗಳಲ್ಲಿ. ಯೂನಿವರ್ಸಿಟಿಗಳಿಗೆ ವಿಶ್ವವಿದ್ಯಾಲಯಗಳು ಎಂಬ ಪದ ಬಳಸುತ್ತೇವೆ. ಅದು ವಿಶ್ವದ ವಿದ್ಯಾ ಆಲಯಗಳು - ವಿದ್ಯಾ ದೇಗುಲಗಳು. ಜ್ಞಾನ ಮತ್ತು ವಿದ್ಯೆಯ ವಿಷಯದಲ್ಲಿ ಭಾರತಕ್ಕೆ ಒಂದು ಭವ್ಯ ಪರಂಪರೆಯಿದೆ. ತಕ್ಷಶಿಲಾ ಮತ್ತು ನಳಂದಾ ವಿಶ್ವವಿದ್ಯಾಲಯ ಪ್ರಾಚೀನ ಕಾಲದಲ್ಲೇ ನಿಜಕ್ಕೂ ಜಾಗತಿಕ ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸಿ ಹೆಸರು ಮಾಡಿದಂಥವು. ಒಂದು ವಿಶ್ವವಿದ್ಯಾಲಯ ಹೇಗಿರಬೇಕೆಂಬುದನ್ನು ಅರಿಯಬೇಕಾದರೆ ನೀವು ಹುಯೆನ್ ತ್ಸಾಂಗ್ನ ಬರಹಗಳನ್ನು ಓದಬೇಕು. ವಿಶೇಷವಾಗಿ ಆತ ನಳಂದಾ ವಿಶ್ವವಿದ್ಯಾಲಯದ ಬಗ್ಗೆ ಬರೆದಿರುವುದನ್ನು. ಆದರೆ ಇಂದೇನಾಗಿದೆ? ನಮ್ಮ ವಿಶ್ವವಿದ್ಯಾಲಯಗಳು ನಿಜಕ್ಕೂ ವಿದ್ಯಾ ದೇಗುಲಗಳಾಗಿ ಉಳಿದಿವೆಯೇ? ಇಲ್ಲ ಖಂಡಿತವಾಗಿಯೂ ಇಲ್ಲ. ಭಾರತ 2020ರೊಳಗೆ ಸೂಪರ್ ಪವರ್ ಆಗಬೇಕೆಂದು, ಆಗೇ ಬಿಡುತ್ತದೆಂದೂ ಬಡಾಯಿ ಕೊಚ್ಚಿಕೊಳ್ಳುವವರು ಮೊದಲು ಇಂದು ನಮ್ಮ ಯೂನಿವರ್ಸಿಟಿ ಶಿಕ್ಷಣದೆಡೆಗೆ ಒಮ್ಮೆಯಾದರೂ ಕಣ್ಣಾಡಿಸಲಿ. ವಿದ್ಯಾ ದೇಗುಲಗಳಾಗಬೇಕಾದವು ಹೇಗೆ ಹೊಲಸೆದ್ದು ನಾರುತ್ತಿವೆ ಎಂಬುದು ಅರ್ಥವಾದೀತು.

ಇಂದು ನಮ್ಮ ಯೂನಿವರ್ಸಿಟಿಗಳಲ್ಲಿ ಪ್ರತಿ ಹಂತದಲ್ಲೂ ಹಲವಾರು ಸಮಸ್ಯೆಗಳಿವೆ, ತಳಮಟ್ಟದಿಂದ ಉಛ್ರಾಯದವರೆಗೆ. ಎಲ್ಲಿಂದ ಶುರುವಿಟ್ಟುಕೊಳ್ಳುವುದೆಂಬುದೇ ಗೊಂದಲ ಅಷ್ಟು ಸಮಸ್ಯೆಗಳು! ಇಂದಿನ ವಿವಿಗಳಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷಗಳಿಲ್ಲ ಅಷ್ಟೆ, ಆದರೆ ಭಾರತದ ಪ್ರತಿಯೊಂದು ವಿವಿಯಲ್ಲೂ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿದೆ. ಅಲ್ಲಿನವರು ಪಕ್ಷನಿಷ್ಠೆಯಂತೆ ಹರಿದು ಹಂಚಿ ಹೋಗಿದ್ದಾರೆ. ಇಂದಿನ ನಮ್ಮ ವಿವಿಗಳನ್ನು ಪಕ್ಷ ರಾಜಕೀಯಕ್ಕಿಂತಲೂ ಕಾಡುತ್ತಿರುವುದು ಅತ್ಯಂತ ಕೆಟ್ಟ ಜಾತಿ ರಾಜಕಾರಣ. ಭವ್ಯ ಭಾರತದ ಎಲ್ಲಾ ವಿವಿಗಳಲ್ಲೂ ವಿದ್ಯಾಥರ್ಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಹೀಗೆ ಮೂರು ಹಂತಗಳಲ್ಲಿ ಜಾತೀವಾರು ಗುಂಪುಗಳಿವೆ, ಮತ್ತು ಸಾಧಾರಣವಾಗಿ ಘರ್ಷಣೆಗಳಿವೆ. ಇನ್ನು ವಿವಿಗಳ ಆಡಳಿತ ವರ್ಗ, ಯಾರು ತಮ್ಮ ಜೀವಮಾನದಲ್ಲೇ ನೆಟ್ಟಗೆ ಪಾಠ ಮಾಡಿಲ್ಲವೋ ಅವರೆಲ್ಲರೂ ಕಡೆಗೆ ವಿವಿ ಆಡಳಿತಗಾರರಾಗುತ್ತಿದ್ದಾರೆ! ಅವರಿಗೆ ರಾಜಕೀಯ ಮತ್ತು ಜಾತಿ ಬೆಂಬಲವಿರುತ್ತದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ನಮ್ಮ ಯೂನಿವರ್ಸಿಟಿಗಳದ್ದು ಸರಕಾರೀ ಸಂಸ್ಥೆಯೂ ಅಲ್ಲದ ಹಾಗಂತ ಸ್ವಾಯತ್ತತೆಯೂ ಇಲ್ಲದ ಪರಮ ಇಕ್ಕಟ್ಟು ಪರಿಸ್ಥಿತಿ. ಯೂನಿವರ್ಸಿಟಿಯ ಆಡಳಿತ ವ್ಯವಸ್ಥೆಯಲ್ಲಿನ ಪ್ರತಿಯೊಂದು ನೇಮಕವೂ ರಾಜಕೀಯ ನೇಮಕಾತಿಯೇ ಸರಿ. ಅದು ರಿಜಿಸ್ಟ್ರಾರ್ಗಳಿರಬಹುದು, ಉಪಕುಲಪತಿಗಳೇ ಇರಬಹುದು, ಎಲ್ಲರದೂ ರಾಜಕೀಯ ನೇಮಕಾತಿಯೇ, ಎಲ್ಲರೂ ಒಂದಿಲ್ಲೊಂದು ಜಾತಿ ಲಾಬಿಯನ್ನು ಬೆನ್ನಿಗಿಟ್ಟುಕೊಂಡಿರುವವರೇ. ಅತ್ಯುತ್ತಮ ಉದಾಹರಣೆಯೆಂದರೆ ಬೆಂಗಳೂರು ವಿವಿ. ಬೆಂ.ವಿವಿಯ ಕರ್ಮಕಾಂಡಗಳನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಿಂಡಿಕೇಟ್ ಎನ್ನುವುದು ಕಳ್ಳರ ಸಂತೆಯೇ ಆಗಿದೆ. ಪರಿಸ್ಥಿತಿ ಇಷ್ಟು ಹೊಲಸೆದ್ದು ಹೋಗಿರುವಾಗ ಬರುವ ಎಲ್ಲ ಸಮಸ್ಯೆಗಳೂ ನಮ್ಮಲ್ಲಿವೆ. ಮೊದಲಿಗೆ ಹೊಣೆಗೇಡಿತನ. ಮೊನ್ನೆ ಕುವೆಂಪು ವಿವಿಯಲ್ಲಿ ವರ್ಷವೆಲ್ಲಾ ಹುಡುಗರು ಕಷ್ಟ ಪಟ್ಟು ಓದಿ, ಪರೀಕ್ಷೆ ಬರೆದರೆ, ಆ ಉತ್ತರ ಪತ್ರಿಕೆಗಳು ಇವ್ಯಾಲ್ಯುಯೇಷನ್ಗೆ ಮುಂಚಿತವಾಗಿಯೇ `ಆಕಸ್ಮಿಕ'ವೊಂದರಲ್ಲಿ ಅಗ್ನಿಗೆ ಆಹುತಿಯಾಗಿದೆ! ಮತ್ತೂ ಆಶ್ಚರ್ಯವೆಂದರೆ ಇದರ ಜವಾಬ್ದಾರಿಯನ್ನು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ ಮಾತ್ರವಲ್ಲ, ಕೆಳಮಟ್ಟದ ಅಧಿಕಾರಿಗಳ ವಿರುದ್ಧ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ! ಅದು ಸಾಧ್ಯವಿಲ್ಲ ಬಿಡಿ, ಕ್ರಮ ಕೈಗೊಂಡರೆ ಅವರೇ ಅಲ್ಲಿರುವುದಿಲ್ಲ, ಹಾಗಿರುತ್ತದೆ ಅಲ್ಲಿನ ಪರಿಸ್ಥಿತಿ! ಇನ್ನು ನಮ್ಮ ವಿವಿಗಳನ್ನಷ್ಟೇ ಏಕೆ ಇಡೀ ವ್ಯವಸ್ಥೆಯನ್ನು ಪೀಡಿಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ವಿಶ್ವವಿದ್ಯಾಲಯಗಳೆಂದರೆ ವಿದ್ಯಾದೇಗುಲಗಳು ಜ್ಞಾನಾರ್ಜನೆಯ ಕೇಂದ್ರಗಳು ಎಂದೇ ಜನರು ಭಾವಿಸುತ್ತಾರೆ. ಆದರೆ ಇಂದು ನಮ್ಮ ಯೂನಿವರ್ಸಿಟಿಗಳಲ್ಲಿ ನಡೆಯುತ್ತಿರುವುದು ಅಖಂಡ ಭ್ರಷ್ಟಾಚಾರ. ನಮ್ಮ ಯೂನಿವರ್ಸಿಟಿಗಳ ಪರೀಕ್ಷಾ ವಿಭಾಗವೆಂಬುದು ಶುದ್ಧ ಭ್ರಷ್ಟಾಚಾರದ ಅಡ್ಡೆ. ಇಷ್ಟೇ ಅಲ್ಲ ಕಾಲೇಜುಗಳ ಅಕ್ರೆಡಿಷನ್, ಅಫಿಲಿಯೇಷನ್, ಗ್ರಾಂಟ್ಸು...ಎಲ್ಲದರಲ್ಲೂ ಭ್ರಷ್ಟಾಚಾರ. ಅಸಲಿಗೆ ವಿವಿ ಕುಲಪತಿಗಳ ನೇಮಕಕ್ಕೇ ದುಡ್ಡು ನಡೆಯುತ್ತದೆ ಎಂಬ ಗುಸುಗುಸು ನಡೆಯುತ್ತದೆ ಎಂದರೆ ವಿವಿಗಳಲ್ಲಿರುವ ಭ್ರಷ್ಟಾಚಾರದ ಮಟ್ಟ ಎಂತಹುದೆನ್ನುವುದು ನಿಮಗೆ ಅರ್ಥವಾಗಬೇಕು. ಇದು ನಮ್ಮ ಇಂದಿನ ವಿವಿಗಳ ನೈಜ ಚಿತ್ರಣ.

ವಿವಿಗಳಲ್ಲಿ ಮೊದಲ ಸಮಸ್ಯೆಯೇ ಶಿಕ್ಷಕರು ಮತ್ತು ಪ್ರೊಫೆಸರ್ಗಳದ್ದು, ಇಲ್ಲೂ ಅತ್ಯುತ್ತಮ ಎನ್ನುವಂತಹ ಕಮಿಟೆಡ್ ಪ್ರೊಫೆಸರ್ಗಳಿದ್ದಾರೆ ನಿಜ, ಆದರೆ ಅವರು ಇಂದು ಅಪುರೂಪದ ಅಪವಾದ ಅಷ್ಟೆ! ಇಂದು ಯೂನಿವರ್ಸಿಟಿ ಶಿಕ್ಷಣವೆಂದರೆ ಅತ್ಯಂತ ಯಾಂತ್ರಿಕವಾಗಿಬಿಟ್ಟಿದೆ. ಇರೋದು ಕಮ್ಮಿ ಹುಡುಗರಾದರೂ ಅವರಿಗೂ ಪ್ರೊಫೆಸರ್ಗಳಿಗೂ ನಡುವೆ ಒಂದು ಸೌಹಾರ್ದಯುತ ಸಂಬಂಧವೇ ಇಲ್ಲ. ಈ ವಿಷಯದಲ್ಲಿ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳೇ ಎಷ್ಟೋ ವಾಸಿ! ಅಂಥದೊಂದು ಸಂಬಂಧವನ್ನು ಈಗ ಹುಡುಗರೂ ಬೆಳೆಸಿಕೊಳ್ಳುವುದಿಲ್ಲ, ಪ್ರೊಫೆಸರ್ಗಳೂ ಬಯಸುವುದಿಲ್ಲ. ವಿಶ್ವವಿದ್ಯಾಲಯಗಳಿಗೆ ಬರುವ ಹುಡುಗರು ತಮ್ಮ ಕನಿಷ್ಠ ಶಿಕ್ಷಣವನ್ನು ಮುಗಿಸಿ, ವಿಷಯಾಧಾರಿತವಾಗಿ ಹೆಚ್ಚು ಜ್ಞಾನ ಸಂಪಾದಿಸಲು ಬಂದಿರುತ್ತಾರೆ. ಜ್ಞಾನಾರ್ಜನೆಯೇ ಮುಖ್ಯವಾಗಬೇಕು. ಆದರೆ ನಮ್ಮಲ್ಲಿ ಲೋವರ್ ಎಜುಕೇಷನ್ ಮಟ್ಟದಿಂದಲೂ ಮಾರ್ಕ್ಸು, ಪರೀಕ್ಷೆ ಈ ದೃಷ್ಟಿಕೋನದಲ್ಲೇ ಹುಡುಗರನ್ನು ರೂಪಿಸುತ್ತಾ ಬಂದು ಬಿಟ್ಟದ್ದೇವಾದ್ದರಿಂದ ಉನ್ನತ ಶಿಕ್ಷಣದಲ್ಲೂ ಇಂದು ಈ ಪಿಡುಗು ಮುಂದುವರೆದಿದೆ. ಹಾಗಾಗಿ ವಿದ್ಯೆ ಎನ್ನುವುದು ಒಂದು ಸರಕಾಗಿ ಬಿಡುತ್ತದೆ. ವಿವಿಗಳು ಅಂಗಡಿಯಂತಾಗಿಬಿಡುತ್ತದೆ. ಇದರಿಂದಾಗಿ ನಮ್ಮಲ್ಲಿ ಒಂದು ಜ್ಞಾನದಾಹ ಕೇಂದ್ರಿತವಾದ ಶಿಕ್ಷಣ ವ್ಯವಸ್ಥೆಯಿಲ್ಲ. ಹಾಗಾಗಿ ಸಂಶೋಧನೆ, ಪೇಟೆಂಟು ಎನ್ನುವ ಪದಗಳೆಲ್ಲ ನಾವರಿಯದ ಭಾಷೆಯ ಪದಗಳಾಗಿವೆ. ನಮ್ಮಲ್ಲಿ ಮತ್ತೊಂದು ಮುಖ್ಯ ಕೊರತೆಯೆಂದರೆ ಅಕಾಡಮಿಕ್ ಡಿಸಿಪ್ಲೀನ್ ಇಲ್ಲದಿರುವುದು. ನಮ್ಮಲ್ಲಿ ಬಹುಪಾಲು ಪ್ರೊಫೆಸರ್ಗಳು ತಿಂಗಳ ಕೊನೆಗೆ ಭರ್ಜರಿ ಸಂಬಳ ಎಣಿಸಿ ಕೊಳ್ಳುತ್ತಾರೆಯೇ ವಿನಃ ಪಾಠ ಮಾಡುವುದಿಲ್ಲ. ಮುಕ್ಕಾಲು ಭಾಗದ ಮಂದಿ ಬೆಳಗ್ಗೆಯೇ ಬಂದು ರಿಜಿಸ್ಟ್ರ್ನಲ್ಲಿ ಒಂದು ಸೈನ್ ಹಾಕಿ, ಒಂದೋ ಎರಡೋ ಕ್ಲಾಸ್ ತೆಗೆದುಕೊಂಡು ನೆಟ್ಟಗೆ ಹೊರನಡೆದು ಬಿಡುತ್ತಾರೆ. ನಂತರ ಅವರು ಯಾರ ಕೈಗೂ ಸಿಗುವುದಿಲ್ಲ. ಈಗ ಈ ತುಟ್ಟಿಭತ್ಯೆಯ ನಂತರ ಯುಜಿಸಿ ಏನೇನೋ ಹೊಸ ಹೊಸ ನಿಯಮಗಳನ್ನು ತಮದಿದೆ ಎನ್ನುವವರಿದ್ದಾರಾದರೂ ಜಡಗೊಮಡ ಈ ವ್ಯವಸ್ಥೆಯನ್ನು ಎಬ್ಬಿಸಬಲ್ಲದು ಎಂಬುದು ಅವರಿಗೇ ಅನುಮಾನ. ಇನ್ನು ಮತ್ತೊಂದು ಸಮಸ್ಯೆಯೆಂದರೆ ವಿಭಾಗಗಳ ಮುಖ್ಯಸ್ಥರನ್ನು ರೊಟೇಷನ್ ಆಧಾರವಾಗಿ ಬದಲಾಯಿಸುತ್ತಿರುವುದು. ಇದರಿಂದ ಡಿಪಾರ್ಟ್ಮೆಂಟುಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಗೌರವವಿಲ್ಲ, ಅದೂ ಒಬ್ಬರ ಅವಧಿ 2 ವರ್ಷ ಮಾತ್ರವಾಗಿರುವುದರಿಂದ ಇವರು ಅದೇನು ವಿಭಾಗವನ್ನು ಉದ್ಧಾರ ಮಾಡಿಯಾರು? ಈ ವ್ಯವಸ್ಥೆ ಹೋಗುವವರೆಗೂ ವಿಭಾಗಗಳು ನೆಟ್ಟಗೆ ನಡೆಯುವುದು ಅನುಮಾನವೇ ಸರಿ!

ಇನ್ನು ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಮದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚುವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸಕರ್ಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಇನ್ನೂ ತುಮಕೂರು ವಿವಿಗೆ ಕಟ್ಟಡವೇ ಇಲ್ಲ, ಮಹಿಳಾ ವಿವಿ ಅಧೋಗತಿಯಾಗುವುದರಲ್ಲಿ ಇನ್ನು ಏನೂ ಅನುಮಾನ ಉಳಿದಿಲ್ಲ. ಹೀಗಿರುವಾಗ ಸಂಸ್ಕೃತ ವೇದ ವಿವಿ, ಜಾನಪದ ವಿವಿಯೂ ಸೇರಿದಂತೆ ಇನ್ನೂ ಹಲವಾರು ವಿವಿಗಳು ಪೈಪ್ಲೈನ್ನಲ್ಲಿ! ವಿವಿ ಸ್ಥಾಪನೆ, ಲಾಲನೆ, ಪಾಲನೆ ಎಲ್ಲವೂ ಇಂದು ರಾಜಕೀಯವೇ ಆಗಿಬಿಟ್ಟಿರುವುದರಿಂದ ಈ ವಿಷಯವಾಗಿ ಒಂದು ಗಾಂಭೀರ್ಯವನ್ನು ನಿರೀಕ್ಷಿಸುವುದು ನಮ್ಮದೇ ತಪ್ಪೋ ಏನೋ?

ಮೊದಲೇ ಹೇಳಿದಂತೆ ಒಂದು ದೇಶ ಕಟ್ಟುವ ಕೆಲಸಕ್ಕೆ ಅಡಿಪಾಯ ಬೀಳುವುದು ಅಲ್ಲಿನ ಯೂನಿವರ್ಸಿಟಿಗಳಲ್ಲಿ. ನೈಸ್ ನಂತರ ನಿಮ್ಮ ಈ ಭಾನುವಾರ ಈ ವಾರದಿಂದ ಯೂನಿವರ್ಸಿಟಿಗಳು ಮತ್ತು ಅವುಗಳ ರಾಡಿಯನ್ನು ವಾರ ವಾರ ಬಿಚ್ಚಿಡುವ ಕೆಲಸವನ್ನು ಕೈಗೆತ್ತಿಗೊಂಡಿದೆ. ನಮ್ಮ ಪರೀಕ್ಷಕ ದೃಷ್ಟಿಯನ್ನು ಕರ್ನಾಟಕಕ್ಕ್ಕೆ ಸೀಮಿತಗೊಳಿಸಿಕೊಳ್ಳೋಣ. ಇಲ್ಲಿನ ವಿವಿಗಳಲ್ಲಿರುವ ಸಮಸ್ಯೆಗಳೇ ಸಾಕು ಬೇಕಾಗಿರುವಾಗ ಇತರೆ ರಾಜ್ಯಗಳ ವಿವಿಗಳಲ್ಲಿ ಸ್ಟೂಡೆಂಟ್ ಯೂನಿಯನ್ಗಳು, ರಾಜಕಾರಣ ಕೂಡ ಇಲ್ಲಿನ ಎಲ್ಲಾ ನೂರೆಂಟು ಸಮಸ್ಯೆಗಳೊಂದಿಗೆ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿಬಿಟ್ಟಿದೆ. The delicate thing about the university is that it has a mixed character, that it is suspended between its position in the eternal world, with all its corruption and evils and cruelties, and the splendid world of our imagination. ಕರ್ನಾಟಕದಲ್ಲಿ ಒಟ್ಟು 16 ವಿವಿಗಳಿದ್ದು ಇನ್ನು ಮುಂದೆ ಪ್ರತಿ ವಾರ ಒಂದೊಂದು ವಿವಿಗಳ ಜಾತಕಗಳನ್ನು ಬಿಚ್ಚಿಡುವ ಕೆಲಸವನ್ನು ಮಾಡಲಿದೆ.

ಎಫ್ಫೆಂ 'ಕಂಪನಾಂಕಗಳು'


ಎಫ್ಫೆಂ ವಾಹಿನಿಗಳು ಮತ್ತೆ ಸುದ್ದಿಯಲ್ಲಿವೆ. for all the wrong reasons. ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ್ದಕ್ಕಾಗಿ ಇಡೀ ಚಿತ್ರರಂಗ ಬಿಗ್ ಎಫ್ಎಂ 92.7 ವಿರುದ್ಧ ಸೆಟೆದು ನಿಂತಿತ್ತು. ಒಂದು ದಿನದ ವಿತ್ರರಂಗದ ಬಂದ್ ಅನ್ನು ಗೋಷಿಸಲಾಯಿತು. ಬಿಗ್ ಎಫ್ಎಂ ವಾಹಿನಿಯಲ್ಲಿ ಬೇಷರತ್ ಕ್ಷಮೆ ಕೇಳಬೇಕು ಎಂಬ ಕರಾರಿನ ಮೇಲೆ ಬಂದನ್ನು ಹಿಂತೆಗೆದುಕೊಳ್ಳಲಾಗಿದೆ. ಛಾನೆಲ್ ವಾರ ಕಳೆದರೂ ಇನ್ನೂ ಕ್ಷಮಾ ಹೇಳಿಕೆಯನ್ನು ಬಿತ್ತರಿಸುತ್ತಲೇ ಇದೆ.

ಇರಲಿ ಇದರ ಹೊರತಾಗಿಯೂ ಕೂಡ ಇವತ್ತು ಎಫ್ಎಂ ಸೃಷ್ಟಿಸುತ್ತಿರುವ `ಕಂಪನಾಂಕ'ಗಳ ಕುರಿತು ಚರ್ಚೆಯಾಗಬೇಕಾದ ಅಗತ್ಯವಿದೆ. ಭಾರತದಲ್ಲಿ ಈವತ್ತಿಗೂ ಇರುವುದು ಶ್ರವಣ ಸಂಸ್ಕೃತಿ. ರೇಡಿಯೋ ಭಾರತದ ಜನಜೀವನದಲ್ಲಿ ಮಿಳಿತಗೊಂಡಷ್ಟು ಇನ್ಯಾವುದೇ ಮಾಧ್ಯಮ ಮಿಳಿತಗೊಂಡಿಲ್ಲ. ಆದರೆ 80ರ ದಶಕದಲ್ಲಿ ಟಿವಿಯ ಆಗಮನದೊಂದಿಗೆ ರೇಡಿಯೋ ಬರಬರುತ್ತಾ  ಮಂಕಾಗತೊಡಗಿತು. 1991ರ ಲಿಬರಲೈಸೇಷನ್ನ ನಂತರ ಖಾಸಗೀ ಟಿವಿ ಛಾನೆಲ್ಗಳು ಹಾವಳಿಯಿಟ್ಟ ಮೇಲಂತೂ ರೇಡಿಯೋವನ್ನು ಕೇಳುವವರೇ ಇಲ್ಲದಂತಾಗಿತ್ತು. ಆದರೆ 2000 ದಿಂದೀಚೆಗೆ ಸರ್ಕಾರ ಖಾಸಗೀ ಎಫ್ಎಂ ಛಾನೆಲ್ಗಳಿಗೆ ಅವಕಾಶ ನೀಡತೊಡಗಿದ ಮೇಲೆ ಮತ್ತೆ ರೇಡಿಯೋದ ಕಲರವ ಶುರುವಾಯಿತು ನೋಡಿ. 2000ನಲ್ಲಿ ಭಾರತದ ಐಟಿ ಉದ್ಯಮ ಉಚ್ಛ್ರಾಯದಲ್ಲಿತ್ತು. ಭಾರತ ಪ್ರಕಾಶಿಸುತ್ತಿತ್ತು. ಈ ಐಟಿ ಉದ್ಯಮ ನಮ್ಮ ನಗರಗಳ ಲ್ಯಾಂಡ್ಸ್ಕೇಪ್ಗಳನ್ನು ಗುರುತೇ ಸಿಗಲಾರದಂತೆ ಬದಲಿಸಿಬಿಟ್ಟಿತು. ಭಾರತ ತನ್ನ ಫೋಕಸ್ ಅನ್ನು ಹಳ್ಳಿಗಳಿಂದ ನಗರಗಳಿಗೆ ಬದಲಿಸಿಕೊಂಡಿತ್ತು. ಇದೆಲ್ಲವೂ ಕೂಡಿ ಒಂದು ನವ ವರ್ಗವನ್ನೇ ಹುಟ್ಟುಹಾಕಿತು. ಇದೇ ಕಾಲಘಟ್ಟದಲ್ಲಿ ಭಾರತದಲ್ಲಿ ಒಂದು ಮ್ಯೂಸಿಕ್ ರೆವಲ್ಯೂಷನ್ ಕೂಡ ನಡೆದಿತ್ತು. ಎಲ್ಲವೂ ಕೂಡಿ ಬಂದಿತ್ತು. ಎಫ್ಎಂ ಪ್ರಕಂಪನಗಳನ್ನು ಸೃಷ್ಟಿಸತೊಡಗಿತು.

ಹೀಗೆ ನಗರ ಕೇಂದ್ರಿತ ಕೇಳುಗರಿಗೆಂದೇ ಜಜಜಛಿಚಿಣಜ ಆಗಿ ಪ್ರಾರಂಭಗೊಂಡದ್ದು ಎಫ್ಎಂ ವಾಹಿನಿಗಳು. ನಗರಗಳ ಗಿಜಿಗುಡುವಿಕೆ, ಟ್ರಾಫಿಕ್ ಜಾಮ್ಗಳು ಕೂಡ ಈ ವಾಹಿನಿಗಳ ಯಶಸ್ಸಿಗೆ ಸಾಕಷ್ಟು ಕಾಣ್ಕೆ ಸಲ್ಲಿಸಿವೆ. ಇಂದು ಬೆಂಗಳೂರೊಂದರಲ್ಲೇ 10 ಎಫ್ಎಂ ವಾಹಿನಿಗಳಿವೆ. ಆಪ್ ಸುನ್ ರಹೀ ಹೈ ವಿವಿಧಭಾರತಿ.., ಆಕಾಶವಾಣಿ ವಾಣಿಜ್ಯ ಪ್ರಸಾರ ಕೇಂದ್ರ...ಈ ಇಂಪಾದ ಧ್ವನಿಗಳ ಕಾಲ ಮುಗಿದಿದೆ. ಈ ಧ್ವನಿಗಳನ್ನು ಖಾಸಗಿ ವಾಹಿನಿಗಳ ಆರ್ಜೆಗಳ ವಟಗುಟ್ಟುವಿಕೆ replace ಮಾಡಿಬಿಟ್ಟಿದೆ. ಹೌದು ಇವತ್ತಿನ ರೇಡಿಯೋ ಪ್ರಸಾರದ ಕಂಟೆಂಟ್ ಆಕಾಶವಾಣಿಯಷ್ಟು enjoyable ಅಲ್ಲ. ಇದ್ದುದರಲ್ಲಿ ಸರಕಾರೀ ಒಡೆತನದ ಎಫ್ಎಂ ರೇನ್ಬೋ ಒಂದೇ ಮೇಲು. ಕೇಳಬಹುದು. ಆದರೆ ಮಿಕ್ಕವರಿಗೇನಾಗಿದೆ? ಒಂದು ಮಿಕ್ಕ ಖಾಸಗೀ ಛಾನೆಲ್ಗಳು ವಾಣಿಜ್ಯ ಉದ್ದಿಮೆಗಳಾಗಿದ್ದು ಲಾಭ ಗಳಿಕೆಯೊಂದೇ ಅವುಗಳ ಉದ್ದೇಶವಾಗಿರುವುದರಿಂದ ನಿಮಗೆ ಈ ವಾಹಿನಿಗಳಲ್ಲಿ ಜಾಹೀರಾತುಗಳು, ಸರೋಗೇಟ್ ಜಾಹೀರಾತುಗಳು, ಸಿನೆಮಾ ಪ್ರಚಾರ, ಆರ್ಜೆಗಳ ನಿರಂತರ ವಟಗುಟ್ಟುವಿಕೆಯ ನಡುವೆ ಎಲ್ಲೋ ಒಂದೆರಡು ಹಾಡುಗಳು!

ಎರಡನೆಯದು ರೇಡಿಯೋ ಪ್ರಸಾರದ ಮೂಲ ಪರಿಕಲ್ಪನೆಗೆ ಸಂಬಂಧಿಸಿದ್ದು. ರೇಡಿಯೋ ಒಂದು ಅಂಧ ಮಾಧ್ಯಮ, ದೃಷ್ಯವಿರುವುದಿಲ್ಲವಾದ್ದರಿಂದ ಇಲ್ಲಿ ಮಾತೇ ಪ್ರಧಾನ. ರೇಡಿಯೋಗೆ ಮತ್ತೊಂದು ಪ್ರತ್ಯೇಕತೆಯಿದೆ. in the strictest terms ರೇಡಿಯೋ  ಒಂದು ಸಮೂಹ ಮಾಧ್ಯಮವೇ ಅಲ್ಲ. ರೇಡಿಯೋ ಒಂದು ವಯಕ್ತಿಕ ಮಾಧ್ಯಮ. ರೇಡಿಯೋ ಪ್ರಸಾರ ಎನ್ನುವುದು ಶ್ರೋತೃ ಮತ್ತು ನಿರೂಪಕನ ನಡುವೆ ಜಾರಿಯಲ್ಲಿರುವ ಒಂದು ಸಂವಾದ. ರೇಡಿಯೋ ಪ್ರಸಾರ ಒಂದು ಕಲೆ. ಅದು ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳಬೇಕು. ಅದನ್ನು ಯಾವ ದಾರಿಯಲ್ಲಿ ಸುಲಭವಾಗಿ ಸಾಧಿಸಬಹುದು? ಇದೇ the main bone-of-contention.

ಇಂದಿನ ಎಫ್ಎಂ ವಾಹಿನಿಗಳು ನಗರಕೇಂದ್ರಿತ ಮಧ್ಯಮ ವರ್ಗ, ಯವಕರನ್ನು ಗುರಿಯಾಗಿಸಿಕೊಂಡಿರುವುದರಿಂದ ಅವರಿಗೆ ಹೇಗೇ ಬೇಕೋ ಹಾಗೆ ನಾವು ಕಾರ್ಯಕ್ರಮ ಮಾಡುತ್ತೇವೆ ಎಂಬ ಸಿದ್ದ ಸಮರ್ಥನೆ ಅವರದು. ಆದರೆ ಇದರ ಹೆಸರಿನಲ್ಲಿ ಎಷ್ಟೆಲ್ಲಾ ಅನಿಷ್ಟಗಳು ದಿನಂಪ್ರತಿ ನಮ್ಮ ಕಿವಿ ತುಂಬುತ್ತಿವೆ? ಮೊದಲಿಗೆ ಭಾಷೆ. ಕನ್ನಡ ಅಳಿವಿನಂಚಿನಲ್ಲಿದೆ ಎಂದು ನಾರಾಯಣ ಗೌಡರು ದಿನಬೆಳಗಾದರೆ ಬೊಬ್ಬೆ ಹಾಕುತ್ತಾರೆ. ನಮ್ಮ ಎಫ್ಎಂ ವಾಹಿನಿಗಳ ಪ್ರಸಾರ ಕೇಳಲಿ ಸಾಕು - ಅಲ್ಲಿ ದಿನನಿತ್ಯ ಕನ್ನಡದ ಕೊಲೆಯಾಗುತ್ತಿದೆ. ಎಫ್ ಎಂ ವಾಹಿನಿಗಳ ಕನ್ನಡದ ಬಗ್ಗೆ ಒಂದೇ ಪದದಲ್ಲಿ ಹೇಳಬೇಕೆಂದರೆ - ಅಪಭ್ರಂಶ! ಅದು ಕನ್ನಡವೇ ಅಲ್ಲ - ಅದನ್ನು ಕೆಲವರು ಕಂಗ್ಲೀಷು, ಹಿಂಗ್ಲೀಷು ಅಂತಾರೆ ತಿಳಿದವರು ಬೆಂಗಳೂರು ಕನ್ನಡ ಅಂತಾರೆ. ಮಾತಿನ ಮಧ್ಯೆ ಅನವಶ್ಯಕವಾಗಿ ಇಂಗ್ಲೀಷು ಸೇರಿಸುವುದೊಂದೇ ಅಲ್ಲ, ಈ ವಾಹಿನಿಗಳ ಆರ್ಜೆಗಳಿಗೆ ಅವರು ಮಾತಾಡುವ ಅಲ್ಪ ಸ್ವಲ್ಪ ಕನ್ನಡವನ್ನೂ ಸರಿಯಾಗಿ ಉಚ್ಛರಿಸಲು ಬರುವುದಿಲ್ಲ. ಕನ್ನಡದ ಉಚ್ಛಾರಣೆ ಬರುವುದಿಲ್ಲ, ಇಂಗ್ಲೀಷು ಮಾತನಾಡುತ್ತಾರೆ ಎನ್ನುವುದಕ್ಕಿಂತಲೂ ಅವರಿಗೆ ಕನ್ನಡ, ಕರ್ನಾಟಕದ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲ, ಅವರ ಬೇರುಗಳು ಗಟ್ಟಿಯಿಲ್ಲ, ಮತ್ತು ಅವರಿಗೆ ಇದರ ಬಗ್ಗೆ ಅವರಿಗಿರುವ ಒಂದು ದಿವ್ಯ ನಿರ್ಲಕ್ಷ್ಯ ಮತ್ತು ಅವಗಣನೆ ಸಹಿಸಲಸಾಧ್ಯ. 91.9 ಎಫ್ಎಂ ವಾಹಿನಿಯ ಪ್ರಾರಂಭದ ದಿನಗಳಲ್ಲಿ ಕನ್ನಡದ slang ಅನ್ನು ಪರಿಚಯಿಸುವ ನೆವದಲ್ಲಿ ಒಬ್ಬ ಮಳಯಾಳಿ ಕುಟ್ಟಿಯ ಬಾಯಲ್ಲಿ ದಿನಕ್ಕೊಂದು ಕನ್ನಡ ಪದ ಅವಹೇಳನಗೊಳಗಾಗುತ್ತಿತ್ತು. ಇದನ್ನು ಕನ್ನಡಪರ ಸಂಘಟನೆಗಳು ಧರಣಿ ನಡೆಸಿ ನಿಲ್ಲಿಸದರು. ಹೀಗೆ ಭಾಷೆಯ ಅವಹೇಳನ, ಅವಗಣನೆಗೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಇಂದಿನ ಯುವ ಜನಾಂಗ ಮಾತನಾಡುವ ಭಾಷೆಯೇ ಇದು, ಅವರೊಂದಿಗೆ ಒಂದು ಸಂವಾದ ನಡೆಸಬೇಕಾದರೆ ಹೀಗೇ ಮಾತನಾಡಬೇಕೆಂದು ಸಮರ್ಥಿಸಿಕೊಳ್ಳುತ್ತಾರೆ. ಅಲ್ಲ ಸ್ಪಷ್ಟ ಕನ್ನಡ ನಮ್ಮ ಯುವಕರಿಗೆ ಅರ್ಥವಾಗುವುದಿಲ್ಲವೇ?

ಭಾಷೆಯನ್ನಾದರೂ ಮಾಫಿ ಮಾಡಿಬಿಡಬಹುದು. ಆದರೆ ಇತ್ತೀಚೆಗೆ ಈ ಎಫ್ಎಂ ವಾಹಿನಿಗಳಲ್ಲಿ ಉದ್ಧಟತನ, ವಯಕ್ತಿಕ ನಿಂದನೆಗಳು, ಪ್ರಚೋದನಕಾರಿ, ಅಸಭ್ಯ ಮಾತುಗಳು ಹೆಚ್ಚಾಗತೊಡಗಿವೆ. ಇದಂತೂ ಅಕ್ಷಮ್ಯವೇ ಸರಿ. ಉದಾಹರಣೆಗೆ ಹಲವಾರು ಎಫ್ಎಂ ವಾಹಿನಿಗಳಲ್ಲಿ ಕಾರ್ಯಕ್ರಮಗಳ ನಡುವೆ ಜೋಕ್ಸ್ಗಳ ಹೆಸರಿನಲ್ಲಿ ಕೆಲವು ಬಿಟ್ಗಳನ್ನು ಹಾಕಲಾಗುತ್ತಿದ್ದು ಇವು ಹಲವಾರು ಬಾರಿ ಛಜಟಠತಿ ಣಜ ಛಜಟಣ ಆಗಿರುತ್ತವೆಯಲ್ಲದೆ, ಅಪಹಾಸ್ಯವಾಗಿಬಿಟ್ಟಿದೆ. ಒಂದು ಕಾರ್ಯಕ್ರಮ ಮಾಡಬೇಕೆಂದರೆ ಅದಕ್ಕೊಂದು ಗಟ್ಟಿಯಾದ ಥೀಮ್ ಇರಬೇಕಲ್ಲ? ಅದರ ಆಯ್ಕೆಯಲ್ಲೇ ಅನೇಕರು ಎಡವುತ್ತಿದ್ದಾರೆ. ಅಕ್ಕ ಸುಮತಿ ಹೇಳಿದ ಹಾಗೆ ನಿಮ್ಮ ಮನೆಯ ನಾಯಿ ಏನು ಮಾಡಿತು? ನಿಮ್ಮ ಫಸ್ಟ್ ನೈಟ್ ಹೇಗಿತ್ತು? ನಿಮ್ಮ ಲವ್ ಯಾಕೆ ಫೇಲ್ ಆಯಿತು? ಎಂಬ ಪ್ರಶ್ನೆಗಳನ್ನು ಹಿಡಿದು ಕಾರ್ಯಕ್ರಮ ಮಾಡುತ್ತಿದ್ದಾರೆ. ಇವತ್ತಿಗೂ ಅರ್ಧ ಘಂಟೆಯ ಕಾರ್ಯಕ್ರಮವೊಂದಕ್ಕೆ ಕನಿಷ್ಠ ನಾಲ್ಕು ಘಂಟೆಗಳ ತಯಾರಿ ನಡೆಸುವ ಆಕಾಶವಾಣಿ ಉದ್ಘೋಷಕಿಯರಿದ್ದಾರೆ. ಅದೇ ಇವರಿಗೆ ಕಾರ್ಯಕ್ರಮಕ್ಕೆ ಒಂದು ಥೀಮೂ ಬೇಕಾಗಿಲ್ಲ, ಅದಕ್ಕೊಂದು ತಯಾರಿಯೂ ಬೇಕಾಗಿಲ್ಲ. ಕಾರ್ಯಕ್ರಮಗಳು ತಮ್ಮ ಗಾಂಭೀರ್ಯ ಕಳೆದುಕೊಳ್ಳುತ್ತಿವೆ. ಮಾತು ವೃಷಭಾವತಿ ತಲುಪಿದೆ. ಅದೇ ಆಕಾಶವಾಣಿಯ ಇಂಪಾದ ಧ್ವನಿಗಳು, ಸುಸ್ಪಷ್ಟ ಕನ್ನಡ, ಮಾಹಿತಿಪೂರ್ಣ ಎಲ್ಲೆ ಮೀರದ ಮಾತು ಎಷ್ಟು ಹಿತವೆನಿಸುತ್ತದೆ?

ಇಂದಿನ ಎಲ್ಲಾ ಎಫ್ಎಂ ವಾಹಿನಿಗಳಲ್ಲಿ ನೇರ ಪ್ರಸಾರದ ಟಾಕ್ ಷೋಗಳು ಮತ್ತು ಹಾಡುಗಳದೇ ಕಾರುಬಾರು. ಇಂದು ರೇಡಿಯೋ ಎಂಬುದು ಮಾತು ಮತ್ತು ಹಾಡುಗಳಿಗಷ್ಟೇ ಸೀಮಿತವಾಗಿಬಿಟ್ಟಿದೆ. ಈ ಕಾರ್ಯಕ್ರಮಗಳಲ್ಲಿ ಹೊಸತನವೇನೂ ಇರುವುದಿಲ್ಲ. ಯಾವುದೋ ಒಂದು ಸಿಲ್ಲಿ ಪ್ರಶ್ನೆ ಹಿಡಿದು ಶ್ರೋತೃಗಳಿಗೆ ಎಸ್ಎಂಎಸ್ ಕಳಿಸಲೋ ಫೋನು ಮಾಡಲೋ ತಲೆ ತಿನ್ನುತ್ತಾ, ನಿರಂತರ ವಟಗುಟ್ಟುತ್ತಾ, ಜಾಹೀರಾತುಗಳ ನಡುವೆ ಹಾಡು ಹಾಕುತ್ತಾ...ಅಷ್ಟೆ ಸ್ವಾಮಿ ಕಾರ್ಯಕ್ರಮ! ಈ ಕಾರ್ಯಕ್ರಮ ಮುಗಿದ ಮೇಲೆ ಇನ್ನೊಬ್ಬ ಆರ್ಜೆ, ವಿಚಿತ್ರ ಹೆಸರು ಮತ್ತದೇ ಪುನರಾವರ್ತನೆ. ಇದರ ಹೊರತಾಗಿಯೂ ರೇಡಿಯೋಗೆ ಅನಂತ ಸಾಧ್ಯತೆಗಳಿವೆ. ಕಾರ್ಯಕ್ರಮಗಳಲ್ಲಿ ಇನ್ನಿಲ್ಲದಂತೆ ಪ್ರಯೋಗಗಳನ್ನು ಮಾಡಬಹುದು. ಇಂದಿನ ಯಾವ ಖಾಸಗೀ ಎಫ್ಎಂ ವಾಹಿನಿಯಲ್ಲಿ ಬಾನುಲಿ ನಾಟಕಗಳು ಪ್ರಸಾರವಾಗುತ್ತಿವೆ? ಯಾವ ವಾಹಿನಿಯಲ್ಲಿ ಮ್ಯಾಗಜೀನ್ ಕಾರ್ಯಕ್ರಮಗಳನ್ನು, ಸಂದರ್ಶನಗಳನ್ನು ಮಾಡುತ್ತಿದ್ದಾರೆ? ಹೌದಾ ಇದೆಲ್ಲವೂ ರೇಡಿಯೋದಲ್ಲಿ ಮಾಡಲು ಸಾಧ್ಯವಾ ಎಂದು ಕೇಳುವವರಿವರು. ಎ.ಎಸ್.ಮೂರ್ತಿಗಳು ಈರಣ್ಣನಾಗಿ ಕೊಟ್ಟ ಕಾರ್ಯಕ್ರಮಗಳೆಂಥವು? ಮೈಸೂರಿನಿಂದ ನಾರಾಯಣಸ್ವಾಮಿಗಳು ಮಕ್ಕಳಿಗಾಗಿ ಮಾಡುತ್ತಿದ್ದ ವಿಜ್ಞಾನದ ಕಾರ್ಯಕ್ರಮ ಕೇಳಿದ್ದೀರಾ ಯಾರನ್ನ? ಹಿಂದೆ ರೇಡಿಯೋ ರಾಗಿ ಅಂತ ಒಂದು ಕಾರ್ಯಕ್ರಮ ಬರುತ್ತಿತ್ತಂತೆ (ನಾನು ಕೇಳಿಲ್ಲ). ಒಬ್ಬ ರೈತ ಬಂದು ರಾಗಿ ಬೆಳೆಯುವ ವಿಧಾನಗಳು, ಅದಕ್ಕೆ ಪೂರಕವಾದ ನೆಲ, ಮಣ್ಣು, ಹಾಕಬೇಕಾದ ಗೊಬ್ಬರ..ಹೀಗೆ ಅದರ ಬಗ್ಗೆ ಇನ್ನೊಬ್ಬನಿಗೆ ಹೇಳುತ್ತಾ ಹೋಗುತ್ತಾನೆ. ಅದೊಂದು ಅತ್ಯಂತ ಯಶಸ್ವೀ ಫೀಚರ್ ಕಾರ್ಯಕ್ರಮ. ಈ ಕಾರ್ಯಕ್ರಮದ ನಂತರ ಹಳೇ ಮೈಸೂರು ಭಾಗದಲ್ಲಿ ಆ ವರ್ಷ ರಾಗಿಯ ಇಳುವರಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು! ರೇಡಿಯೋದ ಅನಂತ ಸಾಧ್ಯತೆಗಳು ಅಂದರೆ ಇದು. ನಿಜ ಇವತ್ತು ಖಾಸಗೀ ರೇಡಿಯೋ ವಾಹಿನಿಗಳೆನ್ನುವುದು ವಾಣಿಜ್ಯ ಉದ್ದಿಮೆಗಳಾಗಿದ್ದು ಸಮಾಜ ಸೇವಾ ಕೇಂದ್ರಗಳಲ್ಲ. ಅವು ನೀಡುವ ಕಂಟೆಂಟ್ ಅನ್ನು commercially package ಮಾಡಿಯೇ ಕೊಡಬೇಕು. ಆದರೆ ಇಂಥ ಕಾರ್ಯಕ್ರಮಗಳು commercially viable  ಅಲ್ಲ ಎಂದು ಪ್ರಯತ್ನಿಸದಯೇ ಇವರು ಹೇಗೆ ನಿರ್ಧಾರಕ್ಕೆ ಬರುತ್ತಾರೆ? ಅಸಲಿ ಸಮಸ್ಯೆ ಅದಲ್ಲ. ಇಂಥ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ತಯಾರಿ ಬೇಕು, ಸಮಯ ಬೇಕು, ಕೊಂಚ ರಿಸ್ಕ್ ತೆಗೆದುಕೊಳ್ಳಬೇಕು, ನಿಮ್ಮ ಐಡಿಯಾವನ್ನು ಮತ್ತೊಬ್ಬರಿಗೆ ಮಾರಬೇಕು, ಅವರನ್ನು ಒಪ್ಪಿಸಬೇಕು ಇವೆಲ್ಲವಕ್ಕೂ ಶ್ರಮ ಹಾಕಬೇಕು. ಯಾರಿಗೆ ಬೇಕು ಇಲ್ಲದ ಉಸಾಬರಿ? ಆ ಕಡೆ ಮನಸ್ಸಿಗೆ ಬಂದದ್ದು ವಟವಟ ಅಂದರೆ ಆಯಿತಲ್ಲವೇ ಎಂಬ ನಿರ್ಲಕ್ಷ್ಯ. ರೇಡಿಯೋ ಪ್ರಸಾರ ಸೊರಗುತ್ತಿರುವುದು ಇದೇ ಕಾರಣಕ್ಕೆ.

ಇವಿಷ್ಟೂ ಖಾಸಗೀ ಎಫ್ಎಂ ವಾಹಿನಿಗಳ ಗೋಳಾದರೆ, ನಮ್ಮ ಸರಕಾರೀ ಒಡೆತನದ ಎಫ್ಎಂ ವಾಹಿನಿಗಳದು ಮತ್ತೊಂದು ಗೋಳು. ಈ ಮುಂಚೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಪ್ರಸಾರಭಾರತಿಯ ಮೂಲಕ ತನ್ನ ಎಲ್ಲ ವಾಹಿನಿಗಳಿಗೂ ಅವುಗಳ ಕಾರ್ಯಕ್ರಮಗಳ ನಿರ್ಮಾಣಕ್ಕೂ ಗ್ರಾಂಟ್ಸ್ ನೀಡುತ್ತಿದ್ದವು. ಹಾಗಾಗಿ ವಾಹಿನಿಗಳು ಜಾಹೀರಾತುದಾರರು, ಆಡ್ ರೆವಿನ್ಯೂ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಅಸಲಿಗೆ ರೇಡಿಯೋ ಪ್ರಸಾರವನ್ನು ಅವರು ಒಂದು ವಾಣಿಜ್ಯ ಕಾರ್ಯಕ್ರಮ ಎಂತಲೇ ಭಾವಿಸಿರಲಿಲ್ಲ, ಸರ್ಕಾರವೂ  ಹಾಗೆ ಭಾವಿಸಿರಲಿಲ್ಲ. ಕಾರ್ಯಕ್ರಮಗಳಲ್ಲಿ ಲಾವಣ್ಯವಿತ್ತು, ಪ್ರಯೋಗಗಳು ನಡೆಯುತ್ತಿದ್ದವು. ಆದರೆ ಈಗ್ಗೆ ಕೆಲವು ವರ್ಷಗಳಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ತನ್ನ ಎಫ್ಎಂ ವಾಹಿನಿಗಳ ಕಾರ್ಯಕ್ರಮ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಗ್ರಾಂಟ್ಸ್ ಅನ್ನು ಕೊಡುತ್ತಿಲ್ಲ. ಬದಲಿಗೆ ಅರ್ಧದಷ್ಟನ್ನು ಮಾತ್ರ ನೀಡುತ್ತಿದೆ. ಮಿಕ್ಕರ್ಧವನ್ನು ಈ ವಾಹಿನಿಗಳು, ಕಾರ್ಯಕ್ರಮಗಳ ನಿರ್ಮಾಪಕರು ಜಾಹೀರಾತುದಾರರನ್ನು ಹಿಡಿದು ಸಂಪಾದಿಸಿಕೊಡಬೇಕಿದೆ. ಸರಕಾರೀ ವಾಹಿನಿಗಳನ್ನು ಯಾರೂ ಕೇಳುವುದಿಲ್ಲ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಆಳವಾಗಿ ಬೇರೂರಿರುವುದರಿಂದ ಯಾವುಧೇ ಖಾಸಗೀ ಕಂಪೆನಿಗಳು ಈ ವಾಹಿನಿಗಳಿಗೆ ಜಾಹೀರಾತು ನೀಡುವುದಿಲ್ಲ. ಈಗ ಈ ವಾಹಿನಿಗಳಲ್ಲಿರುವ ಪ್ರತಿಭಾವಂತರಿಗೆ ಇರುವ ಆಯ್ಕೆಗಳು ಎರಡು. ಒಂದು ಖಾಸಗೀ ವಾಹಿನಿಗಳೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅದಕ್ಕಾಗಿ ಅವರ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು. ಇದನ್ನು ಮಾಡಲಿಚ್ಛಿಸದವರು ಸುಮ್ಮನಿರಬೇಕು. ಹಾಗಾಗಿ ಬರಬರುತ್ತಾ ಸರಕಾರೀ ಒಡೆತನದ ಎಫ್ಎಂ ವಾಹಿನಿಗಳಲ್ಲೂ ಕೂಡ ಪ್ರಯೋಗಗಳು, ಫೀಚರ್ ಕಾರ್ಯಕ್ರಮಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಅಲ್ಲೂ ಮಾತು-ಹಾಡು ಮನೆ ಕಟ್ಟತೊಡಗಿದೆ. ನಮಗೆ ಇನ್ನೊಂದು ಅಪಭ್ರಂಶದ ವಾಹಿನಿ ಬೇಕಾಗಿಲ್ಲ. ಸರ್ಕಾರ ಇತ್ತ ಗಮನ ಹರಿಸಲಿ.

ರೇಡಿಯೋ ಎನ್ನುವುದು ಒಂದು ಅದ್ಭುತ ಮಾಧ್ಯಮ. ಅದರ ಸಾಧ್ಯತೆಗಳು ಅನಂತ. ಜನರ ನೆನಪಿನಿಂದ ಅಳಿಯುತ್ತಿದ್ದ ರೇಡಿಯೋವನ್ನು ಮತ್ತೆ ಚಾಲ್ತಿಗೆ ತಂದದ್ದು ಎಫ್ಎಂ ಕ್ರಾಂತಿಯೇ ಆಗಿದ್ದರೂ ಅವು ಈ ಮಾಧ್ಯಮದ ವಿಸ್ತಾರ ಮತ್ತು ಸಾಮರ್ಥ್ಯವನ್ನು ಅರಿಯದೆ ಸಂಕುಚಿತಗೊಂಡುಬಿಟ್ಟಿರುವುದು ಖೇದಕರ. ಇನ್ನಾದರೂ ಈ ಖಾಸಗೀ ಎಫ್ಎಂ ವಾಹಿನಿಗಳು ಎಚ್ಚೆತ್ತುಕೊಳ್ಳಲಿ, ಅವರಿಗಿರುವ ಪರಿಧಿಗಳಲ್ಲೇ ಉತ್ತಮ ಕಾರ್ಯಕ್ರಮಗಳನ್ನು ನೀಡಲಿ ಎಂಬುದಷ್ಟೇ ನನ್ನ ಕಳಕಳಿಯ ಮನವಿ.

ರಂಗನಾಥ ಮಿಶ್ರಾ ವರದಿ ಎಂಬ ರಾಜಕೀಯ ಟೈಂ ಬಾಂಬ್

ಬಹುನಿರೀಕ್ಷಿತ ಟೈಂ ಬಾಂಬ್ ಲಿಬರ್ಹಾನ್ ವರದಿ ಬಂದ ಹಾಗೆ ಬಂದು ಹೋಯಿತು, ಸಿಡಿಯಲೇ ಇಲ್ಲ. ನಂತರದ ಸರದಿ ಸಾಚಾರ್ ಸಮಿತಿ ವರದಿಯದು. ಅದರ ಟೈಂ ಇನ್ನೂ ಬಂದಿಲ್ಲ, ಬಂದಾಗ ಸಿಡಿಮದ್ದೇ ಅದು. ಇರಲಿ. ಏತನ್ಮಧ್ಯೆ ಹೊಸದೊಂದು ಟೈಂ ಬಾಂಬ್ ರಾಜಕೀಯ ನೀಲಾಕಾಶದಲ್ಲಿ ಕಾಣಿಸುತ್ತಿದೆ - ರಂಗನಾಥ ಮಿಶ್ರಾ ವರದಿ. ಭಾರತದ ಮೈನಾರಿಟಿಗಳು, ಅವರ ಸ್ಥಿತಿಗತಿಗಳು ಮತ್ತು ಅವರನ್ನು ಪ್ರೋತ್ಸಾಹಿಸಲು ಅಗತ್ಯ ಕ್ರಮಗಳನ್ನು ಸೂಚಿಸಲು, ಯುಪಿಎ ಸರ್ಕಾರ ನಿವೃತ್ತ ಸುಪ್ರೀಂ ಕೋರ್ಟ್ ಛೀಫ್ ಜಸ್ಟೀಸ್ ರಂಗನಾಥ ಮಿಶ್ರಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ನಿಯಮಿಸಿತು. ಈ ಸಮಿತಿಯು ವರದಿಯನ್ನು ಸಿದ್ಧಪಡಿಸಿ 21 ಮೇ, 2007ರಂದು ಸರ್ಕಾರಕ್ಕೆ  ಸಲ್ಲಿಸಿತು. ಈ ಸುಮಾರು 3 ವರ್ಷಗಳಿಂದ ಅದರ ಕುರಿತು ಚಕಾರವೆತ್ತದ ಕೇಂದ್ರದ ಯುಪಿಎ ಸರ್ಕಾರ ಈಗ ಅದನ್ನು ಜಾರಿಗೊಳಿಸುವ ಇರಾದೆ ವ್ಯಕ್ತಪಡಿಸಿದೆ. ಆದರೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಈ ವರದಿಯ ಅನುಷ್ಠಾನಕ್ಕೆ ಸುತಾರಾಂ ಒಪ್ಪದೆ, ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.


ಇರಲಿ ಬಿಡಿ. ಅಲ್ಲ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಠರ ಮರಣ ಶಾಸನ ಅಂತ ಬಿಜೆಪಿಗರು ಹುಲಿವೇಷ ತೊಟ್ಟು ಕುಣಿಯುವಂಥದ್ದು ಈ ಆಯೋಗದ ವರದಿಯಲ್ಲೇನಿದೆ ಅಂತ ಕೆದಕುತ್ತಾ ಹೋದರೆ ಅಲ್ಲಿ ಬಿಚ್ಚಿಕೊಳ್ಳುತ್ತದೆ ಭಾರತದ ಅತಿ ವಿವಾದಾಸ್ಪದ ವಿಷಯಗಳ ಹುತ್ತ - ಮೀಸಲಾತಿ, ಮತಾಂತರ.....ನ್ಯಾ.ರಂಗನಾಥ ಮಿಶ್ರಾ ಆಯೋಗದ ವರದಿ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಕ್ರಿಶ್ಚಿಯನ್ ಮತ್ತು ಮುಸ್ಲಿಮರಲ್ಲೇ ಜಾತಿ ಪದ್ದತಿಯಂತೆ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರು ಎಮದು ಗುರುತಿಸಿ ಇವರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡುತ್ತದೆ. ನ್ಯಾ.ಮಿಶ್ರಾ ಆಯೋಗದ ಪ್ರಮುಖ ಶಿಫಾರಸುಗಳು ಈ ಕೆಳಕಂಡಂತಿವೆ -

  • ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲನ್ನು ಸಂವಿಧಾನದ 15(4)ರಡಿಯಲ್ಲಿ ಸಾಮಾಜಿಕ ಹಾಗೂ ವಿದ್ಯೆಗೆ ಹಾಗೂ ಸಕರ್ಾರಿ ನೌಕರಿಗೆ ಮೀಸಲಿಡುವುದು.  
  • ಈ ಮೀಸಲು ಪ್ರಮಾಣದಲ್ಲಿ ಶೇ.10 ಮುಸಲ್ಮಾನರು ಹಾಗೂ ಶೆ.5ರಷ್ಟು ಕ್ರೈಸ್ತರು ಮತ್ತಿತರ ಅಲ್ಪಸಂಖ್ಯಾತರಿಗೆ
  • ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಂರನ್ನು ಹರಿಜನ ಕೋಟಾದಡಿ ಸೇರಿಸುವುದು. 
  • ಅಲ್ಪಸಂಖ್ಯಾತರ ಮೀಸಲನ್ನು ಶಿಕ್ಷಣದ ಹೊರತಾಗಿ ಸಾಮಾಜಿಕ ವಲಯಕ್ಕೂ - ಗ್ರಾಮೀಣ ಉದ್ಯೋಗ, ರೋಜ್ಗಾರ್, ವಸತಿ ಮತ್ತು ನಿವೇಶನ ಹಂಚಿಕೆ - ವಿಸ್ತರಿಸುವುದು.
  • ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತ ಜನಾಂಗಕ್ಕೆ ಸೇರಿದವರು ಹಲ್ಲೆ ಮಾಡಿದರೆ ಸಂವಿಧಾನದ 46 ವಿಧಿ ಪ್ರಕಾರ ಸಕರ್ಾರ ರಕ್ಷಣೆ ನೀಡಬೇಕು.
  • ದಲಿತರು ಸ್ವಯಂ ಮತಾಂತರಗೊಂಡರೆ ಅವರಿಗೆ ಮತಾಂತರ ಪೂರ್ವದ ಮೀಸಲು ಹಕ್ಕುಗಳನ್ನು ಕಲ್ಪಿಸಬೇಕು.


ಅರ್ಥವಾಯ್ತಲ್ಲ ಯಾಕಿಷ್ಟು ಗದ್ದಲ ಎಂದು. ಅಲ್ಲ ಅವರಿಗೆ ಮೀಸಲು ಕಲ್ಪಿಸಿದರೆ ಅದು ಹೇಗೆ ಹಿಂದುಳಿದ ವರ್ಗದವರಿಗೆ ಮತ್ತು ದಲಿತರಿಗೆ ಮರಣಶಾಸನವಾದೀತು? ಅನ್ನುವುದು ಹಲವರ ಪ್ರಶ್ನೆ. ಅದಕ್ಕೆ ನಾವು ಸುಪ್ರೀಂ ಕೋರ್ಟ್ನೆಡೆಗೆ ಬೊಟ್ಟು ಮಾಡಿ ತೊರಿಸಬೇಕಾಗುತ್ತದೆ. ರಾಜಕೀಯ ಕಾರಣಗಳಿಗೆ ಇವರು ಸಿಕ್ಕಸಿಕ್ಕವರಿಗೆಲ್ಲಾ ಮೀಸಲಾತಿ ಘೋಷಿಸುತ್ತಾ ಹೋದರೆ ಮೆರಿಟಾಕ್ರಸಿ ಅಂದರೆ ವಿದ್ವತ್ಗೆ ಬೆಲೆಯೇ ಇಲ್ಲದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಒಟ್ಟು ಮೀಸಲು ಪ್ರಮಾಣ ಶೇ.50ರಷ್ಟನ್ನ ಮೀರಬಾರದು ಎಂದು ತನ್ನ ಒಂದು ತೀರ್ಪಿನಲ್ಲಿ ಎಚ್ಚರಿಸಿದೆ. ಈಗ ಜಾರಿಯಲ್ಲಿರುವ ಮೀಸಲಿನ ಒಟ್ಟು ಪ್ರಮಾಣ ಶೇ.49.5! ಅಲ್ಲಿಗೆ ಹೊಸ ಮೀಸಲಾತಿಯೊಂದನ್ನು ಕಲ್ಪಿಸಿದರೆ ಅದು ಈಗಿರುವ ಮೀಸಲಾತಿಯಲ್ಲಿ ಕಡಿತಗೊಳಿಸಿ ಅನುಷ್ಠಾನಗೊಳಿಸದೆ ಬೇರೆ ದಾರಿಯೇ ಇಲ್ಲ. ಹಿಮದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಮೀಸಲು ಕಲ್ಪಿಸಲು ದೇಶಾದ್ಯಂತ ಮಂಡಲ ವರದಿಯ ಪ್ರಕಾರ ಜಾರಿಯಲ್ಲಿದೆ. ಹಲವು ಮಾನದಂಡಗಳ ಅನುಕರಣೆಯಿಂದಲೇ ವೈಜ್ಞಾನಿಕವಾಗಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ರಾಷ್ಟ್ರೀಯ ಜನಸಂಖ್ಯೆಯ ಶೇ.52ರಷ್ಟಿರಬಹುದೆಂದು ಅಂದಾಜಿಸಲಾಗಿರುವ ಹಿಂದುಳಿದ ವರ್ಗದವರಿಗೆ ಶೇ.27ರಷ್ಟು ಮೀಸಲಾತಿಯನ್ನು ಸಂವಿಧಾನದ ಪರಿಚ್ಛೇದ 16(4)ರಡಿ ಸಕರ್ಾರೀ ನೌಕರಗಾಗಿ ಜಾರಿಯಲ್ಲಿಡಲಾಗಿದೆ. ಇದರಲ್ಲಿ ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರೂ ಸೇರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ22.5ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ರಂಗನಾಥ ಮಿಶ್ರಾ ವರದಿಯನ್ನು ಅನುಷ್ಠಾನಗೊಳಿಸಿದರೆ ಇವೆಲ್ಲವೂ ಏರುಪೇರಾಗುತ್ತದೆ. ಇದರ ಪ್ರಕಾರ ಶೇ. 27ರಷ್ಟು ಮೀಸಲು ಹೊಂದಿರುವ ಹಿಂದುಳಿದ ವರ್ಗಗಳ ಮೀಸಲು ಶೇ.12ಕ್ಕೆ ಇಳಿಯುತ್ತದೆ. ಅತಿಮುಖ್ಯವಾಗಿ ಈ ವರದಿ ಪರಿಶಿಷ್ಠ ಜಾತಿ ಹಾಗೂ ವರ್ಗಗಳ ಸ್ಟೇಟಸ್ಅನ್ನು ಹಿಂದೂಗಳಿಗೆ ಮಾತ್ರ ಸೀಮಿತಗೊಳಿಸದೆ ಅದನ್ನು ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಿಗೂ ವಿಸ್ತರಿಸಿ, ಅವರಲ್ಲೂ ಪರಿಶಿಷ್ಠರ ಗುಂಪೊಂದನ್ನು ಗುರುತಿಸುತ್ತದೆ. ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಂರನ್ನು ಹರಿಜನ ಕೋಟಾದಡಿ ಸೇರಿಸಿರುವುದರಿಂದ ಹರಿಜನರಿಗೂ ಮೀಸಲು ಕಡಿಮೆಯಾಗಲಿದೆ.

ಮುಸ್ಲಿಮರಿಗೆ ಶೇ.10ರಷ್ಟು ಮತ್ತು ಕ್ರಿಶ್ಚಿಯನ್ನರಿಗೆ ಶೆ.5ರಷ್ಟು ಮೀಸಲಾತಿ ವ್ಹಾರೆವ್ಹಾ....ಕಾಂಗ್ರೆಸ್ನ ಕಣ್ಣರಳಿರುವುದೇ ಇಲ್ಲಿ. ಅಲ್ಪಸಂಖ್ಯಾತರ ಮತಬ್ಯಾಂಕ್ ಅನ್ನು ತನ್ನ ಸ್ವಂತ ಆಸ್ತಿಯೆಂಬಂತೆ ಕಾಂಗ್ರೆಸ್ ವರ್ತಿಸುತ್ತಾ ಬಂದಿರುವುದು, ಅಲ್ಪಸಂಖ್ಯಾತರು ಸತತವಾಗಿ ಕಾಂಗ್ರೆಸ್ಗೆ ಒಲಿಯುತ್ತಾ ಬಂದಿರುವುದು ತಿಳಿದಿರುವ ವಿಷಯವೇ. ಈಗ ಮುಸ್ಲಿಮರಿಗೆ ಶೇ.10ರಷ್ಟು ಮತ್ತು ಕ್ರಿಶ್ಚಿಯನ್ನರಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಿದರೆ ಈ ಮತಬ್ಯಾಂಕುಗಳನ್ನು ಬ್ಯಾಂಕಿನಲ್ಲಿಟ್ಟು ಪಿಕ್ಸೆಡ್ ಡೆಪಾಸಿಟ್ನಂತೆ ಕಾಪಿಡಬಹುದೆಂಬ ದುರಾಸೆ ಕಾಂಗ್ರೆಸ್ನದು. ಹೊಸದಾಗಿ ಮೀಸಲಾತಿ ಕಲ್ಪಿಸುವುದರೊಂದಿಗೆ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಅಭಿವೃದ್ಧಿ ಸಾಧ್ಯವಾ...ಗೊತ್ತಿಲ್ಲ. ಆದರೆ ಇದು ಅಲ್ಪಸಂಖ್ಯಾತರ ಮತಬ್ಯಾಂಕುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಕಾಂಗ್ರೆಸ್ ಈ ವರದಿಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ತೊಡೆ ತಟ್ಟಿ ನಿಂತಿದೆ.

ಇದಕ್ಕೆ ತದ್ವಿರುದ್ಧ ದಿಕ್ಕಿನ ರಾಜಕೀಯ ಬಿಜೆಪಿ ಮತ್ತಿತರ ಪಕ್ಷಗಳದು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ದಲಿತ ಕ್ರಿಶ್ಚಿಯನ್ನರು ಎಂಬ ಹೊಸ ಪ್ರಭೇಧವೊಂದನ್ನು ಸೃಷ್ಟಿಸಿ ಅವರಿಗೆ ಈ ಮೊದಲಿನಂತೆ ಮೀಸಲಾತಿ ಸೌಲಭ್ಯವನ್ನು ಮುಂದುವರೆಸುವುದು ಮತಾಂತರವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಬಿಜೆಪಿಗರ ವಾದ. ಇದು ತಕ್ಕಮಟ್ಟಿಗೆ ನಿಜವೂ ಹೌದು. ಒಮ್ಮೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ಮೀಸಲಾತಿ ನೀಡಿದರೆ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕಡಿತ ಉಂಟಾಗುತ್ತದೆಯಲ್ಲದೆ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಠರ ವರ್ಗಕ್ಕೆ ಸೇರಿಸುವುದರಿಂದ ಎಸ್ಸಿ/ಎಸ್ಟಿ ಗಳ ಮೀಸಲಾತಿಯಲ್ಲೂ ಕಡಿತವುಂಟಾಗುತ್ತದೆ. ಈ ಜಾತಿ ಜನಾಂಗಗಳನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟಿ ಆ ಮತಬ್ಯಾಂಕುಗಳನ್ನು ಭದ್ರ ಮಾಡಿಕೊಳ್ಳುವ ರಾಜಕಾರಣ ಇವರದು. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಗುಜ್ಜರ್ ಗಲಾಟೆಗೂ ಇದೇ ಹಿನ್ನೆಲೆ. ಗುಜ್ಜರ್ಗಳ ಆಗ್ರಹದಂತೆ ಅವರಿಗೆ ಮಿಸಲಾತಿ ಕಲ್ಪಿಸಿದರೆ ಅಲ್ಲಿನ ರಾಜಕೀಯವಾಗಿ ಬಲಿಷ್ಠರಾಗಿರುವ ಬಿಜೆಪಿ ಬೆಂಬಲಿಸುವ ಮೀನಾಗಳ ಮೀಸಲಾತಿಯಲ್ಲಿ ಕಡಿತವುಂಟಾಗುತ್ತದೆ, ಅವರು ಬಿಜೆಪಿಯ ವಿರುದ್ಧ ತಿರುಗಿ ಬೀಳುತ್ತಾರೆಂಬ ಭೀತಿ, ಆ ವಿವಾದವನ್ನು ಅಷ್ಟು ಸುದೀರ್ಘ ಅವಧಿ ಜೀವಂತವಾಗಿಟ್ಟಿತ್ತು. ಅಷ್ಟು ದೂರ ಯಾಕೆ? ಪಕ್ಕದ ಆಂಧ್ರದ ಉದಾಹರಣೆಯನ್ನೇ ನೋಡಿ. ಆಂಧ್ರದಲ್ಲಿ ಮೊದಲಿಂದಲೂ ನಡೆಯುತ್ತಿರುವುದು ರೆಡ್ಡಿ ನಾಯ್ಡುಗಳ ಕಾಳಗ. ಇವರದೇ ರಾಜ್ಯಭಾರ. ಇವರಿಬ್ಬರನ್ನೂ ಎದುರಿಸಿ ಹಿಂದುಳಿದ ವರ್ಗಗಳ ನಾಯಕನಾಗಿ ರಾಜಕೀಯ ಅರಂಗ್ರೇಟಂ ಮಾಡಿದಾತ ತೆಲುಗಿನ ಪ್ರಸಿದ್ಧ ನಟ ಚಿರಂಜೀವಿ. ಈತ ಮೊದಲಿಗೆ ಅಹಿಂದ ಮತಬ್ಯಾಂಕನ್ನು ಧೃವೀಕರಿಸಿಕೊಳ್ಳುವತ್ತ ಸಾಗಿದ. ಇದು ಕಾಂಗ್ರೆಸ್ ಮತ್ತು ಟಿಡಿಪಿಗಳೆರಡಕ್ಕೂ ಭೀತಿ ಹುಟ್ಟಿಸಿತು. ಆಗ ವೈ.ಎಸ್.ರಾಜಶೇಖರ ರೆಡ್ಡಿ ಬಳಸಿದ್ದು ಇಂತಹ ಮೀಸಲಾತಿಯ ಹಾವನ್ನೇ. ರೆಡ್ಡಿ ನಾಯ್ಡುಗಳ ನಂತರದ ಬಲಿಷ್ಠ ಜಾತಿಯಾದ ಕಾಪುಗಳಿಗೆ ಹಿಂದುಳಿದ ವರ್ಗಗಳ ಕೋಟಾದಡಿ ಮಿಸಲಾತಿ ಕಲ್ಪಿಸುವ ಹಾವನ್ನು ತೇಲಿ ಬಿಟ್ಟರು. ಚಿರಂಜೀವಿ ಮೂಲತಃ ಕಾಪು ಜನಾಂಗದವನು. ಆತನಿಗೆ ಇದನ್ನು ಬೆಂಬಲಿಸದೇ ಬೇರೆ ದಾರಿಯೇ ಇರಲಿಲ್ಲ, ಬೆಂಬಲಿಸಿದ. ಇತರೆ ಹಿಂದುಳಿದ ಜಾತಿಗಳವರು ತಮಗೆ ದೊರೆಯುತ್ತಿರುವ ಮಿಸಲಾತಿಯಲ್ಲಿ ಕಡಿತವುಂಟಾಗುತ್ತದೆ ಎಂದು ಇದನ್ನು ವಿರೋಧಿಸಿದರು. ಚಿರಂಜೀವಿ ಸಮಸ್ತ ಹಿಂದುಳಿದ ವರ್ಗಗಳ ನಾಯಕನಾಗುವ ಬದಲಿಗೆ ಕಾಪುಗಳ ನಾಯಕನಾಗಿ ಸೀಮಿತಗೊಂಡುಬಿಟ್ಟ! ವೈ.ಎಸ್.ಆರ್ ಮತ್ತೆ ಗದ್ದುಗೆ ಏರಿದರು.

ಈಗಿನ ಪರಿಸ್ಥಿತಿಯಲ್ಲಿ ನ್ಯಾ. ರಂಗನಾಥ ಮಿಶ್ರಾ ವರದಿಯನ್ನು ಕೇಂದ್ರದ ಯುಪಿಎ ಸರ್ಕಾರ ಅನುಷ್ಠಾನಗೊಳಿಸಿದ್ಧೇ ಆದರೆ ಕರ್ನಾಟಕದ  ರಾಜಕೀಯ ಈಕ್ವೇಷನ್ಗಳಲ್ಲೂ ಅನೇಕ ಬದಲಾವಣೆಗಳಾಗುವುದು ಶತಸಿದ್ಧ. ಸದ್ಯ ಲಿಂಗಾಯತರು ಬಿಜೆಪಿಯ ಜೊತೆಯೂ ಒಕ್ಕಲಿಗರು ಜೆಡಿಎಸ್ ಜೊತೆಯೂ ನಿಂತಿರುವುದು ವಿದಿತವೇ. ಕಾಂಗ್ರೆಸ್ಗೆ ಈಗ ಉಳಿದಿರುವುದು ತನ್ನ ಪಾರಂಪರಿಕ ಮತಬ್ಯಾಂಕ್ ಮಾತ್ರ. ಆದರೆ ಕಾಂಗ್ರೆಸ್ ರಂಗನಾಥ ಮಿಶ್ರಾ ವರದಿಯನ್ನು ಅನುಷ್ಠಾನಗೊಳಿಸಿದರೆ ಅದರಿಂದ ಕಾಂಗ್ರೆಸ್ ಪಡೆಯುವ ಮತಗಳಿಗಿಂತಲೂ ಕಳೆದುಕೊಳ್ಳುವ ಮತಗಳೇ ಹೆಚ್ಚು. ಇದರಿಂದ ಹೊಟ್ಟೆಯಲ್ಲಿ ದಾವಾನಿಲ ಬಿದ್ದಂತಾಡುತ್ತಿರುವ ಪರಿಶಿಷ್ಠರು, ಹಿಂದುಳಿದವರ್ಗಗಳ ದೊಡ್ಡ ಗುಂಪೊಂದು ಕಾಂಗ್ರೆಸ್ ತೊರೆದು ಬೇರೆ ಪರ್ಯಾಯವಿಲ್ಲದೆ ಬಿಜೆಪಿಯ ಕೈಹಿಡಿಯುತ್ತದೆ. ಬಿಜೆಪಿಯ ಕೈ ಮತ್ತಷ್ಟು ಬಲವಾಗುತ್ತದೆ. ಕಾಂಗ್ರೆಸ್ ಮತ್ತಷ್ಟು ಸೊರಗುತ್ತದೆ.

ಹೀಗೆ ಈ ಮೀಸಲಾತಿಗಳಿಂದ ಆ ಜಾತಿ ಜನಾಂಗಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾದವೋ ಬಲ್ಲವರಿಲ್ಲವಾದರೂ ರಾಜಕೀಯ ಚದುರಂಗದಾಟದಲ್ಲಿ ಇದೊಂದು ಟೈಂ ಬಾಂಬ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಓದುಗ ಸ್ನೇಹಿತರಲ್ಲಿ ಒಂದು ಬಿನ್ನಹ

ಹಲೋ ನಮಸ್ಕಾರ, 
ಕನ್ನಡದ ಬ್ಲಾಗಲೋಕದಲ್ಲಿ ನನ್ನದೇ ಒಂದು ಲೋಕ ಎಂಬ ಅಹಮಿಕೆಯೊಂದಿಗೆ ವರ್ಷದ ಹಿಂದೆ ಬ್ಲಾಗನ್ನೇನೋ ಶುರು ಮಾಡಿದೆ. ಆದರೆ ನೀರಿಗೆ ಇಳಿದ ಮೇಲೆ ಅಲ್ಲವೇ ಅದರ ಆಳ ಅರಿವಿಗೆ ಬರುವುದು, ಆಮೇಲೆ ಗೊತ್ತಾಯಿತು ಬ್ಲಾಗು ಅನ್ನುವುದು ಎಷ್ಟು demanding ಅಂತ. ನನ್ನ ವೃತ್ತಿಯ ಭಾಗವಾಗಿ ಪತ್ರಿಕೆಗಳಿಗೆ ಪ್ರತಿ ವಾರ ಬರೆಯುತ್ತಿದ್ದ ಲೇಖನಗಳನ್ನೇ ನನ್ನ ಬ್ಲಾಗಿಗೆ ಹಾಕುತ್ತಾ ಬಂದೆ. ನಂಬಿ ಬ್ಲಾಗಿಗಾಗೆ ಎಂದು ನಾನು ಇದುವರೆಗೂ ಏನನ್ನೂ ಬರೆದಿಲ್ಲ. ನಾನೊಬ್ಬ ಪರಮ ಸೋಂಬೇರಿ, ಜೊತೆಗೆ ಸ್ವಲ್ಪ ಆರಂಭ ಶೂರತ್ವವೂ ಜಾಸ್ತಿ. ಬರಬರುತ್ತಾ ಪತ್ರಿಕೆಗೆ ಬರೆದ ಲೇಖನವನ್ನು ಬ್ಲಾಗಿಗೆ ಹಾಕುವುದನ್ನೂ ಬಿಟ್ಟು ಬಿಟ್ಟೆ. ಇವತ್ತಿಗೆ ನನ್ನ ಬ್ಲಾಗು update ಆಗಿ ೨ ತಿಂಗಳಾಗಿದೆ. ಬ್ಲಾಗು ನಡೆಯುತ್ತಿದ್ದರೆ ಒಂದು ಸಂವಾದ ಜಾರಿಯಲ್ಲಿರುತ್ತದೆ. i am missing it right now. ಈ ೨ ತಿಂಗಳೂ ಕೊಂಚ busy ಇದ್ದೆ. ಹಾಗಾಗಿ ಈ ಕಡೆ ಗಮನ ಕೊಡಲಾಗಲಿಲ್ಲ. ಕ್ಷಮೆ ಇರಲಿ. 

ಬ್ಲಾಗಿನ ವಿನ್ಯಾಸ ಮತ್ತು ಹೂರಣ ಎರಡನ್ನೂ ಬದಲಿಸಿ ಆದಿಲೋಕಕ್ಕೆ ಮತ್ತೆ ಜೀವ ಕೊಡಬೇಕು ಅಂತ ಬಹು ಬಾರಿ ಅಂದುಕೊಂಡರೂ ಆಗಿರಲಿಲ್ಲ. ಸುಘೋಷರ cautious mind ಬ್ಲಾಗಿನ ಮೊದಲ ಹುಟ್ಟುದಿನದ ಆಚರಣೆಯನ್ನು ಕಂಡು ಪುಳಕಿತನಾದೆ. ಅರರೆ... ಬ್ಲಾಗಿಗೂ happy birthday! ಆಗಲೇ ನೋಡಿದ್ದು ನಾನು, ನನ್ನ ಬ್ಲಾಗಿಗೂ ಈ ಆಗಸ್ಟ್ ೫ ರಂದು ಭಾರ್ತಿ ಒಂದು ವರ್ಷ! ಮತ್ತೆ ಉತ್ಸಾಹ ಇಮ್ಮಡಿಸಿತು. ಬಹುದಿನಗಳಿಂದ ಅಂದುಕೊಳ್ಳುತ್ತಿದ್ದಂತೆ, ಆದಿಲೋಕವನ್ನು ತನ್ನ ಒಂದು ವರ್ಷದ ಹುಟ್ಟು ಹಬ್ಬದ ದಿನವೇ ಅಂದರೆ ಆಗಸ್ಟ್ ೫ ರಂದು re-launch ಮಾಡುತ್ತಿದ್ದೇನೆ. (august 5). ಕನ್ನಡ ಬ್ಲಾಗಲೋಕದಲ್ಲಿ ನನ್ನದೇ ಒಂದು ಲೋಕ ಎಂದು ಆದಿಲೋಕವನ್ನು ಹುಟ್ಟಿಹಾಕಿದವನು, ಈಗ ಇನ್ನೂ ಮುಂದುವರೆದು ಆದಿಲೋಕದಲ್ಲಿ ನನ್ನ ಪ್ರತಿ ಹುಚ್ಚಿಗೂ ಒಂದೊಂದು ಲೋಕವನ್ನು ಹುಟ್ಟುಹಾಕಿದ್ದೇನೆ! ನನ್ನ ಸೋಂಬೇರಿತನವನ್ನು ಇನ್ನು ಮುಂದೆ ಬ್ಲಾಗಿನೊಳಗೆ ತರುವುದಿಲ್ಲವೆಂದು ನನಗೆ ನಾನೇ ಪ್ರತಿಜ್ಞೆ ಮಾಡಿಕೊಂಡಿದ್ದೇನೆ, ನಿಮಗೆ ಭರವಸೆ ಕೊಡುತ್ತೇನೆ. ಆಗಸ್ಟ್ ೫ ರಿಂದ ಆದಿಲೋಕದಲ್ಲಿ ಮತ್ತೆ ನಾನು ಸಿಗುತ್ತೇನೆ. ಬನ್ನಿ ಒಂದು ಕಪ್ ಕಾಫಿ ಜೊತೆಗೆ ಒಂದು ಆಪ್ತ ಸಂವಾದ, ಬಿಸಿ ಬಿಸಿ ಚರ್ಚೆ, ಆರೋಗ್ಯಪೂರ್ಣ ಜಗಳ, ಒಂದು ದಿವ್ಯ ಹರಟೆ ಎಲ್ಲವೂ ಹಿಡಿದುನಾನು ಕಾಯುತ್ತಿರುತ್ತೇನೆ. ಬರ್ತೀರಲ್ಲ...

ಆದಿಲೋಕವನ್ನು ಒಂದು ಪುಟ್ಟ ಪತ್ರಿಕೆಯಾಗಿ ರೂಪಿಸಲೆತ್ನಿಸಿದ್ದೇನೆ. ಇಲ್ಲಿ ಸಂಪಾದಕ, ಬರಹಗಾರ, ಟೈಪಿಸ್ಟು, ಕರಡು ತಿದ್ದುವವ ಎಲ್ಲವೂ ನಾನೇ. ಓದುವವನೂ ನಾನೇ?...., ಆಗದಿರಲೆಂದು ಆಶಿಸುತ್ತೇನೆ. ನಮ್ಮ ಸುತ್ತಣ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು, ಅದರಿಂದ ಜೀವನ ಕಟ್ಟಬೇಕು. ಸ್ಪಂದನ, ಸಂವಾದ, ಮಂಥನಗಳು ನಮ್ಮ ಆಲೋಚನೆಗಳಿಗೆ ಸ್ಪಷ್ಟತೆಯನ್ನೊದಗಿಸುತ್ತವೆ. ಇದರಿಂದ ನಮ್ಮ ಜಗತ್ತಿನ ಮತ್ತು ವರ್ತಮಾನದ ಗ್ರಹಿಕೆಗೆ ಸ್ಪಷ್ಟತೆ ಮೂಡುತ್ತದೆ. ಪ್ರಚಲಿತ ವಿದ್ಯಮಾನಗಳು - ರಾಜಕೀಯ, ಎಕಾನಮಿ, ಸಾಮಾಜಿಕ ಸಮಸ್ಯೆಗಳು, ಕ್ರೀಡೆ, ಸಾಹಿತ್ಯ - ಪುಸ್ತಕ, ಸಿನಿಮಾ - ರಂಗ, ಹೀಗೆ ಎಲ್ಲದರ ಕುರಿತು ಚರ್ಚಿಸಲು ಈ ಲೋಕದ ಅತಿಥಿಗಳಾಗಿ. ಪರ್ಮನೆಂಟ್ ನಿವಾಸಿ ಮಾತ್ರ ನಾನೊಬ್ಬನೇ! ನೀವೊಪ್ಪಿ ಬಿಡಿ ನನಗಂತೂ ಪ್ರತಿ ವಿಷಯದಲ್ಲೂ ನನ್ನದೇ ಆದ ಅಭಿಪ್ರಾಯವಿರುತ್ತದೆ ಅದರ ಅಭಿವ್ಯಕ್ತಿಗೆ ನಾನು ರೂಪಿಸಿಕೊಂಡಿರುವ ವೇದಿಕೆಯೇ ಆದಿಲೋಕ. ಏನೂ ಇಲ್ಲದಿದ್ದರೆ ಕಾಡು ಹರಟೆಯಾದರೂ ಇರುತ್ತದೆ. ಅದಕ್ಕೂ ಒಂದು ವಿಷಯದ ಚೌಕಟ್ಟೇ? ಆಂಗ್ಲ ಸಾಹಿತಿ ವಾಲ್ರಸ್ ಹೇಳಿದ ಹಾಗೆ 
Time has come,
To talk of many things,
Of shoes - and ships and sailing wax,
And cabbages and kings,
And why the sea is boiling hot,
And whether pigs have wings,
ಹೌದು ಆತ ಹೇಳಿದ್ದು ನಿಜ. ಮಾತಾಡಲೇನು ವಿಷಯಕ್ಕೆ ಬರವೇ?
ನಲ್ಮೆಯ,
ಕೈ.ವೆ.ಆದಿತ್ಯ ಭಾರಧ್ವಾಜ

Proudly powered by Blogger
Theme: Esquire by Matthew Buchanan.
Converted by LiteThemes.com.